ಚಹಾ ಮಿರ್ಚಿ ನಿಮ್ಮ ದಾರಿ ಕಾಯ್ತಿದೆ ಸರ್..‌

ಸರೋಜಿನಿ ಪಡಸಲಗಿ

2016  ಫೆಬ್ರುವರಿಯಲ್ಲಿ, ಬೀದರ್ ನಲ್ಲಿ ಕೆ.ಎಮ್.ಸಿ. ವೈದ್ಯರ, “ನೆನಹು ” ಬಳಗದ ಸ್ನೇಹ ಕೂಟ- ಸಮ್ಮೇಳನ. ಅಲ್ಲಿ ನಾನೇ ಬರೆದು ಸಂಯೋಜಿಸಿದ “ನನ್ನೊಲವಿನ ಜೀವಗಳೇ ಹೃದಯದ ಮಿಡಿತಗಳೆ ” ಹಾಡು ಹೇಳಿದೆ. ಹಾಡು ಮುಗಿದ ನಂತರ ಡಾ. ವಿಮಲಾ ಪುರಾಣಿಕ, ನನ್ನ ಪತಿ ಡಾ. ಸುರೇಶ ಪಡಸಲಗಿಯವರ ಸಹಪಾಠಿ ನನ್ನ ಹತ್ರ ಬಂದು “ಸರೋಜಿನಿ ನನ್ನ ಪತಿ  ಬಸವರಾಜ ಪುರಾಣಿಕ ನಿನ್ನ ಹಾಡ ಕೇಳಿದ್ರ ಭಾಳ ಸಂತೋಷಪಡ್ತಾರ. ಒಂದು ಸಲ ಅವರನ್ನ ಭೇಟಿಯಾಗು” ಅಂದರು. ನಾನೂ ಹೂಂ ಅಂದು ಸುಮ್ಮನಾದೆ. ನನಗೋ ಸಂಕೋಚ. ನಾನು ಸಾಮಾನ್ಯ ಗೃಹಿಣಿ, ಅಂಥ ದೊಡ್ಡ ವ್ಯಕ್ತಿಯನ್ನು ಭೇಟಿಯಾಗೋದು ಹೇಗೆ ಅಂತ ಸುಮ್ಮನಾಗಿ ಬಿಟ್ಟೆ.

ಸ್ವಲ್ಪ ದಿನದ ನಂತರ ಒಂದಿನ ಮಧ್ಯಾಹ್ನ ಫೋನ್ ಎತ್ತಿದಾಗ “ಸರೋಜಿನಿ ಇದ್ದಾರಾ” ಅಂತ ಆಕಡೆಯಿಂದ. ನಾನು ,”ನಾನೇ ಸರೋಜಿನಿ. ತಾವ್ಯಾರು “ಅಂದೆ. “ನಾನು ಬಸವರಾಜ ಪುರಾಣಿಕ “. ನಾನು ಗಾಬರಿಯಾಗಿ ನಮಸ್ಕಾರ ಸರ್ ಅಂದೆ. “ವಿಮಲಾ ನಿನ್ನ ಬಗ್ಗೆ ಹೇಳಿದ್ಲು. ಈಗ ಅವಧಿಯೊಳಗ ಬರೋ ನಿನ್ನ ಕವನ ಓದಿದಾಗೊಮ್ಮೆ ನಿನ್ನ ಜೋಡಿ ಮಾತಾಡಬೇಕೂಂತಿದ್ದೆ ತಂಗಿ. ಈ ಹೊತ್ತಿನ ನಿನ್ನ ಕವನ ‘ ಇರುಳು ‘ ಓದಿ ಸುಮ್ಮನಿರಾಕ ಆಗಲಿಲ್ಲ. ನಿನ್ನ ಭೇಟಿಯಾಗ ಬೇಕಲ್ಲ. ನನಗ ಬರಲಿಕ್ಕೆ ಆಗಾಂಗಿಲ್ಲ. ಯಾವಾಗ ಬರ್ತೀ ? ನಿನ್ನ ಹಾಡು ಕೇಳಬೇಕು, ಅದರ ಬಗ್ಗೆ ಮಾತಾಡಬೇಕು” ಅಂದರು.

ನನಗೋ ದಿಕ್ಕೇ ತೋಚಲಿಲ್ಲ. ನನ್ನ ಬಗ್ಗೆ ನನಗೇ ನಾಚಿಕೆಯಾಯ್ತು. ಡಾ.ವಿಮಲಾ, ಡಾ.ಗಲಗಲಿ (ಕವಿ ಮಧುರ ಚೆನ್ನರ ಸುಪುತ್ರ. ನನ್ನ ಪತಿಯ ಸಹಪಾಠಿ ) ಇಬ್ಬರೂ ಫೋನ್ ಮಾಡಿ ಹೇಳಿದ್ದರೂ ಸಂಕೋಚದಿಂದ ಸುಮ್ಮನಿದ್ದ ನನ್ನನ್ನು ನಾನೇ ಬೈಯ್ದುಕೊಂಡು ಪುರಾಣಿಕ ಸರ್ ಜೊತೆ ಮಾತನಾಡಿ ಕ್ಷಮೆ ಕೇಳಿ ಖಂಡಿತಾ ಬರುವುದಾಗಿ ಹೇಳಿದೆ.

ನಾ ಹೇಳಿದಂತೆ ಒಂದು ದಿನ ಸುರೇಶ್ ಅವರ ಜೊತೆ ಅವರ ಮನೆಗೆ ಹೋದಾಗ ಅವರಿಗಾದ ಸಂಭ್ರಮ ನನ್ನ ಮೂಕಳಾಗಿಸ್ತು. “ದೊಡ್ಡ ವ್ಯಕ್ತಿಯ ದೊಡ್ಡತನ ಇದು ” ಅನಿಸ್ತು. ಆ ದಿನ ನನ್ನ ಸ್ವರಚಿತ ಕವನಗಳು, ಹಿಂದಿ ಗಝಲ್ ಗಳು, ಚಿತ್ರ ಗೀತೆಗಳು , ಮರಾಠಿ ಭಕ್ತಿ ಗೀತೆಗಳು ಒಂದೇ ಎರಡೇ ,ನಾನೂ ಖುಷಿಯಿಂದ ಹಾಡಿದೆ. ಅವರು ಅದಮ್ಯ ಉತ್ಸಾಹದಿಂದ ಕೇಳ್ತಾ, ನಡು ನಡುವೆ ಚರ್ಚಿಸ್ತಾ ಇದ್ದರು. ಆ ಅನುಭವ ಮರೆಯಲಾಗದ್ದು.

ಹೀಗೆ ಮೊದಲಾಯ್ತು ನಮ್ಮ ಪರಿಚಯ , ಹಾಡುಗಾರಿಕೆ , ಚರ್ಚೆ , ವಿಮರ್ಶೆ , ಸಲಹೆ ಸೂಚನೆಗಳು. ಅರಿಯಲಾಗದ ಒಂದು ಆತ್ಮೀಯತೆ ಬೆಳೆಯಿತು. ಅವರು ಹೇಳಿದ ಪ್ರತಿ ಮಾತು ನನಗೆ ದಾರಿ ದೀಪ. ” ಕವನ ಬರೀ ಬೇಕಾದರ ಕವನಗಳ ಆಳವಾದ ಅಭ್ಯಾಸ ಬೇಕ ತಂಗಿ . ನಿನಗ ಯಾರ ಕವನ ಸೇರ್ತಾವೋ ಅವನ್ನ ಚೆನ್ನಾಗಿ ಓದು. ಓದಿದಷ್ಟ ಕಡಮೀನ ” ಅಂತ ಹೇಳೋರು. ಪ್ರತಿಯೊಂದರಲ್ಲಿಯೂ ಆವರಿಗಿರುವ ಆಸಕ್ತಿ ನನ್ನ ಮೂಕಳನ್ನಾಗಿಸಿತ್ತು. ಉರ್ದು ಸಾಹಿತ್ಯದ ಆಳವಾದ ಜ್ಞಾನ , ಪ್ರತಿ ಗಾಯಕ , ಸಂಗೀತಗಾರ, ಬರಹಗಾರರ ಬಗೆಗಿರುವ ಆಸಕ್ತಿ, ಮಾಹಿತಿ ಅನೂಹ್ಯ , ಅಪರೂಪ. ಅವರು ನೀಡುತ್ತಿದ್ದ ಸಲಹೆ , ದಾರಿ ತೋರುವ ಪರಿ ಹೇಗೆ ಮರೆಯಲಿ ?
ಅವಧಿಯಲ್ಲಿ ಬರುವ ನನ್ನ ಪ್ರತಿ ಕವನ ಓದಿ ಅದರ ಬಗ್ಗೆ ಮಾತನಾಡಲು ಎಂದೂ ಮರೀತಿರಲಿಲ್ಲ.”ಚಹಾ ಸರಣಿ’ ಕವನದ ನನ್ನ ಕವನ ಓದಿ “ತಂಗಿ ಆ ನಿನ್ನ ಚಹಾ ಅದರ ಜೋಡಿ ಮಿರ್ಚಿ ಸಲವಾಗಿ ನಿನ್ನ ಮನೀಗೆ ಖಂಡಿತಾ ಬರತೀನ ನೋಡ ” ಅಂದಿದ್ರು.
ಒಂದಿನಾ ಡಾ.ಗಲಗಲಿಯವರ ಫೋನ್. ” ಬಸವರಾಜ ಪುರಾಣಿಕರು ಆಸ್ಪತ್ರೆಲೀದಾರೆ. ಹೋಗಿ ಬಾ” ಅಂದರು. ಡಾ ವಿಮಲಾನೂ ಅವರ ಆರೋಗ್ಯದ ಬಗ್ಗೆ ಹೇಳಿದ್ರು. ಅವರಿಗೆ ತೊಂದರೆಯಾಗದಿರಲಿ ಅಂತ ಸುಮ್ಮನಿದ್ದ ನಾನು ಅಂದು ಸಂಜೆನೇ ಹೋದೆ . ಈಗ ಸುಮಾರು ಎರಡು ವಾರಗಳ ಹಿಂದೆ. ಕಣ್ಮುಚ್ಚಿ ಮಲಗಿದ್ರು ವಿಮಲಾ ,” ಸರೋಜಿನಿ ಬಂದಾಳ’ ಅಂತ ಹೇಳಿದ ಕೂಡಲೇ ಕಣ್ಣು ತೆಗೆದು ನೋಡಿ “ತಂಗಿ ಹಾಡ ಹೇಳ ” ಅಂದರು. ನಂಬ್ತೀರೋ , ಬಿಡ್ತೀರೋ 6 ಹಾಡು ಹೇಳಿದೆ ಆಸ್ಪತ್ರೆಲಿ . ಕಣ್ಮುಚ್ಚಿ ಕೇಳ್ತಿದ್ರು, ಕಣ್ಣೀರು ಕೆನ್ನೆ ಮೇಲೆ ಹರೀತಿತ್ತು. ಅದನ್ನ ಮರೀಲಾಗ್ತಿಲ್ಲ .

ಆ ಧಾರೆ ಇಂದು ನನ್ನ ಕಣ್ಣಲ್ಲಿ, ಅಡುಗೆಮನೇಲಿ ಬಿಸಿ ಚಹಾ ಮಿರ್ಚಿ ದಾರಿ ಕಾಯ್ತಿದೆ ಬಸವರಾಜ ಪುರಾಣಿಕ ಸರ್ ದು…‌

5 Responses

 1. ಜಿ ಎನ್ ಮೋಹನ್ ಮತ್ತು ಮೇಲೆ ಸರೋಜಿನಿ ಬರೆದಂತೆ ’ಈ ಚಿಕ್ ಚಿಕ್’ವಿಷಯಗಳೇ ’ ದೊಡ್ಡವರ ದೊಡ್ಡತನವನ್ನು ತೋರಿಸುತ್ತವೆ. ಒಂದು ದಿನ ನನಗೆ ಬಸವರಾಜ ಪುರಾಣಿಕರಿಂದ ಈ ಮೇಲ್ ಬಂತು! ನನಗೋ ಆಶ್ಚರ್ಯ. ನಾನೋ ಯಃಕಶ್ಚಿತ. ಅವರು ಮತ್ತು ಅವರಣ್ಣ ಸಿದ್ಧಯ್ಯ ಇಬ್ಬರೂ ನನ್ನ ತಂದೆಯ ಅಣ್ಣ ರಾಘವೇಂದ್ರ ದೇಸಾಯಿ ನಡೆಸುತ್ತಿದ್ದ ಹೈದರಾಬಾದ ಕರ್ನಾಟಕದ ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಓದುವಾಗ ನನ್ನ ತಂದೆ ದಿ. ಪಿ.ಬಿ.ದೇಸಾಯಿ (ಶಾಸನ ತಜ್ಞ್ನ, ಇತಿಹಾಸಕಾರ) ಅವರ ಶಿಷ್ಯರಾಗಿದ್ದರಂತೆ, ಅದನ್ನು ನೆನೆದು ಮತ್ತು ಯಾರೋ ಹೇಳಿ ಕೇಳಿದ ನನ್ನ ಫೋಟೋಗ್ರಾಫಿ ಹುಚ್ಚಿನಬಗ್ಗೆ ಬರೆದದ್ದು ಓದಿ ನನಗೆ ಬರೆದದ್ದು ಮಹದಾಶ್ಚರ್ಯ! ಆನಂತರ ಅವರನ್ನು ಒಮ್ಮೆಯಷ್ಟೇ ನಾನು ಅವರ ಪತ್ನಿ ವಿಮಲಾ, ಅವರ ಗೆಳತಿ ಸರೋಜಿನಿಯವರೊಂದಿಗೆ ಆ ’ನೆನಹು’ ಕೂಟದಲ್ಲಿ ಕಂಡಿದ್ದು ಮಾತ್ರ. ಆ ಮಹಾನ್ ಚೇತನಕ್ಕೆ ನಮೋನ್ನಮನಗಳು! ಡಾ ಶ್ರೀವತ್ಸ ದೇಸಾಯಿ, ಯು ಕೆ.

 2. premalatha B says:

  Wonderful characters…. what an experience
  Beautiful article.
  you could make him happy with your singing and writing.. and composing. Kudos to sarojini too.

 3. Sarojini Padasalagi says:

  ಮೊದಲು ಅವಧಿಗೆ ನನ್ನ ಧನ್ಯವಾದಗಳು , ಬಸವರಾಜ ಪುರಾಣಿಕರ ನನ್ನ ಸ್ವಲ್ಪ ಸ್ವಲ್ಪ ಸಮಯದ ಆದರೆ ಅಮೂಲ್ಯವಾದ ಪರಿಚಯದ , ಅನುಭವಗಳನ್ನ ಹಂಚಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟದ್ದಕ್ಕೆ‌ ಪ್ರೇಮಲತಾ ಅವರೇ ಖಂಡಿತಾ ನಾನು ಹಾಡುವುದನ್ನು ,ಬರೆಯುವುದನ್ನು ಮುಂದುವರಿಸ್ತೀನಿ.ಆದರೆ ಪ್ರತಿ ಹಾಡು ಹಾಡುವಾಗಲೂ ,ಬರೆಯುವಾಗಲೂ ಪುರಾಣಿಕ ಸರ್ ಅವರನ್ನು ನೆನೆಯದಿರಲಾರೆ. ನನ್ನ ಹುರಿದುಂಬಿಸುವ ನಿಮ್ಮ ಬರಹಕ್ಕೆ ಧನ್ಯವಾದಗಳು.
  ಶ್ರೀವತ್ಸ ದೇಸಾಯಿಯವರಂದಂತೆ ಪುರಾಣಿಕ ಸರ ಅವರು ಪ್ರತಿಯೊಬ್ಬರ ಗುಣ ವಿಶೇಷಗಳನ್ನು ಗುರುತಿಸಿ ಅವರೊಂದಿಗೆ ಚರ್ಚಿಸಿ ,ಪ್ರೋತ್ಸಾಹಿಸುವ ,ಮೆಚ್ಚುಗೆ ಸೂಚಿಸುವ ಪರಿ ವಿಶಿಷ್ಟ.ಶ್ರೀವತ್ಸ ದೇಸಾಯಿಯವರೇ ಧನ್ಯವಾದಗಳು ಪುರಾಣಿಕ ಸರ ಅವರ ಬಗ್ಗೆ ಇನ್ನಷ್ಟು ಬರೆಯಲು ನಿಮ್ಮ ಬರಹ ಪ್ರೇರೇಪಿಸಿದಕ್ಕೆ

 4. ಆ ಮಹಾಜೀವಿಯ ಬಗ್ಗೆ ಎಂಥ ಹೃದಸ್ಪರ್ಷಿ ಲೇಖನ! ಧನ್ಯವಾದಗಳು

 5. Deepak Puranik says:

  Thank you for this touching tribute to my father. Music was one of the simple life pleasures he had. His taste for music transcended form classical to film music. Whenever he heard a song, he would tell me about the origin, raga, composer, singer and the history of how the song was composed. He was our walking encyclopaedia on many subjects, especially music

Leave a Reply

%d bloggers like this: