ಒದ್ದೆ ರಾತ್ರಿ..

ಶ್ರೀ ತಲಗೇರಿ

ಕಿರೀಟ ಮುರಿದ ಅಂಟೆನಾದ
ಜೊಲ್ಲು,ಪೆಟ್ಟಿಗೆಯ ಗ್ರಂಥಿಗಳಲ್ಲಿ
ಮಾಡುತ್ತವೆ ಅಸಹಾಯಕ ಜಾಗರಣೆ..
ತಂತುಗಳ ರಕ್ತನಾಳದಲಿ
ಒದ್ದೆ ರಾತ್ರಿಗಳು ನಿಲ್ದಾಣಗಳಾಗಿ
ಜುಟ್ಟು ಬಿಟ್ಟು ಕೂತಿವೆ..
ಜಪಮಾಲೆಗಿಂದು ನಾಗಾಲೋಟ
ಸೊಳ್ಳೆಗಳ ಗಡೀಪಾರಿನಲ್ಲಿ
ಉಳಿದದ್ದು ಊದುಬತ್ತಿಯ ಚಿತಾಭಸ್ಮ
ಮತ್ತು ಚರ್ಮ ಹೊದೆಸದ ಎಲುಬು..

ಚೊಂಬು ಹಿಡಿದ ಚಂದ್ರ
ಮಹಾಬಯಲಿನಲ್ಲಿ ತೂಕಡಿಸಿದ್ದಾನೆ
ಕುಕ್ಕರಗಾಲಿನಲ್ಲಿ ಕುದುರೆಯಾಗಲು ಕನಸುತ್ತ..
ದೊಂದಿ ಹಿಡಿದ ಪೋರರು
ಶಿಥಿಲ ಗಡಿಯಾರದ ಸ್ಪ್ರಿಂಗಿನೊಳಗೆ
ಉಳಿದುಹೋದರು ತುಕ್ಕು ಪಳೆಯುಳಿಕೆಯಂತೆ..
ಬಾಚಣಿಗೆಯೊಂದು ಮೊಂಬತ್ತಿ ಬೆಳಕಲ್ಲಿ
ಸಿಕ್ಕುಗಳ ನಡುವೆ ಕಾಲು ಕೆರೆಯುತ್ತಿತ್ತು;
ಚಾರಣದ ದಿಕ್ಕಿಗಿಲ್ಲಿ ಹೊಸ ಶಕೆ..

ದಾರಿ ಬದಿಯ ಸಾಲು ಪೊಟರೆಗಳಲ್ಲೊಂದಕ್ಕೆ
ಹೆಗ್ಗಣದ ಬಿಡಾರದ ಜಾಹೀರಾತು..
ಇಣುಕುತ್ತದೆ ಕೆಣಕುತ್ತದೆ
ಆಗಾಗ ಭುಗಿಲಿಡುವ ಬಯಕೆ..
ಮಂದ ಮಾರುತವೊಂದು
ಹದಿನಾರಕ್ಕೆ ಹಲುಬುತ್ತದೆ..
ಗಾಳಿಮಾತುಗಳ ಹೆಕ್ಕುವಿಕೆ
ಗುಡಿಸುವಿಕೆಯಲ್ಲಿ ಪೊರಕೆಗೆ ಮರು ಯೌವನ..

ತೇಗಿದ ಹೊಗೆಯ ಸುಕ್ಕಿಗೆ
ಬೀದಿ ದೀಪದ ಆಯಸ್ಸು ಹೇಳುವ ಉಮೇದು;
ರೆಕ್ಕೆ ಮುರಿದ ಹುಳದ ಲೆಕ್ಕ
ನಮ್ಮ ಜೋಡುಗೆರೆ ಪಟ್ಟಿಯಲ್ಲಿಲ್ಲ..
ಆಚೆಯೆಲ್ಲೋ ಮುಲುಗುವಾಗ
ಬೆವರುವ ಗೋಡೆ, ಕಿಲಗುಟ್ಟುತ್ತದೆ
ಮಗುವೊಂದು ಮೊಲೆಹಾಲ ಕುಡಿವ
ಸೊರ ಸೊರ ಶಬ್ದಕ್ಕೆ..ಮನುಷ್ಯ ತಾಯಾಗುತ್ತಾನೆ..
ಮತ್ತು ಜಗತ್ತೂ..!

Leave a Reply