ಅವೇ ಶಾಪ ರೈಲಿನ ಬೋಗಿಗಳಿಗೂ..

ಹಂಪಿ ಎಕ್ಸ್ ಪ್ರೆಸ್

ಶ್ರೀವಿಭಾವನ

ಹಂಪಿ, ಗೋಲ್‍ಗುಂಬಜ್
ಹೀಗೆ ಸಾಗುತ್ತದೆ ಒಂದೇ
ರೈಲಿನ ದಶನಾಮಗಳು
ಎಲ್ಲರಲ್ಲೂ ಕ್ಷಣದಲ್ಲೇ
ಕುತೂಹಲ ಕೆರಳಿಸುವ
ಸ್ಥಳನಾಮಗಳು; ಎಂದೋ ನಾಶಗೊಂಡವರ
ಕಥೆಗಳು; ಅವೇ ಶಾಪ
ರೈಲಿನ ಬೋಗಿಗಳಿಗೂ

ರೈಲಿನ ಹೆಸರಿನ ಮೇಲೆ ಸುಂದರ
ಕಥೆಗಳು; ಟಿಕೆಟ್ ಮೇಲೆ
ಗತಕಾಲದ ವರ್ಣ, ವರ್ಣದ ಬಣ್ಣನೆಗಳು
ಆದರೆ ರೈಲಿಗೆ ಮಾತ್ರ ಇವೆರಡರ ಹಂಗಿಲ್ಲ
ಒಂದೊಂದು ನಿಲ್ದಾಣದಲ್ಲೂ
ಸೇರಿಕೊಳ್ಳುವ ಹೊಸಹೊಸ ಬೋಗಿಗಳಲ್ಲಿ
ಕಾಯ್ದಿರಿಸದ ಬೋಗಿ ಹುಡುಕುವವರೇ ಹೆಚ್ಚು
ಖಾಯಂ ವಿಳಾಸ ಇಲ್ಲದ ಜೀವಗಳವು

ಎಸಿ ಟಯರ್ ಕ್ಲಾಸ್‍ಗಳು ಖಾಲಿಖಾಲಿ
ವೈಭವದ ಇಂಟೀರಿಯರ್
ಹೊರಗಿನ ಗಾಳಿಗೂ
ಅಪ್ಪಣೆ ಸಿಕ್ಕಿದರೂ ಪ್ರವೇಶವಿಲ್ಲ
ಕಾಯ್ದಿರಿಸದ ಬೋಗಿಗಳಲ್ಲಿ
ಕಾಲೂರಲೂ ಜಾಗವಿಲ್ಲದಷ್ಟು ಜನಜಂಗುಳಿ,
ಈಗಷ್ಟೇ ಕಣ್ಬಿಟ್ಟ ಕೂಸಿನಿಂದಿಡಿದು
ಈಗಲೋ ಆಗಲೋ ಎಂಬಂತಿರುವವರೆಗಿನ
ಎಲ್ಲರದ್ದೂ ಒಂದೇ ಧ್ಯಾನ
ದಿನ ತುಂಬಿದ ನೂರಾರು ಕನಸುಗಳ
ಗರ್ಭಪಾತವಾಗದಿರಲಿ ಎಂಬ ಹರಕೆ

ಕೊಳಕು ಬಟ್ಟೆ
ಹರಿದ ಬ್ಯಾಗ್‍ನ ಒಳಗಡೆ
ಒಂದೋ ಎರಡೋ ಬಟ್ಟೆ ಬರೆ
ಏನೋ ತಿಂದು, ಕುಡಿದು ಬಾಡಿದ
ದೇಹಗಳು, ರಾತ್ರಿ ಇಡೀ
ಶೌಚಾಲಯದ ಎದುರು ಕುಳಿತು
ಸೋತು ಹೋದ ಕಾಲುಗಳು
ರೈಲು ಬೆಂಗಳೂರು ಸೇರುತ್ತಿದ್ದಂತೆ
ಅರಳುವುದು ಬರೀ ಕಣ್ಣುಗಳಷ್ಟೇ

Leave a Reply