ಬ್ರೆಕ್ಟ್ ಪರಿಣಾಮ..

ರಾಜೇಂದ್ರ ಪ್ರಸಾದ್

 

 

 

 

ರಾಜಕಾರಣವನ್ನು ಟೀಕಿಸಲು ಬ್ರೆಕ್ಟ್ ಬಳಸಿದ ಕಾವ್ಯ ಮಾರ್ಗ ನನಗೆ ಭಾಳ ಇಷ್ಟದ್ದು.

ಬ್ರೆಕ್ಟ್ ನ ಅಷ್ಟೂ ಕಾವ್ಯವನ್ನು ನಾನು ಓದದಿದ್ದರೂ ಒಂದು ಹಿಡಿಯಷ್ಟು ಅವನ ಕವಿತೆಗಳ ಅನುವಾದವು (ಯು ಆರ್ ಅನಂತ ಮೂರ್ತಿ,  ಶಾ. ಬಾಲುರಾವ್ ) ನನ್ನನು ಭಾಳ ಪ್ರಭಾವಿಸಿಬಿಟ್ಟಿತು.

ಅವನ ಕಾವ್ಯಮಾರ್ಗದ ಪ್ರಭಾವದಲ್ಲಿ ಮೂಡಿದ ಕಾವ್ಯಾಭಿವ್ಯಕ್ತಿಗೆ ‘ ಬ್ರೆಕ್ಟ್ ಪರಿಣಾಮ’ ಎಂದು ಹೆಸರಿಟ್ಟಿದ್ದೇನೆ.

ತೀವ್ರತರದ ರಾಜಕಾರಣ ಮತ್ತು ಸಾಮಾಜಿಕ ತಲ್ಲಣಗಳ ಈ ಹೊತ್ತಿನಲ್ಲಿ ಬ್ರೆಕ್ಟ್ ನಂಗೆ ಸಿಕ್ಕ ಸ್ನೇಹಿತ. ಅವನನ್ನು ಗುರು ಎನ್ನಲಾರೆ! ಒಳಗುದಿಯ ಸಂಕಟ, ಆಕ್ರೋಶಕ್ಕೆ ಸಾಂತ್ವನಗೈಯ್ಯುವ ಗೆಳೆಯನಾಗಿ ನಿಲ್ಲುವ ಈತ ಹೊತ್ತಿ ಉರಿದ ಜರ್ಮನ್ನಿನ ಸರ್ವಾಧಿಕಾರ, ಜನಾಂಗ ಭೇದ/ ಹತ್ಯಾಕಾಂಡ ಎಲ್ಲದರ ಸತ್ಯಸಾಕ್ಷಿ. ಅದನ್ನು ಯಾವ ಮುಲಾಜು ಇಲ್ಲದೇ ವಿರೋಧಿಸಿದ ಅಪೂರ್ವ ಅಂತಃಸಾಕ್ಷಿ.

ಇಲ್ಲಿ ಆ ಅಪ್ರಕಟಿತ ಸಂಗ್ರಹದ ಒಂದಷ್ಟು ಕವಿತೆಗಳಿವೆ.

 

೧. ರೇಡಿಯೋ ಕಾಂಡ -೧

ಇವತ್ತಿನ ರಾತ್ರಿಗಳು ಕನವರಿಸುತ್ತಾ
ಬೆಚ್ಚುತ್ತವೆ, ನಾಳೆಯ ಅನ್ನವ ನೆನೆದು.
ಸಂಬಳದ ಅಂಕಿಗಳಿಗೆ ಎಟುಕದ
ಬದುಕ ಜಿಗಿದು ಮುಟ್ಟುವ ತವಕದ
ಹುಂಬತನಕ್ಕೆ ತಮಗೆ ತಾವೇ ಮರುಗುತ್ತವೆ.

ಹೀಗೇ ಮಲಗಿದಾಗಲೇ ಎದೆಯ ಮೇಲೆ ಹರಿದಂತೆ
ಸರಕಾರಿ ವಾಹನಗಳು ಸಾಲು ಸಾಲು ಸಾಗುತ್ತವೆ
ತುತ್ತೂರಿಗಳಲಿ ಘೋಷಣೆ
ಮಂದಿರ ಕಟ್ಟಲು ತನುಮನಧನ ಸಮೇತ
ಇಟ್ಟಿಗೆ ಕಬ್ಬಿಣ ಬಣ್ಣಗಳ ‘ ತಂದೊಪ್ಪಿಸಿರಿ.’
ಥಟ್ಟನೆ ಎದ್ದರೆ ಆಷಾಢದ ಮೂರನೇ ಜಾವ!

ರೇಡಿಯೋ ನಿಲ್ಲಿಸುವುದೇ ಇಲ್ಲ ಮನೆಗಳಲ್ಲೀಗ
ಬೆಳಗೂ ಬೈಗೂ ಪ್ರಧಾನಿಗಳ ನಾನಾ
ನಮೂನೆಯ ಭಾಷಣ ಬಿತ್ತರವಾಗುತ್ತಿವೆ.
ಕಿವಿಗಳು ಚುರುಕಾಗುತ್ತಿವೆ. ಎದೆಬಡಿತವೂ ಜೊತೆಗೆ.

 

 

 

 

 

 

 

 

 

 

 

ರೇಡಿಯೋ ಕಾಂಡ -೨

ಒಳ್ಳೆಯ ದಿನಗಳ ಕಾಯುತ್ತಾ
ಹಸಿದ ಹೊಟ್ಟೆಯ ಮಕ್ಕಳ
ದೇಶ ಕುಳಿತಿದ್ದಾಗ
ಸರಕಾರ ದನದ ಜಾತ್ರೆ ಕಟ್ಟಿತು.
ಮೇವಿನ ಲೋಡುಗಳ ಇಳಿಸಿತು.
ಕೊಟ್ಟಿಗೆಗಳ ಮೇಲೆ ಬಾವುಟ ನೆಟ್ಟಿತು.

ಹಸಿದ ಮಕ್ಕಳು ತಮಗೂ
ತಟ್ಟೆ ತುಂಬಾ ಬರುವ ಅನ್ನವ ನೆನೆದು
ಹಿಗ್ಗಿ, ದಿನಗಳು ಸವೆಯವಷ್ಟು ಕಾಲ ಕಾಯ್ದರು.
ಏನೂ ಬರಲಿಲ್ಲ, ಅಸಲಿಗೆ ಕೊಳ್ಳಲೂ ಆಗದಷ್ಟು
ಅಗ್ಗವಾದರು.

ಅನ್ನದ ಬಗ್ಗೆ ರೇಡಿಯೊ ಭಾಷಣಕ್ಕೆ
ಪ್ರಧಾನಿಗಳು ಶುರುವಿಟ್ಟುಕೊಂಡ ಮೇಲೆ
ಮಳೆ ಕೂಡ ಮುನಿಸಿಕೊಂಡಿತು!

 

 

 

 

 

 

 

 

 

೨. ಚಿನ್ನದ ರಸ್ತೆಗಳು

ದೇಶದೊಳಗೆಲ್ಲಾ ಓಡಾಡುವ
ಒಂದೇ ಒಂದು ರಸ್ತೆಯನ್ನು
ವಿಶಾಲವಾಗಿ ಮಾಡಿಸುವುದಾಗ
ಭಾಷಣ ನಡೆಯುತ್ತಿದೆ.. ಸಂಸತ್ತಿನೊಳಗಲ್ಲ,
ಚುನಾವಣಾ ಸಮಾವೇಶದೊಳಗೆ

ಆ ರಸ್ತೆಯೊಳಗೆ
ಒಂದೇ ಬಣ್ಣದ ಬಸ್ಸು
ಒಂದೇ ಬಣ್ಣದ ಜನರು
ಒಂದೇ ಬಣ್ಣದ ಮಾತು
ಇತರರು ಬಣ್ಣ ಬದಲಿಸಿಕೊಳ್ಳಿ
ಅಥವಾ ಹೊರಡಿ ; ಘೋಷಣೆ
ಅರಿಯಲಾಗದ ಭೀಕರ ಭಾಷಣ!

ದೊರೆಗಳು ಭಾಷಣ ಮುಗಿಸಿ
ಊಟಕ್ಕೆ ಹೊರಟರು,
ಕಂಪನಿ ಮಾಲೀಕರ ಮನೆಯಲ್ಲಿ ;
ಒಂದು ಹಿಡಿ ಬೇಯಿಸಿ ಒಗ್ಗರಣೆ
ಹಾಕಿದ ಸೊಪ್ಪು, ಮೊಸರನ್ನ ಅಷ್ಟೇ.
ಅವರು ಬಾಡುಣುವುದಿಲ್ಲ, ಸಾತ್ವಿಕರು!

ರಸ್ತೆಯಗಲ ಉದ್ದ ಎತ್ತರ
ಚಿನ್ನದ ಹಾಸು ಬೆಳ್ಳಿಯ ಸೇತುವೆ
ಸುದ್ದಿ ಹಾಳೆಗಳಲಿ ಬಿಸಿಬಿಸಿ ಹಸಿವರದಿಗಳು
ಕಲಾವಿದನ ಕಲ್ಪನೆಯ ಚಿತ್ರಗಳೊಂದಿಗೆ
ಬಣ್ಣ ಬಳಿಯಲು ಸರಕಾರದಿಂದ
ಗುತ್ತಿಗೆ ಹಿಡಿದವರಾರೆಂದು ಹೇಳಬೇಕಿಲ್ಲ.

 

೩. ಬಣ್ಣಗಾರ

 

ಹಳೆಯ ಮನೆಯನ್ನು ರಿಪೇರಿ ಮಾಡುವ
ಬದಲು ಸುಣ್ಣ ಬಳಿಯುವ ಬಣ್ಣಗಾರನ
ಕರೆದು ಚುನಾಯಿಸಿದೆವು.
ಬೊಕ್ಕಸದ ಕೀಲಿ ಕೊಟ್ಟೆವು
ಹಕ್ಕಿನ ಮೊಹರು ಕೊಟ್ಟೆವು
ಕಡೆಗೆ ಮಂಡಿಯೂರಿ ಬೇಡಿದೆವು
ಹೊಸಮನೆಯ ಮಾಡೆಂದೆವು.

ಅಲ್ಲಿ ಗೋಡೆಗಳ ಮೇಲೆ
ಹಿರೀಕರ ಅಸ್ತಿಪಟಗಳು, ನಾಡು ಬೆಳೆದ ಭೂಪಟಗಳು
ಬಣ್ಣ ಬಣ್ಣದ ಚೌಕಗಳು, ಲೆಕ್ಕವಿಲ್ಲದಷ್ಟು ಎಳೆಗಳು
ನಾನಾ ಭಾಷೆಯ ವರ್ಣಮಾಲೆಗಳು
ಅಲ್ಲಿ ವಿಶ್ವಕೋಶವೇ ಮೈದುಂಬಿ ನಿಂತಿತ್ತು.

ಒಳಗೆ ಹೊರಗೆ ಜನವೋ ಜನ
ಅದೊಂದು ತುಂಬಿದ ತವರು ಮನೆ.
ಮೈನೆರೆದವರು, ಮದುವೆಯಾದವರು
ಗರ್ಭಿಣಿಯರು, ಬಾಣಂತಿಯರು, ವಿಧವೆಯರು
ಮತ್ತವರ ಸಂಸಾರಗಳು
ಮತ್ತು ಈಗಷ್ಟೇ ಬಂದಿರುವ ಬಣ್ಣಗಾರ!

ಗೋಡೆ ಕೆರೆಯಲಿಲ್ಲ, ಬಣ್ಣ ತೆಗೆಯಲಿಲ್ಲ
ಇಂಗಾಲವ ಎಣ್ಣೆಯಲಿ ಅದ್ದಿ ತೆಗೆದಂತೆ
ಶುರು ಮಾಡಿದ ಹಚ್ಚಲು ಸುಣ್ಣ ಅಲ್ಲ ಕಡುಕಪ್ಪು ಬಣ್ಣ.
ಇನ್ನು ನಿಂತಿಲ್ಲ ಬಳಿಯಬೇಕಾದ ಬಣ್ಣ.
ಹೆಂಚು ತೆಗೆಸಿದ , ಬಾಗಿಲು ಮುರಿದ.
ಬೀಗ- ಕೀಲಿ ಕಳೆದ, ಕಿಟಕಿ ಗಾಜು ಒಡೆದ.
ತುಂಬಿದ ಮನೆಯೊಳಗೂ ಹೊರಗೂ ಜನ ಕಾದಿದ್ದಾರೆ
ಬಿಸಿಲು, ಚಳಿ, ಮಳೆ ಎಂದರೆ ಇಷ್ಟು ದಿನ ಇಲ್ಲದ್ದೇ ಎಂದೆ!
ಬಣ್ಣವಿನ್ನೂ ಬಳಿದು ಮುಗಿದಿಲ್ಲ.
ಸುಣ್ಣದ ಬಕೇಟಿನಲ್ಲಿ ಕಡು ಕಪ್ಪು ಬಣ್ಣ ಕಾಣದಂತೆ
ಉಳಿದಾವ ಬಣ್ಣ!

ಈ ಸರಣಿ ಇಲ್ಲಿಗೇ ನಿಲ್ಲುವುದಿಲ್ಲ..

Leave a Reply