ಮರೆವುದುಂಟೇ ಬಳೆಚೂರು ಗೀರಿದ ರಕ್ತಗೆಂಪು?

 

 

 

 

ರಾಜ್ ಕುಮಾರ್ ಮಡಿವಾಳರ್

ಸುರಗಿ ನೀರು ಬಿದ್ದ ಹುಡುಗಿ
ಕ್ಷಣದಲ್ಲಿ ಹೆಂಗಸಾದಂತೆ
ಮಳೆ ಮಾರನೆದಿನದ ಬೆಳಕು!

ಹಾದಿ ತುಂಬ ಉದುರಿ ಬಿದ್ದ
ಗುಲ್ಮೋಹರ್ ಪಕಳೆ ಒಂದೊಂದು ಹೆಜ್ಜೆ
ರುಬ್ಬಿಟ್ಟ ಹೂರಣದ ಮೇಲೆ ಇರುವೆ ನಡೆದಂತೆ

ಬೀದಿಗೆಂಪು, ಹಾದಿಗೆಂಪು, ದಾರಿಗೆಂಪು
ಗಿಡಗೆಂಪು, ನೆಲಗೆಂಪು ಬ್ಯಾರೆ ಮುಗಿಲ್ಗೆಂಪು
ಬೆಳಕೆಂಬೊದು ಹೊಚ್ಚಿದಂತೆ ತೊಳೆದು ಹಿಂಡಿಟ್ಟ ರಗ್ಗು!

ತೊದಲ್ಗೆಂಪ ತುಟಿಯ ಹುಡುಗಿ ಹಾಲ್ಗೆಂಪು ಮಾತು!
ಗಲ್ಲದ ಕೆಂಪು, ಅವಕ ಮುತ್ತಡರಿ ಹೆಚ್ಚಿದ ಕೆಂಪು ತಂಪು

ತಂಗಾಳಿಯ ಒಳಗೆಂಪು ಎದೆಮೆತ್ತಿ ನೆನಪಾದುದೇಕೆ ಈಗ..

ಬೆರಳಿಗೆ ಬೆರಳ ಹೊಸೆದ ಬೆಸುಗೆಂಪು ಬಿಟ್ಹೊರಳಿ
ಹೊಂಟಾಗ ಮುನಿಸ ನಸುಗೆಂಪು, ಮತ್ತೆ ಎದೆಗಪ್ಪಿ
ಹಣೆಗೊತ್ತಿರೆ ತುಟಿ ಹಣೆ ಓಕಳಿಗೆಂಪು….

ಒಂದೇ? ಎರಡೇ? ನಿಲ್ಲೆಂದು ಕೈ ಹಿಡಿಯಲು
ಒಲ್ಲೆಂದು ಕೊಸರಿ ನೀ ಓಡುತಿರೆ ಹಿಡಿದೆಳೆದ
ಜೋರಿಗೆ ಮರೆವುದುಂಟೆ ಬಳೆಚೂರು ಗೀರ ರಕ್ತಗೆಂಪು..

ಈಗಿನ್ನೂ ಇದೆ ಆ ಬಂಗಾರ ಚುಕ್ಕಿಯ
ಕೆಂಪು ಬಳೆ ನನ್ನ ಬಳಿಯಲ್ಲೆ, ನೀನುಳಿಸಿ
ಹೋದ ಒಂದೇ ನೆನಪಿನ ಕೆಂಪು ಹೊಳೆ…

ಮಾರನೆಯ ದಿನವಿದು ಸುರಿದು ಮಳೆ..!
ಇನ್ನು ಮಳೆ ಬಿದ್ದ ದಿನದ ಕವಿತೆ ಬರೆಯಲಾದೀತೆ?
ಊರ ಕಣ್ಗೆಂಪಿಗೆ ಆರಿದ ಕೆಂಡ್ಗೆಂಪು ಪ್ರೀತಿ ಮರೆಯಲಾದಿತೆ?

1 Response

  1. suresh says:

    ಒಂದಕ್ಕಿಂತ ಒಂದು ಚಂದದ ಕವಿತೆಗಳು..
    ಹೊಸಹೊಸ ವಿಚಾರ ಮತ್ತು ವಿಭಿನ್ನವಾದ ಹೊಳಹುಗಳನ್ನು ಹೊತ್ತು ಬಂದ ಈ ಕವಿತೆಗಳು ಮತ್ತೆ ಮತ್ತೆ ಓದಿಸಿಕೊಳ್ಳುವಂತಿವೆ…

Leave a Reply

%d bloggers like this: