ತೇಜಸ್ವಿ ಎಂಬ ‘ಮಳೆಗಾಲದ ಚಕ್ರ’

girija shastri

ಗಿರಿಜಾ ಶಾಸ್ತ್ರಿ

ಪೂರ್ಣ ಚಂದ್ರ ತೇಜಸ್ವಿ ಎಂದ ಕೂಡಲೇ ಯಾಕೋ ಕಣ್ಣಮುಂದೆ ಬರುವುದು, ಅವರ ಕೊನೆಯ ಗಳಿಗೆಯಲ್ಲಿ ಅವರು ಹೊರಗಲ್ಲೋ ತಮ್ಮ ಸ್ಕೂಟರಿನಲ್ಲಿ ಹೋಗಿ ಬಂದುದು, ಹಾಗೆ ಬಂದ ಅವರು ಸ್ಕೂಟರಿಗೆ ನೇತು ಹಾಕಿದ್ದ ಚೀಲವನ್ನು ತೆಗೆಯಲು ಕೂಡಾ ವ್ಯವಧಾನವಿಲ್ಲದಂತೆ, ಬಿಟ್ಟ ಚಪ್ಪಲಿ ಬಿಟ್ಟ ಹಾಗೆಯೇ ಹೊರಟು ಬಿಟ್ಟಿದ್ದು.

ತೇಜಸ್ವಿಯವರ ಬಗೆಗೆ ವಿಶೇಷ ಸಂಚಿಕೆಯನ್ನು ತರಬೇಕೆಂದಾಗ, ಈ ದೂರದ ಮುಂಬಯಿಯಲ್ಲಿ ಕೂತು, ಇರುವ ಅಲ್ಪ ಸಮಯದಲ್ಲಿ ಅವರ ಬಗ್ಗೆ ಬರೆಸುವುದು ಕಷ್ಟ ಎಂಬ ಅರಿವಾಯಿತು. ಹೀಗಾಗಿ ಅವರ ಬಗೆಗಿನ ಲೇಖನಗಳನ್ನಾದರೂ ಸಂಗ್ರಹಿಸುವುದು ಉತ್ತಮ ಎಂದುಕೊಂಡೆ.

tejasvi1ಅದಕ್ಕಾಗಿ ಎಲ್ಲೆಲ್ಲಿ ಶೋಧ ನಡೆಸಬೇಕು ಎಂದು ತಿಣುಕುತ್ತಿರುವಾಗಲೇ, ಹೊರಗಿನಿಂದ ಬಂದ ಗೆಳೆಯ ರಘುನಾಥ್ ಅವರು, ಸೀರೆ ಅಂಗಡಿಯಲ್ಲಿ ಗ್ರಾಹಕರ ಮುಂದೆ ತರತರದ ಸೀರೆಗಳನ್ನು ರಾಶಿ ರಾಶಿ ಸುರಿಯುವ ಹಾಗೆ ತೇಜಸ್ವಿ ಬೇಕಾ ಎಷ್ಟು ಬೇಕು… ತೊಗೋ ಎನ್ನುವಂತೆ ಶೆಲ್ಫಿನಿಂದ ಎಳೆದೆಳೆದು ನನ್ನ ಮುಂದೆ ಪುಸ್ತಕಗಳನ್ನು ಸುರಿದಾಗ ನಾನು ಅವಾಕ್ಕಾಗಿ ಹೋದೆ.

ನನ್ನದೇ ಮನೆಯಲ್ಲಿ ತೇಜಸ್ವಿಯವರು ಇಷ್ಟು ವೈವಿಧ್ಯಗಳಲ್ಲಿ, ಇಂತಹ ಬೃಹತ್ ಸ್ವರೂಪದಲ್ಲಿ ಅಡಗಿ ಕುಳಿತಿದ್ದರೆಂಬುದನ್ನು ನಂಬಲಿಕ್ಕೇ ಆಗಿಲಿಲ್ಲ. ಅವನ್ನೆಲ್ಲಾ ಬಾಚಿ ಎದೆಗೆ ಅವಚಿಕೊಂಡು ಹೊರಬಂದ ತಕ್ಷಣವೇ ಮಾಡಿದ ಕೆಲಸವೆಂದರೆ ‘ತೇಜಸ್ವಿಯವರ ಒಂದು ಸಂಚಿಕೆಗೇನು ಹತ್ತು ಸಂಚಿಕೆಗಳಿಗೆ ಆಗುವಷ್ಟು ಮೆಟೀರಿಯಲ್ಸ್ ನನ್ನ ಬಳಿ ಇರುವುದಾಗಿ’ ಮಂಜುನಾಥಯ್ಯನವರಿಗೆ ಫೋನ್ ಮಾಡಿದ್ದು.

ಅಭಿವ್ಯಕ್ತಿಗೆ ನಿಲುಕದ ಯಾವುದೋ ಅನೂಹ್ಯ ಕೊಂಡಿಗಳನ್ನು ಬೆಸೆಯುತ್ತಾ ನಮ್ಮ ಸಾಮುದಾಯಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಈ ಹಳೆಯ ಪುಸ್ತಕಗಳ ಅವಿನಾಶೀ ವಾಸನೆಗಳಲ್ಲಿ, ಆಗಷ್ಟೇ ತೇಜಸ್ವಿಯವರೊಡನೆ ನಂಟು ಬೆಳೆಸಿಕೊಂಡ ಹೊಸ ಪುಸ್ತಕಗಳ ಅಂಟಿನಲ್ಲಿ, ಮುದತರುವ ಅದರ ನವಿರುಗಳಲ್ಲಿ, ತೇಜಸ್ವಿಯವರು ಹೇಗೆ ಅಡಗಿ ಕುಳಿತುಕೊಂಡು ಬಿಟ್ಟಿದ್ದಾರೆ ಎಂಬ ಸಂಗತಿಯೇ ನನಗೆ ಧಿಗ್ಭ್ರಮೆ ಹುಟ್ಟಿಸಿತು.

ಅವರ ಅಬಚೂರಿನ ಪೋಸ್ಟಾಫೀಸನ್ನು ತೆಗೆದ ಕೂಡಲೇ ಕಣ್ಣ ಮುಂದೆ ಬಂದದ್ದು- ಅಬಚೂರಿನ ಪೋಸ್ಟಾಫೀಸಿಗೆ ಬರೆದ ಮುನ್ನುಡಿ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಟೇಕ್ ಆಫ್ ಎಂದು ಸುಮಾರು ಮೂರು ದಶಕಗಳ ಹಿಂದೆ ಎಂ.ಎ. ತರಗತಿಯಲ್ಲಿ ಹೇಳುತ್ತಿದ್ದ ಮೆಚ್ಚಿನ ಗುರು ಡಿ.ಆರ್.ಎನ್. ಕುವೆಂಪು ಅವರ ಕಲೆ, ಶಿವರಾಮ ಕಾರಂತರ ಜೀವನ ದೃಷ್ಟಿ ಹಾಗೂ ಲೋಹಿಯಾ ಅವರ ತತ್ವಜ್ಞಾನ ಇವು ಮೂರೂ ಮುಂದಿನ ಸಾಹಿತ್ಯಕ್ಕೆ ಪ್ರೇರಣೆಯಾಗಲಿ ಎಂದು 1965 ರಲ್ಲಿ ಅಬಚೂರಿನ ಪೋಸ್ಟಾಫೀಸು ಕೃತಿಯ ಮುನ್ನುಡಿಯಾದ ‘ಹೊಸದಿಗಂತ’ದಲ್ಲಿನ ಅವರ ಮಾತುಗಳ ಮಹತ್ವವನ್ನು ಇನ್ನಿಲ್ಲದಂತೆ ತಿಳಿಸಿದ್ದರು.

ನಾವು ಬಚ್ಚಾಗಳು ಅನೇಕ ದಿನಗಳ ಕಾಲ ಅದನ್ನೇ ಮೆಲಕು ಹಾಕುತ್ತಾ ಇದ್ದೆವು. ಎಷ್ಟೆಲ್ಲ ನೀರು ಕನ್ನಡದ ಕಾವೇರಿಯೊಳಗೆ ಹರಿದು ಹೋಗಿದೆ. ತೇಜಸ್ವಿಯವರು ಈ ನೀರಿನೊಳಗೆ ಕೊಚ್ಚಿಕೊಂಡು ಹೋಗಿಲ್ಲ. ಬದಲಾಗಿ ಅದರ ಮೇಲೆ ಒಂದು ಸುಂದರ ದ್ವೀಪವನ್ನು ನಿರ್ಮಾಣಮಾಡಿ ಹೋಗಿದ್ದಾರೆ. ಕಾನುಮಲೆ, ಹಕ್ಕಿ, ಅಭಯಾರಣ್ಯ, ಅರ್ಬುದ, ಹಾರುವ ಓತಿ, ಸರಿಯುವ ಬೆಟ್ಟಗಳು, ಸಾಂಸ್ಕೃತಿಕ ವ್ಯಾಖ್ಯಾನಕ್ಕೆ ವಿರುದ್ಧವಾಗಿ, ತಮ್ಮ ಶಕ್ತಿ ಮೂಲಕ್ಕೆ ಬೆಳೆದು ನಿಲ್ಲುವ ಹೆಣ್ಣುಗಳು, ಅಧಿಕಾರ ಶಾಹಿಯ ಗೋಸುಂಬೆತನಗಳಿಗೆ ಬಲಿಯಾಗುವ ಅಮಾಯಕರು- ಹೀಗೆ ಈ ಸುಂದರ ದ್ವೀಪದಲ್ಲಿ ಏನುಂಟು ಏನಿಲ್ಲ !

tejasvi26ಕುವೆಂಪು ಅವರಿಗೆ ಶೇಕ್ಸ್ ಪಿಯರ್ ಗಿಂತ ಡಾಂಟೆ ಪ್ರಿಯನಾದವನು. ಯಾಕೆಂದರೆ ಶೇಕ್ಸ್ ಪಿಯರ್ ಮತ್ರ್ಯ ಭವ್ಯತೆಯಲ್ಲಿ ವಿಹರಿಸುವವನು ಆದರೆ ಡಾಂಟೆಗಾದರೋ ಅಮತ್ರ್ಯ ಲೋಕ ಪ್ರಿಯವಾದುದು. ಕುವೆಂಪು ಅವರ ಸಾಹಿತ್ಯಕ ಪರಿಕಲ್ಪನೆ ಕೂಡ ಡಾಂಟೆಯಂತೆ ಅಭಿಜಾತ (ಕ್ಲಾಸಿಕ್) ನೆಲೆಯದು. ಅವರು ವಿಹರಿಸುವುದು ಹೈ ಮೈಮಾಟಿಕ್ ನೆಲೆಯಲ್ಲಿ. ಎಲ್ಲವೂ ಅವರಿಗೆ ದರ್ಶನ ಸ್ವರೂಪಿಯಾದುದು. ಅವರಿಗೆ ಐತ ಪೀಂಚಲು (ಮಲೆಗಳಲ್ಲಿ ಮದುಮಗಳು) ರವರಂತಹ ಮಣ್ಣಿನ ಮಕ್ಕಳೂ ಕೂಡ ಶಿವ ಶಿವಾಣಿಯರ ಹಾಗೆ ಕಾಣಿಸುತ್ತಾರೆ.

ಆದರೆ ಅದೇ ಅವರ ಮಗ ತೇಜಸ್ವಿಯವರದು ಶೇಕ್ಸ್ ಪಿಯರ್ ನ ಹಾಗೇ ಲೋ ಮೈಮಾಟಿಕ್ ನೆಲೆ. ಶೇಕ್ಸ್ ಪಿಯರ್ ತನ್ನ ನಾಟಕಗಳಲ್ಲಿ ಉದ್ದೇಶಿಸುವುದೇ ಗ್ರೌಂಡ್ಲಿಂಗ್ಸ್ ಗಳನ್ನು. ತೇಜಸ್ವಿಯವರ ಮನಸ್ಸು ವಿಹರಿಸುವುದು ಕೂಡ ಹೂವಯ್ಯನ ಆಧ್ಯಾತ್ಮಿಕ ಅನುಭೂತಿಗಳ ಅತೀಂದ್ರಿಯ ಲೋಕದಲ್ಲಿ ಅಲ್ಲ. ಬದಲಾಗಿ ಮಂದಣ್ಣ, ಎಂಗ್ಟ, ತುಕ್ಕೋಜಿ, ತಬರರ ಪ್ರಾಪಂಚಿಕವಾದ ತರಲೆ ತಾಪತ್ರಯಗಳಲ್ಲಿ.

ಹೀಗೆ ದೈನಂದಿನ ತರಲೆ ತಾಪತ್ರಯಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುವುದರ ಮೂಲಕವೇ ಅಸಂಗತವಾದ ಸಾವಿನೆದುರು ಸೆಡ್ಡುಹೊಡೆದು ನಿಲ್ಲಲು ಅವರಿಗೆ ಸಾಧ್ಯವಾಗುತ್ತದೆ. ಇವರ ಜೀವನದ ಕ್ಷುದ್ರವಾದ ಸಂಗತಿಗಳ ಮೂಲಕವೇ ಬಹಳ ಹಾಸ್ಯದ ನೆಲೆಯಲ್ಲಿ ಹೇಳುತ್ತಲೇ ಓದುಗರಿಗೆ ಗೊತ್ತಾಗದಂತೆ ಅವರು ಅವರ ತಂದೆಯವರು ತಲಪಿದ ನೆಲೆಯನ್ನೇ ತಲಪುತ್ತಾರೆ. (ಅದು ಕಿಂಚಿದೂನ ಗೊಂಡ ರೂಪವಷ್ಟೇ).

ಅದನ್ನೇ ಅವರು ಪೊಸ್ ಮೈಯ್ಯಾಂತಂತೆ, ಮರುವುಟ್ಟು ಪಡೆದಂತೆ ಪ್ರಕಟಿಸುತ್ತಾರೆ. ಆದರೆ ಅವರಿಬ್ಬರು ಕ್ರಮಿಸುವ ದಾರಿ, ನಂಬಿಕೆಗಳು ಬೇರೆ ಬೇರೆ. ಕುವೆಂಪು, ಬೇಂದ್ರೆಯಂತೆ ಕಾರಂತರನ್ನ ಬಿಟ್ಟರೆ ಉಳಿದೆಲ್ಲ ಲೇಖಕರಿಗೆ ದೈವ ನಂಬುಗೆಯೆಂಬ ಅವಲಂಬನವಿದೆ. ಅಲ್ಲಮ ಹೇಳುವಂತೆ ಇದು ಅಳಿದು ಕೂಡುವ ರೀತಿಯದು.

ಸತ್ತ ನಂತರ ದೇವರನ್ನು ಕೂಡುವುದು ಸುಲಭ. ಆದರೆ ನಿಜವಾದ ಕಷ್ಟವಿರುವುದು, ಸಂಘರ್ಷವಿರುವುದು ‘ಅಳಿಯದೇ ಕೂಡುವುದ’ರಲ್ಲಿ. ತೇಜಸ್ವಿಯವರದು ಅಳಿಯದೇ ಕೂಡುವ ರೀತಿಗೆ ಹತ್ತಿರವಾದುದು. ಅವರಿಗೆ ಮತ್ರ್ಯವೇ ಸತ್ಯವಾದುದು. ಬದುಕಿನ ಸರಳ ಸಂಗತಿಗಳು ಅವು ಜೀವನಕ್ಕಿಂತ ಬೇರೆಯಲ್ಲ. ಅವರ ಪ್ರಕಾರ ನಮಗೆ ಬಿಡುಗಡೆ ಎನ್ನವುದು ಜೀವನದಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಸಾಧ್ಯವಾಗುವುದು. ಈ ಜೀವನದಿಂದ ಪಲಾಯನ ಗೈಯುವುದರಿಂದಲ್ಲ. ಆದುದರಿಂದಲೇ ಕಾರಂತರ ಜೀವನ ದೃಷ್ಟಿ ಅವರಿಗೆ ಮಾದರಿಯಾಯಿತು.

ಈ ದೃಷ್ಟಿಗೆ ನಮ್ಮ ಶರಣರ, ದಾಸರ ಒಂದು ದೊಡ್ಡ ಪರಂಪರೆಯೇ ಇದೆ. (ಮತ್ರ್ಯವೆಂಬುದು ಕರ್ತಾರನ ಕಮ್ಮಟವಯ್ಯಾ……ಈಸ ಬೇಕು ಇದ್ದು ಜೈಸ ಬೇಕು. ಇತ್ಯಾದಿ) ಆದರೆ ಅದು ದೈವ ಕೇಂದ್ರಿತವಾದ್ದೇ ಹೊರತು ಮನುಷ್ಯ ಕೇಂದ್ರಿತವಾದ್ದಲ್ಲ. ದೈವದಿಂದ ಮನುಷ್ಯನಿಗೆ, ಮನುಷ್ಯನಿಂದ ಅಖಂಡ ಜೀವ ಜಾಲಕ್ಕೆ ಕನ್ನಡ ಸಾಹಿತ್ಯದ ಪರಿಕಲ್ಪನೆ ಶಿಫ್ಟ್ ಆದುದರ ಆತ್ಯಂತಿಕ ಪ್ರತೀಕವಾಗಿ ತೇಜಸ್ವಿಯವರ ಬರಹಗಳು ನಿಲ್ಲುತ್ತವೆ. ಆದುದರಿಂದಲೇ ಈ ಜೀವನ ಎನ್ನುವಾಗ ಅದು ಕೇವಲ ಮನುಷ್ಯ ಜೀವನವಾಗಿ ಮಾತ್ರವಾಗಿ ಉಳಿಯುವುದಿಲ್ಲ. ಬದಲಾಗಿ, ನಮ್ಮ ಸುತ್ತಲೂ ಇರುವ ಜಡ, ಜೀವ ಜಾಲದ ಭಾಗವಾಗಿ ನಮ್ಮನ್ನು ಗುರುತಿಸಿಕೊಳ್ಳುವುದು ಅದಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡಿಕೊಳ್ಳುವುದು ತೇಜಸ್ವಿಯವರಿಗೆ ಮುಖ್ಯವಾಗುತ್ತದೆ.

ಕುವೆಂಪು ಅವರೂ ಕೂಡ ತೆಗೆ ಜಡವೆಂಬುದೆ ಸುಳ್ಳು ಎನ್ನುತ್ತಾರೆ. ಹಾಗೆನ್ನುವಾಗ ಅಲ್ಲಿ ಅವರು ಯಾವುದೋ ದಿವ್ಯ ಚೇತನವನ್ನು ಅರಸುತ್ತಾರೆ. ಆದುದರಿಂದಲೇ ಅವರಿಗೆ ಬಲಾಕ ಪಂಕ್ತಿಯೊಂದು ದೇವರ ರುಜುವಾಗಿ ಕಾಣಿಸುತ್ತದೆ. ಆದರೆ ತೇಜಸ್ವಿಯವರಿಗೆ ಮನುಷ್ಯ ಕೂಡ ಈ ಅಖಂಡ ವಿಶ್ವದ ಒಂದು ಭಾಗ. ಇದರ ಹಿಂದೆ ಬೇಂದ್ರೆಯವರ ಐದು ಐದೆಯರ ಮಗ ನಾನು ಎನ್ನುವ ಚಿಂತನೆಯ ಪರಂಪರೆ ಇದೆ. ( ಕನ್ನಡ ತಾಯಿ, ಭಾರತಮಾತೆ, ಜಗನ್ಮಾತೆ, ಭೂಮಿತಾಯಿ ಮತ್ತು ವಿಶ್ವಮಾತೆಯರ ಮಗ ನಾನು). ತೇಜಸ್ವಿಯವರಿಗೆ, ಪರಿಸರವೆಂದರೆ ನಮ್ಮ ಸುತ್ತ ಇರುವ ಕಾನು ಮಲೆ ನದಿಗಳು ಮಾತ್ರವಲ್ಲ. (ಹಾಗೆ ಇವುಗಳನ್ನು ಮಾತ್ರ ಪರಿಸರ ಎಂದು ಕರೆಯುವುದರಲ್ಲಿ, ಅದನ್ನು ರಕ್ಷಿಸಿಕೊಳ್ಳಬೇಕೆನ್ನುವುದರಲ್ಲಿ ಕೂಡ ಮನುಷ್ಯನ ಉಪಭೋಗಿ ನೆಲೆಯೇ ವ್ಯಕ್ತವಾಗುತ್ತದೆ.)

ಒಂದು ಸಣ್ಣ ಹುಳ ಹುಪ್ಪಟೆ, ಹಕ್ಕಿ, ಮಣ್ಣುಗುಡ್ಡೆ, ಬಿದ್ದಿರುವ ಬಂಡೆ ಇವುಗಳು ಕೂಡ ನಮ್ಮ ಪರಿಸರದ ಭಾಗವಾಗುತ್ತದೆ. ಇವುಗಳ ಜೊತೆ ಪ್ರೀತಿಯಿಂದ ಇರುವುದೇ ಬದುಕು. ಅವುಗಳ ಜೊತೆಗಿನ ಅವಿನಾಬಾವ ಸಂಬಂಧವೇ ಕೆಲವೊಮ್ಮೆ ಅಭೌತಿಕ ಅನುಭವಗಳಿಗೆ ಎಡೆಮಾಡಿಕೊಡಬಹುದು. ಹೀಗೆ ನಮ್ಮ ವಿಶ್ವ ಒಂದು ಇನ್ನೊಂದನ್ನು ಸಂಕೀರ್ಣ ಸಂಬಂಧದ ಜಾಲದೊಳಗೆ ಬಂಧಿಸಿದೆ. ಆದುದರಿಂದಲೇ ವಿಶ್ವದೊಳಗಿನ ನಮ್ಮ ಅಸ್ತಿತ್ವಕ್ಕೆ ವ್ಯಕ್ತಿ ವಿಶಿಷ್ಟತೆ ಇಲ್ಲವಾದರೂ, ವಿಶ್ವವನ್ನು ನೋಡುವ, ಗ್ರಹಿಸುವ ಕ್ರಮಕ್ಕೆ ಇದೆ. ಇಂತಹ ಸಂಶ್ಲೇಷಣಾತ್ಮಕ ದೃಷ್ಟಿ ಕೋನವನ್ನು ಕನ್ನಡಕ್ಕೆ ಒದಿಗಿಸಿದವರು ತೇಜಸ್ವಿಯವರು. ಆದುದರಿಂದಲೇ ಅವರು ನಮಗೆ ಮುಖ್ಯವಾಗುತ್ತಾರೆ.

tejasvi25ತೇಜಸ್ವಿಯವರ ಪ್ರಕಾರ ವಿಶ್ವದ ಯಾವುದೇ ವ್ಯಾಪಾರವೂ ತನಗೆ ತಾನೇ ಆತ್ಯಂತಿಕವಲ್ಲ. ಅವುಗಳು ಒಂದಕ್ಕೊಂದು ಸಂಬಂಧಿಸಿದವು. ತುಕ್ಕೋಜಿಯ ಕುಟುಂಬದೊಳಗಿನ ಕಲಹ ಹೊರಗಿನ ನಗರೀಕರಣದ ಜೊತೆ ಲಗ್ಗೆ ಹಾಕಿಕೊಂಡಿರುತ್ತದೆ. ಹಾಗೆ ನೋಡಿದರೆ ನಗರೀಕರಣ ಎನ್ನುವುದು ಮನೆಯ ಹೊರಗಿನ ಸಂಗತಿಯಾಗಿ ಉಳಿಯುವುದೇ ಇಲ್ಲ. (ನಮ್ಮ ಇಂದಿನ ಜಾಗತೀಕರಣದ ಹಾಗೆ)

ಅವರೊಳಗೆ ಒಬ್ಬ ಸೃಜನಶೀಲ ಲೇಖಕ ಮತ್ತು ವಿಜ್ಞಾನಿಯ ಎರಡು ದೃಷ್ಟಿಗಳೂ ಮಿಳಿತವಾಗಿದೆ. ಹೀಗಾಗಿಯೇ ಅವರು ಎಲ್ಲ ಲೇಖಕರಿಗಿಂತ ಭಿನ್ನ. ದೈವ ನಂಬುಗೆಯ ಭಾವಾತಿರೇಕದಿಂದ ಅವರೊಳಗಿನ ಲೇಖಕನನ್ನೂ, ವಿಜ್ಞಾನಿಯ ಕೇವಲ ಮಾಹಿತಿ ಜ್ಞಾನದಿಂದ ಅವರೊಳಗಿನ ವಿಜ್ಞಾನಿಯನ್ನೂ ಅವರು ಬಿಡಿಸಿಕೊಂಡಿದ್ದಾರೆ.

ವಿಜ್ಞಾನವನ್ನು ನಮ್ಮ ಕಾಲದ ಅನುಭವವಾಗಿ, ಅವಶ್ಯಕತೆಯಾಗಿ ಕಂಡಿರಿಸಿದವರು ಅವರು. ಆದುದರಿಂದಲೇ ವಿಸ್ಮಯದಿಂದ ಕೂಡಿದ ಅವರ ವಿಜ್ಞಾನದ ಒಳನೋಟಗಳು ಜಿ.ಟಿ. ನಾರಾಯಣರಂತಹವರ ಆಕ್ಷೇಪಗಳಿಗೆ ಒಳಗಾಗಿವೆ. (ವಿಜ್ಞಾನಿಯಾದವನು ವಿಸ್ಮಯದಿಂದ ನೋಡಬಾರದು) ಹಾಗೆಯೇ ನಾನು ಎಷ್ಟೋ ವಿಜ್ಞಾನದ ಪುಸ್ತಕಗಳನ್ನು ಬರೆದೆ, ಆದರೆ ಅದನ್ನ ಓದಿಕೊಂಡು ಬರೆದೆ. ಅದರೆ ನೀನು ಕಾಡಿನಲ್ಲಿದ್ದು ಅದನ್ನೆಲ್ಲಾ ಅನುಭವಿಸಿ ಬರೆದೆ ಆದುದರಿಂದ ನನಗಿಂತ ನೀನು ಉತ್ತಮ ಲೇಖಕ ಎಂಬ ಶಿವರಾಮ ಕಾರಂತರ ಪ್ರಶಂಸೆಗೂ ಒಳಗಾಗಿದೆ.

ತೇಜಸ್ವಿಯವರು ಕೇವಲ ಒಬ್ಬ ಲೇಖಕನಾಗಿ ಮಾತ್ರವಲ್ಲ, ಒಬ್ಬ ವ್ಯಕ್ತಿಯಾಗಿ ಕೂಡ ಬಹಳ ವಿಶಿಷ್ಟವೆನಿಸುತ್ತಾರೆ. ಒರಟಾದ ಅವರ ಸ್ವಭಾವದೊಳಗೆ ಅಡಗಿದ್ದ ಅಂತಃಕರಣವನ್ನು, ಮುಗ್ಧತೆಯನ್ನು ಅವರ ವಿಲಕ್ಷಣ ನಡವಳಿಕೆಯ ಅಂತರಾಳದಲ್ಲಿ ಹುದುಗಿದ್ದ ಶಿಸ್ತನ್ನು, ಶ್ರೇಷ್ಠತೆಯ ಭ್ರಮೆಯಿಂದ ಎಂದೂ ನರಳದ ಅವರು, ಒಂದು ಸಣ್ಣ ಮಗುವಿನ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುತ್ತದ್ದ ರೀತಿಯನ್ನು ಹತ್ತಿರದಿಂದ ಕಂಡವರಿದ್ದಾರೆ.

ಪ್ರಸ್ತುತ ಸಾಹಿತ್ಯ ವಲಯದಲ್ಲಿ ಪ್ರಶಸ್ತಿಗೆಂದು ದೊಡ್ಡ ಲಾಬಿ ನಡೆಯುತ್ತಿರುವಾಗ, ಮನೆಬಾಗಿಲಿಗೆ ಪ್ರಶಸ್ತಿ ಬಂದದ್ದನ್ನು ಕಾಲಿನಿಂದ ಒದ್ದ ತೇಜಸ್ವಿ ‘ಕಾಲದ ಕಾಲು ಸದ್ದನ್ನು ಆಲಿಸಿ’ ಕಾಲಾತೀತರಾದರು. ದಿವ್ಯ ನಿರ್ಲಕ್ಷತೆಯ ವರಪುತ್ರ. ಥೇಟ್ ಅವರಪ್ಪನ ಹಾಗೆಯೇ. ನಗರದಿಂದ ಕಾಡಿಗೆ ತೆರಳಿದ ಅವರ ವ್ಯಕ್ತಿತ್ವವನ್ನು ಕಾಡೇ ರೂಪಿಸಿದ್ದರಿಂದ ಅವರಿಗೆ ಇಂತಹ ಗುಣ ಸ್ವಭಾವಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತೇನೋ.

ಹೆಣ್ಣು ಅವರಿಗೆ ಕೊನೆಗೂ ನಿಗೂಢವಾಗಿಯೇ ಉಳಿದು ಬಿಟ್ಟಿದ್ದಾಳೆ ಎಂಬ ಅವರ ನಂಬಿಕೆಯನ್ನು ಪರೀಕ್ಷಿಸಲೋ ಎಂಬಂತೆ ‘ಅವನತಿ’ಯ ನಾಯಕಿಯನ್ನು ಬರೆದ ಅವರೇ ‘ಕಿರಗೂರಿನ ಗಯ್ಯಾಳಿಗಳ’ನ್ನೂ ಸೃಷ್ಟಿಸಿದರು. ಕೊನೆಗೂ ಅವರು ಮಾಯಾಲೋಕ-2 ಅನ್ನು ಬರೆಯದೆಯೇ ನಿರ್ಗಮಿಸಿದರು. ಅವರು ಇನ್ನಿಲ್ಲವಾದ ಸುದ್ದಿತಿಳಿಯದ ಎಷ್ಟೋ ಇನ್ವಿಸಿಬಲ್ ಮುಗ್ಧ ಓದುಗರು, ಇನ್ನೂ ಅಂಕಿತ ಪುಸ್ತಕದ ಅಂಗಡಿಗೆ ಎಡತಾಕಿ ಮಾಯಾಲೋಕ-2 ಬಂದಿದೆಯೇ? ಯಾವಾಗ ಬರುತ್ತೆ? ಎಂದು ಕೇಳಿದರೂ ಆಶ್ಚರ್ಯವಿಲ್ಲ. ಯಾಕೆಂದರೆ ಅವರು ‘ನಿಗೂಢದಿಂದ ಮಾಯೆಯವರೆಗೆ’ ಬಿಟ್ಟು ಹೋಗಿರುವ ನಮ್ಮ ನೆನಪುಗಳಲ್ಲಿ ‘ಮಳೆಗಾಲದ ಚಕ್ರದಂತೆ’ ಚಲಿಸುತ್ತಲೇ ಇರುತ್ತಾರೆ.

ತೇಜಸ್ವಿಯವರು ತೀರಿಕೊಂಡ ಸಂದರ್ಭದಲ್ಲಿ ಮುಂಬಯಿಯ ಮೈಸೂರು ಅಸೋಸಿಯೇಷನ್ನಿನಲ್ಲಿ ಸಾಹಿತ್ಯೋತ್ಸವವನ್ನು ಆಚರಿಸಲಾಗಿತ್ತು. ಅದರ ಬಗ್ಗೆ ಒಂದು ಟಿಪ್ಪಣಿಯನ್ನು ಬರದಿದ್ದೆ.

Leave a Reply