ಅಂಬೇಡ್ಕರ್ ಈ ಹೊತ್ತಿನಲ್ಲಿ ಯಾಕೆ ಮುಖ್ಯ ಎಂದರೆ..

ಸಿದ್ದರಾಮಯ್ಯ / ಮುಖ್ಯಮಂತ್ರಿಗಳು 

ಸಾಮಾಜಿಕ ಪ್ರಜ್ಞೆಯನ್ನು ಎತ್ತಿ ಹಿಡಿಯುವ, ಅತ್ಯಂತ ಸಮಯೋಚಿತವಾದ ಹಾಗೂ ಮಹತ್ತರವಾದ ಈ ಅಂತರ್‍ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಈ ಸಂದರ್ಭವು ನನ್ನ ಪಾಲಿಗೆ ಬಹಳ ಮೌಲ್ಯವುಳ್ಳದ್ದಾಗಿದೆ. ಅಂಬೇಡ್ಕರ್ ಚಿಂತನೆಗಳ ಮರು-ಮನನ ಮಾಡುವುದು ಹಾಗೂ ಸಾಮಾಜಿಕ ನ್ಯಾಯದ ಮರುಪೂರಣ ಮಾಡುವುದು, ಹೆಚ್ಚುತ್ತಿರುವ ಕೋಮುವಾದದ ವಿರುದ್ಧ ಹೋರಾಡಲು ಮತ್ತು ನಾವಿಂದು ಬದುಕುತ್ತಿರುವ ಸಮಾಜಕ್ಕೆ ಅವಶ್ಯಕವಾಗಿದೆ. ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕೋಮುವಾದ ಹೀಗೆ ಭದ್ರವಾಗಿ ಬೇರನ್ನು ಬಿಟ್ಟಿರಲಿಲ್ಲ. ಆದರೆ ಇಂದು ಪರಿಸ್ಥಿತಿ  ಬೇರೆಯೇ ಇದೆ.

‘ಸಮತೆಯ ಅನ್ವೇಷಣೆ’ ಎಂಬ ಮೂಲ ತತ್ವದ ಈ ಸಮ್ಮೇಳನವನ್ನು ಡಾ ಬಿ ಆರ್ ಅಂಬೇಡ್ಕರ್ ಅವರ ೧೨೬ನೇ ಜನ್ಮ ದಿನದ ಆಚರಣೆಯ ಭಾಗವಾಗಿ ಆಯೋಜಿಸಲಾಗಿದೆ. ಅಂಬೇಡ್ಕರ್ ಅವರು ಮಾದರಿ ಸಮಾಜದ ಕನಸನ್ನು ಕಂಡವರು. ಅವರ ಕಲ್ಪನೆಯ ಆ ಸಮಾಜದಲ್ಲಿ ಬಹುತ್ವಕ್ಕೆ ಹೆಚ್ಚಿನ ಮಹತ್ವ ಇತ್ತು. ನಮ್ಮ ಸಂವಿಧಾನ ಶಿಲ್ಪಿ ನಮಗೆ ಕೊಟ್ಟ ಇನ್ನೂ ಮಹತ್ತರವಾದ ಆಲೋಚನೆಯೆಂದರೆ ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆ. ಸಾಮಾಜಿಕ ಹಾಗೂ ರಾಜಕೀಯ ಸುಧಾರಣೆಗಾಗಿ ಜಾತಿ ಎಂಬ ಪದ್ಧತಿಯ ಸಂಪೂರ್ಣ ನಿರ್ಮೂಲನೆ. ಇದರ ಮೂಲಕ ಎಲ್ಲಾ ಮನುಷ್ಯರಿಗೂ ಸಮಾನ ಅವಕಾಶಗಳ ಹಾಗೂ ಹಕ್ಕುಗಳ ಪ್ರತಿಪಾದನೆ.

ಎಪ್ಪತ್ತು ವರ್ಷಗಳ ಹಿಂದೆ ಭಾರತವು ಸ್ವತಂತ್ರ ದೇಶವಾದಾಗ ನಮ್ಮ ಮುಂದಿದ್ದ ದೊಡ್ಡ ಸವಾಲು ನ್ಯಾಯ ಮತ್ತು ಸಮಾನತೆಯ ಅನ್ವೇಷಣೆ. ಭಾರತದ ಸಂವಿಧಾನವು, ಹಿಂದೆ ಇದ್ದ ಹಲವು ಮಜಲುಗಳ ಅಸಮಾನತೆಯನ್ನು ತೊಡೆದುಹಾಕಿ,  ಜಾತಿ, ಧರ್ಮ, ಲಿಂಗ, ಪಂಗಡ ಮತ್ತು ಪ್ರದೇಶ ಆಧಾರಿತ ತರತಮವಿಲ್ಲದ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯನ್ನು ಸಾದೃಶ್ಯವಾಗಿಸುವ ಕನಸು ಹೊತ್ತಿತ್ತು. ಇಂದು ಮತ್ತೆ, ನಮ್ಮ ಸಂವಿಧಾನ ನಿರ್ಮಾಣಕಾರರಲ್ಲಿ ಒಬ್ಬರಾದ ಅಂಬೇಡ್ಕರ್ ಅವರ ಕನಸಿನ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅನ್ವೇಷಣೆಯನ್ನು ನಮ್ಮದಾಗಿಸಿಕೊಳ್ಳಬೇಕಿದೆ.

ಡಾ ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಭಾರತೀಯ ಸಮಾಜದಲ್ಲಿ ದಮನಿತರು ಹಾಗೂ ಶೋಷಿತರು ಹುಟ್ಟು ಹಾಕಿದ ಹಲವಾರು ಹೋರಾಟಗಳಿಗೆ ಸಾಕ್ಷಿಯಾದವರು. ಅವರ ಆಲೋಚನೆ ಹಾಗೂ ದೂರದರ್ಶಿತ್ವದಿಂದ ಇಪ್ಪತ್ತನೆಯ ಶತಮಾನದ ದಲಿತ ಹೋರಾಟಗಳಿಗೆ ಬೌದ್ಧಿಕ ಹಾಗೂ ರಾಜಕೀಯ ತಳಹದಿ ಸಿಕ್ಕಿತ್ತು. ನಾವು ಇಂದು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳಿಗೂ ಅಂಬೇಡ್ಕರ್ ಅವರ ಮಾತುಗಳಲ್ಲಿ, ಆಲೋಚನೆಗಳಲ್ಲಿ ಪರಿಹಾರ ಖಂಡಿತಾ ಇದೆ ಎನ್ನುವುದು ನನ್ನ ನಂಬಿಕೆ.

ಬಹುತ್ವ ಭಾರತದ ಪರಿಕಲ್ಪನೆಯು ಇಂದು ಕವಲು ದಾರಿಯಲ್ಲಿ ನಿಂತಿದೆ. ವಿಚ್ಚಿದ್ರಕಾರಿ ಹಾಗೂ ಪ್ರತ್ಯೇಕತಾ ಶಕ್ತಿಗಳ ದಾಳಿಯ ಪರಿಣಾಮವಾಗಿ  ನಮ್ಮ ದೇಶದ ನಾಗರಿಕತೆ ಮತ್ತು ಸಂಸ್ಕೃತಿಯು ಎತ್ತಿ ಹಿಡಿದಿದ್ದ ಮೌಲ್ಯಗಳು ಬಹು ದೊಡ್ಡ ಸವಾಲನ್ನು ಎದುರಿಸುತ್ತಿವೆ.

ಹಾಗಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲು ಇದಕ್ಕಿಂತಾ ಉತ್ತಮ ಸಮಯ ಇನ್ನೆಂದೂ ಇರಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ. ದೂರದ ಊರುಗಳಿಂದ ಬಂದಿರುವ ವಿದ್ವಾಂಸರು ಪ್ರಸ್ತುತ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟುಗಳ ವಿವಿಧ ಆಯಾಮಗಳ ಬಗ್ಗೆ ಚರ್ಚೆ ಮಾಡಿ, ನ್ಯಾಯ ಮತ್ತು ಸಮತೆಯನ್ನು ಸ್ಥಾಪಿಸಲು ಮುಂದೆ ಎತ್ತ ನಡೆಯಬಹುದು ಎನ್ನುವುದಕ್ಕೆ ಒಂದು ದಿಕ್ಸೂಚಿಯನ್ನು ಅಥವಾ ಸಮಸ್ಯಾ ಪರಿಹಾರವನ್ನು ಇಡಬಲ್ಲರು ಎನ್ನುವ ನಂಬಿಕೆ ನನಗೆ ಇದೆ.

ನಿಮಗೆ ಕರ್ನಾಟಕದ ಪರಿಚಯ ಇದ್ದರೆ, ಇಂತಹ ಮಹತ್ವದ ಸಮ್ಮೇಳನಕ್ಕೆ ನಮ್ಮ ರಾಜ್ಯಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ ಎನ್ನುವುದೂ ಗೊತ್ತಿರುತ್ತದೆ. ಡಾ ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ಎತ್ತಿ ಹಿಡಿಯುವ ವೈವಿಧ್ಯಮಯ ಪರಿಕಲ್ಪನೆ ಹಾಗೂ ಪರಂಪರೆಯ ಜೀವನಶೈಲಿ ನಮ್ಮದು.

ಜಾತಿ ಪದ್ಧತಿ ಹಾಗೂ ಶ್ರೇಣಿಕೃತ ಸಮಾಜದ ವಿರುದ್ಧ ಈ ನಮ್ಮ ನಾಡಿನಲ್ಲಿ ಬಹಳ ಹಿಂದೆಯೇ ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ದಾಳಿ ಮಾಡಿದ ವ್ಯಕ್ತಿಗಳಲ್ಲೊಬ್ಬ ಹನ್ನೆರಡನೇ ಶತಮಾನದ ಬಸವಣ್ಣ. ‘ಸಮಾನ ಜೀವನಕ್ಕೆ ಮತ್ತು ಗೌರವಕ್ಕೆ ಎಲ್ಲರೂ ಅರ್ಹರು’ ಎಂದು ಸಾರಲು ಬಸವಣ್ಣ ಕ್ರಾಂತಿಯನ್ನೇ ಮಾಡಿದ. ಸಾಮಾಜಿಕವಾಗಿ ದುರ್ಬಲವಾಗಿದ್ದ ದಮನಿತ ಸಮುದಾಯಗಳ ಮೂಲಕವೇ ಜಾತಿ ವಿನಾಶ ಚಳವಳಿಯನ್ನು ಕಟ್ಟಿದ ಬಸವಣ್ಣ. ಆ ಚಳವಳಿಯು ಜಾತಿ, ವರ್ಗ ಮತ್ತು ಲಿಂಗ ಆಧಾರಿತ ಶ್ರೇಣೀಕೃತ ವ್ಯವಸ್ಥೆಯನ್ನು ತೀಕ್ಷ್ಣವಾದ ವಿಮರ್ಶೆಗೆ ಒಡ್ಡಿತು.

ಭಕ್ತಿ, ಸೂಫಿ ಮತ್ತು ತತ್ವಪದಕಾರರ ಪರಂಪರೆಯ ಜೊತೆಗೆ ಮಿಳಿತಗೊಂಡ ವಚನಕಾರರ ಪರಂಪರೆಯು, ಜನ ಮಾನಸದಲ್ಲಿ ಸಮಾನತೆಯನ್ನು ಆಧರಿಸಿದ ಜೀವನ ದೃಷ್ಟಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಈ ಹಿನ್ನೆಲೆಯ ಕಾರಣ, ಸ್ವಾತಂತ್ಯ್ರ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಕರ್ನಾಟಕದ ಹೋರಾಟಗಾರರು, ವಸಾಹತುಶಾಹಿ ವಿರೋಧಿ ಹೋರಾಟಕ್ಕೆ ಸಾಮಾಜಿಕ ಪರಿವರ್ತನೆಯ ಆಶಯವನ್ನು, ಅಸ್ಪೃಶ್ಯತೆ ವಿರೋಧಿ ಕಾರ್ಯಕ್ರಮಗಳನ್ನು ಹಾಗೂ ಹಿಂದುಳಿದ ವರ್ಗಗಳ ಬಲವರ್ಧನೆ ಚಿಂತನೆಗಳನ್ನು ಮೇಳೈಸಿದರು.

ಕರ್ನಾಟಕವು  ದಲಿತರು, ಹಿಂದುಳಿದವರು  ಹಾಗೂ ರೈತರ ಚಾರಿತ್ರಿಕ ಹೋರಾಟಗಳಿಗೆ ಸಾಕ್ಷಿಯಾಗಿದೆ. ಇವುಗಳು ಡಾ ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರೇರಣೆ ಪಡೆದಿವೆ.

ನನ್ನ ಆಲೋಚನೆಗಳು ಮತ್ತು ದೃಷ್ಟಿಕೋನಗಳು ಸಮಾಜವಾದಿ, ಲೋಹಿಯಾವಾದಿ ಮತ್ತು ಅಂಬೇಡ್ಕರ್ ವಾದಿ ದಲಿತ ಹೋರಾಟಗಳಿಂದ ಪ್ರೇರಣೆ ಪಡೆದು, ರೂಪುಗೊಂಡಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ನಾನು ವಿನಮ್ರತೆಯಿಂದ ಅರಿಕೆ ಮಾಡಿಕೊಳ್ಳುತ್ತೇನೆ. ಸಮಾಜದ ತಳಸ್ಥರದಲ್ಲಿರುವ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಒಂದುಗೂಡಿದರೆ ಮಾತ್ರ ಅಂಬೇಡ್ಕರ್ ಅವರ ಕನಸುಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು  ಸಹೋದರತ್ವವನ್ನು ಸಾಕಾರಗೊಳಿಸಲು ಸಾಧ್ಯ ಎನ್ನುವುದನ್ನು ನನ್ನ ಹದಿವಯಸ್ಸಿನಲ್ಲೇ ನಾನು ಮನಗಂಡೆ.

ನನ್ನ ರಾಜಕೀಯ ಜೀವನದ ಉದ್ದಕ್ಕೂ ಅಂಬೇಡ್ಕರ್ ನಮಗೆ ಕೊಟ್ಟ ಪ್ರಜಾಪ್ರಭುತ್ವವಾದಿ ಮತ್ತು ಸಂವಿಧಾನಾತ್ಮಕ  ಚೌಕಟ್ಟನ್ನು, ಬಸವಣ್ಣನ ಸಮಾನತೆಯ ಆಶಯವನ್ನು ಹಾಗೂ ಮಹಾತ್ಮಾ ಗಾಂಧಿಯವರ ಅಂತ್ಯೋದಯದ ದೃಷ್ಟಿಕೋನವನ್ನು ಮಿಲಿತಗೊಳಿಸಿ, ನನ್ನ ಕೆಲಸಗಳ ಮೂಲಕ ಪ್ರತಿಪಾದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಒಬ್ಬ ಹಣಕಾಸು ಮಂತ್ರಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ಸರ್ಕಾರದ ಆಯವ್ಯಯ ಪತ್ರ ತಯಾರಿಸಲು ಕುಳಿತರೆ, ನನ್ನ ಕಣ್ಣ ಮುಂದೆ ಬರುವುದು ನನ್ನ ಹಳ್ಳಿಯಲ್ಲಿ ಕಾಯಿಲೆ ಬಿದ್ದ ಮಗಳ ಸಲುವಾಗಿ ಹಿಡಿ ಅನ್ನಕ್ಕಾಗಿ ಶ್ರೀಮಂತರ ಮನೆಯ ಮುಂದೆ ಕೈ ಒಡ್ಡಿ ನಿಂತಿರುವ ತಂದೆಯ ಚಿತ್ರ. ಹಸಿದ ಹೊಟ್ಟೆಗಳು ರಾಜಕೀಯ ಹಕ್ಕುಗಳ ಕನಸನ್ನು ಕಾಣಲು ಸಾಧ್ಯವಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಇಲ್ಲದೆ ರಾಜಕೀಯ ಸಮಾನತೆಯನ್ನು ಸಾಧಿಸುವುದು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆಯನ್ನು ಡಾ ಅಂಬೇಡ್ಕರ್ ಅವರು ನಮಗೆ ಕೊಟ್ಟಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರದ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು  ಕಡೆಗಣಿಸಲ್ಪಟ್ಟ, ದಮನಿತ ಮತ್ತು ಶೋಷಿತರ ಆರ್ಥಿಕ ಸ್ವಾತಂತ್ರ್ಯವನ್ನು ಗಮನದಲ್ಲಿ ಇಟ್ಟುಕೊಂಡೇ ರೂಪಿಸಲಾಗಿದೆ.  ಅಮಾರ್ತ್ಯ ಸೇನರ ‘ಅಭಿವೃದ್ಧಿಯೇ ಸ್ವಾತಂತ್ರ್ಯ’ ಎನ್ನುವ ಮಾತನ್ನು ನಾವು ಕರ್ನಾಟಕದ ಜನರು ಸಂಪೂರ್ಣವಾಗಿ ನಂಬಿದ್ದೇವೆ.

ನಮ್ಮ ಸರಕಾರವು, ತಲೆಮಾರುಗಳ ಕಾಲ ಅಸಮಾನತೆ ಮತ್ತು ತಾರತಮ್ಯವನ್ನು ಅನುಭವಿಸಿದ ಜನರಿಗೆ ಅವಕಾಶಗಳನ್ನು ಒದಗಿಸುವ ಒಂದು ಅಸ್ತ್ರವಾಗಿ ಅಭಿವೃದ್ಧಿಯನ್ನು ಪರಿಗಣಿಸಿದೆ.

ಅದಕ್ಕಾಗಿ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಅತ್ಯಂತ ಆವಶ್ಯಕ ಎನ್ನುವುದು ನಮ್ಮ ದೃಢವಾದ ನಂಬಿಕೆ. ಸಾಮಾನ್ಯ ಶಾಲೆಗಳು, ವಸತಿ ಶಾಲೆಗಳು ಹಾಗೂ ಹಾಸ್ಟೆಲ್ಲುಗಳ ಜಾಲವು ಬಡವರಿಗೆ ಶಿಕ್ಷಣದ ಅನುಕೂಲ ಕಲ್ಪಿಸಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸುಧಾರಣೆ ಹಾಗೂ ಅಭಿವೃದ್ಧಿಗಾಗಿ ರಾಜ್ಯದ ಒಟ್ಟು ಅನುದಾನದ ಶೇ. 24.1 ರಷ್ಟು ಮೊತ್ತವನ್ನು ಮೀಸಲಿಟ್ಟಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ.

ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗೆ ನೀಡುವ ಅನುದಾನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಆ ಎರಡೂ ಇಲಾಖೆಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸಿದ್ದೇವೆ.

ಯುವ ಜನಾಂಗಕ್ಕೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ ಹಾಗೂ ರೈತರ ಸುಧಾರಣೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದೇವೆ. ದಲಿತರ ಬಲವರ್ಧನೆ ಮಾಡುವ, ಅವರ ಆತ್ಮ ಸ್ಥೈರ್ಯ ಹೆಚ್ಚಿಸುವ ಹಾಗೂ ಎಲ್ಲರನ್ನು ಒಳಗೊಳ್ಳುವಂತಹ ಅಭಿವೃದ್ಧಿ ಮಾರ್ಗದಲ್ಲಿ ನಡೆದಿದ್ದೇವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಅಭಿವೃದ್ಧಿ ಮಾದರಿಯು ಅಧ್ಯಯನಕ್ಕೆ ಯೋಗ್ಯವಾಗಿದೆ.

ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ದೇಶವು ರಾಜಕೀಯ ಹಾಗೂ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುವಲ್ಲಿ ಗಣನೀಯ ಸಾಧನೆ ಮಾಡಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಜಾಗತಿಕ ಶಕ್ತಿಯಾಗಿ ಹೊಮ್ಮಿದ್ದೇವೆ. ಅಣು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂದಿದ್ದೇವೆ. ಆದರೆ  ಕೆಲವು ಪ್ರಮುಖ ವೈಫಲ್ಯಗಳೂ ಇವೆ.

ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರು ಹಾಗೂ ಹಿಂದುಳಿದ ವರ್ಗದವರು  ಅಭಿವೃದ್ಧಿಯ ಪಥದಲ್ಲಿ  ಇಂದಿಗೂ  ತಾರತಮ್ಯ ಹಾಗೂ ಇತರೆ ಅಡೆತಡೆಗಳನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ  ಕೋಮುವಾದಿ  ಹಾಗೂ ಜಾತಿವಾದಿ  ಗಲಭೆಗಳನ್ನು ನೋಡಿದರೆ ನಾವು ವಿರಮಿಸುವಂತಿಲ್ಲ. ಸತ್ತ ದನವೊಂದರ ಚರ್ಮ ಕಳಚಿದ್ದಕ್ಕೆ ಗುಜರಾತಿನಲ್ಲಿ ದಲಿತರ ಮೇಲೆ ಹಲ್ಲೆಯಾಗಿರುವುದನ್ನು ನಾವು ನೋಡಿದ್ದೇವೆ. ಇವತ್ತು ಒಳ್ಳೆಯ ಮನುಷ್ಯ ಅನ್ನಿಸಿಕೊಳ್ಳಲು ನಮ್ಮ ನಡುವಿನ ಶೋಷಣೆ, ಅಸಮಾನತೆಗಳನ್ನು ನಿರ್ಲಕ್ಷಿಸಲೇಬೇಕು ಎನ್ನುವ ವಾತಾವರಣ ನಿರ್ಮಾಣವಾಗಿದೆ;  ಆಹಾರ, ಉಡುಗೆ, ಭಾಷೆ, ಮತ್ತು ಅಭಿವ್ಯಕ್ತಿ  ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳಿಗೆ ಬದ್ಧರಾಗಬೇಕಿದೆ; ಬಲವಂತವಾಗಿ ಹೇರಲ್ಪಡುತ್ತಿರುವ ಬಹುಸಂಖ್ಯಾತರ ಭಾರತದ ಪರಿಕಲ್ಪನೆಯನ್ನು ಒಪ್ಪಿಕೊಳ್ಳಲೇ ಬೇಕಿದೆ.

ಇದು ಸಂವಿಧಾನದ ಆಶಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದ್ದು, ಇದನ್ನು ನಾನು ವಿರೋಧಿಸುತ್ತೇನೆ. ೧೯೪೫ ನೇ ಇಸವಿಯಲ್ಲೇ ಡಾ ಅಂಬೇಡ್ಕರ್ ಅವರು  ಬಹುಸಂಖ್ಯಾತರ ಅಭಿಪ್ರಾಯ (ಮೆಜಾರಿಟೇರಿಯನಿಸಂ) ಎನ್ನುವುದು ಭಾರತದ ಮಟ್ಟಿಗೆ ತಾತ್ವಿಕವಾಗಿ ಮತ್ತು ಅನ್ವಯಿಕವಾಗಿ ಅಸಮರ್ಥನೀಯ ಆಲೋಚನೆ ಎಂದಿದ್ದರು.

ಈ ನಿಟ್ಟಿನಲ್ಲಿ ಒಂದು ರಾಷ್ಟ್ರವಾಗಿ ನಾವು ಅರ್ಥಮಾಡಿಕೊಳ್ಳಬೇಕಾದ ಸಂಗತಿಯೆಂದರೆ ಇಂತಹ ತೀವ್ರತರವಾದ ಹಾಗೂ ಒಗ್ಗಟ್ಟಿಗೆ ಮಾರಕವಾದ ವಿಚಾರಗಳನ್ನು ಸಹಿಸಿಕೊಳ್ಳುವುದು ಸಮಸ್ಯೆಗಳಿಗೆ ಪರಿಹಾರ ಅಲ್ಲ. ಸಹಿಸಿಕೊಳ್ಳುವಿಕೆಯು ಬಹುಸಂಖ್ಯಾತರ ದಾಳಿಯ ದುಷ್ಪರಿಣಾಮಗಳನ್ನು ಒಂದಿಷ್ಟು ನಿಧಾನಗೊಳಿಸಬಹುದು ಅಷ್ಟೇ.  ಸಮಾನತೆಯ ಆಶಯಗಳ ಮೇಲೆ ನಮ್ಮ ದೇಶ ನಿಲ್ಲಲು ನಾವು ಹೋರಾಟ ಮಾಡಲೇಬೇಕಿದೆ.

ಇಂದು  ದೇಶದ ಎಷ್ಟೋ ಭಾಗಗಳಲ್ಲಿ ಕಾನೂನು ಎಲ್ಲರನ್ನು ಸಮಾನವಾಗಿ ಕಾಣುತ್ತಿಲ್ಲ. ಕೆಲವರು ಇತರರಿಗಿಂತ ಹೆಚ್ಚು ಸಮಾನರಾಗಿದ್ದಾರೆ. ದಲಿತರು, ಆದಿವಾಸಿಗಳು, ಧಾರ್ಮಿಕ ಮತ್ತು ಸೈದ್ಧಾಂತಿಕ ಅಲ್ಪಸಂಖ್ಯಾತರ ಮೇಲೆ ನಡೆಯುವ ಹಲ್ಲೆಗಳು ವಿಪರೀತ ಹೆಚ್ಚಾಗಿವೆ. ಸಹಸ್ರಾರು ಭಾರತೀಯರಿಗೆ ಉತ್ತಮ ಜೀವನದ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ. ಇದು,ಎಲ್ಲರನ್ನೂ ಒಳಗೊಳ್ಳಬೇಕೆಂಬ ಭಾರತದ ಆಡಳಿತದ ಪರಿಕಲ್ಪನೆಗೆ ಅಪಾಯಕಾರಿಯಾಗಿದೆ.

ಇದು ಭಾರತ ಎಂಬ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿದೆ. ಬಹಳ ಹಿಂದೆಯೇ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು: “ರಾಷ್ಟ್ರ ಎನ್ನುವುದು ಒಂದೇ ಸಂಸ್ಕೃತಿಯನ್ನು ಪರಿಭಾವಿಸುವ, ಒಂದೇ ಭಾಷೆಯನ್ನು ಮಾತನಾಡುವ, ಒಂದೇ ಜಾತಿ ಮತ್ತು ಮತದ ಜನರಿಂದಾದದ್ದಲ್ಲ. ರಾಷ್ಟ್ರೀಯತೆ ಎನ್ನುವುದು ಎಲ್ಲರೂ ನನ್ನವರೇ  ಹಾಗೂ ನಾವು ಎಲ್ಲರ ಜೊತೆ ಎಂದೆನಿಸುವ ಭಾವನೆ”

ಈ ಹಿನ್ನೆಲೆಯಲ್ಲಿ  ಕೆಲವು ಚಿಂತಕರಿಗೆ ‘ದೇಶದ್ರೋಹಿ’  ಎನ್ನುವ ಹಣೆಪಟ್ಟಿ ಕಟ್ಟುವುದನ್ನು ಹಾಗೂ ಆ ಹೀನ ಪದದ ಬಳಕೆಯನ್ನು ಬಲವಾಗಿ ಖಂಡಿಸುತ್ತೇನೆ. ಯಾಕೆಂದರೆ, ಬಹುತ್ವದ ಅಡಿಯಲ್ಲಿ ನೈತಿಕತೆ  ಬೇರೆ ಬೇರೆ ಆಯಾಮಗಳನ್ನು ಹೊಂದುತ್ತದೆ. ಹಾಗೂ ಭಾರತದ ಪರಿಕಲ್ಪನೆಯನ್ನು ಸಂಕುಚಿತ ವ್ಯಾಖ್ಯೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ, ನಾವೀಗ ನಮ್ಮ ಸಾಂಸ್ಕೃತಿಕ ಮತ್ತು ನಾಗರೀಕತೆಯ ನೆಲೆಯಲ್ಲಿ ಸಹಿಷ್ಣುತೆ ಮತ್ತು ಕಾರುಣ್ಯದ ಗುಣಗಳನ್ನು ಆಧರಿಸಿದ ಹೊಸ ವ್ಯಾಖ್ಯೆಯೊಂದನ್ನು ಕಂಡುಕೊಳ್ಳಬೇಕಿದೆ. ಬುದ್ಧ, ಬಸವರಂಥ ಸಂತರು ಮತ್ತು ಮಹಾತ್ಮ ಗಾಂಧಿ, ಬಿ ಆರ್ ಅಂಬೇಡ್ಕರರಂಥಾ ದಾರ್ಶನಿಕರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ.

ಭಾರತದ ಬಹುತ್ವ ಮತ್ತು ಜಾತ್ಯಾತೀತತೆಯ ಮೌಲ್ಯಗಳು ಇಂದು ಅಪಾಯದಲ್ಲಿವೆ. ಈ ನೆಲದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತಕರ ಬಳುವಳಿಯಾಗಿ ಬಂದಂಥ ಪರಂಪರೆಗಳವು ಆಧುನಿಕ ಪ್ರಜಾಪ್ರಭುತ್ವವಾದಿ ರಾಜಕೀಯ ವ್ಯವಸ್ಥೆಯು ಮೌಲ್ಯಾಧಾರಿತವಾಗಿ ಉಳಿಯುವಂತೆ ಮಾಡಲು ಡಾ ಅಂಬೇಡ್ಕರ್ ಅವರು  ಪರಂಪರೆಯಿಂದ ಬಂದ ಮೌಲ್ಯಗಳನ್ನು ಹಾಗೂ ಬೌದ್ಧ ಧರ್ಮದೊಳಗಿನ ಪ್ರಜಾಪ್ರಭುತ್ವವಾದಿ ಅಂಶಗಳನ್ನು ತೆಗೆದುಕೊಂಡರು. ಜನರಿಗೆ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಖಾತ್ರಿ ಪಡಿಸಲು ದೇಶದ ಆಡಳಿತ ಸಂಸ್ಥೆಯು ಸುಧಾರಣಾವಾದಿ ಪಾತ್ರವನ್ನು ವಹಿಸಬೇಕಾಗುತ್ತದೆ ಎನ್ನುವುದು ಅವರಿಗೆ ಅರ್ಥವಾಗಿತ್ತು.

ಕುರುಡು ಸಾಂಪ್ರದಾಯಿಕ ಶಕ್ತಿಗಳಿಂದ ಅಸಹಿಷ್ಣುತೆ ಬೆಳೆಯುತ್ತಿದ್ದು ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಸಮಾನತೆಯ ನಡುವೆ ಇದ್ದ ಆಳವಾದ ಸಂಬಂಧಕ್ಕೆ  ಧಕ್ಕೆ ಒದಗಿರುವುದು ದುಖದ ಸಂಗತಿಯಾಗಿದೆ.

ಇಂಥಾ ಸಮಯದಲ್ಲಿ ಡಾ ಅಂಬೇಡ್ಕರ್ ಅವರ ವಿಚಾರಗಳಲ್ಲದೆ ಇನ್ನೆಲ್ಲಿ ನಮಗೆ ಬೌದ್ಧಿಕ ಶಕ್ತಿ, ವೈಚಾರಿಕ ಮತ್ತು ನೈತಿಕ ಸ್ಪಷ್ಟತೆಯನ್ನು ಹುಡುಕಲು ಸಾಧ್ಯ? ಮುಂದಿನ ದಾರಿಯ ಕಾರ್ಯಸೂಚಿ ಅವರ ಆಲೋಚನೆಗಳ ಸಹಾಯದಿಂದಲೇ ಬರಬೇಕು. ಜಗತ್ತಿನ ಮೇರು ವಿಧ್ವಾಂಸರು ಸೇರಿರುವ ಈ ಸಮ್ಮೇಳನದಲ್ಲಿ ಹೊಮ್ಮುವ ವಿಚಾರಗಳು ಮಥಿಸಿ ಹೊರಡುವ ಮಾತುಗಳು ನಮಗೆ ದಾರಿದೀಪವಾಗಲಿ ಎಂದು ಆಶಿಸುತ್ತೇನೆ.

ಜಗತ್ತಿನ ಅತ್ಯಂತ ಪ್ರತಿಭಾನ್ವಿತ ಮತ್ತು ಪ್ರಖರ ಮನಸ್ಸುಗಳು ಪ್ರಸ್ತುತದ ಸವಾಲುಗಳನ್ನು ಪರಿಶೀಲಿಸಿ, ತಮ್ಮ ವಿಚಾರಗಳ ಮೂಲಕ ಸಾಣೆ ಹಿಡಿದು ಭಾರತವು  ಇಂದು ಎದುರಿಸುತ್ತಿರುವ ಆತಂಕಗಳು ಹಾಗೂ ನಮ್ಮ ಮುಂದಿರುವ ಅವಕಾಶಗಳನ್ನು ವಿಸ್ತೃತ ರೂಪದಲ್ಲಿ ವಿಷದಪಡಿಸಬೇಕಿದೆ. ನಿಮ್ಮ ಚರ್ಚೆಗಳ ಮೂಲಕ ಹೊರಡುವ ಅಭಿಪ್ರಾಯವನ್ನು ಕರ್ನಾಟಕ ಸರ್ಕಾರವು ‘ಬೆಂಗಳೂರು ಡಿಕ್ಲರೇಷನ್’ನ್ನು ಹೊರಡಿಸಲಿದೆ. ಈ ಹೊತ್ತಿಗೆಯು  ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಅಗತ್ಯವಾದ ಸಾಂವಿಧಾನಿಕ, ಸಾಂಸ್ಥಿಕ ಹಾಗೂ ನೀತಿ-ಆಧರಿತ ಕಾರ್ಯಸೂಚಿಯನ್ನು ಪ್ರಸ್ತುತ ಪಡಿಸುತ್ತದೆ. ಡಾ ಮಾರ್ಟಿನ್ ಲೂಥರ್ ಕಿಂಗ್ ಅವರ ಮಾತಿನಲ್ಲೇ ಹೇಳುವುದಾದರೆ, ಈ ಹೊತ್ತಿಗೆಯು  ‘ದುಃಖದ ಪರ್ವತದ ಮುಂದೆ ಆಶಾಭಾವನೆಯ ಚಿಕ್ಕದೊಂದು ಹರಳಾಗಿ’ ನಮ್ಮ ಮುಂದಿರುತ್ತದೆ.

ಈ ದಿಕ್ಸೂಚಿ ಹೊತ್ತಿಗೆಯು ಪ್ರತಿಯೊಬ್ಬ ಭಾರತೀಯರ ಅಭಿಲಾಷೆಯನ್ನು ಗೌರವಿಸುತ್ತದೆ, ರಕ್ಷಿಸುತ್ತದೆ ಹಾಗೂ ಉನ್ನತೀಕರಿಸುತ್ತದೆ. ಅದರ ಜೊತೆಗೇ ದಲಿತ, ಆದಿವಾಸಿ, ಹಿಂದುಳಿದ ವರ್ಗ ಹಾಗೂ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಬಲವರ್ಧನೆಗೆ ವಿಶೇಷ  ಅವಕಾಶವಿರುವಂತೆ ನೋಡಿಕೊಳ್ಳುತ್ತದೆ. ಈ ಮೂಲಕ ಕರ್ನಾಟಕ ರಾಜ್ಯ ಮತ್ತು ಭಾರತ ದೇಶ, ಈ ಎರಡೂ ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಯಲು ಅನುವು ಮಾಡಿಕೊಡುತ್ತದೆ.

ನಾನು ನನ್ನ ಮಾತುಗಳನ್ನು ಡಾ ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆಯೊಂದಿಗೆ ಕೊನೆಗೊಳಿಸಲು ಇಷ್ಟಪಡುತ್ತೇನೆ. “ಮುಂದಿನ ದಿನಗಳು ಕಷ್ಟಕರವಾಗಿವೆ. ಆದರೆ ನನಗೇನೂ ಚಿಂತೆಯಿಲ್ಲ. ಯಾಕೆಂದರೆ  ನಾನು ಪರ್ವತದ ತುತ್ತತುದಿಗೆ ಹೋಗಿ ನೋಡಿದ್ದೇನೆ. ಅಲ್ಲೊಂದು ಭರವಸೆಯ ನೆಲ ನನಗೆ  ಕಂಡಿದೆ. ನಾನು ನಿಮ್ಮ ಜೊತೆ ಆ ನೆಲಕ್ಕೆ ಬರುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ಇಲ್ಲಿ ನೆರೆದಿರುವ ಪ್ರತಿಯೊಬ್ಬರೂ ಒಂದು ಮಾತಿನಲ್ಲಿ ನಂಬಿಕೆ ಇಡಬೇಕು. ನಾವು, ನಮ್ಮ ಜನರು ಆ ನೆಲಕ್ಕೆ ಹೋಗಿಯೇ ತೀರುತ್ತೇವೆ.”

ಡಾ. ಬಿ ಆರ್ ಅಂಬೇಡ್ಕರ್ ಅಂತರರಾಷ್ಟ್ರೀಯ ಸಮ್ಮೇಳನ ೨೦೧೭ರ ಉದ್ಘಾಟನಾ ಸಮಾರಂಭದಲ್ಲಿ 
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 
ಮಾಡಿದ ಭಾಷಣದ ಕನ್ನಡ ಅನುವಾದ

Leave a Reply