ಪುಸ್ತಕ ಪ್ರಕಟವಾಗಿದೆ..

ಅಪರೂಪದ ಫೋಟೋಗಳು ಮತ್ತು “ಹಾಯ್ ತೇಜಸ್ವಿ” ಸಾಕ್ಷ್ಯ ಚಿತ್ರ ನಿರ್ಮಿಸುವಾಗಿನ ಅನುಭವಗಳೊಂದಿಗೆ

ಮಾಯಾಲೋಕದೊಳಗೆ..

ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕದ ಅನಾವರಣ ಅವರ ಮೊದಲ ಬಹರಗಳಿಂದಲೇ ಪ್ರಾರಂಭವಾಗುತ್ತದೆ. ಮಲೆನಾಡಿನ ಜನರ ವಿಶಿಷ್ಟವಾದ ಹಾಸ್ಯಪ್ರಜ್ಞೆಯೊಂದಿಗೆ ಇಲ್ಲಿನ ಪಾತ್ರಗಳೆಲ್ಲ, ತಮ್ಮ ನೋವು-ನಲಿವು, ಕೋಪ-ತಾಪ, ಸುಖ-ದುಃಖಗಳನ್ನೆಲ್ಲ ಹಂಚಿಕೊಳ್ಳುತ್ತವೆ. ತೇಜಸ್ವಿಯವರ ಒಟ್ಟೂ ಕಥಾಲೋಕವನ್ನು ಅವರ ವ್ಯಕ್ತಿತ್ವದ ಭಾಗವಾಗಿಯೇ ನೋಡುವ ಮಲೆನಾಡಿಗನಾಗಿ ಅವನ್ನಿಲ್ಲಿ ನೋಡಿದ್ದೇನೆ,

ಅವರ ಕಥೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳೆಲ್ಲ ನಮ್ಮ ನಡುವೆ ಓಡಾಡುತ್ತಿರುವವರೇ. ಇಲ್ಲಿ ಬರುವ ಬೋಬಣ್ಣ, ಕರಿಯಪ್ಪ, ಶಾಂತಕುಮಾರ, ಖಾಸಿಂ ಸಾಬಿ, ಬಿ.ಎಸ್.ಪಿ ಹುಡುಗರಾಗಲೀ, ಗಾರೆಯವ, ಹಾವುಗೊಲ್ಲರ ಯಂಕ್ಟ, ಚೀಂಕ್ರ ಮೇಸ್ತ್ರಿಯನ್ನಾಗಲೀ, ಇವರೆಲ್ಲರನ್ನೂ ಅವರು ಯಾಥಾವತ್ತಾಗಿ ನಿಜ ವ್ಯಕ್ತಿಗಳಾಗಿ ಚಿತ್ರಿಸಿದ್ದಾರೆಂದು ಅರ್ಥವಲ್ಲ ಅಲ್ಲಿ ಬರುವ ಪಾತ್ರಗಳೆಲ್ಲವೂ ಈ ಜೀವಂತ ವ್ಯಕ್ತಿಗಳನ್ನು ಹೋಲುತ್ತವಷ್ಟೆ. ತೇಜಸ್ವಿಯವರ ಕಥಾಲೋಕದಲ್ಲಿ ಅವರೆಲ್ಲ ಇನ್ನೊಂದು ಆಯಾಮವನ್ನು ಪಡೆದುಕೊಂಡಿದ್ದಾರೆ.

tejasvi maayaloka cover

ತೇಜಸ್ವಿಯವರ ಬರಹಗಳು ಅರೆನಗರ (ಮೊಫುಸಿಲ್) ಜೀವನ ಸಂವೇದನೆಗಳನ್ನು ಹೊಂದಿರುವಂತದ್ದಾಗಿದೆಯೆಂದು ಯು.ಆರ. ಅನಂತಮೂರ್ತಿಯವರು ಹೇಳಿದ್ದಾರೆ. ಆದರೆ ಅವರ ಲ್ಲ ಬರಹಗಳೂ, ಈಗ ಜಾಗತೀಕರಣದ ಪರಿಣಾಮವಾಗಿ ಗ್ರಾಮಾಂತರದ ಎಲ್ಲ ಪ್ರದೇಶಗಳೂ ಅರೆನಗರಗಳಾಗಿ ಪರಿವರ್ತನೆಯಾಗುತ್ತಿರುವ ಸಂದರ್ಭದ ಕಥಾನಕವೂ ಆಗಿದೆ. ಇಷ್ಟೆಲ್ಲ ಯಾಂತ್ರೀಕರಣ, ಆಧುನೀಕರಣ ಗಳ ನಡುವೆಯೂ ಮೊಬೈಲ್ ಫೋನ್ ಹಿಡಿದು ತಿರುಗುವ ಬಸವನ ಕುಣಿಸುವವರು, ರಸ್ತೆ ಬದಿಯ ಬುಟ್ಟಿಹೆಣೆಯುವವರು ಮುಂತಾದವರಂತೆ, ರಾತ್ರಿ ಇದ್ದಕ್ಕಿದ್ದಂತೆ ಊರಿಗೆ ಬಂದು ಶಕುನ ನುಡಿಯುವ ಸುಡುಗಾಡು ಸಿದ್ಧರಂತೆ, ಅಪರೂಪಕ್ಕೊಮ್ಮೆ ಕಾಣಸಿಗುವ ಗುಬ್ಬಚ್ಚಿ- ನೀರುನಾಯಿಗಳಂತೆ, “ಮಾಯವಾಗದೆ ಉಳಿದುಕೊಂಡಿರುವ ಮಾಯಾಲೋಕದ ಕಥಾನಕ” ವೂ ಹೌದು.

ತೇಜಸ್ವಿಯವರ ಸಾಹಿತ್ಯದ ಬಗ್ಗೆ ಇತರರರು ಹೇಳಿದಂತೆ, ಅಥವಾ ಅವರೇ ಅವರ ಬರಹಗಳಲ್ಲಿ ಉಲ್ಲೇಖಿಸಿದಂತೆ, ಅದೊಂದು ವಿಸ್ಮಯದ ಲೋಕ. ನಾವು ಈ “ವಿಸ್ಮಯ” ಎಂಬ ಪದವನ್ನು ಮುಖ್ಯವಾಗಿ ಭಾರತೀಯ ಸಾಹಿತ್ಯದ ಸಂದರ್ಭದಲ್ಲಿ ಬಳಸುವುದು ಮಹಾಭಾರತದ ಬಗ್ಗೆ. ಮಹಾಭಾರದ ಕಥಾಲೋಕವೂ ವಿಸ್ಮಯದ್ದೇ. ಆ ಬೆರಗಿನ ಲೋಕದೊಳಗೆ ಸೇರಿಕೊಂಡಿರುವ ಉಪಕಥೆಗಳನ್ನು ಯಾರು,ಎಲ್ಲಿ, ಯಾವಾಗ, ಹೇಗೆ ಸೇರಿಸಿದರು-ಪ್ರಕ್ಷೇಪಿಸಿದರು ಎನ್ನುವುದೇ ಅಮುಖ್ಯವಾಗುವ ಹಾಗೆ ಬೆರೆತು-ಮರೆತುಹೋಗುವ ಹಾಗೆ ಸೇರಿಕೊಂಡಿವೆ.

ತೇಜಸ್ವಿಯವರ ಕಥಾಲೋಕಕ್ಕೆ ಎಷ್ಟು ಪಾತ್ರಗಳನ್ನಾದರೂ ಸೇರಿಸಬಹುದು- ಅವರ ವ್ಯಕ್ತಿದ ಸುತ್ತ ವರಿಸಿಕೊಂಡಿರುವ ಕಥಾಲೋಕಕ್ಕೆ (ಅವರು ಜಲ್ಲಿಗುಡ್ಡೆ ಹತ್ತಿನಿಂತದ್ದು, ಸ್ಕೂಟರಿನ ಹಿಂಬದಿ ಸೀಟು ಕಳಚಿಟ್ಟದ್ದು, ಫೋಟೋ ತೆಗೆಯಲೆಂದು ಅಡಗಿಕುಳಿತಲ್ಲಿಗೇ ಬಂದು ಕರೆದವನ್ನು ಕೋಲು ಹಿಡಿದು ಅಟ್ಟಾಡಿಸಿದ್ದು…ಹೀಗೆ) ಎಷ್ಟು ಉಪಕಥೆಗಳನ್ನಾದರೂ ಸೇರಿಸಬಹುದು, ಯಾವುದನ್ನಾದರೂ ಪ್ರಕ್ಷೇಪಿಸಬಹುದು. ಇದಾವುದರಿಂದಲೂ ಅವರ ಮಾಯಾಲೋಕ ಬದಲಾಗದು.

‘ಮುಖ್ಯ’ರ ಮಹಾಭಾರತ ತೆರದಿಡುವ ವಿಸ್ಮಯದ ಲೋಕವೊಂದಾದರೆ, ತೇಜಸ್ವಿಯವರು ತೆರೆದಿಟ್ಟಿರುವ ‘ಅಮುಖ್ಯ ರಾಗಿಯೂ, ಅಮುಖ್ಯರಲ್ಲದವರ’ ಈ ಆಧುನಿಕ ಭಾರತ ಕಥಾಲೋಕದ ಕೆಲವು ಪಾತ್ರಗಳ ಮೂಲಕವೇ ಅವರನ್ನಿಲ್ಲಿ ನೋಡಲು ಪ್ರಯತ್ನಿಸಿದ್ದೇನೆ.
ಕೆ.ವಿ,ಸುಬ್ಬಣ್ಣನವರು ಕುವೆಂಪು ಬಗ್ಗೆ ಹೇಳುತ್ತಾ “ಅವರ ಸಾಹಿತ್ಯಕ್ಕಿಂತ ಹೆಚ್ಚಾಗಿ ನಾವರಿಯದ ಒಂದು ಅಗೋಚರ ಸ್ತರದಲ್ಲಿ ಅವರು, ಇಡೀ ಕರ್ನಾಟಕದ ಜನತೆಯೊಂದಿಗೆ ಸಂವಾದಿಸುತ್ತಾ ಸಾಹಿತ್ಯವನ್ನೇ ಓದದವರ ಮೇಲೂ ಸೂಕ್ಷ್ಮ ಪ್ರಭಾವ ಬೀರಿ ರೂಪಿಸುತ್ತಿದ್ದರು” ಎಂದಿದ್ದಾರೆ.
ತೇಜಸ್ವಿಯವರು ಕಥೆಗಾರರಾಗಿ ನೀಡಿದ ಮಾಯಾಲೋಕಕ್ಕಿಂತಲೂ, ವ್ಯಕ್ತಿಯಾಗಿ ನಿರ್ಮಿಸಿದ ಯಾರೂ ಅಮುಖ್ಯರಲ್ಲದ ಮಾಯಾಲೋಕ ಹಿರಿದಾದದ್ದು, ಎಂದು ನನ್ನ ಅನಿಸಿಕೆ..

(ಮುನ್ನಡಿಯಿಂದ)

(ಪುಸ್ತಕ ಪ್ರಕಟವಾಗಿದೆ, ಅಭಿರುಚಿ ಪ್ರಕಾಶನ, ಮೈಸೂರು.)

 

Leave a Reply