ಕಂಠಿ ಮತ್ತೆ ಬರೆಯುವಂತಾಗಲಿ..

ಮಂಜುನಾಥ್ ಲತಾ

ಇವರು ಲೇಖಕ ಚಿತ್ರಶೇಖರ ಕಂಠಿ ಮತ್ತು ಅವರ ಪತ್ನಿ ಆಶಾ ಕಂಠಿ.

ತೊಂಬತ್ತರ ದಶಕದಲ್ಲಿ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾದ ಕಂಠಿ ಭಾವುಕತೆ ಹಾಗೂ ಆದರ್ಶಗಳನ್ನು ಮನುಷ್ಯ ಸಂಬಂಧಗಳ ನೆಲೆಯಲ್ಲಿ ಚಿತ್ರಿಸಿದ ಕತೆಗಾರ. ಕಲಬುರಗಿ ನೆಲದ ಭಾಷೆಯನ್ನು ತಮ್ಮ ಕತೆಗಳಲ್ಲಿ ಹದವಾಗಿ ಬೆರೆಸಿದವರು. ಅವರ ‘ಪಟ್ಟಾ’ ಕಥಾಸಂಕಲನದ ಕತೆಗಳು ತಮ್ಮ ಸರಳತೆಯ ಗುಣಗಳಿಂದಾಗಿಯೇ ಗಮನ ಸೆಳೆಯುತ್ತವೆ.

ಈ ಕತೆಗಾರ ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿ ಮಾತು ಕಳೆದುಕೊಂಡಿದ್ದಾರೆ. ಹತ್ತಾರು ಪುಸ್ತಕಗಳನ್ನು ಬರೆದ ಅವರ ಕೈ ಈಗ ನಿಷ್ಕ್ರಿಯವಾಗಿದೆ. ಬರೆಯಲು ಯತ್ನಿಸುವ ಅವರ ಎಡಗೈ ಮೂರಕ್ಷಗಳಿಂದ ಮುಂದಕ್ಕೆ ಸಾಗುವುದೇ ಇಲ್ಲ.

ದೂರದ ಕಲಬುರಗಿಯಿಂದ ಚಿಕಿತ್ಸೆಗೆಂದು ಮೈಸೂರಿಗೆ ಬಂದಿರುವ ಅವರನ್ನು ನೆನ್ನೆ ಭೇಟಿ ಮಾಡಿದಾಗ ನಾನೂ ಭಾವುಕನಾದೆ.

ಆದರೆ ಈ ಲೇಖಕನ ಆತ್ಮವಿಶ್ವಾಸ, ನಿಷ್ಕಲ್ಮಶ ನಗುವಿನ ಹಿಂದಿರುವ ಉತ್ಸಾಹ ಕಂಡು ಚಕಿತನಾದೆ. ಹನ್ನೆರಡು ವರುಷಗಳಿಂದಲೂ ಈ ಲೇಖಕನನ್ನು ಮಗುವಿನಂತೆ ಆರೈಕೆ ಮಾಡುತ್ತಾ ಬಂದಿರುವ ಅವರ ಪತ್ನಿಯ ತಾಯಿಪ್ರೀತಿ ಕಂಡು ನನ್ನ ಕಣ್ಣುಗಳು ತುಂಬಿ ಬಂದವು.

ಕಂಠಿ ಮತ್ತೆ ಬರೆಯುವಂತಾಗಲಿ…

Vikram Kanthikere ನಾನು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದ ಕಾಲ ಅದು; ಸಣ್ಣ ಹುಡುಗ. ನನ್ನ ನೆನಪು ಸರಿ ಎಂದಾದರೆ, ಕಂಠಿ ಅವರ ಕಥೆಯೊಂದು ‘ಮಂಗಳ’ದಲ್ಲಿ ಪ್ರಕಟ ಆಗಿತ್ತು. ಅವರ ವಿಳಾಸವೂ ಇತ್ತು. ನಾನು ಮೆಚ್ಚುಗೆ ಸೂಚಿಸಿ ಅವರಿಗೊಂದು ಪತ್ರ ಬರೆದೆ. ಅದಕ್ಕೆ ಅವರು ಬರೆದ ಪ್ರತಿಕ್ರಿಯೆಯ ಪತ್ರ ನನ್ನ ಕುಗ್ರಾಮಕ್ಕೆ ತಲುಪಿದಾಗ ನಾನು ರೋಮಾಂಚನಗೊಂಡಿದ್ದೆ. ಅಂಥ ಸಹೃದಯಿ ಆರೋಗ್ಯ ಹದಗೆಟ್ಟಿರುವುದು ಬೇಸರದ ವಿಷಯ. ಬೇಗ ಗುಣಮುಖರಾಗಲಿ. ಅವರ ಶ್ರೀಮತಿಯವರ ಮುಖದಲ್ಲಿರುವ ಈ ಮುಗುಳು ಇನ್ನಷ್ಟು ಅರಳಲಿ.

Kaligananath Gudadur ಅವರ ಮನೆಯಲ್ಲಿಯೇ ನಾನು ಉಡಿಯಲ್ಲಿಯ ಉರಿ ಕಥೆ ಬರೆದಿದ್ದು, ಅವರೇ ಪ್ರಜಾವಾಣಿ ಕಥಾ ಸ್ಪರ್ಧೆಎಗೆ ಕಳಿಸಲು ಸೂಚಿಸಿದ್ದು. ಎಂ.ಎ. ಎರಡು ವರ್ಷ, ಕಂಠಿಯವರ ಕುಟುಂಬದ ಒಡನಾಡದಲ್ಲೇ ಕಳೆದೆ. ನನ್ನ ನಾಲ್ಕನೇ ಕಥಾ ಸಂಕಲನ ಅಣ್ಣ ಚಿತ್ರಶೇಖರ ಕಂಠಿ, ಅಕ್ಕ ಆಶಾ ಕಂಠಿ ಅವರಿಗೆ ಅರ್ಪಿಸಿರುವೆ. ಕಂಠಿಯವರು ನನ್ನ ಕುರಿತು ಕನಸುಗಣ್ಣಿನ ಹುಡುಗ ಎಂಬ ಕಥೆ ಬರೆದಿದ್ದಾರೆ.

Sandhya Honguntikar ಕಂಠಿ ಸರ್ ಮನೆ ಅಂದ್ರೆ ಸಾಹಿತ್ಯದ ಶಿಬಿರ ಇದ್ದಹಾಗೆ . ನಾನು ಶಹಾಬಾದನಿಂದ ಕಲಬುರ್ಗಿಯ ಅವರ ಮನೆಗೆ ಬಂದು ರಾತ್ರಿ ಎಂಟು ಗಂಟೆಗೆ ಮಾತುಕತೆಗೆ ಕೂತರೆ ಬೆಳಿಗಿನ ಜಾವ ಆಗಿದ್ದು ಗೊತ್ತಾಗ್ತಿರಲಿಲ್ಲ.ಸಾಹಿತ್ಯದ ಕ್ಲಾಸ್ನಲ್ಲಿದ್ದಂತಾಗುತಿತ್ತು.ತಿಂಡಿಯೊಂದಿಗೆ ನಡುನಡುವೆ ಚಹಾ ಪೂರೈಸುವ ಹಸನ್ಮುಖಿ ಗೆಳತಿ ಆಶಾ ತುಂಬಾ ಅತ್ಮೀಯಳು.ನನ್ನನ್ನು ಕತೆಗಾರತಿಯನ್ನಾಗಿ ನಿರ್ಮಿಸಿದ್ದು ಕಂಠಿಯವರ ಸ್ನೇಹ,ಮಾರ್ಗದರ್ಶನ. ಅವರು ಇನ್ನೂ ಗುಣಮುಖರಾಗಿ ಸಾಹಿತ್ಯವಲಯದಲ್ಲಿ ಮತ್ತೆ ಕ್ರೀಯಾಶೀಲರಾಗಲಿ ಅಂತ ಹಾರೈಸುವೆ

Anand Rugvedi ೨೦೦೫ ರಲ್ಲಿ ಕಂಠಿಯವರೊಂದಿಗೆ ಕಡೆಂಗೋಡ್ಲು ಪ್ರಶಸ್ತಿ ಹಂಚಿಕೊಂಡ ಧನ್ಯತೆ ನನ್ನದು. ನನ್ನ ಮೊದಲ ಕತೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕರೆ ಮಾಡಿದ್ದ ಹಿರಿಯರು ಅವರು. ಅವರ ಜೀವನ ಪ್ರೀತಿ ಮತ್ತವರ ಪತ್ನಿಯವರ ಉದಾರತೆ ನಮಗೆ ಮಾದರಿ. ಕಂಠಿಯವರು ಮತ್ತೆ ಬರೆಯುವಂತಾಗಲಿ ಎಂದು ಬಯಸಿ ಪ್ರಾರ್ಥಿಸುವೆ

 

 

Leave a Reply