ಹಳ್ಳಿ ಭಾಷೆ ಎಂದು ಮೂಗು ಮುರಿಯುವವರು ಜಾಸ್ತಿ..

ಚೇತನ್ ಜೀರಾಳ್ 

ಕನ್ನಡದಲ್ಲಿ ಮಹಾಪ್ರಾಣವಿದೆ ಅಂತ ಹೇಳೋರು ಕರ್ನಾಟಕದ ಉದ್ದಗಲ ಅಡ್ಡಾಡಿದಂತೆ ಕಾಣುವುದಿಲ್ಲ.

ಕನ್ನಡದ ಆಡುಭಾಷೆಯಲ್ಲಿ ಮಹಾಪ್ರಾಣಗಳು ಸಿಗುವುದು ಬಹಳ ಕಡಿಮೆ. ಅದರಲ್ಲೂ ಕೆಲವು ಜಾತಿಯಲ್ಲಿ, ಮನೆಯಲ್ಲಿ ಸಂಸ್ಕೃತದ ಪ್ರಭಾವ ಇದ್ದವರಲ್ಲಿ, ಇಲ್ಲ ಬರೆದಂತೆ ಮಾತನಾಡಬೇಕು ಎನ್ನುವವರಲ್ಲಿ ಮಹಾಪ್ರಾಣಗಳನ್ನು ಕಾಣಬಹುದು.

ಅದನ್ನು ಬಿಟ್ಟು ಸಾಮಾನ್ಯ ಜನರ ಮಾತಿನಲ್ಲಿ, ನಮ್ಮ ಜಾನಪದದಲ್ಲಿ ಆಗಲಿ ಮಹಾಪ್ರಾಣಗಳ ಬಳಕೆ ಇಲ್ಲ. ಗಮನಿಸಬೇಕಾದ್ದು ಏನೆಂದರೆ ಜನಪದವನ್ನ ಬರವಣಿಗೆಗೆ ತರಬೇಕಾದರೆ ಮಹಾಪ್ರಾಣಗಳನ್ನ ಬಳಸಿದ್ದಾರೆ ಹೊರಟೆ ಜನರು ಮಹಾಪ್ರಾಣಗಳನ್ನು ಮಾತಿನಲ್ಲಿ ಬಳಸಿಲ್ಲ.

ಶಂಕರ ಭಟ್ಟರು ಕನ್ನಡದ ಬರಹವನ್ನು ಆಡುಮಾತಿಗೆ ಹತ್ತಿರ ಒಯ್ಯುವ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಅದು ಸರಿ ಕೂಡ. ಮಾತು ಮೊದಲು ಬರಹ ಆಮೇಲೆ.

ಇವತ್ತಿನ ಮಕ್ಕಳಿಗೆ ಅದ್ರಲ್ಲೂ ಹಳ್ಳಿಗಾಡಿನ ಮಕ್ಕಳಿಗೆ, ಹಿಂದುಳಿದ ಜಾತಿಗಳ ಮಕ್ಕಳಿಗೆ ಬರಹದ ಕನ್ನಡಕ್ಕೂ ಹಾಗು ಮಾತಿನ ಕನ್ನಡಕ್ಕೂ ಇರುವ ವ್ಯತ್ಯಾಸ ಪರಿಣಾಮ ಬೀರುತ್ತಿದೆ ಎಂದು ತೋರಿಸಿಕೊಟ್ಟಿದ್ದಾರೆ ಹಾಗಾಗಿ ನುಡಿದಂತೆ ಬರೆದರೆ ಈ ಗೊಂದಲಗಳಿಗೆ ಪರಿಹಾರ ಸಿಗುತ್ತದೆ ಎನ್ನುವುದು ಅವರು ಹೇಳುವ ಮಾತು.

ಮಾತಿನಲ್ಲಿ ಎಂದೂ ಬಳಸದ ಪದಗಳನ್ನು ಬರಹದಲ್ಲಿ ಮಾತ್ರ ಯಾಕೆ ಬಳಸಬೇಕು ಎನ್ನುವುದು ಅವರ ಪ್ರಶ್ನೆ.

ಯಾವ ಭಾಷೆಯೂ ಬೇರೆ ಭಾಷೆಯಿಂದ ಎರವಲು ಪಡೆಯದೇ ಇರುವುದು ತುಂಬಾ ವಿರಳ. ಇದಕ್ಕೆ ಕನ್ನಡವೂ ಹೊರತಾಗಿಲ್ಲ. ಹಾಗೆಂದ ಮಾತ್ರಕ್ಕೆ ಬೇರೆ ಭಾಷೆಯ ಮೂಲಪದಗಳನ್ನು ಹಾಗೆ ಉಳಿಸಿಕೊಳ್ಳಬೇಕು ಎಂದೇನಿಲ್ಲ. ಕನ್ನಡಿಗರಿಗೆ ಅದರ ಮಾರ್ಪಾಡು ಪದ ಹೆಚ್ಚು ಉಪಯೋಗವೆಂದರೆ ಅದನ್ನೇ ಬಳಸಿಕೊಳ್ಳಬೇಕು. ಬೇರೆ ಕಡೆಯಿಂದ ಎರವಲು ತಂದ ಮಾತ್ರಕ್ಕೆ ಮಾರ್ಪಡಿಸಬಾರದು ಎನ್ನುವುದು ಸರಿಯಲ್ಲ.

ಹಾಗೆಯೇ ಎರವಲು ತಂದ ಪದಗಳಿಗೆ ಕನ್ನಡದ ಪದಗಳನ್ನು ಕಟ್ಟಬಾರದೆಂದೇನಿಲ್ಲವಲ್ಲ? ಉದಾ. ಸಂಸ್ಕೃತದ ಹಲವು ಪದಗಳು ಕನ್ನಡದ್ದೇ ಪದಗಳು ಎನ್ನುವಷ್ಟು ನಮ್ಮಲ್ಲಿ ಬಳಕೆಯಲ್ಲಿದೆ. ಹಾಗೆಯೇ ಸಂಸ್ಕೃತದ ಹಲವಾರು ಪದಗಳು ನಮಗೆ ಅರ್ಥವಾಗುವುದಿಲ್ಲ. ಅವುಗಳಿಗೆ ಕನ್ನಡ ಪದಗಳನ್ನು ಕಟ್ಟಿಕೊಳ್ಳುವುದರಲ್ಲಿ ತಪ್ಪೇನು? ಇಲ್ಲಿ ಮಡಿವಂತಿಕೆಯ ಪ್ರಶ್ನೆ ಇಲ್ಲ.

ನಮ್ಮ ಕನ್ನಡದ ಪದಗಳು ಹೆಚ್ಚಾಗಲಿ ಎನ್ನುವುದು ಸಂಸ್ಕೃತ ವಿರೋಧವಲ್ಲ. ಆಯ್ಕೆ ಎಲ್ಲರಿಗು ಇದೆ. ಬೇಕಾದವರು ಸಂಸ್ಕೃತ, ಪರ್ಷಿಯನ್, ಪಾರ್ಸಿ, ಉರ್ದು, ತೆಲುಗು ಪದಗಳನ್ನು ಬಳಸಿಕೊಂಡು ಕನ್ನಡದಲ್ಲಿ ಬರವಣಿಗೆ ಮಾಡಲು ಬಯಸಿದರೆ ಯಾರು ತಡೆಯಬಾರದು, ಆದರೆ ಕೊನೆಗೆ ಅದನ್ನು ಓದಿದವರಿಗೆ ಅರ್ಥವಾಗುವುದೇ ಇಲ್ಲವೇ ಎನ್ನುವುದಷ್ಟೆ ಪ್ರಶ್ನೆ?

ಕನ್ನಡದ ಮೂಲ ಪದಗಳನ್ನು ಕಟ್ಟುವಾಗ ಎಲ್ಲವು ಹೊಸ ಪದವಾಗಿರಬೇಕಿಲ್ಲ, ನಮ್ಮ ಹಳ್ಳಿಗರ ಮಾತಿನಲ್ಲಿಯೇ ಹಲವಿವೆ ಆದರೆ ಅವನ್ನು ಬರವಣಿಗೆಯಲ್ಲಿ ಬಳಸಿದರೆ ಹಳ್ಳಿ ಭಾಷೆ ಎಂದು ಮೂಗು ಮುರಿಯುವವರು ಹಲವರು. ಈ ಹಿಂಜರಿಕೆ ಇಲ್ಲವಾಗಬೇಕಿದೆ.

ಹಾಗೆಯೇ ಇದು ಆಯ್ಕೆ ಸ್ವಾತಂತ್ರ್ಯದ ವಿಷಯ ಸಂಸ್ಕೃತ ಪದಗಳನ್ನೇ ಬಳಸುತ್ತೀನಿ ಅನ್ನುವವರಿಗೆ ಬೇಡ ಅನ್ನಬಾರದು ಹಾಗೆಯೇ ಕನ್ನಡದ ಬೇರಿನ ಪದಗಳನ್ನು ಕಟ್ಟಿ ಬಳಸುತ್ತೇನೆ ಅನ್ನುವ ಕಾಳಜಿಗೆ ಕಾಲೆಳೆಯುವುದು ಬೇಡ. ಯಾವುದು ಜನರಿಗೆ ಸರಿ ಅನ್ನಿಸುವುದೋ ಅದನ್ನೇ ಜನರು ಬಳಸುತ್ತಾರೆ.

1 Response

  1. ರಘುನಾಥ says:

    ಸರಿಯಾದ ನಿಲುವು ಸಂವಹನ ಮುಖ್ಯ

Leave a Reply

%d bloggers like this: