ದಲಿತನ ಮದುವೆಗೆ ಗ್ರಾಮವೇ ಬಂದ್..

ಹಿರೇಬಗನಾಳದ ಹೋಟೆಲ್, ಅಂಗಡಿಗಳು ಬಂದ್ | ಮೈಲಿಗೆಯಾಗುತ್ತದೆಂದು ಸವರ್ಣೀಯರ ಕ್ರಮ

ದಲಿತನ ಮದುವೆಗೆ ಗ್ರಾಮವೇ ಬಂದ್

 

 ಚಾಮರಾಜ ಸವಡಿ

 

ಕೊಪ್ಪಳ: ಊರಿನ ದಲಿತ ಕೇರಿಯಲ್ಲಿ ಬುಧವಾರ ಮದುವೆ ಇದೆ ಎಂಬ ಸುದ್ದಿ ತಿಳಿದ ಸವರ್ಣೀಯರು ಮದುವೆ ದಿನ ಊರಿನ ಹೋಟೆಲ್, ಅಂಗಡಿಗಳನ್ನೆಲ್ಲ ಬಂದ್ ಮಾಡುವ ಮೂಲಕ ಜಾತೀಯತೆ ತೋರಿದ್ದಾರೆ.

ಕೊಪ್ಪಳ ತಾಲೂಕಿನ ಹಿರೇಬಗನಾಳದ ಬಸವರಾಜ ಪೂಜಾರ ಮತ್ತು ಶೃತಿ ಪೂಜಾರ ಮದುವೆ ಬುಧವಾರ ಊರಿನಲ್ಲಿ ನಿಗದಿಯಾಗಿತ್ತು. ವಿಷಯ ತಿಳಿದ ಊರಿನ ಸವರ್ಣೀಯರು, ಮದುವೆಗೆಂದು ದೊಡ್ಡ ಸಂಖ್ಯೆಯಲ್ಲಿ ದಲಿತರು ಬರುತ್ತಾರೆ. ಆಗ ಹೋಟೆಲ್, ಅಂಗಡಿಗಳಿಗೂ ಬರಬಹುದು. ಇದರಿಂದ ಮೈಲಿಗೆಯಾಗುತ್ತದೆ. ಆದ್ದರಿಂದ, ಮದುವೆ ದಿನ ಅಂಗಡಿ, ಹೋಟೆಲ್ಗಳನ್ನೆಲ್ಲ ಬಂದ್ ಮಾಡಬೇಕೆಂದು ನಿರ್ಣಯ ತೆಗೆದುಕೊಂಡಿದ್ದಾರೆ.

ಮದುವೆಗೆ ಬಂದ ಜನರಿಗೆ, ಊರಿಗೆ ಊರೇ ಬಂದ್ ಆದ ರೀತಿ ಕಂಡು ಗೊಂದಲವಾಗಿದೆ. ನಂತರ, ನಿಜ ಕಾರಣ ತಿಳಿದ ನಂತರ ಅಸಮಾಧಾನಗೊಂಡಿದ್ದಾರೆ. ಮದುವೆಗೆ ಹೋಗಿದ್ದ ಕೊಪ್ಪಳದ ವ್ಯಾಪಾರಸ್ಥರಾದ ಮಲ್ಲಿಕಾರ್ಜುನ ಪೂಜಾರ್ ಈ ಕುರಿತು ಮಾತನಾಡಿ, ನಮ್ಮ ಜೊತೆ ವೃತ್ತಿ ಬಾಂಧವ್ಯ ಹೊಂದಿದ್ದರೂ, ಮದುವೆಯಂತಹ ವಿಷಯಗಳಲ್ಲಿ ಜಾತೀಯತೆ ತೋರಿರುವುದು ನಿಜಕ್ಕೂ ಅಮಾನವೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒತ್ತಾಯದಿಂದ ಬಂದ್:

ಗ್ರಾಮದ ಬಹುತೇಕ ಅಂಗಡಿ, ಹೋಟೆಲ್ಗಳನ್ನು ಒತ್ತಾಯಪೂರ್ವಕ ಬಂದ್ ಮಾಡಿಸಲಾಗಿದೆ. ಈ ಕುರಿತು ಮಾತನಾಡಿದ ಕೆಲ ಅಂಗಡಿಗಾರರು, ಊರಿನ ಜನ ನಿರ್ಣಯ ತೆಗೆದುಕೊಂಡಾಗ, ಅದರ ವಿರುದ್ಧ ಹೋಗುವುದು ಹೇಗೆ? ನಮಗೆ ಇಷ್ಟವಿಲ್ಲದಿದ್ದರೂ, ಊರವರನ್ನು, ಅದರಲ್ಲೂ ದೊಡ್ಡವರನ್ನು ಎದುರು ಹಾಕಿಕೊಳ್ಳಬಾರದೆಂದು ಅಂಗಡಿ ಬಂದ್ ಮಾಡಿದ್ದೇವೆ ಎಂದರು.

ಈಗಲೂ ಹಿರೆಬಗನಾಳದ ಹೋಟೆಲ್ಗಳ ಹೊರಗೆ ಹಾಲೊಬ್ರಿಕ್ಸ್ಗಳನ್ನು ಹಾಕಿರುವುದನ್ನು ಕಾಣಬಹುದು. ಕೆಲವು ಗ್ಲಾಸ್ಗಳು ಹೊರಗೇ ಇರುತ್ತವೆ. ದಲಿತರು ಹೋಟೆಲ್ ಒಳಗೆ ಹೋಗುವಂತಿಲ್ಲ. ಅಲ್ಲೇ ಹಾಲೊಬ್ರಿಕ್ಸ್ ಮೇಲೆ ಕೂತು, ಅಲ್ಲಿರುವ ಲೋಟಾಗಳಲ್ಲೇ ಚಹ ಕುಡಿದು ಹೋಗಬೇಕು. ನೀರನ್ನು ಕೂಡಾ ಕೈಯಿಂದ ಮುಟ್ಟಲು ಬಿಡದೇ, ಮೇಲಿನಿಂದ ಎತ್ತಿ ಹುಯ್ಯಲಾಗುತ್ತದೆ.

ಜಿಲ್ಲಾ ಕೇಂದ್ರ ಕೊಪ್ಪಳದಿಂದ ಕೇವಲ ೨೦ ಕಿಮೀ ದೂರದ ಹಿರೇಬಗನಾಳದಲ್ಲಿ ಇಂತಹ ಜಾತಿ ತಾರತಮ್ಯ ನಿತ್ಯ ನಡೆಯುತ್ತಿದೆ. ಅಲ್ಲಿ ದಲಿತರ ಯಾವುದೇ ಕಾರ್ಯಕ್ರಮ ನಡೆದರೂ ಹೋಟೆಲ್, ಅಂಗಡಿಗಳು, ಕಟಿಂಗ್ ಶಾಪ್ಗಳನ್ನು ಬಂದ್ ಮಾಡಿಸಲಾಗುತ್ತದೆ ಎಂಬುದು ಊರಿನ ದಲಿತರ ಆರೋಪ.

ಆದರೆ, ಬುಧವಾರ ಮದುವೆ ಸಡಗರದಲ್ಲಿ ಮುಳುಗಿದ್ದ ಬಸವರಾಜ-ಶೃತಿ ಜೋಡಿಗೆ ಪಾಪ, ಇದ್ಯಾವುದೂ ಗೊತ್ತೇ ಇರಲಿಲ್ಲ. ಆದರೆ, ಊರೊಳಗೆ ಜಾತಿ ತಾರತಮ್ಯ ಎದುರಿಸಿದ್ದ ಅತಿಥಿಗಳ ಮನಸ್ಸಿನಲ್ಲಿ ಸಡಗರ ಉಳಿದಿರಲಿಲ್ಲ. ಬುದ್ಧ ಪೂರ್ಣಿಮೆ ದಿನದಂದೇ ಇಂತಹ ಕಹಿ ಘಟನೆ ನಡೆದಿರುವುದು ಅವರನ್ನು ಕುಂದಿಸಿತ್ತು.

ದಲಿತರೊಂದಿಗೆ ವ್ಯಾಪಾರ, ವಹಿವಾಟಿಗೆ ಜಾತಿ ಅಡ್ಡಬರುವುದಿಲ್ಲ. ಆದರೆ, ಮದುವೆಯಂತಹ ವೈಯಕ್ತಿಕ ಕಾರ್ಯಕ್ರಮಗಳಿದ್ದಾಗ ಊರ ಜನ ಜಾತೀಯತೆ ತೋರುವುದು, ಹೋಟೆಲ್ಗಳಲ್ಲಿ ಹೊರಗೆ ಕೂರಿಸುವುದು ನಿಜಕ್ಕೂ ಅಮಾನವೀಯ. ಸರಕಾರದ ಸಂಬಂಧಿಸಿದ ಎಲ್ಲಾ ಇಲಾಖೆಗಳು ಹಾಗೂ ಪ್ರಗತಿಪರ ಸಂಸ್ಥೆಗಳು ಒಟ್ಟಾಗಿ ಈ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುವ ಪ್ರಯತ್ನ ಮಾಡಬೇಕು.

ಮಲ್ಲಿಕಾರ್ಜುನ ಪೂಜಾರ, ಕೊಪ್ಪಳ

 

1 Response

  1. Hemanth says:

    idalvenrappa Acchhe din andre!!!!!!!

Leave a Reply

%d bloggers like this: