ಎಲ್ಲಿಂದ ಶುರುವಾಯಿತು ಅಂಕೋಲೆ?

ಅಂಕೋಲೆ

V Gowda

ವೆಂಕಟ್ರಮಣ ಗೌಡ 

ಲ್ಲಿಂದ ಶುರುವಾಯಿತು
ಅಂಕೋಲೆ?

ಬೆಟ್ಟದ ಸೆರಗು ಹಿಡಿದು ನಡೆವಾಗ
ಕಿರುದಾರಿಯಲ್ಲಿ ಕಂಡ ಕನಸು
ಅದೆಷ್ಟು ವರ್ಷಗಳ ತಪಸ್ಸು!

ಪೇಟೆಯಿಂದ ಬರುವ
ಸರೀಕ ಹುಡುಗರ ಮುಂದೆ
ಅವಮಾನದಿಂದ ತೊಯ್ದು ತೊಪ್ಪೆಯಾಗಿ
ನಿಂತ ಘಳಿಗೆಯಲ್ಲೇ
ಒಳಗೆ ಒದೆಯುತ್ತಿತ್ತು ಅಂಕೋಲೆ

ankola poem cloud

ನಾವೆಲ್ಲ ಹಳ್ಳಿ ಗುಗ್ಗುಗಳು, ಪೆದ್ದರು
ಅದೂ ಆಗಿರದ ಅವರು ಪ್ರತಿ ಮಾತು ನೋಟದಲ್ಲೂ ತಿವಿದರು
ಉರಿದುರಿದು ಬಿದ್ದೆವು ದೂರವಿತ್ತು ಅಂಕೋಲೆ

ಕಾಲು ಸುಡುವ ಬೆಣಚುಗಲ್ಲುಗಳ
ಶಾಲೆಯ ರಸ್ತೆಯನ್ನೂ ಯಕ್ಷಗಾನಕ್ಕೆ
ವೇದಿಕೆ ಮಾಡಿಕೊಳ್ಳಬಲ್ಲ ನಮ್ಮ ತಾಕತ್ತು
ಪೇಟೆಯ ಉಂಡಾಡಿ ಗುಂಡರಿಗೇನು ಗೊತ್ತಿತ್ತು?
ಆದರೂ ಅವರ ಕಣ್ಣ ತೀಕ್ಷ್ಣತೆಗೆ
ಸೋತಿದ್ದೆವು; ಹಳಹಳಿಸಿ ದಕ್ಕಿರದ ಅಂಕೋಲೆಗೆ

ಅಪರೂಪಕ್ಕೊಮ್ಮೆ ಅಜ್ಜನೊ ಅಜ್ಜಿಯೊ
ಅಥವಾ ಅಂಕೋಲೆಯ ನೆಂಟರು ಇನ್ನಾರೋ
ಬರುವಾಗ ತರುತ್ತಿದ್ದ ಬೆಂಡು ಬತ್ತಾಸು
ನಾಲಿಗೆಯ ಮೇಲೆ ಬೆರಗನ್ನಿಳಿಸುತ್ತಿತ್ತು
ಅವತ್ತು ಮತ್ತು ಅನಂತರದ ಮೂರ್ನಾಲ್ಕು ದಿನ
ಸಿಕ್ಕಾಪಟ್ಟೆ ಕಳೆಗಟ್ಟುತ್ತಿತ್ತು
ಶಾಲೆ ದಾರಿಯ ನಮ್ಮ ಯಕ್ಷಗಾನ

ತೆಂಗಿನೆಣ್ಣೆ ಹಚ್ಚಿ
ಕೂದಲು ಬಾಚಿಕೊಳ್ಳಲು ಕಲಿತಿದ್ದರೂ
ಕಾಲಲ್ಲಿ ಚಪ್ಪಲಿ ಮೆಟ್ಟಿರಲಿಲ್ಲ
ಅದು ಬಂದ ದಿನ ಪೇಟೆಯ ವೈಭೋಗವೇ ಬಂದು
ಕಾಲಿಗೆ ತೊಡರಿದಂತಾಗಿ ಖುಷಿಯ ಹಳ್ಳದಲ್ಲಿ ಮಿಂದು

ಸ್ಕೂಲಿಗೆ ಹೋಗುವಾಗ ಮೆಟ್ಟಿ ನಡೆದದ್ದಷ್ಟೇ
ಬರುವಾಗ ಮತ್ತೆ ಬರಿಗಾಲೇ; ಚಪ್ಪಲಿ ಅಲ್ಲೇ
ವರ್ಷಗಳ ರೂಢಿ
ಯ ಮುಂದೆ ವೈಭೋಗವೂ
ಒತ್ತಲಾಗಿರಲಿಲ್ಲ ಛಾಪು

ಬಿಟ್ಟುಬಂದಿದ್ದ ಚಪ್ಪಲಿಗಾಗಿ
ಎದೆಯಲ್ಲೆದ್ದ ಆತಂಕದ ಸುಳಿಗಾಳಿ ಶಾಂತವಾದದ್ದು
ಅಂತೂ ಅಲ್ಲೇ ಅದು ಇದೆಯೆಂದು ಖಾತ್ರಿಪಡಿಸಿಕೊಂಡಾಗಲೇ
ಮತ್ತೆ ಬರಿಗಾಲಲ್ಲೇ ಶಾಲೆಗೆ ನಡೆದು

ಇಂಥ ಹಲವು ತಲ್ಲಣಗಳ ಹೈಯರ್ ಪ್ರೈಮರಿಯನ್ನು
ಪಾಸು ಮಾಡಿದಾಗ ಹೈಸ್ಕೂಲಿಗೆ ಮಣ್ಣು
ಹೊರಬಲ್ಲ ಯೋಗ್ಯತೆಯ ಮಾರ್ಕುಗಳ ಬಲದೊಂದಿಗೆ

ಕೈಗೂಡಿತ್ತು ಅಂಕೋಲೆ
ಕನಸಿಂದ ನೇರ ಜಿಗಿದು ಕಣ್ಣೆದುರಿಗೆ

1 comment

Leave a Reply