ಮಣಿರತ್ನಂ ಎಂಬ ಆ ’ಬಡ್ಡೆತ್ತದು’

 

 

 

 

ಮಣಿರತ್ನಂ ಗೆ ಮೈಸೂರು ಬಹಳ ಇಷ್ಟವಾಗಿತ್ತು..

ಚಕ್ರವರ್ತಿ ರಾಘವನ್ 

 

 

 

 

ಮಣಿರತ್ನಂ ಒಳ್ಳೆಯ ‘ಫಾರ್ಮ್’ ನಲ್ಲಿದ್ದಾಗ ಮೂಡಿಬಂದ ‘ದಳಪತಿ’ ಚಿತ್ರದ ಶೂಟಿಂಗ್ ಸಂದರ್ಭ.

ಹಲವು ಕಾರಣಗಳಿಗೆ (ಇಳಯರಾಜಾರ ಸಂಗೀತ ಮಾತ್ರವಲ್ಲದೇ) ‘ದಳಪತಿ’ ಇಂದಿಗೂ ಇಷ್ಟವಾಗುತ್ತದೆ. ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲಿ ನಡೆಯಿತು. ಶ್ರೀರಂಗಪಟ್ಟಣ, ಮೇಲುಕೋಟೆಗಳಲ್ಲೂ ಚಿತ್ರಿತವಾಯಿತು. ಸಂತೋಷ್ ಶಿವನ್ ರ ಕೈಚಳಕದಲ್ಲಿ ಮೈಸೂರು ಚಿತ್ರಿತವಾಗಿರುವ ಪರಿ, ನೋಡಿಯೇ ತೀರಬೇಕು. ’ದೇವರಾಜ ಮಾರ್ಕೆಟ್’ ನ ತದ್ರೂಪಿ ಸೆಟ್ ಅನ್ನು ಕಲಾ ನಿರ್ದೇಶಕ ತೋಟ ತರಣಿ (ಕನ್ನಡಿಗರು) ಚೆನ್ನೈ ನ ಸ್ಟೂಡಿಯೋದಲ್ಲಿ ಸೃಷ್ಟಿಸಿದ್ದರು. ಸುರೇಶ್ ಅರಸ್ ರ ಸಂಕಲನ ಚಿತ್ರಕ್ಕೆ ರೋಚಕತೆ ತಂದಿತ್ತು…

ದಶಕಗಳ ಹಿಂದೆ ಶಾಮ್ ಬೆನೆಗಲ್ ರ ’ಕಲಿಯುಗ್’ ನೋಡಿದ್ದ ಮಣಿರತ್ನಂಗೆ, ‘ಮಹಾಭಾರತ’ ಆಧರಿಸಿ ಚಿತ್ರ ಮಾಡಬೇಕೆಂಬ ಆಲೋಚನೆ ಆರಂಭವಾಗಿತ್ತು. ಬೆನೆಗಲ್ ರ ಆ ಜನಪ್ರಿಯ ಚಿತ್ರದಲ್ಲಿ ಕರ್ಣ’ನನ್ನು ಹೋಲುವ ಕರಣ್ (ಶಶಿಕಪೂರ್), ಒಂದು ಪಾತ್ರವಾಗಿ ಬಂದುಹೋಗುತ್ತಾರೆ. ಅಲ್ಲದೇ ಬೆನೆಗಲ್ ರ ಆ ಚಿತ್ರ ಎರಡು ಸಂಸಾರಗಳ ನಡುವಿನ ಕಾದಾಟದ ಕಥೆ ಹೊಂದಿತ್ತು. ತಾವ್ಯಾಕೆ ‘ಕರ್ಣ’ನನ್ನೇ ಪ್ರಮುಖ ಪಾತ್ರ ಮಾಡಿ ಚಿತ್ರಿಸಬಾರದು ಎಂಬ ಯೋಚನೆ ಬಂದಾಗಿನಿಂದ ‘ದಳಪತಿ’ಯ ಕಥೆಯನ್ನು ಮಣಿರತ್ನಂ ಬರೆಯಲಾರಂಭಿಸಿದರು.

ಆಗಿನ್ನೂ ಅವರಿಗೆ ರಜನೀಕಾಂತ್ ಪರಿಚಯವೂ ಆಗಿರಲಿಲ್ಲ  :-). ತಮ್ಮ ಅಣ್ಣ ವೆಂಕಟೇಶ್ವರನ್ ಮೂಲಕ ಪರಿಚಯಿಸಿಕೊಂಡ ಮಣಿರತ್ನಂ, ದಳಪತಿಯ ಪ್ರಮುಖ ಪಾತ್ರಕ್ಕೆ ರಜನಿಕಾಂತ್ ರನ್ನು ಒಪ್ಪಿಸುತ್ತಾರೆ. ತಮಿಳುನಾಡಿನಲ್ಲಿ ರಜನಿಕಾಂತ್ ಚಿತ್ರವೊಂದನ್ನು ಚಿತ್ರೀಕರಿಸುವುದು ಆಗ ಬಹಳ ಕಷ್ಟಸಾಧ್ಯದ ಮಾತಾಗಿತ್ತು. ರಜನಿಕಾಂತ್ ಜನಪ್ರಿಯತೆಯ ಶಿಖರದಲ್ಲಿದ್ದರು. ಅಲ್ಲದೇ ಚಿತ್ರದ ‘ಮೂಡ್’ ಗೆ ತಮಿಳುನಾಡು ಸರಿಹೊಂದುತ್ತಿರಲಿಲ್ಲ. ಮಣಿರತ್ನಂ ಗೆ ಮೈಸೂರು ಬಹಳ ಇಷ್ಟವಾಗಿತ್ತು. ತಮ್ಮ ಸ್ಕ್ರಿಪ್ಟ್ ಗೆ ಮೈಸೂರು ಸುತ್ತಮುತ್ತಲಿನ ಪ್ರದೇಶ ಹೇಳಿಮಾಡಿಸಿದಂತಿತ್ತು. ರಜನಿ ಕೂಡಾ ಮೈಸೂರುಪ್ರಿಯರೇ. ನಂತರ ನಡೆದಿದ್ದು ಇತಿಹಾಸ.

ನಾವುಗಳೆಲ್ಲಾ ಲೆಕ್ಕವಿಲ್ಲದಷ್ಟು ಸಲ ಅಲೆದ ಸಯ್ಯಾಜಿ ರಾವ್ ರಸ್ತೆ, ದೇವರಾಜ ಮಾರ್ಕೆಟ್, ನ್ಯೂಸ್ ಪೇಪರ್ ಹೌಸ್ ನ ಸುತ್ತಮುತ್ತಲ ಜಾಗಗಳು, ನ್ಯೂ ಸ್ಟಾಚ್ಯೂ ಚೌಕ, ಮಿಷನ್ ಆಸ್ಪತ್ರೆಯ ಪ್ರದೇಶಗಳನ್ನೆಲ್ಲಾ ಚಿತ್ರದಲ್ಲಿ ಕಂಡಾಗ, ಮಣಿರತ್ನಂ ಬಗ್ಗೆ ಹೊಟ್ಟೆ ಉರಿಯಲಾರಂಭಿಸಿತ್ತು.

ನಂಜನಗೂಡಿನ ಬಳಿಯ ಇಂಡಾಲ್ ನಲ್ಲಿ ಅಂದು ಮೊದಲ ಶಿಫ್ಟ್ ನಲ್ಲಿದ್ದೆ. ಬೆಳಗ್ಗೆ ನಾಲ್ಕೂ ಮುಕ್ಕಾಲು ಘಂಟೆಗೆ ವ್ಯಾನ್ ನಲ್ಲಿ ಕುಳಿತು, ನಜ಼ರ್ ಬಾದ್ ಬಳಿ ಗೆಳೆಯ ರವಿಶಂಕರ್ ನನ್ನು ಹತ್ತಿಸಿಕೊಂಡು ಗೀತಾ ಬುಕ್ ಹೌಸ್ ನ ಮುಂದೆ ಬಂದಾಗ ನನಗೆ ಅರೆನಿದ್ದೆ. ‘ರಾಘವ..ಆ ಬಡ್ಡೆತ್ತದ್ದನ್ನ ನೋಡು.. ರಜನೀಕಾಂತ್ ಅಂತ ತಿಳ್ಕೊಂಡ್ ಬಿಟ್ಟಿದ್ದಾನೆ.. ಸ್ಟೈಲ್ ಬೇರೆ ಕೇಡು..’ ಎಂದ.. ಕಣ್ಣು ಬಿಟ್ಟು ನೋಡಿದೆ.. ಯಾವುದೋ ಶೂಟಿಂಗ್ ಎಂದು ತಿಳಿಯಿತು. ವ್ಯಕ್ತಿಯೊಬ್ಬನನ್ನು ಜೀವಂತ ಸುಡುವ ದೃಶ್ಯ.. ಕಡ್ಡಿ ಗೀರಿ ಕೃತಕ ಬೆಂಕಿ ಹತ್ತಿದ ಕ್ಷಣಾರ್ಧದಲ್ಲಿ ‘ಕಟ್’ ಎಂಬ ಆರ್ತನಾದ.. ಒಡನೆಯೇ ನಿರ್ದೇಶಕರ ಸಹಾಯಕರು ಗೋಣೀಚೀಲ ವನ್ನು ಆ ವ್ಯಕ್ತಿಯ ಸುತ್ತೆಲ್ಲಾ ಸುತ್ತಿ ಬೆಂಕಿ ಆರಿಸುತ್ತಿದ್ದರು. ನಮ್ಮ ವ್ಯಾನ್ ಒಂದೆರಡು ನಿಮಿಷ ಅಲ್ಲಿ ನಿಲ್ಲಿಸಿ ನಂತರ ನಂಜನಗೂಡಿನ ಕಡೆ ಹೊರಟಿತು.

ಫೇಸ್ ಬುಕ್ ನಿಂದ ನೇರ ಪ್ರಸಾರ..

ಮಾರನೆಯ ದಿನ ‘ಮೈಸೂರು ಮಿತ್ರ’ ದಲ್ಲಿ ಅದೊಂದು ಮಣಿರತ್ನಂ ಚಿತ್ರವೆಂದೂ, ರವಿಶಂಕರ ಕಂಡ ಆ ‘ಬಡ್ಡೆತ್ತದು’ ಮತ್ಯಾರೂ ಅಲ್ಲದೇ ಸಾಕ್ಷಾತ್ ರಜನೀಕಾಂತ್ ಆಗಿದ್ದುದು ತಿಳಿದಾಗ ಅಚ್ಚರಿಯಾಯಿತು. ರವಿಶಂಕರ್ ಖಿನ್ನನಾಗಿದ್ದ. ‘ಒಂದ್ ಹತ್ ನಿಂಶ ಗಾಡಿ ಸಿಲ್ಲಿಸ್ ನೋಡ್ಬೌದಾಗಿತ್ತು’ ಎಂದು ಗೊಣಗಾಡಿದ್ದ. ಕೆಲ ತಿಂಗಳ ನಂತರ ಮೈಸೂರಿನ ‘ಶ್ಯಾಮ್ ಸುಂದರ್’ (ರೀಜೆನ್ಸಿ) ಯಲ್ಲಿ ‘ದಳಪತಿ’ ನೋಡಿದಾಗ ಮಣಿರತ್ನಂ ಬಗ್ಗೆ ಆದರ ಮೂಡಿತು.

‘ಸಿನಿಮಾಟೋಗ್ರಫಿ’ ಯ ಸೂಕ್ಷ್ಮಗಳನ್ನು ಗಮನಿಸಲು ಆರಂಭಿಸಿದ್ದೇ ’ದಳಪತಿ’ ಚಿತ್ರದಿಂದ. ನನ್ನ ಪ್ರಕಾರ, ರಜನೀಕಾಂತ್ ನಂತರ ಆ ಚಿತ್ರದ ಹೀರೋ ಸಂತೋಷ್ ಶಿವನ್. ‘ಬ್ಯಾಕ್ ಲಿಟ್’ ತಂತ್ರಕ್ಕೆ ಅರ್ಥ ತಂದದ್ದು ಶ್ರೀರಾಮ್ ಮತ್ತು ಶಿವನ್ ಎಂದರೆ ಅತಿಶಯೋಕ್ತಿಯಲ್ಲ. ಮಮ್ಮುಟಿ-ರಜನೀಕಾಂತ್, ಶ್ರೀವಿದ್ಯಾ-ರಜನೀಕಾಂತ್ ರನ್ನು ಒಳಗೊಂಡ ದೃಶ್ಯಗಳನ್ನು ಚಿತ್ರೀಕರಿಸಿರುವ ರೀತಿ ಗಮನಿಸಿದಾಗ, ನೆರಳು-ಬೆಳಕಿನೊಂದಿಗೆ ‘ಸಂಭಾಷಿಸುವ’ ಶಿವನ್ ತರದ ತಂತ್ರಜ್ಞರ ಬಗ್ಗೆ ಗೌರವ ಹೆಚ್ಚುತ್ತದೆ.

ಮಮ್ಮುಟಿ ತನ್ನ ಧಾಂಡಿಗಪಡೆಯೊಂದಿಗೆ ಮೊದಲಬಾರಿ ರಜನೀಕಾಂತ್ ನನ್ನು ಸಂಧಿಸಿ ‘ಧಮಕಿ’ ಹಾಕುವ, ಮಳೆಯಲ್ಲಿ ಚಿತ್ರೀಕರಿಸಿದ ಆ ದೃಶ್ಯ ಪುಳಕವಾಗಿಸಿತ್ತು. ಆದರೂ ’ಮಳೆ’ ಒಂದು ರೂಪಕವಾಗಿ ಇಲ್ಲಿ ಸೋಲುತ್ತದೆ. ೨೦೦೨ ರಲ್ಲಿ ಟಾಮ್ ಹ್ಯಾಂಕ್ಸ್ ನಟಿಸಿದ ಸ್ಯಾಮ್ ಮೆಂಡಿಸ್ ನಿರ್ದೇಶಿಸಿದ ಭೂಗತ ಹಿನ್ನಲೆಯ “Road to Perdition” ನಲ್ಲಿ ಮಳೆಯನ್ನು ಅದ್ಭುತ ರೂಪಕವಾಗಿಸಿದ್ದಾರೆ, ಆ ಚಿತ್ರದ ಛಾಯಾಗ್ರಾಹಕ ಕೊನ್ರಾಡ್ ಹಾಲ್. ಈ ಚಿತ್ರಕ್ಕಾಗಿ ಅವರು ಆಸ್ಕರ್ ಪ್ರಶಸ್ತಿಗೆ ಭಾಜನರಾದರು. ರಜನಿ-ಕಮಲ್ ರಂತಹ ದೈತ್ಯರ ‘ಸಿಂಹೀಕರಣ’ (Lionization) ಮಾಡುವ ಭರದಲ್ಲಿ ನಮ್ಮ ನಿರ್ದೇಶಕ-ತಂತ್ರಜ್ಞರು ಕೆಲವು ಸೂಕ್ಷ್ಮಗಳನ್ನು ಮರೆಮಾಚಿಬಿಡುವುದು ಅಚ್ಚರಿಯಾಗುತ್ತದೆ.

ಹಾಗೆಂದು ಚಿತ್ರದಲ್ಲಿ ಮಣಿರತ್ನಂ ಸ್ಪರ್ಶಕ್ಕೇನೂ ಬರವಿಲ್ಲ. ಕರ್ಣನನ್ನು ಆಧರಿಸಿದ ಈ ಚಿತ್ರದಲ್ಲಿ ‘ಸೂರ್ಯ’ನನ್ನು ಬಳಸಿಕೊಂಡಿರುವ ಪರಿ ಪ್ರಶಂಸಾರ್ಹ. ವಿವಾಹಪೂರ್ವದಲ್ಲಿ ಹುಟ್ಟಿದ ಮಗುವನ್ನು ಶ್ರೀವಿದ್ಯಾ ರೈಲು ಬೋಗಿಯಲ್ಲಿಟ್ಟು ಸಾಗಹಾಕುವಾಗ ಸೂರ್ಯೋದಯದ ದೃಶ್ಯವಿದೆ. ನಂತರ ರಜನೀಕಾಂತ್, ಶ್ರೀವಿದ್ಯಾರ ಪತಿ ಪಾತ್ರಧಾರಿ (ಜಯಶಂಕರ್) ಯನ್ನು ಭೇಟಿಯಾಗುವಾಗ ಸೂರ್ಯಾಸ್ತದ ದೃಶ್ಯವಿದೆ. ‘ಹೋಳಿ’ ಹಬ್ಬದ ಆಚರಣೆಯನ್ನು ಕಥೆಗೆ ಪೂರಕವಾಗಿ ಬಳಸಿದ್ದಾರೆ.

ಪತ್ರಕರ್ತ- ಸಿನಿ ವಿಮರ್ಶಕ ಭಾರದ್ವಾಜ್ ರಂಗನ್, ತಾವು ಮಣಿರತ್ನಂರೊಡನೆ ನಡೆಸಿದ ಸಂದರ್ಶನಗಳನ್ನು “Conversations with Maniratnam” ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ’ದಳಪತಿ’ ಗಾಗಿ ಅವರೊಂದಿಗಿನ ಸಂದರ್ಶನಕ್ಕೇ ಒಂದು ಅಧ್ಯಾಯವಿದೆ.

ರಂಗನ್ ರ ‘ಪತ್ರಕರ್ತ-ಸಹಜ’ ಕೀಟಲೆ ಪ್ರಶ್ನೆಗಳಿಗೆ ಮಣಿರತ್ನಂ ರೇಗಿದ್ದಾರೆ. ಮಣಿರತ್ನಂರ ಪ್ರತಿಭೆಯ ಅನಾವರಣ, ಅವರ ತಕ್ಕ ಮಟ್ಟಿನ ಸ್ತುತಿಯೇ ಹೆಚ್ಚಿದ್ದರೂ ಈ ಕೃತಿ ಸಂಗ್ರಹಯೋಗ್ಯ. ಮಣಿರತ್ನಂ ರ ಕಥಾ ಸಂವಿಧಾನ, ನಿರೂಪಣೆಗಳ ಬಗ್ಗೆ ರಂಗನ್ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಮಣಿರತ್ನಂ ಎಷ್ಟು ಎಚ್ಚರದ, ಸ್ವಪ್ರತಿಷ್ಟೆಯ, ಆದರೆ ಅಷ್ಟೇ ಶಿಸ್ತಿನ ನಿರ್ದೇಶಕ ಎಂಬುದು ಕೃತಿಯಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

“ಮಹಾಭಾರತದ ಕಥೆಯಾದ್ದರಿಂದ ನಿಮಗೇನೂ ಅಷ್ಟು ಕಷ್ಟವಾಗಲಿಲ್ಲ. ಪ್ರೇಕ್ಷಕನಿಗೆ ಮೊದಲೇ ಕಥೆ ಗೊತ್ತಿರುತ್ತದೆ. ಉದಾಹರಣೆಗೆ ರಜನಿಕಾಂತ್ ರನ್ನು ಭೇಟಿಯಾಗುವ ಮಮ್ಮುಟಿ, ಕ್ಷಿಪ್ರವಾಗಿಯೇ ಅವನ ಪ್ರಾಣ ಮಿತ್ರನಾಗಿಬಿಡುತ್ತಾನಲ್ಲ.. ಜನಕ್ಕೆ ಇದು ಅಚ್ಚರಿ ಅಂತ ಏನೂ ಅನಿಸಲ್ಲ… ಕಾರಣ ಇದಕ್ಕೆ ಮಹಾಭಾರತದ ಕರ್ಣ-ದುರ್ಯೋಧನರ ಹಿನ್ನಲೆ ಇದೆ.. ” ಎಂಬ ರಂಗನ್ ರ ಪ್ರಶ್ನೆಗೆ ಮಣಿರತ್ನಂ ಹಾರಿಕೆಯ ಉತ್ತರ ನೀಡುತ್ತಾರೆ.

“ಈ ತರದ ತಂತ್ರ ನಮಗೆ ಹೇಳಿಕೊಟ್ಟಿದ್ದು ಗೊಡಾರ್ಡ್.. ಒಬ್ಬ ವ್ಯಕ್ತಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುವ ದೃಶ್ಯ ದಲ್ಲಿ, ಅವನು ಮೇಲೆದ್ದು, ಮನೆಯ ಹೊರಗೆ ಬಂದು, ಕಾರು ಹತ್ತಿ, ಮತ್ತೊಂದು ಜಾಗದವರೆಗೂ ಡ್ರೈವ್ ಮಾಡುತ್ತಾ ಹೋಗಿ, ಕೆಳಗಿಳಿಯುವವರೆಗೂ ಚಿತ್ರಿಸಬೇಕಾದ ಅವಶ್ಯಕತೆ ಇಲ್ಲ. ಅವನು ಎರಡು ಜಾಗಗಳಿಲ್ಲಿರುವಂತಹ ಎರಡು ಫ್ರೇಮ್ ಗಳಿದ್ದರೆ ಸಾಕು..” ಎನ್ನುವ ಮಣಿರತ್ನಂ, ‘ಸುಂದರಿ ಕಣ್ಣಾಲ್ ಒರು ಸೇಯ್ತಿ’ ಹಾಡಿನಲ್ಲಿ ‘ಸಮುರಾಯ್’ ಕೋನವಿರುವುದರ ಬಗ್ಗೆ ಕೇಳಿದಾಗ “that’s just my fascination with kurosaawa” ಎನ್ನುತ್ತಾರೆ. ಹೀಗೆ ಹಲವಾರು ಇತರ ’ಬುದ್ದಿವಂತ’ ನಿರ್ದೇಶಕರುಗಳಂತೆಯೇ ಮಣಿರತ್ನಮ್ ಕೂಡಾ ಕುರೊಸಾವ, ಫೆಲಿನಿ, ಗೊಡಾರ್ಡ್ ಗಳನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಉಲ್ಲೇಖಿಸುತ್ತಾರೆ.

ಭೂಗತಪಾತಕಿ ಕುರಿತಾದ ಚಿತ್ರಕ್ಕೆ ಮಹಾಭಾರತದ ಲೇಪಮಾಡಿ, ’ಭೂಗತ’ ಲೋಕವನ್ನು ಹೆಚ್ಚು ತೋರಿಸದೇ, ಮಾನವೀಯ ಸೆಲೆಯಲ್ಲಿ ಇಡೀ ಕಥೆಯನ್ನು ಚಿತ್ರಿಸಿರುವ ಮಣಿರತ್ನಂ, ನಿರ್ದೇಶಕರಾಗಿ ಇಷ್ಟವಾಗುವುದು ಹೀಗೆ…

1 Response

  1. Raghavan Chakravarthy says:

    Thanks GN Mohan Sir…

Leave a Reply

%d bloggers like this: