ಏನನ್ನೂ ಬರೆಯಲಾರೆ ಈ ರಾತ್ರಿ..

ಸಂದೀಪ್ ಈಶಾನ್ಯ

ಏನನ್ನೂ ಬರೆಯಲಾರದ ಈ ರಾತ್ರಿಗಳಲಿ ನಾನು ಜಗತ್ತಿನ ಅಷ್ಟೂ ಕ್ಷುದ್ರಜೀವಿಗಳ ಮುಂದಾಳು

ಕಣ್ಣಿಗೆ ನಿದ್ದೆ ಹತ್ತುವ ಹೊತ್ತಿನಲ್ಲಿ ಮನೆಯ ಬೆಕ್ಕೊಂದನ್ನು
ನೆನೆಯುತ್ತೇನೆ ಹಟದಿಂದ ಅದನ್ನೆಳೆದು ಆಲಂಗಿಸಿ ಮುದ್ದಿಸುತ್ತೇನೆ
ಹಿಂದೆಂದೊ ಅದೂ ಹಳೆಯ ಕಾವ್ಯಗಳಲ್ಲಿ ರೂಪಕಗಳ ರೂಪದಲ್ಲಿ ಪಾತ್ರವಾಗಿದ್ದು ನೆನಪಿದೆ ನನಗೆ
ಈಗ
ಬೆಕ್ಕು ತಾನಾಗೇ ಹಳೆಯ ಜಾಡಿನಲ್ಲಿ ಸಾಗಿ ಮತ್ತೆ ರೂಪಕವಾದರೆ
ಮತ್ತೊಂದು ಪದ್ಯ ಬರೆದು ಬಿಡುಗಡೆಯಾಗಿಬಿಡಬಹುದು

ಯಾರಾದರೂ ನನ್ನ ಕುರಿತು ಒಂದೇ ಒಂದು ಮಾತನಾಡಿದರು ಕೆಂಡದ ಕೋಟು ತೊಟ್ಟವನಂತೆ ಚೀರಾಡುತ್ತಿದ್ದ ಗುಣಗಳನೆಲ್ಲಾ ಬದಿಗಿಟ್ಟು
ಈಗ ನನ್ನ ಗುಟ್ಟುಗಳನ್ನೆಲ್ಲಾ ಅಕ್ಷರಕ್ಕಿಳಿಸಿ ಸಂತೆಯಲ್ಲಿ ಮಾರಾಟಕ್ಕೆ ಅಣಿಯಾಗಿಸಿದ್ದೇನೆ
ಕಾಯುತ್ತೇನೆ
ಯಾರಾದರೂ ನನ್ನ ಕುರಿತು ಮಾತನಾಡಲೆಂದು ಈಗ
ಕವಿಯಾಗುವುದು ಎಂದರೆ ಅಂತರಂಗದ ಅಸಲಿ ವ್ಯಾಪಾರವಷ್ಟೇ

ಹುಡುಗಿ
ನಿನ್ನ ಕೋಮಲ ತೊಡೆಗಳ ನಡುವೆ ಅನಾದಿಕಾಲದಿಂದಲೂ ಅಡಗಿಸಿಟ್ಟುಕೊಂಡಿರುವ
ಕಠೋರ ಸತ್ಯಗಳನ್ನು ಕ್ಷಣಾರ್ಧದಲ್ಲಿ ಅರ್ಥೈಸಿಕೊಂಡಂತೆ
ಅರಗಿಸಿಕೊಳ್ಳಲಾರೆ ನಾನು

ಆಗೆಲ್ಲಾ ಕೇವಲ ನೀನು ಕಣ್ಣು ಮಿಟುಕಿಸಿ ಒಲಿಸಿಕೊಂಡ ನಿನ್ನ ರಾಜಕುಮಾರನ ಕತೆ ನೆನಪಾಗುತ್ತದೆ
ಈ ಮೊದಲು ಹಳೆಯ ಪ್ರೇಯಸಿಯನ್ನು ಪಡೆಯಲು ಅಕ್ಷಯ ಸೈನ್ಯದೊಂದಿಗೆ ಅವನು ಯುದ್ಧಕ್ಕಿಳಿದಿದ್ದು ನೆನೆದು
ನಗೆಯುಕ್ಕುತ್ತದೆ

ಹೆಣ್ಣಿನ ಕಿರುನಗೆಯ
ಎದುರು ಗಂಡು ಅದೆಷ್ಟು ಅಸಹಾಯಕ

ಪೂರ್ಣಗೊಳ್ಳದ ಪದ್ಯಗಳಂತೆ
ನಾನು ತವಕಿಸುತ್ತಲೇ ತೆವಳುತ್ತೇನೆ
ಬಚ್ಚಿಟ್ಟುಕೊಂಡ ಸಾಲುಗಳು ಆಗಾಗ ಎಟುಕುವಂತೆ
ಹುಡುಗಿಯ ಕೆನ್ನೆಯ ಗುಳಿಯಲ್ಲಿ ಪ್ರೀತಿ ಇನ್ನಷ್ಟು ಆಳಕ್ಕಿಳಿಯುತ್ತದೆ

Leave a Reply