ಹೇಯ್, ಅದನ್ನು ಮುಟ್ಟಬೇಡ!

ಗೋಂದು

G.W.Carlo

ಯಿಡ್ಡಿಷ್ ನಲ್ಲಿ : ಎಟ್ಗರ್ ಕೆರೆಟ್
ಇಂಗ್ಲಿಶ್ ನಲ್ಲಿ : ಮಿರಿಯಮ್ ಶ್ಲೆಸಿಂಗರ್
ಕನ್ನಡದಲ್ಲಿ: ಜೆ.ವಿ.ಕಾರ್ಲೊ, ಹಾಸನ

‘ಹೇಯ್, ಅದನ್ನು ಮುಟ್ಟಬೇಡ!’ ಅವಳ ದನಿಯಲ್ಲಿ ಆತಂಕವಿತ್ತು.
‘ಏನದು?’ ನಾನು ಕೇಳಿದೆ.
‘ಅದೊಂದು ತುಂಬಾ, ತುಂಬಾ ವಿಶೇಷ ಗೋಂದು.’ ಅವಳೆಂದಳು.
‘ಅದ್ಯಾಕೆ ಬೇಕು ನಿನಗೆ?’
‘ಅದು ನನಗೆ ಬೇಕು!’ ಅವಡುಗಚ್ಚುತ್ತಾ ಹೇಳಿದಳು. ‘ಇಲ್ಲಿ ಅಂಟಿಸುವ ಕೆಲಸಗಳು ಬಹಳಷ್ಟಿವೆ.’
‘ನನಗೆ ಹಾಗೇನು ಕಾಣಿಸುತ್ತಿಲ್ಲ. ಇಂತಾದ್ದನ್ನೆಲ್ಲಾ ಮನೆಯೊಳಗೆ ಯಾಕೆ ತರ್ತೀಯೋ ನನಗೆ ಅರ್ಥವಾಗುತ್ತಿಲ್ಲ.’ ನಾನೆಂದೆ ಅಸಹನೆ ತುಂಬಿದ ದನಿಯಲ್ಲಿ.
‘ನಿನ್ನನ್ನು ಮದುವೆಯಾದಂತೆ. ಇದು ಕೂಡ ಹೊತ್ತು ಕಳೆಯುವುದಕ್ಕೆ!’
ನನಗೆ ಜಗಳ ಆಡುವುದಕ್ಕೆ ಮನಸ್ಸಿರಲಿಲ್ಲ. ನಾನು ಉತ್ತರಿಸಲಿಲ್ಲ. ಅವಳೂ ಮುಂದುವರಿಸಲಿಲ್ಲ.
‘ಅಂತಾ ವಿಶೇಷವೇನಿದೆ ಈ ಗೋಂದಿನಲ್ಲಿ?’ ನಾನು ಕೇಳಿದೆ. ಅವಳು ಗೋಂದಿನ ಪೊಟ್ಟಣದ ಮೇಲಿದ್ದ ಚಿತ್ರವನ್ನು ತೋರಿಸಿದಳು. ಗಂಡಸೊಬ್ಬ ತಲೆ ಕೆಳಗಾಗಿ ಸೂರಿನಿಂದ ನೇತಾಡುತ್ತಿದ್ದ.

crying
‘ಈ ಥರ ಮನುಷ್ಯನನ್ನು ಅಂಟಿಸುವ ಯಾವ ಗೋಂದೂ ಪ್ರಪಂಚದಲ್ಲಿಲ್ಲ!’ ನಾನೆಂದೆ. ‘ನೆಲದ ಮೇಲೆ ದೀಪವನ್ನಿರಿಸಿ ಚಿತ್ರ ಉಲ್ಟಾ ಇಟ್ಟಿದ್ದಾರಷ್ಟೇ!’ ಅವಳಿಂದ ಪೊಟ್ಟಣವನ್ನು ತೆಗೆದುಕೊಂಡು ಸೂಕ್ಷ್ಮವಾಗಿ ಅವಲೋಕಿಸಿದೆ.
‘ನೋಡಿಲ್ಲಿ!’ ನಾನೆಂದೆ ವ್ಯಂಗ್ಯದಿಂದ. ‘ಈ ಕಿಟಕಿಯನ್ನು ನೋಡು. ಮನುಷ್ಯ ಸೂರಿನಿಂದ ನೇತಾಡುತ್ತಿದ್ದಲ್ಲಿ ಕಿಟಕಿಯ ಪರದೆಯೂ ನೇತಾಡುತ್ತಿದ್ದಿರಬೇಕಿತ್ತಲ್ಲವೇ?’ ಅವಳು ನೋಡಲಿಲ್ಲ.
‘ಒಹ್, ಎಂಟು ಗಂಟೆ ಆಗೇ ಬಿಡ್ತು. ನಾನು ಹೊರಡಬೇಕು.’ ನಾನು ಲಗುಬಗೆಯಿಂದ ನನ್ನ ಬ್ರೀಫ್ ಕೇಸ್ ನ್ನು ಎತ್ತಿಕೊಂಡು ಅವಳ ಕೆನ್ನೆಗೊಂದು ಮುತ್ತನ್ನಿಕ್ಕಿ,
‘ನಾನು ಸಂಜೆ ಬರುವುದು ತಡವಾಗಬಹುದು. ನನಗೆ..’ ಎನ್ನುತ್ತಿರುವಾಗಲೇ, ಅವಳೇ,
‘ಓವರ್ ಟೈಮಿದೆ!’ ಎಂದು ಮುಗಿಸಿದಳು.
ನಾನು ಆಫೀಸಿನಿಂದ ಅಬ್ಬಿಯನ್ನು ಫೋನಾಯಿಸಿ,
‘ಇಂದು ಸಂಜೆ ಬರಲಿಕ್ಕಾಗುವುದಿಲ್ಲ ಡಾರ್ಲಿಂಗ್, ಅರ್ಜೆಂಟಾಗಿ ಮನೆಗೆ ಹೋಗಬೇಕು.’ ಎಂದೆ.
‘ಏನು ವಿಶೇಷ?’ ಅಬ್ಬಿ ಕೇಳಿದಳು.
‘ವಿಶೇಷವೇನಿಲ್ಲ.. ಅವಳಿಗೆ ಸುಳಿವು ಸಿಕ್ಕಿರೋ ಹಾಗೆ ಕಾಣಿಸುತ್ತದೆ.’
ಅತ್ತ ಕಡೆಯಿಂದ ಒಂದು ದೀರ್ಘ ಮೌನ. ಅವಳ ಏದುಸಿರು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು.
‘ನೀನು ಇನ್ನೂ ಅವಳ ಜತೆ ಯಾಕೆ ಸಂಸಾರ ಮಾಡ್ಕೊಂಡಿದ್ದೀಯಾ ಎಂದು ನನಗೆ ಅರ್ಥವಾಗುತ್ತಿಲ್ಲ.’ ಅವಳು ತೀರಾ ಮೆಲ್ಲಗೆ ಹೇಳಿದಳು. ‘ನಿಮ್ಮಿಬ್ಬರಿಗೆ ಸ್ವಲ್ಪವೂ ಹೊಂದಾಣಿಕೆಯಿಲ್ಲ. ಹೋಗಲಿ. ಜಗಳವೂ ಇಲ್ಲ! ನನಗೊಂದೂ ಅರ್ಥವಾಗುತ್ತಿಲ್ಲ.’ ನಾನು ಏನೂ ಹೇಳಲಿಲ್ಲ. ಅವಳೇ ಸ್ವಲ್ಪ ಹೊತ್ತು ಬಿಟ್ಟು ಹೇಳಿದಳು: ‘ನಿಜವಾಗಲೂ ನನಗೆ ಅರ್ಥವಾಗುತ್ತಿಲ್ಲ!’
ಅವಳು ಅಳತೊಡಗಿದಳು.
‘ಸಾರಿ ಕಣೇ ಅಬ್ಬಿ, ಸಾರಿ. ನಾಳೆ ವಿವರವಾಗಿ ಮಾತನಾಡೋಣ. ಯಾರೋ ಬರುತ್ತಿರೋ ಹಾಗಿದೆ!’ ಎಂದು ಸುಳ್ಳು ಹೇಳಿ ಫೋನಿಟ್ಟೆ.

ಸಂಜೆ ಬೇಗ ಮನೆಗೆ ಹೋದೆ. ಒಳಗೆ ಹೋಗುತ್ತಿದ್ದಂತೆ ಸುಮ್ಮಸುಮ್ಮನೆ ಖುಷಿ ಬರಿಸಿಕೊಂಡು ‘ಹಲೋ, ಹಾಯ್!’ ಎಂದೆ. ಯಾವುದೇ ಉತ್ತರ ಬರಲಿಲ್ಲ. ಮನೆಯ ಎಲ್ಲಾ ರೂಮುಗಳಿಗೂ ಹೋಗಿ ಬಂದೆ. ಅವಳು ಎಲ್ಲೂ ಕಾಣಿಸಲಿಲ್ಲ. ಅಡುಗೆ ಕೋಣೆಗೆ ಹೋದೆ. ಮೇಜಿನ ಮೇಲೆ ಗೋಂದಿನ ಟ್ಯೂಬು ಬಿದ್ದಿತ್ತು. ಹತ್ತಿರ ಹೋಗಿ ನೋಡಿದೆ. ಅದು ಖಾಲಿಯಾಗಿತ್ತು. ಕುಳಿತುಕೊಳ್ಳೋಣವೆಂದೆನಿಸಿ ಒಂದು ಕುರ್ಚಿಯನ್ನು ಎಳೆದೆ. ಅದು ಕೊಂಚವೂ ಕದಲಲಿಲ್ಲ. ಮತ್ತೆ ಪ್ರಯತ್ನಿಸಿದೆ. ಬರಲಿಲ್ಲ. ಅವಳು ಅದನ್ನು ನೆಲಕ್ಕೆ ಅಂಟಿಸಿದ್ದಳು. ಫ್ರಿಜ್ಜು ಕೂಡ ತೆರೆಯಲಿಲ್ಲ. ಅದಕ್ಕೂ ಗೋಂದು ಅಂಟಿಸಿದ್ದಳು.

ನನಗೆ ಒಂದೂ ಅರ್ಥವಾಗಲಿಲ್ಲ. ಇವಳು ಹೀಗ್ಯಾಕೆ ಮಾಡಿದ್ದಾಳೆ? ಅವಳೂ ಕಾಣಿಸುತ್ತಿಲ್ಲ! ಅವಳ ತಾಯಿಗೆ ಫೋನಾಯಿಸಿ ಕೇಳೋಣವೆಂದು ನಡುಕೋಣೆಗೆ ಹೋದೆ. ರೀಸಿವರ್ ಗೆ ಕೈ ಹಾಕಿದೆ. ಎತ್ತಲಿಕ್ಕೇ ಆಗಲಿಲ್ಲ. ಅದನ್ನೂ ಅಂಟಿಸಿದ್ದಳು! ಅಸಹಾಯಕನಾಗಿ ಮೇಜಿಗೆ ಒದ್ದೆ. ಕಾಲ್ಬೆರಳು ಬಾತುಕೊಂಡಿತು. ಅಷ್ಟರಲ್ಲಿ ಅವಳು ಎಲ್ಲೋ ಮೇಲಿಂದ ನಗುತ್ತಿರುವುದು ಕೇಳಿಸಿತು. ತಲೆ ಎತ್ತಿ ನೋಡಿದೆ. ಅವಳು ಸೂರಿನ ಮೇಲೆ ಬರಿಗಾಲಿನಲ್ಲಿ ನಿಂತಿದ್ದಳು!
ನಾನು ಬಾಯ್ದೆರೆದು ಅವಳನ್ನೇ ದಿಟ್ಟಿಸಿದೆ.
ಕೊನೆಗೂ ನನ್ನ ಬಾಯಿಂದ ಮಾತುಗಳು ಹೊರಟವು: ‘ವಾಟ್ ದ ಹೆಲ್ಲ್!.. ನಿನಗೆ ತಲೆ ಕೆಟ್ಟಿದೆ ಏನೇ?’
ಅವಳು ಉತ್ತರಿಸಲಿಲ್ಲ. ಸುಮ್ಮನೆ ನಕ್ಕಳಷ್ಟೆ. ಅವಳ ಮುಗುಳ್ನಗೆ ಎಷ್ಟೊಂದು ಸಹಜವಾಗಿತ್ತೆಂದರೆ, ಅವಳ ಬಿರಿದ ತುಟಿಗಳು ತಮ್ಮಷ್ಟಕ್ಕೇ ಗುರುತ್ವಾಕರ್ಷಣಕ್ಕೆ ಒಳಗಾಗಿ ಮಾರುದ್ದ ಹಿಂಜಿದಂತೆ ಕಂಡವು.
‘ಏನೂ ಹೆದರ್ಕೊಬೇಡ, ನಿನ್ನನ್ನು ಕೆಳಗಿಳಿಸ್ಕೊತೀನಿ..’ ಎನ್ನುತ್ತಾ ನಾನು ಲಗುಬಗೆಯಿಂದ ಪುಸ್ತಕದ ಕಪಾಟಿನ ಬಳಿ ಹೋದೆ. ದಪ್ಪ ದಪ್ಪ ಪುಸ್ತಕಗಳನ್ನು ಅವಳು ನೇತಾಡುತ್ತಿರುವಲ್ಲಿ ಕೆಳಗೆ ಜೋಡಿಸಿದೆ. ವಿಶ್ವಕೋಶಗಳು, ಶಬ್ದಕೋಶಗಳನ್ನೆಲ್ಲಾ ಒಂದರ ಮೇಲೊಂದು ಜೋಡಿಸಿ ಅವುಗಳ ಮೇಲೆ ಹತ್ತಿ ನಿಂತೆ.
‘ನಿನಗೊಂದು ಸ್ವಲ್ಪ ನೋವಾಗಬಹುದು. ಹೆದರ್ಕೋಬೇಡ.’ ಎಂದೆ ನನ್ನನ್ನೇ ಸಂಭಾಳಿಸಿಕೊಂಡು.
ಅವಳು ಸುಮ್ಮನೆ ನಗುತ್ತಲೇ ಇದ್ದಳು. ನಾನು ಅವಳನ್ನು ಹಿಡಿದು ಎಳೆಯತೊಡಗಿದೆ. ಜಪ್ಪಯ್ಯ ಎಂದರೂ ಅವಳು ಒಂದು ಇಂಚೂ ಕದಲಲಿಲ್ಲ. ನಾನು ಮೆಲ್ಲಗೆ ಕೆಳಗೆ ಇಳಿದೆ.
‘ಏನೂ ಹೆದರ್ಕೋಬೇಡ. ನಾನು ಅಕ್ಕಪಕ್ಕದವರನ್ನೋ ಅಥವಾ ಬೇರೇನೋ ವ್ಯವಸ್ಥೆ ಮಾಡುತ್ತೇನೆ.’
‘ಆಯ್ತು.’ ಅವಳು ಮತ್ತೊಮ್ಮೆ ನಕ್ಕಳು. ‘ಆಯ್ತು, ಆಯ್ತು. ನೀನೇನು ಗಾಬರಿಪಟ್ಕೋಬೇಡ. ನಾನು ಇಲ್ಲೇ ಕಾಯುತ್ತಿರುತ್ತೇನೆ.’
ನಾನೂ ನಕ್ಕೆ. ಸೂರಿನಿಂದ ಹಾಗೆ ನೇತಾಡುತ್ತಿದ್ದ ಅವಳು ವಿಚಿತ್ರವಾಗಿ ಕಾಣುತ್ತಿದ್ದರೂ, ಅವಳ ಇಳಿಬಿದ್ದ ಉದ್ದ ಕೂದಲು, ಬಿಳಿ ಟೀ ಶರ್ಟ್ ನಿಂದ ಎರಡು ಕಣ್ಣೀರಿನ ಬಿಂದುಗಳಂತೆ ಚೂಪಾಗಿ ನೇತಾಡುತ್ತಿದ್ದ ಅವಳ ಸ್ತನಗಳಿಂದಾಗಿ ಅವಳು ತುಂಬಾ ಮುದ್ದಾಗಿ ಕಾಣಿಸುತ್ತಿದ್ದಳು. ನಾನು ಮತ್ತೆ ಪುಸ್ತಕಗಳನ್ನೇರಿ ಅವಳನ್ನು ಚುಂಬಿಸಿದೆ. ಪುಸ್ತಕಗಳು ನನ್ನ ಕಾಲಕೆಳಗಿನಿಂದ ಜಾರಿ ಚಲ್ಲಾಪಿಲ್ಲಿಯಾದವು. ನಾನು ಮಾತ್ರ ಅವಳ ತುಟಿಗಳಿಗೆ ಅಂಟಿಕೊಂಡು ಗಾಳಿಯಲ್ಲಿ ತೇಲಾಡುತ್ತಿದ್ದೆ.

Leave a Reply