ನಾಟ್ಕ ಶುರುವಾಗಿದೆ… ಸ್ಕ್ರಿಪ್ಟ್ ಎಲ್ಲುಂಟು?!!

ಕ್ಯಾನ್ಸರು ಬಂದಾಗ ಆ ಭಾಗವನ್ನು ಕತ್ತರಿಸಿ ತಗೆದು ಎಸೆಯುವುದು ಕ್ರಮ. ಆದರೆ ಮೆದುಳಿಗೆ ಕ್ಯಾನ್ಸರ್ ಬಂದಾಗ ಮೆದುಳು ಕತ್ತರಿಸಿ ತೆಗೆದರೆ ಜೀವ ಉಳಿದೀತೇ?…. ಇದು ಈವತ್ತು ಸಿದ್ಧರಾಮಯ್ಯನವರ ಸಂಕಟವೂ ಹೌದು; ಸೋನಿಯಾ ಗಾಂಧಿಯವರ ಸಂಕಷ್ಟವೂ ಹೌದು!

ಬಲಪಂಥೀಯ ಸರ್ಕಾರವೊಂದು ದೇಶದಲ್ಲಿ ಮೊದಲ ಬಾರಿಗೆ ‘ಬುಲ್ಡೋಜಿಂಗ್ ಮೋಡ್’ ಆರಿಸಿಕೊಂಡಿರುವಾಗ, ಅಜೆಂಡಾಗಳ ಖಜಾನೆಯೊಂದಿಗೇ ಕಣಕ್ಕಿಳಿದಿರುವಾಗ ಅದಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನೂ ಕಳೆದುಕೊಂಡಿರುವ ಪ್ರತಿಪಕ್ಷಗಳ ಕುರಿತು ಈವತ್ತು ಅತೀವ ಕಳವಳ ಇರುವುದು ಎಡ ಚಿಂತನೆಗಳಿರುವ ವ್ಯಕ್ತಿಗಳಲ್ಲಿ.

ಈ ಕಳವಳ ಸಕಾರಣ. ‘ಬಹುತ್ವ’ ಮತ್ತು ‘ಒಳಗೊಳ್ಳುವಿಕೆ’ಗಳಲ್ಲಿ ನಂಬಿಕೆ ಇರುವವರು ನೋಡು ನೋಡುತ್ತಿರುವಂತೆಯೇ ಅವರ ಭಾರತ “ಏಕ ಭಾರತ” ಆಗತೊಡಗಿದೆ. ದೇಶದ ಭಾಷೆ, ಬದುಕು, ಭವಿಷ್ಯಗಳೆಲ್ಲವೂ ಇಂಥಹದೊಂದು ಕತ್ತಲೆಯ ಕಡೆಗೆ ಸಾಗತೊಡಗಿರುವುದು ಸ್ವತಃ ಈ ಎಡ ಚಿಂತನೆಗಳ ಉದಾಸೀನ, ನಿರ್ಲಕ್ಷ್ಯ, ಸ್ವಾರ್ಥ ಮತ್ತು ಆಸೆಬುರುಕತನಗಳಿಂದಾಗಿ ಎಂಬುದನ್ನು ಕೂಡ ಮರೆಯುವಂತಿಲ್ಲ.

ತಮ್ಮ ವೈಯಕ್ತಿಕ ರಾಜಕೀಯ ಬದುಕು ಸುಭಿಕ್ಷವಾಗಿರಬೇಕೆಂಬ ಒಂದು ಮಹದಾಸೆ ಬಿಟ್ಟರೆ ಬೇರೆಲ್ಲವನ್ನೂ ಕಳೆದುಕೊಂಡಂತೆ ತೋರುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ತಾಯಿಬೇರಾದ ‘ಜನಸೇವೆ’ಯನ್ನು ಮರೆತು ವರ್ಷಗಳೇ ಕಳೆದಿವೆ. ಪಕ್ಷದಲ್ಲಿರುವ ನಾಯಕರ ಸಂಖ್ಯೆ ಕಾರ್ಯಕರ್ತರ ಸಂಖ್ಯೆಯನ್ನು ಮೀರಿ ಬೆಳೆದಿದೆ, ಪಕ್ಷದ ತಳಮಟ್ಟದ ಚಟುವಟಿಕೆಗಳಿಗೆ ಬಾಡಿಗೆಯವರನ್ನೇ ಅವಲಂಬಿಸಬೇಕಾಗಿದೆ. ಹಾಗಾಗಿ ಕಾಸಿನ ಮಟ್ಟಿಗೆ ಪ್ರಾಮಾಣಿಕರಾಗಿರುವ ಹಳೆಯ ತಲೆಮಾರಿನ ಕಾಂಗ್ರೆಸ್ಸಿಗರಿಗೆ ಈವತ್ತು ‘ಜನಸೇವೆ’ಎಂಬುದು ಗಗನ ಕುಸುಮ ಆಗಿಬಿಟ್ಟಿದೆ. ಅದನ್ನೇನಿದ್ದರೂ ಪಕ್ಷದಲ್ಲಿರುವ ಕಾಸುಗಟ್ಟಿ ನಾಯಕರು ಈಗ ನಿಭಾಯಿಸತೊಡಗಿದ್ದಾರೆ. ಉಳಿದವರ ಪಾಡು “… ನ ಘಾಟ್ ಕಾ; ನ ಸಂಶಾನ್ ಕಾ…!” ಆಗಿಬಿಟ್ಟಿದೆ.

ತನಗೊದಗಿರುವ ದುರ್ದೆಸೆಯ ಕಾಲದಲ್ಲಿ ಸಂಪೂರ್ಣ ಕ್ಲೂ-ಲೆಸ್ ಆಗಿ ಕುಳಿತಿರುವ ಕಾಂಗ್ರೆಸ್ಸಿನೆದುರು ಬಲಪಂಥೀಯ ರಾಜಕಾರಣಕ್ಕೆ ಎಲ್ಲೆಲ್ಲೂ ಹಚ್ಚ ಹಸಿರು ಹುಲ್ಲುಗಾವಲು ಕಾಣಿಸತೊಡಗಿರುವುದು ಸುಳ್ಳಲ್ಲ. ಇಂತಹದೊಂದು ಭೂರಿಭೋಜನಕ್ಕೆ ನಡೆದಿರುವ ಸಿದ್ಧತೆಗಳ SWOT ವಿಶ್ಲೇಷಣೆ ಇದು.

ಕರ್ನಾಟಕದಲ್ಲಿ ದೇವೇಗೌಡ ಎಂಬ ಮಾಜೀ ಪ್ರಧಾನಮಂತ್ರಿಗಳು ದಿಲ್ಲಿಯಲ್ಲಿ ನರೇಂದ್ರ ಮೋದಿ ಎಂಬ ಹಾಲೀ ಪ್ರಧಾನಮಂತ್ರಿಗಳ ಜೊತೆ ಒಂದು ಸಲೀಸಾದ ಒಡನಾಟಕ್ಕೆ ಹಾದಿ ಸುಗಮಗೊಳಿಸಿಕೊಳ್ಳುತ್ತಿರುವ ರೀತಿಯನ್ನು ಅರ್ಥೈಸಿಕೊಳ್ಳಬೇಕಾದರೆ, ಅದನ್ನು ಮೊನ್ನೆಯ ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯ ಪಟ್ಟುಗಳು-ಚಿತ್ತುಗಳ ಮೂಲಕ ಅರ್ಥೈಸಿಕೊಳ್ಳಬೇಕಾಗುತ್ತದೆ. ಭಾರತದ ಸಂಕೀರ್ಣ ರಾಜಕೀಯ ಸಮೀಕರಣಗಳನ್ನು ಎಕ್ಸೆಲ್ ಶೀಟ್ ಮಟ್ಟಕ್ಕೆ ‘ಏರಿಸಿರುವ’ ಬಿಜೆಪಿಯ ಹಾಲೀ ಅಧ್ಯಕ್ಷರಾದ ಅಮಿತ್ ಷಾ ಅವರಿಗೆ ಕರ್ನಾಟಕದಲ್ಲಿ ‘ಒಕ್ಕಲಿಗ’ ಸಮುದಾಯದ ಮೇಲೆ ಉಂಟಾಗಿರುವ ಪ್ರೀತಿಯ ಹಿಂದಿರುವ ‘ಎಕ್ಸೆಲ್’ ಸಮೀಕರಣಗಳು ಬರುವ ವರ್ಷ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂಬ ಬಗ್ಗೆ ಯಾರಿಗೂ ಹೆಚ್ಚು ಸಂಶಯಗಳಿದ್ದಂತಿಲ್ಲ.

ಬಲಪಂಥೀಯ ಓಟು ಬ್ಯಾಂಕುಗಳಲ್ಲಿ ಅತಿದೊಡ್ಡದು ನಗರ ಕೇಂದ್ರಿತ ಮಧ್ಯಮವರ್ಗದ್ದು. ಅವರಿಗಾಗಿಯೇ ಕಾಂಗ್ರೆಸ್ಸಿಗೆ ಕವಾಟುಗಳಲ್ಲಿರುವ ಖಾಯಂ ಗುಟುರುಗುಮ್ಮಗಳು ಸಾಲದೆಂಬಂತೆ,  ಹೊಸ ಸ್ಕ್ರಿಪ್ಟ್ ಗಳೂ ಸಿದ್ಧಗೊಂಡಿವೆ. ಡಿಕೆ ರವಿ, ಗಣಪತಿ, ಅನುಪಮಾ ಶೆಣೈ, ಸೋನಿಯಾ ನಾರಂಗ್, ರೂಪಾ ಡಿ. ಹೀಗೆ ಸಾಲು ಸಾಲು ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರ ಒರಟಾಗಿ ನಡೆದುಕೊಂಡಿದೆ ಎಂಬಂತಹ “ಸತ್ಯ”ವೊಂದು ಪಾಕಗೊಳ್ಳುತ್ತಿದೆ. ಈ ಎಲ್ಲ ಪ್ರಕರಣಗಳಲ್ಲೂ ಸಮಾನ ಸ್ಕ್ರಿಪ್ಟ್ ಏನೆಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.

ಸಿದ್ಧರಾಮಯ್ಯ ಸರಕಾರದಲ್ಲಿ ದೊಡ್ಡ ಭ್ರಷ್ಟಾಚಾರದ ಘಟನೆಗಳನ್ನು ಲೋಕಪಟಲಕ್ಕೆ ತೋರಿಸುವಲ್ಲಿ ಪ್ರತಿಪಕ್ಷವಾಗಿ ವಿಫಲವಾಗಿದ್ದರೂ, ಬಿಜೆಪಿ ಕರ್ನಾಟಕದಲ್ಲಿ ಒಂದು ಹೂಬ್ಲೊ ವಾಚು ಮತ್ತು ಒಂದು ಮೆಟ್ರೋ ರೈಲು ಕಾಮಗಾರಿಗಳನ್ನು ಧೈರ್ಯಕ್ಕೆಂದು ಸಿದ್ಧಪಡಿಸಿಟ್ಟುಕೊಂಡಾಗಿದೆ. ಇದರ ಜೊತೆಗೆ ಅಲ್ಲಲ್ಲಿ ರುಚಿಗೆ ತಕ್ಕಷ್ಟು ಕೋಮುವಾದ, ಧರ್ಮ ಸಂಘರ್ಷ, ಜಾತಿ ವೈಷಮ್ಯ, ಭಾಷಾವಾದ, ಪರಿಸರ ರಕ್ಷಣೆ, ಯುದ್ಧೋನ್ಮಾದ ಇತ್ಯಾದಿ ಇತ್ಯಾದಿಗಳನ್ನು ಹದವಾಗಿ ಬೆರೆಸಲಾಗುತ್ತಿದೆ.

ಹಾಗಿದ್ದರೆ ಮುಂದಿನ ಚುನಾವಣೆ ಬಿಜೆಪಿಗೆ ಸುಲಭ ತುತ್ತೇ? –

ಹಾಗೇನಿಲ್ಲ. ಮೊದಲನೆಯದಾಗಿ, ಹಾಲೀ ಕೇಂದ್ರ ಸರಕಾರದ ಆರ್ಥಿಕ ಅವಘಢಗಳ ಪೆಟ್ಟು ತಿಂದಿರುವ ವಣಿಕವರ್ಗ ಮುಂದಿನ ಚುನಾವಣೆಯ ವೇಳೆ ತೆಗೆದುಕೊಳ್ಳಲಿರುವ ತೀರ್ಮಾನ ಬಹಳ ಪ್ರಮುಖ ಪಾತ್ರ ವಹಿಸಲಿದೆ. ಇದು ಬಲಪಂಥೀಯ ಯೋಚನೆಗಳು ಅಂದುಕೊಂಡಷ್ಟು ಸರಳ ‘ಎಕ್ಸೆಲ್’ ಸಮೀಕರಣವಲ್ಲ.  ಎರಡನೆಯದಾಗಿ ಮತಗಳ ದ್ರುವೀಕರಣ ಪ್ರಕ್ರಿಯೆ ಹೆಚ್ಚುತ್ತಾ ಸಾಗಿದರೆ, ಅದಕ್ಕೊಂದು ಋಣಾತ್ಮಕ ಮಗ್ಗುಲೂ ಇರುತ್ತದೆ; ಪಾಕ ಕೆಟ್ಟರೆ ಅದು ತಿನ್ನಲು ಯೋಗ್ಯವಾಗಿ ಉಳಿದಿರುವುದಿಲ್ಲ ಎಂಬುದು ಗೊತ್ತಿಲ್ಲದ ಅಡುಗೆಯವರೇನಲ್ಲ ಅವರು. ಮೂರನೆಯದಾಗಿ ಮತ್ತು ಬಹಳ ಮುಖ್ಯವಾಗಿ ಕರ್ನಾಟಕದಲ್ಲಿ ಎಡಗಡೆಯ ಚಿಂತನೆ ತಮ್ಮದೆಂದು ಬಿಂಬಿಸಿಕೊಂಡೇ ಬೆಳೆದು ಬಂದಿರುವ ಜನತಾ ಪರಿವಾರ ತನ್ನ ಆ ಕ್ಷಣದ ಲಾಭಕ್ಕಾಗಿ ಆಸೆಬುರುಕತನವನ್ನು ಬಿಟ್ಟ ಕ್ಷಣಕ್ಕೆ ಕರ್ನಾಟಕ ಬಿಜೆಪಿಗೆ ಸುಲಭ ತುತ್ತಲ್ಲ.

ಇದೆಲ್ಲ ಏನೇ ಇದ್ದರೂ, ಸ್ಕ್ರಿಪ್ಟೇ ರೆಡಿ ಇಲ್ಲದವರಲ್ಲಿ ನಾಟಕ ಮಾಡಿ ಎಂದರೆ ಮಾಡುವುದಾದರೂ ಏನನ್ನು?!!

Leave a Reply