‘ಹೆದ್ದಾರಿಗಳಿಗಿಂತ ಕಾಲ್ದಾರಿ’ ಎಂಬ ಟ್ಯಾಗ್ ಲೈನ್..

shama nandibetta

ಶಮ ನಂದಿಬೆಟ್ಟ 

ಮುಸಾಫಿರ್ ಜಾತಿಯ ನನ್ನನ್ನು ಆಕರ್ಷಿಸಿದ್ದು ಭಾವಗೀತೆಯ ಸಾಲಿನಂಥ “ಈ ಪರಿಯ ಸೊಬಗು” ಶೀರ್ಷಿಕೆ ಮಾತ್ರವಲ್ಲ, ಜತೆಗೇ ಹೆದ್ದಾರಿಗಳಿಗಿಂತ ಕಾಲ್ದಾರಿ ಟ್ಯಾಗ್ ಲೈನ್ ಕೂಡ. ಎದೆಎದೆಗಳ ನಡುವೆ ಮುರಿದು ಹೋಗಿರುವ ರಿಪೇರಿ ಕಾಮಗಾರಿ ಕೈಗೆತ್ತಿಕೊಂಡ ಅಕ್ಷರ ಕಾರ್ಮಿಕರ ಗಾಢ ಅನುಭವ ಪ್ರತಿ ಪುಟದಲ್ಲೂ ನಿಚ್ಚಳ.

ಅಲ್ಲಿ ಆಳುವವರು ದೇಶದ ಬಗ್ಗೆ ಭಾಷಣ ಬಿಗಿಯುತ್ತಿದ್ದರೆ ಸದ್ದಿಲ್ಲದೇ ತನ್ನ ದೇಶ ಸುತ್ತಿ ಜನರ ಭಾವಕೋಶಕ್ಕೆ ಲಗ್ಗೆಯಿಟ್ಟು ಜನನಾಡಿಯನ್ನು ಅರಿತ ಸಂತನೊಬ್ಬನ ಅನುಭವದ ಸಂತೆಯಿದೆ, ಇಲ್ಲಿ ಸಿಗುವ ಸರಕುಗಳೂ ಭಿನ್ನ. ದಿನ ನಿತ್ಯದ ಅನ್ನಕ್ಕೆ, ತಲೆ ಮೇಲೊಂದು ಸೂರಿಗಷ್ಟೇ ಆಸೆ ಪಡುವ ಪಾಪದ ರೈತರಿಗೆ 15.9 % ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ನೀಡಿ ಸೇಲ್ಸ್ ಮ್ಯಾನ್ ಪ್ರಮೋಷನ್ ಗಿಟ್ಟಿಸಿಕೊಳ್ಳುವಾಗ ಹಾಕಿಸಿಕೊಂಡ ಹಾರ ರೈತನ ಕೊರಳಿಗೆ ಸಾಲದ ಸರಮಾಲೆಯಾಗಿ ತೂಗುತ್ತದೆ. pallava venkateshಅದೇ ಸಂದರ್ಭದಲ್ಲಿ ಐಷಾರಾಮಿ ಬೆಂಝ್ ಕಾರಿಗೆ 7% ಅಷ್ಟೇ ಬಡ್ಡಿ ದರ ವಿಧಿಸಲಾಗಿರುತ್ತದೆ. ಮತ್ತು ಮಾರಾಟ ಸಂಖ್ಯೆಯನ್ನಷ್ಟೇ ತುಲನೆ ಮಾಡಿ ಇದನ್ನು ಗ್ರಾಮೀಣ ಪ್ರಗತಿಯಂತೆ ಬಿಂಬಿಸಲಾಗುತ್ತಿದೆ ಎನ್ನುವ ಸತ್ಯ ನಮ್ಮಂಥವರಿಗೆ ಸಿಗುವುದು ಇಲ್ಲಿ ಮಾತ್ರ.

ಅವಕಾಶ ಸಿಕ್ಕಿದಾಗೆಲ್ಲ (ಅಥವಾ ಅವಕಾಶ ಸೃಷ್ಟಿಸಿಕೊಂಡು) ದಲಿತೋದ್ಧಾರವೇ ಜೀವನದ ಪರಮ ಗುರಿ ಎಂದು ಬೊಬ್ಬಿರಿದು ಓಟು ಗಿಟ್ಟಿಸಿಕೊಳ್ಳುವದು ನಮಗೆ ಗೊತ್ತಿಲ್ಲದ್ದಲ್ಲ. ಹಿಂದುಳಿದವರ ಅಭಿವೃದ್ಧಿಗಾಗಿಯೇ ರೂಪುಗೊಂಡು ‘ಭತ್ತದ ಉತ್ಸಾಹ’ವನ್ನೂ ಮೈದುಂಬಿಕೊಂಡ ವಿದ್ಯಾವನಂ ಎಂಬ ಅದ್ಭುತ ಶಾಲೆಗೆ ಒಂಭತ್ತು ವರ್ಷಗಳಿಂದಲೂ ಮಾನ್ಯತೆಯನ್ನೇ ಕೊಟ್ಟಿಲ್ಲ ತಮಿಳುನಾಡು ಸರ್ಕಾರ ಅನ್ನುವುದು ಹೀಗೆ ಗೊತ್ತಾದ ಸಂಗತಿ.

ನೀರಿಗಾಗಿ ಪರದಾಡುತ್ತ ಗಂಟೆಗಟ್ಟಲೇ ಕಾದು ಕುಳಿತು ಹನಿ ನೀರ ಸೆಲೆಯಿಂದ ನೀರು ಸಂಗ್ರಹಿಸಿಕೊಳ್ಳುವ ಮಹಿಳೆಯ ಚಿತ್ರ ಕಂಡಾಗ ದೊಡ್ಡ ಕೊಡಪಾನ ಹೊತ್ತು ಹೀಗೆ ದಾರಿ ಸವೆಸುತ್ತಿದ್ದ ನನ್ನಮ್ಮ, ಜತೆಗೆ ಚಿಕ್ಕ ಪಾತ್ರೆ ಹಿಡಕೊಂಡು ಬಾಲಂಗೋಚಿಗಳಂತೆ ಸಾಗುತ್ತಿದ್ದ ನಾನು ತಮ್ಮನ ಚಿತ್ರ ಕಣ್ಣೆದುರು ಕದಲುತ್ತದೆ. ನನ್ನ ದೇಶ ನನ್ನ ಜನ ಹೆಚ್ಚು ಹೆಚ್ಚು ಅರ್ಥವಾಗುತ್ತಾರೆ.

ನಮಗೆ ಗೊತ್ತಿಲ್ಲದ ಬವಣೆಗಳ ಬಗ್ಗೆ ಬರೆಯುತ್ತಲೇ ಒಳಿತುಗಳ ಬಗ್ಗೆಯೂ ಬೆಳಕು ಚೆಲ್ಲುವ ಪರಿ ಇದನ್ನು ವಿಶಿಷ್ಟವಾಗಿಸಿದೆ. ಹಳ್ಳಿಗಾಡಿನ ಪುಟ್ಟ ಪುಟ್ಟ ಹುಡುಗಿ ತಾನು ಪತ್ರಕರ್ತೆಯಾಗಿ ತಮ್ಮೂರಿನ ಬವಣೆಯನ್ನು ಎಲ್ಲರಿಗೂ ಹೇಳಿ ಪರಿಹರಿಹಾರದ ಕನಸು ಕಾಣುವ ಮಟ್ಟಕ್ಕೆ ಬೆಳೆದಿದ್ದು ಕುಟುಂಬಶ್ರೀ ಯೋಜನೆಯ ಕಾರಣದಿಂದ ಎನ್ನುವಾಗ ಭವಿಷ್ಯದಲ್ಲಿ ದೇಶದ ಪ್ರಗತಿ ಬಗ್ಗೆ ಮತ್ತೊಂದಿಷ್ಟು ಕನಸಲು ಸಾಧ್ಯವಾಗುತ್ತದೆ.

ಬೆಳೆಗೆ ನೀರಿಲ್ಲದೇ ಒಣಗುವುದು ಕಂಡ ಮಹಾರಾಷ್ಟ್ರದ ಹತಾಶ ರೈತ ಸಾಲ ಮಾಡಿಯಾದರೂ ಕೊರೆಸಿದ ಬೋರ್ ವೆಲ್ ಒಳಗೆ ಹನಿ ನೀರು ದಕ್ಕದೇ ಹತಾಶೆಗೆ ಬಿದ್ದ ವಿವರಣೆಗೆ ಇಂಬು ಕೊಡುವಂತೆ ನಮ್ಮ ಮಲೆನಾಡಿನ ಮನೆಯ ತೋಟದಲ್ಲಿ ತೋಡಿಸಿದ ಒಣ ಕೊಳವೆಬಾವಿಗಳ ಗುರುತುಗಳು ಅಂತರ್ಜಲ ನಾಶ ಮಾಡಿದ್ದಕ್ಕೆ ಫಲ ಅನುಭವಿಸಿ ಎಂದು ಅಣಕಿಸಿ ನಕ್ಕಂತಾಗಿದ್ದು ಸುಳ್ಳಲ್ಲ.

ಜತೆ ಜತೆಗೇ ಹೋಟೆಲ್ ಸೆಲ್ಫೀ, ಅಲೂಗಡ್ಡೆಯ ಹಾಡಿನಂಥ ವಿಶೇಷಗಳನ್ನು ಲಘು ಧಾಟಿಯಲ್ಲಿ ಬರೆಯುತ್ತ ಹೋಗಿದ್ದಾರೆ. ಅರಣ್ಯದೊಳಗೆ ವ್ಯವಸ್ಥಿತ ಗ್ರಂಥಾಲಯವೊಂದನ್ನು ಸೃಷ್ಟಿ ಮಾಡಿ ಗಾಂಧಿ, ವೈಕಂ, ವಾಸುದೇವನ್ ನಾಯರ್ ಅವರನ್ನು ಕುಗ್ರಾಮದ ಜನಕ್ಕೆ ದಾಟಿಸುವ ಚಿನ್ನತಂಬಿಗೊಂದು ಸಲಾಮ್ ಎನ್ನುತ್ತದೆ ಮನಸ್ಸು.

PARI BOOK COVER-1 (2)ಸರ್ಕಾರವಾಗಲೀ ಇನ್ನಿತರ ಸಂಘ ಸಂಸ್ಥೆಗಳಾಗಲೀ ಮಾಡಲಾರದ ಸ್ಥಳೀಯ ತಳಿ ಸಂರಕ್ಷಣೆ, ಬೀಜ ರಕ್ಷಣೆ, ಸಾವಯವ ಕೃಷಿ ಪರಂಪರೆಯನ್ನು ನಿಜಕ್ಕೂ ಉಳಿಸುತ್ತಿರುವ ಮಹಿಳೆಯರ ಗಣನೀಯ ಕೆಲಸಗಳ ಬಗ್ಗೆ ಓದುತ್ತ ಮತ್ತೆ ಹಳ್ಳಿಗಳ ಕಡೆ ಹೊರಳುತ್ತದೆ ಮನಸ್ಸು. ತಾವೇ ಬೆಳೆದ ಅಕ್ಕಿಯ ಅನ್ನ ತಿಂದು ಬದುಕುವ ಜನ ಬ್ಯಾಂಕಿನಲ್ಲಿ ರೈತರಿಗೆ ಕೂಡಲು ಕುರ್ಚಿ ಕೊಡುವುದಿಲ್ಲ ಎನ್ನುವಾಗ ಅವರ ಅಸಹಾಯಕತೆಗೆ ಎಲ್ಲೋ ಒಂದು ಕಡೆ ನಾವೂ ಜವಾಬ್ದಾರರಲ್ಲವಾ ಆತ್ಮ ಸಾಕ್ಷಿ ಸಣ್ಣಗೇ ಕೇಳುತ್ತದೆ.

ಒಟ್ಟಿನಲ್ಲಿ ದೇಶದ ಮೂಲೆಮೂಲೆಗಳಲ್ಲೂ ಜೀವಂತವಿರುವ ಬವಣೆಯ ಕಥೆ ಹೇಳುತ್ತಲೇ ಬೆಳಕಿನ ಆಶಾ ಕಿರಣಗಳನ್ನು ಒಳ ಮನೆಗೆ ತಂದು ದೀಪ ಹಚ್ಚುವ ಸಾಧ್ಯತೆಗಳನ್ನೂ ತೆರೆದಿಡುವ ಪುಸ್ತಕ.

ಭಾರತದ ಹಳ್ಳಿ ಮೂಲೆಯಲ್ಲಿ ಹುಟ್ಟಿದ ನನ್ನಂಥ ಓದುಗರಿಗೆ ಇವೆಲ್ಲವೂ ನಮ್ಮ ಅನುಭವಗಳು ಕೂಡಾ ಅನಿಸುವುದಕ್ಕೆ, ಇಂದು ಅವನ್ನು ಮೀರಿ ಬೆಳೆಯಲು ಸಾಧ್ಯವಾಗಿರುವ ಖುಷಿಗಾಗಿ ಓದಬೇಕು. ಪಟ್ಟಣಗಳಲ್ಲೇ ಹುಟ್ಟಿ ಬೆಳೆದವರಾಗಿದ್ದರೆ ಯಾವುದೋ ಕಷ್ಟಗಳ ಸರಪಳಿಯಲ್ಲಿ ಸಿಕ್ಕಿದರೂ ಹಳಿದುಕೊಂಡು ಸುಮ್ಮನಾಗದೇ ಯೋಗಿಗಳಂತೆ ದುಡಿದು ದೇಶದ ಆರ್ಥಿಕತೆಗೆ ತಮ್ಮದೇ ಕೊಡುಗೆ ಕೊಟ್ಟು ಪಟ್ಟಣದ ಹೊಟ್ಟೆಗಳನ್ನ ತುಂಬಿಸುವ ಅವರಿಗೊಂದು ಸಲಾಂ ಹೇಳುವುದಕ್ಕಾಗಿ ಓದಬೇಕು.

ಇನ್ನು “ಪರಿ” ತಂಡ, ಪಿ. ಸಾಯಿನಾಥ್ ಬಗ್ಗೆ ನಾನಿಲ್ಲಿ ಬರೆಯುವುದಿಲ್ಲ.

ನೀವೇ ಪುಸ್ತಕವನ್ನು ಕೈಗೆತ್ತಿಕೊಳ್ಳಬೇಕು, ಒಳಗಿಳಿಸಿಕೊಳ್ಳಬೇಕು. ಅಂದ ಹಾಗೆ ಪ್ರತಿಗಳು ಬೇಕಿದ್ದಲ್ಲಿ ಪಲ್ಲವ ಪ್ರಕಾಶನದ ವೆಂಕಟೇಶ್ 9480353507 ನಲ್ಲಿ 24×7 ಸಿಗ್ತಾರೆ.

ಪುಸ್ತಕ ಕೊಳ್ಳದೇ ಹೋದರೆ ಒಂದೊಳ್ಳೆ ಓದನ್ನು ಖಂಡಿತ ಮಿಸ್ ಮಾಡ್ಕೋತೀರ.

4 comments

  1. ಶಮಾ, ನೀವೇನೆ ಬರಿರಿ ನನಗೊಂಥರಾ ಇಷ್ಟ ಆಗ್ತೀರಾ. ನಿಮ್ಮ ಕವನಗಳಲ್ಲಿ ದಿಟ್ಟ ತನವಿದೆ. ನಿಮ್ಮ ಬರಹ ಓದೋದೆ ಒಂದು ಖುಷಿ.

    • Sangeetha,

      ನಿಮ್ಮ ನಲ್ಮೆಗೆ ನನ್ನಿ, ವಿಶ್ವಾಸಕ್ಕೆ ಋಣಿ.

  2. ಸಂವೇದನಾಶೀಲ ಬರಹ. ಓದುಗನನ್ನು ಬದಲಾಯಿಸಬೇಕು. ಹಾಗಿವೆ ಕಾಲುದಾರಿಯ ಕತೆಗಳು.

Leave a Reply