ಮಾತನಾಡು ಬದುಕೇ ದೂರ ಸರಿಯದಿರು..

ಸಿದ್ಧರಾಮ ಹಿರೇಮಠ ಕೂಡ್ಲಿಗಿ

 

ನನ್ನೆದುರು ಕುಳಿತು ಮಾತನಾಡು

ಬದುಕೇ ದೂರ ಸರಿಯದಿರು

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡು

ಬದುಕೇ ದೂರ ಸರಿಯದಿರು

ಒಳಿತು ಕೆಡುಕುಗಳ ಮೇಲಾಟದಲ್ಲಿ

ಸೋತುಹೋಗಿಹೆನು ನಾನು

ಅಂತರಂಗವ ತೆರೆದು ಮಾತನಾಡು

ಬದುಕೇ ದೂರ ಸರಿಯದಿರು

ಬೆಳಗಲೆಂದೇ ಹಚ್ಚಿಟ್ಟ ಹಣತೆ ನಾನು

ಉರಿವುದೊಂದೇ ಗೊತ್ತು

ಅಹಮಿರದೆ ಬೆಳಗುವ ಕುರಿತು ಮಾತನಾಡು

ಬದುಕೇ ದೂರ ಸರಿಯದಿರು

ನಿನ್ನೆದುರೇ ನಳನಳಿಸುತ್ತ ಬೆಳೆದು

ತಲೆಬಾಗದ ಹೆಮ್ಮರವಾದೆ

ನೆಲದ ಬೇರನರಿಯಲಿಲ್ಲ ಮಾತನಾಡು

ಬದುಕೇ ದೂರ ಸರಿಯದಿರು

ಬದುಕಿನಲಿ ಗೆದ್ದವರೆಲ್ಲ ಜಿಗಿದು

ಗಗನದ ತಾರೆಗಳಾದರಂತೆ

ಸಿದ್ಧನಿಗೇನೊಂದೂ ತಿಳಿಯದು

ಮಾತನಾಡು ಬದುಕೇ ದೂರ ಸರಿಯದಿರು

 

Leave a Reply