ಹೀಗೆ ಪ್ರೀತಿಸಿ ಪ್ರೀತಿಸಿ ನಾನೂ, ಅವನೂ..

 

 

ಹೃದಯ ಬೀಜದ ಹಣ್ಣು

ರಜನಿ

 

 

ಹೀಗೆ ಪ್ರೀತಿಸಿ ಪ್ರೀತಿಸಿ

ನಾನೂ ಅವನೂ ಒಂದು ದಿನ

ಸತ್ತು ಹೋದೆವು…

 

ಮನೆಮಂದಿಯ ಜೊತೆಗೆ ಬಂಧು-ಬಾಂಧವರು

ಗೆಳೆಯ-ಗೆಳತಿಯರು, ನೆರೆಹೊರೆಯವರು

ಪರಿಚಯದವರು…

ಎಷ್ಟೆಲ್ಲ ಜನ ಸೇರಿ ಅತ್ತರು, ನೆನಪಿಸಿಕೊಂಡರು

ಇನ್ನಿಲ್ಲವೆಂದು ಮರುಗಿದರು…

 

ಮೀಯಿಸಿ,

ಮೈಗೆಲ್ಲ ಸುಗಂಧ ಸವರಿ

ನಮ್ಮ ಮದುವೆಯ ಉಡುಗೆ ತೊಡಿಸಿ

ಪಟ್ಟಿಗೆಯಲಿ ನಮ್ಮನಿಟ್ಟು

ಮೆರವಣಿಗೆಯಲಿ ಒತ್ತೊಯ್ದರು!

ಥೇಟ್ ನಮ್ಮ ಮದುವೆಯಂತೆಯೇ ಇತ್ತು…

 

ಎಂದಿನಂತೆ ಅಲ್ಲಿ ಆತ ನನಗಾಗಿ ಕಾದಿದ್ದ..

ಅಡ್ಡಸರಿದು ನನ್ನ ಮೆರವಣಿಗೆಗೆ

ದಾರಿಬಿಟ್ಟು, ಹಿಂದಿಂದ

ಬಂದು ನನ್ನ ಪಕ್ಕದ್ದೇ ಗುಂಡಿಯಲಿ

ಸಮಾಧಿಯಾದ

ಮತ್ತೇಳದಂತೆ ಮಣ್ಣು ನಮ್ಮ ಮೇಲೆಳೆದು

ಮೇಲೆ ಹೂವನಿಟ್ಟು

ನಾಮಫಲಕವ ನೆಟ್ಟು

ನಡೆದುಬಿಟ್ಟರು ಎಲ್ಲ…

ಹಿಂದಿಗಿಂತಲೂ ಹೆಚ್ಚು

ನಮ್ಮಿಬ್ಬರುಸಿರು ತಾಕುವಷ್ಟು

ಹತ್ತಿರಾದೆವು ಅಲ್ಲಿ…

 

ಮುಂದಿನ ಮುಂಗಾರುಮಳೆಗೆ

ನಮ್ಮ ಹೃದಯಬೀಜ ಮೊಳೆತು

ನವಿರಾದ ಬಳ್ಳಿಯಾಗಿ

ಒಬ್ಬರಿನ್ನೊಬ್ಬರನು ಬಳಸಿ

ಚರ್ಚ್ ಯಾರ್ಡ್ ತುಂಬೆಲ್ಲ

ಹಬ್ಬಿ ಹಸಿರಾದೆವು

 

ಮಾಗಿಯಲಿ ಎಲೆ ಉದುರಿಸಿ

ವಸಂತಕ್ಕೆ ಮತ್ತೆ ಚಿಗಿತು

ಮೊಗ್ಗು ಬಿರಿದು

ಮೈತುಂಬ ಹೂಬಿಟ್ಟು

ಪಕಳೆಯುದುರಿಸಿ ಕಾಯಾಗಿ

ಪ್ರತಿ ಸಂದುಸಂದಿಗೂ ಹಣ್ಣುಗಳ

ಮೈತುಂಬ ತೊಟ್ಟೆವು….

 

ಕೊಳ್ಳಿ..

ಅಂಗಡಿಯಲ್ಲಿಯೂ ಸಿಗುತ್ತದೆ..

ನಮ್ಮ

ಹೃದಯ ಬೀಜದ ಹಣ್ಣು

3 Responses

  1. Anand Kunchanur says:

    Ah, lovely!!

  2. ರವಿಶಂಕರ್ says:

    ಪ್ರೀತಿಯೋ, ವಾಸ್ತಾವವೋ ಅಥವಾ ಎರಡೂ ಭಾವಗಳೋ … ಒಟ್ಟಾರೆ ನವಿರಾಗಿ ಸಂಕೀರ್ಣವಿರದೆ ಹಳೆಯ ಚಿತ್ರಗೀತೆಯಂತೆ ಹೃದಯ ಬೀಜದ ಹಣ್ಣು ಸೊಗಸಾಗಿ ಮೂಡಿ ಬಂದಿದೆ.

  3. ಶೇಖರ್ says:

    ಪ್ರೀತಿ ಅಂದರೆ ಭಾವನೆಗಳ ಸಂಗಮ , ಆದರೆ ಈಗ ದೇಹದ ಆಕರ್ಷಣೆ ಆಗಿದೆ , ಯಾಕಾದರೂ ಪ್ರೀತಿ ಹುಟ್ಟುವುದು ಗೊತ್ತಿಲ್ಲ

Leave a Reply

%d bloggers like this: