ಅಕ್ಷರದವ್ವನ ನೆನಪು..

ಸಿ.ಎಸ್.ದ್ವಾರಕಾನಾಥ್

“ಅಕ್ಷರದವ್ವ” ಎಂದೇ ಖ್ಯಾತರಾದ ಸಾವಿತ್ರಿ ಬಾಪುಲೆ ಎಂಬ ಈ ಹೆಣ್ಣು ಮಗಳು ಈ ದೇಶದಲ್ಲಿ ಹುಟ್ಟಿರದಿದ್ದರೆ ಇಂದಿರಾಗಾಂಧಿ ಯವರು ಪ್ರದಾನಿಯೂ ಆಗುತ್ತಿರಲಿಲ್ಲವೇನೋ.. ಶೀಲಾ, ಮಾಯಾ, ಜಯ, ಮಮತಾ, ವಸುಂದರ ರಂತಹ ಹೆಣ್ಣು ಮಕ್ಕಳು ಯಾರೂ ಮುಖ್ಯಮಂತ್ರಿಗಳೂ ಆಗುತ್ತಿರಲಿಲ್ಲವೇನೋ..?

ಇಂದು ವಿದ್ಯಾವಂತರಾಗಿ ಗಂಡಸಿನೊಂದಿಗೆ ಸಮಾನವಾಗಿ ನಿಂತು ಆತ್ಮವಿಶ್ವಾಸ ಗಳಿಸಿರುವ ಕೋಟ್ಯಾಂತರ ಮಹಿಳೆಯರು ಅಂದು ಶಿಕ್ಷಣದಿಂದ ವಂಚಿತರಾಗಿದ್ದು ಸಾವಿತ್ರಿ ಬಾಪುಲೆಯವರ ಹೋರಾಟದಿಂದ ಓದು ಪಡೆಯದೇ ಇದ್ದಿದ್ದರೆ ಇಂದಿಗೂ ಗಂಡಸಿನ ಅಹಮ್ಮಿನಡಿಯಲ್ಲೇ ನಲುಗಿ ಅಜ್ನಾತರಾಗೇ ನಲುಗಿ ಹೋಗಿರುತಿದ್ದರೇನೋ..?

ಈ ಅಕ್ಷರಮಾತೆ ಈ ನೆಲದಲ್ಲಿ ಹುಟ್ಟಿ ಇಂದಿಗೆ 186 ವರ್ಷಗಳಾಗಿವೆ..

ಈ ದೇಶದ ಹೆಣ್ಣುಮಕ್ಕಳು ಇಬ್ಬರು ವ್ಯಕ್ತಿಗಳನ್ನು ಎಂದಿಗೂ ಮರೆಯದೇ ನೆನೆಯಬೇಕು..!? ಒಂದು, ಹೆಣ್ಣು ಮಕ್ಕಳಿಗೆ ಮೊಟ್ಟಮೊದಲು ಶಿಕ್ಷಣ ನೀಡಲು ತಮ್ಮ ಜೀವವನ್ನೇ ಧಾರೆಯೆರೆದ ಸಾವಿತ್ರಿ ಬಾಪುಲೆ ಮತ್ತು ಎರಡನೆಯದಾಗಿ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಬಾಗ ನೀಡಬೇಕೆಂದು “ಹಿಂದು ಕೋಡ್ ಬಿಲ್” ಮಂಡಿಸಿ, ಅದರ ಅನುಷ್ಠಾನಕ್ಕಾಗಿ ಒತ್ತಾಯಿಸಿ ತಮ್ಮ ಕಾನೂನು ಸಚಿವ ಪದವಿಗೇ ರಾಜೀನಾಮೆ ಕೊಟ್ಟ ಮತ್ತು ಮಹಿಳೆಯರಿಗೆ ಮತದಾನದ ಹಕ್ಕು ಕೊಡಿಸಿದ ಬಾಬಾಸಾಹೇಬ ಡಾ.ಅಂಬೇಡ್ಕರ್ ರವರನ್ನು ಮರೆಯಬಾರದು.

ಈ ಅಕ್ಷರದವ್ವನ ಮಾನಸಪುತ್ರರೇ ಅಂಬೇಡ್ಕರರು ಅಂದರೆ ತಪ್ಪಾಗಲಾರದು…

ದುರಂತವೆಂದರೆ ಸದಾ “ಮಿತ್” ಅನ್ನೇ ನಂಬುವುದನ್ನು ಅಬ್ಯಾಸ ಮಾಡಿಕೊಂಡಿರುವ ಬಾರತೀಯರಾದ ನಾವು “ರಿಯಾಲಿಟಿ”ಯನ್ನು ‌ಬೇಗ ನಂಬುವುದು ಕಷ್ಟ.. ಆದರೂ ಕಾಲಾಂತರದಲ್ಲಿ ಸತ್ಯಗಳನ್ನು ಸ್ವೀಕರಿಸುವುದನ್ನು ನಾವು ಅಬ್ಯಾಸಮಾಡಿಕೊಳ್ಳಬೇಕಾಗಿದೆ.. ಮುಂದಿನ ಜನಾಂಗಕ್ಕೆ ಅಬ್ಯಾಸ ಮಾಡಿಸಬೇಕಿದೆ..

ಈ ಕಾರಣಕ್ಕೆ ಇಂದಾದರೂ ಸಾವಿತ್ರಿ ಬಾಪುಲೆಯವರ ಬಗ್ಗೆ ಅರಿಯೋಣ,ಓದೋಣ, ನಮ್ಮ ಮಕ್ಕಳಿಗೆ ಇತಿಹಾಸದ ವಾಸ್ತವಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ತಿಳಿಸೋಣ.. ಈ ದೇಶದ ಮೇಲೆ ಶತಶತಮಾನಗಳಿಂದ ಮುಸುಕಿರುವ ಮಬ್ಬನ್ನು ಸರಿಸಿ ಅರಿವೆಂಬ ಬೆಳಕಿನೆಡೆಗೆ ಮುಖಮಾಡೋಣ…

Leave a Reply