ಪುಕ್ಕಟ ಕನಸಿಗೆ ಕಲ್ಲಾದ ತತ್ತಿ

 

 

 

ಭುವನಾ

 

 

 

 

ಸಾಲಿ ಬಿಟ್ಟಕುಡ್ಲೆ ಹಿಂತಾದ ರಪರಪ ಮಳ್ಯಾಗ ಗೊಬ್ಬರ ಪ್ಯಾಸ್ಟ್ಲಿಕಿನ ಪಾಟಿಚೀಲ ಮತ್ತ ಅದ ಗೊಬ್ಬರ ಪ್ಯಾಸ್ಟ್ಲಿಕಿನ್ಯಾಗ ಸಿಂದಿಗ್ಯಾರ  ಬಸವಣ್ಣೆಪ್ಪಣ್ಣ ಅಗದಿ ಕಾಳಜಿಲೆ ಹೊಲ್ದು ಧಾರವಾಡದಿಂದ ಬರುವಾಗ ನೆನಪ್ಲೆ ತಂದ ಕೊಟ್ಟದ್ದು ರೇನಕೋಟ ಹಾಕೊಂಡ ನಮ್ಮೂರಿನ ಅಡಾದಿ ಹಿಡದ ಬರುವಾಗ, ಪಿಚಿಪಿಚಿ ರಾಡಿ..ಸೇಮ್ ಗುಟ್ಲ್ಯಾ ಮಾವಿನ ಹಣ್ಣಿನ ಶೀಕರ್ಣಿಗತೆ ಅನಿಸಿ ಮನ್ಯಾಗ ಸಂಜಿ ಊಟಾನ ಮಾಡ್ಬಾರ್ದ ಅನಸ್ತಿತ್ತು. ಅಡಾದಿ ಗೆಳತ್ಯಾರು ಕಸ್ತೂರಿ ರಾಜಕ್ಕ ನನ್ನ ವಾರಿಗಿ, ಮುಂದ ಗಡಾದಾರ ಗೀತಾ ತಳಗಿನ ಮನಿ ಮಂಜಕ್ಕ ಆರನೆತ್ತೆ ಯೋಳನೆತ್ತೆ ಇದ್ರು… ಅವ್ರುವೆಲ್ಲಾ ಕಲರ ಕಲರ ಕಾಮನಬಿಲ್ಲಿನಂತ ಚತ್ತರಗಿಗೋಳು ನಾವ ಸ್ವಾಮಗೋಳ ಆದ್ರೂ ಅವ್ರ ನಡುವ ಬರುವಾಗ ಅಸ್ಪೃಶ್ಯತಾ ಭಾವ ನನ್ನ ಕಾಡ್ತಿತ್ತು.


ಹಿಂತಾದ್ರಾಗ ನನ್ನ ರೇನಕೋಟ ಬರ್ರಬರ್ರ ಸಪ್ಪಳಾ ಮಾಡಿ ಅಣಕುಗೀತೆ ಹಾಡ್ತಿತ್ತು. ನಮ್ಮವ್ವಾ ನೈನಕಡೆ ಸಿಮೆಂಟ ಬೋರ್ಡ ಮುಂದ ಬಂದ ಹುಬ್ಬಿಗೆ ಕೈಹಚಿಗೊಂಡು ನಿಂತಬಿಡ್ತಿಳ್ಳ ನಂದ ಹಾದಿ ಕಾಕೋಂತ. ನಾ ಹನ್ನೊಂದನೇ ಮಗಳಾದ್ರು ಅಕಿ ಕಾಳಜಿ ಚೊಚ್ಚಲನ ಇತ್ತು. ಸಣ್ಣ ಮುಡ್ಡಿ ಇದ ವರ್ಸ ನಾಕನೆತ್ತೆ ಮುಗಿಸಿ ಊರಾಗ ಸಾಲಿ ಇಲ್ದಿಕ್ಕ ನ್ಯಾಸರಗಿಗೆ ಹೊಂಟೈತಿ, ಊರ ಬಾಗಲಕೋಟಿ ಬೆಳಗಾವಿ ರೋಡ ಮ್ಯಾಲಿದ್ರು ಸಾಲಿ ಟೈಮಕ ಗಾಡಿ ಇಲ್ಲ. ಮದ್ಲ ಬಾಳ ಈಟ ಐತಿ ಚಿಟಿಮಿ ಹೆಂಗ ಹೊಕ್ಕೈತ್ಯೊ ಹೆಂಗ ಬರ್ತೈತ್ಯೊ ಅಂತ ಅದ ಚಿಂತ್ಯಾಗ ಇರಾಕಿ ಸಂಚೆನಾ. ಮನಿಗೆ ಬಂದ ಕುಡ್ಲೆ ಹಿಂದೊಲಿ ಮ್ಯಾಲಿನ ತೆಪ್ಪೇಲ್ಯಾಗಿನ್ನು ಬೆಚ್ಚನ ನೀರ್ಲೆ ಕೈಕಾಲ ತೊಳಸಿ ಒಲಿಮುಂದ ಕುಂಡ್ರಿಸ್ಗೊಂಡ ತೆವ್ಯಾಗ ಜ್ವಾಳದ ಹಿಟ್ಟಿನ ಜುಣಕಾ ತಿರಿವಿ ರೊಟ್ಟಿಮ್ಯಾಲ ಸವರಿ ಕೊಡಾಕಿ ಖರೇನ ಅಮೃತದಂಗ ಹತ್ತಿತ್ತು. ಮ್ಯಾಲ ಚಾ ಮತ್ತ ಕಳ್ಳೆಪ್ಪನ ಅಂಗಡಿ ಬಟರ ಫಿಕ್ಸ.

ಓದ್ಕೋಳಾಕ ಕುಂಡ್ರಾಕ ಲಾಟನ್ ಹಚ್ಚು ಕೆಲಸಾ ನಮ್ಮಕ್ಕಾಂದ. ಚಂದಗೆ ಒಣಬೂದಿಲೆ ಗ್ಲಾಸ ಬೆಳಗಿ, ಬುಡ್ಯಾಗ ಚುಮಣಿ ಎಣ್ಣಿ ಹಾಕಿ ಅಗದಿ ಸುಬ್ರ ಬೆಳಕ ಕಾಣುವಂಗ ಮಾಡ್ತಿದ್ಳು. ಸುತ್ತೂಕಡೆ ದೀಪದ ಹುಳದಂಗ ನಾವೆಲ್ಲ ಅಕ್ಕತಂಗ್ಯಾರು ಓದಾಕ ಕುಂಡ್ರಾವ್ರ. ಓಣಿ ಮಂದಿ ಅನ್ನೂದು ಒಂದಲ್ಲ ಎರಡಲ್ಲ ಎಂಟ ಹೆಣ್ಮಕ್ಕಳ್ನ ಹಿಂತಾ ನಿಗ್ಗರದಾಗ ಸಾಲಿ ಕಲ್ಸಾತಾರ ಸ್ವಾಮಗೋಳ ರಗಡ ದುಡದ ನಯಾಪೈಸಾ ಆಸ್ತಿನೂ ಮಾಡಿಲ್ಲ ಬರೆ ತಮ್ಮ ತಂಗಿ ಬಾಳೆಕ ಬಡದಾಡಿದಾರು ಮಕ್ಕಳ ಮದವಿ ಅದು ಮಾಡುದುಲ್ಲೆನು ಅಂತ. ಆದ್ರ ನಮ್ಮ ಅಪ್ಪಾ ಅವ್ವಾ ತಲಿ ಕಡಿಸಸ್ಗೋಳವ್ರಲ್ಲ. ಇದ್ಯಾವ್ದು ಕಬರಿಲ್ದ ನಾ ಅಲ್ಲೆ ತುಗಡ್ಸಿ ಹಾಸಿಗಿ ಸುಳ್ಳು ಮ್ಯಾಗ ನಿದ್ದಿ ಹೊಡ್ಯಾಕ ಚಾಲೊ.

ನಂಬ್ದು ಭಾಳ ದೊಡ್ಡ ಹಳಿ ಮನಿ. ನಾ ಬಿನ್ನತ್ತೆ ಇದ್ದಾಗ ನಮ್ಮತ್ತೆವ್ವಗೋಳು ಜಗಳಾಡಿ ಬ್ಯಾರ್ಯಾದ್ರು. ನಮ್ಮಪ್ಪಾ ಭಾಳ ನಿಸ್ವಾರ್ಥಿ ಇದ್ದದ್ಕ ನಮ್ಮ ಪಾಲಿಗೆ ದನ ಕಟ್ಟು ಹಕ್ಕಿ ಬಂತು. ಮುಂಬೈದಾಗಿರು ದೊಡ್ಡಣ್ಣಾ ಮತ್ತ ಸಣ್ಣಣ್ಣಾ ಕೂಡಿ ಸೂಟಿಗೆಂತ ಬಂದಾಗ ರಿಪೇರಿ ಮಾಡ್ಸಿದ್ರು. ಆದ್ರೂ ಹಳಿ ಕಟಿಗಿ ಕಂಬದಾಗ ಸಿಕ್ಕಾಪಟ್ಟೆ ತಗಣಿಗೋಳು ತಮ್ಮ ಅಂತಃಪುರ ಕಟ್ಟಿಬಿಟ್ಟಿದ್ದು. ನಾವ ಚುಮಣಿಲೆ ಸುಡುದು ರಟ್ಟಿಲೆ ವರಿಯೂದು ನಾನಾ ನಮನಿ ತಂತ್ರ ಹೆಣದ್ರೂ ಜಿದ್ದಿಗಿ ಬಿದ್ದ ಹೆಚ್ಚ ಆಗುವ. ಅದಕ ಅವಾಗ ದೇವಿ ಮಾಹಾತ್ಮೆ, ಪುರಾಣ, ಪುಣ್ಯಕತೆ ಬಾಳ ಓದ್ಕೊಂಡ ಅನುಭವದಿಂದ ನಮ್ಮಪ್ಪಾ ಅಂತಿದ್ರ “ತಂಗಿಗೊಳ್ರ್ಯಾ ಅವನ್ನ ಕೊಲಬ್ಯಾಡ್ರಿ, ರಕ್ತಬೀಜಾಸುರನ ವಂಶಜರ ಅವು ಸಹಸ್ರೋಪಾದಿಯಾಗಿ ಹೆಚ್ಚಾಕ್ಕಾವು” ಅಂತ. ಆದ್ರ ಆಗ ಬ್ಯಾರೆ ಊರಿಗೆ ಸಾಲಿಗೆ ಹೊಂಟದ್ದು, ಮಳಿ, ರಾಡಿ, ಈ ಬರಾಬರಾ ರೇನಕೋಟ ಬ್ಯಾಸರ ಬಾಳಾಕ್ಕಿತ್ತು. ಮತ್ತ ಒಂದಕ್ಕ ಬಿಟ್ರ ಅವ್ವಾಂದ ನೆನಪಾಗಿ ಅಂಬಲಿ ಮತ್ತ ಕುಡ್ಡೆಮ್ಮಿ ಹಾಲ ಹಾಕೊಂಡ ಅವ್ವಾನ ತಾಟನ್ಯಾಗ ರೊಟ್ಟಿ ತುಣಕ ಸುರಕೊಬೇಕ ಅನಸಿ ಅಳು ಬರ್ತಿತ್ತು. ಇದೆಲ್ಲಾ ವನವಾಸ ಉಂಡ ನಂಗ ತಗಣಿ ಕಬರ ಇರ್ತಿರ್ಕೆಲ್ಲ, ಹಸದ ತಗಣಿಗೋಳು ನನ್ನ ರಕ್ತಾ ತಿಂದ ತೇಗಿ ಅ……ಬ್ ಅಂತ ಡರಕಿ ಹೊಡಿತಿದ್ದು ಯಾಂಬಾಲ.


ಗಂಡಸೂರಿಗೆಲ್ಲ ಅಡ್ಡಣಗಿ ಇಟ್ಟು ಊಟಕ್ಕ ನೀಡಿ ನಮ್ಮವ್ವಾ ನನ್ನ ಎಬಿಸಿ ನಿದ್ದಿಗಣ್ಣಾಗ ಎರ್ಡರಾ ತುತ್ತ ಉಣಿಸೆ ಮಲಗಸಾಕಿ. ನಮ್ಮವ್ವಾಗ ನಾನ ಕಡಿಹುಟ್ಟ ಅದಕ ಆಗಲೆ ಸನ್ಯಾಸಾಶ್ರಮ ಅದಕ ರಾತ್ರೆಲ್ಲಾ ಅವ್ವಾನ ಮಗ್ಗಲ್ದಾಗ ಕೌದ್ಯಾಗ ಕಾಲ ಹಾಕಿ ಅಮ್ಮಿ ಹಿಡ್ಕೊಂಡ ಮಲ್ಕೊಳಾಕಿ. ಹಿಂಗಾಗಿ ಅಕಿಗೂ ನಾ ಅಂದ್ರ ಸಣ್ಣ ಕೂಸ ಅನಸ್ತಿದ್ನಿ.
ಹಿಂಗ ಹಾವಿನ ತಲಿ ಮ್ಯಾಲ ಹೆಜ್ಜಿ ಇಟಗೊಂತ ಐದನತ್ತೆ ಐದಾರ್ನೇ ತಿಂಗ್ಳ ನಡದಿರ್ಬೇಕು, ಆಗ ಸಾಲ್ಯಾಗ ಒಂದ ಹೊಸಾ ಸುದ್ದಿ ಎದ್ದಿತ್ತು. ಅದೇನೊ ನವೋದಯ ಅಂತ, ಚೊಲೊ ನೋಟಬುಕ್ಕಾ, ಪೆನ್ನಾ ,ಸೀಸಾ, ರಟ್ಟನೂ ಕೊಡ್ತಾರಂತ ಪರೀಕ್ಷೆ ಬರ್ಯಾಕ ಎಲ್ಲಾ ಪುಕ್ಕಟ್ಟ……! ಅದಕೇನೊ ಎಗ್ಜಾಮ ಇರ್ತಾವಂತ; ಗಣಿತ ಇಂಗ್ಲೀಷಾ ಶ್ಯಾಣ್ಯಾ ಇದ್ರ ಗ್ಯಾರಂಟಿ ಸೆಲೆಕ್ಟ ಅಂತ, ಆದ್ರ ಹಾಸ್ಟೆಲದಾಗ ಇರುದಂತ ಅನಗೋಡ್ಕ ನನ್ನೆದಿ ಡಸಕ್ ಅಂತಿತ್ತ ಅವ್ವಾನ ಬಿಟ್ಟಿರೂದ ಒಟ್ಟ ಬ್ಯಾಡ ಅನಸ್ತಿತ್ತ ಆದ್ರೂ ನಾಕನತ್ತೆ ಇದ್ದಾಗ ಎರಡ ಕಡ್ಡಿ ನೀಲಿ-ಕೆಂಪ ಪೆನ್ನ ತುಗೊಬೇಕಂದ್ರ ಮೂರ ರುಪಾಯಿ ಕೂಡಸ್ಬೇಕಾದ್ರ ಒಂದ ಮುಗದ ಮತ್ತೊಂದ ಗಾಂಧಿ ಜಯಂತಿ ಬಂದದ್ದ ನೆನಪಾಗಿ ಸೊಟ್ಟಂತ ತಲಿಗೆ ಬಡದಂಗಾಗಿ ನೆಲಕ್ಕ ಬಿದ್ದಂತಾಯಿತು. ಮತ್ತ ಈ ಅಣಕುಗೀತೆನು ಕೇಳೂದ ತಪ್ಪತೈತಿ ಅಂತ ಗಟ್ಟಿಜೀವ ಮಾಡ್ಕೊಂಡಿದ್ನಿ.

ನಮ್ಮ ಅಪ್ಪಾಗ ಭೆಟ್ಯಾಗಾಕ ನಮ್ಮ ಕರ್ಕಿ ಸರ್ ನಮ್ಮನಿಗ ಬಂದ್ರು ಸಾಯಂಕಾಲ. ಬಂದ ಕುಂತು ನನ್ನ ಬಗ್ಗೆ ಹೇಳಾಕತ್ರು “ನಿಮ್ಮ ಹುಡುಗಿ ಭಾಳ ಶ್ಯಾಣ್ಯಾ ಅದಾಳ್ರಿ, ಕಂಪ್ಯೂಟರ್ ತಲಿರಿ ಸ್ವಾಮ್ಗೋಳ. ಅದಕ ನವೋದಯ ಎಗ್ಜಾಮ್ ಕಟ್ಟಸ್ರಿ, ಅದ್ನ ಹೇಳ್ಬೇಕಂತ ಬಂದಿದ್ನಿರಿ” ಆಂದ್ರು. ಸಾಲಿಗೋಳ ಬಗ್ಗೆ ಗೊತ್ತಿತ್ತು ನಮ್ಮಪ್ಪಾಗ, ಪುರಾಣ ಪುಣ್ಯಕತಿ ಅಂತ ಊರೂರ ಅಡ್ಯಾಡಿದ್ರು, “ಅಲ್ಲೆ ಕೊಥಳೀಗೆ ಕಳ್ಸೂದಲ್ರಿ ಈ ಎಗ್ಜಾಮ ಪಾಸ್ ಆದ್ಮ್ಯಾಲ” ಅಂತ ಕೇಳಿದ್ರು. “ಹೌದ ರೀ ಸ್ವಾಮ್ಗೋಳ” ಅಂದ್ರು ಸರು. “ನಾವು ಸ್ವಾಮ್ಗೋಳ್ರಿ ಸರ, ಅಲ್ಲೇನೊ ವಾರಕ್ಕ ಎರಡ ಸಲಾ ತತ್ತಿ ಕೊಡ್ತಾರಂತ ಬುದ್ಧಿಗೇಡಿಗೋಳು………ಇಲ್ಲೆ ಕಲಿತಾಳ ಬಿಡ್ರಿ ಯಾವ ಎಗ್ಜಾಮು ಬ್ಯಾಡಾ” ಅಂದದ್ದ ಕೇಳಿ ಪುಕ್ಕಟ್ಟ ಕೊಟ್ಟದ್ದ ಪೆನ್ನಾ,ಸೀಸಾ, ಕಂಪಾಸಾ ಬಂದ ಬೆನ್ನಾಗ ಚುಂಚಿದಂಗ ಆಗಿ….ಬರ್ರಬರ್ರ ಸಪ್ಪಳ ಅಣಕುಗೀತೆ ಕಿವ್ಯಾಗ ಮುಚ್ಚಿಕಟಗಿ ಸಿಗಿಸಿದಂಗ ಆಗಿ, ಹಾಸಿಗಿ ಸುಳ್ಳಿಮ್ಯಾಲ ಬಿದ್ದು ತಗಣಿ ಹಸುವ ತೀರ್ಸಿರ್ಬೇಕ…!!??

 

1 comment

  1. ನೆನಪಿನ ಬುತ್ತಯಲ್ಲಿ ಭಾಷೆಯ ಸೊಗಡು ಹಾಸುಹೊಕ್ಕಾಗಿದೆ.

Leave a Reply