ಒಂದಾಗಲಿಕ್ಕೆ ವೇದಿಕೆ. ಅದಕ್ಕೂ ಕಲ್ಲು!? 

ಬರ ಬಂದಿದೆ ಎಂದು ಮಸಾಲೆದೋಸೆ ತಿನ್ನೋದು ಬಿಟ್ಟಿದಿರೇನು!?

ಸದಾಶಿವ್ ಸೊರಟೂರು 

ನಿಜವಾದ ಕನ್ನಡಿಗರ ದುರ್ದೈವವೋ,  ಈ ನಾಡು ಇತ್ತೀಚಿಗೆ ಕಂಡುಕೊಳ್ಳುತ್ತಿರುವ ಬದಲಾವಣೆಯ ಪರಿಯೋ ಗೊತ್ತಿಲ್ಲ. ಒಂದೊಳ್ಳೆ ಕೆಲಸ ಮಾಡ್ತಿವಿ ಅಂತ ಹೊರಟಾಗ ನೂರು ವಿಘ್ನಗಳು ಇಲ್ಲದಿದ್ದರೂ ಅವುಗಳನ್ನು ತಂದು ರೋಡಿಗಿಟ್ಟು ಧಿಕ್ಕಾರ ಕೂಗುವವರೇ ಜಾಸ್ತಿ.

ಆ  ಕೂಗು ನಿಜವಾದ ಕನ್ನಡಿಗನ ಕೂಗೇ ಆಗಿರುವುದಿಲ್ಲ! ತಮಗೆ ತಾವೇ ಮುಂದಾಳು ಅಂದುಕೊಂಡವರ ಅಬ್ಬರವನ್ನು ಇಡೀ ನಾಡಿನ‌ ಧ್ವನಿಯೆಂದು ಬಿಂಬಿಸಿ ಅದು ಎಂತದ್ದೆ ಕಾರ್ಯವಾದರೂ ಸರಿಯೇ ಸುಮ್ಮನೆ ಸೈಡಿಗೆ ಎತ್ತಿಡುವಂತೆ ಮಾಡುವಲ್ಲಿ ಬಹುತೇಕ ಬಾರಿ ಗೆದ್ದು ಬಿಡುತ್ತಾರೆ.

ನಿಜವಾಗಿಯೂ ಯಾವುದೇ ಭಾಷೆಯಾಗಲಿ, ಸಾಹಿತ್ಯವಾಗಲಿ ಅದರ ಶ್ರೀಮಂತಿಕೆ ಅದರಲ್ಲಿನ ಪಂಥಗಳಲ್ಲಾಗಲಿ ಮತ್ತೊಂದರಲ್ಲಾಗಲಿ‌ ಇಲ್ಲ. ಈ ಪಂಥಗಳು ಬಹುತೇಕ ಬಾರಿ ಆ ಭಾಷಿಕರ ದಾರಿ ತಪ್ಪಿಸುವ, ಆ ನಾಡಿನ ರಾಜಕೀಯ ರೂಪಿಸುವ ದಾಳಗಳಾಗಿ ರೂಪುಗೊಳ್ಳುತ್ತವೆ. ಕಲೆಯೊಂದರಲ್ಲಿ ರಾಜಕೀಯ ಬೆರೆತು ಬಿಟ್ಟರೆ ಏನು ಆಗಬಾರದೋ ಅದೆಲ್ಲ ಆಗಿ ಬಿಡುತ್ತದೆ.

ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಬೇಡವೆಂದು ನಿಂತವರ ಬಗ್ಗೆ ಏನು ಹೇಳಲಿ!? ಕನ್ನಡದ ಮುಂದಾಳುಗಳು ಅನ್ನಿಸಿಕೊಂಡವರೇ ಕನ್ನಡದ ಹಬ್ಬ ಬೇಡವೆನ್ನುವಾಗ ಯಾರ ಬಗ್ಗೆ ಹಳಿಯಲಿ.

ಅದಕ್ಕೆ ನೀಡುತ್ತಿರುವ ಕಾರಣಗಳಾದರೂ ಎಂತವು!? ನನಗೆ ನಗಬೇಕೊ ಅಳಬೇಕೊ‌ ಒಂದೂ ಗೊತ್ತಾಗುತ್ತಿಲ್ಲ! ಯಾಕೋ ಶಿವರಾಮ ಕಾರಂತರು ನೆನಪಾದರು ‘ ಬರಗಾಲ ಬಂದಿದೆಯೆಂದು ಮಸಾಲೆದೋಸೆ ತಿನ್ನುವುದನ್ನು ಬಿಟ್ಟಿದಿರೇನು!?’ ಅಂತ ಒಮ್ಮೆ ಇಂತದ್ದೆ ಸಮ್ಮೇಳನ ಮುಂದೂಡಬೇಕು ಅಂದಿದ್ದಕ್ಕೆ ಅವರು ಉತ್ತರಿಸಿದ ಪರಿ. ಅಲ್ಲರೀ ನಾಡು ಬರಗಾಲದಲ್ಲಿದೆ ಒಪ್ಪಿಕೊಳ್ಳೊಣ. ಈ ಬರಗಾಲಕ್ಕೆ ಸಾಹಿತ್ಯ ಸಮ್ಮೇಳನವೊಂದೇ ನಿಮಗೆ ಕಾಣಿಸುತ್ತದೆಯೇನು!? ಸಮ್ಮೇಳನವನ್ನು ಕೇವಲ ಬರಗಾಲದ ಕಾರಣಕ್ಕೆ ವಿರೋಧಿಸುವವರು ಎರಡು ವರ್ಷಗಳ ಮಳೆಯಿಲ್ಲದೆ ಬರವಿದೆಯಲ್ಲ ಅದಕ್ಕೇನು ಮಾಡಿದ್ದಾರೆ? ಒಂದು ಪಟ್ಟಿಕೊಡಲಿ! ಬರ ಬಂದಿದೆಯೆಂದು ನಿಮ್ಮ‌ ಮಕ್ಕಳ ಮದುವೆ ದೇವಸ್ಥಾನದಲ್ಲಿ ಸಿಂಪಲ್ ಆಗಿ ಮಾಡಿ ಫಲಾಹಾರ ಕೊಟ್ಟು ಮುಗಿಸಿದಿರೇನು!? ಸದ್ಯಕ್ಕೆ ಮದುವೆ, ಹಬ್ಬ ಬೇಡವೆಂದು ಮುಂದೆ ಹಾಕಿದಿರೇನು!? ಬರ ಇದೆ ಎಂದು ನಿಮ್ಮ ಗಳಿಕೆಯ ಅರ್ಧ ಹಣವನ್ನು ಯಾವುದಾದರೂ ಒಬ್ಬ ರೈತನಿಗೆ ಹಂಚಿದಿರೇನು? ವಿಧಾನ ಸೌಧದ ಮುಂದೆ ಕೂತು ರೈತರಿಗೆ ಬರವಿದೆ ಅವರಿಗೆ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂದು ಒಮ್ಮೆಯದರೂ ಕೂಗಿದಿರೇನು!?

ಅದ್ಯಾವುದು ನಿಮಗೆ ಬೇಕಿರಲಿಲ್ಲ. ಸಮ್ಮೇಳನ ಅಂದ ತಕ್ಷಣ ಪ್ರತಿಯೊಬ್ಬ ನಾಯಕರು ಅದರಲ್ಲಿ ಲಾಭ ನಷ್ಟ ಹುಡುಕಲು ಪ್ರಯತ್ನಿಸುತ್ತೀರಿ. ಅದಕ್ಕೊಂದು ಕಾರಣವನ್ನು ಬಗಲಲ್ಲಿ ಸಿದ್ದ ಮಾಡಿಕೊಂಡೆ ಬಂದಿರುತ್ತೀರಿ.  ಅಷ್ಟಕ್ಕೂ ಈ ಎರಡು ವರ್ಷದಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳು ನಡೆದುಹೋಗಲಿಲ್ಲವೇನು!? ಆಗ ಎಲ್ಲಿ ಹೋಗಿತ್ತು ನಿಮ್ಮ ವಿರೋಧ!? ಪಾಪ ರೈತ ಮತ್ತು ಆತನ‌ ಬದುಕನ್ನು ಇಟ್ಟುಕೊಂಡು ರಾಜಕಾರಣ ಮಾಡುವ ನಮಗೆ ಎಂದು ನಾಚಿಕೆಯಾದೀತು! ಅಷ್ಟಕ್ಕೂ ಅಲ್ಲಿ ನಡೆಯುತ್ತಿರುವುದು ರೇವ್  ಪಾರ್ಟಿಯಲ್ಲ. ಹಣ ಹೆಚ್ಚಾಗಿದೆ ಅನ್ನೊ ಕಾರಣಕ್ಕೆ, ಷೋಕಿಗೆ ಮಾಡುತ್ತಿರುವ ಧಿಮಾಕಿನ ಸಂಭ್ರಮಾಚರಣೆಯೂ ಅಲ್ಲ. ನಮ್ಮ ನುಡಿಯ ಹಬ್ಬ. ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವ ಹಬ್ಬ.

ಹಳ್ಳಿಯಲ್ಲಿ ಒರ್ಜಿನಲ್ ರೈತನಲ್ಲಿಗೆ ಹೋಗಿ ಕೇಳಿ ನೋಡಿ ‘ ಸ್ವಾಮಿ ಹೀಗೊಂದು ಕನ್ನಡ ಹಬ್ಬ ಮಾಡೋಣ ಅಂತ ಇದೀವಿ ‘ ಅಂತ. ಮನೆಯಲ್ಲಿರುವ ಒಂದು ಸೇರು ರಾಗಿಕೊಟ್ಟು ತಗೊಳ್ಳಿ ನಂದು ಇರಲಿ ಅಂತ ಕೊಟ್ಟು ಕಳುಹಿಸುತ್ತಾನೆ. ಮಳೆ ಇಲ್ಲದಿದ್ದರೂ ನಾಡು ನುಡಿಯ ವಿಷಯ ಬಂದಾಗ ಹೀಗೆ ನಿಲ್ಲುವವರು ನಮ್ಮ ಕನ್ನಡಿಗರು. ಅದರಲ್ಲಿ ಪಂಥವನ್ನೊ ರಾಜಕೀಯವನ್ನೊ ಬೆರೆಸಿ ದಾರಿ ತಪ್ಪಿಸುವವರಲ್ಲ!

ಹಿಂದಿ ಹೇರಿಕೆ ಬಗ್ಗೆ ಪ್ರಸ್ತಾಪಿಸಿದ್ದೀರಿ. ಅದಕ್ಕೆ ಹೋರಾಟಗಳನ್ನು ಮಾಡೋಣ. ಸಮ್ಮೇಳನ‌ ನಿಲ್ಲಿಸುವುದು ಅದಕ್ಕೆ ಪರಿಹಾರವಲ್ಲ. ಅಷ್ಟಕ್ಕೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಿಂದಿಯನ್ನು ಬಲವಂತವಾಗಿ ಎಲ್ಲೂ ಹೇರಿಲ್ಲ ಎಂದೂ ಹೇಳಿಕೊಂಡಿದೆ. ಸಂಬಂಧಿಸಿದವರು ಅಧಿವೇಶನದಲ್ಲಿ ‘ ಸಂವಿಧಾನದ ೮ ನೇ ಪರಿಚ್ಛೇದದ ೨೨ ಭಾಷೆಗಳೂ ಸಮಾನ ಮತ್ತು ಅವೆಲ್ಲವೂ ರಾಷ್ಟ್ರ ಭಾಷೆಗಳೇ ‘ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೆ ಹೇರಿಕೂ ಸಮ್ಮೇಳನಕ್ಕೂ ನಿಲ್ಲಿಸುವುದಕ್ಕೂ ಏನು ಸಂಬಂಧ!? ಇನ್ನೊಂದು ವಿಚಾರ ಎತ್ತಿದ್ದೀರಿ. ‘ ಕನ್ನಡ ಮಾಧ್ಯಮದಲ್ಲಿ ಕಲಿಕೆ ಕಡ್ಡಾಯವಾಗಿಸುವುದು. ಇದು  ಎಷ್ಟು ವರ್ಷದ ಮಾತು ನೀವೆ ಹೇಳಿ? ನಿನ್ನೆಯದಾ? ಅಥವಾ ಇವತ್ತಿಂದ? ಬಹುದಿನದ್ದು.

ಕನ್ನಡ ಕಲಿಕೆ ಕಡ್ಡಾಯವಾಗದ ಹೊರೆತು ಯಾವ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಯಾವ ಸಾಹಿತಿ ನಿರಾಕರಿಸಿದ್ದೀರಿ!? ನಿಮ್ಮ ಹಂತದಲ್ಲಿ ಆಗಬೇಕಾದ ( ಭಾಷಣವನ್ನು ಬಿಟ್ಟು) ಹೋರಾಟಗಳನ್ನು ಎಷ್ಟು ಮಾಡಿದ್ದೀರಿ? ಅದು ಯಾವುದಕ್ಕೂ ಬರದ ಅಡ್ಡಿ ಬರೀ ಈ ಸಮ್ಮೇಳನಕ್ಕೆ ಮಾತ್ರ ಏಕೆ? ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿರುವುದ ಬಗ್ಗೆಯೂ ಪ್ರಸ್ತಾಪವಿದೆ. ಮತ್ತದೇ ಮಾತನ್ನು ನಾನು ಹೇಳಬೇಕಾಗುತ್ತದೆ. ಮುಚ್ಚುತ್ತಿರುವುದು ಇಂದು ನಿನ್ನೆಯಿಂದ ಅಲ್ಲ. ಹಲವು ವರ್ಷಗಳದ್ದು. ನೀವು ನಿಮ್ಮ ಎಷ್ಟು ಮಕ್ಕಳನ್ನಯ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗೆ ಸೇರಿಸಿದ್ದೀರಿ? ಪಟ್ಟಿ ಕೊಡುವಿರಾ? ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುತ್ತಿರುವವರು ಶಿಕ್ಷಕರು ಮತ್ತು ಕೆಲವು ಪೋಷಕರೇ ಹೊರೆತು ಇನ್ಯಾರು ಅಲ್ಲ. ಉಳಿದವರು ಆ ವಿಷಗ ಬಳಸಿಕೊಂಡು ಬರೀ ಮಾತಿಗೆ ಇಳಿಯುತ್ತಾರೆ ಅಷ್ಟೇ!

ಒಂದು ಭಾಷೆಯ ಜಾತ್ರೆಗೆ, ಹಬ್ಬ ನಿಲ್ಲಿಸಲು ಇವು  ನಿಜಕ್ಕೂ ಕೊಡಬಹುದಾದ ಕಾರಣಗಳೇ!? ನಾಡು ನುಡಿ ಸಂಸ್ಕೃತಿಯ ಮುಂದೆ ನಿಲ್ಲುವ ವಿಷಯವಾದರೂ ಯಾವುದಿದೆ. ಯಾವು-ಯಾವುದಕೊ ಹಣ ಚೆಲ್ಲಿ ಕೂತು ಬಿಡುತ್ತೇವೆ. ಆದರೆ ಅದೇ ಕನ್ನಡ ಸಮ್ಮೇಳನ ಮಾಡ್ತಿವಿ ಅಂದ್ರೆ ಅದಕ್ಕೆ ಅಡ್ಡಗಾಲು ಹಾಕ್ತಿವಿ. ಇದನ್ನು ಏನನ್ನಬೇಕು? ರಾಜಕಾರಣವಾ? ಅಥವಾ ಪಂಥಬೇಧವಾ? ಅಷ್ಟಕ್ಕೂ ಅಲ್ಲಿ ಆಗುವುದೇನು? ಅವಾಗ್ಲೇ ಹೇಳಿದಂತೆ ಅದೊಂದು ಲೇಟ್ ನೈಟ್ ಪಾರ್ಟಿ ಅಲ್ಲ. ಅಲ್ಲಿ ನಾಡಿನ ಬಗೆಗೆ ಚರ್ಚೆಗಳಿವೆ. ಭಾಷೆಯ ಬಗ್ಗೆ ಅದರ ಬದಲಾವಣೆಯ ಬಗೆಗೆ ಗೋಷ್ಠಿಗಳಿವೆ, ಪುಸ್ತಕಗಳ ಪರಶೆಯಿದೆ. ಕನ್ನಡಕ್ಕಿ ಒದಗಿರುವ ಅಡ್ಡಿಯ ಬಗ್ಗೆ ಗಂಭೀರ ಚಿಂತನೆಗಳಿವೆ. ವಿಶ್ವಮಟ್ಟದ ಕನ್ನಡಿಗರು ಒಂದು ಕಡೆ ಸೇರುವ ಹಂಬಲವಿದೆ. ನಾವೆಲ್ಲ ಒಂದಾಗಲಿಕ್ಕೆ ಒಂದು ವೇದಿಕೆಯಿದೆ. ಅದಕ್ಕೆ ಕಲ್ಲು ಬೀಳಬೇಕಾ!?

Leave a Reply