ಹೀಗೆಯೇ ಮೊನ್ನೆ ಕಂಪ್ಯೂಟರಿನಲ್ಲಿ ಇಮೇಜ್ ನೋಡುತ್ತಿದ್ದಾಗ..

 

 

ಮತ್ತದೇ ಗೆಳೆಯರೊಂದಿಗೆ ಮಾತಾಡಬೇಕು,
ಅದೇ ಬೆಂಚಿನಲ್ಲಿ ಕುಳಿತು ಮರ್ಲಿನ್ ಮಿಸ್ ಪಾಠ ಕೇಳಬೇಕು..


ಅಂತಃಕರಣ / ಶಿವಮೊಗ್ಗ 

 

ಈ ವರ್ಷದಲ್ಲಿ ನಾನು ಪ್ರೌಢಶಾಲಾ ವಿದ್ಯಾರ್ಥಿಯಾದೆ ಎಂಬ ಖುಷಿಯಿದ್ದರೆ ನನ್ನ ಸೇಕ್ರೇಡ್ ಹಾರ್ಟ್ ಶಾಲೆಯನ್ನು ಬಿಟ್ಟು ಹೋಗುತ್ತಲಿರುವೆ ಎಂಬ ದುಃಖ ಬಹಳ ಕಾಡುತ್ತಿತ್ತು. ಅದು ಎಷ್ಟರಮಟ್ಟಿಗೆಂದರೆ ಲೋಯೋಲಾ ಶಾಲೆಗೆ ಹೋದ ಮೊದಲ ಕೆಲವು ದಿನಗಳಲ್ಲಿ ನಾನು ಸೇಕ್ರೇಡ್ ಹಾರ್ಟ್ ಶಾಲೆಯ ವಿದ್ಯಾರ್ಥಿಯಲ್ಲ ಎಂಬುದನ್ನೇ ನನಗೆ ನಂಬಲಾಗುತ್ತಿರಲಿಲ್ಲ. ಸುಮ್ಮನೆ ವೆಕೇಶನ್ ರೀತಿ ಲೋಯೋಲಾ ಶಾಲೆಗೆ ಬಂದಿರುವೆ ಎಂದೆನಿಸುತ್ತಿತ್ತು..

ಸೇಕ್ರೇಡ್ ಹಾರ್ಟ್ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ 7ರವರೆಗೆ ಸತತ 9 ವರ್ಷ ಓದಿದ ನಂತರ ಬೇರೆ ಶಾಲೆಗೆ ಹೋಗಲು ಮನಸ್ಸಾಗುತ್ತಿರಲಿಲ್ಲ. ಸೇಕ್ರೇಡ್ ಹಾರ್ಟ್ ಶಾಲೆಯಲ್ಲಿಯೇ ನನಗೆ ಒಂದು ಕ್ಲಾಸ್ ಬಿಟ್ಟು ಮತ್ತೊಂದು ಕ್ಲಾಸ್‍ಗೆ ಹೋಗುವಾಗ ಒಂದು ರೀತಿ ಬೇಸರವಾಗುತ್ತಿತ್ತು. ಇನ್ನು ಮತ್ತೊಂದು ಶಾಲೆಗೆ ಹೋಗುವುದೆಂದರೆ!! ರಜೆಯಲ್ಲಿ ನನಗೇನೂ ಜಾಸ್ತಿ ಅನಿಸಿರಲಿಲ್ಲವಾದರೂ ಲೋಯೋಲಾ ಶಾಲೆಗೆ ಬಂದ ಮೇಲೆ ನನಗೆ ಬಹಳ ಬಹಳ ಸೇಕ್ರೇಡ್ ಹಾರ್ಟ್ ಶಾಲೆಯ ನೆನಪಾಗುತ್ತಿದೆ. ಎಲ್ಲದಕ್ಕಿಂತಲೂ ನನಗೆ ಹೆಚ್ಚು ಕಾಡುತ್ತಿರುವುದು ನನ್ನ ಗೆಳೆಯರು.

ಸೇಕ್ರೇಡ್ ಹಾರ್ಟ್‍ನಲ್ಲಿ ‘3 ಈಡಿಯಟ್ಸ್’ (!) ತರಹ ಇದ್ದ ನಾನು, ಹರ್ಷ ಹಾಗೂ ಕೀರ್ತನ್ – ಮೂವರೂ ಸಹ ಬೇರೆ ಬೇರೆ ಕಡೆ ಚದುರಿ ಹೋಗಿದ್ದೇವೆ. ಇನ್ನು 9 ವರ್ಷಗಳಿಂದ ಕ್ಲೋಸ್ ಫ್ರೆಂಡ್ ಆಗಿದ್ದ ದರ್ಶನ್ ಸಹ ಬೇರೆ ಶಾಲೆ ಸೇರಿದ್ದಾನೆ.
ಈ ಹೊಸ ಶಾಲೆಯ ಮೊದಲ ದಿನಗಳಲ್ಲಂತೂ ನನಗೆ ಒಂಟಿತನ ಹೆಚ್ಚು ಕಾಡತೊಡಗಿತ್ತು. ಇಲ್ಲೂ ನನಗೆ ಬಹಳ ಜನ ಹಳೆಯ ಗೆಳೆಯರು ಸಿಕ್ಕರೂ ಸಹ ಆ ಇಬ್ಬರು ‘ಈಡಿಯಟ್ಸ್’ ಗಳಿಲ್ಲವಲ್ಲಾ! ಎಂದೆನಿಸತೊಡಗಿತ್ತು. ಗೆಳೆಯರ ನಂತರ ನನಗೆ ಬಹಳ ಕಾಡಲು ಶುರುವಾಗಿದ್ದು ನನ್ನ ಶಾಲಾ ‘ಮುಖ್ಯಮಂತ್ರಿ’ (ಹೆಡ್ ಬಾಯ್) ಸ್ಥಾನ!

ನನಗೆ ನನ್ನ ಸೇಕ್ರೇಡ್ ಹಾರ್ಟ್ ಶಾಲೆಯ ಮೊದಲೆಂಟು ವರ್ಷಗಳ ಅನುಭವಕ್ಕೆ ಮುಖ್ಯಮಂತ್ರಿಯ ಅನುಭವ ಸಮವಾಗಿತ್ತು ಎಂದು ಹೇಳಬಲ್ಲೆ! ಯಾಕೆಂದರೆ ಮೊದಲ ಕೆಲವು ವರ್ಷಗಳಲ್ಲಿ ಬುದ್ಧಿವಂತ ಹುಡುಗನಾಗಿ, ನಂತರ ಒಬ್ಬ ಲೇಖಕನಾಗಿ ನಮ್ಮ ಶಾಲೆಯೆಲ್ಲೆಡೆ ಗುರುತಿಸಲ್ಪಟ್ಟಿದ್ದ ನಾನು, ಮುಖ್ಯಮಂತ್ರಿ ಆದ ಮೇಲೆ ಎಲ್ಲರಿಗೂ ಸಹ ಉತ್ತಮ ಗೆಳೆಯನಾಗಿ ಹೋದೆ!
ಲೀಡರ್‍ಗಳಾದ ಮೇಲೆ ತಮ್ಮ ಗೆಳೆಯರಿಂದಲೇ ದೂರವಾಗುವ ನಿದರ್ಶನಗಳು ಇವೆ, ನಮ್ಮ ಸ್ಕೂಲಿನಲ್ಲಿ ಹಿಂದಿನ ಲೀಡರ್‍ಗಳಿಗೆ ಹೀಗಾಗಿತ್ತು.

ಲೀಡರ್ ಆದವನು ತನ್ನ ಕೆಲಸವನ್ನು ದಕ್ಷವಾಗಿ ಮಾಡಿಕೊಂಡು ಹೋಗಬೇಕಾಗುತ್ತದೆ. ಈ ರೀತಿ ಲೀಡರ್‍ಗಳು ಕೆಲಸ ಮಾಡುವ ಸಂದರ್ಭಗಳಲ್ಲಿ ಸಹಪಾಠಿಗಳು ತಪ್ಪು ಮಾಡಿದಾಗ ತಮ್ಮ ಗೆಳೆಯರಾದ ಅವರಿಗೇ ಶಿಕ್ಷೆ ಕೊಡಬೇಕಾಗಿ ಬರುತ್ತದೆ. ಇದರಿಂದಾಗಿ ಲೀಡರ್‍ಗಳು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆದರೆ ನಾನು ಹೇಗೋ ಆರಾಮಾಗಿ ನನ್ನ ಲೀಡರ್ ಕೆಲಸವನ್ನು ಮಾಡಿದೆ. ನನ್ನನ್ನು ಆಯ್ಕೆ ಮಾಡಿದ ‘ಮತದಾರರಿಗೆ’ ನ್ಯಾಯ ಒದಗಿಸಲು ಪ್ರಯತ್ನಿಸಿದೆ. ಬಹುಶಃ ಇದೇ ಕಾರಣಕ್ಕೇನೋ, ನನಗೆ ನನ್ನ ಕ್ಲಾಸಿನ ಗೆಳೆಯರಿಗಿಂತ ಜಾಸ್ತಿ ಬೇರೆ ಕ್ಲಾಸುಗಳಲ್ಲಿ ಗೆಳೆಯರು ಹುಟ್ಟಿಕೊಂಡರು.

ಮೊನ್ನೆ, ವಿದ್ಯಾಜ್ಯೋತಿ ಶಾಲೆಯಿಂದ ಬಂದು ನಮ್ಮ ಈ ಹೊಸ ಶಾಲೆಗೆ ಸೇರಿದ್ದ ಹೊಸ ಗೆಳೆಯ ಗುರುಕಿರಣ್‍ನೊಂದಿಗೆ ಮನೆಗೆ ಬರುತ್ತಿದ್ದೆ. ಆಗ ಸೇಕ್ರೇಡ್ ಹಾರ್ಟ್ ಶಾಲೆಯ ಹಲವು ವಿದ್ಯಾರ್ಥಿಗಳು ನನ್ನನ್ನು ಮಾತನಾಡಿಸುತ್ತಿದ್ದುದನ್ನು ನೋಡಿ “ಏನಪ್ಪಾ, ನಿನ್ನ ಫ್ಯಾನ್ಸು !” ಎಂದು ಕೇಳಿದ. ಕಳೆದ ವರ್ಷ ನಾನು ಒಂದನೇ ಕ್ಲಾಸಿನಿಂದ ಹಿಡಿದು ಆರನೇ ಕ್ಲಾಸಿನವರೆಗೂ ಬಹಳ ಸ್ನೇಹಿತರನ್ನು ಮಾಡಿಕೊಂಡಿದ್ದೆ. ಅದು ಎಷ್ಟರಮಟ್ಟಿಗೆಂದರೆ ಕಳೆದ ಬಾರಿ ಮೂರನೇ ಕ್ಲಾಸಿನಲ್ಲಿದ್ದ, ಈಗ ನಾಲ್ಕನೇ ಕ್ಲಾಸಿನಲ್ಲಿರುವ ನನ್ನ ಗೆಳೆಯ ತೇಜಸ್ ನನ್ನ ಮನೆಗೆ ಬಂದು ಮಾತನಾಡಿಸಿಕೊಂಡು ಹೋದ! ನನಗೆ ‘ಮುಖ್ಯಮಂತ್ರಿ’ ಬ್ಯಾಡ್ಜ್ ಕೊಟ್ಟ ಮೇಲೆ ನಾನು ಒಂದು ದಿನವೂ ಸಹ ಬ್ಯಾಡ್ಜ್ ಹಾಕಿಕೊಳ್ಳುವುದನ್ನು ಮಿಸ್ ಮಾಡಿದವನಲ್ಲ, ಒಂದು ದಿನ ಮನೆಯಲ್ಲಿ ಎಲ್ಲೋ ಹಾಕಿ ಸಿಗದೆ, ಕೊನೆಗೆ ಅಪ್ಪ ಸ್ಕೂಲಿಗೇ ತಂದುಕೊಟ್ಟಿದ್ದರು !

ಸೇಕ್ರೇಡ್ ಹಾರ್ಟ್ ಶಾಲೆಯಲ್ಲಿ ನಾನು ಮಿಸ್ ಮಾಡಿಕೊಳ್ಳುತ್ತಿರುವುದು ನನ್ನ ಟೀಚರ್‍ಗಳನ್ನು. ಅದರಲ್ಲೂ ನನ್ನ ಫೇವರೀಟ್ ಮರ್ಲಿನ್ ಮಿಸ್ ಅವರನ್ನು. ಅವರು ಮಾಡುವ ಪಾಠಗಳು ಬಹಳ ಆಕರ್ಷಕÀವಾಗಿರುತ್ತಿದ್ದವು. ಅವರು ಎಲ್ಲಾ ವಿಷಯಗಳನ್ನು ಚೆನ್ನಾಗಿ ಮನದಟ್ಟು ಮಾಡುತ್ತಿದ್ದರು. ನಾನು ಪಾಠ ಕೇಳಿಕೊಂಡು ಉತ್ತರ ಬರೆಯುವ ವಿದ್ಯಾರ್ಥಿಯಾಗಿರುವುದರಿಂದ ಇದು ನನಗೆ ಬಹಳ ಸಹಾಯಕವಾಗಿತ್ತು. ಅವರ ಪಿರಿಯಡ್ ಬಂತೆಂದರೆ ಸಾಕು, ನಾನು, ಕೀರ್ತನ್, ಹಷ್, ರೆಲ್ಸನ್ ಸೇರಿದಂತೆ ಹಲವರು ನೆಲದ ಮೇಲೆ ಒಂದು ರೌಂಡ್ ಮಾಡಿಕೊಂಡು ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಿಸಿಕೊಳ್ಳುತ್ತಿದ್ದೆವು. ಈ ರೀತಿ ನಡೆಯುವಾಗಲೇ ಒಂದು ಆಸಕ್ತಿಕರ ಸಂಗತಿ ನಡೆಯಿತು.

ನಾವು ಕೆಳಗೆ ಕೂತು ಹೀಗೆ ಕೇಳಿಕೊಳ್ಳುತ್ತಿದ್ದಾಗ ಒಮ್ಮೆ ದೇಶ ಹಾಗೂ ರಾಜಧಾನಿಗಳ ಕ್ವಿಜ್ ಆಡಲು ಶುರುಮಾಡಿದೆವು. ಎಲ್ಲಾ ಕ್ವಿಜ್‍ಗಳಲ್ಲೂ ನಾನು ಹಾಗೂ ಕೀರ್ತನ್ ಮೇಲುಗೈಯಲ್ಲಿದ್ದರೆ, ಈ ಕ್ವಿಜ್‍ನಲ್ಲಿ ಮಾತ್ರ ನಾನು ಹಾಗೂ ಶಾಬಾಜ್ó ಮೇಲುಗೈಯಲ್ಲಿದ್ದೆವು. ಹಾಗೆಂದು ನಾವು ರಾಜಧಾನಿಗಳನ್ನು ಉರು ಹೊಡೆದುಕೊಳ್ಳುತ್ತಿರಲಿಲ್ಲ. ಸಾಮಾನ್ಯವಾಗಿ ಓದಿದುದನ್ನು ಹೇಳುತ್ತಿದ್ದೆವು. ನಾವಿಬ್ಬರೂ ಮೇಲುಗೈಯಲ್ಲಿದ್ದುದನ್ನು ನೋಡಿ ಕೀರ್ತನ್‍ಗೆ ತಾನೂ ಸಹ ಇವರಿಬ್ಬರ ಹಾಗೆ ರಾಜಧಾನಿಗಳನ್ನು ಹೇಳಬೇಕು ಎಂದು ಯಾವಾಗ ಅನಿಸಿತೋ, ಅಂದಿನಿಂದ ಅವನು ರಾಜಧಾನಿಗಳನ್ನು ಕಲಿಯತೊಡಗಿದ.

ನನಗೆ ಹಾಗೂ ಶಾಬಾಜ್ ಗೆ ಸುಮಾರು 50 ರಿಂದ 60 ದೇಶಗಳ ರಾಜಧಾನಿಗಳು ಗೊತ್ತಿದ್ದವು. ಆದರೆ ಕೀರ್ತನ್ ದಿನವೂ ಮನೆಯಲ್ಲಿ ಕಲಿತು ಕಲಿತು ಸುಮಾರು 100 ರಿಂದ 110 ದೇಶಗಳ ರಾಜಧಾನಿಯನ್ನು ಬಾಯಿಪಾಠ ಮಾಡಿಕೊಂಡುಬಿಟ್ಟ! ಆಗ ಅವನೆದುರಿಗೆ ಗೆಲ್ಲುವುದುರ ಪರ್ಸಟೆಂಜ್ ಕಡಿಮೆಯಾಗುತ್ತಾ ಬಂತು. ಈಗ ಕೀರ್ತನ್ ರಾಜಧಾನಿಗಳ ರಾಜ ಆಗಿಹೋಗಿಬಿಟ್ಟ!!
ನಂತರ ನಾವು ರಾಜಧಾನಿಗಳಿಂದ ದೇಶಗಳ ಭಾಷೆಯ ಕ್ವಿಜ್ ಆಡಲು ಶುರುಮಾಡಿದೆವು. ಇದರಲ್ಲಿ ಶಾಬಾಜ್óಗೆ ಅಷ್ಟು ಗೊತ್ತಿರಲಿಲ್ಲವಾದುದರಿಂದ ನಾನು ಹಾಗೂ ಕೀರ್ತನ್ ಮೇಲುಗೈ ಸಾಧಿಸಿದೆವು. ಹಾಗೆಯೇ ನಾನು ಹಾಗೂ ಕೀರ್ತನ್ ಎಂದಿಗೂ ಸಹ ಆಟಗಾರರಾಗಿ ಆಡುತ್ತಿರಲಿಲ್ಲ, ಇಬ್ಬರೂ ಯಾವಾಗಲೂ ಎದುರಾಳಿಗಳೇ! ಇಬ್ಬರೂ ಸಹ ಬಹಳ ಪಂದ್ಯಗಳನ್ನು ಸಮವಾಗಿ ಗೆದ್ದಿದ್ದೇವೆ. ನನಗಿಂತ ಸ್ವಲ್ಪ ಜಾಸ್ತಿ ಅವನೇ ಗೆದ್ದಿದ್ದಾನೆ ಎನ್ನುವುದೇ ಸರಿ.

ನನಗೆ ಸೇಕ್ರೇಡ್ ಹಾರ್ಟ್ ಶಾಲೆಯಲ್ಲಿ ಕೊನೆಯ ದಿನಗಳಲ್ಲಿ ಆದ ಅನುಭವಗಳು ಎಂದೂ ಮರೆಯಲಾಗದ ಅನುಭವಗಳು.
ಲೀಡರ್ ಆಗಿ ನಿಯಮದ ವಿರುದ್ಧವಾಗಿ ಎಂದೂ ಮಾತನಾಡದ ನಾನು, ಸ್ಕೂಲಿನ ಕೊನೆಯ ಸಾಮಾನ್ಯ ದಿನದಂದು, ಅಂದರೆ ಪರೀಕ್ಷೆಗಿಂತಲೂ ಮುಂಚೆ, ಕೀರ್ತನ್ ಜೊತೆಗೆ ಸೇರಿಕೊಂಡು ಹಾಡಿದ ‘ಎಣ್ಣೇನು, ಸೋಡನೂ’ ಹಾಡು ನಾನು ಎಂದೂ ಮರೆಯದಂತಹ ಹಾಡು.

ಇದಕ್ಕೂ ಮೊದಲು ನಾನು ಹಾಗೂ ಕೀರ್ತನ್ ಕನ್ನಡದ ಹಾಡುಗಳನ್ನು ಇಂಗ್ಲೀಷಿಗೆ ಭಾಷಾಂತರ ಮಾಡುತ್ತಿದ್ದೆವು. ನಾವು ‘ಮೂರೇ ಮೂರು ಪೆಗ್ಗಿಗೆ’ ಹಾಗೂ ‘ಎಣ್ಣೇನು ಸೋಡನೂ’ ಹಾಡುಗಳನ್ನು ಪೂರ್ಣವಾಗಿ ಇಂಗ್ಲೀಷಿಗೆ ಅದೇ ಟೋನಿನಲ್ಲಿ ತಂದಿದ್ದೆವು. ಮೂರೇ ಮೂರು ಪೆಗ್ಗಿಗೆ ಹಾಡನ್ನು – ‘ಓನ್ಲಿ ಫಾರ್ ಥ್ರೀ ಪೆಗ್ಸ್, ಹೆಡ್ ಗಿರಗಿರಗಿರಗಿರ ರೌಂಡಿಂಗ್, ಮೈ ಐಸ್ ಹ್ಯಾವ್ ಬಿಕಂ ಬ್ಲೈಂಡ್, ಮೈ ಬಾಡಿ ಬ್ಯಾಲೆನ್ಸ್ ಹ್ಯಾಸ್ ಲಾಸ್ಟ್’ – ಹೀಗೆ ಅನುವಾದ ಮಾಡಿ ಹಾಡುತ್ತಿದ್ದೆವು !

ಇನ್ನು ನಮ್ಮ ಸೆಂಡ್-ಆಫ್ ದಿನವನ್ನು ನಾನು ಮರೆಯಲು ಅಸಾಧ್ಯ. ಅಂದು ನಾನು ಮಾಡಿದ ಭಾಷಣ ನನ್ನ ಜೀವನದಲ್ಲೇ ಅಲ್ಲಿಯವರೆಗೆ ಮಾಡಿದ್ದ ದೊಡ್ಡ ಇಂಗ್ಲೀಷ್ ಭಾಷಣ. ಸ್ಕೂಲಿನ ಬಗ್ಗೆ ಮಾತನಾಡಬೇಕೆಂದು ಹೇಳಿದಾಗ ನಾನು ಸುಮಾರು ಮೂರು ಪುಟಗಳಷ್ಟು ಬರೆದು ಮಿಸ್ಸಿಗೆ ಒಪ್ಪಿಸಿದ್ದೆ. ಶಾಂತಿ ಮಿಸ್ ಅದನ್ನು ಫಾದರ್‍ಗೆ ತೋರಿಸಿ ಒಪ್ಪಿಗೆ ಕೊಟ್ಟಿದ್ದರು. ನನಗ್ಯಾಕೋ ಅಂದು, ನಾನು ಭಾಷಣ ಚೆನ್ನಾಗಿ ಮಾಡಲಿಲ್ಲ ಎನಿಸಿತು. ಯಾಕೆಂದರೆ ನನ್ನ ಭಾಷಣವಿದ್ದುದು ನಮ್ಮ ಡ್ಯಾನ್ಸ್ ಆದ ತಕ್ಷಣ. ಡ್ಯಾನ್ಸ್ ಮಾಡಿ ಸುಸ್ತಾಗಿ ಬೆವತಿದ್ದ ನನಗೆ ಭಾಷಣ ಸರಿ ಮಾಡಲು ಆಗಲಿಲ್ಲ.

ಅಂದು ನಾನು ನನ್ನ ಎಲ್ಲಾ ಕ್ಲಾಸ್‍ಮೇಟ್ಸ್‍ಗಳೊಂದಿಗೂ ಒಂದೊಂದು ಸೆಲ್ಫಿ ತೆಗೆದುಕೊಳ್ಳಬೇಕೆಂದುಕೊಂಡಿದ್ದೆ, ಆದರೆ ಆಗಲಿಲ್ಲ. ಅವತ್ತು ಒಂದು ದೊಡ್ಡ ಘಟನೆ ನಡೆದುಹೋಯಿತು.

ನಾವು ಸೆಂಡ್ ಆಫ್‍ಗೆಂದು ಮಿಸ್‍ಗೆ ಸರ್‍ಪ್ರೈಸ್ ಆಗಿ ಒಂದು ದೊಡ್ಡ ಕೇಕ್ ತಂದು ಕಟ್ ಮಾಡಬೇಕೆಂದುಕೊಂಡಿದ್ದೆವು. ಅದಕ್ಕೆಂದು ದುಡ್ಡು ಸಹ ಕಲೆಕ್ಟ್ ಮಾಡಿಕೊಂಡಿದ್ದೆವು !! ಅದರಲ್ಲಿ ಶಾಯಿಸ್ತಾ 1300 ರೂಪಾಯಿ ಕೊಟ್ಟಿದ್ದಳು !! ಇಷ್ಟು ದುಡ್ಡು ಮನೆಯಲ್ಲಿ ಕೊಡುತ್ತಾರಾ ಎಂದು ಕೇಳಿದ್ದಕ್ಕೆ ಹ್ಞೂಂ ಹ್ಞೂಂ ಎಂದಿದ್ದಳು. ಆದರೆ ಅವಳು ಅದನ್ನು ಮನೆಯಲ್ಲಿ ಕೇಳದೇ ತಂದಿದ್ದಳೆಂದು ಅವಳ ಅಮ್ಮ ನಮಗೆಲ್ಲರಿಗೂ ಫೋನಿನಲ್ಲಿ ಬೈದಾಗಲೇ ನಮಗೆ ಗೊತ್ತಾದದ್ದು.

ಅವರು ಸೆಂಡ್- ಆಫ್ ದಿನ ಶಾಲೆಗೆ ಬಂದು ಬಿಡಬೇಕೇ?! ಅಲರ್ಟ್ ಆದ ನಾನು ಮತ್ತು ಕೀರ್ತನ್ ಶಾಂತಿ ಮಿಸ್‍ರೊಂದಿಗೆ ಶಾಯಿಸ್ತಾರ ಅಮ್ಮನ ಬಳಿ ಮಾತನಾಡಲು ಹೋದೆವು. ಶಾಯಿಸ್ತಾಳ ಅಮ್ಮ ಫೋನಿನಲ್ಲಿ ಬೈದ ನಂತರ ಶಾಯಿಸ್ತಾಳ 1300 ರೂಪಾಯಿಗಳನ್ನು ವಾಪಸು ಕೊಡುವುದೆಂದು ನಿರ್ಧರಿಸಿ ಉಳಿದ ನಾವೆಲ್ಲರೂ ಹೆಚ್ಚು ಹಣ ಹಾಕಿ ಕೇಕ್ ತಂದಿದ್ದೆವು. ನಾನು ಮತ್ತು ಕೀರ್ತನ್ ಶಾಯಿಸ್ತಾಳ ಅಮ್ಮನ ಬಳಿ ಮಾತನಾಡಿ ಅವರಿಗೆ ದುಡ್ಡು ಕೊಟ್ಟು ಬಂದೆವು. ನಾವು ವಾಪಸು ಬರುವ ಸಮಯದಲ್ಲಿ ಕೇಕಿಗೆ ದುಡ್ಡು ಹಾಕಿದ್ದ ನಮ್ಮ ಸಹಪಾಠಿ ಹುಡುಗಿಯರು ಅಳಲು ಶುರುಮಾಡಿದ್ದರು! ಕಾರಣ ಏನು ಎಂದರೆ ನನಗೆ ಹಾಗೂ ಕೀರ್ತನ್‍ಗೆ ಶಾಯಿಸ್ತಾಳ ಅಮ್ಮ ಬೈಯುತ್ತಾರೆ ಎಂದು! ಆದರೆ ನಾವು ನಡೆದಿದ್ದನ್ನೆಲ್ಲ ಹೇಳಿ ದುಡ್ಡು ವಾಪಾಸು ಕೊಟ್ಟಾಗ ಅವರು ನಮಗೇನೂ ಬೈಯ್ದಿರಲಿಲ್ಲ. ಈಗ ಇವರೆಲ್ಲಾ ಅಳುವುದನ್ನು ನೋಡಿ ನನಗೆ ಹಾಗೂ ಕೀರ್ತನ್‍ಗೆ ಶಾಕ್ ಆಯಿತು. ಕೊನೆಗೆ ಅವರಿಗೆ ‘ಏನೂ ಆಗಿಲ್ಲ’ ಎಂದು ಹೇಳಿದಾಗ ಸುಮ್ಮನಾದರು.

ಅತ್ತವಳಲ್ಲಿ ಒಬ್ಬಳಾದ ಪೂರ್ವಿ ‘ಸೆಂಡ್-ಆಫ್ ಆದ ಮೇಲೆ ನನ್ನ ಮನೆಗೆ ಬಾ’ ಎಂದು ಕರೆದಳು. ಸಾಮಾನ್ಯವಾಗಿ ಒಬ್ಬ ಹುಡುಗನ ಮನೆಗೆ ಇನ್ನೊಬ್ಬ ಹುಡುಗ ಹೋಗುವುದು ಹಾಗೂ ಒಬ್ಬ ಹುಡುಗಿಯ ಮನೆಗೆ ಮತ್ತೊಬ್ಬ ಹುಡುಗಿ ಹೋಗುವುದು ನಮ್ಮ ಶಾಲೆಯಲ್ಲಿ ಚಾಲ್ತಿಯಲ್ಲಿತ್ತು, ಅದೇ ಒಬ್ಬ ಹುಡುಗಿಯ ಮನೆಗೆ ಹುಡುಗ ಅಥವಾ ಹುಡುಗನ ಮನೆಗೆ ಹುಡುಗಿ ಹೋಗಿದ್ದು ಗೊತ್ತಾಯಿತು ಎಂದರೆ ನಮ್ಮ ಗೆಳೆಯರು ಅದನ್ನೇ ದೊಡ್ಡ ಕಥೆ ಮಾಡುತ್ತಿದ್ದರು. ಪಾಪ ಪೂರ್ವಿ ನನಗೆ ಮತ್ತು ಕೀರ್ತನ್‍ಗಾಗಿ ಅತ್ತಿದ್ದುದರಿಂದ ಇಲ್ಲ ಎನ್ನಲಾಗಲಿಲ್ಲ. ಆದರೆ ಹೋಗುವುದು, ಅದೂ ಅವಳ ಗೆಳತಿಯರೊಂದಿಗೆ – ಇದು ಸರಿಯಲ್ಲ ಎಂದು ನಾನು ‘ಕೀರ್ತನ್ ಬಂದರೆ ಬರುತ್ತೇನೆ’ ಎಂದೆ.

ಪೂರ್ವಿ ನನಗೆ ಮೊದಲು ಕೇಳಿದ್ದಳೋ, ಕೀರ್ತನ್‍ಗೆ ಮೊದಲು ಕೇಳಿದ್ದಳೋ ಗೊತ್ತಿಲ್ಲ. ಆದರೆ ಕೊನೆಗೆ ಇಬ್ಬರೂ ಸಹ ಹೊರಡಲು ಒಪ್ಪಿಕೊಂಡೆವು. ನಮ್ಮೊಂದಿಗೆ ನಿಖಿಲ್ ಸಹ ಬರಲು ಒಪ್ಪಿಕೊಂಡ. ಇಲ್ಲಿ ಸಮಸ್ಯೆ ಆಗಿದ್ದು ನಾನು ದರ್ಶನ್, ಅಭಿಶೇಕ್ ಹಾಗೂ ರೋಹನ್‍ಗೆ ಸೆಂಡ್- ಆಫ್ ನಂತರ ಗಾಂಧಿ ಪಾರ್ಕಿಗೆ ಹೋಗೋಣ ಎಂದಿದ್ದು, ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಈಗ ಪೂರ್ವಿಯ ಮನೆಗೆ ಹೋಗುವ ಕಾರ್ಯಕ್ರಮ ಮಧ್ಯ ಬಂದಿದುದರಿಂದ – ನಾನು ದರ್ಶನ್, ರೋಹನ್ ಹಾಗೂ ಅಭಿಗೆ ‘ನೀವು ಶಿವಪ್ಪ ನಾಯಕ ಕೋಟೆ ಸುತ್ತಿಕೊಂಡು ಬನ್ನಿ, ನಾನು ಗಾಂಧಿ ಪಾರ್ಕಿನಲ್ಲಿ ನಿಮ್ಮನ್ನು ಮೀಟ್ ಆಗುತ್ತೇನೆ’ ಎಂದೆ. ಅವರು ಒಪ್ಪಿಕೊಂಡರು. ನನ್ನ ದುರಾದೃಷ್ಟಕ್ಕೆ ಅಂದು ಶಿವಪ್ಪ ನಾಯಕ ಕೋಟೆ ಸಹ ಕ್ಲೋಸ್ !

ಅವರು ಕೋಟೆಯಿಂದ ನನ್ನ ಮನೆಗೆ ಹೋಗಿ ಅಲ್ಲಿಂದ ನನಗೆ ಫೋನ್ ಮೇಲೆ ಫೋನ್ ಮಾಡುತ್ತಿದ್ದಾರೆ, ಆದರೆ ನಾನು ಇನ್ನೂ ಪೂರ್ವಿ ಮನೆಯನ್ನೇ ಸೇರಿಲ್ಲ, ಕೊನೆಗೆ ಹೇಗೋ ಮಾಡಿ ಪೂರ್ವಿ ಮನೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿದು ನೇರವಾಗಿ ಕೀರ್ತನ್ ಮನೆಗೆ ಬಂದೆವು. ಕೀರ್ತನ್ ಮನೆಗೆ ಏಕೆಂದರೆ, ಅವನು ಡ್ರೆಸ್ ಚೇಂಜ್ ಮಾಡಬೇಕಿತ್ತು. ಇದಾದ ನಂತರ ಹರ್ಷ ಹಾಗೂ ರೆಲ್ಸನ್ ನಮ್ಮನ್ನು ಸೇರಿಕೊಂಡರು. ಕೊನೆಗೆ ನಮ್ಮ ಹುಡುಗರ ಸೈನ್ಯ – ನಾನು, ಕೀರ್ತನ್, ರೆಲ್ಸನ್, ಹರ್ಷ, ನಿಖಿಲ್, ರೋಹನ್ ಮತ್ತು ಅಭಿಶೇಕ್ ಗಾಂಧಿ ಪಾರ್ಕ್ ಸೇರಿ ಒಂದೆರಡು ಗಂಟೆ ಆಟವಾಡಿ ನಂತರ ಮನೆ ಸೇರಿಕೊಂಡೆವು.

ನಮ್ಮ ಶಾಲೆಯ ಕೊನೆಯ ದಿನದಂದು ಹುಡುಗಿಯರೂ ಸೇರಿದಂತೆ ನಾವೊಂದಿಷ್ಟು ಜನ ಗಾಂಧಿ ಪಾರ್ಕಿಗೆ ಹೋಗುವ ಪ್ಲ್ಯಾನ್ ಹಾಕಿದ್ದೆವು. ಅಂದು ಸಹ ನಾವು ಗಾಂಧಿ ಪಾರ್ಕಿಗೆ ಹೋದೆವು. ಆದರೆ ಅವತ್ತು ಅಲ್ಲಿ ಏನೂ ಆಟವಾಡಲು ಆಗಲಿಲ್ಲ, ಬರೀ ತಿಂದಿದ್ದು, ಓಡಾಡಿದ್ದೇ ಆಯಿತು. ಇನ್ನು ಇದಾದ ಮೇಲೆ ಹುಡುಗಿಯರ ಅಳುವ ಕಾರ್ಯಕ್ರಮ ಬೇರೆ ಇತ್ತು! ಅಂದು ಅವರು ಅತ್ತಿದ್ದು ನೋಡಿದರೆ ಏನು ಐದು ಬೇರೆ ಬೇರೆ ದೇಶಗಳ ಹೈಸ್ಕೂಲುಗಳಿಗೆ ಸೇರಿ ಅಗಲುತ್ತಿದ್ದಾರೇನೋ ಎನ್ನುವ ಹಾಗಿತ್ತು, ಆದರೆ ಮಿರ್ಯಾಕಲ್ ಎಂದರೆ ಇಂದು ಅವರೆಲ್ಲಾ ಒಂದೇ ಶಾಲೆಯಲ್ಲಿದ್ದಾರೆ!

ಹೀಗೆ ಸೇಕ್ರೇಡ್ ಹಾರ್ಟ್ ಶಾಲೆಯ ನೆನಪುಗಳನ್ನು ಮತ್ತೊಮ್ಮೆ ರಿಕಾಲ್ ಮಾಡಿದಾಗ ನಾನು ಯಾಕಾದರೂ ಪ್ರೌಢಶಾಲೆಗೆ ಬಂದೆನೋ ಎನಿಸುತ್ತದೆ. ಸಮಯವನ್ನು ನಿಲ್ಲಿಸಲಾಗುವುದಿಲ್ಲ, ಅದು ಓಡುತ್ತಲೇ ಇರುತ್ತದೆ ಎಂದು ಸುಮ್ಮನಾಗುತ್ತೇನೆ. ಎಲ್ಲಾ ಗೆಳೆಯರೊಂದಿಗೆ ಮಾತನಾಡಬೇಕು ಎನಿಸುತ್ತದೆ, ಮತ್ತೆ ಅದೇ ಬೆಂಚಿನಲ್ಲಿ ಅದೇ ಟೀಚರ್‍ಗಳ ಪಾಠ ಕೇಳಬೇಕು ಎನಿಸುತ್ತದೆ, ಈಗ ನಾವು ಅದನ್ನು ಮರುಕಳಿಸಿದಾಗ ನಮಗೆ ಟೀಚರ್‍ಗಳು ಬೈಯುವ ಬೈಗುಳಗಳೂ ಸಹ ಸಿಹಿಯಾಗುತ್ತವೆ, ಹೊಡೆಯುವ ಹೊಡೆತಗಳೂ ಸಹ ಇಷ್ಟವಾಗುತ್ತವೆ. ಮೊದಲಿಗೆ ನಾವು ಕಡೆಗಣಿಸುವ ಆಯಾ ಆಂಟಿ ಹಾಗೂ ಅಟೆಂಡರ್ ಮಾಮಾಗಳು ಕೊನೆಗೆ ನಮ್ಮ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಹೀಗೇ ಮೊದಲು ಆದ ಎಲ್ಲಾ ಅನುಭವಗಳು ಚಂದ ಚಂದ ಎನಿಸುತ್ತವೆ.

ಹೀಗೆಯೇ ಮೊನ್ನೆ ಕಂಪ್ಯೂಟರಿನಲ್ಲಿ ಇಮೇಜ್ ನೋಡುತ್ತಿದ್ದಾಗ ನಮ್ಮ 7ನೇ ಕ್ಲಾಸಿನ ಗುಂಪು ಫೋಟೋ ನೋಡಿ ಒಂದು ರೀತಿ ಖುಷಿಯಾಯಿತು. ಎಲ್ಲಾ ಗೆಳೆಯರ ನಗುಮುಖ ಒಮ್ಮೆ ಕಣ್ಣೆದುರಿಗೆ ಬಂದಿತು. ಹಾಗೆ ನಮ್ಮ ಮಾತುಗಳು, ಹೇಳುತ್ತಿದ್ದ ಜೋಕ್‍ಗಳು, ಹಾಗೆ ಒಂದು ಹನಿ. ..

1 Response

  1. ರಾಜೀವ says:

    “ಒಬ್ಬ ಲೇಖಕನಾಗಿ ನಿಮ್ಮ ಶಾಲೆಯೆಲ್ಲೆಡೆ ಗುರುತಿಸಲ್ಪಟ್ಟಿದ್ದ” ನೀನು ಕನ್ನಡ ನಾಡಿನಲ್ಲಿ ಗುರುತಿಸಿಕೊಳ್ಳುವ ಎಲ್ಲ ಲಕ್ಷಣಗಳಿವೆ ಅಂತ:ಕರಣ…ಕೀಪ್ ಇಟ್ ಅಪ್!

Leave a Reply

%d bloggers like this: