ಒಂದು ಪಾರ್ಕಿಂಗ್-ನಾನೂರು ರೂಪಾಯಿ!

ನಾ.ದಾಮೋದರ ಶೆಟ್ಟಿ

 

ಗಾಂಧಿ ಬಜಾರ್‍ಗೆ ಮಧ್ಯಾಹ್ನದ ಹೊತ್ತು. ಅಲ್ಲೇ ‘ಅಂಕಿತ ಪುಸ್ತಕ’ಕ್ಕೆಂದು ಬಂದ ನನ್ನ ಕಾರು, ಪಾರ್ಕಿಂಗ್ ಜಾಗಕ್ಕಾಗಿ ಹುಡುಕಾಡುತ್ತಿತ್ತು. ಒಂದು ಕಡೆಗೆ ಸ್ಕೂಟರ್ ನಿಲ್ಲಿಸಿದ್ದರು. ಅಲ್ಲಿ ‘ನೋ ಪಾರ್ಕಿಂಗ್’ ಬೋರ್ಡ್ ಇರಲಿಲ್ಲ. ಸ್ಕೂಟರ್‍ಗಳ ಹಿಂಭಾಗದಲ್ಲಿ ಕಾರು ನಿಲ್ಲಿಸಲು ಬೇಕಾದಷ್ಟು ಜಾಗ ಇತ್ತು. ಆದರೂ ನಿಲ್ಲಿಸಬಹುದೇ ಬಾರದೇ ಎಂದು ಸ್ವಲ್ಪಹೊತ್ತು ಕಾದೆ. ಪೊಲೀಸ್ ಕಾನ್ಸ್‍ಟೇಬಲ್ ಒಬ್ಬಾತ ಬಂದ. ಅವನನ್ನು ಕೇಳಿದೆ: ‘ಇಲ್ಲಿ ಕಾರು ನಿಲ್ಲಿಸಿದರೆ ತೊಂದರೆಯೆ?’ ಆತ ಮಾತನಾಡದೆ ಕೈಸನ್ನೆಮಾಡಿ, ನಸುನಗೆ ಬೀರಿ ಅನುಮತಿ ಸೂಚಿಸಿದ. ಅದೇ ಹೊತ್ತಿಗೆ ಇನ್ನೊಬ್ಬರು ಬಂದು ಕೇಳಿದಾಗ ಅವರಿಗೂ ಅದೇ ಕೈಸನ್ನೆಯ ಉತ್ತರ. ಅವರ ಕಾರೂ ನನ್ನ ಕಾರಿನ ಪಕ್ಕದಲ್ಲಿ ನಿಂತಿತು. ಕಾನ್‍ಸ್ಟೇಬಲ್ ಮುಂದಕ್ಕೆ ಹೋದ.

‘ಅಂಕಿತ’ದಿಂದ ಮರಳಿ ಬರಬೇಕಿದ್ದರೆ ನಮ್ಮಿಬ್ಬರ ಕಾರುಗಳನ್ನು ಬಂಧಿಸಿಟ್ಟಿದ್ದರು. ಅಲ್ಲೊಂದು ಫೋನ್ ನಂಬರ್ ಅಂಟಿಸಿದ್ದರು. ಅದಕ್ಕೆ ಫೋನಾಯಿಸಿದೆ. ‘ಇರ್ರೀ, ಬಂದೆ’ ಎಂದಿತು ಆ ಕಡೆಯ ಧ್ವನಿ.

ಕಾರು ಟೋ ಮಾಡುವ ವಾಹನವೊಂದು ವಿಚಿತ್ರ ಸದ್ದುಮಾಡುತ್ತ ಅಲ್ಲಿಗೆ ಬಂದು ನಿಂತಿತು. ಪಕ್ಕದ ಗಾಡಿಯಾತ ಓಡಿಬಂದು, ‘ಸರ್, ಲಾಕ್ ಮಾಡಿದ್ದಾರೆ. ಕಾರು ತೆಗೆಯೋಕ್ಕಾಗಿಲ್ಲ’ ಎಂದ.

‘ನಿಲ್ಲಿಸುವಾಗ ನೋಡ್ಬೇಡ್ವೇನ್ರಿ. ಸ್ಕೂಟರು ನಿಲ್ಸಿರೋದು ಕಾಣೋದಿಲ್ವ. ಎಷ್ಟು ಕಾರ್ ನಂಬರ್?’ ಎನ್ನುತ್ತಾ ಆತ ಎಂಟರ್ ಮಾಡಿಕೊಂಡವನಂತೆ ನಟಿಸಿ, ‘ಆರು ನೂರು ಆಗುತ್ತೆ’ ಎಂದ. ಅಷ್ಟರಲ್ಲಿ ಆ ವಾಹನದ ಡ್ರೈವರ್ ಅದೇ ಯಂತ್ರದ ಹಿಂದಿನ ರೆಕಾರ್ಡ್ ನೋಡಿ, ‘ಹಿಂದಿನದೇನೂ ಬಾಕಿಯಿಲ್ಲ ಸರ್’ ಎಂದ. ‘ಹೌದಾ, ಹಾಗಾದ್ರೆ ನಾನೂರು ಕೊಡಿ, ಸಾಕು’ ಎಂದ. ಆತ ಇನ್ನೂರಾದರೂ ಉಳಿಯಿತಲ್ಲ ಎಂದುಕೊಂಡು ನಾನೂರು ಕೊಟ್ಟು ಕಾರು ಬಿಡಿಸಿಕೊಂಡು ಹೋಗಿಬಿಟ್ಟ.

ಮತ್ತೀಗ ನನ್ನ ಸರದಿ. ನಂಬರ್ ಬರೆದುಕೊಂಡು ‘ನಿಮ್ಮದೂ ಹಿಂದಿನದು ಬಾಕಿಯಿಲ್ಲ. ಅವರು ಕೊಟ್ಟಷ್ಟೆ ಕೊಡಿ’ ಎಂದ. ನಾನಂದೆ, ‘ನಿಮ್ಮ ಕಾನ್‍ಸ್ಟೇಬಲ್ ಇಲ್ಲಿಡಲು ಹೇಳಿದ್ದಕ್ಕೆ ನಾನಿಟ್ಟದ್ದು. ಇಲ್ಲಿ ಬೋರ್ಡ್ ಕೂಡಾ ಇಲ್ಲ. ಆತನನ್ನು ಕರೆಸಿ’ ಎಂದೆ. ಅದಕ್ಕಾತ, ’ರೀ, ಆತ ಹೊಸಬ, ಅವ ಬಂದ್ರೇನು? ನಿಮ್ಮ ದುಡ್ಡು ಅವ ಕಟ್ತಾನಾ?’

ಮಾತಿಗೆ ಮಾತು ಸೇರುತ್ತಿತ್ತಷ್ಟೇ ಹೊರತು ಪ್ರಯೋಜನ ಕಾಣಲಿಲ್ಲ.

ನಾನಂದೆ: ‘ನಿಮಗ್ಯಾಕೆ ಲಂಚ ಕೊಡ್ಬೇಕು? ತಗೊಳ್ಳಿ ಆರು ನೂರು. ರಶೀದಿ ಕೊಡಿ. ಸರಕಾರವನ್ನು ಮೋಸ ಮಾಡೋದ್ರಲ್ಲೇ ಆಯ್ತು. ನೀವು ತಪ್ಪು ಮಾಡ್ತಾ ಇದ್ದೀರೀಂತ ಚೂರೂ ಮನವರಿಕೆಯಾಗೋದಿಲ್ವಾ ನಿಮಗೆ?’ ಆತ ಮಾತೇ ಆಡದೆ, ರಶೀದಿ ಕೊಟ್ಟ.

ವಾಹನದ ಹಿಂಗಟ್ಟಿನಲ್ಲಿ ಟೋ ಮಾಡಲು ಕುಳಿತವನೂ ‘ನಿಮಗೆ ಕಾರು ನಿಲ್ಲಿಸೀಂತ ಹೇಳಿದವ್ರು ಹೊಸಬ್ರೂ ಸಾ’ ಎಂಬುದಾಗಿ ನನ್ನ ಮನವೊಲಿಸುವ ಮಾತನ್ನಾಡಿದ. ಆಗಲೇ ನನಗೆ ಅರ್ಥವಾದದ್ದು: ಕಾನ್ಸ್ಟೇಬಲ್ ಒಬ್ಬಾತನನ್ನು ಐದು ನಿಮಿಷ ಮುಂಚಿತವಾಗಿ ಆ ಕಡೆ ಕಳುಹಿಸಿ, ಕಾರುಗಳನ್ನು ಅಲ್ಲಿ ನಿಲ್ಲುವಂತೆ ಮಾಡಿ, ಆತ ಹೊರಟು ಹೋಗುತ್ತಾನೆ. (ಸ್ಕೂಟರುಗಳ ಹಿಂದೆ ಐದು ಕಾರುಗಳು ನಿಲ್ಲಬಹುದು.)

ಆ ಮೇಲೆ ಗೊತ್ತಾದದ್ದು: ಕಾನ್ಸ್ಟೇಬಲ್ ಒಬ್ಬ ಹೊಸಬನೆಂದು ಹೇಳಿ, ತಲಾ ನಾನೂರರಂತೆ ಎರಡು ಸಾವಿರ ರೂಪಾಯಿ ವಸೂಲು ಮಾಡಿ ಟೋಯಿಂಗ್ ವಾಹನ ಅಲ್ಲಿಂದ ಹೊರಟು ಹೋಗುತ್ತದೆ. ಆ ಮೇಲೆ ಇಡೀ ದಿನ ಅಲ್ಲಿ ಕಾರಿಟ್ಟರೆ ಯಾರೂ ಏನೂ ಮಾಡುವುದಿಲ್ಲ! ಇದು ನಮ್ಮ ಸತ್ಯಸಂಧ ಪೋಲಿಸ್ ಡಿಪಾರ್ಟ್‍ಮೆಂಟಿನ ಕಾರ್ಯವೈಖರಿ!

Leave a Reply