ಜೋಗಿ ಕೇಳ್ತಾರೆ 'ಹೀಗೆ ಮಾಡಿದ್ರೆ ಹೇಗೆ?'

ಪ್ರತಿಭಟನೆ ಹೇಗಿರಬೇಕು? .

ಈ ಹಿಂದೆ ಪಿ ಲಂಕೇಶ್ ಹೇಗೆ ಪ್ರತಿಕ್ರಿಯಿಸಿದ್ದರು ಎನ್ನುವುದನ್ನು ಜೋಗಿ ವಿವರಿಸುತ್ತಾ ತಮ್ಮ ಆಲೋಚನೆಯನ್ನು ಮಂಡಿಸಿದ್ದಾರೆ

ಚರ್ಚೆ ಮಾಡೋಣವೆ-  

s3

ದಶಕದ ಹಿಂದೆ, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡುವುದೆಂದು ನಿರ್ಧಾರವಾಗಿತ್ತು. ಅದೇ ಸಂದರ್ಭದಲ್ಲಿ ಕಾವೇರಿ ಜಲವಿವಾದ ಭುಗಿಲೆದ್ದಿತು. ಕಾವೇರಿ ಚಳವಳಿಯನ್ನು ಬೆಂಬಲಿಸಿದ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರಿಬ್ಬರು, ಕಾವೇರಿಯ ಕಾರಣಕ್ಕೆ ಬೆಂಗಳೂರಲ್ಲಿ ಚಲನಚಿತ್ರೋತ್ಸವ ಆಗಬಾರದು ಎಂದು ಪಟ್ಟು ಹಿಡಿದರು. ಆಗ ಕನ್ನಡಿಗರ ಅಭಿಪ್ರಾಯ ರೂಪಿಸುವ ತಾಕತ್ತಿದ್ದ ಲಂಕೇಶ್ ಪತ್ರಿಕೆ ತಮ್ಮನ್ನು ಬೆಂಬಲಿಸಬೇಕು ಎಂದು ಆಶಿಸಿ, ಪಿ, ಲಂಕೇಶರನ್ನು ಭೇಟಿಯಾದರು. ಚಿತ್ರೋತ್ಸವ ನಿಲ್ಲಿಸುವ ಬಗ್ಗೆ ಮಾತಾಡಿದರು.

protestಅವರ ವಾದ ಕೇಳಿದ ಲಂಕೇಶರು ಸಿಟ್ಟಿನಿಂದ, ನೀವೆಲ್ಲ ಸಿನಿಮಾ ನಿರ್ದೇಶಕರು ಅಂತೀರಿ. ಸಿನಿಮಾ ನಿರ್ದೇಶಕ ಸಿನಿಮಾ ನೋಡಬೇಕು. ಸಿನಿಮಾ ಮಾಡಬೇಕು. ಅದು ನಿಮ್ಮ ಕರ್ತವ್ಯ. ಅದು ಬಿಟ್ಟು ಚಿತ್ರೋತ್ಸವ ನಿಲ್ಲಿಸ್ತೀನಿ ಅಂತೀರಲ್ಲ, ಯಾವ ಸೀಮೆ ಹೋರಾಟಾರೀ ಇದು. ರೈತ ಬೆಳೆಯೋದಿಲ್ಲ ಅನ್ನೋದು, ಲೇಖಕ ಬರೆಯೋದಿಲ್ಲ ಅನ್ನೋದು, ಓದೋದಿಲ್ಲ ಅನ್ನೋದೆಲ್ಲ ಹೋರಾಟ ಆಗಲ್ಲ. ನಿಮ್ಮ ಸೃಜನಶೀಲತೆಗೆ ನೀವು ಬಗೆಯೋ ದ್ರೋಹ ಆಗತ್ತೆ. ಹೋರಾಡೋದಕ್ಕೆ ಬೇರೆ ಮಾರ್ಗಗಳಿವೆ. ಇದನ್ನು ಅದನ್ನೂ ಬೆಸೆಯಬೇಡಿ ಎಂದು ಗುಡುಗಿದ್ದರು.

ಇದೀಗ, ಕಳಸಾ ಬಂಡೂರಿಯನ್ನು ಬೈನಾ ಬೀಚನ್ನೂ ಮುಂದಿಟ್ಟುಕೊಂಡು ಕನ್ನಡ ಚಿತ್ರರಂಗ ಗೋವಾದಲ್ಲಿ ನಡೆಯೋ 46ನೇ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ನಿಷೇಧಿಸಬೇಕು ಅಂತ ಒಂದು ಪಂಗಡ ಹೇಳುತ್ತಿದೆ. ಇದು ಕೂಡ ಒಬ್ಬ ನಿರ್ದೇಶಕನಿಗೆ, ಸಿನಿಮಾ ಎಂಬ ಕಲೆಗೆ ಮಾಡುವ ದ್ರೋಹವೇ. ಒಬ್ಹ ನಿರ್ದೇಶಕ, ನಿರ್ಮಾಪಕ ಕಷ್ಟಪಟ್ಟು ಸಿನಿಮಾ ಮಾಡಿರುತ್ತಾನೆ. ಅವನು ಅದನ್ನು ಈ ಸಾರಿ ಅಂತಾರಾಷ್ಟ್ರೀಯ ಪ್ರೇಕ್ಷಕನಿಗೆ ತೋರಿಸದೇ ಹೋದರೆ ಅದು ಸತ್ತಂತೆಯೇ. ಜೀವಮಾನದಲ್ಲಿ ಒಮ್ಮೆ ಸಿಗುವಂಥ ಅವಕಾಶವನ್ನು ಆತ ಕಳೆದುಕೊಳ್ಳುವಂತೆ ಮಾಡಿ, ಆ ಚಿತ್ರದ ನಿರ್ಮಾಪಕ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವುದು ಯಾವ ಬಗೆಯ ಹೋರಾಟವೋ ಅರ್ಥವಾಗುತ್ತಿಲ್ಲ.Jogi Girish Rao Hatwar's photo.

ನಿಜವಾದ ಹೋರಾಟದ ಸ್ವರೂಪ ಹೀಗಿರಬಹುದೇನೋ? –
1. ಚಿತ್ರೋತ್ಸವಕ್ಕೆ ಹೋಗಿ, ಅಲ್ಲಿ ಪ್ರತಿಭಟನಾ ಸಭೆ ಮಾಡಬೇಕು.
2. ತಮ್ಮ ಸಾತ್ವಿಕ ವಿರೋಧ ತೋರುವುದಕ್ಕೆ ಕಪ್ಪು ಪಟ್ಟಿ ಧರಿಸಿ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಬಹುದು.
3. ಗೋವಾ ಚಿತ್ರೋತ್ಸವದಲ್ಲಿ ಬೇಡಿಕೆ ಮುಂದಿಡುವ ಮೂಲಕ, ಮಾತುಗಳಲ್ಲಿ ಅದನ್ನು ಸೂಚಿಸುವ ಮೂಲಕ, ಸಂಬಂಧಪಟ್ಟವರಿಗೆ ದಾಟಿಸಬಹುದು.
4. ಅಲ್ಲಿದ್ದುಕೊಂಡೇ ಹೋರಾಡಿದರೇ ಮಾತ್ರ ಅದು ಎಲ್ಲರ ಗಮನಕ್ಕೂ ಬರುತ್ತದೆ. ಅದು ಬಿಟ್ಟು, ಕನ್ನಡ ಚಿತ್ರಗಳೇ ಅಲ್ಲಿಗೆ ಹೋಗದೇ ಇದ್ದರೆ, ಅದು ಆ ಚಿತ್ರಸಾಗರದಲ್ಲಿ ಗೊತ್ತಾಗುವುದೂ ಇಲ್ಲ.

ಅಷ್ಟಕ್ಕೂ ನಾವೆಲ್ಲರೂ ಆಡಳಿತ ಮಾಡುವುದಕ್ಕೆ, ಎಲ್ಲರ ಪರವಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ, ರೈತರ ಹಿತರಕ್ಷಣೆಗೆಂದೇ ಪ್ರತಿನಿಧಿಗಳನ್ನು ಆರಿಸಿ ಕಳಿಸಿದ್ದೇವೆ. ಅವರು ಅವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಎಲ್ಲರೂ ಸರಿಯಾಗುತ್ತದೆ.

ಪ್ರತಿಯೊಬ್ಬನೂ ತನ್ನ ಕಲೆ, ಕೆಲಸ ಬಹಿಷ್ಕರಿಸಿ ಪ್ರತಿಭಟಿಸುತ್ತಾ ಹೋದರೆ, ಏನೂ ಸಾಧಿಸಿದಂತೆ ಆಗುವುದಿಲ್ಲ.
ಕನ್ನಡ ಚಿತ್ರಗಳು ಗೋವಾ ಚಿತ್ರೋತ್ಸವಕ್ಕೆ ಹೋಗಲಿ ಎಂಬುದೇ ನನ್ನಾಸೆ.

2 Responses

  1. ಕರ್ಕಿ ಕೃಷ್ಣಮೂರ್ತಿ says:

    ಜೋಗಿಯವರು ಹೇಳಿದ್ದು ಸರಿಯಾಗಿದೆ. ಒಪ್ಪಿದೆ.

  2. Hanumanth Ananth Patil says:

    ಜೋಗಿಯವರಿಗೆ ವಂದನೆಗಳು
    ಗೋವಾ ಚಲನಚಿತ್ರೋತ್ಸವಕ್ಕೆ ಆಸಕ್ತಿಯಿರುವ ನಿರ್ಮಾಪಕ, ನಿರ್ದೇಶಕ, ನಟ ನಟಿಯರು ಮತ್ತು ತಂತ್ರಜ್ಞರು ಹೋಗಬೇಕು ಮತ್ತು ತಾವು ಸೂಚಿಸಿರುವ ಸ್ವರೂಪವನ್ನು ಅನುಸರಿಸಿದರೆ ಸಾಕು, ಸಕಾಲಿಕ ಮತ್ತು ಮಹತ್ವಪೂರ್ಣ ಸಲಹೆ.

Leave a Reply

%d bloggers like this: