ಮೂರೇ ದಿನಗಳೆ?

ಸಂಧ್ಯಾರಾಣಿ 

ಮೂರು ದಿನಗಳ ರಂಗ ಉತ್ಸವ. ಮೂರೇ ದಿನಗಳೆ? ಅದಕ್ಕೂ ಮುನ್ನಿನ ಸಿದ್ಧತೆ, ಉತ್ಸವ ನಡೆಯುತ್ತಿದ್ದಾಗಿನ ಸಂಭ್ರಮ, ನಾಟಕದ ಮೊದಲು ಸ್ನೇಹಿತರೊಡನೆ ಹರಟೆ ಮಾತು, ನಾಟಕದ ನಂತರ ಮತ್ತೆಂದು ಸಿಗುವೆವೋ ಎನ್ನುವಂತೆ ಕೈ ಹಿಡಿದು ಮತ್ತಷ್ಟು ಮಾತು.

ಅವುಗಳ ನಡುವೆ ರಂಗದ ಮೇಲಿನ ಕಾವ್ಯದಂತಹ ನಾಟಕಗಳು. ಮನೆಯಂತಾದ ರಂಗಶಂಕರ. ಪ್ರತಿಮೆಗಳಲ್ಲೇ ನಾಟಕ ಕಟ್ಟುವ ಶ್ರೀಪಾದ ಭಟ್ಟರ ನಾಟಕಗಳು ರಂಗದ ಮೇಲೆ ನಡೆಯುವಾಗ ಅಲ್ಲ, ನಂತರ ನಮ್ಮ ಮನಸ್ಸಿನ ರಂಗದ ಮೇಲೂ ನಡೆಯುತ್ತಲೇ ಇರುತ್ತವೆ, ನಮ್ಮನ್ನು ಕಾಡುತ್ತಲೇ ಇರುತ್ತವೆ.

ಮೊದಲ ದಿನದ ನಾಟಕ ’ಮಿಸ್ಟೇಕ್’ – ಸಣ್ಣ ಕಥೆಗಳನ್ನು ಹೆಣಿಗೆಯಾಗಿಸಿದ ನಾಟಕ. ಮಾಂಟೋನ ಕಥೆಗಳ ಕ್ಲುಪ್ತ ಪದಬಳಕೆ, ತಣ್ಣನೆಯ ದನಿಯ ನಿರೂಪಣೆ ಮನಸ್ಸಿನೊಳಗಿರುವ ಮನುಷ್ಯತ್ವಕ್ಕೆ ಪ್ರಶ್ನೆ ಕೇಳುತ್ತಲೇ ಇರುತ್ತದೆ. ನಿರಂತರ ಅತ್ಯಾಚಾರಕ್ಕೊಳಗಾದ ಹುಡುಗಿ ಆಸ್ಪತ್ರೆಯಲ್ಲಿ ಶವದಂತೆ ಬಿದ್ದಿದ್ದಾಳೆ. ವೈದ್ಯೆ ಕಿಟಕಿಯ ಕಡೆ ಕೈತೋರಿಸಿ ’ಓಪನ್ ಮಾಡು’ ಎಂದು ಸಹಾಯಕರಿಗೆ ಹೇಳಿದ ಮಾತು ಕಿವಿಗೆ ಬಿದ್ದ ತಕ್ಷಣ ಸಲವಾರದ ಲಾಡಿ ತೆಗೆಯತೊಡಗುತ್ತಾಳೆ.

ಬಹುಶಃ ಆ ಆರು ದಿನಗಳಲ್ಲಿ ಅವಳು ಕೇಳಿರುವ ಮಾತು ಅದೊಂದು ಮಾತ್ರ.

ಅವಳ ಯಾತನೆಯ ಊಹೆಯಿಂದಲೇ ರಕ್ತ ತಣ್ಣಗಾಗುತ್ತದೆ. ಗಲಭೆ, ಯುದ್ಧ, ಜಗಳಗಳ ನಡುವೆ ಹೆಣ್ಣು ಮಾತ್ರ ಸದಾ ಒಂದು ಹೆಣ್ಣಾಗಿಯೇ ಕಾಣುತ್ತಾಳೆ, ಅವಳಿಗೆ ಜಾತಿ ಇಲ್ಲ, ಭಾಷೆ ಇಲ್ಲ, ಮತ ಇಲ್ಲ. ಅವಳು ಹೆಣ್ಣು ಮತ್ತು ಅವಳು ಆಕ್ರಮಿಸಬೇಕಾದವಳು ಎನ್ನುವುದು ಎಲ್ಲಾ ಯುದ್ಧ, ಗಲಭೆಗಳ ಹಿಂದಿನ ರಾಕ್ಷಸೀಮುಖ.

ಎರಡನೆಯ ದಿನ ಅಂತೂ ಹೇಳುವುದೇ ಬೇಡ. ರವೀಂದ್ರನಾಥ ಟಾಗೂರರ ’ರಕ್ತ ಕಣಗಲೆ’. ಅದೊಂದು ರಂಗಕವಿತೆ. ಇಡೀ ನಾಟಕ ಪ್ರತಿಮೆಗಳಲ್ಲಿ ಅನಾವರಣವಾಗುತ್ತದೆ, ಅರೆ ಒಂದು ನಾಟಕವನ್ನು ಹೀಗೂ ಕಟ್ಟಬಹುದೆ? ಅದರ ವಿನ್ಯಾಸದಿಂದಲೇ ಗಮನ ಸೆಳೆಯುವ ನಾಟಕಕ್ಕೆ ಎಲ್ಲಾ ಕಲಾವಿದರ ನುರಿತ ಅಭಿನಯ, ಸಂಭಾಷಣೆ, ನೇರ ಹೃದಯಕ್ಕೇ ಲಗ್ಗೆ ಇಡುವ ಸಂಗೀತ, ಹಾಡು, ಹಾಡಿನ ದನಿ… ಇನ್ನೂ ಬಹಳಷ್ಟು ದಿನಗಳು ಬೇಕು ಆ ’ಮಾಯಕ’ದಿಂದ ತಪ್ಪಿಸಿಕೊಳ್ಳಲು.

ಟಾಗೂರರು ಬರೆದ ಬರಹ ಇಂದಿಗೂ ಎಷ್ಟು ಪ್ರಸ್ತುತ.

ರಂಗದ ಮೇಲೆ ಹಾಡುತ್ತಲೇ ಅಭಿನಯಿಸುವ ದಿಶಾ ರಮೇಶ್ ನಾವು ಮುಂದಿನ ದಿನಗಳಲ್ಲಿ ಬಹಳಷ್ಟು ನಿರೀಕ್ಷಿಸಬಹುದಾದ ಕಲಾವಿದೆ. ಹಾಗೆಯೇ ಅಷ್ಟು ದಿನಗಳ ಸೆರೆಯಿಂದ ಬಿಡಿಸಿಕೊಂಡ ನಿರಾಳತೆಯನ್ನು, ಬಂಧಮುಕ್ತತೆಯನ್ನು ಕಡೆಯ ಕೆಲವು ಕ್ಷಣಗಳಲ್ಲಿ ಹಕ್ಕಿಯಂತೆ ರಂಗದ ತುಂಬಾ ಹಾರಿ ಕಟ್ಟಿಕೊಡುವ ಮೇಘ ಸಮೀರ ಆ ಬಿಡುಗಡೆಯ ಭಾವವನ್ನು ನಿರಾಯಾಸವಾಗಿ ನಮಗೆ ದಾಟಿಸುತ್ತಾರೆ. ಸಂಭಾಷಣೆಯಲ್ಲಿನ ವ್ಯಂಗ್ಯವನ್ನು ’ಬಿಶು’ ಪಾತ್ರಧಾರಿ ಅಭಿವ್ಯಕ್ತಿಸುವ ಬಗೆ ನನ್ನನ್ನು ಮೂಕಳಾಗಿಸಿದೆ. ಕಾವ್ಯದಂತಹ ಈ ನಾಟಕವನ್ನು ಮತ್ತೊಮ್ಮೆ ನೋಡಬೇಕಿದೆ.

ನಾಟಕದ ಕಡೆಯ ದಿನದ ನಾಟಕ ’ಚಿತ್ರಾ’. ಅದೊಂದು ನೃತ್ಯನಾಟಕ. ಸಂಗೀತ, ನೃತ್ಯ, ಲಾಸ್ಯ, ಸಂಭ್ರಮ, ವರ್ಣ…. ಅದೊಂದು ದೃಶ್ಯಕಾವ್ಯವೇ ಸರಿ. ಯಾವುದನ್ನೋ ಪಡೆಯಲು ನಿರಂತರವಾಗಿ ತಪಿಸುವುದು ಬೇರೆ, ಅದಕ್ಕಾಗಿ ಶ್ರಮಿಸುವುದು ಬೇರೆ, ಆದರೆ ಅದಕ್ಕಾಗಿ ನಮ್ಮನ್ನೇ ನಾವು ಕಳೆದುಕೊಂಡಾಗ ಪಡೆಯುವುದು ನಮ್ಮದಾದೀತೆ? ಅದನ್ನು ಪಡೆಯುವುದರಲ್ಲಿ ನಾವು ನಮ್ಮನ್ನೇ ಕಳೆದುಕೊಂಡುಬಿಟ್ಟರೆ? ಇರುವುದಕ್ಕಿಂತ ಬೇರೇನೋ ಆಗಲು, ಬೇರೇನೋ ಪಡೆಯಲು ಪ್ರತಿ ದಿನದ ಹೊಂದಾಣಿಕೆಯ ಈ ದಿನಗಳಲ್ಲಿ ’ಚಿತ್ರಾ’ ನಾಟಕವಾಗಿ ನೋಡಿದರೆ ನಾಟಕ, ಕನ್ನಡಿಯಾಗಿ ನೋಡಿದರೆ ಬದುಕು. ಚಿತ್ರಾ ಬದಲಾಗುವ ದೃಶ್ಯದ ಸಂಯೋಜನೆಯಂತೂ ನಯನಮನೋಹರ.

ಈ ಎಲ್ಲಾ ಅನುಭವವನ್ನೂ ಕಟ್ಟಿಕೊಟ್ಟ ಶ್ರೀಪಾದಭಟ್ಟರೆನ್ನುವ ರಂಗ ಕವಿಗೆ ನಮನ.

ಇಷ್ಟು ದೂರಬಂದು ನಮಗೆ ಇಂತಹ ನಾಟಕಗಳನ್ನಿತ್ತ ರಂಗ ತಂಡಗಳಿಗೆ ನಮನ. ಒಂದು ಉತ್ಸವ ಕಳೆಕಟ್ಟುವುದು ಅದನ್ನು ನಮ್ಮ ಜೊತೆಯಲ್ಲಿ ಸವಿಯುವವರಿದ್ದರೆ ಮಾತ್ರ. ’ಅವಧಿ’ಗೆ ಹತ್ತು ವರ್ಷಗಳ ಸಂಭ್ರಮ ಎಂದಾಗ ಜೊತೆಗೂಡಿ, ನಮ್ಮ ಸಂಭ್ರಮವನ್ನು ಹಬ್ಬವಾಗಿಸಿದ ನಿಮಗೆ ಶರಣು. ಪ್ರತಿ ಗಳಿಗೆ ಎದುರಾಗುತ್ತಿದ್ದ ಪರಿಚಿತ ಮುಖಗಳು, ಪ್ರತಿ ಗಳಿಗೆ ಹಂಚಿಕೊಳ್ಳುತ್ತಿದ್ದ ನಗು, ಪ್ರೀತಿ. ’ಕೊಡಲು ಕೊಳಲು ಸ್ನೇಹ, ಪ್ರೀತಿ ಬಿಟ್ಟು ಬೇರೆ ಉಂಟೆ ಬಾಳಲಿ?’ ಎಲ್ಲೆಲ್ಲಿಂದ ಬಂದಿರಿ, ನಿಮ್ಮ ಪ್ರೀತಿ ಇತ್ತ ಬೆಂಬಲ, ಆತ್ಮವಿಶ್ವಾಸ ದೊಡ್ಡದು.

’ಅವಧಿ’ಗೀಗ ಹತ್ತು ವರುಷ, ಅವಧಿಯೊಂದಿಗಿನ ನನ್ನ ಪಯಣಕ್ಕೆ ಏಳು ವರ್ಷಗಳಾಯಿತು.

ಈ ಏಳು ವರ್ಷಗಳ ಪಯಣದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು, ಒಂದೊಂದು ಜವಾಬ್ದಾರಿ ಕೊಟ್ಟಾಗಲೂ ನನ್ನ ಚೌಕಟ್ಟನ್ನು ಮುರಿದುಕೊಂಡು ಪರಿಧಿಯನ್ನು ಹಿಗ್ಗಿಸಿಕೊಳ್ಳುವಂತೆ ಬೆಂಬಲ, ಆತ್ಮವಿಶ್ವಾಸ ಕೊಟ್ಟ ಸಂಪಾದಕ Gn Mohan ರಿಗೆ ನಿರಂತರ ಕೃತಜ್ಞತೆಗಳು.

Leave a Reply