ಮಹಾನ್ ಬಾಡುಭಕ್ತ..

ವಿ ಆರ್ ಕಾರ್ಪೆಂಟರ್ 

ನಮ್ಮ ಮನೆಯ ಪಕ್ಕ ಪೀಟರ್ ಎಂಬ ಹೆಸರಿನ ಬ್ಯಾಟರಿ ಮೆಕ್ಯಾನಿಕ್ ಇದ್ದ.

ಮಹಾನ್ ಬಾಡುಭಕ್ತ.

ಎಂತೆಂಥದೋ ಮಾಂಸ ತರುತ್ತಿದ್ದ. ಅವನು ತರುತ್ತಿದ್ದ ಮಾಂಸ ಬಹಳ ವಿಚಿತ್ರವಾಗಿರುತ್ತಿದ್ದವು. ನಾನೂ ಬಾಡಿನಲ್ಲಿ ಮಹಾ ಸೆಕ್ಯುಲರ್! ತಿನ್ನುವುದಕ್ಕೆ ಮನಸ್ಸು ಹಿಂಜರಿಯಬಹುದೆಂಬ ಕಾರಣ ಕೆಲವೊಮ್ಮೆ ಆತ ತರುತ್ತಿದ್ದ ಮಾಂಸವನ್ನು ಯಾವ ಪ್ರಾಣಿಯದ್ದು ಎಂದು ಕೇಳುತ್ತಿರಲಿಲ್ಲ! 🙂 ಆದ ಕಾರಣ ಸುಮಾರು ಹದಿನೈದಕ್ಕೂ ಹೆಚ್ಚಿನ ಪ್ರಾಣಿಗಳ ಮಾಂಸವನ್ನು ನಾನು ತಿಂದಿರಬಹುದೆಂದು ಅಂದಾಜಿಸಿದ್ದೇನೆ.

ಆತನ ಹೆಂಡತಿ ಕೆಲವು ಮಾಂಸಗಳನ್ನು ಮನೆಯ ಒಳಗೆ ತರಲು ಬಿಡುತ್ತಿರಲಿಲ್ಲ. ಆಗ ಪಕ್ಕದ ಹೊಲದ ಮಧ್ಯೆ ಹೋಗಿ ಸುಟ್ಟು ತಿನ್ನುತ್ತಿದ್ದೆವು. ಆತ ಕನ್ನಡದ ಅನೇಕ ಜನಪ್ರಿಯ ಹಾಡುಗಳಿಗೆ ಅಶ್ಲೀಲ ಪದಗಳನ್ನು ಸೇರಿಸಿ ಹಾಡುತ್ತಿದ್ದ. ಇವೆರಡೂ ವಿಷಯಕ್ಕೆ ನಮಗವನು ಫೇವರಿಟ್! ಊರಿನ ಮೇಲ್ಜಾತಿಯ ಮನೆಗಳಿಗೆ (ಆತ್ಮೀಯ ಗೆಳೆಯರೆನ್ನಿಸಿಕೊಂಡವರನ್ನೂ ಸೇರಿಸಿ) ಇಂದಿಗೂ ಪ್ರವೇಶವಿಲ್ಲ.

ಆದರೆ, ಪೀಟರ್ ಮಹಾ ಮನುಷ್ಯ. ಟಿವಿಯಲ್ಲಿ ಕ್ರಿಕೆಟ್ ಪಂದ್ಯಗಳಿದ್ದರೆ ಅವನ ಜತೆಗೇ ನೋಡಬೇಕಿತ್ತು. ನನ್ನಂತೆ ಆತನೂ ದ್ರಾವಿಡ್ ಫ್ಯಾನ್! ಭಾರತ ಗೆದ್ದುಬಿಟ್ಟರೆ ಜೇಬಲ್ಲಿರುವ ಹಣವನ್ನೆಲ್ಲಾ ಖರ್ಚು ಮಾಡಿಬಿಡುತ್ತಿದ್ದ.

ಇಂತಹ ಪೀಟರ್ ಕಾಜಲ್ ಪ್ರೇಮಿ.

ಕಾಜಲ್ ನಟಿಸಿದ ಸಿನಿಮಾಗಳ ಅಷ್ಟೂ ಡೈಲಾಗ್ಸ್ ಆತನಿಗೆ ನೆನಪಿದ್ದವು. ನಾನು ಮಾಧುರಿ ಫ್ಯಾನ್. ‘‌ಮಾಧುರಿ ಥರ ಕಾಜಲ್‌ಗೆ ಡ್ಯಾನ್ಸ್ ಮಾಡೋಕೆ ಬರೊಲ್ಲ’ ಎಂದು ರೇಗಿಸುತ್ತಿದ್ದೆ. ‘‌ಅಯ್ಯೋ ಬಿಡಲೋ ಡ್ಯಾನ್ಸ್ ಒಂದೇ ಆ್ಯಕ್ಟಿಂಗ್ ಅಲ್ಲ’ ಎಂದು ಮಾಧುರಿಯನ್ನು ರೇಗಿಸುತ್ತಿದ್ದನೋ ಅಥವಾ ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತಿದ್ದನೋ ತಿಳಿಯದು. ಕೆ.ಎಫ್. ಬಿಯರ್ ಹೀರಿ ಯಾವುದೋ ಬಾಡು ತಿನ್ನುತ್ತಾ ಇಡೀ ವಾತಾವರಣನ್ನು ಕಾಜಲ್‌ಮಯ ಮಾಡಿಬಿಡುತ್ತಿದ್ದ.

‘‌ಅಣ್ಣಾ ನಿಮ್ಮ ಕಾಜಲ್ ಬ್ರಾಂಬ್ರಂತೆ, ಬಾಡ್ ತಿಂತರಾ?’ ಅಂದ್ರೆ, ‘‌ಆಕೆ ಕಲಾವಿದೆ ಕಣೋ, ತಿಂದ್ರು ತಿನ್ನಬಹುದು’ ಎನ್ನುತ್ತಿದ್ದ.

ನಾವ್ಯಾರೂ ಅವನ ಮುಂದೆ ಕಾಜಲ್ ಎಂಬ ಹೆಸರನ್ನು ಬಳಸಿ ಕರೆಯುವಂತೆ ಇರಲಿಲ್ಲ! ಆಂಟಿ ಅಥವಾ ಅತ್ತಿಗೆ ಎಂದರೆ ಉಬ್ಬಿಹೋಗುತ್ತಿದ್ದ.

ಶಿವಮೊಗ್ಗದಲ್ಲಿ ನಡೆದ ಭೀಕರ ಅಪಘಾತದಲ್ಲಿ ಆತ ತೀರಿಹೋಗಿ ಸರಿಸುಮಾರು ಹದಿನೈದು ವರ್ಷಗಳು ಕಳೆದವು.

ಎಮ್ಮೆ ತಿಂದದ್ದನ್ನು ಕಾಜಲ್ ಹೆಮ್ಮೆಯಿಂದ ಹೇಳಿಕೊಂಡ ಈ ಘಳಿಗೆಯಲ್ಲಿ ಆತ ಇದ್ದಿದ್ದರೆ ಅದೆಷ್ಟು ಖುಷಿಪಡುತ್ತಿದ್ದನೋ? ಯಾವ ಥರದ ಪಾರ್ಟಿ ಮಾಡುತ್ತಿದ್ದನೋ…

ಪೀಟರ್ ನೆನಪಿಸಿದ ಕಾಜಲ್‌ಗೆ ಧನ್ಯವಾದಗಳು.

1 Response

  1. Manjunath Naik says:

    Bareyuvadanna chendavagi mana muttuvante baredare badoo kooda chennagirutte annodakke edu sakshi

Leave a Reply

%d bloggers like this: