ಶ್ರೀಶಂಕರ್, ವಯಸ್ಸು 67, ಗೋಧಿಬಣ್ಣ, ಸಾಧಾರಣ ಮೈಕಟ್ಟು!

ಎಚ್ ಎನ್ ಆರತಿ 

ಶ್ರೀಶಂಕರ್, ವಯಸ್ಸು 67, ದೆಹಲಿಯಲ್ಲಿ ಆಟೋಚಾಲಕ, ಬಿಹಾರದವರು, ಪ್ರಾಮಾಣಿಕ, ಅಸಂಖ್ಯ ಕಥೆಗಳ ಕಣಜ,

ಗೋಧಿಬಣ್ಣ, ಸಾಧಾರಣ ಮೈಕಟ್ಟು!

ಬೆಳಿಗ್ಗೆ 9.30ರಿಂದ ರಾತ್ರಿ 9.30ರ ತನಕ ನಡೆದ ಮೀಟಿಂಗ್ ಮುಗಿಸಿ ರೂಮಿಗೆ ಹೊರಟಾಗ, ಮೆಟ್ರೋಲಿ ಹೋಗೋಣ ಅನಿಸಿದರೂ, ದೇವರು ಕೊಟ್ಟ ವರದ ಹಾಗೆ ಎದುರಿಗೇ ಖಾಲಿ ಆಟೋ ಬಂದರೆ ಹೇಗಿರಬೇಡ?!

ಮಾತುಕತೆ ಶುರು ಮಾಡಿದೆ, ನನ್ನ ಹರಕುಮುರುಕು ಹಿಂದಿಗೆ ಯಾರಾದರೂ ಸಂಪ್ರೀತರಾಗಿ ಒಲಿಯಲೇಬೇಕು!!!

ಶ್ರೀಶಂಕರ್, ನಾನು ಬೆಂಗಳೂರಿನವಳು ಎಂದ ಕೂಡಲೇ, ಕಿರ್ಮಾನಿಯಿಂದ ಹಿಡಿದು, ವಿನಯ್ ಕುಮಾರ್ ತನಕ ಕರ್ನಾಟಕದ ಎಲ್ಲಾ ಕ್ರಿಕೆಟ್ ಆಟಗಾರರ ಹೆಸರು ಹೇಳಿದರು.

ಹೀಗೇ ಮಾತನಾಡುತ್ತಿರುವಾಗ ಸ್ವಾರಸ್ಯಕರ ವಿಷಯವೊಂದು ಹೊರಬಂತು.

ಕೆಲವರ್ಷಗಳ ಕೆಳಗೆ 2001ನಲ್ಲಿ ಒಬ್ಬ ಆರ್ಮಿ ಆಫೀಸರ್ ಇವರ ಆಟೋದಲ್ಲಿ ಬಂದು ಹೊಟೇಲ್ ಮುಂದೆ ಇಳಿದರಂತೆ. ಸಂಜೆ 6.30ರ ಸಮಯ. ಅವರನ್ನು ಇಳಿಸಿ, ಸ್ವಲ್ಪ ಮುಂದೆ ಬಂದಾಗ ಗನ್ ಶಾಟ್ಸ್ ಕೇಳಿಸಿತಂತೆ, ಒಂದು ಕಾರು ಯರ್ರಾಬಿರ್ರಿ ಸ್ಪೀಡಿನಲ್ಲಿ ಮುಂದೆ ಹೋಯಿತಂತೆ. ನೋಡಿದರೆ ಮಹಿಳೆಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ!

ಶಂಕರ್ ತಕ್ಷಣ ಗಾಡಿ ನಿಲ್ಲಿಸಿ, ಆಕೆಯ ಪಕ್ಕೆಯಿಂದ ಚಿಮ್ಮುತ್ತಿದ್ದ ರಕ್ತ ನಿಲ್ಲಿಸಲು ಆಕೆಯ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ಸಹಾಯಕ್ಕೆ ಕಿರುಚಿದರಂತೆ.
“ಆ ಮಹಿಳೆ ಯಾರು ಗೊತ್ತಾ?!” ಅಂತ ನಾನು ಪತ್ತೇದಾರಳೇನೋ ಅನ್ನುವಂತೆ ಪ್ರಶ್ನೆ ಎಸೆದು ಹುಬ್ಬು ಹಾರಿಸಿ, ಸುಮ್ಮನಾದರು…
ವಾಹನಗಳ ಭರಾಟೆಯಲ್ಲಿ ಸರಿಯಾಗಿ ಕೇಳಲೆಂದು, ನಾನು ಆಗಲೇ ಸೀಟಿನ ತುದಿಯಲ್ಲೇ ಇದ್ದೆ. ಹಾಗಾಗಿ ಇನ್ನೂ ಹೆಚ್ಚಿನ ಕುತೂಹಲದ ಪ್ರತಿಕ್ರಿಯೆ ನೀಡುವ ಅಸಾಧ್ಯತೆಯ ನಡುವೆಯೂ, “ಯಾರು?!” ಅಂದೆ.

ಅಷ್ಟು ಗೆಸ್ ಮಾಡೋಕೂ ಬರೋಲ್ವಾ? ಎನ್ನುವ ಬೇಕಾಬಿಟ್ಟಿ ನೋಟ ಎಸೆದು,

ಆಕೆ ಅಂತಿಂಥವಳಲ್ಲ, ತಾನೇ ಬಂದೂಕು ಹಿಡಿದು ಇಡೀ ಯು.ಪಿ. ರಾಜ್ಯವನ್ನೇ ನಡುಗಿಸಿದ ಫೂಲನ್ ದೇವಿ!!! ಆಕೆಯನ್ನು ಅದೇ ಬಂದೂಕು ತಿಂದು ಹಾಕಿತು ನೋಡಿ ಅಂದರು, ಮತ್ತೆ ಸುಮ್ಮನಾದರು  🙁

ಮೌನದ ಮಹತ್ವ ಮತ್ತೆ ಮತ್ತೆ ದರುಶನವಾಗುವ ಘಳಿಗೆಗಳಿವು  😉

ಇಷ್ಟಕ್ಕೇ ಕಥೆ ಮುಗಿಯಲಿಲ್ಲ. ಐದು ನಿಮಿಷದ ನಂತರ ಪೊಲೀಸ್ ಬಂದರಂತೆ, ಇವರನ್ನೇ ಅರೆಸ್ಟ್ ಮಾಡಿದರಂತೆ. ಕೊಲ್ಲಲು ಯಾರು ಯಾರು ಜೊತೇಲಿದ್ರು ಅಂತೆಲ್ಲಾ ಪ್ರಶ್ನೆ ಕೇಳಿ ಕೇಳಿ, ಇವರಿಗೆ ಹುಚ್ಚು ಹಿಡಿಸಿದರಂತೆ, ಆದರೆ ಸಧ್ಯ, ಹೊಡೆದು ಬಡಿದು ಮಾಡಲಿಲ್ಲವಂತೆ!!!

ತಲೆ ಖಾಲಿಯಾದಂತೆನಿಸಿತ್ತಂತೆ. ಎಷ್ಟೋ ಹೊತ್ತಾದ ಮೇಲೆ ಶಂಕರ್ ಗೆ ತಾನು ಹೊಟೇಲ್ ಮುಂದೆ ಇಳಿಸಿಬಂದ ಆರ್ಮಿ ಆಫೀಸರ್ ನೆನಪಾಯಿತಂತೆ!
ಪೊಲೀಸ್ ಇವರನ್ನು ಅಲ್ಲಿಗೆ ಕರೆದುಕೊಂಡು ಹೋದಾಗ, ಆ ಆಫೀಸರ್ ಏನು ಹೇಳುತ್ತಾರೋ, ಅವರ ಒಂದು ಮಾತಿನ ಮೇಲೆ ತನ್ನ ಜೀವನ ನಿಂತಿದೆಯೆನಿಸಿ, ಅವರು ಬಂದಾಗ ಗೊಳೋ ಎಂದು ಅಳುತ್ತಾ ಅವರ ಕಾಲು ಹಿಡಿದರಂತೆ. ಅವರ ಹೆಸರಿಂದಲೇ ನನ್ನ ಮನೆಯಲ್ಲಿ ಈಗ ಅನ್ನ ಬೇಯುವುದು ಎಂದು ಹೇಳುತ್ತಾ ಭಾವುಕರಾದರು, ನನಗೂ ಅಯ್ಯೋ ಅನಿಸಿತು…

ಬೆಂಗಳೂರಿನ ಜನ ಕೂಡಾ ತುಂಬಾ ಒಳ್ಳೆಯವರು ಎಂದರು, ನಾನು ಕೊನೆಯಲ್ಲಿ ಇಳಿಯುವಾಗ. ಹಾಗೆ ಹೇಳುವುದು ಅವರ ಒಳ್ಳೇತನ ಅನಿಸಿತು  💐 😇

 

Leave a Reply