ಪುಸ್ತಕದ ಬದನೇಕಾಯಿ ಹೊಸರುಚಿ – ಜುಲೈ1ಕ್ಕೆ ನಿಮ್ಮ ತಟ್ಟೆಗೆ

GST ತೆರಿಗೆ ವ್ಯವಸ್ಥೆ ಜುಲೈ ಒಂದರಂದು ಚಾಲ್ತಿಗೆ ಬರಲಿದ್ದು, ಹೊಸದಾಗಿ ಮದುವೆಯಾದ ದಂಪತಿ, ಪುಸ್ತಕ ನೋಡಿ ಮಾಡಿರುವ ಈ ಹೊಸ ಅಡುಗೆಯ ಹೊಸರುಚಿ ಗೆದ್ದಿದೆಯೋ ಸೋತಿದೆಯೋ ಎಂದು ತಿಳಿಯುವುದು, ಅದು ನಾಲಿಗೆಯ ಮೇಲೆ ಬಿದ್ದು, ಅದರ ರುಚಿಯು ರಸತಂತುಗಳ ಮೂಲಕ ಮೆದುಳು ತಲುಪಿದ ಮೇಲೆಯೇ.

ಅಡುಗೆ ‘ಸೂಪರ್’ ಆಗಿದೆ ಎಂಬುದನ್ನು ಅವರು ಉಕ್ಕಿಬಿಕ್ಕಿ ಕೂಗಿ ಮಾರ್ಕೆಟಿಂಗ್ ಮಾಡುತ್ತಿದ್ದಾರಾದರೂ, ಅಡುಗೆಗೆ ಬಿದ್ದಿರುವ ಪದಾರ್ಥಗಳ ಗುಣಮಟ್ಟ, ಒಲೆಯ ಬೆಂಕಿಯ ಗಾವು, ಬಳಸಿದ ಪಾತ್ರೆ,  ಅಡುಗೆಯ ಮೇಲಿರುವ ನಿಷ್ಠೆ, ಉಣ್ಣುವ ತಟ್ಟೆ-ಬಟ್ಟಲಿನಿಂದ ಹಿಡಿದು ಪ್ರತಿಯೊಂದೂ ಅಂಶ ಅಡುಗೆ ಮನೆಯೊಳಗೆ ತಣ್ಣಗೊಂದು ತಳಮಳದ ಉರಿ ಹೊತ್ತಿಸಿರುವುದು ಸುಳ್ಳಲ್ಲ. ಅಡುಗೆ ಕೋಣೆಯ ಈ ನಿಟ್ಟುಸಿರು ಕಳೆದ ಆರು ತಿಂಗಳಿನಲ್ಲಿ ಹಲವು ಬಾರಿ ಊಟದ ಮನೆಯ ತನಕವೂ ಕೇಳಿಸಿದ್ದು ಕೂಡ ಸುಳ್ಳಲ್ಲ.

10 ವರ್ಷಗಳಿಂದ ಬಾಗಿಲು ತಟ್ಟುತ್ತಿರುವ GST  ಎಂಬ ಹೊಸ ತೆರಿಗೆ ವ್ಯವಸ್ಥೆಯ ಕಲ್ಪನೆ ಭಾರತವನ್ನು ತಲುಪಿರುವುದೇ ಭಾರತದ ತೆರಿಗೆ ಆದಾಯವನ್ನು ಹೆಚ್ಚಿಸಲು ಮತ್ತು ಗ್ಲೋಬಲ್ ಮಾರುಕಟ್ಟೆಯ ಹಸಿವನ್ನು ತಣಿಸಲು ಎಂಬ ಮ್ಯಾಕ್ರೋ ಸತ್ಯವನ್ನು ಮೊದಲು ಅರ್ಥ ಮಾಡಿಕೊಂಡರೆ, ಈ ಇಡಿಯ ಅಡುಗೆಯ ರುಚಿ ಹಿಡಿಯುವ ಕೆಲಸ ಸುಲಭ.

GST ಜಾರಿಗೆ ಬಂದಾಗ ಸರ್ಕಾರದ ಆದಾಯ ಮೂಲದಲ್ಲಿ ಒಂದು ಜರಗುವಿಕೆ (ಶಿಫ್ಟ್) ಸಂಭವಿಸುತ್ತದೆ. ಈ ಶಿಫ್ಟ್ ಸಂಭವಿಸುವುದು ಉತ್ಪಾದನೆಯಿಂದ(production) ಗ್ರಾಹಕನ ಬಳಕೆಯತ್ತ (consumption) ಮತ್ತು ಉತ್ಪಾದಕರಿಂದ (manufacturer) ಸೇವಾದಾತರತ್ತ (service). 29ರಾಜ್ಯಗಳು, 2  ಕೇಂದ್ರಾಡಳಿತ ಪ್ರದೇಶಗಳ ಸಂಕೀರ್ಣ ವ್ಯವಸ್ಥೆಯೊಂದರಲ್ಲಿ ಈ ಶಿಫ್ಟ್ ನಿಂದ ಹುಟ್ಟಲಿರುವ ಸ್ಥಿತ್ಯಂತರಗಳ ಬಗ್ಗೆ ಈಗಿರುವುದು ಕೇವಲ ನಿರೀಕ್ಷೆಗಳು ಮಾತ್ರ – ಅದೂ ಉತ್ಪಾದನಾ ಕೇಂದ್ರಿತ ರಾಜ್ಯಗಳಿಗೆ ಇದರಿಂದ ನಷ್ಟ ಸಂಭವಿಸಲಿದೆ ಎಂಬ ನಿರೀಕ್ಷೆ. ವಾಸ್ತವ ಇದಕ್ಕಿಂತಲೂ ಕ್ರೂರ ಇರಲೂಬಹುದು.

ಕೆನಡಾ ಮಾದರಿಯ ರಾಜ್ಯ-ಕೇಂದ್ರಗಳ ಸಂಘಟಿತ (Duel) ತೆರಿಗೆ ಮಾದರಿಯನ್ನು ಹೊಂದಿರುವ ಭಾರತದ GST ಕೆನಡಾದ್ದಕ್ಕಿಂತ ಹೇಗೆ ಭಿನ್ನ ಎಂದರೆ, ಇಲ್ಲಿ ಮದ್ಯ, ವಿಮಾನದ ಇಂಧನ, ಡೀಸೆಲ್, ಪೆಟ್ರೋಲ್, ವಿದ್ಯುತ್ ಗಳನ್ನು GST ವ್ಯಾಪ್ತಿಯಿಂದ ಹೊರಗಿಡಲಾಗಿದೆ. ನಗರಪಾಲಿಕೆ ಮಟ್ಟದ ತೆರಿಗೆಗಳೂ ಪ್ರತ್ಯೇಕವಾಗಿಯೇ ಉಳಿಯಲಿವೆ. ಹಾಗಾಗಿ “ ವನ್ ನೇಷನ್; ವನ್ ಟ್ಯಾಕ್ಸ್”ಎಂಬುದು ಕೇವಲ ಘೋಷಣೆ ಮಟ್ಟದಲ್ಲಿ ಮಾತ್ರ ಸತ್ಯ. ತೆರಿಗೆಗಳ ‘ಸುರಿಪಾತ’ ತೀರಾ ಬದಲಾಗಿರುವುದಿಲ್ಲ.

ಈ ತೆರಿಗೆ ಸುಧಾರಣೆ ಸರ್ಕಾರಕ್ಕೆ ಲೆಕ್ಕ ಬರೆದುಕೊಳ್ಳುವ ನಿಟ್ಟಿನಲ್ಲಿ ಸುಧಾರಣೆಯೇ ಹೊರತು ತೆರಿಗೆ ಕೊಡುವವನ ಕಿಸೆಗೆ ಸುಧಾರಣೆ ಅಲ್ಲ ಎಂಬುದನ್ನು ನೆನಪಿಟ್ಟಿಕೊಳ್ಳಬೇಕು. ತೆರಿಗೆ ಕಟ್ಟುವುದು ಡಿಜಿಟಲ್ ಇಂಡಿಯಾದಲ್ಲಿ ಸುಲಭವಾಗಲಿದೆ ಎಂಬ ನಿರೀಕ್ಷೆ ಇದೆಯೇ ಹೊರತು ತೆರಿಗೆಯ ಹೊರೆ ಕಡಿಮೆ ಆಗಲಿದೆ ಎಂಬುದನ್ನು ಸರ್ಕಾರ ಕೂಡ ಎಲ್ಲೂ ಹೇಳಿಲ್ಲ ಎಂಬುದನ್ನು ಗಮನಿಸಿ.

GST ತೆರಿಗೆ ಬಲೆಯನ್ನು ‘ಬಳಕೆದಾರ’ ಎಂಬ ಮಿಕ ಯಾವುದೇ ಕಾರಣಕ್ಕೆ ತಪ್ಪಿಸಿಕೊಂಡು ಹೋಗದಂತೆ ಹೆಣೆಯಲಾಗಿದ್ದು, ಬಡವ-ಸಿರಿವಂತ ಎಂಬ ಹಳೆಯ ಸಾಂಪ್ರದಾಯಿಕ ವಿಭಜನೆ ಇನ್ನು ಮುಂದೆ ಅಪ್ರಸ್ತುತ ಆಗಲಿದೆ. ಪ್ರತಿಯೊಬ್ಬರೂ ಬಳಸುವ ಬ್ಯಾಂಕಿಂಗ್, ಟೆಲಿಕಾಂ, ಆರೋಗ್ಯ, ವಿಮೆಯಂತಹ ಹಲವು ದೈನಂದಿನ ಚಟುವಟಿಕೆಗಳು ತೆರಿಗೆ ದರ ಹಿಗ್ಗಿಸಿಕೊಂಡು ದುಬಾರಿ ಆಗಿವೆ. ಹೀಗೆ, ನಾಗರಿಕನೊಬ್ಬನ ದೈನಂದಿನ ಎಲ್ಲ ‘ಉತ್ಪಾದಕ’ ಚಟುವಟಿಕೆಗಳಲ್ಲಿ ಸರ್ಕಾರ ತನ್ನ ಪಾಲು ತಪ್ಪದೇ ತನಗೆ ಸಿಗುವಂತೆ ಏರ್ಪಡಿಸಿಕೊಳ್ಳುವುದೇ GSTಯ ಮೂಲ ಉದ್ದೇಶ.

Satish Acharya

Satish Acharya

ವ್ಯವಹಾರಸ್ಥರಿಗೂ GST ಹೊಸ ಹೊರೆ, ಹೊಸ ಸವಾಲುಗಳನ್ನು ಹೊತ್ತು ತಂದಿದೆ. ಮೊದಲನೆಯದಾಗಿ, ದೇಶದಲ್ಲಿ ಈಗಾಗಲೇ ಇರುವ VATನಂತಹ ಡಿಜಿಟಲ್ ತೆರಿಗೆ ಪಾವತಿ – ವ್ಯವಹಾರ ದಾಖಲೆಗಳ ಕಂಪ್ಲಯನ್ಸ್ ವ್ಯವಸ್ಥೆಗೆ, ಬ್ಯಾಂಕಿಂಗ್ ವ್ಯವಸ್ಥೆಗೆ ಲಭ್ಯವಿರುವ ಅಂತರ್ಜಾಲ ಸಂಪರ್ಕದ ತಾಕತ್ತು ಏನೇನೂ ಸಾಲುತ್ತಿಲ್ಲ.  ಕಂಪ್ಲಯನ್ಸ್ ಇನ್ನಷ್ಟು ಸಂಕೀರ್ಣವಾಗಿರುವ GSTಯು, ವ್ಯವಹಾರಸ್ಥರ ಜೊತೆ ಅವರ ಅಕೌಂಟಿಂಗ್ ಸಲಹೆಗಾರರಿಗೂ ಹಲವು ಪ್ರಾಯೋಗಿಕ ಸವಾಲುಗಳನ್ನು ಒಡ್ಡಲಿದೆ.

ಸರಬರಾಜು ದಳ್ಳಾಲಿಗಳಿಗೆ ಮಾರಾಟಕ್ಕೊಂದು ಮತ್ತು ಕಚ್ಛಾಮಾಲು ಬೆಂಬಲ ಸೇವೆಗಾಗಿ ಒಂದು – ಹೀಗೆ ಎರಡೆರಡು ತೆರಿಗೆಗಳು ಬೀಳುವ ಬಿಸಿ, ರಫ್ತಿಗೆ ಮೊದಲೇ ತೆರಿಗೆ ಪಾವತಿಸಿ, ಆ ಬಳಿಕ ಅದನ್ನು ಸರ್ಕಾರದಿಂದ ಮರುಪಾವತಿ ಪಡೆಯಬೇಕಾಗಿರುವ ರಫ್ತುದಾರರ ಆಕ್ರೋಶ; ರಫ್ತುದಾರರ ಎಕ್ಸಿಂ ಸ್ಕ್ರಿಪ್ ಸೌಲಭ್ಯವನ್ನು ಮಿತಗೊಳಿಸಿ, ಬ್ಯಾಂಕ್ ಗ್ಯಾರಂಟಿ ಮೇಲೆ ವ್ಯವಹರಿಸಬೇಕೆಂಬ ಒತ್ತಡ, ಪೇಪರ್ ಲೆಸ್ ಆಗಿರಬೇಕಿದ್ದ e-ಕಾಮರ್ಸ್ ವ್ಯವಹಾರಕ್ಕೆ e-ವೇಬಿಲ್… ಹೀಗೆ ಆಳಕ್ಕಿಳಿದು ನೋಡುತ್ತಾ ಹೋದರೆ ಪ್ರತಿಯೊಂದು ರಂಗದಲ್ಲೂ ಚಿಂತೆ ಮಡುಗಟ್ಟಿರುವುದು ಎದ್ದು ಕಾಣುತ್ತಿದೆ.

ನವೆಂಬರ್ 8ರ ನೋಟು ರದ್ಧತಿಯ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿರದ ದೇಶ ಈಗ GST ಬದಲಾವಣೆಗೆ ಮರುಸ್ಪಂದಿಸುವ ಚೈತನ್ಯವನ್ನೂ ಕಳೆದುಕೊಂಡು, ಗಾಳಿ ಬೀಸಿದಂತೆ ತೂರಿಕೊಳ್ಳಲು ಸಿದ್ಧವಾಗಿರುವಂತೆ ಕಾಣುತ್ತಿದೆ. GSTಯಿಂದ ಅನಾವಶ್ಯಕ ಆಮದು ಕಡಿಮೆಯಾಗಿ, ಮೇಕ್ ಇನ್ ಇಂಡಿಯಾಕ್ಕೆ ಪ್ರೋತ್ಸಾಹ ಸಿಕ್ಕುತ್ತದೆ ಎಂಬುದು ಸರ್ಕಾರದ ನಿರೀಕ್ಷೆ. ಆದರೆ, ಅದೇ ವೇಳೆ ಕೆಟ್ಟುನಿಂತಿರುವ ವಿಶ್ವ ಮಾರುಕಟ್ಟೆಯಲ್ಲಿ ನಮ್ಮ ಗ್ರಾಹಕ ದೇಶಗಳು ಅತಿ ಜಾಗ್ರತೆಯ (protectionist) ನಿಲುವು ತಳೆಯುತ್ತಿವೆ. ಇದು ನಮ್ಮ ರಫ್ತಿನ ಮೇಲೆ ಒತ್ತಡ ಹೇರಲಿದೆ ಎಂಬ ಭಯವೂ ಹುಟ್ಟಿಕೊಂಡಿದೆ.

ಜುಲೈನಿಂದ ಒಂದೋ ಎರಡೋ ಕ್ವಾರ್ಟರ್ ಗಳು ಮುಗಿಯುವಾಗ ನಾವು ಎಲ್ಲಿದ್ದೇವೆ, ಈ ಅಡುಗೆಯ ರುಚಿ ಎಂತಹದು ಎಂಬುದು ಖಚಿತವಾಗಲಿದೆ. ಅಲ್ಲಿಯ ತನಕ ಈ ಅಡುಗೆಯ ಪರಿಮಳ ಆಘ್ರಾಣಿಸುವ ಭಾಗ್ಯ ಮಾತ್ರ ನಮ್ಮದು!

2 Responses

  1. pradeep says:

    ಸಾಮಾಜಿಕ ತಾಣಗಳಲ್ಲಿ ತೀವ್ರವಾಗಿ ಇದರ ಕುರಿತು “ತಪ್ಪು ಅಭಿಪ್ರಾಯಗಳನ್ನು” ಬಡವರ ಬಾಗ್ಯಕ್ಕಾಗೆ ಎಂಬಂತೆ ಹರಡಲು ಬ್ರಿಗೇಡ್ ಹೊರಟಿದೆ ..
    ಅಮಾಯಕರು ಅದನ್ನೇ ನಂಬಿ ಇನ್ನೊಮ್ಮೆ ಜೈ ಅಂದರು ಅಚ್ಚರಿ ಇಲ್ಲ..

    ಇಷ್ಟೊಂದು ಡಿಜಿಟಲ್ ಕಂಟೆಂಟ್ (ಇಮೇಜ್ , ವಾಟ್ಸ ಅಪ್ , ವಿಡಿಯೋ ) ಸ್ರಷ್ಟಿ ಮಾಡುವ ಪಡೆ ಗೆ ಆದಾಯವೆಲ್ಲಿಯದೋ

  2. HAJARATALI DEGINAL says:

    KENDRA ABAKARI SUNKA MATTU VATGALA BADALU GST VIDHISUVUDARINDA TERIGE HORE TUSU KADIME AAGALIDE.

Leave a Reply

%d bloggers like this: