ಚಿರ ಋಣಿ ಬಸವರಾಜ್ ಪುರಾಣಿಕ್ ಸರ್..

ಸಂವರ್ತ ‘ಸಾಹಿಲ್’

ಒಂದೂವರೆ ವರ್ಷದ ಹಿಂದೆ ಒಂದು ದಿನ ಬೆಳಬೆಳಗ್ಗೆ ರಹಮತ್ ತರೀಕೆರೆ ಮೇಷ್ಟ್ರು ಮೆಸೇಜ್ ಮೂಲಕ, “ನಿಮ್ಮ ಬರವಣಿಗೆಗಳ ಅಭಿಮಾನಿ ಬಸವರಾಜ್ ಪುರಾಣಿಕ್ ನಿಮ್ಮನ್ನು ಹುಡುಕುತ್ತಿದ್ದಾರೆ. ಅವರನ್ನು ಸಂಪರ್ಕಿಸಿ,” ಎಂದು ಬಸವರಾಜ್ ಪುರಾಣಿಕ್ ಅವರ ದೂರವಾಣಿ ಸಂಖ್ಯೆ ಕಳುಹಿಸಿದ್ದರು.

ಮೂರ್ಖನೂ ದಡ್ಡನೂ ಆದ ನಾನು ತಕ್ಷಣ ರಹಮತ್ ಮೇಷ್ಟ್ರಿಗೆ ಫೋನ್ ಮಾಡಿ, ಬಸವರಾಜ್ ಪುರಾಣಿಕ್ ಎಂದರೆ ಯಾರು ಎಂದು ಕೇಳಿದೆ.

ಉರ್ದು-ಕನ್ನಡ, ಇಂಗ್ಲಿಷ್-ಕನ್ನಡ ಅನುವಾದಕ ಮತ್ತು ‘ಅನುಪಮಾ ಚರಿತ ಅಲ್ಲಮ ದೇವಾ’ ಕರ್ತೃ ಎಂದು ಬಸವರಾಜ್ ಪುರಾಣಿಕ್ ಅವರ ಕಾರ್ಯಕ್ಷೇತ್ರವನ್ನು ವಿವರಿಸುತ್ತಾ ರಹಮತ್ ಮೇಷ್ಟ್ರು, “ನಿಮ್ಮ ಬರವಣಿಗೆ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ. ನಿಮ್ಮ ಜೊತೆ ಮಾತನಾಡಬೇಕಂತೆ. ಅವರಿಗೆ ಒಮ್ಮೆ ಫೋನ್ ಮಾಡಿ,” ಎಂದರು. ನಾನು, “ಹ್ಞೂ” ಎಂದೆ.

ಬಸವರಾಜ್ ಪುರಾಣಿಕ್ ಅವರ ನಂಬರ್ ಡಯಲ್ ಮಾಡಿದರೆ ಓರ್ವ ಹೆಂಗಸು ಫೋನ್ ಎತ್ತಿಕೊಂಡರು. ನಾನು ಡಯಲ್ ಮಾಡಿದ ನಂಬರ್ ಸರಿಯಾಗಿದೆಯೇ ಎಂದು ಪರೀಕ್ಷಿಸಿದೆ. ಏನೂ ತಪ್ಪಿರಲಿಲ್ಲ. ಬಸವರಾಜ್ ಪುರಾಣಿಕ್ ಅವರ ಹೆಸರು ಹೇಳುತ್ತಿದ್ದಂತೆ ಆ ಕಡೆಯ ಹೆಣ್ಣು ದನಿ, “ಒಂದು ನಿಮಿಷ,” ಎಂದಾಗ ಗೊತ್ತಾಗಿದ್ದು ಅದು ಲ್ಯಾಂಡ್ ಲೈನ್ ನಂಬರ್ ಎಂದು. ಬಸವರಾಜ್  ಪುರಾಣಿಕ್ ಅವರಿಗಾಗಿ ಕಾಯುವ ಹೊತ್ತು ದೂರವಾಣಿಗೆ ಕರೆ ನೀಡಿ ಕಾಯುವ ಅಭ್ಯಾಸ ತಪ್ಪಿಹೋದ ಬಗ್ಗೆ ಧಿಡೀರ್ ಎಂದು ಎಚ್ಚರವಾಯಿತು.

ಒಂದರೆ ಕ್ಷಣ ಬಿಟ್ಟು ಫೋನ್ ಕೈಗೆತ್ತಿಕೊಂಡ ಬಸವರಾಜ್ ಪುರಾಣಿಕ್, “ಹಾಲೋ” ಎಂದಾಗಲೇ ಗೊತ್ತಾಗಿದ್ದು ರಹಮತ್ ಮೇಷ್ಟ್ರು ಕಳುಹಿಸಿದ ಮೆಸೇಜ್ ಅಲ್ಲಿ ಬಸವರಾಜ್ ಪುರಾಣಿಕ್ ಅವರ ಹೆಸರಿನ ಮುಂದೆ ಬ್ರಾಕೆಟ್ ಒಳಗಡೆ ಬರೆದಿದ್ದ ೮೨ ಸಂಖ್ಯೆ ಬಸವರಾಜ್ ಪುರಾಣಿಕ್ ಅವರ ವಯಸ್ಸು ಎಂದು. ಈ ಜ್ಞಾನೋದಯ ಆಗುತ್ತಿದ್ದಂತೆ ಗಾಬರಿಯಾಯಿತು. ಅಷ್ಟು ಹಿರಿಯರು ಯಾಕಪ್ಪ ನನ್ನನ್ನು ಮಾತನಾಡಿಸಬೇಕೆಂದಿದ್ದಾರೆ ಎಂದು.

“ಸರ್ ನಾನು ಸಂವರ್ತ ಅಂತ. ರಹಮತ್ ಸರ್ ಹೇಳಿದ್ರು…” ಎನ್ನುತ್ತಿದ್ದಂತೆ ಉತ್ಸಾಹದಿಂದ ಬಸವರಾಜ್ ಪುರಾಣಿಕ್, “ಅದೆಷ್ಟ್ರೀ ಹುಡುಕೋದು ನಿಮ್ಮನ್ನ? ಒಂದಾರು ತಿಂಗಳಿಂದ ನಿಮ್ಮನ್ನು ಹುಡುಕ್ತಾ ಇದ್ದೀನಿ,” ಎಂದು ಮಾತು ಆರಂಭಿಸಿದರು. “ಯಾರನ್ನು ಕೇಳಿದ್ರು, ನೀವು ಕರಾವಳಿಯ ಹುಡುಗ ಪುಣೆ ಫಿಲಂ ಇನ್ಸ್ಟಿಟ್ಯೂಟ್ ಅಲ್ಲಿ ಕಲಿತಿದ್ದೀರಿ ಅಂತ ಹೇಳಿ ನೀವು ಯಾರಿಗೂ ಕೈಗೆ ಸಿಗೋಲ್ಲ ಅಂತಿದ್ರು.

ಮೊನ್ನೆ ಮೊನ್ನೆ ರಹಮತ್ ಉರ್ದು ಬಗ್ಗೆ ಬರೆದ ಲೇಖನ ಮತ್ತೆ ಓದುವಾಗ ಅಲ್ಲಿ ನಿಮ್ಮ ಹೆಸರು ಪ್ರಸ್ತಾಪ ಆಗಿದ್ದು ನೋಡಿ ರಹಮತ್ ಅವರಿಗೆ ಫೋನ್ ಮಾಡಿ ನಿಮ್ಮ ನಂಬರ್ ಕೇಳಿದ್ರೆ ಅವರು ನಿಮ್ಮ ಕೈಯಲ್ಲೇ ಫೋನ್ ಮಾಡಿಸ್ತೇನೆ ಅಂದ್ರು,” ಎಂದ ಬಸವರಾಜ್ ನಾನು ಬರೆದ ಲೇಖನಗಳನ್ನು ನಾನು ಮಾಡಿದ ಅನುವಾದಗಳನ್ನು ಅಲ್ಲಲ್ಲಿ ಓದಿರುವುದಾಗಿ ಹೇಳಿದ್ದಲ್ಲದೆ ಅವುಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನು ಸಹ ಆಡಿದ್ದರು.

“ನೀವು ಅವಧಿಯಲ್ಲಿ ಗಾಲಿಯಾನೊ ರಚಿಸಿದ ‘ಚಿಲ್ಡ್ರನ್ ಆಫ್ ದಿ ಡೇಸ್’ ಪುಸ್ತಕದ ಬಗ್ಗೆ ಬರೆದದ್ದು ನೋಡಿ ನನ್ನ ಮಗನ ಬೆನ್ನು ಬಿದ್ದು ಆ ಪುಸ್ತಕ ತರಿಸಿಕೊಂಡು ಒಂದೇ ದಿನದಲ್ಲಿ ಓದಿ ಮುಗಿಸಿದೆ,” ಎಂದ ಅವರು ಆ ಪುಸ್ತಕದ ಬಗ್ಗೆ ಬಹಳ ಒಳ್ಳೊಳ್ಳೆ ಮಾತು ಆಡಿ, “ಆ ಪುಸ್ತಕ ಓದುವಾಗ ನನಗೆ ನೀವು ಹೆಚ್ಚು ಅರ್ಥ ಆದಿರಿ,” ಎಂದುಬಿಟ್ಟರು.

ಅದನ್ನು ಕೇಳಿ ನಾನು ಅವಾಕ್ಕಾದೆ. ಅದರರ್ಥ ಏನು ಎಂದು ತಿಳಿಯಲಿಲ್ಲ. “ಏನು ಅರ್ಥ ಆಯ್ತು ಅಂತ ಒಂಚೂರು ಹೇಳಿ ಸರ್. ನಿಮ್ಮ ಮುಖಾಂತರ ಆದ್ರೂ ನನಗೆ ಅರ್ಥ ಆಗದಿರುವ ನನ್ನನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ,” ಎಂದು ನಗುನಗುತ್ತಾ ಹೇಳಿದರೆ ಬಸವರಾಜ್ ಪುರಾಣಿಕ್, “ಅದನ್ನೆಲ್ಲ ಫೋನ್ ಅಲ್ಲಿ ಹೇಳೋಕೆ ಆಗೋದಿಲ್ಲ. ಅದನ್ನ ನೀವು ಬಂದು ನನ್ನನ್ನು ಭೇಟಿ ಆದಾಗ ಹೇಳ್ತೇನೆ,” ಎಂದು ಕೀಟಲೆ ಸ್ವರದಲ್ಲಿ ಹೇಳಿದರು. ನಾನು ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನಾ ಇಲ್ಲವಾ ಮುಂದೆ ಯಾವಾಗ ಬರುತ್ತೇನೆ ಎಂದೆಲ್ಲ ವಿಚಾರಿಸಿ ಮುಂದಿನ ಬಾರಿ ಬಂದಾಗ ತಪ್ಪದೆ ಬಂದು ತನ್ನನ್ನು ಭೇಟಿ ಆಗಲೇಬೇಕು ಎಂದು ಹುಕುಂ ನೀಡಿದರು. ನಾನು ಸರಿ ಎಂದು ಒಪ್ಪಿದೆ.

ಅಂದು ನನ್ನ ಈ-ಮೇಲ್ ವಿಳಾಸ ಪಡೆದುಕೊಂಡ ಬಸವರಾಜ್ ಅದೇ ದಿನ ಮಧ್ಯಾಹ್ನ ನಂಗೊಂದು ಈ-ಮೇಲ್ ಬರೆದರು. “ಇಂಥ ಅಮೋಘ ಕೃತಿ (ಗಾಲಿಯಾನೊ ಬರೆದ ‘ಚಿಲ್ಡ್ರನ್ ಆಫ್ ದಿ ಡೇಸ್’) ನೀವು ಸೂಚಿಸದಿದ್ದರೆ, ನಾನು ಒಂದು ಭವ್ಯಾನುಭವದಿಂದ ವಂಚಿತನಾಗುತ್ತಿದ್ದೆ. ಅದಕ್ಕೆ ನಿಮಗೆ ಧನ್ಯವಾದಗಳು. ಇಂಥಹ ಕಣ‍್ಣು ತೆರೆಸುವ, ಜಡತ್ವ ನೀಗಿಸುವ ಕೃತಿಗಳ ಸಂಗದಲ್ಲಿರುವ ನಿಮಗೆ ಅಭಿನಂದನೆಗಳು. ಇಂಥ ಕೃತಿಗಳನ್ನು ಸೂಚಿಸಿರಿ. ಸಾಧ್ಯವಾದರೆ, ಓದಿ ಚಿಗುರುವೆ.”

ಇದಾದ ಮೇಲೆ ಒಂದಷ್ಟು ಬಾರಿ ನಾನು ಮಾಡಿದ ಅನುವಾದಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೆ ಮತ್ತು ಅವರು ಪ್ರೀತಿಯಿಂದ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರು, ಒಂದಿಷ್ಟು ಬದಲಾವಣೆಗಳನ್ನು ಸಹ ಸೂಚಿಸುತ್ತಿದ್ದರು. ಅವರೊಂದಿಗೆ ಸಂಪರ್ಕ ಏರ್ಪಟ್ಟ ಬಳಿಕ ನಾನು ಬೆಂಗಳೂರಿಗೆ ಹೋಗಿದ್ದು ಒಂದೇ ಒಂದು ಬಾರಿ. ಒಂದೆರಡು ಮುಖ್ಯ ಕೆಲಸ ಇಟ್ಟುಕೊಂಡು ಹೋಗಿದ್ದ ನನಗೆ ಬಸವರಾಜ್ ಅವರನ್ನು ಭೇಟಿ ಮಾಡಲು ಸಾಧ್ಯ ಆಗಿರಲಿಲ್ಲ. ಅದನ್ನು ತಿಳಿಸಿ ಅವರಿಗೆ ಬರೆದಾಗ, “ಮುಂದಿನ ಬಾರಿ ಭೇಟಿ ಮಾಡಲು ಮರೆಯದಿರಿ,” ಎಂದಿದ್ದರು.

ಇಂದು ಸಂಜೆ ನಾನು ಪುಣೆಯಲ್ಲಿ ನನ್ನ ಕೆಲಸದ ನಡುವೆ ಇರಲು ರಹಮತ್ ಸರ್ ಮೆಸೇಜ್ ಬಂತು: “ನಿಮ್ಮ ಬರಹ ಬಹಳ ಮೆಚ್ಚುತ್ತಿದ್ದ ಉರ್ದು ಅನುವಾದಕ ಬಸವರಾಜ್ ಪುರಾಣಿಕ್ ಇಲ್ಲವಾದರು. ನಿಮಗೆ ಅವರನ್ನು ಕಾಣಲು ಸಾಧ್ಯವಾಯಿತೆ?”

ಬಸವರಾಜ್ ಪುರಾಣಿಕ್ ಮಾಡಿದ ಒಂದೇ ಒಂದು ಅನುವಾದ ಓದದ, ಅವರ ಕೃತಿಯ ಹೆಸರನ್ನೂ ತಿಳಿಯದ, ಅವರ ಹೆಸರನ್ನೂ ಕೇಳಿರದ ನನ್ನನ್ನು ಅವರು ಆರು ತಿಂಗಳುಗಳ ಕಾಲ ಹುಡುಕಿದ್ದು, ನಾನು ಪ್ರಸ್ತಾಪಿಸಿದ ಗಾಲಿಯಾನೊ ಪುಸ್ತಕವನ್ನು ಓದಿ ನನಗೆ ಕೃತಜ್ಞತೆ ತಿಳಿಸಿದ್ದು, ಆ ಕೃತಿಯ ಮೂಲಕ ನನ್ನನ್ನು ಅರಿತಿದ್ದೇನೆ ಎಂದು ಬಲವಾಗಿ ಹೇಳಿದ್ದು, ಆಗಾಗ ನನ್ನ ಬರವಣಿಗೆಯನ್ನು ಮೆಚ್ಚಿ ಪಾತ್ರ ಬರೆದದ್ದು, ಸಲಹೆ ಸೂಚಿಸಿದ್ದು, ಪ್ರೀತಿ ತೋರಿಸಿದ್ದು, ಬಂದು ಭೇಟಿ ಆಗು ಎಂದು ಒತ್ತಾಯ ಮಾಡಿದ್ದು… ಇವೆಲ್ಲವೂ ಒಂದು ಅಸಂಭವ, ಅವಾಸ್ತವ ಎಂಬಂತಿದೆ.

ಆದರೂ ಗೊತ್ತಿದೆ ನನಗೆ ಸಾಹಿತ್ಯ, ಕಲೆ ಇಂಥಾ ಅವಾಸ್ತವ, ಅಸಂಭಾವ್ಯ ಸಂಬಂಧಗಳನ್ನು ಏರ್ಪಡಿಸುತ್ತದೆ ಎಂದು. ಎಂಬತ್ತು ದಾಟಿದ ಬಸವರಾಜ್ ಮೂವತ್ತಕ್ಕೆ ಕಾಲಿಟ್ಟ ನಾನು ಒಬ್ಬರನ್ನೊಬ್ಬರು ಭೇಟಿ ಆಗಬೇಕಿತ್ತು, ಆಗಲಿಲ್ಲ. ಆದರೂ ಸಾಹಿತ್ಯದ ಮೂಲಕ ಒಳಗಿನ ಚಡಪಡಿಕೆಯ ಮೂಲಕ ಉರ್ದು ಕಾವ್ಯದ ಮೂಲಕ ನಾವು ಅತೀಂದ್ರಿಯವಾಗಿ ಭೇಟಿ ಆಗಿದ್ದೆವು. ಇಂಥಾ ಒಂದು ವಿಶಿಷ್ಟ ಪ್ರೀತಿ, ಅಭಿಮಾನ ಮತ್ತು ಒಂದು ಅಸಾಮಾನ್ಯ ಸಂಬಂಧದ ಅನುಭವ ನೀಡಿದ ಬಸವರಾಜ್ ಪುರಾಣಿಕ್ ಅವರನ್ನು ಇನ್ನಾದರೂ ಅವರ ಕೃತಿ ಮೂಲಕ ಇನ್ನಷ್ಟು ತಿಳಿಯುವ ಪ್ರಯತ್ನ ಪಡಬೇಕು.

ಆದರೆ ಅವರ ಮುಖಾಂತರ ನನ್ನ ನಾನೇ ಅರಿಯುವ ಸಾಧ್ಯತೆ ಶಾಶ್ವತವಾಗಿ ಕಳೆದುಕೊಂಡೆ.

ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರ ಋಣಿ, ಬಸವರಾಜ್ ಪುರಾಣಿಕ್ ಸರ್.

 

1 Response

  1. Deepak Puranik says:

    Iam leaving this message in english as the my device does not support Kannada script. Iam deeply touched by your homage to my father. He had this child like enthusiasm to learn new things and interact with people. At dinner time, as he and I shared a meal, He would talk excitedly about something new he had read or a conversation he had had with someone that day. I remember him mention about you and the book “Children of the days”. Thank you

Leave a Reply

%d bloggers like this: