ಹುಚ್ಚು ಖೋಡಿ ಮನಸು..

ರೇಣುಕಾ ಚಿತ್ರದುರ್ಗ

ಆಫೀಸ್ ಮುಗಿಸಿ ನಿಧಾನವಾಗಿ ನಡೆದು ಬರುತ್ತಾ ಇದ್ದೆ. ಅಲ್ಲಿ ಇಲ್ಲಿ ಎಲ್ಲೆಲ್ಲೋ ನೋಡ್ತಾ ಏನೇನೋ ಅನ್ಕೋತ ಬರೋದು ನಾನು. ಕಾಲು ತನ್ನ ಪಾಡಿಗೆ ತಾವು ಮನೆಗೆ ಕರ್ಕಂಡು ಹೋಗ್ತಾ ಇರ್ತವೆ. ಮದಕರಿ ಸರ್ಕಲ್ ಬಂತು. ಸರ್ಕಲ್ ಮಧ್ಯ ಮದಕರಿನಾಯಕನ ಭವ್ಯ ಪುತ್ಥಳಿ ಕುದುರೆ ಮೇಲೆ ವಿರಾಜಮಾನವಾಗಿದೆ. ಅದೇನು ಠೀವಿ! ಅದೇನು ಚಂದ! ನೋಡಿದಾಗಲೆಲ್ಲಾ ಮೈಮರೆಯುವುದು ಉಂಟು. ಅವನಂತೆ ಸ್ಟೈಲ್ ಮಾಡಬೇಕು ಅಂದ್ಕೋತೀನಿ. ಆದರೆ ಜನ ಈವಮ್ಮನಿಗೇನು ಲೂಸಾ! ಅಂದ್ಕೋತಾರೆ ಅಂತ ತೆಪ್ಪಗೆ ಮನಸ್ಸಲ್ಲೇ ಮಂಡಿಗೆ ತಿಂತಾ ಮುಂದೆ ಪಾಸಾಗ್ತೀನಿ.

ಇವತ್ತು ಹಾಗೇ ಮದಕರಿ ಸರ್ಕಲಲ್ಲಿ ಬರುವಾಗ ಒಬ್ಬ ಫುಲ್ಲು ಟೈಟು, ಅರಾಮ್ ಸೆ ಅಂಗಿ ಬಿಚ್ಚಿ ಮದಕರಿ ನಾಯಕನ್ನೇ ನೋಡ್ತಾ ಮೀಸೆ ತಿರುವುತ್ತಿದ್ದ. ನಾಯಕನ ಥರಾನೇ ಸ್ಟೈಲ್ ಮಾಡ್ತಾ ಇದ್ದ. ಅವನು ಎಷ್ಟು ಸುಲಭವಾಗಿ ತನ್ನ ಆಸೆ ತೀರಿಸಿಕೊಂಡು ಬಿಟ್ಟನಲ್ಲ!

ನಂಗೂ ಮತ್ತೆ ಈ ಥರ ವಿಭಿನ್ನವಾಗಿರುವವರಿಗೂ ನಂಟು ಇದೆಯೇನೋ ಅನ್ಕೋತೀನಿ. ಎಲ್ರೂ ಅವರನ್ನ್ ನೋಡಿ ಅಸಹ್ಯ ಪಡ್ಕೊಂಡ್ರೆ, ನಾ ಕುತೂಹಲದಿಂದ ಅವರ ಪಕ್ಕದಲ್ಲಿ ನಿಂತಿರ್ತೀನಿ. ಸಣ್ಣೋಳಿದ್ದಾಗಿನಿಂದನೂ ವಿಭಿನ್ನ ಮನುಷ್ಯರು ಗಮನ ಸೆಳಿತಾನೇ ಇದಾರೆ.

ಆವತ್ತು ಈವೊತ್ತು ಯಾವಾಗ್ಲೂ ನೆನಪಿಗೆ ಬರೋನು ಚೀರನ ಹಳ್ಳಿ ಮುರ್ಗಿ, ಅವನೆಸರು ಮುರುಘ ಇರ್ಬಹುದು, ಆದ್ರೆ ಎಲ್ರೂ ಕರೀತಾ ಇದ್ದದ್ದು ಚೀರ್ನಳ್ಳಿ ಮುರ್ಗಿ ಅಂತನೇ. ನಮ್ಮೂರು ಹೊಳಲ್ಕೆರೆ, ಊರ ಪಕ್ಕದಲ್ಲೇ ಹಿರೇಕೆರೆ, ಕೆರೆ ದಾಟಿದ್ರೆ ಚೀರ್ನಹಳ್ಳಿ, ಮುರ್ಗಿಯ ಬಟ್ಟೆ ಫುಲ್ಲು ಬೂದಿ ಬಣ್ಣ, ಮಶೀಮಯ. ಎಲ್ಲಾ ಚಿಂದಿಯನ್ನು ಭದ್ರವಾಗಿ ಇಟ್ಟುಕೊಂಡಿರ್ತಿದ್ದ, ಯಾರ್ಗೂ ಕೊಡ್ತಾ ಇರ್ಲಿಲ್ಲ. ಯಾವಾಗ್ಲು ಮೂರ್ನಾಲ್ಕು ತ್ತೆಂಗಿನ ಚಿಪ್ಪು ಇರೋವು. ಅದ್ರಲ್ಲೇ ಅವ್ನು ಟೀ ಕುಡೀತಾ ಇದ್ದುದು, ಊಟ ಮಾಡ್ತಾ ಇದ್ದುದು.

ನಾವು ಲೋಟದಲ್ಲಿ ಟೀ ಕೊಟ್ರೂ ಬೇಡ ಅನ್ನೋಥರ ತಲೆ ಅಲ್ಲಾಡಿಸಿ ಚಿಪ್ಪು ಮುಂದೆ ಒಡ್ಡೋನು, ಆ ಚಿಪ್ಪು ಕೂಡ ಮಸಿಮುದ್ದೆ. ಟೋಟಲಿ ಅವನ ಆಕಾರ ಅಂದ್ರೆ ನನಗೆ ನೆನಪಿಗೆ ಬರೋದು ಬೂದಿ ಮತ್ತು ಕಪ್ಪು ಬಣ್ಣ. ಅವನು ಮಲಗುತ್ತಿದ್ದುದೇ ಬೂದಿ ಗುಂಡಿಯಲ್ಲಿ, ನಮ್ಮನೆ ಹತ್ರನೇ ಕುಲುಮೆ ಇತ್ತು, ಬೆಳಿಗ್ಗೆಯೆಲ್ಲಾ ಕುಲುಮೆ ಬಾಬಣ್ಣ ಗಾಡಿಗೆ ಚಕ್ರ ಕಟ್ಟೋದು, ಮಚ್ಚು, ಕುಡುಗೋಲು ಮಾಡೋದು, ರೈತರ ಹತಾರಗಳನ್ನ ಚೂಪು ಮಾಡಿಕೊಡೋದು, ಅದೂ ಇದೂ ಕೆಲ್ಸ ಮಾಡಿ, ಮುರ್ಗಿಗೆ ರಾಶಿ ಬೂದಿ ಬೆಡ್ ತಯಾರಿ ಮಾಡಿರ್ತಿದ್ದ, ಇವನು ತನ್ನ ಚಿಪ್ಪು ಮೀಲ್ಸ್ ಮುಗಿಸಿ ಬರೋಷ್ಟರಲ್ಲಿ ನಾಯಿಗಳು ಕಂಪನಿ ಕೊಡೋಕೆ ರೆಡಿ ಆಗಿರ್ತಿದ್ವು, ನಾನು ಬೆಳಿಗ್ಗೆ ಎದ್ದೌಳೇ ಬ್ರೇಕ್ ಫಾಸ್ಟ್ ಗಾಗಿ ಅಲ್ಲೇ ಇದ್ದ ಸೀ ಹುಣಸೆ ಮರಕ್ಕೆ, ಸೀ ಹುಣಸೆ ಆರಿಸಲು ಬಂದಾಗ, ಈ ಮುರ್ಗಿ ಇನ್ನೂ ಬೆಚ್ಚಗೆ, ನಾಯಿ ಜೊತೆ ಗೊರ್ಕೆ ಹೊಡೀತಾ ಇರ್ತಿದ್ದ.

ದಟ್ಟ ಗುಂಗುರುಗೂದಲಿನ, ಮುಖದ ತುಂಬಾ ಕೂದಲಿನ, ಮೈತುಂಬಾ ಮಶೀಮಯ ಬಟ್ಟೆ ಹೊದ್ದ ಮುರ್ಗಿ ಥೇಟು ಕ್ರಿಸ್ತನ ನಗೆಯನ್ನು ಹೊತ್ತಿರುತ್ತಿದ್ದ. ಊಟ ಸಿಗಲಿ ಬಿಡಲಿ ಯಾವಾಗಲೂ ಹಸನ್ಮುಖಿ. ಒಂದು ಚಿಪು ಟೀ ಸಿಕ್ಕರೂ ಅವನು ಎರಡು ಮೂರು ಗಂಟೆಯವರೆಗೂ ಧನ್ಯತೆಯಿಂದ ಇರುತ್ತಿದ್ದ. ಅವನು ಚಿಪ್ಪು ಒಡ್ಡಿದರೆ ಯಾರೂ ಟೀ ಕೊಡದೇ ಕಳಿಸಿಲ್ಲ. ನಾಯಿ ಅವನು ಇಬ್ರೂ ಜೊತೆಗೆ ಉಣ್ಣುತ್ತಿದ್ದದು ಇನ್ನೂ ನೆನಪಿದೆ.

ಈ ಹಲ್ ಬೀರನ್ನಂತೂ (ಹಲ್ಲು ಬೀರ) ಮರೆಯೋ ಹಾಗೇ ಇಲ್ಲ, ಅವನ ಹೆಸರು ಏನಂತಾ ಯಾರ್ಗೂ ಗೊತ್ತಿಲ್ಲ, ಗಿಡ್ಡಕ್ಕಿದ್ದು, ಖಾಕಿ ನಿಕ್ಕರ್ ಹಾಕಿ, ತಲೆ ಬೋಳಿಸಿಕೊಂಡು, ಅರ್ಧ ತೋಳಿನ ಬನಿಯನ್ ಹಾಕಿಕೊಂಡು ರೋಡಲ್ಲಿ ಓಡಾಡ್ಕೊಂಡು ಇರ್ತಿದ್ದ. ಗಡ್ಡೆಗಣ್ಣು, ಚಪ್ಪೆ ಮೂಗು, ಬಿಳಿ ಬಣ್ಣ, ಉಬ್ಬಿದ ಹಲ್ಲು ಮುಂದೆ ಬಂದು ಮುಚ್ಚದ ಬಾಯಿ. ಅರೆಬೆತ್ತಲು ಎಲ್ಲಾ ಸೇರಿ ಭಯಂಕರವಾಗಿ ಕಾಣುತ್ತಿದ್ದ. ಇವನಿಗೆ ಹೈಸ್ಕೂಲು ಹುಡುಗೀರು ಅಂದ್ರೆ ವಿಪರೀತ ಕ್ರೇಜು. ನಾವು ಕೂದಲಿಗೆ ಎಣ್ಣೆ ಹಾಕಿ ನೀಟಾಗಿ ಬಾಚಿ, ಕೆಂಪು ಟೇಪಿನಲ್ಲಿ ತುದಿವರೆಗೆ ಹೆಣೆದು ಜಡೆಯನ್ನು ಅರ್ಧಕ್ಕೆ ಮಡಚಿ ಟೇಪನ್ನು ಹೂವಿನಾಕಾರದ ಡಿಸೈನ್ ಬರುವಂತೆ ಮಾಡಿ, ಎರಡು ಜಡೆ ಹಾಕಿಕೊಂಡು, ಸ್ಕರ್ಟ್ ಬ್ಲೌಸ್ ಯೂನಿಫಾರ್ಮ್ ಹಾಕ್ಕೊಂಡು ದಾರಿಯುದ್ದಕ್ಕೂ ಕಚಪಚ ಮಾತಾಡಿಕೊಂಡು, ಯಾರಿಗೂ ದಾರಿ ಬಿಡದೆ, ಇಹಲೋಕದ ಪರಿವೇ ಇಲ್ಲದೇ ರಸ್ತೆಯಲ್ಲಿ ನಡೆಯುತ್ತಿದ್ದೆವು.

ನಮ್ಮನ್ನು ಇಹಲೋಹಕ್ಕೆ ಇಳಿಸುತ್ತಿದ್ದವನೇ ಈ ಹಲ್ಬೀರ. ಪಟ್ಟನೆ ಹತ್ತಿರ ಬಂದು ಅಮ್ಮ ಹುಷಾರಾಗಿ ಕಟ್ಟಿದ ಟೇಪಿನ ಹೂವು ಬಿಚ್ಚುವಂತೆ ಎಳೆದು ಹಿಹಿಹಿ ಅಂತ ನಕ್ಕು ಬಿಟ್ಟರೆ, ಆಕಾಶವೇ ತಲೆ ಮೇಲೆ ಬಿದ್ದಂತೆ ನಾವೆಲ್ಲ ಜೋರಾಗಿ ಕೂಗಿ ಚೆಲ್ಲಾಪಿಲ್ಲಿ ಆಗಿಬಿಡ್ತಿದ್ವಿ. ಆಗ ದಾರೀಲಿ ಹೋಗೋರು ಯಾರಾದ್ರೂ ಹಲ್ಬೀರನ ಬೋಳು ತಲೆಗೆ ಪಟ್ ಅಂತಾ ಮೊಟಕಿ ಲೇ ಯಾಕಲೆ ಅಂತ ಜೋರು ಮಾಡಿದ ಕೂಡಲೇ, ದನದ ಥರ ಕೂಗ್ತಾ ಓಡಿ ಬಿಡ್ತಿದ್ದ. ನಾನಂತೂ ಅವನನ್ನ ನೋಡಿದರೆ ಹೆದರಿ ಸಾಯ್ತಿದ್ದೆ. ಗಡ್ಡೆಗಣ್ಣು ಬಿಟ್ಟು ಎಲ್ಲಾ ಹಲ್ಲು ತೆರೆದು ಹಿ ಹಿ ಅಂತಾ ಅವನು ನೋಡುತ್ತಿದ್ದ ಪರಿ ಇನ್ನೂ ನೆನಪಿದೆ. ಪಾಪ ಎಲ್ರೂ ಅವನ್ ತಲೆಗೆ ಮೊಟಕೋರೆ.. ಅವನ ಮನೆಯವರು ಅವನನ್ನು ಬೀದಿಬಸವನ ಥರ ಬಿಟ್ಟಿದ್ರು. ಊರು ತುಂಬಾ ಅಡ್ಡಾಡೋನು. ಆದ್ರೂ ನಮ್ ಊರವ್ರು ಅವನನ್ನ ಎಂದೂ ಮನೆಗೆ ಕೂರಿಸ್ಕಳಿ ಅಂತಾ ಹೇಳಲಿಲ್ಲ. ಅರಾಮ್ ಅಡ್ಡಾಡಿಕೊಂಡು, ಹುಡುಗೀರ ರೇಗಿಸ್ಕಂಡು ಇದ್ದ.

ಪಾಲಿ ಅನ್ನೋ ಹೆಸರಿನವನ ಕಥೆ ಹೇಳ್ತೀನಿ ಕೇಳಿ; ಪಾಲಿ ತುಂಬಾ ಕಾಣಿಸಿಕೊಳ್ತಾ ಇದ್ದದ್ದು ಸಂತೆಯಲ್ಲಿ. ಅಪ್ಪ ಸಂತೆಯಲ್ಲಿ ಕಿರಾಣಿ ವ್ಯಾಪಾರ ಮಾಡೋರು. ಭಾನುವಾರ ಬಂತೆಂದರೆ ನನಗೆ ಹಬ್ಬ. ಪದೇ ಪದೇ ಸಂತೆಗೆ ಹೋಗೋದು, ಅಪ್ಪನಿಗೆ ಊಟ ಕೊಡೋಕೆ ಒಂದು ಸಲಿ, ಸುಮ್ನೆ ಅಡ್ಡಾಡೋಕೆ ಒಂದ್ ಸಲಿ, ತರಕಾರಿ ತರೋಕೆ ಒಂದ್ ಸಲಿ ಹೀಗೆ. ಆಗ ಈ ಪಾಲಿಯ ದರ್ಶನವಾಗೋದು. ಪಾಲಿಯ ಮನೆಯವರು ಚೆನ್ನಾಗಿದ್ದರು ಅನ್ಸುತ್ತೆ. ಯಾವಾಗಲೂ ಬೂದು ಬಣ್ಣದ ಸಫಾರಿ ಹಾಕಿರ್ತಿದ್ದ, ಆದ್ರೆ ಬಾಯಲ್ಲಿ ಯಾವಗಲೂ ಜೊಲ್ಲು, ತೊದಲು ತೊದಲು ಮಾತು, ಸಂತೆಯಲ್ಲಿ ಎಲ್ಲರ ಕೆಲಸ ಮಾಡ್ತಿದ್ದ. ಏ ಪಾಲಿ ಆ ನೀರುಳ್ಳಿ ಪಾಕೆಟ್ ಹೊತ್ಕಂಡ್ ಬಾ, ಏ ಪಾಲಿ ಆ ಬೆಳ್ಳುಳ್ಳಿ ಸಿಪ್ಪೆ ತೂರು, ಆ ಟಮಟ ಚೀಲ ಇತ್ಲಾಗೆ ತಳ್ಳು, ಸೊಪ್ಪಿಗೆ ನೀರ್ ಹಾಕ್ ಹೀಗೆ ಸಂತೆಯಲ್ಲಿ ಎಲ್ಲರ ಭಂಟ. ನನ್ನ ಪಾಪ್ಪಿ, ಪಾಪ್ಪಿ ಅಂತ ಕರೀತ ಹಿಂದೆ ಮುಂದೆ ಸುತ್ತೋನು, ಲೇ ಹೋಗೋ ಪಾಲಿ ಅಪ್ಪಂಗೆ ಹೇಳ್ತೀನಿ ನೋಡು ಅಂತಿದ್ದೆ. ಜೊಲ್ಲು ಸುರಿಸುವ ಪಾಲಿ ನಿತ್ಯ ಸುಖಿ. ಅವನು ಯಾವಾಗಲೂ ಟೈಟೇ. ಒಂಚೂರು ಕೆಲ್ಸ ಮಾಡಿದ ಅಂದ್ರೆ ಹತ್ತು ಇಪ್ಪತ್ತು ದುಡ್ಡು ಕೊಡ್ಬೇಕು ಅವನಿಗೆ. ದುದ್ದು ದುದ್ದು ಅಂದಕೂಡಲೇ ಸಂತೆ ವ್ಯಾಪಾರಸ್ಥರು ಹತ್ತಿಪ್ಪತ್ತು ಕೊಟ್ಟೆಕೊಡ್ತಿದ್ರ್ರು! ಸೀದಾ ಸಾರಾಯಿ ಅಂಗಡಿಗೆ ಹೋಗಿ ಒಂದು ಪಾಕೆಟ್ ಸಾರಾಯಿ ಏರಿಸೋನು. ಪಕ್ಕದಲ್ಲೇ ಚಾಕಣ ಅಂಗಡಿ, ಅಲ್ಲಿ ಒಂದು ಚಾಕಣ ಮೇದರೆ ಒಂದು ಟ್ರಿಪ್ ಮುಗೀತು. ಹೀಗೆ ಐದಾರು ಟ್ರಿಪ್ ಇರ್ತಿತ್ತು. ಎಲ್ಲರ ಕೆಲಸ ಮಾಡಿಕೊಡುವ ಪಾಲಿ ಮಾನಸಿಕ ಅಸ್ವಸ್ಥ ಅಂತ ನಮ್ಮೂರು ಎಂದೂ ಅವನನ್ನ ದೂರ ಇಡ್ಲಿಲ್ಲ. ತನ್ ಜೊತೆಗೆ ಸಾಕಿಕೊಂಡಿತ್ತು.

ತಮಿಳುನಾಡಲ್ಲಿ ಕೆಲಸ ಮಾಡುವಾಗ ನಮ್ಮ ಊಟದ ಮೆಸ್‍ನಲ್ಲಿಯ ಅಡುಗೆ ಮನೆಯಲ್ಲಿ ಯಾವಗಲೂ ಒಬ್ಬ ವ್ಯಕ್ತಿ ವಿರಾಜಮಾನನಾಗಿರ್ತಾ ಇದ್ದ.. ಗಬ್ಬೆದ್ದು ಹೋದ ಶರಟು, ಬಿಳಿಯದು ಅನ್ನುವುದನ್ನೆ ಮರೆತ ಪಂಚೆ, ಹಳೇ ಹವಾಯಿ ಚಪ್ಪಲಿ, ಮುಖ-ತಲೆಯ ತುಂಬಾ ಚೆಲುವಿನ ಚಿತ್ತಾರ ಮಾದೇಸನ ತರ ಕೂದಲು, ಕಂದುಗಣ್ಣು, ಮೆಸ್‍ಗೆ ಊಟಕ್ಕೆ ಹೋಗೋರೆಲ್ಲ ‘ಗೋಪಾಲ್ ಎನ್ನಡಾ? ಸಾಪ್ಟೆಯಾ? ಅಂದ್ರೆ ‘ಆಮಾ ಅಬ್ಬು ಸಾಪ್ಟೆ ಅಬ್ಬು’ ಅಂತಿದ್ದ, ಅವ್ನು ಎಲ್ರನ್ನೂ ಅಬ್ಬು ಅಂತನೇ ಕರೀತ ಇದ್ದ. ಅವನಿಗೂ ನಮ್ ಕುಕ್ ಮಾದೇಸಾಮಿಗೂ ಭಾರೀ ದೋಸ್ತಿ, ಮಾದೇಸಾಮಿಗೆ ತಮಿಳ್ ಬರ್ತಿರಲಿಲ್ಲ, ಗೋಪಾಲ್ಗೆ ಕನ್ನಡ ಬರಲ್ಲ, ಆದ್ರೂ ಅವರಿಬ್ರ ಸಂಭಾಷಣೆ ಸಖತ್ತಾಗಿತ್ತು. ಕೆಲಸವಿಲ್ಲದಾಗ ನಾನೂ ಹೋಗಿ ಅಡುಗೆ ಮನೆಯಲ್ಲಿ ಕೂರ್ತಿದ್ದೆ, ಮೇಡಂ ಗೋಪಾಲ್ ಹತ್ರ ಇಂಗ್ಲಿಷ್ ಓದಿಸ್ತೀನಿ ನೋಡ್ರೀಗ ಅಂದು ಒಂದು ಹಳೇ ಇಂಗ್ಲಿಷ್ ಪೇಪರ್ ಕೈಗೆ ಕೊಟ್ಟು, ‘ಪಡಿ’ ಅಂದ್ರೆ ಸಾಕು ಇಂಗ್ಲಿಷ್ ಬರುವವರ ಅಪ್ಪನ ಥರ ಕಾಲು ಮೇಲೆ ಕಾಲು ಹಾಕ್ಕೋಂಡು ಸ್ಟೈಲಾಗಿ ಬಾಹುಬಲಿ ಸಿನಿಮಾದ ಕಾಲಕೇಯನ ಥರ ಓದ್ತಾ ಹೋಗ್ತಿದ್ರೆ ನಕ್ಕು ನಕ್ಕು ಸಾಕಾಗ್ತಿತ್ತು. ಓದಿನಲ್ಲಿ ಅದೆಂಥಾ ತನ್ಮಯತೆ!! ಕನ್ನಡ, ತಮಿಳು ಇಂಗ್ಲಿಷ್ ಯಾವ್ ಪೇಪರ್ ಯಾವಾಗ ಕೊಟ್ರೂ ಕಾಲಕೇಯನ ಭಾಷೆಯಲ್ಲಿ ನಾವ್ ಸಾಕು ಅನ್ನೋವರೆಗೆ ಓದು..

ಗೋಪಾಲನಿಗೆ ಸ್ನಾನ ಅಂದ್ರೆ ಅಲರ್ಜಿ, ನಮ್ ಮಾದೇಸಾಮಿ, ‘ಹೋಗುಲಾ ಸ್ನಾನ ಮಾಡೋಗು’ ಅಂದ್ರೆ ‘ವೇಂಡ ಅಬ್ಬು’ ಅಂದು ಹೊರಗೆ ಓಡೋದೆ ಸೈ, ಮತ್ತೆ ಮೆಸ್‍ಗೆ ಸ್ನಾನದ ವಿಷಯ ಮರೆಯೋವರ್ಗೂ ಬರ್ತನೆ ಇರ್ಲಿಲ್ಲ, ಕೊನೆಗೆ ಇವ್ನಿಗೆ ಅವನ ಅವತಾರ ನೋಡಿ, ತಲೆ ಕೆಟ್ಟು, ಎಳ್ಕೊಂಡು ಹೋಗಿ, ಕಟಿಂಗ್ ಮಾಡಿಸಿ, ನಲ್ಲಿ ಕೆಳಗೆ ಕೂರಿಸಿ ನೀರು ಸುರಿದು, ಸ್ನಾನ ಮಾಡಿಸಿ, ತನ್ನ ಶರ್ಟು, ಪಂಚೆ ಕೊಟ್ಟು ಎಳ್ಕೊಂಡು ಬಂದು ಕೂರಿಸ್ಕೋತಿದ್ದ. ಅದು ಮಸೆಯಾಗುವವರೆಗೆ ಗೋಪಾಲ ಬದಲಾಯಿಸುತ್ತಲೇ ಇರ್ಲಿಲ್ಲ, ಮತ್ತೆ ಚೌರ, ಮತ್ತೆ ಬೇರೆ ಶರ್ಟು ಪುನರಾವರ್ತನೆಯನ್ನು ಮಾದೇಸಾಮಿ ಬೇಜಾರಿಲ್ಲದೇ ಮಾಡುವುದನ್ನು ನಾ ನೋಡ್ತಾ ಇದ್ದೆ. ಸುತ್ತಲೂ ಕಾಡು, ಆಫೀಸ್ ಕಾಂಪೌಂಡಿಗೆ ಅಂಟಿದಂತೆ ಗಿರಿಜನರ ಊರಿತ್ತು, ಕಾಡಲ್ಲಿ ಆಫೀಸು, ಕ್ವಾರ್ಟರ್ಸ್ ಇದ್ದು ನಾವೆಲ್ಲಾ ಮಾದೇಸಾಮಿ ಮಾಡಿಕೊಡೋ ತಿಂಡಿ ಊಟ ತಿಂದು ಮುಗಿದ ತಕ್ಷಣ ಕೆಲಸದಲ್ಲಿ ಮುಳುಗಿ ಬಿಡ್ತಾ ಇದ್ವಿ, ಜೀರುಂಡೆ ಜಿರ್ ಅನ್ನೋ ಕಾಡಲ್ಲಿ ಮಾದೇಸಾಮಿಗೆ ಅವನೇ ಆಪ್ತನಾಗಿ ಕಾಣಿಸಿರಬೇಕು. ಇವರಿಬ್ರ ನಂಟು ನಾ ಸುಮ್ನೆ ನಿಂತು ನೋಡುವೆ ಅಷ್ಟೆ. ಊರೆಲ್ಲಾ ತಿರುಗಿ ಬಂದ್ರು ಯಾರೂ ಗೋಪಾಲನಿಗೆ ಒಂದು ಮಾತನ್ನು ಬೈದದ್ದು ಕಂಡಿಲ್ಲ ನಾನು.

ನನಗೆ ತಮಿಳು ಸರಿಯಾಗಿ ಬರ್ತಾ ಇರಲಿಲ್ಲ, ಯಾರ್ಮುಂದೆ ಆದರೂ ನಾ ಮಾತಾಡಿದರೆ ಎಲ್ಲ ಗೊಳ್ ಅಂತ ನಗ್ತಾ ಇದ್ರು, ಆರಂಭದಲ್ಲಿ ನನ್ ಕೈಯಿಂದ ಅಕ್ಷರಶ: ತಮಿಳು ಕೊಲೆಯೇ ಆಗಿರಬೇಕು, ಇಂಥ ಸಮಯದಲ್ಲಿ ಗೋಪಾಲ್ ನಂಗೆ ಕನ್ನಡಿಯಾದ, ಸುಮ್ನೆ ಫ್ರೀ ಇದ್ದಾಗಲೆಲ್ಲಾ ಅವನ್ ಜೊತೆ ತಮಿಳು ಮಾತಾಡ್ತಿದ್ದೆ. ನಾ ಎಷ್ಟೇ ತಪ್ಪು ತಮಿಳು ಮಾತಾಡಲಿ, ನಡುನಡುವೆ ಕನ್ನಡ ಸೇರಿಸಲಿ, ಅವನು ತನ್ನ ಕಾಲಕೇಯ ಭಾಷೆ ತಮಿಳು, ಇಂಗ್ಲಿಶ್ ಎಲ್ಲಾ ಮಿಕ್ಸ್ ಮಾಡಿ ಮಾತಾಡ್ತಾ ಇದ್ದ. ನಮ್ಮಿಬ್ಬರ ಸಂಭಾಷಣೆ ಕೇಳಿದ್ರೆ ತಮಿಳವರು ನನ್ನ ಸೀದಾ ಚಿತ್ರದುರ್ಗಕ್ಕೆ ಓಡಿಸಿ ಬಿಡ್ತಿದ್ರೋ ಏನೋ !!

ಈಗ ಏನಾಗ್ತಿದೆ, ಬುದ್ದಿ ಮಾಂದ್ಯರನ್ನು ಸಾಧಾರಣ ಮನುಷ್ಯರ ಥರ ನಾವು ನೋಡ್ತಾ ಇದೀವಾ?? ಕಲಿಯೋದು ಸ್ವಲ್ಪ ಕಮ್ಮಿ ಆದ್ರೂ ಸಾಕು, ನಿಮ್ ಮಗುನಾ ಬುದ್ದಿ ಮಾಂದ್ಯ ಸ್ಕೂಲಿಗೆ ಸೇರ್ಸಿ, ಇಲ್ಲಂದ್ರೆ ಸಾಧಾರಣ ಮಕ್ಳು ನಿಮ್ ಮಗುನಾ ನೋಡಿ ಕೆಡ್ತವೆ ಅನ್ನೋ ದೂರು, ಪಾಪ ಆ ತಂದೆ ತಾಯಿಗೆ ಅದೆಷ್ಟು ನೋವಾಗಬಹುದು, ಸ್ವಲ್ಪ ಬೆಳೆದವರನ್ನಂತೂ ಮನೆಯಲ್ಲಿ ಕೂಡಿ ಹಾಕಿ, ಬೀಗ ಹಾಕೊಂಡು ಹೋಗುವ ಪರಿಪಾಟ ಬೆಳೆದುಬಿಟ್ಟಿದೆ!! ಕಲ್ಪಿಸಿ ನೋಡಿ, ನಮಗೇ ಆ ಥರ ಒಂದು ವಾರ ಮನೆಯಿಂದ ಹೊರಗೆ ಬರದ ಥರ ಸೆರೆಮನೆ ಮಾಡಿದರೆ ನಾವೇ ಹುಚ್ಚರಾಗ್ತೀವಿ. ಇನ್ನು ಅವರು ಏನಾಗಬೇಡ? ಅಕ್ಕಪಕ್ಕದವರು ಸಹಿಸಿಕೊಳ್ಳುವ ಕಲೆ ಬೆಳೆಸಿಕೊಳ್ಳಲಿ, ಬುದ್ದಿಮಾಂದ್ಯ ಮಗು ಸಾಮಾನ್ಯರಂತೆ ಬೆಳೆಯಲಿ. ಸಮಾಜ ಅವರನ್ನು ತನ್ನ ಭಾವಮಯ ಕೋಶದ ಒಳಗೆ ಬಿಟ್ಟುಕೊಳ್ಳಲಿ.. ನಾನಂತೂ ಅಂಥಾ ಗೆಳೆಯರನ್ನು ಹುಡುಕ್ತಾನೇ ಇದೀನಿ.

4 Responses

 1. Anu says:

  ನನ್ನ ಭಾವಕೋಶದೊಳಗೆ ಎಷ್ಟೋ ಇಂಥವರು ನಿದ್ದೆಯಿಂದ ಎದ್ದರು 🙂 ಚಂದದ ಬರಹ !

 2. Narmada says:

  very nice

 3. G Narayana says:

  Heart touching reality of today. Yesterday’s society was much less selfish, more compassionate and more evolved but we boasts of educated society which lacks emotions and behaves like morons.

 4. VEERESH SAVADI says:

  ಉತ್ತಮ ಬರಹಗಳು. ತುಂಬಾ ಇಷ್ಟವಾಯಿತು ಪತ್ರಿಕೆ.

  ನನ್ನ ಸ್ವಂತ ಬರಹಗಳನ್ನು ತಮಗೆ ಕಳಿಸಬಹುದೆ?

Leave a Reply

%d bloggers like this: