ಇವತ್ತಿಗೂ ಅವ್ವನಿಗೆ ಕುವೆಂಪು ಪರಿಚಯವಿಲ್ಲ..

 

 

ಚಕ್ರವರ್ತಿ ಚಂದ್ರಚೂಡ್

 

 

 

ಕಾನೂರು ಹೆಗ್ಗಡತಿ ಧಗ ಧಗ
ಉರಿಯುತ್ತಿದ್ದಳು
ಹೆಗ್ಗಡತಿ ,ಹೂವಯ್ಯ, ಗೌಡ
ಎಲ್ಲರೂ ಉರಿಯುತ್ತಿದ್ದರು
ಅಖಂಡ ಮಲೆನಾಡೇ
ಅದರ ಸಹ್ಯಾದ್ರಿ ಸಂಕುಲವೇ
ಧಗ ಧಗ ಉರಿಯುತ್ತಿತ್ತು..

ಒಲೆಯ ಮೇಲೆ
ಅಕ್ಕಿ ಕುದ್ದು ಅನ್ನವಾಗುವ
ಥಟ ಥಟ ಸದ್ದಷ್ಟೇ ಬರುತ್ತಿತ್ತು…

ಕೈ ಚಾಚಿ ಕಾನೂರು ಹೆಗ್ಗಡತಿಯ
ಒಲೆಯ ಹಸಿ ಸೌದೆ ಸೀಳುಗಳ
ಬೆಂಕಿಯಿಂದ
ಎಳೆದುಕೊಳ್ಳಲಾರದೇ
ಒಲೆಯೂದಿ ಮತ್ತಷ್ಟು ಕೆಂಪಗಾಗಿದ್ದ
ಅವ್ವನ ಕಣ್ಣ ಗುಡ್ಡೆಗಳ ನೋಡುತ್ತಿದ್ದರೆ
ಸಧ್ಯ ಅನ್ನವಾದ ಸಂತೃಪ್ತಿ…

ದೇವನೂರ ಅವ್ವ ನಿನ್ನ
ಇಡೀ ಚಿಕ್ಕಮಗಳೂರ ಸಹ್ಯಾದ್ರಿಯನ್ನೇ
ಸುಟ್ಯಲ್ಲೇ ಎಂದೆ-

ಅಯ್ಯೋ ಮಗಾ
ಸೌದೆ ಹಸೀದು
ಉರೀತಾವ ಎಷ್ಟು ಸುರೀಲಿ
ಸೀಮೆ ಎಣ್ಣೆ
ಅದೆಂಥದೋ ದಪ್ಪ ಗಿತ್ತಾ ಹರಿದು
ಹರಿದು ಹಾಕಿದ್ನಾ
ಅರ್ದಬರ್ಧ ಆಗೋಯ್ತು
ನಿಮ್ಮಪ್ಪಯ್ಯ ಬೋದಾನು ಅಂತ
ಪೂರ್ತಿ ಹಾಕಿದೆ ನೋಡು ಅನ್ನ ಆಗೋಯ್ತು
ಗೋಬರ್ ಗ್ಯಾಸ್ ಸ್ಟವ್ ರಿಪೇರಿಗೆ ಬಂದದೆ
ನಡಿ “…
ಬೆವರೊರಸಿಕೊಂಡ ಅವ್ವ
ಎದ್ದು ನಿಂತಾಗ
ಕಾನೂರು ಹೆಗ್ಗಡತಿ ನಮ್ಮ ಬಡವರ
ಮನೆಯಲ್ಲಿ ಸಾರ್ಥಕವಾದಳು….

ಉಳಿದ ಪುಸ್ತಕಗಳಿಗೂ ಹೀಗೆ
ಸಾರ್ಥಕ ಸಂಸ್ಕಾರವಾದೀತೆಂದು
ಗೋಬರ್ ಗ್ಯಾಸ್ ರಿಪೇರಿ ಮಾಡಿಸಿದ
ಅಪ್ಪ

ಇಡೀ ರಾತ್ರಿ ಅಪ್ಪ ಕಾನೂರು ಹೆಗ್ಗಡತಿಯ
ಕಥೆ ಹೇಳುತ್ತಿದ್ದಾಗ
ಅವ್ವ ಅಕ್ಷರವಾಗಿದ್ದಳು
ಅಪ್ಪ ನಡೆದಾಡುವ ಕಥೆಯಾಗಿದ್ದ,.

ಕಥೆ ಹೇಳುವುದ ಕಲಿಸಿಕೂಟ್ಟ ಅಪ್ಪ
ಕಥೆಯಾಗುವುದರ ಬಳುವಳಿ ಕೊಟ್ಟ ಅವ್ವ…
ಇಂಥವರ ದರವೇಶಿ ಮಗ ನಾನು
ಕಥೆ ಹೇಳಲಾರದೇ
ಕಥೆಯಾಗಲಾರದೇ
ಮಧ್ಯಕ್ಕೆ ಬಂದು ನಿಂತಿದ್ದೇನೆ….

ಎಷ್ಟೋ ವರುಷಗಳ ನಂತರ
ಬೆಂಗಳೂರಿಗೆ ಬಂದ ಅವ್ವ
ಮಗನ ಕಪಾಟಿನಲ್ಲಿ
ಅದೇ ಕಾನೂರು ಹೆಗ್ಗಡತಿಯ ಕಂಡಳು
ಓದಲು ಬಾರದ ಅವ್ವನಿಗೆ ಆ ರಟ್ಟು, ಬಣ್ಣ, ಗಾತ್ರ
ಕಾನೂರು ಹೆಗ್ಗಡತಿಯಾಗಿದ್ದವು…..
ಮಗನ ಕಪಾಟಿನಿಂದ ಸೀದ
ದೇವನೂರಿಗೆ
ಕಾನೂರು ಹೆಗ್ಗಡತಿಯ ಕದ್ದೊಯ್ದ ಅವ್ವ
ಗಂಡನ ಅಲ್ಮೇರಾದಲಿ
ಪುಸ್ತಕವಿಟ್ಟಿದ್ದು
ಇಡೀ ಮಲೆನಾಡಿಗೇ ಗೊತ್ತಾಯಿತು
ಅಪ್ಪ ನಕ್ಕ
ನಾನು ತಲೆ ಕೊಡವಿಕೊಂಡೆ…

ಇವತ್ತಿಗೂ ಅವ್ವನಿಗೆ
ಕುವೆಂಪು ಪರಿಚಯವಿಲ್ಲ…

 

5 Responses

 1. ಚಿಟ್ಟೆ. .... says:

  ಪದ್ಯ ಚೆನ್ನಾಗಿದೆ ಸರ್

 2. ಟಿ.ಕೆ.ಗಂಗಾಧರ ಪತ್ತಾರ says:

  ======================================
  ರಸ ಋಷಿ ಕುವೆಂಪು
  ======================================
  “ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ”
  ರಂಜಿಸುವ ರಮಣೀಯ “ಸಂಜೆಗಿರಿ” ನೆತ್ತಿಯಲಿ
  ಕುಳಿತು ಕುಪ್ಪಳಿ ಪುಟ್ಟ ನುಡಿಸೆ ಕಾಡಿನ “ಕೊಳಲು”
  ಕವನಗಳ ಗರಿಗೆದರಿ ಕುಣಿದು ನಲಿಯಿತು “ನವಿಲು”
  ಗೆಲುವು “ಮರಿ ವಿಜ್ಞಾನಿ”ಗೇ ಆಯ್ತು “ಯಮನ ಸೋಲು”
  “ಪ್ರೇಮ ಕಾಶ್ಮೀರ”ದಲಿ “ಷೋಡಶಿ”ಯು ನರ್ತಿಸಲು
  “ಕಿಂಕಿಣಿ” ಯ ನುಡಿಸಿದಳು “ಮಲೆಗಳಲಿ ಮದುಮಗಳು”
  “ಪಕ್ಷಿ ಕಾಶಿ”ಯ ರಮ್ಯ ಚಿರ ಹಸಿರ ತಾಣದಲಿ
  ಋತ ಚಿನ್ಮಯೀ “ಕಲಾಸುಂದರಿ”ಯ ಮಡಿಲಿನಲಿ
  ಉದಯರವಿ ಬೆಳಕಿನಲಿ ವರ “ತಪೋ ನಂದನ”ದಿ
  ಪರಮ ಸಿದ್ಧಿಯ ದಿವ್ಯ ವಿಶ್ವ “ಅನಿಕೇತನ”ದಿ
  “ಶ್ರೀ ರಾಮಾಯಣ ದರ್ಶನಂ” ಗಾನ ವೀಣೆಯ ಮಿಡಿದೆ
  ರಾಮಕೃಷ್ಣ-ವಿವೇಕ ತತ್ವ ವಾರಿಧಿ ಮಥಿಸಿ
  “ಗುರುವಿನೊಡನೆ ದೇವರಡಿಗೆ” ಸಂಚರಿಸಿದೆ
  ಮನುಜ ಮತವನು ನಂಬಿ ವಿಶ್ವ ಪಥದೊಳು ಸಾಗಿ
  ಹೀನ ವರ್ಣ ವ್ಯವಸ್ಥೆ ಕ್ರೂರ ಹಿಂಸೆಗೆ ರೇಗಿ
  ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು….
  ನೂರು ದೇವರನೆಲ್ಲ ನೂಕಾಚೆ ದೂರ…..
  ನುಡಿ ಕಿಡಿಯ ಕಾರಿ ಝಳಪಿಸುತ ಕ್ರಾಂತಿ ಕಠಾರಿ
  “ಪಾಂಚಜನ್ಯ”ವನೂದಿ “ಬಿರುಗಾಳಿ”ಎಬ್ಬಿಸಿದಿ
  ವಿಶ್ವ ಮಾನವ ತತ್ವ ಉಲಿದ “ಶೂದ್ರ ತಪಸ್ವಿ”
  ಎಣೆಯಿರದ ಜ್ಞಾನ ಪ್ರಭೆಯಿಂದೆಸೆವ ಓಜಸ್ವಿ
  ಯಾರು ಮುಳುಗದ ಕಾವ್ಯ ಶರಧಿಯಾಳದಿ ಮುಳುಗಿ
  ಚೆಲು “ಕಥನ ಕವನಗಳು” ಹವಳ ಮುತ್ತುಗಳಾಯ್ದೆ
  ಯಾರು ಏರದ ಮೇರು ಕವಿಶೈಲವನ್ನೇರಿ
  ವಿಮಲ ನೀತಿ ಸುನೀತ “ಕೃತ್ತಿಕೆ”ಯ ವಿರಚಿಸಿದೆ
  ಯಾರು ಹಾರದ ಭವ್ಯ ಗಗನದಗಲವ ಹಾರಿ
  ಶಿವ ಕರದಿ “ಕನ್ನಡ ಡಿಂಡಿಮ”ವ ಬಾರಿಸಿದೆ
  ಅನುಭಾವದಾಗರವೆ ಸಾಹಿತ್ಯ ಸಾಗರವೆ
  ನೇರ ನುಡಿ-ನೇರ ನಡೆಗಳ ಧೀರ ಚೇತನವೆ
  “ಜ್ಞಾನಪೀಠ”ದಿ ಮೆರೆದು ಪಡೆದೆ “ಪಂಪ ಪ್ರಶಸ್ತಿ”
  ಓ! “ಕರ್ನಾಟಕ ರತ್ನ” ನಿನಗೆ ನುಡಿವೆನು ಸ್ವಸ್ತಿ
  ನಿನ್ನ ನುಡಿಮುತ್ತುಗಳನಾಯ್ದು ಮಾಲೆಯ ಕೋದೆ
  ನಮನ-ಸುಮನಗಳೊಡನೆ ಸಿರಿಯಡಿಗೆ ಅರ್ಪಿಸಿದೆ
  ಜಯತು ಜಯತು “ಕುವೆಂಪು” ಜಯಜಯತು ಕವಿಗುರುವೆ
  “ಯುಗದ ಕವಿ” “ಜಗದ ಕವಿ” ಋಷಿ ಕವಿ”ಯೆ ಕೈ ಮುಗಿವೆ
  -ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ
  ======================================================
  1988ರಲ್ಲಿ ರಸಋಷಿ ಕುವೆಂಪುರವರ ಸನ್ನಿಧಿಗೆ ಈ ಕವಿತೆಯನ್ನು ಅಂಚೆ ಮೂಲಕ ಕಳಿಸಿದ್ದೆ. ಅವರು ಇದನ್ನು ಮೆಚ್ಚಿಕೊಂಡು ಅಂಚೆ ಪತ್ರ ಬರೆದಿದ್ದಾರೆ.
  ======================================================

 3. Chakravarthy says:

  Thnku avadhi

Leave a Reply

%d bloggers like this: