ಈಗಲೂ ನಗುತ್ತಾ ಮಲಗಿರುವಳು ಎನಿಸುತ್ತಿತ್ತು..

 

abhisarike

ಅಭಿಸಾರಿಕೆ

ನಾನು ಆಗ ಏಳನೇ ತರಗತಿ, ಏನು ತಿಳಿಯದ ಎಲ್ಲವೂ ತಿಳಿಯಬೇಕೆಂಬ ವಯಸ್ಸು, ಆಕೆ ನನಗಿಂತ ಎರಡು ವರ್ಷ  ದೊಡ್ಡವಳು ಅಂದರೆ ಒಂಭತ್ತನೇ ತರಗತಿ, ನಮ್ಮ ಮನೆಯ ಎದುರಿಗಿನ ಮನೆ ಅವರದು, ಆ ಮನೆಯೆಂದರೆ ನನಗೆ ಆಗ ಬಹಳ ಇಷ್ಟ ಏಕೆಂದರೆ ಆ ಮನೆಯ ಮುಂದೆ ಒಂದು ತೆಂಗಿನ ಮರವಿತ್ತು, ಅದರ ನೆರಳು ಸಂಜೆಯ ಇಳಿಬಿಸಿನಲ್ಲಿ ಆ ಮನೆಯ ಮಹಡಿಯ ಮೇಲೆ ಬೀಳುತ್ತಿತ್ತು. ಆ ನೆರಳಿಗೆ ತಕ್ಕಂತೆ ಜೋಕಾಲೆಯೊಂದು ತೂಗು ಹಾಕಿದ್ದರು, ಆ ಎಳೆಬಿಸಿಲಿನಲ್ಲಿ ಆ ಮರದ ನೆರಳಿನಲ್ಲಿ ಕುಳಿತರೆ ಎಷ್ಟು ಮಜ ಎನಿಸುತ್ತಿತ್ತು ನನಗೆ. ಇನ್ನು ಆ ಹುಡುಗಿ ಅದರ ಮೇಲೆ ಕುಳಿತು  ಓದುತ್ತಿದ್ದರೆ ನನಗೆಂತದೋ ಹೊಟ್ಟೆ ಉರಿ. ಆ ಹುಡುಗಿಯ ಅಮ್ಮ ಅವಳಿಗೆ ಅಷ್ಟು ವಯಸ್ಸಾದರೂ ಅವಳನ್ನು ಜೋಕಾಲಿಯಲ್ಲಿ ಕೂರಿಸಿ ಊಟ ತಿನ್ನಿಸುತ್ತಿದ್ದರೆ ನನಗೇನೋ ಸಂಕಟ. ಇದರಿಂದಲೇ ಅವಳೆಂದರೆ ಅಷ್ಟಕಷ್ಟೆ.

ಆದರೆ ಅವಳು ಹಾಗಲ್ಲ ನನ್ನನ್ನು ನೋಡಿದಾಗೆಲ್ಲಾ ಮುಗುಳು ನಗುತ್ತಿದ್ದಳು, ಅದೊಂದು ರೀತಿಯ ಮಾಸದ ನಗೆ, ಅವಳ ಬಗ್ಗೆ ಇದ್ದ ಹೊಟ್ಟೆಕಿಚ್ಚೆಲ್ಲಾ ಅವಳ ನಗು ನೋಡಿ ಓಡಿ ಹೋಗುತ್ತಿದ್ದವು. ಇನ್ನು ಅವಳ ನೀಳ ಕೇಶರಾಶಿ ಅದೆಷ್ಟು  ಮೃದುವಾಗಿ ಉದ್ದವಾಗಿ ರೇಷಿಮೆಯಂತಿತ್ತು ಅದು ನನಗೆ ಬಹಳ ಇಷ್ಟ. ಯಾರೊಡನೆಯೂ ಹೆಚ್ಚು ಮಾತಾಡದೆ, ಬೆರೆಯದೆ ಕೇವಲ ಒಂದು ಮುಗುಳ್ನಗೆಯಷ್ಟೆ ವಿನಿಮಯ ಮಾಡಿಕೊಳ್ಳುತ್ತಿದ್ದ ಅವಳನ್ನು ನನ್ನ ಗೆಳತಿಯೊಬ್ಬಳು ಒಮ್ಮೆ ಆಡಲೂ ಕರೆದಳು, ಅವಳು ಅದೇ ಮುಗುಳ್ನಗುತ್ತಾ ಆಗೋಲ್ಲ ಎಂದಳು, ಅಷ್ಟೆ ನಮ್ಮ ಗುಂಪೆಲ್ಲಾ ಸೇರಿ ಅವಳಿಗೆ ‘ಜಂಬದ ಕೋಳಿ’ ಅಂತ ಹೆಸರಿಟ್ಟೆವು. ಹೀಗೆ ವರ್ಷ ಕಳೆಯಿತು, ಅವಳಾಗ ಹತ್ತನೇ ತರಗತಿ, ನಿಧಾನವಾಗಿ ಅವಳ ಸುಂದರ ಕೇಶರಾಶಿ ಕಡಿಮೆಯಾಗುತ್ತಿತ್ತು. ಇದನ್ನು ಗಮನಿಸಿದ್ದರೂ ಅಷ್ಟಾಗಿ ಯೋಚಿಸಲಿಲ್ಲ ನಾನು, ಆದರೆ ಒಮ್ಮೆ ಇದ್ದಕ್ಕಿದ್ದಂತೆ ತಲೆಗೆ ಕರ್ಚೀಪು ಕಟ್ಟಿಕೊಂಡು ಶಾಲೆಗೆ ಹೊರಟಿದ್ದವಳನ್ನು ನೋಡಿ ದಂಗಾದೆ, ಅವಳದೋ ಅದೇ ಮುಗುಳ್ನಗೆ ನನ್ನ ನೋಡಿ, ‘ಅಯ್ಯೋ ಇದೇನು ಅಷ್ಟು ಚೆಂದದ ಕೂದಲನ್ನು ದೇವರಿಗೆ ಕೊಟ್ಟು ಬಂದ್ಲಾ ಇವಳು’ ಅಂತ ನಾನೇ ಬೇಜಾರು ಮಾಡಿಕೊಂಡು ಸುಮ್ಮನಾದೆ, ಅದೇಕೋ ದಿನದಿನಕ್ಕೆ ಅವಳು ಸೊರಗುವಂತೆ ಕಾಣುತ್ತಿತ್ತು, ಆದರೆ ಮುಗುಳ್ನಗೆ ಮಾತ್ರ ಮಾಸಿರಲಿಲ್ಲ.

2

ಆಗ ನಾನು ಒಂಬತ್ತನೇ ತರಗತಿ, “ಅವಳು ಎಸ್ಸೆಸ್ಸೆಲ್ಸಿ ಡಿಸ್ಟಿಂಕ್ಷನ್ ತಗೊಂಡ್ಲಂತೆ, ಈಗ ಯಾವುದೋ ದೊಡ್ಡ ಕಾಲೇಜಿಗೆ ಹೋಗ್ತಾಳಂತೆ ಹಾಗೆ ಹೀಗೆ “ಅಂತ ಒಂದೆರಡು ದಿನ ನಾವು ಗುಂಪಿನಲ್ಲಿ ಚರ್ಚೆ ಮಾಡಿ ಸುಮ್ಮನಾದ್ವಿ. ಅವಳೇಕೊ ಇತ್ತೀಚೆಗೆ ಹೆಚ್ಚು ಕಾಣಿಸೊಲ್ಲ ಮನೇಲೇ ಇದಾಳೋ, ಇಲ್ವೋ, ಅವಳ ಜೋಕಾಲಿನೂ ಖಾಲಿ ಇರುತ್ತೆ ಇತ್ತೀಚೆಗೆ ಅಂತ ಎರಡು ಮೂರು ದಿನ ಯೋಚಿಸಿ ಮತ್ತೆ ಎಲ್ಲೋ ಕಾಲೇಜಿಗೆ ಬೇರೆ ಊರಿಗೆ ಹೋಗಿರಬೇಕೆಂದು ನಾನೇ ನಿರ್ಧರಿಸಿಬಿಟ್ಟೆ.

ಅಂದು ಗೌರಿ ಹಬ್ಬ ಮನೇಲಿ ಪೂರ್ತಿ ಸಡಗರ ಅಮ್ಮಂಗೆ ಸಹಾಯ ಮಾಡ್ತಾ ಒಳಗೂ ಹೊರಗೂ ಓಡಾಡ್ತಿದ್ದೆ, ಇದ್ದಕ್ಕಿಂದಂತೆ ಜೋರು ಅಳು ದನಿ ಎದುರು ಮನೆಯನ್ನೂ ಸೀಳಿಕೊಂಡು ಬಂದಿತು, ಅಮ್ಮನೊಂದಿಗೆ ಹೊರಗೋಗಿ ನೋಡಿದೆ ಸ್ವಲ್ಪ ಹೊತ್ತು ಏನೂ ತಿಳಿಯಲಿಲ್ಲ, ಗಾಡಿಯಲ್ಲಿ ಶವದ ಪೆಟ್ಟಿಗೆ ತಂದು ಇಟ್ಟರು, ನಂತರ ಅವಳ ದೇಹ! ಒಮ್ಮೆಲೇ ಸಿಡಿಲು ಬಡಿದಂತೆನಿಸಿತು. ಏನು ತೋಚಲಿಲ್ಲ ಮನೆಗೆ ಹೋಗಿ ಕುಳಿತುಬಿಟ್ಟೆ, ಹೊರಗೆ ಅಮ್ಮಂಗೆ ಯಾರೋ ಹೇಳುತ್ತಿದ್ದರು ಅವರ ಮಾತಷ್ಟೆ ಕಿವಿಗೆ ಬೀಳುತ್ತಿತ್ತು “ಪಾಪ ಎರಡು ವರ್ಷದಿಂದ ಮೆದುಳು ಜ್ವರವಂತೆ, ಏನೇನೋ ಚಿಕಿತ್ಸೆ ಮಾಡಿಸಿದರಂತೆ, ಒಮ್ಮೆ ಸರ್ಜರಿ ಸಹ ಮಾಡಿದ್ರಂತೆ, ಏನೇ ಮಾಡಿದ್ರು ಉಳಿಲಿಲ್ಲ”.

ಈಗ ಒಂದೊಂದೇ ಕಾರಣಗಳು ಸ್ಪಷ್ಟವಾಗತೊಡಗಿದವು, ಅವಳೇಕೆ ನಮ್ಮೊಡನೆ ಆಡಲೂ ಬರಲಿಲ್ಲ, ಇದ್ದಕ್ಕಿದ್ದಂತೆ ಅವಳ ಕೂದಲು ಇಲ್ಲವಾಗಿದ್ದು, ಅವಳೇಕೋ ಸೊರಗಿದಂತೆ ಅನಿಸಿದ್ದು ಎಲ್ಲವೂ ಹೊಳೆದು ಹೋಗಿತ್ತು. ಏಕೋ ತಡೆಯಲಾರದೆ ಹಠ ಮಾಡಿ ಅವಳನ್ನು ಕೊನೆಯ ಬಾರಿ ನೋಡಿದೆ. ಸೊರಗಿದ ದೇಹ, ಕೂದಲಿಲ್ಲದ ತಲೆ, ಇವಳೇನಾ ಅವಳು ಅನಿಸಿತು, ಆದರೆ ಒಂದು ಮಾತ್ರ ಬದಲಾಗಿರಲಿಲ್ಲ….. ಶಾಂತ ಮೊಗದ ಆ ಮುಗುಳ್ನಗೆ, ಈಗಲೂ ನಗುತ್ತಾ ಮಲಗಿರುವಳು ಎನಿಸುತ್ತಿತ್ತು.

1 comment

Leave a Reply