ಅಬ್ಬಾ ನೆನೆಸಿಕೊಂಡ್ರೆ ನರಕ ಕಣೆ.. ಮಾತುಗಳಲ್ಲಿ ಹೇಳಕ್ಕಾಗುತ್ತಾ…?

ನಾನು ಅವನಲ್ಲ ಅವಳು

pavana bhoomi

ಪಾವನ. ಎಸ್ 

“ಅಯ್ಯೊ …ದೇವ್ರೆ …ಅಬ್ಬಾ ಇದೆಲ್ಲಾ ನೆನೆಸಿಕೊಂಡ್ರೆ ನರಕ ಕಣೆ.. ಮಾತುಗಳಲ್ಲಿ ಹೇಳಕ್ಕಾಗುತ್ತಾ…?” (ಆಸ್ಪತ್ರೆಯಲ್ಲಿ ನಿರ್ವಾಣ ಮಾಡುವ ದೃಶ್ಯ ನೋಡುತ್ತಾ ) ನನ್ನ ಮುಂದಿನ ಸಾಲಿನ ಸೀಟಿನಲ್ಲಿ ಕುಳಿತಿದ್ದ ಮಂಗಳಮುಖಿ ಸೋದರಿಯರ ಉದ್ಘಾರಗಳಿವು…

ಪಿ.ಕೆ ಸಿನಿಮಾದ ಅಮೀರ್ ಖಾನ್ ಹಾಗೂ ಹೈದರ್ ಸಿನಿಮಾದ ಶಹೀದ್ ಕಪೂರ್ ರನ್ನು ಹಿಂದಿಕ್ಕಿ ಅಪರಿಚಿತ ಕನ್ನಡದ ನಟನೊಬ್ಬ ರಾಷ್ಟ್ರ ಪ್ರಶಸ್ತಿ ಗಳಿಸಿದಾಗ ಸಿನಿಮಾ ಕೂತೂಹಲ ತಾಳಲಾರದೇ ಹೋಗಿದ್ದೆವು ನಾನು ನನ್ನ ಗೆಳೆಯ/ಗೆಳತಿಯರು… ಆದರೆ ಸಿನಿಮಾದ ಹಾಲಿನಲ್ಲಿ ಕೂತ ಇಡೀ ಒಂದೂವರೆ ತಾಸು ನಮ್ಮನ್ನು ಹಿಡಿದಿಟ್ಟ ಸಂಚಾರಿ ವಿಜಯರ ಅಭಿನಯ ಹಾಗೂ ಪಾತ್ರ ತಲ್ಲೀನತೆ ನಿಜಕ್ಕೂ ಶ್ಲಾಘನೀಯ..

transgender

ವಿಜಯ್ ಪಾತ್ರವನ್ನೂ ಜೀವಿಸಿದ್ದಾರೆ…ಲೈಂಗಿಕ ಅಲ್ಪಸಂಖ್ಯಾತರ ಒಳಗುದಿ-ಬೇಗೆ, ತುಮುಲ-ತಳಮಳಗಳನ್ನು ಹಾಗೆ ಜೀವಿಸುವುದು ಸುಲಭದ ಮಾತೇನಲ್ಲ… ಪ್ರೇಕ್ಷಕ ಸಿನಿಮಾ ಮುಗಿದ ನಂತರವೂ ನಟನೊಬ್ಬನ ನಟನೆ ಕಾಡುವುದೇ ಆದರೆ ಅದೇ ನಟನ ಬಹುದೊಡ್ಡ ಪ್ರಶಸ್ತಿ ಹಾಗೂ ಸಿನಿಮಾದ ಕಥಾ ಆಶಯಕ್ಕೆ ಪ್ರೇಕ್ಷಕ ಗೌರವಿಸಿದರೇ ನಿರ್ದೇಶಕನ ಶ್ರಮ ಸಾರ್ಥಕ.  ನಾನು ಅವನಲ್ಲ ಅವಳು ಈ ಎರಡು ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದೆ.

ಸಿನಿಮಾದ ನಂತರ ತೃತೀಯ ಲಿಂಗಿಗಳ ಮೇಲಿನ ಅಭಿಪ್ರಾಯ ಬದಲಾಗುತ್ತದೆ… ಸಿನಿಮಾದ ಪ್ರಾರಂಭವಾಗಿ ಇಂಟರ‍್ವೆಲ್ ನ ಹೊತ್ತಿಗೆ ಸಂಪೂರ್ಣ ತೃತೀಯ ಲಿಂಗಿಗಳ ಜೀವನ ಅನಾವರಣಗೊಳ್ಳುತ್ತಾ ವಿದ್ಯಾಳಂತಹ ಅದೆಷ್ಟೋ ಜೀವಗಳ ಆಂತರ್ಯತೆರೆದುಕೊಳ್ಳುತ್ತದೆ.. ಕೊನೆಗೆ ಅವರ ಸಮಾನತೆ, ಶಿಕ್ಷಣ ಗೌರವವಾಗಿ ಬದುಕುವ ಹಕ್ಕು, ಉದ್ಯೋಗ ಇನ್ನೂ ಹಲವು ಪ್ರಶ್ನೆಗಳೊಂದಿಗೆ ಅವರ ಛಲ ಹಾಗೂ ಬದುಕಿ ತೋರಿಸುವ ಆತ್ಮವಿಶ್ವಾಸದ ನಡೆಯೊಂದಿಗೆ ಸಿನಿಮಾ ಮುಗಿಯುತ್ತದೆ. ವಿದ್ಯಾ, ರೇವತಿ, ಪ್ರಿಯಾಂಕ ಇನ್ನೂ ಇವರ ಹಾಗೆ ಗೌರವವಾಗಿ ಬದುಕುವ ಸಣ್ಣ ಭರವಸೆಯ ಮಿಂಚೊಂದು ಆ ಮೂಲಕ ಹಾದುಹೋಗುತ್ತದೆ..

award-winning-movie-naanu-avanalla-avalu-release-this-friday

ಸಿನಿಮಾದ ಪ್ರಾರಂಭಕ್ಕೂ ಮೊದಲು ಅಥವಾ ನಂತರ ಒಂದೆರಡು ನಿಮಿಷ ಲೈಂಗಿಕ ಅಲ್ಪಸಂಖ್ಯಾತರ ಚಾರಿತ್ರಕ ಕಾನೂನುಗಳ ತೀರ್ಪನ್ನು ಕುರಿತ ನರೇಶನ್ ಅಥವಾ ಮಾಹಿತಿ ತೋರಿಸಬಹುದಿತ್ತೇನೋ ಮತ್ತು ಇದೇನೂ ಕೇವಲ ನಮ್ಮ ದೇಶದ್ದಲ ಅಭಿವೃದ್ಧಿ ಹೊಂದುತ್ತಿರುವ ಎಲ್ಲ ದೇಶಗಳ ತೃತೀಯ ಲಿಂಗಿಗಳ ಪಾಡು ಇದಕ್ಕಿಂತ ಭಿನ್ನವೇನಿಲ್ಲ ಅದರ ಕುರಿತು ಹೇಳಬಹುದಿತ್ತು. ಇದರ ಹೊರತಾಗಿ ಹಿನ್ನಲೆ ಸಂಗೀತ, ಹಾಡುಗಳು, ಪ್ರಸಾದನ, ಸಹ ಪಾತ್ರಧಾರಿಗಳು ಎಲ್ಲವೂ ಚಿತ್ರಕ್ಕೆ ಪೂರಕವಾಗಿ ನ್ಯಾಯ ಒದಗಿಸಿವೆ. ಇಡೀ ಚಿತ್ರತಂಡ ಶ್ರಮವಹಿಸಿದೆ.

ಈ ಆಶಯಕ್ಕೆ ಸರ್ಕಾರದ ಮನ್ನಣೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಬದುಕಿಗೆ ಕಾನೂನು ಹಾಗೂ ಸಾಮಾಜಿಕ ಸ್ಥಾನಮಾನ ಸಿಗಲಿ ಮತ್ತು ಇಂತಹ ಪ್ರಯತ್ನಗಳೂ ನಿರಂತರವಾಗಿರಲಿ ಎಂದು ಆಶಿಸುತ್ತಾ ಥ್ಯಾಂಕ್ಸ್ ಟು ಬಿ.ಎಸ್. ಲಿಂಗದೇವರು, ಲಿವಿಂಗ್ ಸ್ಮೈಲ್ ವಿದ್ಯಾ, ಸಂಚಾರಿ ವಿಜಯ್, ರವಿಗರಣಿ, ಅನೂಪ್ ಸೀಳನ್, ಮತ್ತು ಇಡೀ ಚಿತ್ರತಂಡಕ್ಕೆ…

 

Leave a Reply