ಮತಾಂಧತೆಯ ಲೋಕ ಬಿಚ್ಚಿಡುವ ‘ಮಿಸ್ಟೇಕ್’

ಶಶಿಕಾಂತ ಯಡಹಳ್ಳಿ

ಭಾರತದ ವಿಭಜನೆಯ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಹಿಂಸಾಚಾರಕ್ಕೆ ಲಕ್ಷಾಂತರ ಜನ ಬಲಿಯಾದರು. ಒಂದು ತಪ್ಪು ಇನ್ನೊಂದು ತಪ್ಪಿಗೆ ದಾರಿಯಾಗುತ್ತಾ, ಒಂದು ಕೋಮಿನ ಹಿಂಸೆ ಇನ್ನೊಂದು ಕೋಮಿನವರನ್ನು ಪ್ರಚೋದಿಸುತ್ತಾ ರಕ್ತಪಾತವೇ ನಡೆದುಹೋಯಿತು. ಕೋಮು ದಳ್ಳುರಿಗೆ ಅಗಣಿತ ಅಮಾಯಕರು ಬಲಿಯಾಗಿಹೋದರು.

ಮನುಷ್ಯನೊಳಗಿನ ಕ್ರೌರ್ಯ ಹಾಗೂ ಹಿಂಸಾಪಾತಕ್ಕೆ ಸಾಕ್ಷಿಯಾದ ಈ ದುರಂತಗಳನ್ನು ಆಧರಿಸಿ ಸಾದತ್ ಹಸನ್ ಮಾಂಟೋ ಹಲವಾರು ಕಥೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಮಿಸ್ಟೇಕ್, ಓಪನ್‍ ಮಾಡು, ಷರೀಫನ್ ಮತ್ತು ಪುರುಷಾರ್ಥ ಎಂಬ ನಾಲ್ಕು ಕಥೆಗಳನ್ನು ಆಯ್ದುಕೊಂಡ ಡಾ.ಶ್ರೀಪಾದ್ ಭಟ್‍ರವರು ‘ಮಿಸ್ಟೇಕ್’ ಹೆಸರಲ್ಲಿ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ.

ರಂಗಶಂಕರದಲ್ಲಿ ‘ಅವಧಿ’ ಆಯೋಜಿಸಿದ ಮೂರು ದಿನಗಳ ಡಾ. ಶ್ರೀಪಾದ ಭಟ್‍ರವರ ನಾಟಕೋತ್ಸವದ ಮೊದಲ ದಿನ ಜೂನ್ 15 ರಂದು “ಮಿಸ್ಟೇಕ್” ನಾಟಕ ಪ್ರದರ್ಶನಗೊಂಡು ಹಿಂಸೆಯ ಕೆಲವಾರು ಆಯಾಮಗಳನ್ನು ತೆರೆದಿಟ್ಟಿತು. ಮಾಂಟೋರವರ ನಾಲ್ಕೂ ಕಥೆಗಳನ್ನು ನಯಿಂ ಸುರಕೋಡುರವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಶ್ರೀಪಾದ ಭಟ್‍ರವರು ಉಡುಪಿಯ ರಥಬೀದಿ ಗೆಳೆಯರು’ ತಂಡದ ಕಲಾವಿದರುಗಳಿಗೆ ನಿರ್ದೇಶಿಸಿದ್ದಾರೆ.


ಅಕ್ಷರ ರೂಪದ ಕಥೆಗಳನ್ನು ರಂಗರೂಪಕ್ಕೆ ಅಳವಡಿಸುವಾಗ ಹಲವಾರು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆದರೆ ಅಂತಹ ಯಾವುದೇ ಪರಿವರ್ತನೆಗಳನ್ನು ಮಾಡದೇ ಕಥೆಗಳು ಇದ್ದಂತೆ ನಾಟಕವಾಗಿಸುವ ಪ್ರಯತ್ನವೊಂದನ್ನು ಈ ನಾಟಕದ ಮೂಲಕ ಶ್ರೀಪಾದರು ಮಾಡಿದ್ದಾರೆ. ಕಥೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಇದ್ದದ್ದನ್ನು ಇದ್ದಂತೆ ಅಭಿನಯಿಸಿ ತೋರುವ ಈ ರೀತಿಯ ಪ್ರಯೋಗಗಳನ್ನು ಕಥಾಭಿನಯ ಎನ್ನಬಹುದಾಗಿದೆ. ಕಥಾಭಿನಯದ ರಂಗಸಾಧ್ಯತೆಯನ್ನು ವಿಸ್ತರಿಸುವ ಶ್ರೀಪಾದರ ಪ್ರಯತ್ನ ಅಭಿನಂದನಾರ್ಹ.

ಕೋಮುದಳ್ಳುರಿಯಲ್ಲಿ ಮತಾಂಧರು ತಪ್ಪು ತಿಳುವಳಿಕೆಯಿಂದಾಗಿ ತಮ್ಮದೇ ಕೋಮಿನವನನ್ನು ಕೊಂದು ತದನಂತರ ಜನನಾಂಗ ಪರೀಕ್ಷಿಸಿ ತಮ್ಮವನನ್ನೇ ಕೊಂದಿದ್ದಕ್ಕೆ ನಿರ್ಭಾವುಕರಾಗಿ “ಮಿಸ್ಟೇಕ್ ಆಯಿತು” ಎಂದು ಘೋಷಿಸುವುದು ಮಿಸ್ಟೇಕ್ ಕಥೆಯ ಸಾರವಾಗಿದೆ.

ಹೆಂಡತಿಯ ಹೆಣ ನೋಡಿ ದಿಗ್ಬ್ರಾಂತನಾದ ಮುಸ್ಲಿಂ ವ್ಯಕ್ತಿ ನಾಪತ್ತೆಯಾದ ತನ್ನ ಮಗಳು ಸಕೀನಾಳನ್ನು ಹುಡುಕಿ ಕೊಡಲು ಇಸ್ಲಾಂ ಕೋಮುವಾದಿಗಳಿಗೆ ಮೊರೆ ಇಡುತ್ತಾನೆ. ಆ ಮತಾಂಧರಿಂದ ವಿಪರೀತ ಅತ್ಯಾಚಾರಕ್ಕೊಳಗಾಗಿ ಪ್ರಜ್ಞೆ ತಪ್ಪಿದ ಸಕೀನಾ ಆಸ್ಪತ್ರೆ ಸೇರಿ ಎಚ್ಚರಗೊಂಡು ಕಿಟಕಿ ತೆಗೆಯೆಂದಾಗ ಅದು ಬಟ್ಟೆ ಬಿಚ್ಚುವಂತೆ ತಿಳಿದು ಕಮೀಜ್ ಬಿಚ್ವುವ ಮಾರ್ಮಿಕತೆ ‘ಓಪನ್‍ ಮಾಡು’ ಕಥೆಯ ಸಾರಾಂಶವಾಗಿದೆ.

ತನ್ನ ಮಗಳು ಷರೀಫನ್ ಹಿಂದೂ ಮತಾಂಧರಿಂದ ಅತ್ಯಾಚಾರಕ್ಕೊಳಗಾಗಿದ್ದರಿಂದ ಕ್ರೋಧಿತನಾದ ಕಾಸಿಂ ಮೂವರು ಹಿಂದೂ ಮತೀಯವಾದಿಗಳನ್ನು ಸಾಯಿಸಿದ ನಂತರ ಹಿಂದೂ ಧರ್ಮಿಯರ ಮನೆಗೆ ನುಗ್ಗಿ ತನ್ನದೇ ಮಗಳ ವಯಸ್ಸಿನವಳ ಮೇಲೆ ಸೇಡು ತೀರಿಸಿಕೊಂಡು ತದನಂತರ ಪಶ್ಚಾತ್ತಾಪ ಪಡುವುದು “ಷರೀಫನ್” ಕಥೆಯ ತಿರುಳಾಗಿದೆ. ಮೂರು ಜನ ಹಿಂದೂ ಇಸ್ಲಾಂ ಸ್ನೇಹಿತರು ಕೋಮುಗಲಭೆಯಿಂದ ಪ್ರಚೋದನೆಗೊಂಡು ಹೇಗೆ ಪರಸ್ಪರ ಸೇಡಿನ ಮನೋಭಾವವನ್ನು ವ್ಯಕ್ತಪಡಿಸುತ್ತಾ ಕೊನೆಗೆ ಪೂರಕವಾಗಿ ಸ್ಪಂದಿಸುವುದನ್ನು ಕಥೆ ಹೇಳುತ್ತದೆ. ಒಟ್ಟಾರೆ ಈ ನಾಲ್ಕೂ ಕಥೆಗಳಲ್ಲಿ ಕೋಮು ಹಿಂಸೆಯೇ ಪ್ರಧಾನ ಅಂಶವಾದ್ದು ಮನುಷ್ಯನೊಳಗಿನ ಕ್ರೌರ್ಯವನ್ನು ಕಟ್ಟಿಕೊಡುತ್ತವೆ.

ಮೊದಲ ಮತ್ತು ಕೊನೆಯ ಕಥೆಗಳೆರಡೂ ಪುರುಷರ ಕ್ರೌರ್ಯದ ಅತಿರೇಕಗಳನ್ನು ತೋರಿಸಿದರೆ, ಎರಡನೆಯ ಹಾಗೂ ಮೂರನೆಯ ಕಥೆಗಳು ಮತಾಂಧರಿಂದ ಅಮಾಯಕ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರವನ್ನು ಹೇಳುತ್ತವೆ. ಜನಾಂಗೀಯ ಹಿಂಸೆ, ಮತೀಯ ದಂಗೆ ಯಾವುದೇ ಇರಲಿ ಅದಕ್ಕೆ ಮೊದಲು ಬಲಿಯಾಗುವುದು ಮಹಿಳೆಯರು ಎಂಬುದಕ್ಕೆ ಈ ಕಥೆಗಳು ಸಾಕ್ಷಿಯಾಗಿವೆ. ಮಹಿಳೆಯರು ಸ್ವಧರ್ಮೀಯರಾಗಿರಲಿ ಇಲ್ಲವೇ ಪರಧರ್ಮಿಯರಾಗಿರಲಿ ಮತಾಂಧರಿಗೆ ಒಂದೇ ಅನ್ನುವುದನ್ನು ಈ ಎರಡೂ ಕಥೆಗಳು ಹೇಳುತ್ತವೆ. ಷರೀಫನ್ ಕಥೆಯಲ್ಲಿ ಅನ್ಯಧರ್ಮೀಯ ಹೆಣ್ಣಿನ ಮೇಲೆ ಸೇಡಿನ ಅತ್ಯಾಚಾರ ನಡೆದರೆ, ಓಪನ್‍ ಮಾಡು ಕಥೆಯಲ್ಲಿ ಸ್ವಧರ್ಮಿಯರಿಂದಲೇ ಸಕಿನಾ ಅತ್ಯಾಚಾರಕ್ಕೀಡಾಗುತ್ತಾಳೆ. ಯಾವ ಧರ್ಮದವರಾದರೇನು ಮಹಿಳೆ ಭೋಗದ ಸರಕಾಗಿ ಲೈಂಗಿಕ ಶೋಷಣೆಗೊಳಗಾಗುವುದು ನಿರಂತರ ಎನ್ನುವುದನ್ನು ಈ ಎರಡೂ ಕಥೆಗಳು ಮಾರ್ಮಿಕವಾಗಿ ಹೇಳುತ್ತವೆ.

ನಾಟಕದಲ್ಲಿ ಎಲ್ಲೂ ಹಿಂದೂ ಇಲ್ಲವೇ ಮುಸ್ಲಿಂ ಮತಾಂಧರನ್ನು ಪ್ರತ್ಯೇಕವಾಗಿ ವಿಭಜಿಸಿ ತೋರಿಸದೇ ಧರ್ಮೋನ್ಮಾದ ಪೀಡಿತರೆಲ್ಲಾ ಒಂದೇ ಬಗೆಯವರು ಎಂಬಂತೆ ಚಿತ್ರಿಸಲಾಗಿದೆ. ಮಿಸ್ಟೇಕ್ ಕಥೆಯಲ್ಲಿ ಕೊಂದವರು ಹಾಗೂ ಕೊಲೆಯಾದವನು ಒಂದೇ ಕೋಮಿನವರಾಗಿದ್ದರೂ ಅವರು ಯಾವ ಧರ್ಮೀಯರು ಎಂಬುದು ಗೊತ್ತಾಗದಂತೆ ನೋಡಿಕೊಳ್ಳಲಾಗಿದೆ. ಧರ್ಮ ಯಾವುದಾದರೇನು ಹಿಂಸೆ ಹಿಂಸೆಯೇ, ಕೊಲೆ ಕೊಲೆಯೇ, ಮಿಸ್ಟೇಕ್ ಮಿಸ್ಟೇಕೇ ಎನ್ನುವುದನ್ನು ಬಹಳ ಸೂಚ್ಯವಾಗಿ ಈ ನಾಟಕ ಆರಂಭದ ಕಥೆಯಲ್ಲಿ ತೋರಿಸುವಲ್ಲಿ ಸಫಲವಾಗಿದೆ.

ನಾಲ್ಕು ವಿಭಿನ್ನ ಹಾಗೂ ಪ್ರತ್ಯೇಕ ನಾಟಕಗಳನ್ನು ಒಂದು ಬಂಧದಲ್ಲಿ ಜೋಡಿಸಿದ ಕ್ರಮ ವಿಶಿಷ್ಟವಾಗಿದೆ. ಮಿಸ್ಟೇಕ್ ಎನ್ನುವ ಒಂದೆಳೆ ಕಥೆಯ ಮೂಲಕ ಆರಂಭವಾಗುವ ನಾಟಕ ತದನಂತರ ಓಪನ್‍ ಮಾಡು ಕಥೆಯ ಮೂಲಕ ವಿಸ್ತರಣೆಗೊಳ್ಳುತ್ತಾ ಸಾಗುತ್ತದೆ. ಒಂದನೆ ಕಥೆ ಹಾಗೂ ಎರಡನೆ ಕಥೆಗಳು ಒಂದಕ್ಕೊಂಡು ಮುಂದುವರೆದ ಭಾಗಗಳಂತೆ ತಳುಕು ಹಾಕಿಕೊಂಡಿವೆ. ಎರಡನೇ ಹಾಗೂ ಮೂರನೇ ಕಥೆಯ ಘಟನೆಯಲ್ಲಿ ಸಾಮ್ಯತೆಗಳಿವೆ. ಮಹಿಳೆಯ ಮೇಲೆ ಮತಾಂಧರ ಅತ್ಯಾಚಾರದ ವಿಷಯವೇ ಈ ಎರಡೂ ಕಥೆಗಳಲ್ಲಿ ರಿಪೀಟ್ ಆಗುತ್ತವೆ.

ಈ ಮೂರೂ ಕಥೆಗಳು ಹಿಂಸೆ ಮತ್ತು ಕ್ರೌರ್ಯದ ಕಾರಣ ಪರಿಣಾಮಗಳನ್ನು ಕಾವ್ಯಾತ್ಮಕತೆಯ ರೀತಿಯಲ್ಲಿ ಸಾಂಕೇತಿಕವಾಗಿ ಹೇಳುತ್ತವೆ. ಆದರೆ ನಾಲ್ಕನೇ ಕಥೆ ಇದ್ದಕ್ಕಿದ್ದಂತೆ ವಾಚ್ಯವಾಗಿ ಹಿಂದು ಮುಸ್ಲಿಂ ಧರ್ಮಗಳು ಹಾಗೂ ಕೋಮುಹಿಂಸೆಯ ಬಗ್ಗೆ ವಿವರಗಳನ್ನು ಕೊಡಲು ಶುರುಮಾಡುತ್ತದೆ. ಆದರೆ ಕೊನೆಯದಾಗಿ, ಧರ್ಮಗಳು ಬೇರೆಯಾದರೂ ಮನುಷ್ಯತ್ವ ಮಾತ್ರ ಒಂದೇ ಎನ್ನುವುದನ್ನು ಮೂವರು ಗೆಳೆಯರ ಅಗಲಿಕೆಯ ನೋವಿನಲ್ಲಿ ಮಾರ್ಮಿಕವಾಗಿ ತೋರಿಸಲಾಗಿದೆ. ಧರ್ಮ ಹಿಂಸೆ ಕ್ರೌರ್ಯಗಳೆಷ್ಟೇ ಆದರೂ ಕೊನೆಗೂ ಮಾನವೀಯ ಸಂಬಂಧಗಳೇ ಮುಖ್ಯ ಎನ್ನುವುದನ್ನು ಹೇಳುವುದೇ ಈ ನಾಟಕದ ಉದ್ದೇಶವೂ ಆಗಿದೆ.

ಹಿಂಸೆಯ ಅತಿರೇಕಗಳನ್ನು ತೋರಿಸಲು ಕಥಾಭಿನಯಕ್ಕೆ ಪೂರಕವಾಗಿ ಬಳಸಲಾದ ಬೆಳಕು, ಸಂಗೀತ ಹಾಗೂ ಬ್ಯಾಕ್‍ಡ್ರಾಪ್‍ಗಳು ನಾಟಕದಾದ್ಯಂತ ಅನನ್ಯವಾಗಿ ಮೂಡಿ ಬಂದಿವೆ. ಮಾಂಟೋ ಕಥೆಯೊಳಗಿನ ಭಾವತೀವ್ರತೆಯನ್ನು ಪ್ರೇಕ್ಷಕರಿಗೆ ಸಂವಹನ ಮಾಡುವಲ್ಲಿ ಈ ರಂಗತಂತ್ರಗಳು ಸಹಕಾರಿಯಾಗಿವೆ. ಕ್ರೌರ್ಯ ಅಂದರೆ ಕತ್ತಲು. ಅದನ್ನು ಸಾಂಕೇತಿಕವಾಗಿ ತೋರಲು ನಾಟಕದಲ್ಲಿ ಕತ್ತಲೆಯನ್ನೇ ಪ್ರಧಾನವಾಗಿಟ್ಟುಕೊಂಡು ಅಗತ್ಯ ಇರುವಷ್ಟೇ ಬೆಳಕನ್ನು ಕೊಡಲಾಗಿದ್ದು, ಹಿಂಸೆಯನ್ನು ತೋರಿಸುವಾಗೆಲ್ಲಾ ಕೆಂಪು ಬಣ್ಣದ ಬೆಳಕನ್ನು ಬಳಸಿದ್ದು ದೃಶ್ಯಕ್ಕೆ ಅಗತ್ಯವಾದ ಮೂಡ್ ಕ್ರಿಯೇಟ್ ಆಗಿದೆ. ಶ್ರೀಪಾದ ಭಟ್ಟರವರೇ ಮಾಡಿದ ಬೆಳಕಿನ ವಿನ್ಯಾಸ ನಾಟಕದಲ್ಲಿ ಸೋಜಿಗವನ್ನು ಸೃಷ್ಟಿಸಿದೆ.

ಎಲ್ಲೆಲ್ಲಿಂದಲೋ ಆರಿಸಿಕೊಂಡು ಸಂಯೋಜಿಸಲಾದ ಹಿನ್ನೆಲೆ ಸಂಗೀತ ಇಡೀ ನಾಟಕ ಪ್ರತಿ ದೃಶ್ಯಗಳನ್ನೂ ಆವರಿಸಿಕೊಂಡಿದೆ. ನಾಟಕಾರಂಭದ ಮೊದಲೇ ನಾಲ್ಕಾರು ನಿಮಿಷಗಳ ಕಾಲ ಕೇಳಿಸಲಾದ ಯಾವುದೋ ಗೊತ್ತಿಲ್ಲದ ಭಾಷೆಯ ಕಥೆ ಎಂಬರ್ಥದ ಹಾಡು ಮತ್ತು ಸಂಗೀತ ಕೇಳುಗರಲ್ಲಿ ವಿಚಿತ್ರವಾದ ವಿಷಾದಕರ ಮೂಡೊಂದನ್ನು ಸೆಟ್ ಮಾಡಿತು. ಅಕೀರಾ ಕೊರಾಸೋವಾರ ಡ್ರೀಮ್ಸ್ ಚಿತ್ರದ ಸಂಗೀತ ಹಾಗೂ ಕೋಮು ಗಲಭೆ ಕುರಿತ ಕೋರ್ಜಾನಿಯಾ ಸಿನೆಮಾದ ಡಿಸ್ಟರ್ಬಿಂಗ್ ಮ್ಯೂಸಿಕ್ ಗಳನ್ನೆಲ್ಲಾ ದೃಶ್ಯಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಆದರೆ ಈ ಹಿನ್ನೆಲೆ ಸಂಗೀತವನ್ನು ಒಂದು ಸಲ ಕೇಳಿಸಿದರೆ ಕೇಳಬಹುದಾಗಿತ್ತು ಆದರೆ ಮತ್ತೆ ಮತ್ತೆ ಪುನರಾವರ್ತನೆ ಮಾಡಿದ್ದರಿಂದ ಕೇಳುಗರಿಗೆ ಒಂಚೂರು ಅಸಹನೆಯನ್ನುಂಟು ಮಾಡಿತು. ಭಾವತೀವ್ರ ದೃಶ್ಯಗಳಲ್ಲಿ ಮಾಡಲಾದ ಲೈವ್ ಆಲಾಪಗಳು ಪ್ರೇಕ್ಷಕರ ಎದೆಯಾಳಕ್ಕಿಳಿದಂತೆ ಭಾಸವಾದವು.

ಮಿಸ್ಟೇಕ್ ನಾಟಕದಲ್ಲಿ ಮಿಸ್ಟೇಕ್ ಮಾಡಿದ್ದು ಹಾಡುಗಳನ್ನು ಹಾಡಿದ ರೀತಿ. ತುಂಬಾ ಉತ್ತಮವಾದ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಫೈಜ್ ಅಹಮದ್‍ರವರು ರಚಿಸಿದ ‘ಹೂಗಳು ಬಾಡಿದವೋ…’ ಹಾಡು ಹಾಗೂ ಕೈಪ್ ಹಜ್ಮಿಯವರು ಬರೆದ ‘ನಾವೆಲ್ಲಿ ಹೂಳಲ್ಪಟ್ಟಿದ್ದೇವೆ..’ ಹಾಡು ಹಾಗೂ ಬ್ರೆಕ್ಟ್‍ನ ಕವಿತೆಗಳ ಅನುವಾದ ಮತ್ತು ಹಾಡಿದ ರೀತಿಗಳು ಗದ್ಯಮಯವಾಗಿದ್ದು ಕೇಳುಗರಿಗೆ ಊಟದ ಜೊತೆಗೆ ಕಲ್ಲು ತಿಂದಂತ ಅನುಭವಕೊಟ್ಟವು. ಬ್ಯಾಕ್‍ಡ್ರಾಪ್‍ನಲ್ಲ್ಲಿ ಸ್ಥಿರವಾಗಿದ್ದ ಮೋಹನ್ ಸೋನಾರವರ ಪೇಂಟಿಂಗ್ ಹಾಗೂ ಅದರ ಮೇಲೆ ಸುಸ್ಥಿರವಾಗಿ ಬಿಟ್ಟ ಸ್ಪಾಟ್ ಲೈಟಿಂಗ್ ನಾಟಕದಾದ್ಯಂತ ಗಮನ ಸೆಳೆಯುವಂತಿದ್ದು ನಾಟಕದೊಳಗಿನ ಹಿಂಸೆ ಹಾಗೂ ಕ್ರೌರ್ಯಗಳಿಗೆ ಮೂಕ ಸಾಕ್ಷಿಯಾಗಿತ್ತು.

ನಾಟಕಕ್ಕೆ ಮುನ್ನ ಹಾಗೂ ಕೊನೆಗೆ ಮಹಿಳಾ ನಿರೂಪಕಿ ಬಂದು ಮಾಂಟೋ ಬಗ್ಗೆ ತನ್ನ ಅಭಿಪ್ರಾಯ ಹೇಳುತ್ತಾಳೆ. ತದನಂತರ ಆಗಾಗ ಮಾಂಟೋ ಪಾತ್ರಧಾರಿಯೇ ಬಂದು ತನ್ನ ಕಥೆಯ ಬಗ್ಗೆ ನಿರೂಪನೆ ಮಾಡುತ್ತಾ ಸಾಗುತ್ತಾನೆ. ಈ ನಿರೂಪನೆಗಳ ನಡುವೆ ಸಚಿತ್ರ ಹಾಗೂ ವಿಕ್ಷಿಪ್ತ ದೃಶ್ಯಗಳು ನಡೆಯುತ್ತವೆ. ನಿರೂಪಕ ಹಾಗೂ ಪಾತ್ರಗಳ ಕಾಂಬಿನೇಶನ್ ಮಾಡುತ್ತಲೇ ದೃಶ್ಯಗಳು ಮೂಡಿ ಬರುತ್ತವೆ. ಮಾಂಟೋನ ಸರಳವಾದ ಪುಟ್ಟ ಕಥೆಗಳನ್ನು ಬಹಳಾ ಸಂಕೀರ್ಣವಾಗಿ ನಾಟಕದಲ್ಲಿ ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇಡೀ ನಾಟಕ ಒಂದು ಅರ್ಥವಾಗದ ಲಯಗಾರಿಕೆಯ ಕವಿತೆಯ ಹಾಗೆ, ಮೆದುಳಿಗೆ ಕೆಲಸ ಕೊಡುವ ಮಾಡರ್ನ ಪೇಂಟಿಂಗಿನ ಹಾಗೆ ಮೂಡಿ ಬಂದಿದೆ. ಈ ನಾಟಕವನ್ನು ಅರ್ಥಮಾಡಿಕೊಂಡು ಅನುಭವಿಸಲು ಪ್ರೇಕ್ಷಕರಿಗೆ ಬೇರೆಯದೇ ಮಾನಸಿಕ ಸಿದ್ದತೆ ಹಾಗೂ ಬೌದ್ದಿಕತೆಯ ಅಗತ್ಯವಿದೆ.

ಡಾ.ಶ್ರೀಪಾದ ಭಟ್ಟರವರ ನಿರ್ದೇಶನದ ಶೈಲಿಗೆ ಹೊರತಾದ ನಾಟಕವಿದು. ಕಥೆಯ ಕಾವ್ಯಾತ್ಮಕ ಇಮೇಜ್‍ಗಳನ್ನು ಥೀಯಟ್ರಿಕಲ್ ಇಮೇಜ್‍ಗಳಾಗಿ ಬದಲಾಯಿಸಲು ರಂಗತಂತ್ರಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರಾದರೂ ಕಲಾವಿದರನ್ನು ಬಳಸಿಕೊಳ್ಳುವ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ. ಕಲಾವಿದರಿಂದ ಅನಗತ್ಯ ಆಂಗಿಕ ಗಿಮಿಕ್ಸ್ ಮಾಡಿಸುವುದು, ಕಲಾವಿದರನ್ನೇ ಪ್ರಾಪರ್ಟಿಗಳ ರೂಪದಲ್ಲಿ ಬಳಸಿಕೊಳ್ಳುತ್ತಾ ಅವರನ್ನು ರಂಗತಂತ್ರದ ಭಾಗವಾಗಿಸುವುದನ್ನು ಕೆಲವು ‘ಎನ್‍ಎಸ್‍ಡಿ’ ಪ್ರಾಯೋಜಿತ ಅಕಾಡೆಮಿಕ್ ನಿರ್ದೇಶಕರು ಮಾಡುತ್ತಾ ಬಂದಿದ್ದಾರೆ. ನಾನ್‍ಅಕಾಡೆಮಿಕ್ ವಲಯದ ಶ್ರೀಪಾದರು ಈ ನಾಟಕದಲ್ಲಿ ಅದೇ ಮಾದರಿಯನ್ನು ಬಳಸಿಕೊಂಡಿದ್ದಾರೆ.

ಗುಂಪು ನಟರ ಮೂವಮೆಂಟ್ ಹಾಗೂ ಗೆಶ್ಚರ್‍ಗಳು ರಿಪೀಟೆಡ್ ಆಗಿದ್ದು ನೋಡುಗರಿಗೆ ಮೊನಾಟೋನಸ್ ಆಗಿ ಕಾಣಿಸಿ ನಾಟಕದ ತೀವ್ರತೆಯನ್ನು ಕಡಿಮೆಗೊಳಿಸಿದವು. ಬಹುಷಃ ಎಂಟು ವರ್ಷಗಳ ಹಿಂದೆ ನಿರ್ದೇಶಿಸಿದ್ದ ಈ ನಾಟಕವನ್ನು ಈಗ ಮತ್ತೆ ಮರಳಿ ಯಥಾವತ್ತಾಗಿ ಕಟ್ಟಿ ಮರುಪ್ರದರ್ಶನ ಮಾಡಿದ್ದರಿಂದ ಹೀಗಾಗಿರಬಹುದು. ಅಪಾರವಾದ ಬೌದ್ದಿಕ ನೆಲೆಯಲ್ಲಿ ನಾಟಕವನ್ನು ದೃಷ್ಯೀಕರಿಸಿದ್ದರಿಂದಾಗಿ ಜನಸಾಮಾನ್ಯ ಪ್ರೇಕ್ಷಕರಿಗಂತೂ ಈ ನಾಟಕ ಕಬ್ಬಿಣದ ಕಡಲೆಯಂತಾಗಿದೆ. ನಾಟಕದ ಸ್ಲೋಮೋಶನ್ ಕೆಲವೊಮ್ಮೆ ನೋಡುಗರ ಸಹನೆಯನ್ನೂ ಕೆಣಕುವಂತಿದೆ. ಶ್ರೀಪಾದರ ನಾಟಕಗಳ ಬಗ್ಗೆ ಅಪಾರವಾದ ನಿರೀಕ್ಷೆಗಳನ್ನು ಇಟ್ಟುಕೊಂಡವರಿಗೆ ಈ ನಾಟಕ ಒಂದಿಷ್ಟು ನಿರಾಸೆಯನ್ನುಂಟು ಮಾಡಿದ್ದಂತೂ ಸುಳ್ಳಲ್ಲ.

 

Leave a Reply