ಬೇಳೆಯಲ್ಲಿ ಉಪ್ಪು ತುಸು ಕಡಿಮೆಯೆಂದು..

ಉಪ್ಪು ಅರುಣ ಕಮಲ, ಉತ್ತರಪ್ರದೇಶ                                            

ಕನ್ನಡಕ್ಕೆ : ಗಿರೀಶ ಜಕಾಪುರೆ                                              

ಉಪ್ಪು ಭೂಮಿಯ ದುಃಖ

ಉಪ್ಪು ನೆಲದ ರುಚಿ;

ಕಲ್ಲುಮಣ್ಣಿನ ಮೂರರಷ್ಟು

ಉಪ್ಪುನೀರಿದೆ ಸಾಗರದಲಿ;

 

ಮನುಷ್ಯನ ಎದೆಯಲ್ಲಿದೆ

ಉಪ್ಪಿನ ಬೆಟ್ಟ..!

ಎಷ್ಟೊಂದು ದುರ್ಬಲವಿದೆ

ಎದೆಯ ಉಪ್ಪು?

ಬಲುಬೇಗ ಕರಗಿಬಿಡುತ್ತದೆ..!

 

ಬೇಳೆಯಲ್ಲಿ ಉಪ್ಪು ತುಸು ಕಡಿಮೆಯೆಂದು

ಅನ್ನದಲಿ ಕೊಂಚ ಹೆಚ್ಚೆಂದು

ತಟ್ಟೆಗಳು ಬೀದಿಗೆಸೆಯಲ್ಪಟ್ಟಾಗ

ತಲೆತಗ್ಗಿಸುತ್ತದೆ ಉಪ್ಪು..!

 

ಸರ್ಕಾರಿ ಕಛೇರಿಗಳೆಂದರೆ

ಪರವಾನಗಿಯುಳ್ಳ ಉಪ್ಪಿನಂಗಡಿಗಳು

ಅಲ್ಲಿನ ಸಂವೇದನಾಶೂನ್ಯ ಕೈಗಳು

ನಮ್ಮ ಗಾಯಗಳಿಗೆ ಉಪ್ಪು ಸವರುತ್ತವೆ

ಬಹಳ ನಯವಾಗಿ..!

 

ಬೇಕಿದ್ದರೆ ಕೇಳಿ ನೋಡಿ..,

ಮುಖದ ಮೇಲೆ ಉಪ್ಪಿರುವ ಹೆಣ್ಮಕ್ಕಳಿಗೆ

ಈ ಎಷ್ಟು ಕಷ್ಟಕ್ಕೀಡುಮಾಡುತ್ತದೆ

ಮುಖದ ಮೇಲಿನ ಉಪ್ಪು..!

 

ಬಹಳ ದ್ವೇಷಿಸುತ್ತದೆ ಮಹಾಸಾಗರ

ತಿಂದ ಉಪ್ಪಿನ ಋಣ ತೀರಿಸದ

‘ನಮಕಹಲಾಲ್’ರನ್ನು,

ಆದರೆ ಅದು ಜಗಳ ಹಚ್ಚುವುದಿಲ್ಲ ಎಣ್ಣೆಯಂತೆ;

ವಿಶ್ವದಲ್ಲಿ ಕ್ರಾಂತಿಗಳಾಗಗೊಡದೇ ಉಪ್ಪು

ದಯೆತೋರುತಿದೆ ಎರಡುಬಗೆದವರ ಮೇಲೂ..!

 

ಗಾಂಧೀಜಿಗೆ ಗೊತ್ತಿತ್ತು ಉಪ್ಪಿನ ಬೆಲೆ

ಪೇರಲ ಮಾರುವ ಮುದುಕಿಗೂ..!

ಈ ಪ್ರಪಂಚದಲ್ಲಿ ಏನಿರಲಿ ಬಿಡಲಿ

ಇದ್ದೇ ಇರುತ್ತದೆ ಉಪ್ಪು

 

ದೇವರು ಧರ್ಮದ ಉಪ್ಪು

ಕೂಸುಗಳ ಕಣ್ಣೀರಲ್ಲಿನ ಉಪ್ಪು

ಬಡವನ ಬೆವರಲ್ಲಿನ ಉಪ್ಪು

ಇದೇ ಉಪ್ಪು ಕಾಲಕಾಲಕ್ಕೆ

ತನ್ನ ರುಚಿಗೆ ತಕ್ಕಂತೆ

ನಟಿಸುತ್ತದೆ ನಗಿಸುತ್ತದೆ

ನಡುಗಿಸುತ್ತದೆ ಇಡೀ ವಿಶ್ವವನು..!

1 Response

 1. Shama Nandibetta says:

  “ಉಪ್ಪು ಕಾಲಕಾಲಕ್ಕೆ

  ತನ್ನ ರುಚಿಗೆ ತಕ್ಕಂತೆ

  ನಟಿಸುತ್ತದೆ ನಗಿಸುತ್ತದೆ

  ನಡುಗಿಸುತ್ತದೆ ಇಡೀ ವಿಶ್ವವನು..!”

  Sooooooooper

Leave a Reply

%d bloggers like this: