ಅಂತಹ ಹಾಸ್ಯದ ಹರಿಗೋಲೊಂದು ಕಣ್ಣೀರಿನ ಕಡಲಿನ ಪಾಲಾಗಿ ಹೋಯಿತು ..

screencapture-epaper-kannadaprabha-in-index-aspx-1457590016393ರೇಖೆ ಹಾಗೂ ಮೊನಚು ಎರಡೂ ಬೆರೆತ ವ್ಯಂಗ್ಯ ಚಿತ್ರಕಾರರು ಅತಿ ವಿರಳ. ಅಂತಹ ವಿರಳ ವ್ಯಂಗ್ಯಚಿತ್ರಕಾರ ಎಸ್ ವಿ ಪದ್ಮನಾಭ.

ಎಸ್ ವಿ ಪದ್ಮನಾಭ ಅವರ ಶಕ್ತಿ ಇದ್ದದ್ದು ಅವರು ಯಾವುದೇ ಒಂದು ವಿಷಯವನ್ನು ಆಳವಾಗಿ ಗ್ರಹಿಸುತ್ತಿದ್ದ ಪರಿಯಲ್ಲಿ. ಈ ದಿನ ಬರೀ ಮೇಲ್ಮೈ ತಿಳುವಳಿಕೆಯಲ್ಲಿ, ಮೇಲ್ಮೈ ಓದಿನಲ್ಲಿ, ಮೇಲ್ಮೈ ಬದುಕು ಸಾಗಿಸುತ್ತಿರುವ ವ್ಯಂಗ್ಯ ಚಿತ್ರಕಾರರ ಮಧ್ಯೆ ಇವರು ತೀರಾ ಭಿನ್ನ.

ಈ ನೆಲಕ್ಕೆ ಸಹಜವಾಗಿ ಇರಬೇಕಾದ ಕನ್ನಡ ಹಾಗೂ ಪ್ರದೇಶದ ಒಂದು ಗುಣವನ್ನು ಕಟ್ಟಿಕೊಟ್ಟ ಹಿರಿಮೆ ಎಸ್ ವಿ ಪದ್ಮನಾಭ ಅವರದ್ದು. ಪದ್ಮನಾಭ ಅವರೊಳಗೆ ಒಬ್ಬ ಅಪಾರ ತುಂಟನಿದ್ದ. ಹಾಗಾಗಿಯೇ ಅವರಿಗೆ ಎಂತಹ ಬೆಳವಣಿಗೆಗೂ ಹಾಸ್ಯದ ಲೇಪ ನೀಡಲು ಸಾಧ್ಯವಾಗುತ್ತಿತ್ತು. ಅಷ್ಟೇ ಅಲ್ಲ ಪ್ರತೀ ವಿಷಯಕ್ಕೂ ಮೊನಚು ಸ್ಪರ್ಶ ನೀಡಲು ಸಾಧ್ಯವಾಗುತ್ತಿತ್ತು.

ವ್ಯಂಗ್ಯ ಚಿತ್ರ ಎಂದರೆ ಮುಂಬೈ, ದೆಹಲಿ ಕಡೆಗೆ ನೋಡುತ್ತಿದ್ದ ಕಾಲದಿಂದ ನಮ್ಮನ್ನೆಲ್ಲ ಬಿಡಿಸಿದವರು ಆರ್ ಮೂರ್ತಿ, ಪಿ ಮಹಮದ್, ಗುಜ್ಜಾರ್, ಪಂಜು ಗಂಗೂಳ್ಳಿ ಇವರ ಪಾತ್ರ ದೊಡ್ಡದು. ಅಂತಹವರ ಜೊತೆ ಸದ್ದಿಲ್ಲದೇ ಸೇರಿ ಹೋದವರು ಎಸ ವಿ ಪದ್ಮನಾಭ.

ರಂಗಭೂಮಿಯಲ್ಲಿದ್ದವರಿಗೆ ಚೆನ್ನಾಗಿ ಗೊತ್ತು ಅಳಿಸುವುದು ಅಂತಹ ಕಷ್ಟವೇನಲ್ಲ, ಆದರೆ ನಗಿಸುವುದು ಖಂಡಿತಾ ಕಷ್ಟ . ವ್ಯಂಗ್ಯ ಎನ್ನುವುದನ್ನು ಸಂಪಾದಕೀಯ ಎನ್ನುವ ರೀತಿಯಲ್ಲಿ ಆದರಿಸುತ್ತಿದ್ದ ಕಾಲದಿಂದ ನಮ್ಮ ರಾಜಕಾರಣ ಬಹು ದೂರ ಸಾಗಿ ಬಂದಿದೆ. ವ್ಯಂಗ್ಯದ ಮೊನೆ ಇಂದಿನ ರಾಜಕಾರಣಿಗಳನ್ನು ಚೆನ್ನಾಗಿಯೇ ಚುಚ್ಚುತ್ತಿದೆ. ಹಾಗಾಗಿ ವ್ಯಂಗ್ಯಚಿತ್ರಕಾರರಿಗಿದು ಕಾಲವಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಉಸಿರುಗಟ್ಟಿಸುವ ಅಕಾಲದಲ್ಲೂ ಇಷ್ಟೇ ಇಷ್ಟು ಅಗಲದ ಜಾಗದ ಮೂಲಕ ಸಮಾಜವನ್ನು ಸರಿ ಮಾಡುತ್ತಿದ್ದ ಪದ್ಮನಾಭ್ ಇನ್ನಿಲ್ಲ. ‘ಅವಧಿ’ಯ ಓದುಗರಾಗಿದ್ದ ಪದ್ಮನಾಬ್ ಅಕಾಲದಲ್ಲಿ ದಿವ್ಯ ಮೌನಕ್ಕೆ ಶರಣಾದದ್ದು ನೋವುಂಟು ಮಾಡಿದೆ.

ಕೈಲಾಸಂ ಹೇಳುತ್ತಾರೆ –

ಕಿರು ಆಳದ ನಗೆ ನೀರಿನ ಮೇಲೆ 

ತಿರುಗುತ ಬಹುವೇಳೆ 

ಕಣ್ಣೀರಿನ ಕಡಲಿನ ಪಾಲು

ಹಾಸ್ಯದ ಹರಿಗೋಲು

ಅಂತಹ ಹಾಸ್ಯದ ಹರಿಗೋಲೊಂದು ಕಣ್ಣೀರಿನ ಕಡಲಿನ ಪಾಲಾಗಿ ಹೋಯಿತು

s v padmanabh1

ಇಲ್ಲಿರುವ ಚಿತ್ರಗಳು ಅನಘ ನಾಗಭೂಷಣ್ ಅವರಿಂದ

s v padmanabh2

s v padmanabh3

s v padmanabh5

s v padmanabh6

s v padmanabh7

2 comments

  1. ಪದ್ಮನಾಭ ಸರ್ ಅಗಲಿಕೆ ಬಹಳ ದುಃಖವನ್ನುಂಟು ಮಾಡುತ್ತಿದೆ. ನಿರುಪಯುಕ್ತ ಜೀವಿಗಳೆಷ್ಟೋ ಗಟ್ಟಿಮುಟ್ಟಾಗಿರುವುದು ಒಂದು ಕಡೆ, ಸಮಾಜಕ್ಕೆ ಬೇಕಾದವರು ದಡಕ್ಕನೆ ಎದ್ದು ಹೋಗುವುದು ಇನ್ನೊಂದು ಕಡೆ…. ವಿಪರ್ಯಾಸ… ನೀವು ಎದ್ದು ಹೋಗಬೇಕಾದ ಕಾಲವೇ ಇದಾಗಿರಲಿಲ್ಲ ಸರ್. ಹೋಗಿಬಿಟ್ರಿ..

  2. ಪದ್ಮನಾಭ್ ವ್ಯಂಗ್ಯಚಿತ್ರಗಳೆಂದರೆ ಹನ್ನೆರಡು ಪೇಜಿನ ರಾಜಕೀಯ ವಿಶ್ಲೇಷಣೆಯನ್ನು ಎರಡು ಗೆರೆಯೊಳಗೆ ಅಡಗಿಸಿದಂತೆ. ನಾನು ಹುಡುಕಿ ಹುಡುಕಿ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಅದೆಂತ ತೀಕ್ಷ್ಣ ಗ್ರಹಿಕೆ ಅವರದ್ದು. ಅವರ ಸಾವು ಕ್ಲೀಷೆಯಾಗಿರುವ ” ತುಂಬಲಾರದ ನಷ್ಟ ” ಎನ್ನುವ ಮಾತಿಗೆ ನಿಜ ಅರ್ಥ ಕೊಡಬಲ್ಲುದು.

Leave a Reply