ಅವರಿದ್ದರು.. ಮೂವರು ಸಹೋದರರು

ಬಸವರಾಜ ಪುರಾಣಿಕರ ನಿಧನಕ್ಕೆ ಕಂಬನಿ ಮಿಡಿದು ಅನೇಕರು ಅವಧಿಯಲ್ಲಿ ಬರೆದರು.

ಇದಕ್ಕೆ ಅವರ ಸಂಬಂಧಿಕರಾದ ಉದಯ ಪುರಾಣಿಕ್ ಪ್ರತಿಕ್ರಿಯಿಸಿದ್ದಾರೆ

ಉದಯ ಪುರಾಣಿಕ್ 

ಬಸವರಾಜ ಪುರಾಣಿಕರ ಅಗಲಿಕೆಯ ನೋವನ್ನು, ಅವರ ಮೇರು ವ್ಯಕ್ತಿತ್ವ ಮತ್ತು ಬರಹ ಕುರಿತು ಅಭಿಮಾನವನ್ನು ಹಂಚಿಕೊಂಡಿರುವ ಇಲ್ಲಿನ ಎಲ್ಲಾ ಸಹೃದಯರಿಗೆ ನನ್ನ ನಮನಗಳು.

ಮೋಹನ್‍ ಅವರ ಲೇಖನದಲ್ಲಿ ಮೂರು ಜನ ಪುರಾಣಿಕ ಸಹೋದರನ್ನು ಕುರಿತು ಪ್ರಸ್ತಾಪಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟು ಪಡುತ್ತೇನೆ.

1) ಇವರ ಹುಟ್ಟೂರು ಈಗಿನ ಕೊಪ್ಪಳ ಜಿಲ್ಲೆಯ ಕುಕನೂರಿನ ಹತ್ತಿರವಿರುವ ದ್ಯಾಂಪುರ. ತಂದೆ ಪಂಡಿತ ಕಲ್ಲಿನಾಥಶಾಸ್ತ್ರಿ ಪುರಾಣಿಕರು ಪ್ರಸಿದ್ಧ ವೈದ್ಯರು, ಸಾಹಿತಿಗಳು, ರಂಗ ಗೀತೆಗಳು, ನಾಟಕಗಳ ರಚನೆಕಾರರು. ಇವರು ನಿಜಾಂಶಾಹಿಯ ಉರ್ದು ಶಿಕ್ಷಣ ಮಾಧ್ಯಮ ಹೇರಿಕೆ ವಿರೋಧಿಸಿ, ಪ್ರಪ್ರಥಮ ಕನ್ನಡ ಶಾಲೆಯನ್ನು ಸಂಗನಾಳದಲ್ಲಿ ಪ್ರಾರಂಭಿಸಿದಲ್ಲದೆ ದಲಿತರು, ಅಲ್ಪಸಂಖ್ಯಾತರ ಮಕ್ಕಳನ್ನು ಈ ಶಾಲೆಗೆ ಸೇರಿಸಿ, ಎಲ್ಲಾ ವರ್ಗದ ಮಕ್ಕಳಿಗೂ ಸಮಾನ ಶಿಕ್ಷಣವನ್ನು ಉಚಿತವಾಗಿ ನೀಡಿದವರು. ಸಾಮಾಜಿಕ ಪಿಡುಗಗಳ ವಿರುದ್ಧ ಹೋರಾಟ ಮಾಡಿದವರು.

 ಸಿದ್ದಯ್ಯ ಪುರಾಣಿಕ

ಸಿದ್ದಯ್ಯ ಪುರಾಣಿಕ

2) ಸಿದ್ದಯ್ಯ ಪುರಾಣಿಕ, ಅನ್ನದಾನಯ್ಯ ಪುರಾಣಿಕ, ಬಸವರಾಜ ಪುರಾಣಿಕರು ಕನ್ನಡ, ಉರ್ದು, ಹಿಂದಿ ಮತ್ತು ಇಂಗ್ಲೀಷ್‍ – ಹೀಗೆ 4 ಭಾಷೆಯಲ್ಲಿ ಸಾಹಿತ್ಯ ರಚನೆ ಮತ್ತು ಸಂಶೋಧನೆ ಮಾಡಿದ್ದಾರೆ. ಪುರಾಣಿಕ ಮನೆತನದ ನಾಡು-ನುಡಿಯ ಸೇವೆಯನ್ನು 3ನೆ ತಲೆಮಾರಿನಲ್ಲಿ ಮುಂದುವರೆಸಿದ್ದಾರೆ ಈ ಸಹೋದರರು. ಸಿದ್ದಯ್ಯ ಮತ್ತು ಅನ್ನದಾನಯ್ಯ ಪುರಾಣಿಕರಿಗೆ ಸಾಹಿತ್ಯ ಅಕೆಡೆಮಿ ಮತ್ತು ಬಸವರಾಜರವರಿಗೆ ಅನುವಾದ ಅಕೆಡೆಮಿ ಪ್ರಶಸ್ತಿಗಳು ಬಂದಿವೆ.

3) ಹೈದರಾಬಾದು ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದವರಲ್ಲಿ ಪ್ರಮುಖರು ಅನ್ನದಾನಯ್ಯನವರು. ನಂತರ ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟ ಪ್ರಾರಂಭಿಸಿ ಮುನ್ನೆಡೆಸಿದರು ಹಾಗೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿದ್ದಯ್ಯನವರು ಮತ್ತು ಅನ್ನದಾನಯ್ಯನವರು ನೆಡೆಸಿದ ನಿರಂತರ ಹೋರಾಟದ ಫಲವಾಗಿ ಬೀದರ್‍, ಬಳ್ಳಾರಿ, ಬಳ್ಳಾರಿ, ಚಾಮರಾಜನಗರ, ಕೋಲಾರ ಜಿಲ್ಲೆಗಳು ಕರ್ನಾಟಕದ ಭಾಗವಾದವು. ಅನ್ನದಾನಯ್ಯನವರು ಏಕೀಕರಣಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿದೆ.

4) ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ (1960-68) ಅನ್ನದಾನಯ್ಯನವರು ಪ್ರಥಮ ಕನ್ನಡ ನಿಘಂಟು ಪ್ರಕಟಣೆಗೆ ಕಾರಣವಾದರು, ಪರಿಷತ್ತಿಗೆ ಸರ್ಕಾರದಿಂದ ವಾರ್ಷಿಕ ಅನುದಾನ ದೊರೆಯುವಂತೆ, ಪರಿಷತ್ತಿನ ಮುದ್ರಣಾಲಯ ಸ್ಥಾಪನೆ ಮತ್ತು ಕನ್ನಡ ನುಡಿಯ ಪುರ್ನರಾರಂಭವಲ್ಲದೆ , 3 ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದರು. ಪರಿಷತ್ತು ಬಿಟ್ಟು ನಂತರ ಬಸವ ಸಮಿತಿ ಸ್ಥಾಪನೆ, ಕರ್ನಾಟಕ ಭಾಷಾ ಆಯೋಗ, ಗೆಜೆಟಿಯರ್‍ ಸಲಹಾ ಸಮಿತಿಗಳಲ್ಲಿ ಇವರು ಕೆಲಸ ಮಾಡಿದರು. ಹೈಕೋರ್ಟ ಹಿರಿಯ

ಅನ್ನದಾನಯ್ಯ ಪುರಾಣಿಕ

ಅನ್ನದಾನಯ್ಯ ಪುರಾಣಿಕ

ನ್ಯಾಯವಾದಿಯಾಗಿ ನೂರಾರು ಜನ ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಉಚಿತವಾಗಿ ನ್ಯಾಯ ದೊರಕಿಸಲು ಹೋರಾಡಿದರು. ಸರ್ಕಾರದ ವಕೀಲರಾಗಿ ಸಾವಿರಾರು ಕೋಟಿ ಮೌಲ್ಯದ ಅಸ್ತಿಯನ್ನು ಭೂಗಳ್ಳರಿಂದ ಉಳಿಸಿಕೊಟ್ಟಿದ್ದಾರೆ.

ಹಲವು ಮೈಲಿ ದೂರದಲ್ಲಿ ಶಾಲೆ ಕೂಡಾ ಇಲ್ಲದ ಕುಗ್ರಾಮದಲ್ಲಿ, ಅತ್ಯಂತ ಬಡಕುಟುಂಬದಲ್ಲಿ ಜನಸಿದ ಈ ಮೂವರು ಸಹೋದರರು ನಾಡು-ನುಡಿಗಾಗಿ ಸಲ್ಲಿಸಿದ ಸೇವೆಯನ್ನು ಮತ್ತೊಮ್ಮೆ ಸರ್ಕಾರ ಮತ್ತು ಸಮಾಜಕ್ಕೆ ತಿಳಿಸಲು ಶ್ರೀ ಮೋಹನ್‍ ಮತ್ತು ಕೆಲವು ಕನ್ನಡ ಪತ್ರಿಕೆಗಳು ಮಾಡಿದ ಪ್ರಯತ್ನಕ್ಕೆ ಆಭಾರಿಯಾಗಿದ್ದೇನೆ. ಆದರೆ ಅವರ ಕೊನೆಯ ದಿನಗಳಲ್ಲಿ ಅವರನ್ನು ಎಷ್ಟು ಕನ್ನಡಿಗರು, ಸಂಘಟನೆಗಳು ನೆನಪಿಸಿಕೊಂಡರು ಎನ್ನುವ ಕಹಿ ಅನುಭವ ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಅವರೆಲ್ಲರಿಗೂ ಶುಭವಾಗಲಿ.

” ಕವಿ ದೇಹ ಬಿಟ್ಟಾನು
ಕವಿತೆ ಅಮರ ”
ಎನ್ನುವ ಕವಿವಾಣಿಯಂತೆ, ಇವರು ಈಗಲೂ ನಮ್ಮೊಡನೆ ಇದ್ದಾರೆ ಎನ್ನುವ ಭಾವದಿಂದ ಪುರಾಣಿಕ ಕುಟುಂಬದ 4ನೆ ತಲೆಮಾರಿನಿಂದ ಕನ್ನಡ ನಾಡು-ನುಡಿಯ ಸೇವೆ ಮುಂದುವರೆಸಿದ್ದೇವೆ.

ನಿಮ್ಮ ಮಾರ್ಗದರ್ಶನ, ಸಹಕಾರ ನಮಗಿರಲಿ ಎಂದು ಕೋರುತ್ತೇನೆ.

1 Response

  1. ಉದಯ ಶಂಕರ ಪುರಾಣಿಕ says:

    ಅವಧಿ ಬಳಗದ ಸ್ನೇಹಿತರಿಗೆ ನನ್ನ ಕೃತಜ್ಞತೆಗಳು.
    ನಿಮ್ಮ ಸಹಕಾರ, ಮಾರ್ಗದರ್ಶನ ನಮಗೆ ಯಾವಗಲೂ ಇರಲಿ ಎಂದು ಕೋರುತ್ತೇನೆ.

Leave a Reply

%d bloggers like this: