ಶೂ ಗಟ್ಟಿಯಾಗಿದೆ…

ಮಂಜುನಾಥ್ ಸಿ ನೆಟ್ಕಲ್

ಒಂದು ಸಂಜೆ ಮನೆಗೆ ದಿನಸಿ ತರಲು ಹೋದಾಗ ಬೆಂಗಳೂರಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿ ದಿನಸಿ ಅಂಗಡಿ ಮುಂದೆ  ಒಬ್ಬ ಉತ್ತರ ಕರ್ನಾಟಕದ ಶೈಲಿಯಲ್ಲಿ ಕಚ್ಚೆ ಪಂಚೆ ಟೊಪ್ಪಿ ಧರಿಸಿದ್ದ ವ್ಯಕ್ತಿ ಕುಳಿತಿದ್ದರು.

ಅವರ ಮುಂದೆ ಒಂದು ಚೀಲ ಹಾಗೂ ಅದರಲ್ಲಿ ಕುಡಿಯುವ ನೀರಿನ ಬಾಟಲ್  ಚಪ್ಪಲಿ ಹೊಲಿಯಲು ಬೇಕಾದ ಕೆಲವೇ ಕೆಲವು ಸಾಮಗ್ರಿಗಳು ಇದ್ದವು.

ಆತನನ್ನು ಈ ಹಿಂದೆ ಎಂದೂ ಅಲ್ಲಿ ಕಂಡಿರಲಿಲ್ಲ ಆತ ಅಲೆಮಾರಿ ಚಮ್ಮಾರ ವೃತ್ತಿಯವರೆಂದು ವಿಚಾರಿಸಿದಾಗ ತಿಳಿಯಿತು.  ಹಾಗೇ ಕುತೂಹಲಕ್ಕೆ ಎಲ್ಲಿಯವರು ಅಜ್ಜ ನೀವು ಎಂದೆ? “ನಾವು ಗುಲ್ಬರ್ಗಾ ಜಿಲ್ಲೆ ಅಫಜಲಪುರದವರು” ಎಂದರು.  ಎಷ್ಟು ವರ್ಷ ಆಯಿತು ಇಲ್ಲಿಗೆ ಬಂದು ಎಲ್ಲಿದ್ದೀರಿ ಎಂದೆ.”ಒಂದು ವರ್ಷ ಆಯಿತು ಇಲ್ಲೇ ಹತ್ತಿರದಲ್ಲೇ ಮನೆ,  ಅಲ್ಲಿ ಬರಗಾಲ ಮಳಿ ಇಲ್ರೀ.  ದುಡಿಮೆ ಇಲ್ರೀ. ಜೀವನಾ ಮಾಡೋದಾ ಕಷ್ಟ ಆಗೈತಿ, ಅದಕ್ಕ ಈ ಕಡಿ ಬಂದೀವ್ರೀ” ಎಂದರು.

ಆತ ಅಲ್ಲಿ ಮಣ್ಣಿನ ದಿಬ್ಬದ ಮೇಲೆ ಕಸ ಇರುವ ಕಡೆ ರಸ್ತೆಯ ಮೂಲೆಯಲ್ಲಿ ಕುಳಿತಿದ್ದರು. ಅವರ ಮುಖ ಚರ್ಯೆ ನೋಡಿದರೆ ಆತನಿಗೆ ಆದಿನ ಅಂತಹ  ವ್ಯಾಪಾರವಾದ ಹಾಗೆ ಕಾಣಲಿಲ್ಲ. ಈತನನ್ನು ನೋಡಿದ ಕೂಡಲೇ ಬಹಳ ದಿನಗಳಿಂದ ಮೂಲೆ ಸೇರಿರುವ ನನ್ನ ಶೂಗಳು ನೆನಪಾದವು.

ಒಂದು ಚೆನ್ನಾಗಿತ್ತು. ಒಂದು ಶೂ ತಳದಲ್ಲಿ ಸ್ವಲ್ಪ ಭಾಗ ಗಮ್ ಬಿಚ್ಚಿಹೋಗಿ ಕೆಲಸಕ್ಕೆ ಬಾರದೆ, ಇತ್ತ ಎಸೆಯಲೂ ಮನಸ್ಸು ಬಾರದೆ ಮೂಲೆಯಲ್ಲಿ ಕುಳಿತಿತ್ತು. ಅದಕ್ಕೆ ಕಾಯಕಲ್ಪ ಮಾಡಿಸಿದ ಹಾಗೂ ಆಗುತ್ತೆ

ಈತನಿಗೂ  ಸಣ್ಣ ಸಹಾಯ ಮಾಡಿದ ಹಾಗೂ ಆಗುತ್ತದೆ  ಅಂದುಕೊಂಡು.” ಅಜ್ಜ ನನ್ನ ಷೂ ಗೆ ಗಮ್ ಹಾಕಿಕೊಡ್ತೀರಾ “ಅಂದೆ. ಅದಕ್ಕೆ ಆತ ‘ಗಮ್ ಬ್ಯಾಡ್ರೀ ಅದು ಅಂಟಂಗಿಲ್ರೀ ಛಲೋ  ಸಿಲಾಯಿ‌ ಮಾಡಿಕೊಡ್ತೇನು ದೌಡ್ ತನ್ರೀ “ಅಂದರು.

ನಾನು ಸಿದ್ದನಾದೆ ನನ್ನ ಪತ್ನಿ” ರೀ ಅವನು ಚೆನ್ನಾಗಿ ಕುಡಿದಿರೋ ಹಾಗೆ ಕಾಣ್ತಾನೆ ಶೂ ಹಾಳು ಮಾಡಬಹುದು ಬೇಡ ರೀ “ಎಂದಳು. ನನಗೆ ಅವಳ ಮಾತು ಒಪ್ಪಿಗೆಯಾಗಲಿಲ್ಲ. ಶೂ ಹಾಳಾದರೆ ಹಾಳಾಗಲಿ ಪರವಾಗಿಲ್ಲ ಹೇಗೂ ಇನ್ನು ಸ್ವಲ್ಪ ದಿನದಲ್ಲಿ ಎಸೆಯುವ ಅಂದುಕೊಂಡಿದ್ದೆ ಹೋಗಲಿ ಬಿಡು ಎಂದು ಹೇಳಿ ಹಠಕ್ಕೆ ಬಿದ್ದವನಂತೆ ನಾನು ರಿಪೇರಿ ಮಾಡಿಸಿಯೇ ಮಾಡಿಸುತ್ತೇನೆ ಎಂದು ಶೂ ತೆಗೆದುಕೊಂಡು ಹೊರಟೆ. ಹೆಂಡತಿ ಆಯಿತು ಏನಾದರೂ ಮಾಡಿಕೊಳ್ಳಿ ಎಂದು ಸುಮ್ಮನಾದಳು.

ಆತನಿಗೆ ಎಷ್ಟಾಗುತ್ತಪ್ಪ ಇದು ಹೊಲೆಯಲು ಎಂದೆ. ಆತ ಎರಡೂ ಹೊಲಿಸ್ರೀ ಎರಡನ್ನೂ ಕಲಿಸಿ ಒಂದು ನೂರು ಕೊಡ್ರೀ ಎಂದರು. ನನಗೇಕೋ ಒಪ್ಪಿಗೆಯಾಗಲಿಲ್ಲ. ಅಂಟು ಬಿಚ್ಚಿಕೊಂಡಿರುವುದು ಒಂದು‌ಶೂ  ಚೆನ್ನಾಗಿರುವ ಶೂ ಸಹ ಹೊಲೆಯಬೇಕು ಅನ್ನುತ್ತಾರಲ್ಲ. ಲಾಭದ ಉದ್ದೇಶಕ್ಕೆ ಹೀಗೆ ಹೇಳುತ್ತಾನೆಂದು ಬೇಡಪ್ಪಾ ಮೊದಲು ಒಂದು ಹೊಲಿ ನಂತರ ಇಷ್ಟವಾದರೆ ಉಳಿದ ಇನ್ನೊಂದು ಹೊಲಿಸುತ್ತೇನೆ ಎಂದೆ.

ನನಗೆ ಸಹ ಈತ ಕುಡಿದ ಮತ್ತಿನಲ್ಲಿ ಸರಿಯಾಗಿ ಕೆಲಸ ಮಾಡಲಾರ ಅನಿಸಿತ್ತು. ಆದರೂ ಒಂದು ಕಡೆ ಆಶಾಭಾವನೆ ಇತ್ತು. ಜೊತೆಗೆ ಸರಿ ಹೋದರೆ ಹೋಗಲಿ ಇಲ್ಲಾಂದ್ರೆ ಹೇಗೂ ಎಸೆಯಬೇಕು ಅಂದುಕೊಂಡ ಹಾಗೆ ಎಸೆದರಾಯಿತು ಅಂದುಕೊಂಡೆ. ಆತ ಕೆಲಸ ಶುರು ಮಾಡಿದರು ಸುಮಾರು ಮುಕ್ಕಾಲು ಗಂಟೆ ಹೊಲಿದರು. ಕತ್ತಲು ಆವರಿಸಿತ್ತು ಅಂಗಡಿಯ ಒಳಗಿನಿಂದ ಹೊರಚೆಲ್ಲುತ್ತಿದ್ದ ಮಂದವಾದ  ಲೈಟ್ ಬೆಳಕಿನಲ್ಲಿ ಅಚ್ಚುಕಟ್ಟಾಗಿ ಕಾಯಕ ಶ್ರಧ್ದೆಯಿಂದ ಹೊಲೆದು ಕೊಟ್ಟರು.

ಅವರ ಕೆಲಸ ನೋಡಿ ತುಂಬಾ ಖುಷಿಯಾಯಿತು.ಯಾವುದೇ ಚೌಕಾಶಿ ಮಾಡದೆ 50/- ರೂಪಾಯಿ ಕೊಟ್ಟು ಧನ್ಯವಾದ ಹೇಳಿ ಬಂದೆ ಇನ್ನೂ ಒಂದು ವರ್ಷ. ಆ ಶೂ ಬಳಸಬಹುದು ಅನಿಸಿತು. ಓರ್ವ ಅಜ್ಜನಿಗೆ ಸಣ್ಣ ಸಹಾಯ ಮಾಡಿದ ಆತ್ಮ ತೃಪ್ತಿಯೂ ಆಯಿತು.

ಕಾಯಕ ನಿಷ್ಠೆ ಇರುವ ವ್ಯಕ್ತಿ ತನ್ನ ಕೆಲಸವನ್ನು ಪ್ರೀತಿಯಿಂದ ಶ್ರದ್ಧೆಯಿಂದ  ಮಾಡಬಲ್ಲವನು ಈ ಸಮಾಜದಲ್ಲಿ ಖಂಡಿತಾ ಬಾಳಬಲ್ಲರು ಎನಿಸಿತು.

Leave a Reply