ಆಕ್ರಂದನ

ಕತೆ- 

ಆಕ್ರಂದನ

ಡಾ.ಎಸ್.ಬಿ.ಜೋಗುರ

 

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತುತ್ತ ತುದಿಯಂಚಿನ ಹಳ್ಳಿ ವೀರಾಪುರ.

ಇಪ್ಪತ್ತು ವರ್ಷದ ಹಿಂದೆ ಮಾತ್ರ ಅದು ಹಳ್ಳಿ, ಈಗಲ್ಲ. ಅಲ್ಲಿ ಯಾವಾಗ ನದಿ ದಂಡಿ ಮ್ಯಾಲ ರೈಲು ಮಾರ್ಗ ಹಾದು ಹೋಯಿತೋ ಆವಾಗಿನಿಂದ ಅದು ವರ್ಷದಿಂದ ವರ್ಷಕ್ಕ ಬದಲಾಗತಾ ಬಂತು.

ವೀರಾಪುರದ ಪ್ರವೇಶ ದ್ವಾರವೇ ದೊಡ್ಡದಾದ ಕರೀ ಕಲ್ಲಿನ ಅಗಸೀ ಬಾಗಿಲು. ಅದರ ಮ್ಯಾಲಿನ ಕಮಾನು ಅದ್ಯಾವಾಗಲೋ ಮುರಿದು ಬಿದ್ದಿದೆ. ಈಗ ಎರಡೂ ಕಡೆ ಬರೀ ದೊಡ್ಡದಾದ ಕರಿ ಕಲ್ಲಿನ ಕಂಬಗಳು ಮಾತ್ರ ಉಳಿದಿವೆ. ಆ ಕಂಬಗಳ ಮ್ಯಾಲ ಕಲ್ಯಾಣದ ಅರಸರ ಆಳ್ವಿಕೆಯ ಚಿತ್ರಗಳಿವೆ. ಕೆಳಬದಿ ನಂದಿಯ ವಿಗ್ರಹವಿದೆ. ಅದರ ಹೊಸ್ತಿಲು ಹೂತು ಹೋಗಿದೆ ಅದರ ನೆತ್ತಿ ಮ್ಯಾಲಿಂದಲೇ ವೀರಾಪುರದ ಪ್ರವೇಶ. ಊರ ಒಳಗಡೆ ಬರುತ್ತಿರುವಂತೆ ಸಣ್ಣ ಸಣ್ಣ ಮಣ್ಣಿನ ಮನೆಗಳು, ಗುಡಿಸಲುಗಳು. ಅವುಗಳ ನಡುವೆ ಒಂದು ಬೇವಿನ ಮರ. ಅದರ ನೆರಳಲ್ಲಿಯೇ ಆ ಕೇರಿಯ ಮರಗಮ್ಮನ ಸಣ್ಣ ದೇವಸ್ಥಾನ. ಅದನ್ನು ದಾಟಿ ಮುಂದೆ ಬಂದರೆ ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳ ರಸ್ತೆ. ಎದುರು ಬದುರು ಕಲ್ಲಿನ ಮನೆಗಳು. ದೊಡ್ಡ ದೊಡ್ಡ ತೊಲೆ ಬಾಗಿಲು. ಹಾಗೆಯೇ ತುಸು ಮುಂದೆ ಹೋದರೆ ಅಲ್ಲೊಂದು ದೊಡ್ಡ ಆಲದ ಮರ, ಅದರ ಸುತ್ತಲೂ ಎರಡಾಳು ಎತ್ತರದ ಗೋಡೆ. ನಡುವೆ ಮಲ್ಲಿಕಾರ್ಜುನನ ದೇಗುಲ. ಗೋಡೆಗಳ ಒಳಬದಿ ಅಲ್ಲಲ್ಲಿ ತೂಗುಬಿಟ್ಟ ದೊಡ್ಡ ದೊಡ್ಡ ನಗಾರಿಗಳು. ದೇಗುಲದ ಹೊರ ಬದಿ ಎರಡು ದೊಡ್ಡ ಗಾತ್ರದ ಕಲ್ಲಿನ ಆನೆಗಳು. ಊರಿನ ಪ್ರಮುಖ ಜಾಗಗಳಲ್ಲಿ ಕಲ್ಲಿನ ದೀಪ ಸ್ಥಂಭಗಳು. ಕೆಲವು ಮುರಿದು ಬಿದ್ದರೆ ಮತ್ತೆ ಕೆಲವು ಅಲ್ಪ ಸ್ವಲ್ಪ ಮುಕ್ಕಾಗಿ ಮುಖ ಕೆಡಿಸಿಕೊಂಡಿವೆ.

ಹೀಗೆ ಒಂದು ಚರಿತ್ರೆಯ ಚಹರೆಯಂತಿದ್ದ ಹಳ್ಳಿ ಬದಲಾಗುತ್ತಾ ಬಂದು ಹೋಬಳಿ ಎಂದು ಕರೆಯಿಸಿಕೊಳ್ಳುವ ಮಟ್ಟಕ್ಕೆ ಮುಟ್ಟಿತ್ತು. ಒಂದು ಜಮಾನಾದಲ್ಲಿ ವೀರಾಪುರ ಎನ್ನುವ ಊರಲ್ಲಿ ಶೂರರು, ಪರಾಕ್ರಮಿಗಳು ಇದ್ದ ಕಥೆಯನ್ನು ಆ ಊರಿನ ಮೂರ್ನಾಲ್ಕು ಕಡೆ ಇರುವ ವೀರಗಲ್ಲುಗಳೇ ಹೇಳುತ್ತವೆ. ವೀರಾಪುರದಲ್ಲಿ ಇದ್ದದ್ದು ಬರೀ ಕಲ್ಲಿನ ಮನೆಗಳೇ.. ಆರ್.ಸಿ.ಸಿ ಮನೆ ಕಂಡದ್ದೇ ತೀರ ಇತ್ತೀಚೆಗೆ. ಅದೂ ಒಂದೇ ಒಂದು. ನಂತರ ಎರಡು.. ಮೂರು ಹೀಗೆ ವೀರಾಪುರ ಈಗ ಅಗಾಧವಾಗಿ ಬೆಳೆಯುತ್ತಿದೆ. ಸುತ್ತಲ್ಲಿನ ಹತ್ತಾರು ಹಳ್ಳಿಯ ಮಂದಿ ಸಂತೆಗೆಂದು, ಸಿನೇಮಾಗೆಂದು, ಆಸ್ಪತ್ರೆಗೆಂದು ವೀರಾಪುರಕ್ಕೆ ಬರುವದಿತ್ತು. ಈ ಊರಿನಿಂದ ಪೂರ್ವಕ್ಕೆ ಅರ್ಧ ಮೈಲು ನಡೆದರೆ ಸಾಕು, ಕಲಬುರ್ಗಿಯ ಗಡಿ ಆರಂಭ.

ವೀರಾಪುರದ ಜನ ಈಗೀಗ ಕಾಲೇಜು, ವಿಶ್ವವಿದ್ಯಾಲಯದ ಕಟ್ಟೆ ಹತ್ತುತ್ತಿದ್ದಾರೆ. ಮೊದಲು ಇಡೀ ಊರಲ್ಲಿ ಓದಿದವರು ಒಬ್ಬರೋ ಇಬ್ಬರೋ.. ಅಷ್ಟೇ. ಮಿಕ್ಕವರು ಬರೀ ಒಕ್ಕಲುತನ. ಕಮ್ಮೀತಕಮ್ಮಿಯಂದ್ರೂ ಒಂದೊಂದು ಮನೆತನಕ್ಕೆ ಕೂರಗಿ, ಎರಡು ಕೂರಗಿ ಜಮೀನು. ಚಲೊ ಮಳೆಯಾದರೆ ಕರೀ ಮಸಾರಿ ಭೂಮಿಯೊಳಗ ಶೇಂಗಾ, ಸೂರ್ಯಂಕಾಂತಿ, ಗೋದಿ, ಹತ್ತಿಯಂಥಾ ಬೆಳಿ ವತಗೊಂಡು ಬರತಿತ್ತು. ಹಿಂಗಾಗಿ ಊರು ಆರ್ಥಿಕವಾಗಿ ಬಾಳ ವೈನಿತ್ತು. ಬರ್ತಾ ಬರ್ತಾ ಆ ಹಳ್ಳಿ ಮ್ಯಾಲ ಅದ್ಯಾರ ನಜರು ಬಿತ್ತೋ ಗೊತ್ತಿಲ್ಲ. ಎರಡು ವಷಕ್ಕೊಮ್ಮ ಬರಗಾಲ ಬೀಳಾಕ ಸುರು ಆಗಿ, ಚಲೊ ಚಲೊ ಮನೆತನಗಳೂ ಸೈತಾ ಮುಗ್ಗರಿಸಿ ಹೋದ್ವು.

ಊರ ಹೊರಗ, ನದಿ ದಂಡಿ ಮ್ಯಾಲ ಹನುಮಂತ ದೇವರ ಗುಡಿ ಹಿಂದ ಒಂದು ಗರಡಿ ಮನಿ ಇತ್ತು. ಈ ಗರಡೀಮನಿ ಗೂ ಒಂದು ಚರಿತ್ರೆ. ಒಂದು ಕಾಲದಲ್ಲಿ ಈ ಉರಲ್ಲಿ ಈರಪ್ಪ ಅನ್ನೋ ಬಾಳ ಒಬ್ಬ ದೊಡ್ದ ಪೈಲ್ವಾನ್ ಇದ್ದನಂತ. ಅವನು ಕುಸ್ತಿಯಲ್ಲಿ ಗೆದ್ದ ಕಾಣಿಕೆಯನ್ನೆಲ್ಲಾ ಕೂಡಿಸಿ ಈ ಗರಡೀ ಮನಿ ಕಟ್ಟಿಸಿದನಂತ ಹೀಗಾಗಿ ಅದಕ್ಕೆ ‘ಈರಪ್ಪನ ಗರಡೀ ಮನೆ’ ಅಂತೇ ಹೆಸರು ಬಿತ್ತು ಅಂತ ಈಗಿರೋ ಪೈಲ್ವಾನ್ ಭೀಮರಾಯ ಹೇಳೊದಿದೆ. ವೀರಾಪುರದ ಭೀಮರಾಯ ಪೈಲ್ವಾನ್ ಅಂದರ ಈಗಲೂ ಇಡೀ ವಿಜಯಪುರ ಜಿಲ್ಲೆಗೇ ಫೇಮಸ್ಸು. ಅಷ್ಟೇ ಯಾಕ ಸೋಲಾಪುರದ ಸಂಕ್ರಮಣ ಜಾತ್ರೆಯೊಳಗೂ ಅಂವಾ ಬಾಳ ಸಾರಿ ಕಡೆ ಕುಸ್ತಿ ಆಡಿ ಗೆದ್ದು ಬಂದಿದ್ದಿತ್ತು.

ವೀರಾಪುರ ಅಂದರ ಈರಪ್ಪನ ಗರಡೀಮನಿ ಮತ್ತು ಆ ಊರಿನ ಪೈಲ್ವಾನರು ಈಗಲೂ ನೆನಪಾಗತಾರ. ಒಂದು ಕಾಲಕ್ಕ ಪೈಲ್ವಾನ್ ಭೀಮರಾಯ ಮತ್ತು ಆಲಮೇಲ ಹುಸೇನಿ ಕುಸ್ತಿ ನೋಡಾಕೇ ಜನಾ ದೂರದೂರಿಂದ ಗಾಡಿ ಕಟಗೊಂಡು ಹೋಗತಿದ್ದರು. ಎರಡು ವರ್ಷದ ಹಿಂದ ಪೈಲ್ವಾನ್ ಹುಸೇನಿ ಅಣ್ಣ ತಮ್ಮದೇರ ಆಸ್ತಿ ಜಗಳದಾಗ ಮರ್ಡರ್ ಆದಿಂದ ಮತ್ತ ಬ್ಯಾರೆಯವರ ಜೋಡಿ ಭೀಮರಾಯ ಕುಸ್ತಿ ಹಿಡಿದದ್ದೇ ಇರಲಿಲ್ಲ. ಆವಾಗಿನಿಂದ ಅಂವಾ ಒಂದಷ್ಟು ಊರ ಹುಡಗರನ್ನ ತಾಲೀಮ ಮಾಡಸ್ತಾ, ಗರಡಿ ಮನಿ ದೇಕರೇಕಿ ಮಾಡಕೊಂಡು ನಡದಿದ್ದ. ವೀರಾಪುರದ ಭೀಮರಾಯ ಪೈಲ್ವಾನ್ ಮಾತಂದ್ರ ಮಾತು. ಎಂದೂ ಎರಡು ನಡಕೊಂಡಂವಲ್ಲ. ಅವನಿಗೀಗ ಹೆಚ್ಚೂ ಕಮ್ಮಿ ಎಂಬತ್ತು ವರ್ಷ.

ಊರೊಳಗ ಏನರೇ ಜಗಳ ಜುಬಟಿ, ಒಣಾ ಕಿಲಾಫ್ ಇದ್ದೂ ಅಂದ್ರ ಅಲ್ಲಿ ಈ ಪೈಲ್ವಾನ್ ಭೀಮರಾಯ ಇರಲಿಕ್ಕೇ ಬೇಕು. ಯಾಂವರೇ ಒಬ್ಬ ಮರಿ ಪೈಲ್ವಾನ್ ಭೀಮರಾಯನ ಕೈಯಾಗ ತಯಾರಾಗ್ಯಾನ ಅಂದ್ರ ಅದಕ್ಕೊಂದು ಬ್ಯಾರೇ ವಜನೇ ಇರತಿತ್ತು. ಹಂಗಿತ್ತು ಭೀಮರಾಯನ ಹವಾ.. ವೀರಾಪೂರದೊಳಗ ಈಗಲೂ ಗರಡಿ ಮನಿಯೊಳಗ ಮೊದಲಿನಂಗ ಅಲ್ಲದಿದ್ದರೂ ತಾಲೀಮು ನಡಿಯೂದಂತೂ ಇತ್ತು. ಹತ್ತಿಪ್ಪತ್ತು ಹುಡುಗರು ದಿನ್ನಾ ಸಂಜೀ ಮುಂದ ಈರಪ್ಪನ ಗರಡೀಯೊಳಗ ಕಸರತ್ ಮಾಡತಿದ್ದರು. ಊರೊಳಗ ಒಂದೇ ಒಂದು ದಾರೂ ಅಂಗಡಿ ಇರಲಿಲ್ಲ. ಹಿಂದೊಮ್ಮ ಇಲ್ಲಿ ದಾರೂ ಅಂಗಡಿ ಸುರು ಮಾಡಾಕ ಬಂದಿರೋ ಕಲಾಲರ ತುಕ್ಕೋಜಿಯನ್ನ ಊರಾನ ಮಂದಿ ಗೇರಾವ್ ಹಾಕಿ ಬೈದು ತಿರುಗಿ ಕಳಿಸಿದ್ದರು. ಆವತ್ತಿನಿಂದ ಯಾರೂ ಇಲ್ಲಿ ಅಂಗಡಿ ತಗಿಯಾಕ ಧೈರ್ಯ ಮಾಡಿರಲಿಲ್ಲ. ಇದ್ದ ಒಂದೇ ಒಂದು ಸಿನೇಮಾ ಟಾಕೀಜದೊಳಗ ಬರೀ ಕನ್ನಡ ಸಿನೇಮಾನೇ ಹಾಕಬೇಕು, ಅದೂ ಚಲೊ ಸಿನೇಮಾ ಇರಬೇಕು, ಹಾಳಾಮೂಳ ಅಲ್ಲ ಅನ್ನೋ ಕರಾರಿನ ಮ್ಯಾಲ ಟಾಕೀಜ್ ಕಟ್ಟಾಕ ಊರವರು ಅನುಮತಿ ಕೊಟ್ಟಿದ್ದರು. ಭೀಮರಾಯ ಮಾತಿಗೊಮ್ಮ ಪೈಲ್ವಾನ್‍ರನ್ನ ತಯಾರು ಮಾಡೂದಂದ್ರ ಅಟ್ಟು ಹಗರಲ್ಲ, ಅದಕ್ಕ ಬಾಳ ವರ್ಷದ ಕಸರತ್ ಬೇಕು. ಹಂಗೇ ತಾಲೀಮೂ ಬೇಕು. ಬೀಡಿ ಸೇದಿ, ದಾರೂ ಕುಡದು ಕೆಟ್ಟ ಕೆಟ್ಟ ಚಟಾ ಮಾಡಿ ಗರಡಿ ಮನಿಗಿ ಬರಾಕ ನಾ ಬಿಡೂದಿಲ್ಲ ಅಂತ ಗೆರೆಕೊರದು ಹೇಳತಿದ್ದ. ಯಾರರೇ ಕದ್ದಲೆ ಬೀಡಿ ಸೇದಿದ್ದು ಗೊತ್ತಾದರೂ ಅಂವಾ ಅವರನ್ನ ತರಗಾ ಬುರಗಾ ಮಾಡತಿದ್ದ.

ಅಂಥಾ ಭೀಮರಾಯಗ ಇನ್ನೊಂದು ವಿದ್ಯಾನೂ ಗೊತ್ತಿತ್ತು. ಕೈ ಕಾಲು ಮುರದರ ಸಾಕು ಅದ್ಯಾವದೋ ಗಿಡದ ತಪ್ಪಲ ತಂದು ತಾಸಗಟ್ಟಲೆ ಅದನ್ನ ಅರದು, ಹಚ್ಚಿ ಅದರ ಮ್ಯಾಲ ಸುತ್ತಾಲಕೂ ಬಿದಿರಿನ ಚಕ್ಕಿ ಇಟ್ಟು ಮಲಮಲ ಬಟ್ಟೆ ಸುತ್ತಿ ಜೋಡಸತಿದ್ದ. ಬಾಳ ವಯಸ್ಸಾದವರಿದ್ರ ತನ್ನ ಕಡಿಂದ ನೀಗೂವಷ್ಟು ಕಟಿಬಿಟಿ ಮಾಡಿ, ತನಗ ಅಟಾಪಿಲ್ಲ ಅಂತ ಗೊತ್ತಾದ ಮ್ಯಾಲ ದೊಡ್ಡ ದವಾಖಾನಿಗಿ ತಗೊಂಡು ಹೋಗ್ರಿ ಅಂತಿದ್ದ. ಇಂಥಾ ಭೀಮರಾಯ ಪೈಲ್ವಾನಕಿ ಭರಾಟೆಯೊಳಗ ಲಗ್ನೇ ಆಗಿರಲಿಲ್ಲ. ಅಂವಾ ಲಗ್ನ ಆಗಿರಲಿಲ್ಲ ಅನ್ನೋ ಕಾರಣಕ್ಕೇ ಆಸ್ತಿ ಪಾಲೂ ಆಗಿರಲಿಲ್ಲ. ಅಣ್ಣ ಸಿದ್ದಪ್ಪ ಮತ್ತ ಭೀಮರಾಯ ಕೂಡೇ ಇದ್ದರು. ಸಿದ್ದಪ್ಪ ತೀರಿಕೊಂಡ ಮ್ಯಾಲ ಮನಿಗಿ ಹಿರಿಯಾ ಅಂದ್ರ ಈ ಭೀಮರಾಯನೇ.. ಭೀಮರಾಯ ಪೈಲ್ವಾನ್ ಬರೀ ಆ ಮನಿಗಲ್ಲ, ಆ ಊರಿಗೇ ಹಿರೀ ಮನಸ್ಯಾ ಅಗಿದ್ದ. ಹಿಂಗಾಗಿ ಊರಾಗಿನ ಯಾವದೇ ದೈವದ ಕೆಲಸ ನಡಿಯೂದಿದ್ದರ ಅಲ್ಲಿ ಭೀಮರಾಯ ಇರಲೇಬೇಕು. ನ್ಯಾಯ, ನೀತಿ ವಿಷಯದೊಳಗ ಭೀಮರಾಯ ಪೈಲ್ವಾನ್ ನ ಮಾತಂದ್ರ ಮಾತು. ಅದೇ ಫೈನಲ್ ಅನ್ನೊವಂಗ ಇರತಿತ್ತು.

ವೀರಾಪುರ ಬೆಳೀತಾ ಹೋದಂಗ ಊರೊಳಗ ಸಾಲಿ, ಕಾಲೇಜು, ಬ್ಯಾಂಕು, ಆಸ್ಪತ್ರೆ ಸುರು ಆದ್ವು. ಮೊದಲ ಏನರೇ ಜಡ್ಡು ಜಾಪತ್ರಿ ಅಂತ ಹೇಳಿ ಬಂದ್ರ ಈ ಕಡಿ ಕಲಬುರ್ಗಿಗಿ ಹೋಗಬೇಕು, ಇಲಾಂದ್ರ ಆ ಕಡೆ ಸೋಲಾಪುರಕ್ಕ ಹೋಗಬೇಕು. ಈಗ ಹಂಗಲ್ಲ. ಅದೇ ಊರಿನ ದೊಡ್ಡ ಗೌಡ ಬಿರಾದಾರ ರಾಚಪ್ಪನ ಮಗ ರವೀಂದ್ರ ಎಮ್.ಬಿ.ಬಿ.ಎಸ್. ಎಮ್.ಡಿ ಮುಗಸಿ ಈಗ ಅಲ್ಲೇ ಇದ್ದೂರೊಳಗೆ ದವಾಖಾನೆ ಸುರು ಮಾಡಿದ್ದ. ಅಂವಾ ಡಾಕ್ಟರ್ ಆಗಿ ಸುದ್ದಿ ಮಾಡಲಿಲ್ಲಂದರೂ ಬ್ಯಾರೆ ಜಾತಿ ಹುಡಗಿನ್ನ ಲಗ್ನ ಆಗಿ ಊರೊಳಗ ಸುದ್ಧಿ ಆಗಿದ್ದ. ಆಕಿನೂ ಡಾಕ್ಟರಕಿ ಮಾಡತಿದ್ದಳು. ಊರೊಳಗ ಚಾವಡಿ ಬಾಜೂ ಒಂದು ಶಾರದಾ ನರ್ಸಿಂಗ್ ಹೋಮ್ ಅಂತ ದೊಡ್ಡ ಆಸ್ಪತ್ರೆನೇ ಕಟ್ಟಸಿದ್ದರು. ರೊಕ್ಕದ ಹಪಾಪಿತನ ಇರಲಿಲ್ಲ ಹಂಗಾಗಿ ರವೀಂದ್ರ ಮತ್ತವನ ಹೆಂಡತಿ ಶಾರದಾ ಸುತ್ತ ಹತ್ತು ಹಳ್ಳಿಯೊಳಗ ಚಲೊ ಹೆಸರ ಗಳಿಸಿದ್ದರು. ಪೈಲ್ವಾನ್ ಭೀಮರಾಯ ರಾಚಪ್ಪಗ ಬಾಳ ಬೇಕಾದ ಮನಸ್ಯಾ ಹಿಂಗಾಗಿ ಭೀಮರಾಯನೇ ಮುಂದಾಗಿ ನರ್ಸಿಂಗ್ ಹೋಮ್ ಉದ್ಘಾಟನೆ ಮಾಡಿಸಿದ್ದ.

ಊರಿಗಿ ಕೇಡು ಆಗತೈತಿ ಅಂದ್ರ ಭೀಮರಾಯ ಎಂದೂ ಸಹಿಸತಿರಲಿಲ್ಲ. ಒಂದು ಸಾರಿ ಎಂಥದೋ ಒಂದು ಅಸಹ್ಯ ಸಿನೇಮಾ ಊರಿನ ಥೇಟರಿಗಿ ಬಂದೈತಿ ಅಂತ ಭೀಮರಾಯಗ ಸುದ್ದಿ ಮುಟ್ಟಿದ್ದೇ ಥೇಟರಮಟ ಹೋಗಿ ಅದನ್ನ ತೋರಸಬಾರದು ತೋರಸದರ ಪರಿಸ್ಥಿತಿ ನೆಟ್ಟಗ ಆಗೂವಂಗಿಲ್ಲ ಅಂತ ಬೆರಳ ತೋರಿಸಿ ತಾಕೀತ್ ಮಾಡಿ, ಒಂದು ದಿನ ಥೇಟರೇ ಬಂದ್ ಇಡಿಸಿದ್ದ. ಬೀಡಿ ಸೇದೂ ಹುಡುಗರು ಕಣ್ಣಿಗಿ ಬಿದ್ದರ ಸಾಕು ಬೈಯಾಕ ಸುರು ಮಾಡತಿದ್ದ. ದಿನದ ಮುಕ್ಕಾಲು ಬಾಗ ಗರಡಿ ಮನಿಯೊಳಗೇ ಇರೋ ಭೀಮರಾಯ ಈಗೀಗ ವಯಸ್ಸು ಆಗಿಂದ ಕುಸ್ತಿ ಆಡೂದು ಬಿಟ್ಟಿದ್ದ. ಭೀಮರಾಯನ ಕಿವಿ ಗಂಟ ಗಂಟ ಆಗಿದ್ವು. ಆಲಮೇಲ ಹುಸೇನಿ ಮತ್ತ ಭೀಮರಾಯನ ಕುಸ್ತಿ ನೋಡುವಂಗ ಇರತಿತ್ತು. ಅಂಥಾ ಕುಸ್ತಿನೇ ಮತ್ತ ನೋಡಿಲ್ಲಂತ ಊರಿನ ಹಿರೇರು ಆಡಕೋತಿದ್ದರು. ಒಂದು ಸಾರಿ ಅಂವಾ ಗೆದ್ದರ ಇನ್ನೊಂದು ಸಾರಿ ಇಂವಾ ಗೆಲ್ಲತಿದ್ದ. ಅವರು ಕಸರತ್ ಮಾಡೂದೂ ಹಂಗೇ ಇತ್ತು ತಿನ್ನೂದೂ ಹಂಗೇ ಇತ್ತು. ಕುಂತರ ಒಂದು ಬಗೊಣಿ ಸಜ್ಜಕ ಒಬ್ಬನೇ ಮುಗಸತಿದ್ದ. ದೊಡ್ಡ ಹಂಡೆ ಮ್ಯಾಲ ಮುಚ್ಚೋ ಹಿತ್ತಾಳೆ ತಾಟಿನೊಳಗ ದಭಾಸಿ ಎರಡು ತಾಟು ಹುಗ್ಗಿ ಉಂತಿದ್ದರು.

ಬರೀ ತಿನ್ನೂದಷ್ಟೇ ಅಲ್ಲ, ದಕ್ಕಿಸಿಕೊಳ್ಳೂದೂ ಹಂಗೇ ಇತ್ತು. ಕುಸ್ತಿ ಕಣದೊಳಗ ಇಳದರ ಇಬ್ಬರೂ ಬೀಜ ಬಡಿಲಾರದ ವಯಸಿನ ಹೋರಿಗಳು ಮುಸ್..ಮುಸ್.. ಅನ್ಕೊಂತ ಗುದಮುರಗಿ ಹಾಕದಂಗ ಇರತಿತ್ತು. ವರ್ಷಕ್ಕೊಮ್ಮ ನಡಿಯೋ ಊರ ಜಾತ್ರಿ ಕುಸ್ತಿಯೊಳಗಂತೂ ಏಳು ವರ್ಷ ಬಿಟ್ಟೂ ಬಿಡದೇ ಭೀಮರಾಯನೇ ಗೆದ್ದಿದ್ದ. ಈ ಹುಸೇನಿ ಆಗಲಿ. ಭೀಮರಾಯ ಆಗಲೀ ತುಂಬಿದ ಜೋಳದ ಚೀಲಾನ್ನ ಕೈಯಿಂದ ಎಳಕೋಂಡು ಅನಾಮತ್ತಾಗಿ ಹೆಗಲಿಗಿ ಹಾಕೋತಿದ್ದರು. ಅಂಥಾ ಜನರು ಆವಾಗ ವೀರಾಪುರದೊಳಗ ಬಾಳ ಇದ್ದರು. ಈಗೀಗ ಆ ಹಿಮ್ಮತ್ತಿನ ಜನರೆಲ್ಲಾ ಖಾಲಿಯಾಗತಾ ಬಂದು ಬರೀ ಕತೆಯಾಗಿ ಉಳದು ಬಿಟ್ಟಿದ್ದರು.

ಕಾಲ ಬಾಳ ಬದಲಾಗಿತ್ತು. ಭೀಮರಾಯನ ಮಾತು ಮೊದಲಿನಂಗ ಈಗ ನಡೀತಿರಲಿಲ್ಲ. ಕಾಲೇಜು ಕಟ್ಟಿ ಹತ್ತಿದ ಹುಡುಗರು ‘ಏ ಮುದುಕ, ಕಾಲ ಬಹಳ ಬದಲಾಗೈತಿ ನಿನಗ ತಿಳಿಯೋದಿಲ್ಲ, ಇದು ಗರಡೀ ಮನಿ ಅಲ್ಲ ಸುಮ್ಮಿರು’ ಅನ್ನಾಕ ಸುರು ಮಾಡದರು. ಅಂಥಾ ಹುಡುಗರ ಬಾಯಿಗಿ ಹತ್ತೂದಂದ್ರ ನಾಯಿ ಕೆಣಕಿ ಲಕ್ಷ್ಮೀ ಕಳಕೊಂಡಂಗ ಅಂತ ಹೇಳಿ ಭೀಮರಾಯ ಸುಮ್ಮ ಇರತಿದ್ದ. ಅದೂ ಅಲ್ಲದೇ ಕಾಲ ಬದಲ್ ಆಗಿದ್ದು ತನಗ ವಯಸ್ಸಾಗಿದ್ದು ಎರಡೂ ಅಷ್ಟೇ ಖರೆ ಐತಿ ಅನ್ನೂದು ಅಂವಗ ಗೊತ್ತಿತ್ತು.
************************

‘ತಮ್ಮೂರಿನ ಮಲ್ಲಿಕಾರ್ಜುನ ದೇವಸ್ಥಾನದ ಎದುರಿನ ಗಟಾರೊಂದು ಗಬ್ಬೆಂದು ನಾರುತ್ತಿದೆ. ಜನ ಮೂಗು ಮುಚ್ಚಿ ಅಲೆಯುವಂತಾಗಿದೆ. ಪಂಚಾಯತಿಯ ಸದಸ್ಯರುಗಳು ಕೂಡಾ ಆ ಬಗ್ಗೆ ಗಮನ ಹರಿಸಿಲ್ಲ. ಅನೇಕರು ತಮ್ಮ ಮನೆಯ ಕಸವನ್ನು ಕೂಡಾ ಈ ಗಟಾರಿನಲ್ಲಿಯೇ ತಂದು ಸುರಿಯುವದರಿಂದ ಅದು ಇನ್ನಷ್ಟು ಗಲೀಜಾಗಿದೆ’ ಹೀಗೆ ರಾಜ್ಯದ ಪ್ರಮುಖ ಪತ್ರಿಕೆಯ ಜನಾಭಿಪ್ರಾಯ ವಿಭಾಗದಲ್ಲಿ ಒಂದು ಪುಟ್ಟ ಬರಹ ಬಂದದ್ದೇ ವೀರಾಪುರದ ಮುರಗೆಪ್ಪ ನ ಮಗ ಬಂಡೆಪ್ಪ ದೇಸಾಯಿ ಅದನ್ನು ಕೈಯಲ್ಲಿ ಹಿಡಿದು ಇಡೀ ಊರಿನ ತುಂಬೆಲ್ಲಾ ಟಾಂ ಟಾಂ ಹೊಡೆದಿದ್ದ. ಈ ಬಂಡೆಪ್ಪ ಐದಾರು ಪ್ರಯತ್ನಗಳ ನಂತರವೂ ಪದವಿಯಲ್ಲಿ ಪಾಸಾಗಲಾರದೇ ಮತ್ತೆ ಮತ್ತೆ ಡುಮಕೀ ಹೊಡೆದು ಊರಲ್ಲಿ ಒಣಾ ಕಾರಬಾರ ಮಾಡತಾ ತಿರಗತಿದ್ದ. ಆ ಪತ್ರಿಕೆಯ ಜನಾಭಿಪ್ರಾಯ ವಿಭಾಗದಲ್ಲಿ ಇವನ ಬರಹ ಬಂದದ್ದೇ ಊರಲ್ಲಿ ಏನಾದರೂ ಕಾರ್ಯಕ್ರಮಗಳಿದ್ದರೆ ಅಲ್ಲಿಗೆ ಕರೆಯದೇ ಹೋಗಿ ಮೊಬೈಲ್ ಲ್ಲಿ ಫೋಟೊ ತೆಗೆದು ‘ಇದನ್ನು ಪೇಪರಿಗೆ ಕಳಸ್ತೇನೆ’ ಎಂದು ಹೇಳಿ ಆ ಸಂಘಟಕರಿಂದ ದುಡ್ಡು ಕೀಳತ್ತಿದ್ದ. ತೀರಾ ಅಪರೂಪಕ್ಕೆ ಒಂದೆರಡು ಸುದ್ಧಿಗಳು ಬಂದದ್ದೇ ಅದನ್ನೇ ಎಲ್ಲರಿಗೂ ತೋರಿಸಿ, ತಾನೇ ಖುದ್ದಾಗಿ ಪತ್ರಕರ್ತನೆಂದು ಘೋಷಿಸಿಕೊಂಡು ಬಿಟ್ಟ.

ವೀರಾಪುರದ ಜನರಿಗೆ ಪತ್ರಿಕೆಗಳಂದರೆ ತುಸು ಭಯ. ಆದರೆ ಬಂಡೆಪ್ಪ ದೇಸಾಯಿ ಮಾತ್ರ ತನಗೆ ಆ ಸಂಪಾದಕ ಗೊತ್ತು, ಅವನು ನನ್ನ ಚಡ್ಡಿ ದೋಸ್ತ, ಅವನು ನಾನು ಕೂಡಿ ಕಲತದ್ದು ಎಂದೆಲ್ಲಾ ಹೇಳತಾ ಊರಲ್ಲಿ ಫೇಮಸ್ ಆಗಿ ಬಿಟ್ಟ. ಹಂಗ ನೋಡಿದರೆ ಅವನಿಗೆ ಯಾವ ಪತ್ರಿಕೆಯ ಸಂಪಾದಕರೂ ಪರಿಚಯ ಇರಲಿಲ್ಲ. ಸಂಪಾದಕರು ಬಿಡಿ, ತಾಲೂಕಾ ವರದಿಗಾರರು ಸಹಿತ ಅವನಿಗೆ ಗೊತ್ತಿರಲಿಲ್ಲ. ಆದರೆ ಬಂಡೆಪ್ಪ ಮಾತನಾಡೊದು ಹೇಗಿರತಿತ್ತು ಅಂದ್ರೆ ಅವರನ್ನೆಲ್ಲಾ ಪತ್ರಿಕಾ ಕೆಲಸಕ್ಕೆ ಸೇರಸಿದ್ದೇ ತಾನು ಎನ್ನುವಂತಿರುತ್ತಿತ್ತು. ಸಾಲದೆಂಬಂತೆ ತನ್ನ ಬೈಕ್ ಹಿಂಬದಿ ಪ್ರೆಸ್ ಎಂದು ಬರೆಯಿಸಿದ್ದ. ಈ ಬಂಡೆಪ್ಪ ಅನ್ನೋ ಪತ್ರಕರ್ತ ಬಹಳ ಲಪುಟ ಅನ್ನೋದು ಭೀಮರಾಯಗ ಗೊತ್ತಿತ್ತು. ಅಂವಾ ಬಾಳ ಸಾರಿ ‘ಆ ಕುರಸಾಲ್ಯಾನ ನಂಬಬ್ಯಾಡ್ರಿ ಬರೇ ಸುಳ್ಳ ಹೇಳತಾನ’ ಅಂವಾ ಎಲ್ಲೆಲ್ಲಿ ತಾನು ಪತ್ರಕರ್ತ ಅಂತ ಹೇಳಿ ರೊಕ್ಕ ಇಸಗೊಂಡಾನ ಅನ್ನೂದು ಭೀಮರಾಯನ ಕಿವಿಗಿ ಬಿದ್ದಿತ್ತು. ಬಾಳ ಸಾರಿ ಅಂವಾ ಎದುರಿಗಿ ಸಿಕ್ಕಾಗ ಭೀಮರಾಯ ಬೈದಿದ್ದ. ಹಂಗ ಬೈಯೂ ವ್ಯಾಳೆದೊಳಗ ಈ ಬಂಡೆಪ್ಪ ಅದೂ ಇದೂ ಅಂತ ಮಾತಾಡಿ ಅವನ ಮಾತನ್ನ ನಡುವೇ ಕತ್ತರಿಸಿ ಮರಸಿ ಬಿಡತಿದ್ದ.

‘ಭೀಮರಾಯ ಕಾಕಾ ನಿನ್ನ ಬಗ್ಗೆ ಒಂದು ಸಂದರ್ಶನ ಮಾಡ್ತೀನಿ ನೋಡೂವಂತಿ ಹಿಂದೂ ಯಾರೂ ಮಾಡಿರಬಾರದು ಮುಂದೂ ಮಾಡಿರಬಾರದು’ ಅಂದಾಗ ಭೀಮರಾಯ ನಕ್ಕೊಂತ. ‘ ಅದೆಲ್ಲಾ ಬ್ಯಾಡ ಮೊದಲ ಈ ಸುಳ್ಳ ತಗಲ ದಂಧೆ ಬಿಡು ನಿಯತ್ತಾಗಿ ದುಡದು ತಿನ್ನು’ ಅಂದಿದ್ದ. ತಾ ಪತ್ರಕರ್ತ ಅಂತ ಹೇಳಕೊಂತೇ ತಿಂಗಳ ಖರ್ಚ ಹೊರಗ ತಗಿಯೋ ಈ ಬಂಡೆಪ್ಪ ಪಕ್ಕದೂರಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹದ ಬಗ್ಗೆ ಪೋಲಿಸರಿಗೆ ತಿಳಿಸಿ, ಪತ್ರಿಕೆಯೊಳಗೂ ಬರೀತೀನಿ ಅಂತ ಹೇಳಿ, ಆ ಹುಡುಗಿ ಅಪ್ಪನ ಕಡಿಂದ ದುಡ್ಡು ಕಿತ್ತಿದ್ದೂ ಭೀಮರಾಯಗ ಗೊತ್ತಿತ್ತು. ಸುತ್ತಮುತ್ತಲ್ಲಿನ ಹಳ್ಳಿಗಳ ಪಂಚಾಯ್ತಿಯಲ್ಲೂ ಹೆದರಿಸಿ ರೊಕ್ಕಾ ಕಿತ್ತಿದ್ದ. ಈ ಸುದ್ದಿ ತಾಲೂಕಿನ ಖರೆ ಖರೆ ಪತ್ರಕರ್ತರ ಕಿವಿಗೂ ಬಿದ್ದರೂ ಅವರು ತಲಿ ಕೆಡಿಸಿಕೊಂಡಿರಲಿಲ್ಲ.

ಒಂದು ವಾರದ ಹಿಂದ ವೀರಾಪೂರದ ಶಾರದಾ ನರ್ಸಿಂಗ್ ಹೋಮ್ ನಲ್ಲಿ ನಡೀಬಾರದ ಅವಘಡ ಒಂದು ನಡದು, ಇಡೀ ಊರಿಗೇ ಸುದ್ಧಿ ಆಗಿತ್ತು. ಆ ದಿನ ಬಬಲಾದಿ ಫಾತಿಮಾ ಅನ್ನೋ ಮಹಿಳೆ ಗೆ ನಸುಕಿನೊಳಗೇ ನೋವು ಕಾಣಿಸಿಕೊಂಡು ಶಾರದಾ ನರ್ಸಿಂಗ್ ಹೋಮ್ ಗೆ ಹೆರಿಗೆಗೆ ಬಂದಿದ್ದಳು. ಆಕಿದು ಬ್ಲಡ್ ಗ್ರುಪ್ ಓ ನೆಗೆಟಿವ್ ಇತ್ತು. ಅದು ಬಾಳ ಅಪರೂಪ. ತರಾತುರಿಯೊಳಗ ಹತ್ತಾರು ಕಡೆ ಹುಡುಕದ ಮ್ಯಾಲ ಒಂದೇ ಒಂದು ಬಾಟಲ್ ರಕ್ತ ಸಿಕ್ಕಿತ್ತು. ಹೆರಿಗೆ ವ್ಯಾಳೆದೊಳಗ ತುಸು ಫರಕ್ ಆಗಿ, ಬಾಳ ರಕ್ತ ಹೋಯ್ತು. ಡಾ ರವೀಂದ್ರಗ ಮತ್ತು ಅವನ ಹೆಂಡತಿ ಶಾರದಾಗ ಆ ಕೇಸ್ ಬಾಳ ಬಿರಿ ಐತಿ ಅಂತ ಗೊತ್ತಾಯ್ತು. ಆದರೂ ತನ್ನೂರವಳು ಅಂತ ರಿಸ್ಕ್ ತಗೊಂಡಿದ್ದರು. ಮಾಡೊ ಕಟಿಬಿಟಿ ಮಾಡದ ಮ್ಯಾಲೂ ಆಕಿ ಬದುಕಲಿಲ್ಲ.

ತಗೊ ಸುರು ಆಯ್ತು. ‘ಬಿರಾದಾರ ಡಾಕ್ಟರ್ ನ ಬೇಜವಾಬ್ದಾರಿಯಿಂದೇ ಪೇಷಂಟ್ ಸತ್ತತು’ ಅಂತ ಮುಸ್ಲಿಂ ರ ಕೇರಿ ಜನ ದವಾಖಾನಿ ಮುಂದ ಗದ್ದಲ ಎಬ್ಬಿಸಿ ಬಿಟ್ಟರು. ಆ ವ್ಯಾಳೆದೊಳಗ ಭೀಮರಾಯನೇ ಮುಂದಾಗಿ ಅವರ ಕಡಿ ಮಂದಿನ್ನ ದವಾಖಾನಿಯೊಳಗ ಕರದು ಡಾಕ್ಟರ್ ಜೋಡಿ ಮಾತಾಡಿ ಬಗೆಹರಿಸಿದ್ದ. ಭೀಮರಾಯ ಹೇಳದಂಗ ಬಿರಾದಾರ ಡಾಕ್ಟರ್ ಅವರಿಗೆ ಪರಿಹಾರನೂ ಕೊಟ್ಟಿದ್ದ. ಇದೆಲ್ಲಾ ಆ ಬಂಡೆಪ್ಪಗ ಗೊತ್ತಾಗಿ ಮುಂದೆರಡು ದಿನದ ಮ್ಯಾಲ ಸೀದಾ ಡಾಕ್ಟರ್ ಚೇಂಬರಿಗಿ ಹೋಗಿ ‘ಏನ್ರಿ ಡಾಕ್ಟರೆ, ಮೊನ್ನೆ ನಡದ ಘಟನೆ ಬಗ್ಗೆ ಊರಾಗ ಬ್ಯಾರೇ ಸುದ್ದಿನೇ ಐತೆಲ್ಲ.. ನಾ ಜನ ಹೇಳದಂಗೇ ಬರದರ ದವಾಖಾನಿ ಮುಚ್ಚೂದು ಗ್ಯಾರಂಟಿ.. ನೋಡ್ರಿ. ಹಂಗ ಬರೀಬಾರ್ದು ಅಂದ್ರ ಈಗಲೇ ಏನರೇ ವ್ಯವಸ್ಥೆ ಮಾಡ್ರಿ’ ಅಂದಾಗ ಡಾಕ್ಟರ್ ರವೀಂದ್ರ ಹೆಂಡತಿ ಶಾರದಾಳ ಕಡೆ ನೋಡದ. ಆಕಿ ಗಂಡನ್ನ ಒಳಗ ಕರದು ಏನೋ ಗುಸು ಗುಸು ಮಾತಾಡಿ ಹೊರಗ ಬಂದು ಹತ್ತು ಸಾವಿರ ರೂಪಾಯಿ ಅವನ ಕೈಯಾಗ ಇಟ್ರು. ‘ಆಯ್ತು ಬಿಡ್ರಿ ನೀವಿನ್ನ ಯಾರಿಗೂ ಹೆದರೂದು ಬ್ಯಾಡ. ಎಟ್ಟೇ ಆಗಲಿ ನಮದೇ ಊರವರು. ಈ ಸುದ್ದಿ ಪೇಪರದೊಳಗ ಬರಲಾರದಂಗ ನೋಡಿಕೊಳ್ಳೊ ಜವಾಬ್ದಾರಿ ನಂದು, ನಾ ಇನ್ನ ಬರ್ತೀನಿ ನಮಸ್ಕಾರ’ ಅಂತ ಹೇಳಿ ಹೊರಟ.

ಅವರ ಕಡಿಂದ ಹತ್ತು ಸಾವಿರ ರೂಪಾಯಿ ಕಿತ್ತಿ ಕಿಸೆಗೆ ಇಳಿಸಿದ್ದು ಭೀಮರಾಯಗ ಆಮ್ಯಾಗ ಗೊತ್ತಾಯ್ತು. ಮುಂದ ಒಂದು ವಾರದ ಮ್ಯಾಲ ಇವನಂಗೇ ಲಪುಟತನ ಮಾಡಿ ಬದಕೋ ನಕಲೀ ಪತ್ರಕರ್ತ ಆಲಮೇಲದಲ್ಲೊಬ್ಬ ಇದ್ದ. ಅವನಿಗೂ ಫೋನ್ ಮಾಡಿ ಈ ಬಂಡೆಪ್ಪ ದುಡ್ಡ ಕಿತ್ತೋ ಹಾದಿ ಹೇಳಿದ್ದ. ಅಂವಾ ತನ್ನ ಜೋಡಿ ಬರೋ ಮುಂದ ಮತ್ತಿಬ್ಬರು ತನ್ನಂಥದೇ ನಕಲೀ ಪತ್ರಕರ್ತರನ್ನ ಕರಕೊಂಡು ಬಂದು ಎಲ್ಲೂ.. ಎಂದೂ ಕೇಳಿರಲಾರದ ಪತ್ರಿಕೆಗಳ ಹೆಸರು ಹೇಳಿ ಡಾಕ್ಟರ ಮುಂದ ಕುಂತು ಬಿಟ್ರು. ಡಾಕ್ಟರ್ ಗ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಅದಕ್ಕವನು ಮೊದಲು ಬಂಡೆಪ್ಪಗ ಫೋನ್ ಹಚ್ಚದ. ಬಂಡೆಪ್ಪ ಡಾಕ್ಟರ್ ಗ ಅಂಜಿಕಿ ಹುಟೈತಿ ಎರಡನೆ ಕಂತೂ ಸಿಕ್ಕರೂ ಸಿಕ್ಕತು ಹೇಳಾಕ ಆಗಲ್ಲ ಅನ್ನೋ ಆಸೆ ಮ್ಯಾಲ ನರ್ಸಿಂಗ್ ಹೋಮ್ ಗೆ ಬಂದ. ‘ಡಾಕ್ಟರೇ ನಾನು ಬರೀ ವರದಿಗಾರ, ಇವರೆಲ್ಲಾ ಹಂಗಲ್ಲ ಅವರದೇ ಪತ್ರಿಕೆ ಇದ್ದವರು. ತಮಗ ಹ್ಯಾಂಗ ಬೇಕು ಹಂಗ ಬರೆವರು. ನನ್ನ ಮಾತಂತೂ ಅವರು ಕೇಳೂದಿಲ್ಲ. ಯಾರಿಗಿ ಹೇಳಬೇಕು ಅವರಿಗಿ ಹೇಳೀನಿ. ಇವರಿಗಿ ಹೇಳೊ ತ್ರಾಣ ನಂದಲ್ಲ. ಸುತ್ತ ಮುತ್ತ ಹಳ್ಳಿಯೊಳಗ ನಿಮ್ಮ ಹೆಸರು ಹಾಳಾಗತೈತಿ. ನನಗ ಕೇಳದರ ಸುಮ್ಮ ಆದಷ್ಟು ಕೊಟ್ಟು ಬಗೆಹರಸಿ ಬಿಡ್ರಿ’ ಅಂತ ಅವರ ಕಡಿ ಹೊಳ್ಳಿ ಕಣ್ಣು ಚಿವಟಿ ಕುಳಿತ. ಒಟ್ಟು ಅವರು ನಾಲ್ಕು ಜನ. ಅವರಿಗೆ ಕುಡಿಯಲು ಚಾ ಕೊಟ್ಟು ಡಾಕ್ಟರ್ ರವೀಂದ್ರ ‘ಬಂದೆ ಚಾ ಕುಡೀರಿ’ ಅಂದವನೇ ಸೀದಾ ಹೊರಗ ನಡದ. ಫೋನನಲ್ಲಿ ಭೀಮರಾಯ ಜೋಡಿ ಮಾತಾಡಿದ. ಭೀಮರಾಯ ಪೈಲ್ವಾನ್ ಅವರನ್ನೆಲ್ಲಾ ಕರಕೊಂಡು ತನ್ನ ಗರಡಿ ಮನಿಗಿ ಬರಾಕ ಹೇಳಿದ್ದ.

ಕಳೆದ ವರ್ಷವಷ್ಟೇ ಜಾತ್ರೆಯ ನಿಮಿತ್ತ ಡಾಕ್ಟರ್ ರವೀಂದ್ರ ತನ್ನ ತಂದೆ ಹೆಸರಲ್ಲಿ ಆ ಗರಡಿ ಮನೆಯಲ್ಲಿ ಎರಡು ಕೋಣೆ ಕಟ್ಟಿಸಿಕೊಟ್ಟಿದ್ದ. ಅಲ್ಲಿ ಯಾರಾದರೂ ಹೊರಗಿನಿಂದ ಬಂದರೆ ಉಳಿಯುವಂತೆ ಎಲ್ಲಾ ವ್ಯವಸ್ಥೆ ಇತ್ತು. ಆ ಎರಡೂ ರೂಮಗಳು ಆಜೂಬಾಜೂ ಇದ್ದವು. ಒಂದು ರೂಮಂತೂ ಎರಡು ಮೂರು ತಿಂಗಳಿಂದಲೂ ಬಳಸಿರಲಿಲ್ಲ. ಅದು ಬಾಳ ಗಲೀಜಾಗಿತ್ತು. ಇನ್ನೊಂದು ನಿರಂತರವಾಗಿ ಬಳಕೆಯಲ್ಲಿತ್ತು. ಡಾಕ್ಟರ್ ಅವರನ್ನೆಲ್ಲಾ ಅದೇ ರೂಮಿಗೆ ಕರಕೊಂಡು ಬಂದ. ಬಂಡೆಪ್ಪನ ಮಾತು ಜೋರಾಗಿ ಕೇಳುತ್ತಿತ್ತು. ‘ ಅವರಿಗೆಲ್ಲಾ ವ್ಯವಸ್ಥೆ ಮಾಡ್ರಿ. ಊಟಾ ಡ್ರಿಂಕ್ಸ್ ಎಲ್ಲಾ ಇಲ್ಲೇ ತರಿಸಿ ಬಿಡ್ರಿ. ಡ್ರಿಂಕ್ಸ್ ಆಲಮೇಲದಿಂದೇ ತರಸರಿ ನಮ್ಮೂರಾಗಂತೂ ಸಿಗಲ್ಲ.. ಅಟ್ಟಾಗಲಿ ಆಮ್ಯಾಗ ನೋಡಮ್ಮು ನಾ ಎಲ್ಲಾ ಬಗೆಹರಸ್ತೀನಿ’ ಅಂತ ದೇಶಾವರಿ ಮಾತಾಡಿದ್ದ.

ಭೀಮರಾಯ ಆ ಕೊಣೆಯಿಂದ ಹೊರಗ ಬಂದು ಅವರನ್ನ ‘ಬರ್ರಿ ಬರ್ರಿ ನಿಮ್ಮಂಥಾ ಪತ್ರಕರ್ತರು ನಮ್ಮ ಈ ಈರಪ್ಪನ ಗರಡಿ ಮನಿಗಿ ಬಂದದ್ದು ಯಾವಾಗ ಬರಬೇಕು’ ಅನ್ಕೊಂತ ಅವರನ್ನ ಕೋಣೆ ಒಳಗ ಕರದು ಕುಳ್ಳರಿಸಿದ. ಭೀಮರಾಯ ಹಗೂರಕ ಬಂಡೆಪ್ಪನ ಕಡಿ ನೋಡಿ ‘ ಏನಂತಾರ ವೀರಾಪುರದ ಪತ್ರಕರ್ತರು.. ಮತ್ತೇನು ಬರದರಿ’ ಅಂದಾಗ ಬಂಡೆಪ್ಪ ‘ಹಿ..ಹಿ.ಹ್ಹಿ. ಮತ್ತೊಂದೆರಡು ಸುದ್ಧಿ ಬಂತು’ ಅಂದ. ಭೀಮರಾಯ ಡಾಕ್ಟರ್ ಕಡೆ ಹೊರಳಿ ‘ರವೀಂದ್ರ ನೀವು ನಡೀರಿ ಇವರಿಗಿ ನಾ ಎಲ್ಲಾ ವ್ಯವಸ್ಥೆ ಮಾಡ್ತೀನಿ’ ಅಂದದ್ದೇ ಡಾಕ್ಟರ್ ಎಲ್ಲರಿಗೂ ನಮಸ್ಕರಿಸಿ ಹೊರಟುಬಿಟ್ಟ. ಭೀಮರಾಯ ಹೇಳೀ ಕೇಳಿ ಪೈಲ್ವಾನ್, ದೈತ್ಯ ಆಳು ಅವರೆಲ್ಲಾ ಅವನೆದುರು ಸಣ್ಣ ಚುಕ್ಕೋಳು ಕುಂತಂಗ ಕಾಣತಿದ್ದರು.

ಅವರ ಎದುರು ಕುಳಿತು ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ನೋಡತಾ ‘ನಿಮ್ಮದು ಯಾವ ಪತ್ರಿಕೆ.. ಐ.ಡಿ ಕಾರ್ಡ್ ತೋರಸರಿ’ ಅಂದ. ಎಲ್ಲರೂ ಬೆವರಲಿಕ್ಕೆ ಸುರು ಮಾಡದರು. ‘ನಮ್ಮೂರಿನ ಈ ಪತ್ರಕರ್ತ ನಮಗ ಗೊತ್ತೈತಿ, ನೀವು ಗೊತ್ತಿಲ್ಲ ಹಿಂಗಾಗಿ ನನಗ ನಿಮ್ಮ ಕಾರ್ಡ್ ಬೇಕು’ ಅಂದ. ಎಲ್ಲರದೂ ಒಂದೇ ಉತ್ತರ ‘ಬಿಟ್ಟು ಬಂದಿವಿ.. ‘ ಅಂದರು. ಆಗ ಭೀಮರಾಯ ನಕ್ಕೊಂತ ‘ಆಯ್ತು ಇವತ್ತ ಊಟಾ ಮಾಡಿ ಹೋಗ್ರಿ.. ಡ್ರಿಂಕ್ಸ್‍ಂತೂ ನಿಮಗ ಸಿಗಲ್ಲ.. ಏ ಬಸು ಇವರಿಗಿ ಊಟಕ್ಕ ಬಡಸು’ ಅಂತ ಶಿಷ್ಯನಿಗೆ ಹೇಳದ. ಅವರೆಲ್ಲಾ ಭರ್ಜರಿ ಊಟ ಮಾಡದರು. ವೆಜ್ ಊಟಾ ಯಾರೂ ಮುಟ್ಟಿರಲಿಲ್ಲ. ಹಂಗೇ ಉಳದಿತ್ತು. ಭೀಮರಾಯ ‘ಊಟಾ ಹೆಂಗಿತ್ತು ಪತ್ರಕರ್ತರೆ..?’ ‘ಅಡ್ಡಿಯಿಲ್ಲ.. ಆದರೆ ಇದಕ್ಕೆ ಡ್ರಿಂಕ್ಸ್ ಇರಬೇಕಿತ್ತು’ ‘ ಮತ್ತೆ ಮುಂದಿನ ಸಾರಿ ಮಾಡೋಣ ಇದು ಬರೀ ಸ್ಯಾಂಪಲ್ ಅಷ್ಟೇ’ ಅಂದ. ಬಂಡೆಪ್ಪ ಮುಂದಾಗಿ ‘ ಭೀಮರಾಯ ಕಾಕಾ, ನಿನಗ ಇವರು ಗೊತ್ತಿರಲಿಲ್ಲಂದ್ರ ಏನಾಯ್ತು ನನಗ ಗೊತ್ತ ಅದಾರ. ಇವರದೆಲ್ಲಾ ಸ್ವಂತ ಪತ್ರಿಕೆಗಳೇ ಅದಾವ, ಅವರು ಯಾರದೂ ಮಾತ ಕೇಳಲ್ಲ ಬರಿಯೂದಂತೂ ಬರಿಯವರೇ..’ ಅಂದಾಗ ಭೀಮರಾಯ ‘ಒಂದಾದರೂ ಪತ್ರಿಕೆ ನಿಮ್ಮ ಸಂಗಡ ತಂದೀರೆನೂ..?’ ಅಂತ ಕೇಳದ. ಆಗ ಅವರೆಲ್ಲಾ ಗಲಿಬಿಲಿ ಗೊಂಡು ಒಬ್ಬರದೊಬ್ಬರು ಮುಖಾ ನೋಡಾಕತ್ತರು ‘ ಇಲ. ಇಲ್ಲ ನೆನಪಾಗಲಿಲ್ಲ’ ‘ ಇರಲಿ ಮುಂದಿನ ಸಾರಿ ನೀವು ಒಟ್ಟೇ ನೆನಪು ಹಾರೂವಂಗಿಲ್ಲ ಗ್ಯಾರಂಟಿ ತರತೀರಿ.’ ಎಂದವನೇ ಎದ್ದು ‘ ವ್ಯವಹಾರ ಬಗೆಹರಿಸಮ್ಮು, ಕುಳಿತು ಮಾತಾಡ್ತಾ ಇರ್ರಿ ಬಂದೆ’ ಎಂದು ಕೊಣೆಯ ಬಾಗಿಲನ್ನು ಮುಂದೆ ಮಾಡಿಕೊಂಡು ಹೊರಗ ನಡದ.

ಬಸುಗೆ ಪಕ್ಕದ ಕೋಣೆಯನ್ನು ತೆಗೆಯಲು ಹೇಳದ. ಅಂವಾ ತುಸು ಹಿಂದೇಟು ಹಾಕಿದ. ‘ಹೆದರಬ್ಯಾಡ ತಗಿ ಅವೇನೂ ಮಾಡಲ್ಲ. ಚಾವಿ ತಾ ನಾ ತಗೀತೀನಿ’ ಅಂದ. ಆಗ ಬಸು ಪಕ್ಕದ ಕೋಣೆಯ ಬಾಗಿಲು ತೆಗೆದ. ‘ ನಾನು ಹೇಳಿದಂಗೆ ಮಾಡು ತಿಳೀತಾ..?’ ಎನ್ನುತ್ತಾ ಭೀಮರಾಯ ಊರಕಡೆ ಹೊರಟ. ಬಸು ಒಂದಷ್ಟು ಬೆಂಕಿಯ ಕೆಂಡ ಮಾಡಿ, ಅದರ ಮ್ಯಾಲ ಒಂದಷ್ಟು ಹಸಿ ಬೇವಿನ ಸೊಪ್ಪು ಹಾಕಿ ಗಡದ್ದಾಗಿ ಹೊಗೆ ಎಬ್ಬಿಸಿ ಆ ಗಲೀಜಾದ ಕೋಣೆಯೊಳಗಿಟ್ಟು ಬೀಗ ಜಡದ. ಈ ನಕಲಿ ಪತ್ರಕರ್ತರು ಇರೋ ಬಾಗಿಲಿಗೂ ಬೀಗಾ ಹಾಕದ. ಚಿಲಕಾ ಹಾಕೂ ಆವಾಜ್ ಕೇಳಿ ಬಂಡೆಪ್ಪ ‘ಬಾಗಿಲು ಯಾಕ ಹಾಕಾ ಕತ್ತೀರಿ’ ಅನ್ನೂದರೊಳಗ ಒಳಗಿದ್ದವರೆಲ್ಲಾ ಜೋರಾಗಿ ‘ಯಪ್ಪೋ  ಸತ್ತಿವಿ.. ಇನ್ನೊಮ್ಮ ಮಾಡೂವಂಗಿಲ್ಲ.. ನಾವು ಪತ್ರಕರ್ತರಲ್ಲ.. ಬಾಗಲಾ ತಗೀರಿ ನಿಮ್ಮ ಕಾಲ ಬೀಳ್ತೀವಿ.. ನಮ್ಮನ್ನ ಬದಕಸರೀ’ ಅಂತ ಜೋರಾಗಿ ಹೋಯ್ಕೋಳೂದು ಚೀರೂದು ಮಾಡಾಕತ್ತರು. ಅವರ ಹೊಯ್ಕೊಬಡ್ಕೊ ಕೇಳಾಕ ಅಲ್ಲಾರೂ ಇರಲಿಲ್ಲ.

ತಾಸು ಬಿಟ್ಟ ಮ್ಯಾಲ ಬರ್ರಂತ ಶಾರದಾ ನಸ್ರಿಂಗ್ ಹೋಮ್ ನ ಆಂಬ್ಯುಲೆನ್ಸ್ ಬಂದು ನಿಂತತು. ಬಸು ಹೆದರಕೊಂತೇ ಆ ರೂಮಿನ ಬಾಗಿಲು ತಗದ. ಅವರೆಲ್ಲಾ ಮೂರ್ಛೆ ಹೋಗಿದ್ದರು. ಮುಖಾ ಅನ್ನೂದು ಬಾತು ಹೋಗಿ, ಕೆಂಪು ಗಡ್ಡೆಗಳಾದಂಗ ಕಾಣತಿದ್ವು. ಅವರ ಕಣ್ಣಂತೂ ಎಲ್ಲಿ ಅದಾವಂತ ಹುಡುಕಬೇಕಿತ್ತು. ಯಾರನ್ನೂ ಗುರತು ಹಿಡಿಯುವಂಗಿರಲಿಲ್ಲ. ಬಡ ಬಡ ಅವರನ್ನ ಎತ್ತಿ ಆ ಆಂಬ್ಯುಲೆನ್ಸ್ ಗೆ ಹಾಕಲಾಯ್ತು. ತಾಬಡತೋಬಡ ಅವರನ್ನ ಆಸ್ಪತ್ರೆಗೆ ತಗೊಂಡು ಹೋದರು.
**************

ಗಲೀಜಾಗಿರುವ ಪಕ್ಕದ ರೂಮಿನೊಳಗ ಇನ್ನೂ ಹೊಗೆಯಾಡತಿತ್ತು. ಆ ಕೋಣೆಯ ಮೂಲೆಯಳಗಿರೋ ಜೇನು ಗೂಡು ಖಾಲಿಯಾಗಿ ಬರೀ ಅದರ ಹುಟ್ಟಷ್ಟೇ ಉಳದಿತ್ತು. ವಿಚಿತ್ರವಾದ ವಾಸನೆ ಗಬ್ಬಂತ ಮೂಗಿಗೆ ಮೆತಗೊಂಡಂಗಿತ್ತು.

 

2 Responses

  1. Vijaykumar wadawadagi says:

    Jogur sir ur story was nice it shows the new age villages his they are transforming nice wonderful

  2. Mallappa says:

    ಡಾ ಜೊಗುರಸರ್, ಬಹಳ ಸುಂದರವಾದ ಕಥೆ ಹೆಣೆದಿದ್ದಿರಿ. ಪ್ರಾರಂಭದ ಹಳ್ಳಿಯ ವಾತಾವರಣ ತುಂಬಾ ಚನ್ನಾಗಿ ಮೂಡಿದೆ. ನಂತರದ ಬದಲಾವಣೆ, ಅದರಲ್ಲಿ ಸೇರಿದ ಹೊಲಸು, ಅದನ್ನು ತೆಗೆದು ಹಾಕುವಲ್ಲಿ ಭಿಮರಾಯರ ಪಾತ್ರ, ಜೊತೆಗೆ ಕಥೆಯ ಓಟ, ಅದರ ಹಿಂದೆ ಇರುವ ಸಾಮಾಜಿಕ ಕಳಕಳಿ ಎಲ್ಲವೂ ಚನ್ನಾಗಿ ಮೂಡಿದೆ. ಸುಖಾಂತದ, ಹೊಲಸು ಸ್ವಚ್ಛತೆಯ ಕಥೆಗೆ ” ಆಕ್ರಂದನ” ಯಾರದು ಗೊತ್ತಾಗಲಿಲ್ಲ

Leave a Reply

%d bloggers like this: