ಸಖಿ ಸಹವಾಸ!  

ಡಿ ನಳಿನ

ಕನಸಿನಲ್ಲೂ ಎಚ್ಚರವಿರಬೇಕೆಂದೇ ಮಲಗಲು ಸಾಧ್ಯವಾ?  ಒಮ್ಮೊಮ್ಮೆ ನನ್ನವರು ಅಂತೆಲ್ಲಾ ನಂಬಬೇಕಲ್ಲವಾ? ಅದೆಷ್ಟು ಆಸೆಗಣ್ಣಿನಿಂದ ಪಿಂಕಿ ತನ್ನ ಸಹೋದ್ಯೋಗಿ ನೀತಾಳ ಕೈಯಲ್ಲಿರುವ ಚಿನ್ನದ ಕಡಗವನ್ನು ಕಣ್ಣವೆ ಮಿಟುಕಿಸದೆ ನೋಡುತ್ತಿದ್ದಳೆಂದರೆ, ಪದೇ ಪದೇ ಅವಳು ಕೂರುತ್ತಿದ್ದ ಕ್ಯಾಬಿನ್ ಒಳಗೆ ನುಗ್ಗಿ ಕೈಹಿಡಿದು ಕೇಳುತ್ತಿದ್ದಳು, ಸ್ವಲ್ಪ ಬಿಚ್ಚಿಕೊಡಿ ಅಂತೆಲ್ಲಾ.

ನೀತುಗೆ ಪಿಂಕಿಯ ಮೇಲೆ ಯಾವುದೇ ವೈಮನಸ್ಸಿರಲಿಲ್ಲ, ಹಾಗೇ ಆಕೆ ತನ್ನ ಕ್ಯಾಬಿನ್ ಪಕ್ಕದಲ್ಲಿದ್ದ ಮದ್ಯವಯಸ್ಕರ ಕೈಕೆಳಗೆ ರಿಪೊರ್ಟ್ ಮಾಡಬೇಕಾದ್ದರಿಂದ ಬೇರಾವುದೇ ಕೆಲಸಕ್ಕೂ ಅವರಿಬ್ಬರ ನಡುವೆ ಸಂಭಾಷಣೆಯು ನಡೆಯುವ ಅಗತ್ಯವಿಲ್ಲವೆಂದು ತಿಳಿದಿದ್ದರೂ ಒಂದೇ ಕಛೇರಿಯವರೇ ಅಲ್ಲವಾ ಅಂತಲೆ ಕಂಡಾಗ ಮೇಡಂ ಎಂದು ಕೆನೆಯುತ್ತಿದ್ದ ಪಿಂಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು.  ಆಗಾಗ ಪಿಂಕಿ ತನಗೆ ಮದುವೆ ಆಗಬೇಕಿದೆ,  ದೊಡ್ಡ ಡಾಕ್ಟರ್ ಬಂದಿದ್ದಾನಂತೆಲ್ಲಾ ಬೂರಿ ಬಿಡುತ್ತಿದ್ದಳಾದರೂ, ನೀತುಗೆ ಇದು ನಿಜವೇ ಅನ್ನಿಸದಿರದು.

ಹೀಗೇ ನಡೆಯುತ್ತಾ ಒಮ್ಮೆ ಇಬ್ಬರೂ ತುಸುದೂರದಲ್ಲಿದ್ದ ಸೂಪರ್ ಫುಡ್ ಜಾಯಿಂಟ್ ನಿಂದ ಒಂದಿಷ್ಟು ಮಧ್ಯಾಹ್ನದ ಊಟ ಮಾಡಿ ಬಿಲ್ ಕೊಡಲು ನೀತು ಮುಂದಾದಾಗಲೂ ಪಿಂಕಿ ಬಿಲ್ ಕೊಡದೆ ಸುಮ್ಮನಿದ್ದಳು.  ಇರಲಿ,  ಕಛೇರಿಯಲ್ಲಿ ಆಗಾಗ ಪಕ್ಕದ ಕ್ಯಾಬಿನ್ನಿನಿಂದ ಬರುತ್ತಿದ್ದ ವಿಪರೀತ ನಗೆ, ಹಾಸ್ಯದ ಚಟಾಕಿಗಳು ನೀತುಗೆ ತಲೆಚಿಟ್ಟುಹಿಡಿಸುತ್ತಿದ್ದವು, ಆದರೂ ಕಛೇರಿ ತನ್ನದಲ್ಲವಲ್ಲ, ಮನೆಯ ಕಿರಿಕಿರಿ ನಡುವೆ ಕಛೇರಿ ಕಿರಿಕಿರಿಯು ಏತಕ್ಕೆ ಅಂತೆಲ್ಲಾ ಸುಮ್ಮನಿದ್ದಳು.  ಆದರೂ ಕಛೇರಿಯ ಮ್ಯಾನೇಜರ್ ಒಂದೆರಡುಬಾರಿ ಪಿಂಕಿ ಮತ್ತು ಅವಳ ಬಾಸ್ ಜುನೆದ್ ಗೆ ಬೇರೆಯದೇ ಮಾತಾಡಿಸುತ್ತ ಸೂಚ್ಯವಾಗಿ ಹೇಳಿದ್ದರು.  ಇಬ್ಬರೂ ಮಹಾ ದೋಸ್ತಿಗಳೇ ಆಗಿಹೋದಂತೆ, ದಿನಾ ಪಿಂಕಿ ಚುನೆದ್ ರ ಹಿಂದೆಯೇ ಕಛೇರಿ ಬಿಟ್ಟು ಹೊರಡುತ್ತಿದ್ದಳು, ಜೊತೆಯಲ್ಲಿಯೇ ವಾಪಾಸ್ಸು ಬರುತ್ತಿದ್ದಳು, ಚುಜೆದ್ ರ ಕೆಂಪು ಕಾರಿನಲ್ಲಿ ಆಕೆಯ ಸವಾರಿಯು ತನ್ನ ಪಿಜಿವರೆಗೆ ಆರಾಮವಾಗಿತ್ತು.

ಅಷ್ಟಿದ್ದರೇ ಸಾಕಾಗುತ್ತಿರಲಿಲ್ಲವೇನೋ… ಮುಂದುವರೆದು ಪಿಂಕಿಯ ಆಸೆಯಾದ ಚಿನ್ನದ ಬಳೆಯ ಮೇಲೆ ಜುನೆದ್ ಕಣ್ಣಿಟ್ಟು ಒಂದು ಹೊಸ ಉಪಾಯ ಮಾಡಿಬಿಟ್ಟಿದ್ದ.  ಅದೊಂದು ದಿನ ನೀತು ಕಛೇರಿಗೆ ಅದೇ ಕಡಗ ಹಾಕಿಕೊಂಡು ಬಂದಿದ್ದಳು,  ತೀರಾ ಅತಿಯಾಗಿದ್ದ ಅತ್ತೆಯವರ ಕಿರಿಕಿರಿ ತಡೆಯದೆ, ವರ್ಕಿಂಗ್ ಫರ್ಮ್ ಹೋಮ್ ಅವಕಾಶದ ನಡುವೆ ವಾರಕ್ಕೊಮ್ಮೆ ಭೇಟಿ ನೀಡಲು ಅನುಕೂಲವಿದ್ದುದರಿಂದ ಬಂದಿದ್ದು ನಿಜವೇ.  ಹೀಗೆಯೇ ಕೆಫಿಟೆರಿಯಾ ಕಡೆಯಿಂದ ಒಂಚೂರು ಹಾಲು ಕುಡಿದು ಬಂದ ನೀತು ತನ್ನ ಕ್ಯಾಬಿನ್ ಬಳಿ ಬರುವಾಗಲೆ ಅಡ್ಡದಲ್ಲಿದ್ದ ಜುನೇ ಪಕ್ಕದಿಂದ ಎದ್ದ ಪಿಂಕಿ, ’ನಿಮ್ಮ ಬಳೆ ಕೊಡ್ರಿ, ಡಿಸೈನ್ ನೋಡಿಕೊಂಡು ಮಾಡಿಸಿಕೊಳ್ಳುವೆ’ ಅಂತ ದಂಬಾಲು ಬಿದ್ದಳು.  ಇದ್ದ ಜಾಗದಿಂದ ಅತ್ತಿತ್ತ ಅಲುಗಾಡದಂತೆ, ಪದೆ ಪದೇ ಕೇಳುತ್ತಾ ನಿಂತಳು.

ಕೆಲಸದ ಫೈಲ್ಸ್ ಇನ್ನೂ ಭರ್ತಿ ಇದ್ದ ಒತ್ತಡದಲ್ಲಿದ್ದ ನೀತುಗೆ ಇದೊಂದು ವಿಚಿತ್ರದಂತಿತ್ತು.  ಮೂವತ್ತು ಮೀರಿದ ನೀತುಗೆ ಚಿನ್ನದ ಆಭರಣದ ಗೀಳು ಇರದಿದ್ದರೂ,ಯಾರ ಮೈಮೇಲೆ ಏನಿದೆ, ಅದು ಎಷ್ಟು ಗ್ರಾಂ ಎಂದು ತುಲನೆ ಮಾಡುವ ಗೀಳು ಇರಲಿಲ್ಲ.  ಇಂತವೆಲ್ಲ ಇದ್ದದ್ದು ಪಿಂಕಿಗೆ.  ’ಏನ್ ಮೇಡಂ, ಇಷ್ಟು ಫ್ರೆಂಡ್ ಆಗಿ ನಂಗೆ ಬಳೆ ಕೊಡಕೆ ಮನಸಿಲ್ವಾ ನಿಮಗೆ? ನಾನೇನು ಕದ್ದುಕೊಂಡು ಹೋಗಲ್ಲಾ ಕೊಡಿ’ ಅಂತ ಮತ್ತೆ ಒತ್ತಾಯಿಸುತ್ತಾ ನಿಂತಳು.  ಒಬ್ಬರು ನಡೆಯುವ ಜಾಗದಲ್ಲಿ ಎದುರಾಳಿಯಂತೆ ನಿಂತು ಕೇಳಿದರೆ ಯಾರುತಾನೆ ಕೊಡದಿರಲು ಆಗತ್ತೆ.  ’ತಿರುಪನ್ನು ಕೆಲವು ನಿಮಿಷದಲ್ಲಿ ನಿದಾನವಾಗಿ ಬಿಚ್ಚಿ, ’ವಾಪಾಸ್ಸು ಬೇಗ ಕೊಡಿ’ ಎನ್ನುತ್ತಾ ಪಿಂಕಿಯ ಕೈಗಿತ್ತ ನೀತು ತನ್ನ ಕಂಪ್ಯೂಟರ್ ಕೆಲಸದಲ್ಲಿ ಮುಳುಗಿಹೋದಳು.

ಅಂದೇ ಮನೆಯಿಂದ ಗಂಡನ ಗಂಡಾಂತರದ ಫೋನ್ ಗಳು, ಮನೆಗೆ ಬೇಗ ಬಾ, ನಿನ್ನ ಮಗುನಾ ನೀನೇ ನೋಡಿಕೋ, ನಾನೇನು ಮಗು ಬೇಕು ಅಂತ ಹೇಳಿರಲಿಲ್ಲ, ಹೊಸ ಮನೆ ಮಾಡಿಕೊಂಡಿದ್ದೀಯಾ ಈಗ ಅದರ ಖರ್ಚುವೆಚ್ಚ ನಾನು ಬಿಲ್ ಕುಲ್ ಕಟ್ಟಲ್ಲ, ನನ್ನ ಕೇಳಿ ಮನೆ ಮಾಡಿದ್ದೀಯಾ?’ ತಲೆ ತಗ್ಗಿಸಿದರೆ ಕುಟುಂಬದಲ್ಲಿ ಮರೆತೆಹೋದ ಸಾಮರಸ್ಯದ ಕುಹಕಗಳು ಎದೆ ಕಿವುಚುತ್ತಿದ್ದವು.  ಅತ್ತೆ-ಗಂಡ-ನಾದಿನಿ ಯಾರಲ್ಲಿಯೂ ತನ್ನ ಪರವಾದ ಒಂದು ಒಳ್ಳೆಯ ಮಾತಿಲ್ಲ, ಎಲ್ಲರಿಗೂ ನಾನೇ ದುಡಿದು ನಾನೇ ತಿನ್ನಬೇಕೆಂಬ ಒತ್ತಾಸೆ.

ಅಷ್ಟಾದರೂ ತನ್ನ ಮಗುವನ್ನು ನೋಡಿಕೊಳ್ಳಲು ಫ್ಲೇ ಹೋಂ ಸೇರಿಸಿಯೇ ಕಛೇರಿಗೆ ಹೋಗಬೇಕು.  ಎಷ್ಟು ದುಡಿದರೂ ತನ್ನ ಪ್ರತ್ಯೇಕ ವ್ಯವಸ್ಥೆಯ ಬಗ್ಗೆಯೂ ಕುಹಕ, ಒಂದೇ ಮನೆಯಲ್ಲಿಯೂ ಗಂಡನ ಪ್ರೀತಿಯೂ ಇಲ್ಲ, ದುಡಿದು ಹೈರಾಣಾಗಿ ಮನೆಯೊಳಗೆ ಬಂದರೆ ತುತ್ತು ಅನ್ನವನ್ನೂ ಬಿಡದೆ ತನ್ನದೆ ಕಪಾಟಿನೊಳಗೆ ಭದ್ರಪಡಿಸಿರುತ್ತಿದ್ದ ಅತ್ತೆಮ್ಮ.  ಕೊನೆಗೆ ಎಷ್ಟು ಮೀರಿದರೂ ಅಂದರೆ, ಅನ್ನ ಬೇಳೆಯೂ ಅಡುಗೆ ಮನೆಯಲ್ಲಿ ಇಡದೆ ಖಾಲಿ ಮನೆ ಮಾಡಿ, ಬೇಕಾದಾಗ ಅಡುಗೆ ಮಾಡಿಕೊಂಡು ತೊಳೆದಿಟ್ಟಿರುತ್ತಿದ್ದರು.  ಇಷ್ಟೆಲ್ಲಾ ಹಿಂಸೆಗಳ ನಡುವೆ ದುಡಿದ ಹಣವನ್ನು ನೀರಿನಂತೆ ಖರ್ಚು ಮಾಡಬೇಕಾದರೂ ಧೈರ್ಯವಾಗಿ ಹೊಸ ಮನೆ ಬಾಡಿಗೆಗೆ ಪಡೆದು ನೀತು ಒಬ್ಬಳೇ ಮಗಳೊಂದಿಗೆ ಹೊರನಡೆದಳು. ಆದರೇನು? ಗಂಡ ಹಲವು ವರ್ಷಗಳಿಂದ ಅಂಟಿಸಿಕೊಂಡ ಮದಿರೆ ಮಾನಿನಿಯರ ಸಂಘ ಬಿಟ್ಟು ಬರದೆ, ಅತ್ತೆ-ಮಾವನಿಗೆ ವಯಸ್ಸಾಗಿದೆ ಅಂತ ನನ್ನ ಹೆಂಡತಿ ಬೇರೆ ಮನೆ ಮಾಡಿಕೊಂಡು ಹೋದಳು ಎಂದು ಪುಕಾರು ಹಚ್ಚಿದ್ದ.  ಇತ್ತ ಅವನಿಂದ ನೈತಿಕ ಬೆಂಬಲವೂ ಇಲ್ಲ, ಮಗು ಹೆಂಡತಿಯ ಖರ್ಚಿನಿಂದಲೂ ಸುಲಭವಾಗಿ ಕಂಡುಕೊಂಡ ಮುಕ್ತಿ.  ಇಷ್ಟೆಲ್ಲದರ ನಡುವೆ ನೀತಾಗೆ ಎಂದಾದರೊಂದು ದಿನ ಸಂಸಾರ ಸರಿಹೋಗಿ, ತಾನು ಎಲ್ಲರಂತೆ ನೆಮ್ಮದಿಯಾಗಿರಬಹುದೆಂಬ ಕನಸು ಇತ್ತು.

ಇದಕ್ಕಾಗಿಯೇ ಗಂಡನ ಎಲ್ಲಾ ಹಿಂಸೆಗಳ ನಡುವೆ ಸಂಯಮದಿಂದ ವರ್ತಿಸಲು ಯತ್ನಿಸುತ್ತಿದ್ದಳು.  ಎಷ್ಟೇ ಬಡಿದರೂ ಚಿನ್ನದಂತೆ ಇರುವ ಅವಳ ಮೇಲೆ ಅತ್ತೆ ನಾದಿನಿಯರೂ ಶ್ರಮಪಟ್ಟುಮನೆಯಿಂದ ಹೋದುದ್ದನ್ನು ಕೊಂಡಾಡಿದರು,ಹೇಗೋ ಪೀಡೆ ತೊಲಗಿತು, ಮಗನ ಹಣ ಉಳಿಯಿತೆಂಬ ಮಾತು ಕೇಳಿಬಂದವು.  ಆದರೂ ನೀತುವಿನ ಎದೆಯಲ್ಲಿದ್ದ ಅಷ್ಟು ಪ್ರಶ್ನೆಗಳಿಗೆ ಅವಳ ಗಂಡನ ವರ್ತನೆ ಉತ್ತರಿಸಲು ಆಗಿರಲಿಲ್ಲ,’ಕೇವಲ ಹೊರಗಿನ ಸಹವಾಸ, ಹೆಂಡಕ್ಕಾಗಿ ಕೈಹಿಡಿದ ಹೆಂಡತಿಯನ್ನು ಬಿಟ್ಟುಬಿಡುವ ಅಯೋಗ್ಯನನ್ನು ನಾನು ಮದುವೆಯಾದೆನಾ?’  ಎಂಬ ನೋವು ಬಲವಾಗಿ ಅವಳನ್ನು ಚುಚ್ಚುತ್ತಿತ್ತು.

ವ್ಯಕ್ತಿಯನ್ನು ನೋಡಿ ವ್ಯಕ್ತಿತ್ವ ಅಳೆಯದೆ ಅದೇಗೆ ಕಣ್ಣುಕಟ್ಟಾಯಿತು ಎನ್ನುವುದೇ ತೀರಾ ನೊಂದುಕೊಳ್ಳುವ ಮಾತಾಗಿತ್ತು.  ಹೈಟೆಕ್ ಸಿಟಿ ಬೆಂಗಳೂರಿನಲ್ಲಿ ಗಂಡನಮನೆಯ ಹತ್ತಿರವೇ ಮತ್ತೊಂದುಮನೆ ನೋಡಿ ಹೊರಗೆ ಬಂದ ಕ್ಷಣ ಇನ್ನು ಅವಳ ನೆನಪಿನಲ್ಲಿದೆ.  ಅಂದು ಇಳಿ ಸಂಜೆ, ನಾನು ಅಪ್ಪನ ಮನೆಯಲ್ಲಿ ಕೊಟ್ಟ ಪಾತ್ರೆಗಳು, ತಾನುಖರೀದಿಸಿದ್ದ ಪಾತ್ರೆ ಇತ್ಯಾದಿ,ಮಗಳ ನನ್ನ ಬಟ್ಟೆಗಳೆಲ್ಲವನ್ನು ಹೇಗೋ ಪ್ರಾಯಾಸಪಟ್ಟು ಕಟ್ಟಿ ಲಗೇಜು ಸಿದ್ದ ಮಾಡುತ್ತಿದ್ದರೆ, ಅತ್ತೆ ತನ್ನ ಮಗಳಿಗೆ ಫೋನಾಯಿಸಿ ’ಸದ್ಯ ಶನಿ ತೊಲಗುತ್ತಿದೆ ಕಣೆ, ಆ ದಿನ ಮನೆಗೆ ಕಾಲಿಟ್ಟಾಗಿನಿಂದಲೂ ಮನೆಯಲ್ಲಿ ಜಗಳ’ ಎಂಬಂತಹ ಅಪಹಾಸ್ಯ ಮಾಡುತ್ತಿದ್ದುದು ಕಿವಿಗೆ ಬಿತ್ತು.  ಆಕಾಶವೊಮ್ಮೆ ನೋಡಿ, ನೊಂದು ಮರುಮಾತಿಲ್ಲದೆ ಗಂಡನಿಗೆ ಫೋನಾಯಿಸುತ್ತಲೇ ಇದ್ದಳು ನೀತಾ, ಆದರೆ ಅವಳ ಗಂಡ ಮನೆಗೆ ಬರಲಿಲ್ಲ.  ಎಲ್ಲಿ ಹೇಗೆ ಯಾರೊಂದಿಗೆ ರಾತ್ರಿ ಕಳೆದನೆಂದು ಕೇಳಲು ಅದೇನು ಮೊದಲ ದಿವಸವಲ್ಲವಲ್ಲ.  ಅದೇ ಸಮಯಕ್ಕೆ ಬಂದ ಡಿಶ್ ಹಣ ಕೇಳುವ ವ್ಯಕ್ತಿಗೆ ಅತ್ತೆ ಹೇಳುತ್ತಾಳೆ ’ನೋಡ್ರಿ, ಒಳಗಿದ್ದಾಳೆ, ಅವಳ ಹತ್ತಿರ ನನ್ನ ಮಗ ದುಡ್ಡು ಕೊಟ್ಟಿದ್ದಾನೆ, ಹೋಗಿ  ನನ್ನ ಸೊಸೆಯ ಹತ್ತಿರ ಕೇಳಿ”

ಡಿಶ್ ನವನಿಗೆ ಹಣ ಕೊಡಲು ತನ್ನ ಪತಿ ಬರುತ್ತಾನೆ, ಅವರ ಬಳಿ ಬನ್ನಿರಿ ಅವನು ಯಕ್ಕಾಮಕ್ಕಾ ಬೈಯುವುದನ್ನು ನೋಡುತ್ತಾ ಮುಸಿ ಮುಸಿ ನಗುವವಳನ್ನು ನಗಲು ಬಿಟ್ಟು ತನ್ನ ಕೋಣೆಯಲ್ಲಿ ಸೇರುತ್ತಾಳೆ.   ಏಳು ವರ್ಷಗಳ ಜೀವನದಲ್ಲಿ ಅತ್ಯಂತ ಹಿಂಸೆಯುಕ್ತ, ಅನ್ಯಾಯಕ್ತ ದಿನಗಳನ್ನು ಇಲ್ಲಿ ಕಂಡಿದ್ದಾಳೆಂಬ ಅರಿವಿದೆ ಅವಳಿಗೆ.  ಗಂಡನೆಂಬುವ ವ್ಯಕ್ತಿತ್ವ ಸರಿಯಾಗಿಲ್ಲದ್ದಷ್ಟೆ ಅಲ್ಲದೆ ’ಇಷ್ಟಪಟ್ಟು ನೀನೇ ಬಂದೆ ನಾನೇನು ಮಾಡಲಿ ಸಹಿಸಿಕೋ’ ಎನ್ನುವ ಪಲಾಯನವಾದದವನ ಜೊತೆ ಎಷ್ಟು ವಾದ ಮಾಡಿಯಾಳು.

ತನ್ನ ತಂಗಿ ಸುಮಿತ್ರಳಿಗೆ ಮೂವತ್ತು ವರ್ಷವಾಗುತ್ತಾ ಬಂದಿತ್ತು, ತನಗಾದ ಅನ್ಯಾಯಗಳನ್ನು ಎದುರಿಸಲು ಪೋಲೀಸ್ ಸ್ಟೇಷನ್ ಹತ್ತಿದರೆ ಎಲ್ಲಿ ತನ್ನ ತಂಗಿಯ ಮದುವೆಗೆ ತೊಂದರೆಯಾಗುವುದೋ ಅನ್ನುವ ಮೃದು ದೋರಣೆ ಮತ್ತೊಂದು ಕಡೆ.  ಜಾತಕ ಕೇಳಿಸಿಕೊಂಡು ಬರುತ್ತಿದ್ದ ಅತ್ತೆ, ತನ್ನ ಮಗನಿಗೆ ಮತ್ತೊಂದು ಮದುವೆ ಆಗುವ ಯೋಗ ಇದೆ ಅಂತೆಲ್ಲಾ ಹೀಯಾಳಿಸುವುದನ್ನು ಕೇಳಿಯೂ ಕೇಳದೆ ತನ್ನ ಕನ್ನಡಿಯ ಮುಂದೆ ತನ್ನನ್ನೇ ಕಣ್ಣಾಡಿಸಿ ನೋಡಿದ್ದುಂಟು.  ಎಲ್ಲ ಇದ್ದರೂ ಗಂಡನ ಆಸಕ್ತಿಹೀಯ ಮನಸ್ಥಿತಿಯನ್ನು ಸರಿಪಡಿಸಲು ಆಗುತ್ತಿಲ್ಲ.  ಆತ ಬರುವಾಗಲೇ ಸಂಪೂರ್ಣವಾಗಿ ರಸ ತೆಗೆದ ಮಾವಿನ ಹಣ್ಣಿನ ಇಳಿಬಿದ್ದಿರುತ್ತದೆ ಅವನ ಸಾಮಾನು.  ಹೆಚ್ಚು ಒತ್ತಾಯಿಸಿದರೆ, ಬೇರೆ ಯಾರನ್ನಾದರೂ ನೋಡಿಕೋ ಎಂಬ ದೊಡ್ಡ ಮಟ್ಟದ ಹುನ್ನಾರಗಳನ್ನೆಲ್ಲಾ ಸೃಷ್ಠಿಸಿ ಮನಸ್ಸು ಕೆಡಿಸಿ ಕಣ್ಣೀರು ತರಿಸಿಬಿಡುತ್ತಿದ್ದ ಪಟಿಂಗ ಅವನು.  ಇಂದೂ ಅದೇ ಕನ್ನಡಿಯ ಮುಂದೆ ಅದೇ ಹಳೆ ಫೋಟೋಗಳ ನೆನಪು ತಂದುಕೊಂಡಳು.. ಮಗು ಅಂಗಾತವಾಗಿ ಮಲಗಿತ್ತು.. , ತನ್ನಿಂದ ಈ ಕಂದಮ್ಮನಿಗೆಂಥ ಕಷ್ಟಗಳು.. ಎದೆಕಿವುಚಿಕೊಂಡು, ಉಣ್ಣಲು ಮನಸ್ಸಿಲ್ಲದೆ ಮಲಗಿದಳು.  ಅವಳ ಗಂಡ ಬೆಳಗ್ಗೆ ಹತ್ತುಗಂಟೆ ಮೀರಿದರೂ ಬರಲೇ ಇಲ್ಲ.

ಮದ್ಯಾಹ್ನದ ಹೊತ್ತಿಗೆ ಇತ್ತ ಖಾಲಿಯಾದ ಹೆಂಡತಿ ವಿವರ ತಾಯಿಯಿಂದ ತಿಳಿದು ಬಂದು ಉಣ್ಣಲು ಕೂತವನಿಗೆ ನೂರು ಫೋನ್ ಮಾಡಿ, ರಿಂಗ್ ಆದರೂ ತೆಗೆಯುವೊಲ್ಲ.  ಕಡೆಗೊಮ್ಮೆ ತೆಗೆದಾಗ ’ರೀ, ಮೊನ್ನೆಯಷ್ಟೇ ೨೦ ಕೆ.ಜಿ. ಅಕ್ಕಿ ತಂದಿದ್ದೆ, ಅಲ್ಲೆ ಬಿಟ್ಟಿದ್ದೀನಿ, ಫ್ಲೀಸ್ ತಂದುಕೊಡ್ರಿ’ ಅಂದಾಗಲೂ, ನನ್ ಕೇಳಿ ಹೋಗಿದಿಯಾ? ನಾನಂತು ತಂದುಕೊಡಲ್ಲ.  ಹೋಗು ನಿಮ್ಮಪ್ಪನ ಹತ್ರ ತೆಗೆದುಕೊಂಡು ಬಾ’ ಅಂತ ಫೋನ್ ಕುಕ್ಕಿ ಇಟ್ಟ.

 

ಒಳಕಲ್ಲಲ್ಲಿ ತಲೆಇಟ್ಟು ಕನಿಕರ ಪಟ್ಟರೆ ಆಯಿತೇ?  ಮಾರನೆ ದಿನವೇ ಓಡಿಬಂದ ತಮ್ಮ ಮನೆಗೆ ಬೇಕಾದ ಸಣ್ಣ ಪುಟ್ಟ ಸಾಮಾನು ಹೊತ್ತು ತಂದು, ಮನೆಗೆ ಬೇಕಾದ ದಿನಸಿ, ಕುರ್ಚಿ ಹಾಸಿಗೆ ತಂದು ”ಧೈರ್ಯವಾಗಿರು ಅಕ್ಕ, ಭಾವ ಸರಿಹೋಗಬಹುದು, ದೇವರು ಇದ್ದಾನೆ’ ಎಂದು ಹೋದ.  ಇದರ ನಡುವೆ ಒಂದು ದಿನ ಕಛೇರಿಗೆ ಹೋದಾಗ ಬಳೆ ಕೊಟ್ಟು ಮರೆತೇ ಬಿಟ್ಟಳು.

ಕೆಲವು ತಿಂಗಳ ನಂತರ ಆರೋಗ್ಯ, ಅನಾರೋಗ್ಯ, ಅಂತೆಲ್ಲಾ ಇನ್ನಷ್ಟು ಸಮಸ್ಯೆ ಹಾಳಾಗಿಹೋಯ್ತು.  ಗಂಡ ಮರೆತ ಹೆಂಡತಿಯಾಗಿ ಮಗಳೊಂದಿಗೆ ಒಗ್ಗಿಕೊಂಡು ನಡೆಯುತ್ತಿರುವಾಗಲೇ, ಚಿನ್ನದ ಕಡಗ ನೆನಪಾಗಿದ್ದು.  ಅಷ್ಟು ಹೊತ್ತಿಗಾಗಲೇ ತಂಗಿಯ ಮದುವೆ ಮುಗಿದು, ತಾನು ಸಿಂಗಲ್ ಪೆರೆಂಟ್ ಆಗಿರುವುದನ್ನು ಒಪ್ಪಿ, ವಿಚ್ಛೆಧನಕ್ಕೆ ಮುಲಾಜಿಲ್ಲದೆ ಅರ್ಜಿ ಹಾಕಿ ಅಲೆಯುತ್ತಿದ್ದಳು ನೀತಾ..  ಇಷ್ಟು ದಿನ ಗಂಡನ ಬಗ್ಗೆ ಕೇಳುವವರಿಗೆಲ್ಲಾ ಸುಳ್ಳು ಹೇಳುವುದಕ್ಕೆ ಮುಜುಗರ ಪಡಬೇಕಾದ ಬಗ್ಗೆ ಅವಳಿಗೆ ಹಿಂಸೆಯಾಗುತ್ತಿದ್ದು ಅಷ್ಟಿಷ್ಟಲ್ಲ. ಏಕೆಂದರೆ ಓರ್ವ ಪುರುಷನಿಗೆ ಉದ್ಯೋಗವೇನೆಂದು ಕೇಳುವುದು ಸಹಜ, ಆದರೆ ಹೆಣ್ಣುಮಕ್ಕಳಿಗೆ ಅವಿವಾಹಿತರಿದ್ದರೆ ಗಂಡನ ಬಗ್ಗೆಗೂ, ವಿವಾಹಿತರಾಗಿದ್ದರೆ ಗಂಡನ ಬಗ್ಗೆಯೂ ವಿಷಯ ಕೇಳುವುದು ಒಂದು ರೀತಿ ಕಡ್ಡಾಯ ಎನ್ನುವಂತ ಪರಿಸ್ಥಿತಿ ಆಗಿದೆ.  ಅದೇ ಪುರುಷರಿಗೆ ಒಂದಲ್ಲ, ಎರಡಲ್ಲ, ಮೂರು ಮದುವೆಯಾದರೂ ಈ ಪ್ರಶ್ನೆ ಯಾರೂ ಕೇಳುವ ಮನಸ್ಸು ಮಾಡುವುದಿಲ್ಲ ಎಂಬ ಬಗ್ಗೆ ನೀತಾಳಿಗೆ ಕೋಪ ಭುಗಿಲೇಳುತ್ತಿತ್ತು.  ಇದೇ ಸಂದರ್ಭದಲ್ಲಿ ಸಿಂಗಲ್ ಪೇರೆಂಟ್ ಎನ್ನುವಾಗ ಜನ ಅವಳನ್ನು ಮೇಲಿಂದ ಕೆಳಗೆ ನೋಡಿ, ಯಾಕೆ?ಏನಾಯಿತು? ಅಂದಾಗಲಂತೂ ಇದಕ್ಕಿಂತ ’ಗಂಡ ಇದ್ದಾನೆ, ಅದೂ ಜೊತೆಗೆ ಇದ್ದಾನೆ, ಈಗಷ್ಟೇ ಡ್ರಾಪ್ ಮಾಡಿದ್ರಲ್ಲಾ ನೋಡ್ಲಿಲ್ವಾ?’ ಅನ್ನೋ ಸುಳ್ಳು ವಾಸಿ ಅನ್ನಿಸಿಬಿಡುತ್ತಿತ್ತು.

ಎಲ್ಲದರ ನಡುವೆ ಬಳೆ ವಿಚಾರ ಹೇಗೆ ಕೇಳುವುದು? ಆಕೆಯೂ ಮೈಸೂರಿನ ಹೆಬ್ಬಾಳ ಬಡಾವಣೆ ಬಳಿ ಅನ್ನೋ ವಿಳಾಸ ಹೇಳಿದ್ದಳು.  ಹೋಗಿ ಕೇಳಲು ಮನೆ ಮನಸ್ಸು ಎಲ್ಲವೂ ಹಾಳಾಗಿ,ಏನನ್ನೂ ಎದುರಿಸದೆ ಎದೆಗುಂದಿದಂತಹ ಪರಿಸ್ಥಿತಿಗಳಿದ್ದವು.  ಎಲ್ಲವನ್ನೂ ಮೀರಿ ಬದುಕುವುದೇ ಕಷ್ಟವಾಗಿತ್ತು.  ಅದೊಂದು ದಿನ ಕುಡಿದ ಗಂಡನೇ ತನ್ನ ತಾಯೊಂದಿಗೆ ಹೇಳುತ್ತಿದ್ದ ಮಾತು ನೆನಪಾಯಿತು.  ಮೊಲೆ ಕುಡಿಸುತ್ತಾ ಮಗು ಮಲಗಿಸಿಕೊಂಡು ಕಾರ್ ಹಿಂಭಾಗದ ಸೀಟಿನಲ್ಲಿ ಹಾಗೆ ಕಣ್ರೆಪ್ಪೆ ಮುಚ್ಚಿದ್ದಳಷ್ಟೇ.. ’ನನ್ನ ಹೆಂಡತಿ ಎಲ್ಲದರಲ್ಲೂ ತುಂಬಾ ಒಳ್ಳೆಯವಳು,ಆದರೆ ಅವಳು ಬಾಡಿ ಬಿಡದ ಹಾಗೆ ಎಲ್ಲಾದರೂ ಬೀಗ ಹಾಕಿಸಿಬರುವೆ’.  ತೀರಾ ಮೌಡ್ಯದ ಮಾತಾಡುವ ಗಂಡನನ್ನು ತಮಾಶೆಗೆ ಎಂದು ತಿಳಿದುಕೊಂಡು ಉದಾಸೀನ ಮಾಡಿದ್ದು ಮಗುವಿಗಿನ್ನು ವರ್ಷ ಕಳೆದಿರದ ಸಂದರ್ಭದಲ್ಲಿ.

ಆತ ಎಲ್ಲವನ್ನೂ ಮುಚ್ಚಿಡಲು ನೋಡಿದ, ಗಂಡುಹೆಣ್ಣಿನ ನಡುವೆ ಇರಬೇಕಾದ ಸಹಜ ದಾಂಪತ್ಯ ಬಂಧವನ್ನು ಹತ್ತಿಕ್ಕಿದ್ದ.  ಸುಮ್ಮನೆ ಇದ್ದರೆ ಇರು, ಇಲ್ಲವೇ ಹೊರಡು ಎಂದು ನಡುರಾತ್ರಿ ಹೊಡೆಯಲೂ ಬಂದಿದ್ದ.  ಅದೇಗೋ ನೀತಾ ಧೈರ್ಯದಿಂದ ಕೈಯೆತ್ತಿದಾಗ, ಅಲ್ಲಿಂದ ಮಗುವನ್ನು ಮಂಚದ ಮೇಲಿಟ್ಟು ಹೊರಟುಹೋಗಿದ್ದ.  ಮತ್ತೊಂದು ದಿನ ಕಛೇರಿಗೆ ಹೊರಡುವ ಆತುರದಲ್ಲಿ ಐರನ್ ಮಾಡುತ್ತಿದ್ದ ಪ್ರಾಣಿ, ಸ್ನಾನದ ಮನೆಯಲ್ಲಿದ್ದ ನೀತಾಳನ್ನು ಬಾಗಿಲು ಹೊಡೆದು ಸುಡಲು ಬಂದಿತ್ತು.  ಬಹಳ ನೋವಾಗಿ ಮೂರು ದಿನ ಮನೆಯ ಕೋಣೆಯಿಂದ ಹೊರಗೆ ಬರದೆ ಸುಮ್ಮನಿದ್ದಳು. ಮನೆಯ ಸುತ್ತಮುತ್ತಲಿನವರೆಲ್ಲರೂ ’ಗಂಡ ಅಲ್ವಾ ಹೊಡಿತಾನೆ, ಗಂಡ-ಹೆಂಡ್ತಿ ನಡುವೆ ಸಾವಿರ ಬರುತ್ತೆ’ ಅಂತೆಲ್ಲಾ ಮಾತಾಡಿಕೊಳ್ತಾ ಇದ್ದದ್ದು ಹಿಂಭಾಗದಲ್ಲಿ ಬಟ್ಟೆ ಒಣಗಿಸುವಾಗ ಇವಳ ಕಿವಿಗೂ ಬೀಳದಿರಲಿಲ್ಲ.

ಎಲ್ಲದರ ನಡುವೆ ಜೀವ ಗಟ್ಟಿ ಇರಿಸಿದ್ದು ತನ್ನಕೂಸಿಗಾಗಿ ಅನ್ನುವುದು ತವರು ಮನೆಗೂ ಗೊತ್ತು.  ದಿನ ಅದೆಷ್ಟು ವೇಗವಾಗಿ ಮಿಂಚಿನಂತೆ, ಕೆಲವೊಮ್ಮೆ ಮಾರುತದಂತೆ ಹಾರಿಹೋಗುತ್ತವೆ ಗೊತ್ತೇನು.  ಕೆಲವು ಫೋನ್ ಕರೆ, ವಾಟ್ಸಪ್ ಸಂದೇಶ ಯಾವುದಕ್ಕೂ ಜಗ್ಗದ ಪಿಂಕಿ, ನೀತಾಳ ಬಳೆ ನಾನು ನೋಡಿಯೇ ಇಲ್ಲ, ಅವಳು ಏನನ್ನು ಕೊಟ್ಟಿಲ್ಲ’ ಅಂತ ಸುಳ್ಳು ಹೇಳಿ ಹಾರಿಕೆ ಉತ್ತರ ನೀಡಿದ್ದಳು.  ಇದನ್ನು ಅವಳ ಜೊತೆಗಿದ್ದ ಜುನೆದ್ ಸಹ ಒಪ್ಪುವಂತೆಯೇ ’ನನಗಂತೂ ಏನೇನೂ ಗೊತ್ತಿಲ್ಲ’ ಅಂತ ತನ್ನ ಉದ್ಯೋಗ ಎಲ್ಲಿ ಕಿತ್ತುಹೋಗುತ್ತೋ ಎಂದು ಸಂಪೂರ್ಣ ಸುಳ್ಳು ಹೇಳುತ್ತಾ ಕಂಪನಿಯವರಿಗೆ ಮಾಹಿತಿ ನೀಡಿದ್ದ.  ವಿಧಿಇಲ್ಲದೆ ತನ್ನ ಕಂಪನಿಯಲ್ಲಿದ್ದ ಸಹಾಯವಾಣಿಗೆ ದೂರು ನೀಡಿ ಮಾಜಿ ನೌಕರ ಪಿಂಕಿ, ಹಾಲಿ ನೌಕರ ಜುನೆದ್ ಇಬ್ಬರೂ ಸೇರಿ ತನ್ನ ಒಂದೂವರೆ ಲಕ್ಷದ ಬಳೆ ತೆಗೆದುಕೊಂಡಿದ್ದು, ಇದರ ವಿಚಾರಣೆ ಮಾಡಿ ನ್ಯಾಯಕೊಡಿಸಲು ಮಿಂಚಂಚೆ ಕಳಿಸಿಕೊಟ್ಟಳು.  ನೀವು ಕಾಂಟ್ರ್ಯಾಕ್ಟ್ ನವರು, ನಾವು ನೇರವಾಗಿ ನೌಕರಿಗೆ ಸೇರಿದವರಲ್ಲ ಆದ್ದರಿಂದ ನಿಮ್ಮ ಕಾಂಟ್ರ್ಯಾಕ್ಟ್ ನವರನ್ನೇ ಕೇಳಿಕೊಳ್ಳಿ ಎಂದು ಕಂಪನಿ ಕೈತೊಳೆದುಕೊಂಡಿತು.

ಒಂದು ನ್ಯಾಯಕ್ಕೆ ಒಂದು ಸತ್ಯಕ್ಕೆ ತಾನೆ ನಾವು ಬದುಕಬೇಕು, ಎಲ್ಲೆಡೆ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು  ದೂರು ವಿಭಾಗದ ಅಮೆರಿಕೆಯಲ್ಲಿ ಮಿಂಚಂಚೆ ಕಳಿಸಿ ಕಂಪನಿಯೇ ನೇರವಾಗಿ ವಿಚಾರಣೆ ಮಾಡುವಂತೆ ಜನಾಭಿಪ್ರಾಯ ಸಂಗ್ರಹಿಸುವ ಪೋಸ್ಟ್ ಹಾಕಿ ಶೇರ್ ಮಾಡಿದ್ದಳು.  ಆದರೆ ಜುನೆದ್ ಮತ್ತೆ ಸುಳ್ಳು ಹೇಳಿದ, ಪಿಂಕಿ ಅದನ್ನೇ ಮತ್ತೆ ಗೊತ್ತಿಲ್ಲ ಅಂದಳು.  ’ಸುಮಾರು ಎರಡು ಗಂಟೆ ಕಾಲ ಕಥೆಯ ವಿಚಾರಣೆಯಾಯಿತು ನೀತಾಳು ಎಲ್ಲವನ್ನು ವಿವರಿಸಿದಳು.  ಆದರೆ ಮರಳಿ ಪ್ರಶ್ನೆ, ನ್ಯಾಯಕ್ಕೆ ನಿಲ್ಲುವವರೇ ಕುಸಿಯುವಂತೆ ಪ್ರಶ್ನೆ, ಸತತ ಎರಡು ವರ್ಷಗಳು ಏಕೆ ಸುಮ್ಮನಿದ್ದಿರಿ? ಆಗ ಅನಿವಾರ್ಯವಾಗಿ ತಾನು ಸಿಂಗಲ್ ಪೇರೆಂಟ್, ಜೊತೆಗೆ ವೈವಾಹಿಕ ಬದುಕು ಹಿತಕರವಿರಲಿಲ್ಲ ಎಂಬ ಕಾರಣಗಳನ್ನು ನೀಡಲೇಬೇಕಾಗಿತ್ತು.

ಸರಿ, ಇಷ್ಟಾದರೂ ಪೋಲೀಸರಿಗೆ ದೂರು ನೀಡಿ ಚಿನ್ನದ ಒಡವೆಯ ಮೂಲ ರಶೀತಿ, ಬಳೆಯ ಫೋಟೋ, ಎಲ್ಲವನ್ನು ನೀಡಿದರೂ ಪಿಎಸ್ ಐ ಕತೆ ಹೇಳುತ್ತಿದ್ದರು. ಅದರಲ್ಲಿ ಅವರ ಪಾತ್ರವೊಂದು ಜಾತಿನಿಂದನೆ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡು ಬೇಲ್ ಮೇಲೆ ಹೊರಬಂದಿದ್ದು, ಹೆಚ್ಚು ರಿಸ್ಕ್ ತಗೊಳ್ಳಲು ಆಗದೆಂದು, ಮತ್ತೆ ಎರಡು ವರ್ಷಗಳ ಹಿಂದಿನ ಘಟನೆಗೆ ನಮ್ಮಲ್ಲಿ ಏನೂ ಮಾಡಲಾಗದು’ ಎಂಬ ವಾದಗಳು ಕೇಳಿಬಂದವು.  ಎಫ್ ಐ ಆರ್ ನೊಂದಣಿ ಮಾಡಲು ಸಹ ಹಿಂಜರಿದು ಕೇಸ್ ಸಹ ಆಗದೆ ಮುಚ್ಚಿಹೋಗಿತ್ತು.

ನೀತಾ ಘಟನೆ ನಡೆದ ದಿನದಂದು ಕಛೇರಿಯ ರಿಜಿಸ್ಟ್ರರ್ ಸಹಿ ಮಾಡಿಲ್ಲ ಎಂದಿದ್ದರೂ ಅದೇ ದಿನದ ಇಮೇಲ್ ಗಳು ಕಂಪನಿ ನೀಡಿದ್ದ ಸಿಸ್ಟಂ ನಿಂದ ಕಳಿಸಿದ್ದುವೇ ಎಂದು ಐಟಿಯವರಿಂದ ಒಂದು ಅಧಿಕೃತ ಪತ್ರ ತೆಗೆದುಕೊಳ್ಳಿರಿ ಎಂದು ಒತ್ತಾಯಿಸಿದ್ದರೂ ಸಹ, ’ಅಂದು ನೀತಾ ಕಛೇರಿಯ ರಿಜಿಸ್ಟ್ರರ್ ಸಹಿ ಮಾಡಿಲ್ಲ’ ಎಂಬ ದಾಖಲೆಗಳು ಹುಟ್ಟಿಕೊಂಡವು.   ’ಎಲ್ಲರೂ ಒಳ್ಳೆಯವರೇ ಏನ್ ಮಾಡ್ತೀರಿ? ನೀವು ತುಂಬಾ ತಡವಾಗಿ ದೂರು ನೀಡಿದ್ರಿ’  ವಿಚಾರಣೆಗೆ ಕೂತ ಪಿಂಕಿ, ಕಾಲ ಮೇಲೆ ಕಾಲ್ ಹಾಕಿಕೊಂಡು ’ನಮ್ಮಪ್ಪ ಕಾಂಟ್ರ್ಯಾಕ್ಟರ್, ನನ್ನ ತಂಗಿ ಆರ್ ಬೈ ಐ ನಲ್ಲಿ ಕೆಲಸ ಮಾಡ್ತಾಳೆ, ತಮ್ಮ ಇಂಜಿನಿಯರಿಂಗ್ ಓದ್ತಾ ಇದ್ದಾನೆ. ನನ್ನ ಮದ್ವೆ ಶಾದಿ ಡಾಟ್ ಕಾಮ್ ನಲ್ಲಿ ಫಿಕ್ಸ್ ಆಗಿದೆ, ಅದೂ ಇಂಜಿನಿಯರ್ ಜೊತೆಗೆ. ನಂಗೆ ಮದ್ವೆಲಿ ನಮ್ಮಪ್ಪನ ಮನೆಯವರು ೧೫೦ಗ್ರಾಮ್ ಚಿನ್ನ ಕೊಡ್ತಾರೆ. ನಂಗ್ಯಾಕೆ ಇನ್ನೊಬ್ಬರದು.’  ಪಿಂಕಿಯ ಮಾತು ಮುಗಿಯುವ ಮೊದಲೇ, ಅವಳ ಹಿಂದೆ ಬಂದಿದ್ದ ಅವಳ ತಾಯಿ ಹೇಳ್ತಾರೆ ’ ನಾನು ಎಲ್ಲಿಗೆ ಬೇಕಾದರೂ ಬಂದು ಸತ್ಯ ಮಾಡ್ತೀನಿ, ನಮಗೇನೂ ಅಂಥದ್ದು ಬುದ್ಧಿ ಇಲ್ಲ.  ನಮ್ಮ ಮಕ್ಕಳಿಗೆ ಒಳ್ಳೆ ಬುದ್ಧಿ ಇರೋದು.’  ಜುನೇದ್ ಪದೇ ಪದೇ ಹೇಳಿದ್ದು, ’ನಾನು ಕಂಪನಿ ಎಂಪ್ಲಾಯಿ, ನಂಗೇನೂ ಗೊತ್ತಿಲ್ಲ. ನನ್ನ ನಂಬಿ.’

ಕಡೆಗೆ? ಎರಡೇ ತಿಂಗಳಲ್ಲಿ ನಿಮ್ಮ ಕಾಂಟ್ರ್ಯಾಕ್ಟ್  ನವೀಕರಣವಾಗದು ಎನ್ನುವ ಸಂದೇಶ ಬಂದಿತ್ತು, ಅದರರ್ಥ, ತಾನು ಕಾಂಟ್ರ್ಯಾಕ್ಟ್ ಆದಾರದ ಮೇಲೆ ಸೇರಿದ್ದರಿಂದ ಎದುರಿನಲ್ಲಿ ಏನೂ ಹೇಳದೆ, ಮೂರು ದಿನಕ್ಕೆ ಮೊದಲು ಇನ್ನು ನಿಮ್ಮ ಕಾಂಟ್ರ್ಯಾಕ್ಟ್ ನವೀಕರಣ ಆಗದು ಎಂದು ಮನೆಗೆ ಕಳಿಸಿದರು.  ಇತ್ತ ಕಡೆ ಹತ್ತು ವರ್ಷಗಳಿಂದ ಕತ್ತೆ ದುಡಿಮೆ ಮಾಡಿ ಒಂದೇ ಸಂಬಳಕ್ಕೆ ಕೆಲಸ ಮಾಡಿದ್ದರ ಬೆಲೆಯೂ ಕಂಪನಿಗೆ ಮುಖ್ಯವಾಗಲಿಲ್ಲ. ಅದೇ ಜುನೇದ್ ನೋಡಿ, ಆತ ಎರಡು ವರ್ಷಗಳಿಂದ ಇದ್ದರೂ ನಡುವೆ ಮತ್ತೊಂದು ಕಂಪನಿಗೆ ಹೋಗಿ ಮರಳಿ ಎಲ್ಲೂ ಸಲ್ಲದೆ ವಾಪಸ್ಸು ಬಂದವ.  ಸುಳ್ಳು ಹೇಳಿದ್ದ ಜುನೇದ್ ನನ್ನು ನಂಬುವ ಕಂಪನಿ ಹಲವು ವರ್ಷಗಳಿಂದ ದುಡಿದಿದ್ದ ಕಾಂಟ್ರ್ಯಾಕ್ಟ್ ಆದಾರದಲ್ಲಿದ್ದ ಪಿಂಕಿಯನ್ನು ನಂಬಲೇ ಇಲ್ಲ.  ಜುನೇದ್ ಅವರದ್ದು ಎಪ್ಪತ್ತು ಸಾವಿರ ತಿಂಗಳ ಗಳಿಕೆ, ತಾಯಿಯದು ಮಿಲಿಟರಿ ಆಫೀಸಿನಲ್ಲಿ ಉದ್ಯೋಗ, ಅವರಿಗೆ ನೀಡಿದ ಕ್ವಾಟ್ರಸ್ ನಲ್ಲೇ ಜುನೇದ್ ವಾಸ, ಖರ್ಚಿಲ್ಲದ ಕುಟುಂಬ. ನೀತಾಳದ್ದು ಕಡಿಮೆ ಸಂಬಳ, ಆದರೆ ಮೈತುಂಬಾ ಸಾಲಗಳು.  ಆದರೂ ಕೈಲಿದ್ದ ಕೆಲಸವೂ ಹಠಾತ್ತಾನೆ ಕೈಬಿಟ್ಟುಹೋಯ್ತು.

ತನಗೆ ಸುಮ್ಮನೆ ಚಿನ್ನದ ಬಳೆ ವಾಪಾಸ್ಸು ಕೊಡಿ ಎಂದು ಫೋನ್ ಮೂಲಕ ಹೆದರಿಸುತ್ತಿದ್ದಾರೆ, ತೊಂದರೆ ನೀಡುತ್ತಿದ್ದಾರೆ’ ಎಂದು ಮೈಸೂರಿನ ವಿಜಯನಗರ ಠಾಣೆಯಲ್ಲಿ ಪಿಂಕಿ ಮರ್ಯಾದಸ್ಥೆಯಂತೆ ದೂರು ನೀಡಲು ಹೋದಾಗ, ಅದನ್ನು ಕಣ್ಣಿಗೊತ್ತಿಕೊಂಡ ಪೋಲೀಸರು ಅದೆಷ್ಟು ಪೀಕಿಕೊಂಡರೂ(?) ಒಂದು ಪೆಟ್ಟಿಕೇಸ್ ನೊಂದಾಯಿಸಿಕೊಂಡಿದ್ದರು.  ಇತ್ತ ಕೈಯಿಂದ ಪಡೆದುಕೊಂಡಿದ್ದ ಚಿನ್ನದ ಬಳೆಯೂ ಇಲ್ಲ, ಕೈಲಿದ್ದ ನೌಕರಿಯೂ ಇಲ್ಲ.  ಎಲ್ಲಾ ಸಖಿ ಸಹವಾಸ!

1 Response

  1. Sandeep Eshanya says:

    Excellent….mysuruuuuu katheya baagave agide nodi adu ista aithu

Leave a Reply

%d bloggers like this: