ಭಿಕ್ಷುಕನೊಳಗೊಬ್ಬ ತಂದೆ..

 

 

 

 

ಮಣಿಕಾಂತ್

( ಜಿಎಂಬಿ ಆಕಾಶ್ ಅವರ ಬರಹದ ಭಾವಾನುವಾದ)

ನೀವೀಗ ಓದಲಿರುವುದು, ಕೌಸರ್ ಹುಸೇನ್ ಎಂಬಾತನ ಕಥೆ.

ಅವನೊಳಗಿರುವ ಒಬ್ಬ ಜವಾಬ್ದಾರಿಯುತ ತಂದೆ, ವಿಧಿಯಾಟದಿಂದ ನಲುಗಿದ ಶ್ರೀಸಾಮಾನ್ಯ ಹಾಗೂ ಅಸಹಾಯಕ ಭಿಕ್ಷುಕ… ಈ ಮೂರು ಬಗೆಯ ವ್ಯಕ್ತಿತ್ವದ ಪರಿಚಯ ಆಗುವುದು ಈ ಬರಹದ ವೈಶಿಷ್ಟ್ಯ.

ಒಂದು ಕಾಲದಲ್ಲಿ ಕೌಸರ್ ಹುಸೇನ್ ಕೂಡ ಉಳಿದೆಲ್ಲರಂತೆಯೇ ಇದ್ದ. ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಅವನದು ಚಿಕ್ಕ- ಚೊಕ್ಕ (ಹೆಂಡತಿ, ಮಗ, ಮಗಳು) ಕುಟುಂಬ.ಅದೊಂದು ರಾತ್ರಿ, ಈತ ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದಾಗ, ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಯಿತು. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ- ಹುಸೇನ್‍ನ ಬಲಗೈ ತೋಳಿನವರೆಗೂ ತುಂಡಾಗಿ ಹೋಗಿತ್ತು. ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದರೆ, ಆಪತ್ಕಾಲಕ್ಕೆಂದು ಕೂಡಿಟ್ಟಿದ್ದ ಹಣವೆಲ್ಲಾ ಖರ್ಚಾಗಿ ಹೋಯಿತು. ಹಿಂದೆಯೇ, ಶಾಶ್ವತ ಅಂಗವೈಕಲ್ಯವೂ ಜೊತೆಯಾಯಿತು. ಇಷ್ಟಾದ ಮೇಲೆ, ಕುಟುಂಬವನ್ನು ಸಾಕುವ ಜವಾಬ್ದಾರಿಯಿತ್ತಲ್ಲ; ಅದಕ್ಕಾಗಿ ಹುಸೇನ್ ಭಿಕ್ಷೆ ಬೇಡಲು ಆರಂಭಿಸಿದ!

ಇಂಥ ಹಿನ್ನೆಲೆಯ ಕೌಸರ್ ಹುಸೇನ್, ತಿಂಗಳುಗಳ ಹಿಂದೆ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಖುಷ್‍ಖುಷಿಯಿಂದ ಒಂದು ಪಾರ್ಕಿನಲ್ಲಿ ಅಡ್ಡಾಡುತ್ತಿದ್ದ ದೃಶ್ಯವನ್ನು ಬಾಂಗ್ಲಾದೇಶ ಮೂಲದ ಹವ್ಯಾಸಿ ಛಾಯಾಗ್ರಾಹಕ ಜಿ.ಎಂ.ಬಿ. ಆಕಾಶ್ ನೋಡಿದ್ದಾರೆ. ಈ ಅಪ್ಪ- ಮಗಳ ಖುಷಿಯ ಹಿಂದೆ ಏನೋ ಮಹತ್ತರ ಕಾರಣವಿರಬೇಕು ಎಂದು ಅವರಿಗೆ ಅನ್ನಿಸಿದೆ. ತಕ್ಷಣವೇ ಕೌಸರ್‍ನ ಬಳಿಗೆ ಹೋಗಿ ತಮ್ಮ ಪರಿಚಯ ಹೇಳಿಕೊಂಡಿದ್ದಾರೆ. ಚಕಚಕನೆ ಹತ್ತಾರು ಫೋಟೋ ಕ್ಲಿಕ್ಕಿಸಿದ್ದಾರೆ. ನಂತರ- `ಅಣ್ಣಾ, ನಿನ್ನ ನಗೆಯ ಹಿಂದೆ ಯಾವುದೋ ನೋವು ಮಡುಗಟ್ಟಿದೆಯೇನೋ ಅಂತ ಅನ್ನಿಸುತ್ತಿದೆ. ಬೇಸರವಿಲ್ಲ ಅನ್ನುವುದಾದ್ರೆ ನಿನ್ನ ಕಥೇನ ಹೇಳಿಕೋ’ ಅಂದಿದ್ದಾರೆ. ಆಗ, ಹುಸೇನ್ ಹೇಳಿಕೊಂಡ ಮಾತುಗಳಿವು:

`ಆಕ್ಸಿಡೆಂಟ್ ಆಗುವವರೆಗೂ ನಾನೂ ಉಳಿದೆಲ್ಲರಂತೆಯೇ ಆರಾಮಾಗಿದ್ದೆ. ಆದರೆ, ಆಕ್ಸಿಡೆಂಟ್ ಆಗಿದ್ದೇ ನೆಪ, ಕೇವಲ ಮೂರೇ ತಿಂಗಳಲ್ಲಿ ನನ್ನ ಹಣೆಬರಹವೇ ಬದಲಾಗಿ ಹೋಯಿತು. ಕೈ ಇಲ್ಲ ಎಂಬ ಕಾರಣಕ್ಕೆ ಮಾಲೀಕರು ನೌಕರಿಯಿಂದ ತೆಗೆದು ಹಾಕಿದರು. ಮಕ್ಕಳಿಬ್ಬರೂ ಸಣ್ಣವರು. ಅವರನ್ನು ಮನೆಯಲ್ಲಿ ಬಿಟ್ಟು ಹೆಂಡತಿ ಕೆಲಸಕ್ಕೆ ಹೋಗಲು ಸಾಧ್ಯವಿರಲಿಲ್ಲ. ಜೊತೆಗೆ ನನ್ನ ಹೆಂಡತಿ ವಿದ್ಯಾವಂತಳೂ ಅಲ್ಲ. ಕುಟುಂಬವನ್ನು ಸಾಕಲೇಬೇಕಲ್ಲ; ಅದಕ್ಕಾಗಿ ಭಿಕ್ಷಾಟನೆಯೊಂದೇ ನನಗಿದ್ದ ದಾರಿ. ಬಸ್ ನಿಲ್ದಾಣದಲ್ಲಿ, ಸಿಗ್ನಲ್‍ಗಳಲ್ಲಿ ನಿಂತು ಭಿಕ್ಷೆ ಬೇಡಿದೆ. ಹೀಗಿರುವಾಗಲೇ ಅಂಥದೊಂದು ಯೋಚನೆ ಯಾಕೆ ಬಂತೋ ಗೊತ್ತಿಲ್ಲ; ನನ್ನ ಮಗಳಿಗೆ ಒಂದು ಹೊಸಾ ಡ್ರೆಸ್ ತಗೋಬೇಕು ಅನ್ನಿಸಿಬಿಡ್ತು.

 

ಐದಾರು ದಿನಗಳ ನಂತರ, ನನ್ನಲ್ಲಿದ್ದ ಚಿಲ್ಲರೆಯನ್ನೆಲ್ಲಾ ಒಟ್ಟು ಮಾಡಿಕೊಂಡು ಒಂದು ಬಟ್ಟೆ ಅಂಗಡಿಗೆ ಹೋದೆ. ನನ್ನಲ್ಲಿದ್ದ ಅಷ್ಟೂ ಹಣವನ್ನು ಶಾಪ್‍ನ ಓನರ್ ಮುಂದೆ ಸುರಿದು- ಒಂದು ಫ್ರಾಕ್ ಬೇಕಿತ್ತು; ನನ್ನ ಮಗಳಿಗೆ… ಅಂದೆ. ಆ ಶಾಪ್ ಓನರ್, ಒಮ್ಮೆ ನನ್ನನ್ನೇ ದುರುಗುಟ್ಟಿಕೊಂಡು ನೋಡಿ ಅಬ್ಬರಿಸಿದ: `ಭಿಕ್ಷುಕ ಅಲ್ವೇನೋ ನೀನು? ಈ ಚಿಲ್ರೆ ದುಡ್ಡಿಗೆಲ್ಲಾ ಫ್ರಾಕ್ ಬರುತ್ತೆ ಅಂದ್ಕೊಂಡಿದೀಯ? ಫ್ರಾಕ್ ಬೇಕು ಅಂದ್ರೆ ಕೈತುಂಬಾ ನೋಟು ತರಬೇಕು. ನಡಿ ಆಚೆ…’ ಎಂದು ನೂಕಿಬಿಟ್ಟ. ಅವತ್ತು, ನನ್ನ ಮಗಳೂ ಜೊತೆಗಿದ್ದಳು. ಆ ಮಾರ್ವಾಡಿಯ ಮಾತು ಕೇಳಿ ಜೋರಾಗಿ ಅಳಲು ಆರಂಭಿಸಿದಳು. ನಾನವತ್ತು ತಿರುಗಿ ಮಾತಾಡಲು ಆಗದಷ್ಟು ಬಡವನಾಗಿದ್ದೆ. ಮಗಳನ್ನು ಸಮಾಧಾನ ಮಾಡಿ, ಮೌನವಾಗಿಯೇ ಅಲ್ಲಿಂದ ಹೊರಬಂದೆ.

ಮಗಳಿಗೆ ಹೊಸ ಬಟ್ಟೆ ಕೊಡಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು, ಬಟ್ಟೆ ಖರೀದಿಸಲೇಬೇಕು ಎಂಬ ಹಠ ಅವತ್ತೇ ಜೊತೆಯಾಗಿಬಿಡ್ತು. ಅಂದಿನಿಂದ, ಭಿಕ್ಷೆ ಬೇಡಿದ ಹಣದಲ್ಲೇ ಚೂರುಪಾರು ಕೂಡಿಡಲು ಆರಂಭಿಸಿದೆ. ಹೀಗೇ ಎರಡು ವರ್ಷ ನಡೆಯಿತು. ಕಡೆಗೆ ಉಳಿತಾಯ ಮಾಡಿದ್ದ ದುಡ್ಡನ್ನೆಲ್ಲ ಇಟ್ಟುಕೊಂಡು, ಮಗಳನ್ನೂ ಕರೆದುಕೊಂಡು ಬಟ್ಟೆ ಅಂಗಡಿಗೆ ಹೋದೆ. ನನ್ನ ಬಳಿ ತುಂಬಾ ಹಳೆಯದಾಗಿದ್ದ 5 ರುಪಾಯಿಯ 60 ನೋಟುಗಳಿದ್ದವು. ಜೊತೆಗೇ ಚಿಲ್ಲರೆ ಕಾಸು. ಅದನ್ನು ನೋಡುತ್ತಿದ್ದಂತೆಯೇ ಆ ಶಾಪ್‍ನ ಓನರ್ ತಿರಸ್ಕಾರದಿಂದ- `ನೀನು ಭಿಕ್ಷುಕ ಅಲ್ವ? ನಿನಗೇನು ಬೇಕೋ?’ ಅಂತ ಕೇಳಿದ. ಅಲ್ಲಿಯೇ ಕುಳಿತಿದ್ದ ನನ್ನ ಮಗಳು, `ಅಪ್ಪಾ, ನಂಗೆ ಬಟ್ಟೆ ಬೇಡ. ಮನೆಗೆ ಹೋಗಿಬಿಡೋಣ ಬಾ’ ಎಂದು ಅಳಲು ಶುರು ಮಾಡಿದಳು. ಅವಳಿಗೆ ಸಮಾಧಾನ ಹೇಳಿದೆ.

ನಂತರ ಶಾಪ್ ಓನರ್‍ನ ಎದುರುನಿಂತು, ಸಂಕ್ಷಿಪ್ತವಾಗಿ ನನ್ನ ಬದುಕಿನ ಕಥೆ ಹೇಳಿದೆ. `ಸರ್, ನಾನು ಭಿಕ್ಷುಕ ನಿಜ. ಆದರೆ,ಭಿಕ್ಷೆ ಹಾಕಿ ಅಂತ ಯಾವತ್ತೂ ಒತ್ತಾಯ ಯಾರಿಗೂ ಮಾಡಿಲ್ಲ. ಅಮ್ಮಾ/ಅಯ್ಯಾ ಭಿಕ್ಷೆ ಅಂದಿದ್ದೇನೆ ನಿಜ. ಈ ವೃತ್ತಿಯಲ್ಲಿ ಹಾಗೆ ಅನ್ನಬೇಕಾದ ಅನಿವಾರ್ಯತೆಯಿದೆ. ಈಗ ನಿಮ್ಮಲ್ಲಿ ಕೂಡ ಯಾವುದೇ ರಿಯಾಯಿತಿ ಕೇಳುತ್ತಿಲ್ಲ. ನಾನು ತಂದಿರುವಷ್ಟು ದುಡ್ಡಿಗೆ ನನ್ನ ಮಗಳಿಗೆ ಆಗುವಂಥ ಫ್ರಾಕ್ ಇದ್ದರೆ ಕೊಡಿ ಎಂದಷ್ಟೇ ಕೇಳುತ್ತಿದ್ದೇನೆ’ ಎಂದೆ.

ಈ ಮಾತು ಆ ವ್ಯಾಪಾರಿಯ ಮರ್ಮಕ್ಕೆ ತಾಗಿತೇನೋ; ಅವನು ಮರುಮಾತನಾಡದೆ ಬಟ್ಟೆಯನ್ನು ಪ್ಯಾಕ್ ಮಾಡಿಕೊಟ್ಟ. ಅದೇ ಅಂಗಡಿಯಲ್ಲಿ ನನ್ನ ಮಗಳ ಡ್ರೆಸ್ ಚೇಂಜ್ ಮಾಡಿದೆ. ನಮ್ಮ ನೆರೆಮನೆಯವರನ್ನು ಕಾಡಿ ಬೇಡಿ, ಅವರ ವೊಬೈಲ್ ತಗೊಂಡು ಬಂದಿದೀನಿ. ಹೊಸ ಬಟ್ಟೆ ಹಾಕ್ಕೊಂಡು ನನ್ನ ಮಗಳು ಖುಷಿಪಡುತ್ತಾಳಲ್ಲ; ಆ ಕ್ಷಣಗಳನ್ನೆಲ್ಲ ವೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಬೇಕು ಅನ್ನೋದು ನನ್ನಾಸೆ. ಅದೇ ಕಾರಣದಿಂದ ಮಗಳನ್ನು ಪಾರ್ಕ್‍ಗೆ ಕರ್ಕೊಂಡು ಬಂದಿದೀನಿ.

ನನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಅಂತಲೂ ಆಸೆಯಿದೆ.   ಆದ್ರೆ ಏನ್ಮಾಡೋದು ಹೇಳಿ? ಮಕ್ಕಳಿಗೆ ಬುಕ್- ಪೆನ್ ತೆಗೆದುಕೊಡುವಷ್ಟು ಶಕ್ತಿ ನನಗಿಲ್ಲ. ಎಷ್ಟೋ ಬಾರಿ, ಫೀಸ್ ಕಟ್ಟಲಿಲ್ಲ ಎಂಬ ಕಾರಣ ಹೇಳಿ ನನ್ನ ಮಕ್ಕಳನ್ನು ಸ್ಕೂಲ್‍ನಿಂದ ಹೊರಗೆ ನಿಲ್ಲಿಸ್ತಾರಂತೆ. ಆಗೆಲ್ಲಾ ಮಕ್ಕಳು- `ಅಪ್ಪಾ, ಫೀಸ್ ಕಟ್ಟಿಲ್ಲ ಅಂತ ಇವತ್ತು ಸ್ಕೂಲಲ್ಲಿ ಆಚೆ ನಿಲ್ಲಿಸಿದ್ರು/ ಎಕ್ಸಾಂ ಹಾಲ್‍ನಿಂದ ಆಚೆ ಕಳಿಸಿಬಿಟ್ರು’ ಎಂದೆಲ್ಲಾ ದುಃಖದಿಂದ ಹೇಳ್ತಾರೆ. ಆಗೆಲ್ಲಾ ತುಂಬಾ ಸಂಕಟ ಆಗುತ್ತೆ. ಅದನ್ನೇನೂ ತೋರಗೊಡದೆ-`ಪರೀಕ್ಷೆ ತಪ್ಪಿ ಹೋಯ್ತು ಅಂತ ಕಂಗಾಲಾಗಬೇಡಿ. ಬದುಕು ಎಂಬ ಪರೀಕ್ಷೆಯನ್ನು ದಿನವೂ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಿ’ ಅನ್ನುತ್ತೇನೆ.

ಹೊಟ್ಟೆಪಾಡಿಗಾಗಿ ಕಂಡವರ ಮುಂದೆಲ್ಲಾ ಕೈ ಒಡ್ಡಬೇಕಲ್ಲ; ಆವಾಗೆಲ್ಲಾ ಛೆ, ನನ್ನದೂ ಒಂದು ಬದುಕಾ ಅನ್ನಿಸಿ ಹಿಂಸೆ ಆಗುತ್ತೆ. ಎಷ್ಟೋ ಬಾರಿ ಸತ್ತು ಹೋಗಬೇಕು ಅಂತಲೂ ಅಂದುಕೊಂಡಿದ್ದೇನೆ. ಆದರೆ, ಮಕ್ಕಳೊಂದಿಗೆ ಮಲಗಿದ್ದಾಗ, ನಡುರಾತ್ರಿಯಲ್ಲಿ, ನಿದ್ದೆಗಣ್ಣಿನಲ್ಲಿ ಮಕ್ಕಳು ನನ್ನ ಕೈ ಹಿಡಿದುಕೊಂಡು- ಅಪ್ಪಾ… ಅಪ್ಪಾ… ಎಂದು ಕನವರಿಸುವುದನ್ನು ಕಂಡಾಗ, ಅಕಸ್ಮಾತ್ ನಾನು ಸತ್ತುಹೋದ್ರೆ ಈ ಮಕ್ಕಳ ಗತಿ ಏನು ಅನ್ನಿಸಿಬಿಡುತ್ತೆ. ಮರು ಕ್ಷಣವೇ, ಸಾಯಬೇಕು ಎಂಬ ಯೋಚನೆಯನ್ನು ಮನಸ್ಸಿನಿಂದ ತಳ್ಳಿ. ಅದೆಷ್ಟು ಕಷ್ಟ ಬರುತ್ತೋ ಬರಲಿ, ಆಯಸ್ಸು ಇದ್ದಷ್ಟು ದಿನ ಬದುಕಿಬಿಡೋಣ ಅಂತ ನನಗೆ ನಾನೇ ಹೇಳ್ಕೊಳ್ಳುತ್ತೇನೆ.

ಭಿಕ್ಷೆ ಬೇಡಲು ನಾನು ಹೋಗ್ತೀನಲ್ಲ; ಅಲ್ಲಿಂದ ಕೆಲವೇ ಮೀಟರುಗಳ ಅಂತರದಲ್ಲಿ ನನ್ನ ಮಗಳು ಕಾವಲು ನಿಂತಿರ್ತಾಳೆ. ರಸ್ತೆಯಲ್ಲಿ ವೇಗವಾಗಿ ಬರುವ ಕಾರ್, ಬೈಕ್, ಲಾರಿ ಅಥವಾ ಬಸ್ಸು ನನಗೆ ಢಿಕ್ಕಿ ಹೊಡೆಯಬಹುದು ಎಂಬ ಆತಂಕ ಅವಳದು. ತಂದೆಯಾದವನು ಭಿಕ್ಷೆ ಬೇಡುವುದನ್ನು ಯಾವ ಮಗು ತಾನೆ ನೋಡಲು ಇಷ್ಟಪಡುತ್ತೆ? ಹಾಗೆಯೇ, ಮಗಳ ಮುಂದೆಯೇ ಅಮ್ಮಾ ಭಿಕ್ಷೆ ಹಾಕಿ ಎನ್ನಲು ಯಾವ ತಂದೆಗೂ ಮನಸ್ಸು ಬರಲ್ಲ ಅಲ್ವ? ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ಒಂದೆ ಕಡೆ ಇದ್ರೂ ನಾನೂ, ನನ್ನ ಮಗಳೂ ಪರಸ್ಪರ ಮುಖ ನೋಡುವುದಿಲ್ಲ. ಆದರೂ ಮಧ್ಯೆ ಮಧ್ಯೆ- `ಅಪ್ಪಾ, ಬೈಕ್ ಬರ್ತಾ ಇದೆ. ಸೈಡ್‍ಗೆ ಬಾ. ಅಪ್ಪಾ, ಬಿಸಿಲು ಜಾಸ್ತಿ ಆಯ್ತು. ನೆರಳಿಗೆ ಹೋಗು, ಹುಷಾರು ಕಣಪ್ಪಾ…’ ಅನ್ನುವ ಮಾತುಗಳು ಕೇಳುತ್ತಲೇ ಇರುತ್ತವೆ.

ಸಂಜೆಯಾಗುತ್ತಿದ್ದಂತೆಯೇ ಮಗಳು, ನನ್ನ ಕೈಹಿಡಿದುಕೊಂಡು ಮನೆಗೆ ಕರ್ಕೊಂಡು ಹೋಗ್ತಾಳೆ. ಕೆಲವು ದಿನ ನಾಲ್ಕು ಕಾಸು ಸಂಪಾದನೆ ಆಗಿರುತ್ತೆ. ಒಂದೊಂದ್ಸಲ ನಯಾಪೈಸೆಯೂ ಸಿಕ್ಕಿರೋದಿಲ್ಲ. ದುಡ್ಡಿದ್ದಾಗ ಮನೆಗೆ ಏನಾದ್ರೂ ತರಕಾರಿ ತಗೊಂಡು ಹೋಗ್ತೇನೆ. ಆಗೆಲ್ಲಾ ಮಗಳು ತನ್ನ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಾಳೆ. `ನಾನು ಬೇಗ ದೊಡ್ಡವಳಾಗಿ ಬಿಡ್ತೀನಪ್ಪಾ. ಚೆನ್ನಾಗಿ ಓದಿ ಯಾವುದಾದ್ರೂ ಕೆಲಸಕ್ಕೆ ಸೇರ್ಕೋತೇನೆ. ಆಗ ನೀನು ಆರಾಮಾಗಿ ಮನೇಲಿ ಇದ್ದುಬಿಡು’ ಅನ್ನುತ್ತಾಳೆ.

ಭಿಕ್ಷೆಯ ರೂಪದಲ್ಲಿ ನಯಾಪೈಸೆಯೂ ಸಿಕ್ಕೋದಿಲ್ಲವಲ್ಲ; ಅವತ್ತು ತುಂಬಾ ಸಂಕಟ ಆಗುತ್ತೆ. ಆಗೆಲ್ಲಾ ನಾನೂ- ಮಗಳೂ ಮೌನವಾಗಿ ನಡೀತಾ ಇರ್ತೀವಿ. ಅಂಥಾ ಸಂದರ್ಭಗಳಲ್ಲೆಲ್ಲಾ, ದೇವರೇ, ನಾನೀಗ ಸಮಾಧಾನವಾಗುವಷ್ಟು ಅತ್ತು ಬಿಡಬೇಕು. ಆದ್ರೆ ನಾನು ಅಳುವುದು ಮಗಳಿಗೆ ಕಾಣಿಸಬಾರದು. ಅದೊಂದೇ ಕಾರಣಕ್ಕಾದರೂ ಈಗ ಮಳೆ ಸುರಿಸು. ಸುರಿವ ಮಳೆಯಲ್ಲಿ ಅಳುತ್ತಾ ನಡೆದರೆ ಅದು ನನ್ನ ಮಗಳಿಗೆ ಕಾಣಿಸುವುದಿಲ್ಲ ಎಂದು ಪ್ರಾರ್ಥಿಸುತ್ತೇನೆ. ಅಕಸ್ಮಾತ್ ಮಳೆ ಬಂದೇಬಿಟ್ಟರೆ, ಏನೂ ಆಗಿಯೇ ಇಲ್ಲ ಎಂಬಂತೆ ನಡೆದುಬಿಡುತ್ತೇನೆ. ಮಗಳು, ಮೌನವಾಗಿ ನನ್ನೊಂದಿಗೇ ಬರುತ್ತಾಳೆ. ಆಗ ಅವಳೂ ಅಳುತ್ತಾ ಇರ್ತಾಳಾ? ಅದನ್ನು ಪರೀಕ್ಷಿಸುವ ಗೋಜಿಗೆ ಹೋಗಿಲ್ಲ.

ಇಷ್ಟು ದಿನ, ಮಗಳೊಂದಿಗೆ ನಡೆದುಹೋಗುವಾಗ ಸಂಕೋಚವಾಗ್ತಿತ್ತು. ನಾಚಿಕೆ ಆಗ್ತಿತ್ತು. ಆದರೆ ಇವತ್ತು ಖುಷಿಯಾಗುತ್ತಿದೆ. ಯಾಕೆ ಗೊತ್ತಾ? ನಾನಿವತ್ತು ಭಿಕ್ಷುಕನಲ್ಲ. ಒಂದು ಆಸೆಯನ್ನು ಈಡೇರಿಸಿಕೊಂಡ ಸಂತೃಪ್ತ ತಂದೆ. ಹೊಸ ಬಟ್ಟೆ ಧರಿಸಿ ರಾಜಕುಮಾರಿಯ ಥರಾ ಮಗಳು ಖುಷಿಪಡುವುದನ್ನು ನೋಡಬೇಕು. ಅದನ್ನು ಕ್ಯಾಮೆರಾದಲ್ಲಿ ದಾಖಲಿಸಬೇಕು ಅಂತ ಆಸೆಯಿತ್ತು. ಅದೀಗ ಈಡೇರಿದೆ. ನಾವು ಖುಷಿಪಡಲಿಕ್ಕೆ ಇಷ್ಟು ಕಾರಣ ಸಾಕು ಸಾರ್…’
ಹೀಗೆ ಮುಗಿಯುತ್ತದೆ ಕೌಸರ್ ಹುಸೇನ್‍ನ ಮಾತು…

1 comment

  1. ಬದುಕು ಕಲಿಸುವ ಎಲ್ಲ ಪಾಠಗಳನ್ನು ನಾವು ಕಲಿತರೆ ಮಾತ್ರ ಬದುಕಿನ ಪರೀಕ್ಷೆಯಲ್ಲಿ ನಾವು ತೇರ್ಗಡೆಯಾಗಲು ಸಾಧ್ಯ.

Leave a Reply