ಸೊಲ್ಲಾಪುರದಲ್ಲಿ ಆಹಾ! ಜೋಳದ ರೊಟ್ಟಿ..

ಆರತಿ ಎಚ್ ಎನ್

ತಡ ರಾತ್ರಿಯಾಗಿತ್ತು, ಕತ್ತಲು ಕವಿದಿತ್ತು, ನಾವಿಬ್ಬರೂ ಸೊಲ್ಲಾಪುರದ ಬೀದಿಗಳಲ್ಲಿ ನಡಿಗೆ ಯಾತ್ರೆ ನಡೆಸಿದ್ದೆವು. ಅಷ್ಟರಲ್ಲಿ ನಿರ್ಮಲಾಗೆ ಜೋಳದ ರೊಟ್ಟಿ ಸುಡುತ್ತಿರುವ ಪರಿಮಳ ಮೂಗಿಗಡರಿತು. ನಮ್ಮಿಬ್ಬರದು ಇನ್ನೂ ಊಟವಾಗಿರಲಿಲ್ಲ.

ನೋಡಿದರೆ, ಅಲ್ಲೇ ರಸ್ತೆ ಬದಿಯಲ್ಲೊಂದು ತುಂಬು ಕುಟುಂಬ ರೊಟ್ಟಿ ಸುಡುತ್ತಿದ್ದದ್ದು ಕಣ್ಣಿಗೆ ಬಿತ್ತು. ರಾತ್ರಿ ಕೂಲಿ, ಮಜ್ದೂರಿ ಮಾಡಿಕೊಂಡು ಬರುವವರು ಉಣ್ಣುವ ಜಾಗವದು. ಹಿಂದಿಯಲ್ಲೇ ಸಂಭಾಷಿಸಿ, ರೊಟ್ಟಿ ಕೇಳಿದೆವು. ಅವರಿಗೆ ನಾವು ಅಲ್ಲಿ ತಿನ್ನುತ್ತೇವೋ ಇಲ್ಲವೋ ಎಂಬ ಸಂಕೋಚ.

ನಾವಿಬ್ಬರೂ ಆ ಕಟ್ಟಿಗೆ ಒಲೆ, ರೊಟ್ಟಿಯ ಘಮಕ್ಕಾಗಲೇ ಮನ ಸೋತಿದ್ದೆವು. ಅದುವರೆಗೂ ಮಾತನಾಡಿದ ಕೆಟ್ಟ ಹಿಂದಿ ಬಿಟ್ಟು, ಕನ್ನಡದಲ್ಲಿ ನಮ್ಮಿಬ್ಬರ ಮಾತು ಶುರುವಾಯಿತು.

ನಮ್ಮ ಕನ್ನಡ ನುಡಿ ಕೇಳಿದಾಕ್ಷಣ ರೊಟ್ಟಿ ಬಡಿಯುತ್ತಿದ್ದ ತಾಯಿ ಮಗಳು, ತಾವೂ ಕನ್ನಡದವರೆಂದೂ, ತಮ್ಮ ಊರು, ಕೇರಿ, ಬೆಂಗಳೂರಲ್ಲಿ ಡ್ರೈವರ್ ಆಗಿರುವ ಮಗ… ಹೀಗೆ ಮಾತನಾಡುತ್ತಾ, ಒಂದು ಬಾಂಧವ್ಯ ಬೆಳೆದ ಕ್ಷಣಗಳನ್ನು ಮರೆಯಲಾರೆ.

ಒಬ್ಬರು ಹೊದ್ದು ಕೊಳ್ಳುವಷ್ಟು ಎರಡೂ ಕೈಗಳಲ್ಲಿ ಹಿಡಿಲಾಗದಷ್ಟು ಪೂರಿಯ ಹಾಗೆ ಉಬ್ಬಿದ, ದೊಡ್ಡ ಬಿಸಿ ಜೋಳದ ರೊಟ್ಟಿ, ಚವಳೀಕಾಯಿ ಪಲ್ಯ, ದಾಲ್, ಉಳ್ಳಾಗಡ್ಡಿ, ರಣ ಖಾರದ ಚಟ್ನಿಪುಡಿ. ಪ್ರೀತಿಯ ಉಪಚಾರದ ಮಾತು, ಇನ್ನೂ ತಿನ್ನಿ ಎಂಬ ಆತ್ಮೀಯ ಒತ್ತಾಯ! ಒಂದೂವರೆ ರೊಟ್ಟಿ ತಿನ್ನುವುದಕ್ಕೆ ಸಾಕುಬೇಕಾಯಿತು!!!

ಸ್ನೇಹ, ದರ್ಶನ್, ಉಪಾಸನ ಹಾಗೂ “ಭಕ್ತಿ” ಎಂಬ ಅಪರೂಪದ ಸುಂದರ ಹೆಸರಿನ, ಚಟುವಟಿಕೆಯ ಸುಂದರ ಮಕ್ಕಳು. ಎಲ್ಲರೂ ಶಾಲೆಗೆ ಹೋಗುತ್ತಿದ್ದಾರೆ.
ಇವೆಲ್ಲಾ ಇರಲಿ, ಊಟಕ್ಕೆ ಹಣ ಕೊಡಲು ಹೋದಾಗ, ರೊಟ್ಟಿ ಮಾಡುವ ಸುನಂದಾ, ದುಡ್ಡು ತೆಗೆದುಕೊಳ್ಳಲಿಲ್ಲ.

ಎಷ್ಟು ಬಲವಂತ ಮಾಡಿದರೂ ಬೇಡವೆನ್ನುವ ಇವರ ಹೃದಯವಂತಿಕೆಗೆ ಕಣ್ಣು ತುಂಬಿ ಬಂತು! ಕೊನೆಗೆ ಏನೇನೋ ಸರ್ಕಸ್ ಮಾಡಿ, ಮಕ್ಕಳ ಕೈಗೆ ಸಿಹಿ ತಿನ್ನಿ ಎಂದು ಕೊಟ್ಟು ಬಂದೆವು.

ಮನಸು ಇಷ್ಟು ವಿಶಾಲವಾಗಿ, ಚೆನ್ನಾಗಿದ್ದರೆ ಸಾಕು!

ಇವರ ಕುಟುಂಬ ಸುಖವಾಗಿರಲಿ…

ಇಡೀ ಪ್ರಪಂಚದಲ್ಲೇ “ಸಿರಿವಂತ ಕುಟುಂಬ”ದ ಜೊತೆ ರೊಟ್ಟಿ ಊಟ ಮಾಡಿದ ನೆಮ್ಮದಿ ನಮಗೆ ಲಭಿಸಿತು!!!

 

Leave a Reply