ಇವ್ರಿಗೇನು ಬಂದಿರೋದು ದೊಡ್ ರೋಗ…?

ನಿಯಮಗಳನ್ನು ರೂಪಿಸಬೇಕಾದದ್ದು ಕೆಲಸಗಳು ಸುಗಮವಾಗಿ ನಡೆಯುವುದಕ್ಕೇ ಹೊರತು ‘ಪಾಲನೆಗಾಗಿ’ ಅಲ್ಲ ಎಂಬ ಮೂಲಭೂತ ತತ್ವ ಸರಕಾರಕ್ಕೆ ಅರ್ಥವಾಗುವುದು ಹಾಗೂ ಸೇವೆಯೆಂಬ ಶಪಥ ತೊಟ್ಟು ಬಂದ ತಾನು ಈಗ ನಡೆಸುತ್ತಿರುವುದು ದಂಧೆ ಎಂಬ ‘ಎಚ್ಚರ’ ವೈದ್ಯರಲ್ಲಿ ಮೂಡುವುದು – ಈ ಎರಡು ಪವಾಡಗಳು ಸಾಧ್ಯವಾದರೆ, ಎಲ್ಲವನ್ನೂ ರೂಲುಪಟ್ಟಿ ಹಿಡಿದೇ ನಿಭಾಯಿಸಬಹುದು ಎಂಬ ಕುರುಡು ನಂಬಿಕೆ ಹೊಂದಿರುವ ಕಾರ್ಯಾಂಗಕ್ಕೆ ಈ ಹೊತ್ತಿಗೆ ಸಮರ್ಪಕವಾಗಿ ಕೆಲಸ ಮಾಡುವ ಕ್ಲಚ್ಚು, ಬ್ರೇಕು ಇರುತ್ತಿತ್ತು.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ 2007ಕ್ಕೆ ಚರ್ಚೆ ಎಲ್ಲಿಂದ ಆರಂಭ ಆಗಬೇಕು?

ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಎಂಬುದು ದುಡ್ಡಿನ ಮೂಟೆ ಆಗಿ ಯಾವಾಗ ಬದಲಾಯಿತೋ ಅಲ್ಲಿಂದ ಈಚೆಗೆ ಆಗಿರುವ ಖಾಸಗಿ ವೈದ್ಯಕೀಯ ವ್ಯವಹಾರಗಳ ಸ್ವರೂಪದಲ್ಲಿನ ಬದಲಾವಣೆಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ದೀರ್ಘಕಾಲದಿಂದಲೂ ಇದ್ದ ಕುಟುಂಬ ವೈದ್ಯರು ಎಂಬ “ಓಣಿಯ ಕಿರಾಣಿ ಅಂಗಡಿ” ಹೋಗಿ, ಆ ಜಾಗದಲ್ಲಿ ಪಾಲಿ ಕ್ಲಿನಿಕ್ ಗಳೆಂಬ “ಜನರಲ್ ಸ್ಟೋರು”ಗಳು, ನರ್ಸಿಂಗ್ ಹೋಮುಗಳೆಂಬ “ಸುಪರ್ ಮಾರ್ಕೆಟ್ಟು”ಗಳು ಮತ್ತು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಗಳೆಂಬ “ಮಾಲ್”ಗಳು ಬಂದು ಸೇವೆಯ ಬದಲು ದುಡ್ಡು ಗೋರುವ ವ್ಯವಹಾರ ಆರಂಭಿಸಿರುವುದು ಮೇಲು ನೋಟಕ್ಕೆ ವೈದ್ಯಕೀಯ ಶಿಕ್ಷಣಕ್ಕಾಗಿ ಮಾಡಿರುವ ಹೂಡಿಕೆ/ಖರ್ಚಿನ ವಸೂಲಿಯಂತೆ ಕಂಡರೂ, ಈಗೀಗ ಅದನ್ನೂ ದಾಟಿ ಬೆಳೆದಿದ್ದು ಕೆಲವೆಡೆ ತಲೆಯೊಡೆಯುವ ಕಸಾಯಿಖಾನೆಗಳಾಗಿ ಕುಳಿತುಬಿಟ್ಟಿವೆ; “ಆರೋಗ್ಯ ರಕ್ಷಣೆ ಸೇವೆ” ಮರೆತೇ ಹೋಗಿದೆ.

ಇತ್ತೀಚೆಗೆ ನಾನೇ ಕಂಡ ಒಂದು ಕ್ಲಾಸಿಕ್ ಉದಾಹರಣೆ ಕೊಡುತ್ತೇನೆ. ಹಳ್ಳಿಯ ಒಬ್ಬರು ರೋಗಿ ತನ್ನ ತೂಕ ಇಳಿಕೆ, ನಿಶ್ಶ್ಯಕ್ತಿ, ಉಸಿರಾಟಕ್ಕೆ ಕಷ್ಟ, ಆಗಾಗ ಜ್ವರ ಮತ್ತಿತರ ತೊಂದರೆಗಳಿಗಾಗಿ ಮಂಗಳೂರಿನ ದೊಡ್ಡಾಸ್ಪತ್ರೆಗಳ ಸೂಪರ್ ಸ್ಪೆಷಲಿಸ್ಟುಗಳನ್ನು ಬಹುತೇಕ ಒಂದು ವರ್ಷ ಎಡತಾಕಿದರೂ ತೊಂದರೆ ಪತ್ತೆ ಆಗಲಿಲ್ಲ. ಎಲ್ಲ ಸ್ಪೆಷಲಿಸ್ಟುಗಳು ತಮ್ಮ ವ್ಯಾಪ್ತಿಯ ಎಲ್ಲ ತಪಾಸಣೆಗಳನ್ನೂ ಮಾಡಿ ‘ಎಲ್ಲ ಸರಿ ಇದೆ’ ಎಂದೇ ವರದಿ ಕೊಡುತ್ತಾ ಬಂದಿದ್ದರು. ಕಡೆಗೆ ಆ ಹಳ್ಳಿಯಲ್ಲೇ ಇದ್ದ ಹಳೆ ತಲೆಮಾರಿನ ಕುಟುಂಬ ವೈದ್ಯರೊಬ್ಬರು ಜ್ವರಕ್ಕೆ ಮದ್ದಿಗೆಂದು ಬಂದ ರೋಗಿಯ ದೈಹಿಕ ತಪಾಸಣೆಯ ವೇಳೆ ಹೊಟ್ಟೆಯಲ್ಲಿ ಗಡ್ಡೆ ಬೆಳೆದಂತಿದೆ ಎಂದು ಒತ್ತಿ ನೋಡಿ ಪತ್ತೆ ಹಚ್ಚುವ ಮೂಲಕ ಅದು ಕ್ಯಾನ್ಸರ್ ಆಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು, ಮತ್ತದು ಸಾಬೀತೂ ಆಯಿತು! ಆ ವೇಳೆಗಾಗಲೇ ರೋಗಿಗೆ ಸೂಪರ್ ಸ್ಪೆಷಾಲಿಟಿ ತಪಾಸಣೆಗಳಿಗೆಂದು ಲಕ್ಷಕ್ಕೂ ಮಿಕ್ಕಿ ರೂಪಾಯಿಗಳು ಕೈಬಿಟ್ಟಿದ್ದವು!!

ನಕಲಿ ವೈದ್ಯರು, ಎರ್ರಾಬಿರ್ರಿ ದರ, ಸವಲತ್ತುಗಳಿಲ್ಲದ ವೈದ್ಯಕೀಯ ಬೀಡಾಂಗಡಿಗಳು – ಇದೆಲ್ಲದರ ನಿವಾರಣೆಗೆಂದು 2007ರಲ್ಲಿ ಕರ್ನಾಟಕ ಸರಕಾರ ಖಾಸಗಿ ವೈದ್ಯಕೀಯ ಸೇವೆಗಳ ನಿಯಂತ್ರಣಕ್ಕೆ ಕಾಯಿದೆಯೊಂದನ್ನು ತಂದಿತು. ಮುಂದೆ ಕೇಂದ್ರ ಸರ್ಕಾರ ಕೂಡ 2010ರ ಆಗಸ್ಟ್ ನಲ್ಲಿ ವೈದ್ಯಕೀಯ ಸೇವೆಗಳ ನೋಂದಣಿ ಮತ್ತು ನಿಯಂತ್ರಣಕ್ಕೆ ಕಾನೂನೊಂದನ್ನು ಜಾರಿಗೆ ತಂದಿತು.

ವೈದ್ಯಕೀಯ ಸೇವೆಯನ್ನು ಪರಿಣತ ವೈದ್ಯರೇ ಕೊಡಬೇಕು, ಅಲ್ಲಿ ಅಗತ್ಯ ಇರುವ ಸವಲತ್ತುಗಳನ್ನು ವೈದ್ಯರು ಹೊಂದಿರಬೇಕು, ಶುಚಿತ್ವ ಇರಬೇಕು – ಇದನ್ನೆಲ್ಲ ಕಾನೂನು ಮಾಡಿ ನಿಯಂತ್ರಿಸಬೇಕಾಗಿ ಬಂದಿರುವುದು ಒಂದು ಮಜಲಾದರೆ, ವೈದ್ಯಕೀಯ ಸೇವೆಗಳಿಗೆ ದರ ಕಾನೂನುಬದ್ಧವಾಗಿರಬೇಕು, ಅನಗತ್ಯ ತಪಾಸಣೆಗಳ ಹೆಸರಲ್ಲಿ ಲೂಟಿ ನಿಲ್ಲಬೇಕು ಎಂಬಂತಹ ನಿಯಮಗಳದು ಇನ್ನೊಂದು ಮಜಲು. ಇವೆಲ್ಲವೂ ವೈದ್ಯಕೀಯ ಕ್ಷೇತ್ರದಲ್ಲಿರುವ ಕರಿಕುರಿಗಳ ಕೊಡುಗೆ; ಅದರ ಬಿಸಿಯನ್ನೀಗ ನೈತಿಕ ಪರಿಧಿಯೊಳಗೇ ಕೆಲಸ ನಿರ್ವಹಿಸುತ್ತಿರುವ ಕೆಲವೇ ಕೆಲವು ಸಂಭಾವಿತ ವೈದ್ಯರೂ ಅನುಭವಿಸುವಂತಾಗಿದೆ.

ಒಮ್ಮೆ ವೈದ್ಯಕೀಯ ರಂಗ ಕೂಡ ವೈನ್ ಶಾಪ್, ಸಾರಿಗೆ,ರಿಯಲ್ ಎಸ್ಟೇಟ್ ರೀತಿಯಲ್ಲೇ ಕಮಾಯಿ ಇರುವ ರಂಗ ಎಂಬುದು ಖಚಿತ ಆದ ಬಳಿಕ, ಈಗ ವೈದ್ಯರ ಲಾಭದಲ್ಲಿ ಪಾಲು ಕೇಳಲು ಸರ್ಕಾರಿ ಅಧಿಕಾರಿಗಳೂ ಹೂಟ ಮಾಡಿದ್ದು, ಅದರ ಫಲವೇ  ಈಗ ಮಾಡಿರುವ ಕಾಯಿದೆ ತಿದ್ದುಪಡಿಗಳ ಮೂಲ ಎಂಬುದು ಹೊರನೋಟಕ್ಕೇ ಕಾಣಿಸುತ್ತದೆ. ರೋಗಪತ್ತೆ, ದರ ನಿಗದಿ, ವೈದ್ಯ-ರೋಗಿ ಸಂವಹನಗಳಂತಹ  ಪಕ್ಕಾ ವೈದ್ಯಕೀಯ ಪರಿಣತಿ ಅಗತ್ಯ ಇರುವ ಜಾಗದಲ್ಲೂ ಐ ಎ ಎಸ್ ಅಧಿಕಾರಿಗಳಿಗೆ ಮೂಗು ತೂರಿಸಲು ಅವಕಾಶ ಮಾಡಿಕೊಡುತ್ತಿದೆ ಎನ್ನಲಾದ ಈ ತಿದ್ದುಪಡಿಗಳಿಗೆ ವೈದ್ಯವರ್ಗದಿಂದ ಸಹಜವಾಗಿಯೇ ಭಾರೀ ವಿರೋಧ ಎದುರಾಗಿದೆ. ತಮ್ಮ ಓಝೋನ್ ಪದರ ತಾವೇ ಕಿತ್ತುಕೊಂಡು ಬೆತ್ತಲಾಗಿರುವ ವೈದ್ಯವ್ರಂದ ಈಗ ಬೀದಿಗಿಳಿದು ಪ್ರತಿಭಟಿಸಹೊರಟಿದೆಯಾದರೂ ಸಾರ್ವಜನಿಕರ ಅನುಕಂಪ ಪಡೆಯುವಲ್ಲಿ ಸೋತಿದೆ. ಇದು ಅವರಿಗೆ ಅವರೇ ತೋಡಿಕೊಂಡಿರುವ ಗುಂಡಿ.

ಹೀಗೆ ಊರಿಗೆಲ್ಲ ಬುದ್ಧಿ ಹೇಳುವ ಸರ್ಕಾರದ ಅಧಿಕಾರಿಗಳು ಮನೆಗೆ ಬಂದು ತಮ್ಮ ಮನೆಯ ಅಡುಗೆ ಒಲೆಗೆ ತಾವೇ ಉಚ್ಚೆ ಹೊಯ್ದುಕೊಳ್ಳುವುದು ಇನ್ನೂ ಮಜವಾಗಿದೆ. ವಿಧೇಯಕದ ಸೆಕ್ಷನ್ 24 ಹೀಗೊಂದು ಇಮ್ಯೂನಿಟಿ ತೆಗೆದುಕೊಳ್ಳುತ್ತದೆ:Protection of action taken in good faith.- No suit, prosecution or other legal proceeding shall lie against the State Government or any officer, authority or person in respect of anything which is in good-faith done or intended to be done in pursuance of the provisions of this Act, or any rule or order made thereunder.

ಉಚಿತ ವೈದ್ಯಕೀಯ ಸೇವೆ ಒದಗಿಸುವ ಸರಕಾರಿ ಆಸ್ಪತ್ರೆಯೊಂದನ್ನು ಉಡುಪಿಯಲ್ಲಿ ಹಾಡುಹಗಲೇ ಖಾಸಗಿಯವರಿಗೆ ಹರಿವಾಣದಲ್ಲಿಟ್ಟು ಒಪ್ಪಿಸಿ ಕುಳಿತಿರುವ ಕರ್ನಾಟಕ ಸರಕಾರ ಇಂತಹದೊಂದು ಕಾನೂನನ್ನು ಪಕ್ಷಪಾತವಿಲ್ಲದೆ ಜಾರಿಗೆ ತರುವುದಕ್ಕೆ ಅಗತ್ಯ ನೈತಿಕ ಸ್ಥೈರ್ಯ ಹೊಂದಿದೆಯೇ?

1 Response

  1. Dr.Nagarathna shastri says:

    Super

Leave a Reply

%d bloggers like this: