ಕರುಣೆಯಿಂದ ಕ್ರೌರ್ಯವನ್ನು ಕರಗಿಸಿದ ‘ಕೆಂಪು ಕಣಗಿಲೆ’


ಶಶಿಕಾಂತ ಯಡಹಳ್ಳಿ

ಭಾರತ ದೇಶವೇ ಇಂದು ಬಂಡವಾಳಿಗರ ಅಧಿಪತ್ಯದಲ್ಲಿ ನಲಗುತ್ತಿದೆ.

ವ್ಯಾಪಾರ ವಹಿವಾಟು ಸರಕು ಸಂಸ್ಕತಿಯೇ ವಿಜ್ರಂಭಿಸುತ್ತಿದೆ. ಸಂಪತ್ತಿನ ಕ್ರೂಢೀಕರಣ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಹುಜನರ ಶ್ರಮ ಫಲವನ್ನು ಬಳಸಿಕೊಂಡು ಬೆಳೆಯುವ ಆಳುವ ವರ್ಗಗಳು ಮಾನವೀಯ ಮೌಲ್ಯಗಳನ್ನೇ ಮರೆತಿವೆ. ಭೂಮಿಯನ್ನು, ಅಗೆದು ನಿಸರ್ಗವನ್ನು ಬಗೆದು ಸಂಪನ್ಮೂಲಗಳನ್ನು ಹುಡುಕಿ ತೆಗೆದು ತಮ್ಮ ಖಜಾನೆಯನ್ನು ತುಂಬಿಕೊಳ್ಳುವ ಕೆಲಸವನ್ನು ಬಂಡವಾಳಿಗರು ಮಾಡುತ್ತಲೇ ಬಂದಿದ್ದಾರೆ. ಸಂಪಾದನೆಯ ಹಪಾಹಪಿಗೆ ಬಿದ್ದ ಇಂತವರಿಗೆಲ್ಲಾ ಹಣದ ಭಾಷೆ ಅರ್ಥವಾಗುತ್ತದೆಯೇ ಹೊರತು ಹೃದಯದ ಭಾಷೆಯಲ್ಲ.

ಸುಖ ಶಾಂತಿ ನೆಮ್ಮದಿಯನ್ನು ತಾವೂ ಕಳೆದುಕೊಂಡು, ದೇಶದ ದುಡಿಯುವ ಜನರ ನೆಮ್ಮದಿಯನ್ನೂ ಕಳೆದು ಅಧಿಕಾರ ದರ್ಪದಲಿ ಮೆರೆಯುತ್ತಿರುವವರಿಗೆ ಪ್ರೀತಿಯ ಭಾಷೆ, ಮಾನವೀಯ ಮೌಲ್ಯಗಳ ಅರಿವು ಅಗತ್ಯವಿದೆ. ಇದನ್ನೇ ರವೀಂದ್ರನಾಥ ಟ್ಯಾಗೋರರ “ಕೆಂಪು ಕಣಗಿಲೆ” ಮನಮುಟ್ಟುವಂತೆ ಹೇಳುತ್ತದೆ.

ಹಿಂಸೆಯ ವಿರುದ್ಧ ಅಹಿಂಸೆಯ ಅಗತ್ಯವನ್ನೂ, ಕ್ರೌರ್ಯದ ವಿರುದ್ಧ ಕರುಣೆಯ ಅನಿವಾರ್ಯತೆಯನ್ನೂ ಸಾರುತ್ತದೆ. ಮಾನವೀಯತೆಯತ್ತ ಮನುಷ್ಯ ಸಾಗಲು ಪ್ರೇರೇಪಿಸುತ್ತದೆ.

ರಂಗಶಂಕರದಲ್ಲಿ ‘ಅವಧಿ’ ಆಯೋಜಿಸಿದ ಮೂರು ದಿನಗಳ ಡಾ. ಶ್ರೀಪಾದ ಭಟ್‍ರವರ ನಾಟಕೋತ್ಸವದಲ್ಲಿ ‘ಕೆಂಪು ಕಣಗಿಲೆ’ ನಾಟಕ ಪ್ರದರ್ಶನಗೊಂಡು ಕ್ರೌರ್ಯ ಹಾಗೂ ಕರುಣೆಯ ವಿಶಿಷ್ಟ ಆಯಾಮವನ್ನು ತೆರೆದಿಟ್ಟಿತು. ರವೀಂದ್ರನಾಥ ಟ್ಯಾಗೋರರ ‘ರಕ್ತ ಕರಬಿ’ ನಾಟಕವನ್ನು ಸುಧಾ ಆಡುಕಳರವರು ಕನ್ನಡದಲ್ಲಿ ರಂಗರೂಪಗೊಳಿಸಿದ್ದು, ಡಾ. ಶ್ರೀಪಾದ ಭಟ್‍ರವರು ಮೈಸೂರಿನ ‘ನಟನ’ ರಂಗಶಾಲೆಯ ಕಲಾವಿದರುಗಳಿಗೆ “ಕೆಂಪು ಕಣಗಿಲೆ” ಯನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.


ಇದೊಂದು ಕಾಲೈಕ್ಯ ಸ್ಥಳೈಕ್ಯಗಳ ಹಂಗಿಲ್ಲದೇ ನಡೆಯುವ ಕಾಲಾತೀತವೆನಿಸುವ ಸಾರ್ವಕಾಲಿಕ ನಾಟಕ. ಇಲ್ಲಿ ಕಾಲ್ಪನಿಕ ರಾಜ್ಯವಿದೆ, ಅದಕ್ಕೊಬ್ಬ ರಾಜನೂ ಇದ್ದಾನೆ. ಹಾಗಂತ ಇದು ರಾಜರ ಕಾಲವೆಂದುಕೊಂಡರೆ ಅಲ್ಲಿ ವರ್ತಮಾನದ ಗವರ್ನರ್ ಪ್ರೊಪೆಸರ್‍ಗಳೂ ಅಲ್ಲಿದ್ದಾರೆ. ಆಳುವ ವರ್ಗಗಳ ದಮನಕಾರಿ ನಡತೆ, ದುಡಿಯುವ ವರ್ಗಗಳ ಅಸಹಾಯಕತೆಗಳೂ ಅಲ್ಲಿವೆ. ಈ ಎರಡೂ ವರ್ಗಗಳ ನಡುವೆ ಸೇತುವೆಯಂತೆ ಪುರೋಹಿತಶಾಹಿ ವರ್ಗವೂ ಇದೆ.

ಈ ಎಲ್ಲಾ ವರ್ಗಗಳೂ ಮನುಕುಲದಲ್ಲಿ ಎಲ್ಲ ಕಾಲಕ್ಕೂ ಇದ್ದೇ ಇವೆ. ವರ್ಗ ಸಂಘರ್ಷವೆನ್ನುವುದು ಇತಿಹಾಸದಲ್ಲಿ ಹಾಸುಹೊಕ್ಕಾಗಿದೆ. ವರ್ತಮಾನದಲ್ಲೂ ನಿರಂತರವಾಗಿದೆ. ಆದರೆ.. ಪ್ರೀತಿ ಕರುಣೆ ಮಮತೆಯಿಂದ ಪ್ರಭುತ್ವವನ್ನು ಮೃದುಗೊಳಿಸಿ ಹೃದಯದ ಭಾಷೆ ಕಲಿಸಬಹುದು, ಮಾನವೀಯತೆಗೆ ತುಡಿಯುವಂತೆ ಮಾಡಬಹುದು ಎನ್ನುವ ಆದರ್ಶವಾದವನ್ನು ಈ ನಾಟಕ ಪ್ರತಿಪಾದಿಸುತ್ತದೆ.

ಯಕ್ಷನಗರದ ರಾಜನಿಗೆ ಬಂಗಾರ ಸಂಗ್ರಹದ ಖಯಾಲಿ. ಅದಕ್ಕಾಗಿ ಗಣಿಗಾರಿಕೆಯನ್ನು ಆರಂಭಿಸಿ ದುಡಿಯುವ ಜನರನ್ನು ಬಂಧಿಯಾಗಿರಿಸಿ ಗುಲಾಮರಂತೆ ದುಡಿಸಿಕೊಂಡು ಚಿನ್ನವನ್ನು ಕೂಡಿಡುತ್ತಲೇ ಇರುತ್ತಾನೆ. ಬಂಧಿಯಾಗಿ ಕರೆತಂದ ನಂದಿನಿಯು ಪ್ರೀತಿಯ ಬಗ್ಗೆ, ನಿಸರ್ಗ ಚೆಲುವಿನ ಬಗ್ಗೆ, ಹಾಡು ಹಾಗೂ ಕಣಗಿಲೆ ಹೂಗಳ ಬಗ್ಗೆ ಮಾತಾಡುತ್ತಾ ರಾಜನಿಗೇ ಸವಾಲಾಗುತ್ತಾಳೆ. ‘ರಂಜನ’ನನ್ನು ಪ್ರೀತಿಸುತ್ತೇನೆ, ಅವನು ಬಂದು ಎಲ್ಲರನ್ನೂ ಬಿಡುಗಡೆಗೊಳಿಸುತ್ತಾನೆಂದು ಹೇಳುತ್ತಲೇ ರಾಜನಲ್ಲಿ ಅಸೂಯೆ ಹುಟ್ಟಿಸಿ ಕರುಣೆಯಿಂದ ಸಂವಹನ ಮಾಡುತ್ತಾಳೆ. ಸತ್ಯ ಹೇಳಿದ್ದಕ್ಕೆ ಬಂಧನಕ್ಕೊಳಗಾದ ಗೆಳೆಯ ಬಿಶುವಿನ ಬಿಡುಗಡೆಗೆ ರಾಜನನ್ನು ಒತ್ತಾಯಿಸುತ್ತಾಳೆ.

ದುಡಿಯುವ ವರ್ಗದಲ್ಲಿ ಅಸಹನೆ ಹೆಚ್ಚಾದಾಗ ಪುರೋಹಿತರಿಂದ ಹರಿಕತೆಯನ್ನು ಹೇಳಿಸಿ ಶ್ರಮಜೀವಿಗಳನ್ನು ಮರಳುಗೊಳಿಸಲು ಆಡಳಿತಾಧಿಕಾರಿಗಳು ಪ್ರಯತ್ನಿಸುತ್ತಾರೆ. ಸಂಪತ್ತಿನ ಸೌಧದಲ್ಲಿ ಬಂಧಿಯಾಗಿ ಅದನ್ನೇ ಸಾಧನೆ ಎಂಬ ಭ್ರಮೆಯಲ್ಲಿದ್ದ ರಾಜನಿಗೆ ಹೃದಯದ ಭಾಷೆಯ ಪರಿಚಯ ಮಾಡಿಕೊಡುವ ಪ್ರಯತ್ನದಲ್ಲಿ ನಂದಿನಿ ಯಶಸ್ವಿಯಾಗುತ್ತಾಳೆ. ರಂಜನ ಬೇರೆ ಯಾರೂ ಅಲ್ಲ ಎಲ್ಲರಲ್ಲೂ ಇದ್ದಾನೆ, ದುರಾಸೆಗಳ ದೂರ ಮಾಡಿಕೊಂಡರೆ ಸಿಗುತ್ತಾನೆಂದು ಹೇಳುವ ಮೂಲಕ ನಂದಿನಿಯು ರಾಜನಿಗಷ್ಟೇ ಅಲ್ಲಾ ಈ ನಾಟಕ ನೋಡುವ ಪ್ರೇಕ್ಷಕರಿಗೂ ನೆಮ್ಮದಿಯ ಬದುಕಿನ ಪಾಠ ಹೇಳಿಕೊಡುತ್ತಾಳೆ. ಕೊನೆಗೂ ತನ್ನೆಲ್ಲ ಬಂಗಾರದ ಸಂಕೋಲೆಗಳನ್ನು ಕಿತ್ತೆಸೆವ ರಾಜನು ಮನುಷ್ಯನಾಗಿ ಬಂದು ಹಾಡು ಕುಣಿತದಲ್ಲಿ ತಲ್ಲೀಣನಾಗುವ ಮೂಲಕ ನಾಟಕ ಮುಗಿಯುತ್ತದೆ. ನೋಡುಗರ ಮೆದುಳು ಹಾಗೂ ಮನಸ್ಸನ್ನು ತಟ್ಟುತ್ತದೆ.

ಬಂಡವಾಳಶಾಹಿ ಶಕ್ತಿಗಳು ಪ್ರಭಲವಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ನಾಟಕ ತುಂಬಾನೇ ಪ್ರಸ್ತುತವಾಗಿದೆ. ಜಾಗತೀಕರಣದ ದುಷ್ಪರಿಣಾಮದಿಂದಾಗಿ ಇಡೀ ಸಮಾಜವೇ ಸಂಪಾದನೆಯ ಹಿಂದೆ ಬಿದ್ದು ಮಾನವೀಯ ಸಂವೇದನೆಯನ್ನು ಕಳೆದುಕೊಳ್ಳುತ್ತಿರುವ ಈಗಿನ ವರ್ತಮಾನ ಕಾಲದಲ್ಲಿ ಕರುಣೆ ಪ್ರೀತಿಯ ಮಹತ್ವದ ಕುರಿತು, ಹಾಡು ಕುಣಿತಗಳ ಸಾಂಸ್ಕತಿಕ ಸಾಂಗತ್ಯದ ಕುರಿತು, ಪರಿಸರ ಸಂರಕ್ಷಣೆಯ ಅಗತ್ಯದ ಕುರಿತು ಹೇಳುವ “ಕೆಂಪು ಕಣಗಿಲೆ” ನಾಟಕವು ಸಮಕಾಲೀನ ತಲ್ಲಣಗಳಿಗೆ ಉತ್ತರವನ್ನು ಕೊಡುವಂತೆ ಮೂಡಿಬಂದಿದೆ. ಸಂಪತ್ತು ಸಂಪನ್ಮೂಲಗಳ ಸಂಪಾದನೆ, ಬಳಕೆ ಹಾಗೂ ಉಳಿಕೆಯಲ್ಲಿ ನೆಮ್ಮದಿಯನ್ನು ಕಳೆದುಕೊಂಡಿರುವ ಎಲ್ಲರಿಗೂ ಈ ನಾಟಕ ವಿವೇಕವನ್ನು ಹೇಳುವಂತಿದೆ.

ಆಳುವ ವರ್ಗಗಳು ಪುರೋಹಿತಶಾಹಿಗಳನ್ನು ಬಳಸಿಕೊಂಡು ದುಡಿಯುವ ವರ್ಗದವರಿಗೆ ಕರ್ಮಸಿದ್ದಾಂತವನ್ನು ಬೋಧಿಸಿ, ಸದಾ ಧರ್ಮದ ಅಮಲಿನಲ್ಲಿ ಮುಳುಗಿಸಿ ಹೇಗೆ ಗುಲಾಮರನ್ನಾಸಿಕೊಳ್ಳುತ್ತಾರೆಂಬುದನ್ನು ತುಂಬಾ ಮಾರ್ಮಿಕವಾಗಿ ತೋರಿಸಲಾಗಿದೆ. ಯಾವಾಗ ಶ್ರಮಜೀವಿಗಳಲ್ಲಿ ಅಸಹನೆ ಹೆಚ್ಚಾಗುತ್ತದೆಯೋ ಆಗ ಹರಿಕತೆದಾಸ ಬಂದು ಅವತಾರಗಳ ಕತೆ ಹೇಳುತ್ತಾ ದಿಕ್ಕು ತಪ್ಪಿಸುತ್ತಾನೆ. ಎಲ್ಲಾ ಕಾಲಕ್ಕೂ ಅಗಿದ್ದೇ ಇದು. ಧರ್ಮ ದೇವರುಗಳ ಅಫೀಮನ್ನು ಜನರಿಗೆ ತಿನ್ನಿಸಿ, ಅವರನ್ನು ಸದಾ ಭಯ ಭಕ್ತಿಯ ಬಲೆಯಲ್ಲಿ ಬಂಧಿಸಿ ದುಡಿಸಿಕೊಂಡು ಅದರ ಫಲವನ್ನು ಆಳುವ ವರ್ಗ ಅನುಭವಿಸುವಂತೆ ಮಾಡುವುದಕ್ಕೆ ಪುರೋಹಿತಶಾಹಿ ವರ್ಗ ಹುಟ್ಟಿಕೊಂಡಿದೆ. ಪುರೋಹಿತಶಾಹಿಯ ಪ್ರತಿನಿಧಿಯಾದ ಹರಿಕತೆದಾಸನನ್ನು ವಿಡಂಬನಾತ್ಮಕವಾಗಿ ಚಿತ್ರಿಸುವ ಈ ನಾಟಕ ಕರ್ಮ, ಧರ್ಮ ಹಾಗೂ ಪ್ರಭುತ್ವಗಳ ಸಾವಯವ ಸಂಬಂಧಗಳನ್ನು ಬೆತ್ತಲೆಗೊಳಿಸುತ್ತದೆ. ನೋಡುಗರ ಪ್ರಜ್ಞೆಯನ್ನು ತಾತ್ಕಾಲಿಕವಾದರೂ ಜಾಗೃತಗೊಳಿಸುತ್ತದೆ.

ಕಣಗಿಲೆ ಇಲ್ಲಿ ಹೂವಾಗಿ ಕೋಮಲತೆ ಹಾಗೂ ಪ್ರೀತಿಯ ಸಂಕೇತವಾದರೆ, ಅದರ ಕೆಂಪು ಬಣ್ಣ ಬದಲಾವಣೆಯ ಸಂಕೇತವಾಗಿದೆ. ಪ್ರೀತಿಯಿಂದ ದರ್ಪತನವನ್ನು ಬದಲಾಯಿಸ ಬಯಸುವ ನಂದಿನಿ ಪಾತ್ರ ಕೆಂಪು ಕಣಗಿಲೆಗೆ ರೂಪಕವಾಗಿ ಮೂಡಿಬಂದಿದೆ. ಬುದ್ಧ ಹಾಗೂ ಬಸವರು ಸಹ ಪ್ರೀತಿ ಕರುಣೆಯಿಂದಲೇ ದಮನ ಹಾಗೂ ದುಷ್ಟತನವನ್ನು ಕರಗಿಸಿ ಮಾನವೀಯತೆಯನ್ನು ಮೌಲ್ಯಗಳನ್ನು ಪ್ರತಿಪಾದಿಸಲು ನೋಡಿದರು. ಈ ನಾಟಕವೂ ಸಹ ಬುದ್ಧನ ಆಶಯಗಳಾದ ಶಾಂತಿ ಹಾಗೂ ಕರುಣೆಯನ್ನೇ ಪ್ರತಿಪಾದಿಸುತ್ತದೆ. ಆದರೆ.. ಇದು ಯುಟೋಪಿಯಾ ಅನ್ನಿಸುವಂತಿದೆ. ಕೊಟ್ಟ ವಚನವನ್ನು ಪರಿಪಾಲಿಸಿ ಸತ್ಯದ ದಾರಿಯಲ್ಲಿ ನಡೆದು ಹುಲಿಯಲ್ಲಿ ಕರುಣೆ ಹಾಗೂ ಪಶ್ಚಾತ್ತಾಪವನ್ನು ಹುಟ್ಟಿಸಿದ ಪುಣ್ಯಕೋಟಿ ಅದು ಹೇಗೆ ಹಸಿದ ಹೆಬ್ಬುಲಿಯನ್ನು ಪರಿವರ್ತನೆ ಮಾಡಿದ ಕಥೆ ಇದೆಯೋ ಹಾಗೆಯೇ ಈ ನಾಟಕದ ನಂದಿನಿ ಪಾತ್ರ ಕ್ರೌರ್ಯ ತುಂಬಿದ ರಾಜನನ್ನು ಪ್ರೀತಿ ಹಾಗೂ ಕರುಣೆಗಳಿಂದಲೇ ಬದಲಾಯಿಸಿ ಯಶಸ್ವಿಯಾಗುತ್ತಾಳೆ.

ಆದರೆ ಪುಣ್ಯಕೋಟಿಯ ಕಥೆಯಾಗಲಿ ಇಲ್ಲವೇ ಕೆಂಪು ಕಣಗಿಲೆಯ ನಂದಿನಿಯ ಪ್ರಯತ್ನವಾಗಲಿ ಆದರ್ಶವಾದಿ ಕಲ್ಪನೆಯ ದೃಷ್ಟಿಕೋನದಲ್ಲಿ ಸುಂದರವಾಗಿದೆ. ಕಮ್ಯೂನಿಸಂನ ಕಮ್ಯೂನ್ ಆಡಳಿತದ ಮೂಲಕ ವರ್ಗರಹಿತ ಸಮಾನ ವ್ಯವಸ್ಥೆಯೊಂದನ್ನು ತರುವ ಪ್ರಯತ್ನಗಳನ್ನು ಕೆಲವು ದೇಶಗಳಲ್ಲಿ ಮಾಡಲಾಯಿತಾದರೂ ಅವುಗಳೂ ಕೂಡಾ ಬಂಡವಾಳಶಾಹಿಗಳ ತಂತ್ರಗಳಿಂದಾಗಿ ಯಶಸ್ವಿಯಾಗಲಿಲ್ಲಾ. ಬುದ್ಧ ಬಸವಾದಿಗಳ ಪ್ರಯತ್ನವೂ ಸಹ ಈ ಪುರೋಹಿತಶಾಹಿಗಳು ಹಾಗೂ ಪ್ರಭುತ್ವವಾದಿಗಳ ಕುತಂತ್ರಗಳಿಂದಾಗಿ ವಿಫಲವಾಯಿತು. ಆದರೆ ಆಶಯಗಳಿಗಂತೂ ಸಾವಿಲ್ಲಾ.. ಆದರ್ಶವಾದಕ್ಕೆ ಮುಪ್ಪಿಲ್ಲಾ. ಪ್ರಯತ್ನ ಮಾಡಿದರೆ ಇಂದಿಲ್ಲಾ ನಾಳೆ ದಮನಕಾರಿ ವ್ಯವಸ್ಥೆ ಬದಲಾಗಬಹುದೇನೋ, ಅಧಿಕಾರದ ದರ್ಪ ದೌಲತ್ತುಗಳಿಂದ ಅಮಾನವೀಯವಾಗಿ ವರ್ತಿಸುವವರಲ್ಲೂ ಮಾನವೀಯತೆ ಜಾಗೃತವಾಗಬಹುದೇನೋ ಎನ್ನುವ ಆಶಾವಾದ ಮಾತ್ರ ಎಲ್ಲರಲ್ಲೂ ಜೀವಂತವಾಗಿದೆ.

ಆದರೆ.. ‘ಪ್ರೀತಿ ಕರುಣೆಗಳಿಗೆ ದಮನಕಾರಿ ಪ್ರಭುತ್ವ ಬದಲಾಗುತ್ತದೆ’ ಎಂಬುದು ಪ್ರಸ್ತುತ ಕಾಲಘಟ್ಟದಲ್ಲಂತೂ ಸಾಧ್ಯವಿಲ್ಲದ ಸಂಗತಿಯಾಗಿದೆ. ದುಡಿಯುವ ಜನರಲ್ಲಿ ಜಾಗೃತಿಯಾಗಿ ವರ್ಗಸಂಘರ್ಷ ತೀವ್ರಗೊಂಡು ಬಹುಸಂಖ್ಯಾತ ಶ್ರಮಿಕರನ್ನು ಪ್ರತಿನಿಧಿಸುವ ಆಡಳಿತ ಬಂದು ಸಮಸಮಾಜ ನಿರ್ಮಾಣವಾದಲ್ಲಿ ಮಾತ್ರ ಈ ಆದರ್ಶವಾದದ ಕನಸು ನನಸಾಗಲು ಸಾಧ್ಯ. ಇಲ್ಲವಾದರೆ ‘ಸತ್ಯಪಾಲನೆಯ ಮೂಲಕ ಹಸು ಹುಲಿಯನ್ನು ಬದಲಾಯಿಸಿತು, ನಂದಿನಿ ಪ್ರೀತಿಯ ಮೂಲಕ ದರ್ಪದ ರಾಜನನ್ನು ಪರಿವರ್ತಿಸಿದಳು..’ ಎನ್ನುವುದೆಲ್ಲಾ ಕೇವಲ ಕಥೆ ನಾಟಕಗಳಲ್ಲಿ ಮಾತ್ರ ರಮ್ಯತೆಯನ್ನು ತರಬಲ್ಲುದಾಗಿದೆ. ಕೆಂಪು ಕಣಗಿಲೆಯೂ ಸಹ ಒಂದು ಯುಟೋಪಿಯಾ ಕಲ್ಪನೆಯ ಪ್ರತಿರೂಪವಾಗಿಯೇ ಮೂಡಿ ಬಂದಿದೆ. ಪ್ರೀತಿ ಮತ್ತು ಕರುಣೆಗಳು ಮಾತ್ರ ನೆಮ್ಮದಿಯ ಬದುಕನ್ನು ಕಟ್ಟಿಕೊಡಬಲ್ಲುದು ಎನ್ನುವ ಈ ನಾಟಕದ ಆಶಯ ಮಾತ್ರ ನೋಡುಗರಿಗೆ ಸಾಂತ್ವನ ಕೊಡಬಲ್ಲುದಾಗಿದೆ.


ಶ್ರೀಪಾದ ಭಟ್ಟರವರ ನಿರ್ದೇಶನದ ಬಹುತೇಕ ನಾಟಕಗಳಲ್ಲಿ ಸ್ಥಿರವಾದ ದೊಡ್ಡ ಸೆಟ್‍ಗಳು ಇರುವುದಿಲ್ಲವಾದರೂ ಈ ನಾಟಕದಲ್ಲಿ ದೊಡ್ಡದಾದ ಸೆಟ್ ವಿನ್ಯಾಸಗೊಳಿಸಾಗಿದೆ. ಹಾಗೂ ಅದು ಈ ನಾಟಕಕ್ಕೆ ಅಗತ್ಯವೂ ಆಗಿದೆ. ಮೇಲೆ ಬಂಗಾರದ ಲೋಕದಲ್ಲಿ ಬಂಧಿಯಾದ ರಾಜನ ಕೋಣೆಯಿದ್ದರೆ ಅದರ ಕೆಳಗೆ ಚಿನ್ನದ ನಿಕ್ಷೇಪದ ಗಣಿಗಾರಿಕೆಯ ಸುರಂಗಮಾರ್ಗವಿದೆ. ಜನರ ದುಡಿಮೆಯ ಮೇಲೆಯೇ ಸಂಪತ್ತು ಹಾಗೂ ಪ್ರಭುತ್ವ ಬೆಳೆದು ನಿಂತಿರುವುದು ಎನ್ನುವ ಜಾಗತಿಕ ಸತ್ಯವನ್ನು ಸಾಂಕೇತಿಕವಾಗಿ ತೋರಿಸುವಂತೆ ಈ ಸೆಟ್ ಮೂಡಿಬಂದಿದೆ.

ನಾಟಕದ ಕೊನೆಗೆ ದೊರೆ ತನ್ನ ದರ್ಪ ದೌವಲತ್ತನ್ನೆಲ್ಲಾ ತೊರೆದು ಕೆಳಗಿಳಿದು ಬಂದರೆ.. ಕೆಳಸಮುದಾಯದ ಶ್ರಮಿಕರು ರಾಜನ ಜಾಗದಲ್ಲಿ ಮೇಲೆ ಹತ್ತಿ ಬಂದು ನಿಲ್ಲುವುದು ‘ದುಡಿಯುವ ಜನರ ಆಡಳಿತ ಬರಬೇಕು’ ಎನ್ನುವುದರ ರೂಪಕವಾಗಿದೆ. ಹಿಂದೆ ಎಡ ಬಲಗಳಲ್ಲಿ ಅಬ್ಸರ್ಡ ಪೇಂಟಿಂಗ್‍ಗಳ ಮೂಲಕ ದುರಾಸೆಯ ಅಸಂಗತೆಯನ್ನು ಸಂಕೇತಿಸಿದಂತಿದೆ. ಪ್ರೇಕ್ಷಕರತ್ತ ನೆಟ್ಟಗೆ ಇರಬೇಕಾಗಿದ್ದ ಸೆಟ್ಟನ್ನು ಅದ್ಯಾಕೆ ಸೊಟ್ಟಗಿಟ್ಟಿದ್ದರೋ ಗೊತ್ತಿಲ್ಲಾ.. ನೆಟ್ಟಗಿಟ್ಟಿದ್ದರೆ ನಾಟಕದ ಸೊಗಸು ಇನ್ನೂ ಹೆಚ್ಚುತ್ತಿತ್ತು ಎನ್ನುವುದರಲ್ಲಿ ಸಂದೇಹವೇನಿಲ್ಲಾ.

ವೃತ್ತಿಪರ ನಟರಂತೆ ನಟನಾ ರಂಗಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ನಂದಿನಿಯಾಗಿ ದಿಶಾ ರಮೇಶ್ ಅಭಿನಯ ನೋಡುಗರ ಮನಸೂರೆಗೊಂಡಿತು. ರಾಜನ ಪಾತ್ರದಲ್ಲಿ ಮೇಘ ಸಮೀರ್ ವಿಜ್ರಂಬಿಸಿದ ಪರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಗವರ್ನರ್ ಪಾತ್ರದಾರಿಯನ್ನು (ಋತ್ವಿಕ್) ಅದ್ಯಾಕೆ ಕಾಮಿಡಿ ಕ್ಯಾರೆಕ್ಟರ್ ಮಾಡಿದ್ದರೋ ಗೊತ್ತಿಲ್ಲಾ.. ಆದರೆ ಆ ಹುದ್ದೆಗೂ ಆ ಪಾತ್ರ ಆಡುತ್ತಿದ್ದ ಕಾಮಿಕ್ ನಟನೆಗೂ ಸಂಬಂಧವೇ ಇರುವಂತಿರಲಿಲ್ಲಾ. ಹರಿಕತೆದಾಸನಾಗಿ ತಿಲಕ್ ಕುಮಾರ್ ನಟನೆ ಹಾಗೂ ಸಂಭಾಷಣೆ ಕಚಗುಳಿ ಇಡುವಂತಿತ್ತು. ಮಿಕ್ಕೆಲ್ಲಾ ಪಾತ್ರಗಳೂ ಸಹ ಒಂಚೂರು ಓವರ್ ಆಕ್ಟಿಂಗ್ ಶೈಲಿಯಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದವು.

ಈ ಗಂಭೀರ ವಿಷಯದ ನಾಟಕವನ್ನು ಹಾಡು ಸಂಗೀತಗಳ ಮೂಲಕ ಆಕರ್ಷನೀಯವಾಗಿ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ನಿರ್ದೇಶಕರೇ ಸಂಗೀತ ಸಂಯೋಜನೆಯನ್ನೂ ಮಾಡಿದ್ದು ನಾಟಕಕ್ಕೆ ವಿಶೇಷತೆಯನ್ನು ತಂದುಕೊಟ್ಟಿದೆ. ಹಿನ್ನಲೆ ಸಂಗೀತದ ಎಫೆಕ್ಟ್ ಪ್ರತಿ ದೃಶ್ಯಗಳನ್ನೂ ಆವರಿಸಿಕೊಂಡು ನಾಟಕದ ಲಯಗಾರಿಕೆಯನ್ನು ಹೆಚ್ಚಿಸಿದೆ. ಆಯಾ ನಟರುಗಳೇ ಹಾಡುಗಳನ್ನು ಹಾಡಿದ್ದರಿಂದ ಕೆಲವೊಮ್ಮೆ ಸಂಗೀತದ ಜೊತೆಗೆ ಹಾಡು ಸರಿಯಾಗಿ ಬ್ಲೆಂಡ್ ಆಗದೇ ಅಪೇಕ್ಷಿತ ಪರಿಣಾಮವನ್ನುಂಟು ಮಾಡದೇ ಹೋಯಿತು.

ನಂದಿನಿ ಪಾತ್ರದಾರಿ ದಿಶಾ ರಮೇಶ್‍ರವರು ನಟಿಸುತ್ತಲೇ ಹಾಡುಗಳನ್ನೂ ಹಾಡಿದ್ದಾರಾದರೂ ಇನ್ನೂ ಪೋರ್ಸ ಬೇಕಾಗಿತ್ತು. ಸೊಲೋ ಹಾಡುಗಳ ಜೊತೆಗೆ ಹಿನ್ನೆಲೆಯಿಂದ ಕೋರಸ್ ಕೊಟ್ಟಿದ್ದರೆ ಹಾಡಿನ ಪೋರ್ಸ ಕೇಳುಗರನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ತಲುಪಬಹುದಾಗಿತ್ತು. ಟ್ಯಾಗೋರರ ಗೀತಾಂಜಲಿ ಕವನ ಸಂಕಲನದಿಂದ ಆಯ್ದ ಕವಿತೆ “ಎಲ್ಲಿ ಮನಕಳುಕಿಹುದೋ ಎಲ್ಲಿ ತಲೆಬಾಗಿಹುದು…” ಪ್ರೇಕ್ಷಕರ ಮನಸ್ಸನ್ನು ತಟ್ಟಿತು. “ಪಲಿಸೈ ಪಿತ ನಮ್ಮ ನಾಡೆಚ್ಚರವಿರಲಿ..” ಎನ್ನುವ ಸದಾಶಯದ ನಾಂದಿ ಗೀತೆ ಹಾಗೂ ಆ ಗೀತೆಗೆ ಮಾಡಿದ ದೃಶ್ಯ ವಿನ್ಯಾಸ ನಾಟಕದ ಬಗ್ಗೆ ಹೆಚ್ಚು ಕುತೂಹಲವನ್ನುಂಟು ಮಾಡುವಲ್ಲಿ ಸಫಲವಾಗಿದೆ. ಕ್ಲೈಮ್ಯಾಕ್ಸಲ್ಲೂ ಸಹ ಅದೇ ರೀತಿಯ ದೃಶ್ಯ ಸಂಯೋಜನೆ ಇದ್ದು ಅದೆ ಹಾಡಿನ ಆಶಯದ ಮೂಲಕ ನಾಟಕ ಮುಗಿಯುತ್ತದೆ. ನೋಡುಗರನ್ನು ತಲೆದೂಗುವಂತೆ ಮಾಡುತ್ತದೆ.

ಅದ್ಯಾಕೋ ಬೆಳಕಿನ ವಿನ್ಯಾಸ (ವಿನಯ್ ಚಂದ್ರ) ಈ ನಾಟಕದ ಅಗತ್ಯವನ್ನು ಪೂರೈಸುವಲ್ಲಿ ವಿಫಲವಾಗಿದೆ. ರಾಜನ ಕೋಣೆಯ ದೃಶ್ಯವನ್ನು ಹೊರತು ಪಡಿಸಿ ಬಹುತೇಕ ದೃಶ್ಯಗಳು ಒಂದೇ ರೀತಿಯ ಪ್ಲಾಟ್ ಲೈಟ್‍ಲ್ಲೆ ನಡೆಯುತ್ತವೆ. ಬೆಳಕಿನ ಬಣ್ಣಗಳನ್ನು ಇನ್ನೂ ಸಮರ್ಥವಾಗಿ ದೃಶ್ಯದ ಮೂಡಿಗನುಗುಣವಾಗಿ ಬಳಸಿದ್ದರೆ, ಪ್ರತ್ಯೇಕ ದೃಶ್ಯಗಳಿಗೆ ಸ್ಪಾಟ್‍ಗಳನ್ನು ಉಪಯೋಗಿಸಿದ್ದರೆ ನೋಡುಗರಲ್ಲಿ ಅಗತ್ಯ ಮೂಡ್ ಕ್ರಿಯೇಟ್ ಮಾಡಬಹುದಾಗಿತ್ತು. ದೃಶ್ಯಕಾವ್ಯವನ್ನು ಸೃಷ್ಟಿಸಬಹುದಾಗಿತ್ತು. ಇದು ಮೊದಲನೆ ಪ್ರದರ್ಶನವಾಗಿದ್ದರಿಂದ ಮುಂದಿನ ಪ್ರದರ್ಶನಗಳಲ್ಲಿ ಹಾಡು ಸಂಗೀತ ಹಾಗೂ ಬೆಳಕಿ ವಿನ್ಯಾಸಗಳತ್ತ ಇನ್ನೂ ಹೆಚ್ಚು ಗಮನ ವಹಿಸಿದರೆ ನಾಟಕ ಇನ್ನೂ ಹೆಚ್ಚು ಸಶಕ್ತವಾಗಿ ಮೂಡಿಬರುವುದರಲ್ಲಿ ಸಂದೇಹವೇ ಇಲ್ಲಾ.

ಈ ‘ರಕ್ತ ಕಣಗಿಲೆ’ ಕನ್ನಡ ರಂಗಭೂಮಿಗೆ ಅಪರಿಚಿತವೇನಲ್ಲಾ. ಈಗಾಗಲೇ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣನವರು ಟ್ಯಾಗೋರರ ‘ರಕ್ತ ಕನಬಿ’ ನಾಟಕವನ್ನು ‘ಕೆಂಪು ಕಣಗಿಲೆ’ ಹೆಸರಲ್ಲಿ ಅನುವಾದಿಸಿದ್ದರು. ಚಿದಂಬರರಾವ್ ಜಂಬೆಯವರು ನೀನಾಸಂ ತಿರುಗಾಟಕ್ಕೆ ಈ ನಾಟಕವನ್ನು ನಿರ್ದೇಶಿಸಿದ್ದರು. ಹಾಗೂ ದಾಕ್ಷಾಯಿಣಿ ಭಟ್ಟರವರು ಈ ನಾಟಕವನ್ನು ರಂಗಶಂಕರಕ್ಕೆ ನಿರ್ದೇಶನ ಮಾಡಿದ ಡಾ.ಶ್ರೀಪಾದ ಭಟ್‍ರವರೇ ಆ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.

ಈಗ ಮತ್ತೆ ಹೊಸದಾಗಿ ಈ ‘ಕೆಂಪು ಕಣಗಿಲೆ’ಯನ್ನು ವಿಭಿನ್ನ ರೀತಿಯ ವಿನ್ಯಾಸದಲ್ಲಿ ಕಟ್ಟಿಕೊಟ್ಟ ಡಾ.ಶ್ರೀಪಾದ ಭಟ್‍ರವರ ಪ್ರತಿಭೆ ಮತ್ತು ಪರಿಶ್ರಮ ನಿಜಕ್ಕೂ ಅಭಿನಂದನೀಯ. ಇಂತಹ ಕ್ಲಾಸಿಕ್ ನಾಟಕವನ್ನು ನಿರ್ಮಾಣ ಮಾಡಿದ ಮೈಸೂರಿನ ನಟನ ರಂಗಶಾಲೆಯ ನಿರ್ಮಾತೃ ಮಂಡ್ಯ ರಮೇಶರವರ ರಂಗ ಬದ್ಧತೆ ನಿಜಕ್ಕೂ ಪ್ರಶಂಸನೀಯ. ಇಂತಹ ಅಪರೂಪದ ನಾಟಕವನ್ನು ಮಾಡಲು ಪ್ರೋತ್ಸಾಹಿಸಿ ಡಾ. ಶ್ರೀಪಾದ ಭಟ್‍ರವರ ನಾಟಕಗಳ ಉತ್ಸವವನ್ನು ಆಯೋಜಿಸಿ ವಿಶಿಷ್ಟ ಪ್ರಯೋಗಗಳಿಗೆ ವೇದಿಕೆಯನ್ನು ಒದಗಿಸಿ ಬೆಂಗಳೂರಿನ ಪ್ರೇಕ್ಷಕರಿಗೆ ನೋಡುವ ಅವಕಾಶವನ್ನು ಮಾಡಿಕೊಟ್ಟಿದ್ದಕ್ಕೆ ‘ಅವಧಿ’ಗೆ ಧನ್ಯವಾದಗಳು.

Leave a Reply