ಪ್ರಸಾದ್ ನಾಯ್ಕ್ ವಿಶೇಷ ಕಥೆ: ಹುಲ್ಯಾ ದೈವ

ಎಲ್ಲಾ ಅವಾಂತರಗಳು ಶುರುವಾಗಿದ್ದೇ ಆ ಸ್ವಯಂಸೇವಾ ಸಂಸ್ಥೆಯಿಂದ.

“ಹುಲಿಗಳನ್ನು ಉಳಿಸಿ” ಎಂಬ ಹೊಸರಾಗವೊಂದನ್ನು ಬೊಬ್ಬಿಡುತ್ತಾ ಬಂದಿದ್ದ ಚೈತನ್ಯ ಸ್ವಯಂಸೇವಾ ಸಂಸ್ಥೆಯು ಜನಕಾಪುರದ ಒಂದು ಮುಖವನ್ನೇ ಬದಲಾಯಿಸಿಬಿಟ್ಟಿತ್ತು ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಉಡುಪಿಯ ಒಂದು ಭಾಗವಾದ ಇಂದ್ರಾಳಿಯ ಪಕ್ಕದಲ್ಲೇ ಇದೆ ಈ ಜನಕಾಪುರ. ಅತ್ತ ಹಳ್ಳಿಯೂ ಅಲ್ಲದ ಇತ್ತ ನೆಟ್ಟಗೆ ಪಟ್ಟಣವೂ ಅಲ್ಲದ, ಪ್ರಕೃತಿಯ ಮಡಿಲಿನಲ್ಲಿ ಹುಟ್ಟಿಕೊಂಡ ಒಂದು ಪುಟ್ಟ ಊರಿನಂತೆ. ಕಾಡುಗಳು ಇಲ್ಲಿ ಯಥೇಚ್ಛವಾಗಿದ್ದರೂ ನರಿಗಳನ್ನು, ಕಾಡುಹಂದಿಗಳನ್ನು ಬಿಟ್ಟರೆ ಮತ್ಯಾವುದೇ ಮಹಾ ಕಾಡುಪ್ರಾಣಿಗಳನ್ನು ಇಲ್ಲಿಯ ಜನಗಳು ನೋಡಿದವರಲ್ಲ. ಜನಕಾಪುರದಿಂದ ಮೂರು ಕಿಲೋಮೀಟರ್ ದೂರಕ್ಕಿರುವ ನಿಸರ್ಗಧಾಮವೊಂದೇ ಇಲ್ಲಿಯ ಮತ್ತು ಅಕ್ಕಪಕ್ಕದ ಊರುಗಳ ಜನರಿಗೊಂದು ಪ್ರಮುಖ ಆಕರ್ಷಣೆ. ಹೀಗೆ ತನ್ನ ಪಾಡಿಗೇ ತಾನು ಸುಖವಾಗಿದ್ದ ಜನಕಾಪುರಕ್ಕೆ ಈ ಚೈತನ್ಯ ಸಂಸ್ಥೆಯು ಅದೆಲ್ಲಿಂದ ಬಂದು ಸೇರಿಕೊಂಡಿತೋ!

ಜನಕಾಪುರದಂತೆಯೇ ತನ್ನ ಪಾಡಿಗೆ ತಾನು ಸುಖವಾಗಿದ್ದ ಜೀವವೆಂದರೆ ನಾರಣಪ್ಪ. ತೆಳ್ಳಗೆ, ಕಪ್ಪಗಿದ್ದ ಆರಡಿಯ ಆಸಾಮಿ. ಬೀಡಿಯೊಂದನ್ನು ಬಿಟ್ಟರೆ ಅಷ್ಟಮಿಯಂತಹ ಹಬ್ಬಹರಿದಿನಗಳಲ್ಲಿ ಯಾರಿಗೂ ಗೊತ್ತಾಗದಂತೆ ಒಂದೆರಡು ಪೆಗ್ಗು ಇಳಿಸಿ ಹುಲಿವೇಷ ಹಾಕಿಕೊಂಡು ಕುಣಿಯುವುದೇ ಅವನ ಖಯಾಲಿ. ಚಿಕ್ಕಪುಟ್ಟ ಕೂಲಿ ಕೆಲಸ, ತೆಂಗು ಕೀಳುವುದು, ಗುಂಡಿ ತೋಡುವುದು, ಸೇಸಪ್ಪ ಮೇಸ್ತ್ರಿಗೆ ಬಂಟನಾಗಿ ಹೋಗುವುದು ಇತ್ಯಾದಿಗಳಲ್ಲೇ ಅವನ ಮತ್ತು ಅವನ ಹೆಂಡತಿಯಾದ ಗಂಗಮ್ಮನ ಗಂಜಿ ಬೇಯುತ್ತಿತ್ತು. ಇನ್ನು ನಾರಣಪ್ಪನ ಪುಣ್ಯವೋ ಗಂಗಮ್ಮಳ ಪಾಪವೋ ಆಕೆ ಬಸುರಾಗಲೇ ಇಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ನಾರಣಪ್ಪನಿಗೆ ಇದರಿಂದ ಲಾಭವೇ ಆಯಿತು. ಕೈ ತುರಿಸಿದಾಗಲೆಲ್ಲಾ ವಿನಾಕಾರಣ ದಬದಬ ಎಂದು ಗಂಗಮ್ಮನ ಬೆನ್ನ ಮೇಲೆ ಬಾಸುಂಡೆ ಬಾರಿಸಿ ತನ್ನ ಹತಾಶೆಗಳನ್ನು ಕಳೆದುಕೊಳ್ಳುವುದೊಂದು ಅಭ್ಯಾಸವಾಗಿಬಿಟ್ಟಿತ್ತು ಅವನಿಗೆ.

ಹೀಗೆ ತನ್ನದೇ ಲೋಕದಲ್ಲಿ ಸುಖವಾಗಿದ್ದ ನಾರಣಪ್ಪನ ಜಗತ್ತಿನಲ್ಲಿ ಅಲ್ಲೋಲಕಲ್ಲೋಲವಾಗಿದ್ದು ಚೈತನ್ಯ ಸಂಸ್ಥೆಯವರು ಜನಕಾಪುರಕ್ಕೆ ಬಂದಿಳಿದಾಗ.

ಜನಕಾಪುರಕ್ಕೆ ಸಂಸ್ಥೆಯ ಸ್ಥಳೀಯ ಸಹಾಯಕನಾಗಿ ಬಂದಿದ್ದ ವಿರೂಪಾಕ್ಷ ಊರ ಹಿತ್ತಿಲಿನಂತಿದ್ದ ಜಾಗದಲ್ಲೇ ಅದ್ಹೇಗೋ ಮನೆಗಿಟ್ಟಿಸಿಕೊಂಡು, ಕೊಡಪಾನದಲ್ಲಿ ನೀರು ತುಂಬಿಸಲು ಬರುತ್ತಿದ್ದ ಹೆಂಗಸರನ್ನು ನೋಡಿ ಕಣ್ಣುತಂಪು ಮಾಡಿಕೊಳ್ಳುತ್ತಾ, ಸಂಜೆ ರಾಘಣ್ಣನ ಸಾರಾಯಿ ಅಂಗಡಿಗೆ ಬಂದು ಕೂತಿದ್ದಕ್ಕೂ, ಕಾಕತಾಳೀಯವೆಂಬಂತೆ ನಾರಣಪ್ಪನೂ ಅದೇ ಜಾಗದಲ್ಲಿ ಬಂದು ಕೂರುವುದಕ್ಕೂ ಸರಿಹೋಯಿತು. ಗೆಳೆತನ, ಸಂಬಂಧಗಳನ್ನು ಕುದುರಿಸಲು ಬಾರಿಗಿಂತ ಪ್ರಶಸ್ತವಾದ ಸ್ಥಳವು ಇನ್ನೊಂದಿದೆಯೇ! ಮೂರೇ ಮೂರು ಪೆಗ್ಗು. ನಾರಣಪ್ಪ ಮತ್ತು ವಿರೂಪಾಕ್ಷ ಗಳಸ್ಯಕಂಠಸ್ಯ ಆಗಿಬಿಟ್ಟಿದ್ದರು. ಸಿನೆಮಾದ ನಾಯಕನೊಬ್ಬನು ಹತ್ತಾರು ಗೂಂಡಾಗಳನ್ನು ಹೊಡೆದುಹಾಕಿ ನಾಯಕಿಯನ್ನು ರಕ್ಷಿಸುವಂತೆ ನಾನು ನಮ್ಮ ಸಂಸ್ಥೆಯ ಬೆಂಬಲದಿಂದ ಹುಲಿಗಳನ್ನು ರಕ್ಷಿಸುತ್ತೇನೆ ಎಂದು ಬೊಗಳೆ ಬಿಟ್ಟ ವಿರೂಪಾಕ್ಷ. ಏರಿದ ಮತ್ತಿನಲ್ಲಿ ಕಣ್ಣು ಮಂದವಾಗುತ್ತಿದ್ದರೂ `ಹೌದೇ’ ಎಂದು ಅಚ್ಚರಿಯಿಂದ ಕಣ್ಣರಳಿಸಿದ್ದ ಮುಗ್ಧ ನಾರಣಪ್ಪ.

ಅದ್ಯಾವ ಅಮೃತಘಳಿಗೆಯಲ್ಲಿ ವಿರೂಪಾಕ್ಷ ತನ್ನ ಮಾತಿನಲ್ಲಿ ಹುಲಿಗಳನ್ನು ತಂದನೋ, ನಾರಣಪ್ಪನ ವರಸೆಯೇ ಬದಲಾಗಿ ಹೋಯಿತು. ಖಯಾಲಿಗೆಂದು ಹುಲಿವೇಷ ಹಾಕಿ ಕುಣಿಯುತ್ತಿದ್ದ ನಾರಣಪ್ಪ ಕಿರಾಣಿ ಅಂಗಡಿಯಂತಿದ್ದ ಚೈತನ್ಯ ಸಂಸ್ಥೆಯ ಪುಟ್ಟ ಕಾರ್ಯಾಲಯದಲ್ಲಿ ವಿರೂಪಾಕ್ಷನೊಂದಿಗೆ ಅಡ್ಡಾಡುವುದು ಸಾಮಾನ್ಯವಾಯಿತು. ಹುಲಿಗಳ ಅವನತಿಯ ಬಗ್ಗೆ ವಿರೂಪಾಕ್ಷನು ಬಾರಿನಲ್ಲಿ ಕೊಟ್ಟಿದ್ದ ಭಾಷಣವು ಅದೆಷ್ಟು ನಾಟಿತ್ತೆಂದರೆ ನಾರಣಪ್ಪ ತನ್ನ ಇದ್ದ ಕೆಲಸವನ್ನೆಲ್ಲಾ ಬಿಟ್ಟು ನಿತ್ಯವೂ ಹುಲಿವೇಷವನ್ನು ಧರಿಸಿ ಊರೆಲ್ಲಾ ಅಲೆದಾಡತೊಡಗಿದ್ದ. ಗಡ್ಡಬೋಳಿಸಲು ಹೋದರೂ, ಮೂತ್ರಶಂಕೆಗೆ ಹೋದರೂ, ಮೀನು ಹಿಡಿಯಲು ಹೋದರೂ ನಾರಣಪ್ಪನದ್ದು ಇದೇ ವೇಷ.

ಒಮ್ಮೆಯಂತೂ ಚಂಡಮುಂಡರ ವೇಷ ಬರುವವರೆಗೆ ರಾತ್ರಿ ಯಕ್ಷಗಾನವನ್ನು ನೋಡಿ ತನ್ನ ಬೈಕಿನಲ್ಲಿ ಮನೆಗೆ ಮರಳಿ ಬರುತ್ತಿದ್ದ ಶೆಟ್ಟರು ಅಚಾನಕ್ಕಾಗಿ ಎದುರಿಗೆ ಬಂದ ಹುಲಿವೇಷದ ನಾರಣಪ್ಪನನ್ನು ನೋಡಿ ಕಿಟಾರನೆ ಕಿರುಚಿ ಮಗುಚಿ ಬಿದ್ದಿದ್ದರು. ಆ ಭಯಾನಕ ಕತ್ತಲ ರಾತ್ರಿಯಲ್ಲಿ ವೇಷ ಹಾಕಿಕೊಂಡು ಅಡ್ಡಾಡುತ್ತಿದ್ದ ಈ ನರಪೇತಲ ನಾರಣಪ್ಪ ಶೆಟ್ಟರಿಗೆ ಭೂತದಂತೆ ಕಂಡಿದ್ದ. ಶೆಟ್ಟರು ಆದ ಭಯದಲ್ಲಿ ಎದೆ ಒಡೆದು ಸಾಯಲಿಲ್ಲ ಅನ್ನುವುದೇ ದೊಡ್ಡ ವಿಷಯ. ನಿತ್ಯವೂ ಮುಂಜಾನೆ ವೇಷದ ಬಣ್ಣವನ್ನು ಮೈಗೆಲ್ಲಾ ಬಳಿಯುವುದು ಮತ್ತು ರಾತ್ರಿ ಮನೆಗೆ ಬಂದು ಗಂಟೆಗಟ್ಟಲೆ ಮೈತಿಕ್ಕಿ ತೊಳೆಯುವುದು ಇದೇ ಆಗಿಹೋಗಿತ್ತು. ಗಂಗಮ್ಮ ಏನಾದರೂ ಹೇಳಿದರೆ ಎಂದಿನಂತೆ ಅವಳ ಕೊಂಚ ಬಾಗಿದ ಬೆನ್ನಿನ ಮೇಲೆ ಬೆತ್ತಗಳು ಪುಡಿಯಾಗುತ್ತಿದ್ದವು. ಹುಲಿಗಳನ್ನು ಸಂರಕ್ಷಿಸಲು ತಾನೊಬ್ಬ ಅವತಾರವೆತ್ತಿ ಬಂದ ಮಹಾಪುರುಷನಂತೆ ಗತ್ತಿನಿಂದ ಓಡಾಡಿಕೊಂಡಿದ್ದ ನಾರಣಪ್ಪನಿಗೆ ಹುಚ್ಚು ಹಿಡಿದಿದೆ ಎಂದು ಜನಕಾಪುರದ ಜನರೆಲ್ಲಾ ಗುಸುಗುಸು ಮಾತಾಡಿ ತಮ್ಮ ಬಾಯಿಯ ತೀಟೆಯನ್ನು ತೀರಿಸಿಕೊಂಡರು.

ನಾರಣಪ್ಪನ ಹುಚ್ಚಾಟದಿಂದ ಮನೆಯ ಆದಾಯದ ಮೂಲವು ಹಟಾತ್ತನೆ ಮಾಯವಾದ್ದರಿಂದ ಗಂಗಮ್ಮಳಿಗೆ ವಠಾರದ ಇತರ ಹೆಂಗಸರಂತೆ ಬೀಡಿ ಕಟ್ಟುವುದನ್ನೂ ಶುರುಮಾಡಬೇಕಾಯಿತು. “ಹೊರಗೆ ಹೋಗಿ ನನ್ನ ಮಾನ ಕಳೀತಿಯೇನೇ ಬಿನ್ನಾಣಗಿತ್ತಿ”, ಎಂದು ಮೊದಲು ಅಬ್ಬರಿಸಿದನಾದರೂ ಇವಳ ಸಂಪಾದನೆಯಿಂದ ಮೂರು ಹೊತ್ತಿನ ಗಂಜಿ ಸಿಗುತ್ತದೆಂಬುದು ಖಾತ್ರಿಯಾದಾಗ ಆತ ನಿರಾಳನಾಗಿಬಿಟ್ಟ. ಇನ್ನೇನಿದ್ದರೂ ಪೂರ್ಣಾವಧಿಯಾಗಿ ಹುಲಿವೇಷ ಹಾಕಿಕೊಂಡು ತಿರುಗಾಡುತ್ತಾ ಇಡೀ ಜಗತ್ತಿನ ಹುಲಿಗಳನ್ನು ಸಂರಕ್ಷಿಸುತ್ತೇನೆ ಎಂದು ಮನದಲ್ಲೇ ನಿರ್ಧರಿಸಿಬಿಟ್ಟಿದ್ದ ನಾರಣಪ್ಪ. ಸಂಜೆಯ ಸಾರಾಯಿಗೆ ಹೇಗೂ ವಿರೂಪಾಕ್ಷನ ಜೊತೆಯೂ, ಹಣವೂ ಇರುತ್ತಿತ್ತು. ನಾರಣಪ್ಪ ಮನೆಗೆ ಹೋಗುತ್ತಿದ್ದಿದ್ದು ಅಂದರೆ ಉಣ್ಣಲು, ಮಲಗಲು ಮತ್ತು ಗಂಗಮ್ಮನಿಗೆ ಕತ್ತೆಯಂತೆ ಬಡಿಯಲು ಮಾತ್ರ. ಇನ್ನೇನು ಬೇಕಿತ್ತು ಅವನಿಗೆ?

 

ಚೈತನ್ಯ ಸಂಸ್ಥೆಯು ಜನಕಾಪುರಕ್ಕೆ ಬಂದು ಅದೇನು ಕಿತ್ತುಹಾಕಿತೋ ದೇವರೇ ಬಲ್ಲ! ಹುಲಿಗಳದ್ದಂತೂ ಗೊತ್ತಿಲ್ಲ, ಆದರೆ ಹುಲಿವೇಷ ಹಾಕಿಕೊಂಡ ನಾರಣಪ್ಪ ಕಂಠಪೂರ್ತಿ ಕುಡಿದು ಚರಂಡಿಯಲ್ಲೋ, ರಸ್ತೆಬದಿಯಲ್ಲೋ ಬಿದ್ದುಕೊಂಡಿರುವ ದೃಶ್ಯವಂತೂ ನಿತ್ಯದ ಮಾತಾಯಿತು. ಮನೆಯಲ್ಲಿದ್ದ ಪಾತ್ರೆಗಳು, ಓಬೀರಾಯನ ಕಾಲದ ಕಾಲು ಮುರಿದ ಮಂಚವೂ ಸೇರಿದಂತೆ ವಸ್ತುಗಳೆಲ್ಲಾ ಕರಗಿ ಸಾರಾಯಿಯ ರೂಪದಲ್ಲಿ ನಾರಣಪ್ಪನ ಗಂಟಲಿನಲ್ಲಿಳಿದು ಅವನ ಯಕೃತ್ತನ್ನು ಸುಟ್ಟುಹಾಕಿತ್ತು.

ವಿರೂಪಾಕ್ಷ ತನ್ನ ಕಾರ್ಯಾಲಯದಲ್ಲಿ ಕುಳಿತು ಎಂದಿನಂತೆ ನೊಣ ಹೊಡೆಯುತ್ತಿದ್ದ. ಅದ್ಯಾರೋ ಪುಣ್ಯಾತ್ಮರು ಸುಲಭ ಶೌಚಾಲಯದ ಕಟ್ಟಡದ ಪಕ್ಕದಲ್ಲಿ ಮೈಯೆಲ್ಲಾ ಧೂಳಾಗಿ ಒದ್ದಾಡುತ್ತಿದ್ದ ನಾರಣಪ್ಪನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರಾದರೂ ಫಲಕಾರಿಯಾಗಲಿಲ್ಲ. ಚುಚ್ಚುಮದ್ದು ಚುಚ್ಚಿದರೆ ಕಳ್ಳಭಟ್ಟಿಯ ಸಾರಾಯಿಯೇ ನಾರಣಪ್ಪನ ಮೈಯಿಂದ ಹನಿಯಾಗಿ ಹೊರಬರುತ್ತಿತ್ತೇ ಹೊರತು ರಕ್ತವಲ್ಲ ಎಂಬಷ್ಟರ ಮಟ್ಟಿಗೆ ಕುಡಿದು ಹೈರಾಣಾಗಿದ್ದ ನಾರಣಪ್ಪ ಕೊನೆಯುಸಿರೆಳೆದಿದ್ದ. ಜನಕಾಪುರದ ವಿದೂಷಕನಂತಿದ್ದ ಪಾತ್ರವೊಂದು ದಿಕ್ಕಿಲ್ಲವೆಂಬಂತೆ ಸಾವಿಗೀಡಾಗಿತ್ತು.

ಆ ದಿನವೂ ಒಂದು ರೀತಿಯಲ್ಲಿ ಜನಕಾಪುರಕ್ಕೊಂದು ಮೈಲಿಗಲ್ಲು. ಕಳೆದ ನಾಲ್ಕು ವರ್ಷಗಳಿಂದ ಹುಲಿವೇಷ ಹಾಕಿಕೊಂಡು ದರ್ಬೇಸಿಯಂತೆ ಊರೆಲ್ಲಾ ಅಡ್ಡಾಡುತ್ತಿದ್ದ ನಾರಣಪ್ಪನನ್ನು ಯಾರೂ ಗಂಭೀರವಾಗಿ ಪರಿಗಣಿಸಿದ್ದೇ ಇಲ್ಲ. ಅದರಲ್ಲೂ ಅಷ್ಟಮಿಯ ಹುಲಿವೇಷ ನಿತ್ಯವೂ ಹಿತ್ತಲಲ್ಲಿ ಕಾಣಿಸತೊಡಗಿದಾಗ ‘ಇದೇನಿದು ಅವತಾರ’ ಎಂದು ಗೊಣಗಿದವರೇ ಹೆಚ್ಚು. ನಾರಣಪ್ಪನಿಂದ ನಾಣಿಯಾಗಿ, ಹುಲಿವೇಷದಿಂದ ಹುಲ್ಯಾ ಆಗಿ, ನಂತರ ಹುಚ್ಚ ಎಂದು ಎಲ್ಲರ ಬಾಯಲ್ಲಿ ಅನ್ನಿಸಿಕೊಂಡು ಅವಸಾನಗೊಂಡ ಹಾಳು ಜನ್ಮವದು.

ಇಷ್ಟೆಲ್ಲಾ ಆದರೂ ಅಮಾಯಕಿ ಗಂಗಮ್ಮನ ಮುಖ ನೋಡಿಕೊಂಡು ಊರಿನವರೆಲ್ಲರೂ ಮನೆಗೆ ಓಡೋಡಿ ಬಂದರು. ತಾಳಿಯನ್ನು ತೆಗೆದು ಮೂಲೆಯಲ್ಲಿರಿಸಿದ ಗಂಗಮ್ಮನ ಮುಖದಲ್ಲಿ ಅನೂಹ್ಯವಾದ ಒಂದು ಶಾಂತಿಯಿತ್ತೇ ಹೊರತು ಎಲ್ಲರೂ ಅಂದುಕೊಂಡಂತೆ ಅವಳು ಲಬೋಲಬೋ ಎಂದು ಬಾಯಿ ಬಡಿದುಕೊಳ್ಳಲಿಲ್ಲ. ಅಂತೂ ಎಲ್ಲರ ನೆರವಿನಿಂದ ಸಂಸ್ಕಾರದ ವಿಧಿ ವಿಧಾನಗಳೆಲ್ಲಾ ಸುಸೂತ್ರವಾಗಿ ನೆರವೇರಿದವು. ಇನ್ನೇನು ನಾಲ್ಕು ಹೆಗಲುಗಳು ಬಂದು ಶವವನ್ನು ಹೊತ್ತು ಮುಂದುವರಿಯಬೇಕು ಎಂಬಷ್ಟರಲ್ಲೇ ಆಗಿತ್ತು ನೋಡಿ ಅವಾಂತರ!

ಅರಣ್ಯವು ಬಗಲಿನಲ್ಲಿದ್ದರೂ ಜನಕಾಪುರದ ಅತ್ಯಂತ ಹಿರಿಯನಾದ ಮುತ್ತಜ್ಜನೂ ತನ್ನ ಜೀವಮಾನದಲ್ಲೇ ನೋಡಿರದಿದ್ದಂತಹ ಹುಲಿಯೊಂದು ಅಂದು ಜನಕಾಪುರದಲ್ಲಿ ಕಣ್ಣಿಗೆ ಬಿದ್ದಿತ್ತು. ಅದೂ ಕೂಡ ನಾರಣಪ್ಪನ ವಠಾರದಲ್ಲಿ. ಅದ್ಯಾವಾಗ ಹುಲಿಯು ಆಕಳಿಸುವಂತೆ ತನ್ನ ಬಾಯಿಯನ್ನು ದೊಡ್ಡದಾಗಿ ತೆರೆಯುತ್ತಾ ಗುರುಗುಟ್ಟುತ್ತಾ ವಠಾರಕ್ಕೆ ಬಂತೋ, ನಾರಣಪ್ಪನ ಮನೆಯ ಬಳಿ ನೆರೆದಿದ್ದ ಜನರೆಲ್ಲರೂ ಎದ್ದೆನೋ ಬಿದ್ದೆನೋ ಎಂದು ದಿಕ್ಕಾಪಾಲಾಗಿ ಓಡಿದರು. ಹಲವರು ಲಗುಬಗೆಯಲ್ಲಿ ಬೆಚ್ಚಿಬಿದ್ದಿದ್ದ ಗಂಗಮ್ಮನ ಹಿಂದೆಯೇ ನಾರಣಪ್ಪನ ಮನೆಯನ್ನೇ ಸೇರಿ ಅಗುಳಿ ಹಾಕಿದರೆ, ಉಳಿದವರು ಜೀವ ಉಳಿದರೆ ಸಾಕಪ್ಪಾ ಎಂದು ಕಾಲ್ಕಿತ್ತು ಸಿಕ್ಕಲ್ಲಿ ಅಡಗಿಕೂತರು. ನಾರಣಪ್ಪನ ಶವವು ಭೋರೆಂದು ಚಟ್ಟದಿಂದ ಬಿದ್ದು ಅನಾಥವಾಗಿ ಬಿದ್ದುಕೊಂಡಿತು. ಥೇಟು ಅವನು ಸಾರಾಯಿ ಕುಡಿದು ಚರಂಡಿಯಲ್ಲಿ ಬಿದ್ದಂತೆಯೇ.

ಇನ್ನು ಊರಿಗೆ ಹುಲಿ ಬಂದ ಸುದ್ದಿಯು ವಸಂತ ಮೇಷ್ಟ್ರಿಗೆ ತಿಳಿದು ಅವರು ತನ್ನ ಹಳೇವಿದ್ಯಾರ್ಥಿಯಾಗಿದ್ದ, ಅರಣ್ಯ ಇಲಾಖೆಯಲ್ಲಿದ್ದ ವಾಸುವನ್ನು ಕರೆಸಿ, ವಾಸು ಪಕ್ಕದ ನಿಸರ್ಗಧಾಮದಿಂದಲೂ ಕೆಲ ಸಹಾಯಕರನ್ನು ಸಂಪರ್ಕಿಸಿ ಹುಲಿಯನ್ನು ತಂದು ಹಿಡಿಯುವಷ್ಟರಲ್ಲಿ ಮದ್ಯಾಹ್ನದ ಎರಡು ಮೀರಿತ್ತು. ವಾಸುವಿನ ಕರೆ ಬಂದಾಗಲೇ ತಮ್ಮ ಎಂಟನೇ ಯೂನಿಟ್ಟಿನ ಹುಲಿಯೊಂದು ತಪ್ಪಿಸಿಕೊಂಡಿದೆ ಎಂದು ನಿಸರ್ಗಧಾಮದವರು ಎಚ್ಚರಗೊಂಡಿದ್ದು. ಹುಲಿಯು ತಪ್ಪಿಸಿಕೊಂಡು ಎಲ್ಲೆಲ್ಲೋ ಅಲೆದಾಡುತ್ತಾ ದಾರಿಗೆ ಸಿಕ್ಕವರನ್ನು ಗುರುಗುಟ್ಟಿ ಭಯಪಡಿಸುತ್ತಾ ಸಿಕ್ಕ ಸ್ವಾತಂತ್ರ್ಯದ ಮೋಜು ಅನುಭವಿಸುತ್ತಿತ್ತೇ ಹೊರತು ಯಾರಿಗೂ ಏನನ್ನೂ ಮಾಡಲಿಲ್ಲ. ಅಂತೂ ಇವೆಲ್ಲಾ ಗೊಂದಲಗಳಿಂದ ಬೇಸತ್ತಿದ್ದ ಗಂಗಮ್ಮಳೂ ಉಳಿದ ಕೆಲವರೂ ಸೇರಿಕೊಂಡು ಲಗುಬಗೆಯಲ್ಲಿ ನಾರಣಪ್ಪನ ಶವಕ್ಕೊಂದು ಗತಿ ಕಾಣಿಸುವಷ್ಟರಲ್ಲಿ ದಿನವೇ ಮುಗಿದುಹೋಗಿತ್ತು.

ಆದರೆ ಜನಕಾಪುರಕ್ಕೆ ನಿಜವಾದ ಬೆಳಗಾಗಿದ್ದು ಮಾತ್ರ ಮಾರನೇ ದಿನ. ಹುಚ್ಚ ಎಂದು ಎಲ್ಲರ ಕಣ್ಣಿನಲ್ಲೂ ನಿಕೃಷ್ಟನಾಗಿದ್ದ ನಾರಣಪ್ಪ ಯಕಶ್ಚಿತ್ ಹುಲಿಯೊಂದರ ಅನಿರೀಕ್ಷಿತ ಆಗಮನದಿಂದ ರಾತ್ರೋರಾತ್ರಿ ದೇವಮಾನವನಾಗಿಬಿಟ್ಟಿದ್ದ. ‘ನಾವೇನೋ ಅಂದುಕೊಂಡಿದ್ವಿ, ಆದರೆ ಕಾರ್ಣಿಕ ಮಾರಾಯ್ರೇ’,ಎಂದು ಎಲ್ಲರೂ ಕಿವಿ, ಗಲ್ಲ ಮುಟ್ಟಿ ಮಾತಾಡಿಕೊಂಡರು. ಸ್ವಾಮಿ ಅಯ್ಯಪ್ಪನೇ ಹುಲಿಯ ರೂಪದಲ್ಲಿ ಬಂದು ನಾರಣಪ್ಪನನ್ನು ನೋಡಲು ಬಂದನೋ ಎಂದು ಗುಸುಗುಸುಗಳಾದವು.

ನಾರಣಪ್ಪನ ಶವದೆದುರು ಹುಲಿಯನ್ನು ಕಂಡಿದ್ದು ಶುಭವೋ ಅಶುಭವೋ ಎಂದು ಅರಿಯದೆ ಗೊಂದಲಕ್ಕೀಡಾದ ಗ್ರಾಮಸ್ಥರು ತಮ್ಮ ತಮ್ಮ ಮನೆಗಳಲ್ಲಿದ್ದ ದೈವದ ಗುಡಿಗಳಲ್ಲಿ ವಿಶೇಷ ಪೂಜೆಯನ್ನು ಮಾಡಿಸಿಕೊಂಡು ಕೈತೊಳೆದುಕೊಂಡರು. ಈ ಮಧ್ಯೆ ಊರ ಹತ್ತು ಸಮಸ್ತರು ಸಭೆ ಸೇರಿ, ಕೆಲ ಜ್ಯೋತಿಷಿಗಳನ್ನೂ ಕರೆಸಿ, ಅಷ್ಟಮಂಗಲ ಪ್ರಶ್ನೆಗಳನ್ನು ಕೇಳಿ, ಕವಡೆಗಳನ್ನುದುರಿಸಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದರು. ಇತ್ತೀಚೆಗಷ್ಟೇ ದೈವಾಧೀನರಾದ ದಿವಂಗತ ನಾರಣಪ್ಪನವರಿಗೊಂದು ಗುಡಿ ಕಟ್ಟಿಸಬೇಕು. ಎಲ್ಲರೂ ಸೇರಿ ನಾರಣಪ್ಪನಿಗೆ ದೈವದ ಪಟ್ಟ ಕಟ್ಟಿ ‘ಹುಲ್ಯಾದೈವ’ ಎಂಬ ಹೆಸರನ್ನು ಕೊಟ್ಟಾಯಿತು.

ಸಿಕ್ಕಿದ್ದೇ ಸೀರುಂಡೆ ಎಂಬಂತೆ ಪಂಚಾಯತ್ ಅಧ್ಯಕ್ಷ ವರದ ಗುಡಿಯ ಹೆಸರಿನಲ್ಲಿ ಸಮಸ್ಯೆಗೆ ಸಿಲುಕಿಕೊಂಡು ಇತ್ಯರ್ಥವಾಗದೇ ಉಳಿದಿದ್ದ ನಾರಣಪ್ಪನದ್ದೇ ತುಂಡುಭೂಮಿಯೊಂದನ್ನು ಕಬಳಿಸಿಬಿಟ್ಟ. ಗುಡಿ ಕಟ್ಟುವ ಕೆಲಸವನ್ನು ವರದನ ಬಲಗೈ ಬಂಟ ಗುತ್ತಿಗೆದಾರ ಕೇಶವ ಬಂಗೇರ ಗಿಟ್ಟಿಸಿಕೊಂಡ. ಊರ ಹತ್ತು ಸಮಸ್ತರು ರಚಿಸಿದ ಸಮಿತಿಯೊಂದು ಜನಕಾಪುರದ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಬಳಿಯೂ ಹೋಗಿ ಚಂದಾ ಎತ್ತಿ ಹೇಗೋ ಒಂದು ಗುಡಿಯನ್ನು ಕಟ್ಟಿಸಿ ಕೈತೊಳೆದುಕೊಂಡಿತು.

ನಾರಣಪ್ಪನ ಹೆಸರನ್ನೂ ಕೇಳಿರದಿದ್ದ ಅಕ್ಕಪಕ್ಕದ ಊರಿನವರೂ ಕೂಡ ಕಲಿಯುಗದ ಕಾರ್ಣಿಕದ ಕಥೆಯನ್ನು ಕೇಳಿ ವಿಧಿಯಿಲ್ಲದೆ ಕಾಸು ಬಿಚ್ಚಬೇಕಾಯಿತು. ಅಂದಹಾಗೆ ಗುಡಿಕಟ್ಟಲು ಎಷ್ಟು ಖರ್ಚಾಯಿತು, ಎಷ್ಟು ಉಳಿಯಿತು ಎಂದು ಲೆಕ್ಕವಿಟ್ಟವರ್ಯಾರೂ ಇಲ್ಲ. ಆದರೆ ಕಾಕತಾಳೀಯವೆಂಬಂತೆ ವರದ ತನ್ನ ಮಗಳನ್ನು ಸುಳ್ಯದ ಒಂದು ಮನೆತನಕ್ಕೆ ಕೊಟ್ಟು ಮದುವೆಯನ್ನು ಅದ್ದೂರಿಯಾಗಿ ಮಾಡಿಸಿದ. ಜೊತೆಗೇ ಕೇಶವ ಬಂಗೇರರೂ ಮಾಣಿಯಲ್ಲಿ ಒಂದು ಸೈಟು ಕೊಂಡರು ಅನ್ನೋ ಸುದ್ದಿ. ಸದ್ಯಕ್ಕೆ ಗಂಗಮ್ಮನ ಜೀವನಕ್ಕೊಂದು ಹದ ಬಂದಿದೆ. ವಿರೂಪಾಕ್ಷ ಇನ್ನೂ ತನ್ನ ಕಾರ್ಯಾಲಯದಲ್ಲೇ ನೊಣ ಹೊಡೆಯುತ್ತಿದ್ದಾನೆ.

ಇಂದು ನೀವು ಜನಕಾಪುರಕ್ಕೆ ಹೋದರೆ ಸುಬ್ಬರಾವ್ ವೃತ್ತದ ಜಂಕ್ಷನ್ ಪಕ್ಕದಲ್ಲೇ ಚಿಕ್ಕ ಜೀವಕಳೆಯಿಲ್ಲದ ಗುಡಿಯೊಂದು ಎದ್ದು ನಿಂತಿರುವುದನ್ನು ಕಾಣಬಹುದು. ಗರ್ಭಗುಡಿಯೊಳಗೆ ಹುಲಿಯ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದೆ. ಅದು ಹುಲ್ಯಾದೈವದ್ದು. ಗಂಧದ ಮಾಲೆ ಹಾಕಿ ನೇತಾಡಿಸಿರುವ ನಾರಣಪ್ಪನ ಒಂದು ಚಿತ್ರವೂ ಕೂಡ ಅಲ್ಲಿದೆ. ವರ್ಷಕ್ಕೊಮ್ಮೆ ಜಾತ್ರೆ, ಸಮಾರಾಧನೆ ಇತ್ಯಾದಿಗಳೂ ನಡೆಯುತ್ತಿವೆ. ನೀವು ಆ ಕಡೆ ಹೋಗಿದ್ದಾದರೆ ಎರಡಕ್ಕೂ ಕೈ ಮುಗಿದು, ಸೀಯಾಳ ಕೊಟ್ಟು ಬನ್ನಿ. ಹುಲ್ಯಾದೈವಕ್ಕೆ ಕೋಳಿ, ಕುರಿಗಳನ್ನು ಬಲಿಕೊಟ್ಟರೆ ಇನ್ನೂ ಒಳ್ಳೆಯದಂತೆ. ನೀವೇನೇ ಹೇಳಿ, ಭಲೇ ಕಾರ್ಣಿಕದ ದೈವವದು.

 

12 Responses

 1. vihi.wadawadagi says:

  ಸರ್ ತುಂಬ ನಗು ಬಂತು ಅದರ ಜೊತೆ ಅಷ್ಟೇ ಗಂಭೀರ ಕೂಡ ಇವತ್ತಿಗೂ ಸಮಾಜದಲ್ಲಿ ಈ ಥರದ ಆಚರಣೆಗಳಿವೆ ಆದ್ಯಾವಾಗ ಬದಲಾಗ್ತವೋ ನಾ ಕಾಣೆ ಬದಲಾಗದೆ ಇರೋದು ಒಳ್ಳೆದೆನೊ ಅನಸತ್ತೆ ಕಾರಣ ಹಳ್ಳಿಗರ ಮುಗ್ಧತೆ ಹೊರಟಹೋಗದಿರಲಿ ಅಂತಾ

 2. Anonymous says:

  Nice story..

 3. ತುOಬಾ ಚೆನ್ನಾಗಿದೆ ಕಥೆ..

 4. Suguresh Hiremath says:

  ಪ್ರಸಾದ್ ಸರ್ ಕತೆ ತುಂಬಾ ಚನ್ನಾಗಿದೆ… ಸರಳವಾಗಿ ಓದಿಸಿಕೊಂಡು ಹೋಗುತ್ತದೆ.. ಸರಳ ಭಾಷೆಯ ಬಳಕೆ ಮತ್ತು ಕಥಾ ನಿರೂಪಣೆ ಸರಾಗವಾಗಿ ಸಾಗಿದೆ…ಪ್ರತಿ ಹಳ್ಳಿಯಲ್ಲಿ ಇಂತಹ ಕತೆಗಳಿವೆ ಎನ್ನುವಷ್ಟು ಆಪ್ತವಾಗಿದೆ…

  ಹೊಸ ಕತೆಗಾರರಿಗೆ ಮಾರ್ಗದರ್ಶನದಂತಿದೆ…

 5. Sachinkumar Hiremath says:

  ಕುಂ ವೀ ಕತೆ ಓದಿದ ಅನುಭವವಾಯಿತು… ಅದ್ಭುತ. ನಿರೂಪಣಾ ಶೈಲಿ, ಮನಸಿಗೆ ನಾಟುವಂಥ ನಾರಣಪ್ಪ ಮನಸಲ್ಲೂ ಹುಲ್ಯಾ ದೈವವಾಗೇ ಕಾಡುತ್ತಾನೆ

 6. arudoganesh says:

  ಪ್ರಸಾದ್ ಅವರ ’ಹುಲ್ಯಾ ದೈವ’ ಕಥೆ ಇಷ್ಟವಾಯಿತು. ಜನಕಾಪುರದ ನಾರಣಪ್ಪನಂತಹ ವ್ಯಕ್ತಿತ್ವಗಳು ನಮ್ಮೆಲ್ಲರ ಊರಿನಲ್ಲಿಯೂ ಇರುತ್ತವೆ. ಆದರೆ ಅದನ್ನು ಹೀಗೆ ಒಂದು ಕಥೆಯಾಗಿ ಕಟ್ಟುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಕಥೆಗಾರರು ಈ ವಿಷಯದಲ್ಲಿ ದೊಡ್ಡ ಗೆಲುವು ಸಾಧಿಸಿದ್ದಾರೆ. ನಾರಣಪ್ಪನಂತಹ ವ್ಯಕ್ತಿತ್ವವೊಂದನ್ನು ಇಟ್ಟುಕೊಂಡು, ಅದರೊಂದಿಗೆ ಒಂದು ಪುಟ್ಟ ಹಳ್ಳಿಯಲ್ಲಿರಬಹುದಾದ ರಾಜಕೀಯ, ಮೂಢನಂಬಿಕೆ, ಸ್ವಾರ್ಥ, ಹುಚ್ಚಾಟಗಳನ್ನು ಪ್ರಸಾದ್ ಅವರು ಈ ಕಥೆಯಲ್ಲಿ ಚೆಂದ ಮಾಡಿ ಕಟ್ಟಿಕೊಟ್ಟಿದ್ದಾರೆ. ಕುಡಿತದ ಕೆಟ್ಟ ಪರಿಣಾಮಗಳೂ ಮತ್ತೆ ಮತ್ತೆ ಹಳ್ಳಿಗಳ ಕುಡುಕರ ಕುಟುಂಬಗಳನ್ನು ನೆನಪಿಸುತ್ತವೆ. ಸ್ವಯಂಸೇವಾ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆಯೂ ಈ ಕಥೆ ಬೆಳಕು ಚೆಲ್ಲುತ್ತದೆ. ಒಟ್ಟಿನಲ್ಲಿ ಒಂದು ಚೆಂದದ ಕಥೆ. ಸರಾಗವಾಗಿ ಓದಿಸಿಕೊಂಡು ಹೋಗುವ ಹುಲ್ಯಾ ದೈವ ನನ್ನನ್ನು ಕಾಡಿದ ಕಥೆಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಕಥೆಯ ವಸ್ತುವೇನೋ ಇದೆ, ಆದರೆ ಅದನ್ನು ಆರಂಭಿಸುವುದು ಹೇಗೆ ಎಂದು ಪ್ರಶ್ನಿಸುವವರಿಗೆ ಹುಲ್ಯಾ ದೈವ ಒಂದು ಮಾದರಿಯಾಗಿ ಕಾಣಿಸುತ್ತದೆ.

Leave a Reply

%d bloggers like this: