ಅವನ ಮಧುಭರಿತ ನೆನಪೇ..

ನಾಗರೇಖಾ ಗಾಂವಕರ

 

ಅವನ ಮಧುಭರಿತ ನೆನಪೇ

ಕಂಪುಗೂಡಿ ಉನ್ಮತ್ತ ಚಿತ್ತೆ, ಮೂಕವೇದನೆ

ಅನತಿಯಲೇ ಇರುವ ಅನೂಹ್ಯ ನೇಕಾರನ

ಬಗೆಯ ಗೂಡನು ಅರಿಯಲಾಗದೇ

ಉಸಿರುಕಟ್ಟಿ ಉಮ್ಮಳಿಕೆ

ತಡೆಯಲಾಗದೇ ಬಿಚ್ಚಿ ತೂರಿದ ಹೆರಳು ಸಿಕ್ಕು ಸಿಕ್ಕುಗಳ

ಗೋಜಲಿಗೆ ಬೆರಳಿಟ್ಟು ಒಂದೊಂದಾಗಿ ಬಿಡಿಸಿ

ಒಪ್ಪಗೊಳಿಸಿದಂತೆ ಅಪ್ಪಟ ಹೆಣಿಗೆ

ಮನದ ಮರ್ಕಟವ ಕಟ್ಟಿಹಾಕುವ

ಹದಗೊಳಿಸಿ ತಟ್ಟುವ ಹೆಣಿಗೆ ಅದೇಕೋ ಸಿಗದು

ಹಾದಿ ಬೀದಿಯ ಸುತ್ತಸುಳಿದು

ಸುರಿದು ಬಂದರೂ.

ಜೀವ ಸಂವಾದಕ್ಕೆ ತಳಮಳಸಿ ತಪ್ತೆ

ಭಾವ ಸಂಗಾತಕ್ಕೆ ನಾದ ಲೋಕದ ಒಡೆಯ

ಸಿಗುವನೇನು?

ಎಲ್ಲಿರುವನೋ ವೇಣು ಗೋಪಾಲ

ದುಗ್ದೆ ರಾಧೆ,ಎದೆಯೊಳಗೆ ಗುಡಿ ಕಾಯ್ದು

ದಣಿದ ದೇಹಿ.ಅರಳು ಹುರಿದು ನುಡಿವವನ

ನವಿಲುಗರಿಯಂತೆ ತಳ್ಳಿಗೂದಲ

ಮೋಹ ಮಸೆವವನ

ಬೆರಳ ಕುಣಿತಕೆ ಚಕ್ರವಾದಳೆ ಚದುರೆ?

 

ಹೆರಳ ಹೊತ್ತ ಶಿರದೂರಲ್ಲಿ

ಕೋಲಾಹಲ  ಕೊಂಕುವ ಪ್ರಶ್ನೆಗಳು,

ಉತ್ತರ ಸಿಗದ ನಾಳೆಗಳು

ರೋಮಕೂಪದಲ್ಲಿ ಸ್ವೇದಗಟ್ಟಿದ ಅದೇ ಉಪ್ಪಿನ ಕಟು

ನಾಸಿಕದ ಹೊಳ್ಳೆಗಳಲಿ ಅಡರಿ ಕೂತು ಅಮಲು

ಒಳತುಡಿತದ ವಾಟೆಯೇರಿಸಿ ಕುದಿಸಿ ಕುಡಿವ

ಬಯಕೆ ಅವನದೇ,

ನಶೆಯಿಂದ ಪ್ರಜ್ಞೆ ಕಳೆದುಕೊಳ್ಳುವ ಸುಪ್ತಗುಪ್ತ ಬಾಣ

ನನ್ನೆದೆಗೆ ನಟ್ಟು ಹೋದವನ ಮರೆಯಬೇಕೆಂದರೆ

ಆಗಾಗ ಮಡಿವಂತಿಕೆಯ ಸೂಜಿ ಹಿಡಿದು

ಮನದ ಬಯಲಿಗೆ ಹೊಲಿಗೆ ಇಡುತಿರಬೇಕು.

Leave a Reply