ಓಹ್! ಕಂಗನಾ..

 

 

ಕಂಗನಾ ಎಂಬ ಕೆಂಡಸಂಪಿಗೆಯೂ ಲಾಲೂ ಎನ್ನುವ ದಂಡಪಿಂಡನೂ

ರಾಜೀವ ನಾರಾಯಣ ನಾಯಕ /  ಮುಂಬಯಿ  

 

 

ಮನುಷ್ಯನು ತನ್ನ ಸಂತಾನದ, ವಾರಸುದಾರರ ಪ್ರಗತಿಯನ್ನೂ ಉನ್ನತಿಯನ್ನೂ ಬಯಸುವುದು ಮತ್ತು ಅದಕ್ಕಾಗಿ ಪೂರಕ ವಾತಾವರಣ ಒದಗಿಸುವುದು ಸಹಜ ವಿದ್ಯಮಾನವೇ ಆಗಿದೆ. ಜಗತ್ತಿನ ಪ್ರತಿಯೊಂದು ಜೀವಿಯೂ ಕೂಡ ಆನುವಂಶೀಯವಾಗಿಯೇ ಸಂತಾನೋತ್ಪತ್ತಿ ಮತ್ತು ವಂಶಾಭಿವೃದ್ಧಿಯ ಹೊಣೆ ಹೊತ್ತಿರುತ್ತದೆ. ತನ್ನ ಪೀಳಿಗೆಯ ಸುಸೂತ್ರ ಮುಂದುವರಿಕೆಗೆ ತನ್ನಿಂದ ಸಾಧ್ಯವಾದಷ್ಟೂ ಕೊಡುಗೆಯನ್ನು ನೀಡುತ್ತದೆ. ಇದು ನಿಸರ್ಗ ನಿರ್ಮಿತವೂ ಹೌದು. ಆದರೆ ಮನುಷ್ಯನಲ್ಲಿ ಮಾತ್ರ ಇದು ವ್ಯಾಮೋಹದ ಹಂತವನ್ನು ತಲುಪುವ ಅನೇಕ ಉದಾಹರಣೆಗಳನ್ನು ನಾವು ಕಾಣುತ್ತೇವೆ.

ಇಂದಿನ ಭಾರತೀಯ ಸಂದರ್ಭದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳು ಸ್ವಹಿತಾಸಕ್ತಿ, ಪುತ್ರವಾತ್ಸಲ್ಯ, ಸ್ವಜನಪಕ್ಷಪಾತದ ಪಿಡುಗಿಗೊಳಗಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಕಾರಣಕ್ಕೆ ಅಪ್ಪಟ ಪ್ರತಿಭೆಗಳು ಪೂರಕ ಬೆಂಬಲವಿಲ್ಲದೇ ಅವಕಾಶಗಳನ್ನು ಕಳೆದುಕೊಳ್ಳುವಂತಾಗುತ್ತದೆ. ಇಂದಿನ ರಾಜಕೀಯ ಕ್ಷೇತ್ರವಂತೂ ಅಯೋಗ್ಯ ಮಕ್ಕಳನ್ನೂ ಅಧಿಕಾರ ಹಾಗೂ ಪ್ರಭಾವ ಬಳಸಿ ಸಾರ್ವಜನಿಕ ರಂಗದಲ್ಲಿ ಮಾನ್ಯಗೊಳಿಸುವ ವೇದಿಕೆಯಾಗಿ ಮಾರ್ಪಡುತ್ತಿದೆ.

ಈ ಲಾಲೂ ಪ್ರಸಾದ ಯಾದವನನ್ನೇ ನೋಡಿ. ಲೋಹಿಯಾ, ಜಯಪ್ರಕಾಶ್ ನಾರಾಯಣರಂಥವರ ವಿಚಾರಧಾರೆಯಲ್ಲಿ ಬೆಳೆದು ಬಂದ ಪ್ರತಿಭಾವಂತ ಈತ. ದೇಶಕ್ಕೆ ಕಾಂಗ್ರೆಸ್ ಹೊರತಾದ ಆಡಳಿತ ಸಾಧ್ಯವಾಗಿಸುವಲ್ಲಿ ಯಶಸ್ವಿಯಾದ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಅಧಿಕಾರದಲ್ಲಿದ್ದಾಗ ದೇಶವು ಕೋಮು ಗಲಬೆಯಿಂದ ಉರಿಯುತ್ತಿದ್ದರೂ ಬಿಹಾರದಲ್ಲಿ ಪರಿಸ್ಥಿಯನ್ನು ನಿಯಂತ್ರಣದಲ್ಲಿಟ್ಟವರು. ರೇಲ್ವೇ ಮಂತ್ರಿಯಾಗಿದ್ದಾಗ ಇಲಾಖೆಯನ್ನು ಲಾಭದಾಯಕವಾಗಿಸಿ ಸಾಕಷ್ಟು ಮಟ್ಟಿಗೆ ದಕ್ಷತೆಯನ್ನು ತೋರಿದವರು.

ಇಂಥ ಪ್ರಚಂಡ ಪ್ರತಿಭೆಯ ಲಾಲೂ ಭ್ರಷ್ಟಾಚಾರದ ಲಾಲಸೆಗೆ ಒಳಗಾದರು. ಭಂಡತನವನ್ನು ಮೈಗೂಡಿಸಿಕೊಂಡರು. ಮೇವು ಹಗರಣದಲ್ಲಿ ಸಿಕ್ಕಿಬಿದ್ದು ಜೈಲಿಗೂ ಹೋದರು. ರಾಜಕೀಯ ಗಂಧಗಾಳಿಯಿಲ್ಲದ, ಅಶಿಕ್ಷಿತ ಪತ್ನಿ ರಾಬ್ಡಿದೇವಿಯನ್ನು  ಮುಖ್ಯಮಂತ್ರಿ ಸ್ಥಾನದಲ್ಲಿ  ಕುಳ್ಳಿಸಿದರು. ಅಧಿಕಾರದ ಮದ ಮತ್ತು ಸ್ವಜನ ವ್ಯಾಮೋಹ ಅವರ ಸಮಾಜವಾದಿ ಸಿದ್ಧಾಂತನ್ನು ಸಮಾಧಿ ಮಾಡಿತು. ಜೈಲಿಗೆ ಹೋದರೂ, ಚುನಾವಣೆಯಲ್ಲಿ ಜನ ಅಧಿಕಾರದಿಂದ ಕೆಳಗಿಳಿಸಿದರೂ ಅವರು ಪಾಠ ಕಲಿಯಲಿಲ್ಲ; ಆತ್ಮಾವಲೋಕನ ಮಾಡಿಕೊಳ್ಳಲಿಲ್ಲ. ಕಳೆದಬಾರಿಯ ಚುನಾವಣೆಯಲ್ಲಿ ಜನ ತಪ್ಪುಗಳನ್ನು ಮರೆತು ಮತ್ತೆ ಅವರನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದರೂ ಜನರ ಕ್ಷಮಾಗುಣವು ಅವರ ಮನ:ಪರಿವರ್ತನೆ ಮಾಡಲಿಲ್ಲ.

ನಿತೀಶಕುಮಾರರ ಸರಕಾರದಲ್ಲಿ ತಮ್ಮ ಇಬ್ಬರು ಮಕ್ಕಳನ್ನು ಮಂತ್ರಿಯನ್ನಾಗಿಸಿದರು. ಆ ವರೆಗೂ ಏನೇನೂ ರಾಜಕೀಯ ಅನುಭವವಿಲ್ಲದ ಒಬ್ಬ ಮಗನನ್ನು ಉಪಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳ್ಳಿಸಿದರು. ಹೋಗಲಿ ಅಂದರೆ, ಡಜನ್ನುಗಟ್ಟಲೆ ಮಕ್ಕಳಿರುವ ಅವರ ಕುಟುಂಬದವರೆಲ್ಲರೂ ಕಂಡಾಪಟ್ಟೆ ಭ್ರಷ್ಟಾಚಾರದಲ್ಲಿ ತೊಡಗಿದರು. ಇದು ಮೇಲ್ಪದರದಲ್ಲಿ ಲಾಲೂವಿನ ಪತನದಂತೆ ಕಂಡರೂ ಸಮಾಜವಾದಿ ಚಿಂತನೆ ಮತ್ತು ಕೋಮು ಸಾಮರಸ್ಯ ಸಿದ್ಧಾಂತಗಳ ಹಿನ್ನಡೆಯೆಂಬುದೇ ಹೆಚ್ಚಿನ ಬೇಸರದ ಸಂಗತಿ.

ಈ ‘ನೆಪೊಟಿಸಮ್’ ಬಗೆಗಿನ ಚರ್ಚೆ ಇತ್ತೀಚೆಗೆ ಬಾಲಿವುಡ್ ನಲ್ಲೂ ಗದ್ದಲ ಮಾಡುತ್ತಿದೆ. ಪ್ರತಿಭಾವಂತ ನಟಿಯಾಗಿರುವ ಕಂಗನಾ ರನಾವತ್ ಎನ್ನುವ ಕೋಲ್ಮಿಂಚಿನಂಥ ನಟಿ ತನ್ನ ಅಭಿನಯ ಸಾಮರ್ಥ್ಯ ಮತ್ತು ಪರಿಶ್ರಮದಿಂದ ಬಾಲಿವುಡ್ಡಿನಲ್ಲಿ ಈಗಾಗಲೇ ಹೆಸರು ಮಾಡಿದ್ದಾಳೆ. ಆಕೆ ಅಭಿನಯಿಸಿದ ಸಿನಿಮಾಗಳು ವಿಮರ್ಶಕರ ಪ್ರಶಂಸೆಯನ್ನೂ ವೀಕ್ಷಕರ ಪ್ರೋತ್ಸಾಹವನ್ನೂ ಪಡೆದಿವೆ. ಕಂಗನಾ ತನ್ನ ವೈಚಾರಿಕ ನಿಲುವುಗಳು ಮತ್ತು  ನೇರ ಮತ್ತು ನಿಷ್ಠುರವಾಗಿ ಅಭಿವ್ಯಕ್ತಿಸುವ ಛಾತಿಯಿಂದಾಗಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾಳೆ.

ಕಳೆದ ವರ್ಷ ಟೈಮ್ಸ್ ಲಿಟರೇಚರ್ ಫೆಸ್ಟಿವಲಿನಲ್ಲಿ ಕಂಗನಾಳೊಂದಿಗಿನ ಮುಖಾಮುಖಿ ಸಂವಾದದ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕನಾಗುವ ಅವಕಾಶ ಈ ಲೇಖಕನಿಗೂ ಸಿಕ್ಕಿತ್ತು.

ಹಿಮಾಚಲ ಪ್ರದೇಶದ ಪಹಾಡಿ ಇಲಾಖೆಯಿಂದ ಬಂದಿರುವ ಈಕೆ ಬಾಲಿವುಡ್ ನಲ್ಲಿ ಯಾರೂ ಗಾಡಫಾದರ್ ಗಳಿಲ್ಲದಿದ್ದರೂ ತನ್ನೊಳಗಿನ ಪ್ರತಿಭೆ ಮತ್ತು ಪರಿಶ್ರಮದಿಂದ ಅದ್ಭುತ ನಟಿಯಾಗಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾಳೆ.  ಸ್ಟಾರ್ ಮಕ್ಕಳೇ ಹಿಂದಿ ಚಿತ್ರರಂಗವನ್ನು ಆಕ್ರಮಿಸಿಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಹೊರಗಿನವರು ಹೆಸರು ಮಾಡಬೇಕಾದರೆ ಅಪಾರ ಪರಿಶ್ರಮ ಬೇಕಾಗುತ್ತದೆ. ಕಪೂರ್, ಖಾನ್ , ಬಚ್ಚನ್ ಗಳ ಮಕ್ಕಳಿಗೆ ಚಿತ್ರರಂಗದ ಪ್ರವೇಶಕ್ಕೆ, ಹೀರೋಗಳಾಗಲಿಕ್ಕೆ ಸುಲಭದಲ್ಲಿ ಒಂದು ವೇದಿಕೆ ನಿರ್ಮಾಣವಾಗಿರುತ್ತದೆ. ಅವರಿಗಿಂತ ಹೆಚ್ಚು ಪ್ರತಿಭಾಶಾಲಿಗಳಿದ್ದರೂ ಬೇರೆಯವರಿಗೆ ಅಂಥ ಅವಕಾಶಗಳು ಸುಲಭವಾಗುವುದಿಲ್ಲ.

ಈ ವಿಷಯವನ್ನೇ ಕಂಗನಾ ಇತ್ತೀಚೆಗೆ ಕರಣ್ ಜೋಹರ್ ಎನ್ನುವ ಬಾಲಿವುಡ್ಡಿನ ನಿರ್ದೇಶಕ ನಿರ್ಮಾಪಕನ ಟಿವಿ ಶೋ ‘ಕಾಫಿ ವಿತ್ ಕರಣ್’’ ಎನ್ನುವ  ಕಾರ್ಯಕ್ರಮದಲ್ಲಿ ನಿರ್ಭಿಡೆಯಿಂದ ಹೇಳಿದ್ದಳು. ಅಷ್ಟೆ ಅಲ್ಲ ಕರಣ್ ಜೋಹರನಿಗೆ ‘ನೀನೂ ನೆಪೊಟಿಸಮ್ಮಿನ ನೇತಾರ’ ಎಂದಿದ್ದಳು. ಆ ಬಗ್ಗೆ ನಂತರ ಸಾಕಷ್ಟು ಚರ್ಚೆಯೂ ನಡೆದು ತಣ್ಣಗಾಗಿತ್ತು.

ಆದರೆ ಕಂಗನಾ ಮಾತು ಈ ಜೋಹರನ ಎದೆಯಲ್ಲಿ ಇನ್ನೂ ಸುಡುತ್ತಿತ್ತು ಅಂತ ಕಾಣುತ್ತದೆ; ಮೊನ್ನೆ ನ್ಯೂಯಾರ್ಕಿನಲ್ಲಿ ನಡೆದ “ಐಫಾ 2017’’ ಎಂಬ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ಕರಣ ಜೋಹರ್, ಬಾಲಿವುಡ್ಡಿನ “ಅನಾಡಿ’’ ಸಾಯಿಫ್ ಅಲಿ ಖಾನ್ ಮತ್ತು  ಹೊಸ ಪಡ್ಡೆಹುಡುಗ ವರುಣ್ ಧವನ್ ಜೊತೆಸೇರಿ  ‘ನೆಪೊಟಿಸಮ್’ ವಿಷಯದ ಮೇಲೆ ಕಂಗನಾಳನ್ನು ಅಣಕಿಸುವ ಪ್ರಯತ್ನ ಮಾಡಿದ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕೆಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ ಬಂದದ್ದರಿಂದ ಮೂವರೂ ಕಂಗನಾಳ ಕ್ಷಮೆ ಕೇಳಬೇಕಾಯಿತು. ಸಾಯಿಫ್ ಅಲಿ ಖಾನ್ ಎಂಬ ನವಾಬ ಪತ್ರ ಮುಖೇನ ಸಮಝಾಯಿಶಿ ನೀಡುವ ಪ್ರಯತ್ನ ಮಾಡಿದ. ಅಭಿನಯವು ಸ್ಟಾರ್ ಮಕ್ಕಳ ಜೀನ್ಸ್ ನಲ್ಲೆ ಇರುತ್ತೆ, ಹಾಗಾಗಿ ಅವರನ್ನು ಮುಂದೆ ತಂದರೆ ತಪ್ಪೇನಿಲ್ಲ ಎಂಬರ್ಥದ ಮಾತಿನಿಂದ  ಸ್ವಜನಪಕ್ಷಪಾತವನ್ನು ಪರೋಕ್ಷವಾಗಿ ಸಮರ್ಥಿಸುವ ಪ್ರಯತ್ನ ಮಾಡಿದ. ಕಲೆಯನ್ನೂ “ಸುರಕ್ಷಿತ ಹೂಡಿಕೆ’ ಯಂಥ ಆರ್ಥಿಕ ನುಡಿಗಟ್ಟುಗಳಲ್ಲಿ  ತೂಗಿ ಉಗಿಸಿಕೊಂಡ.

ಇದೆಲ್ಲ ವಿವಾದಗಳಿಗೆ ಉತ್ತರ ರೂಪದಲ್ಲಿ ಕಂಗನಾ ಬರೆದ ಸುದೀರ್ಘ ಪತ್ರ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದರಲ್ಲಿ ಅವಳು ಮಂಡಿಸಿದ ನಿಖರ, ಸ್ಪಷ್ಟ ವೈಚಾರಿಕತೆಯಿಂದ ಅವಳ ಅಭಿಮಾನಿಗಳಲ್ಲದವರೂ ಹೆಮ್ಮೆಪಟ್ಟರು. ಬರೀ ಬಣ್ಣದ ಬೀಸಣಿಗೆಗಳೇ ತುಂಬಿರುವ ಬಾಲಿವುಡ್ಡಿನ ಸ್ಟಾರ್ ಗಳ ನಡುವೆ ಈಕೆ ಅರಳಿರುವ ಕೆಂಗುಲಾಬಿಯಂತೆ ಕಾಣುತ್ತಾಳೆ!

ತಾರ್ಕಿಕ ಮತ್ತು ನಿಷ್ಠುರ ಬುದ್ಧಿಶಕ್ತಿಗಿಂತ ದುರ್ಬಲ ಭಾವನೆಗಳೇ ನಮ್ಮ ಕೃತ್ಯವನ್ನು ನಿರ್ಧರಿಸುವುದು ಸ್ವಜನಪಕ್ಷಪಾತಕ್ಕೆ ಕಾರಣವಾಗುವ ಮತ್ತು ಅದರಿಂದಾಗಿ ಒಟ್ಟಾರೆ ಮಾನವ ವಿಕಾಸಕ್ಕೆ  ಉಂಟುಮಾಡುವ ಹಾನಿಯನ್ನು ಕಂಗನಾ ವಿಸ್ತಾರವಾಗಿ ಬರೆದಿದ್ದಾಳೆ. ಕಲೆ, ಸಾಹಿತ್ಯ, ಕೌಶಲ್ಯ, ಪರಿಶ್ರಮ, ಅನುಭವ, ಬುದ್ಧಿಮತ್ತೆ, ಕೌತುಕ, ಶಿಸ್ತು, ಪ್ರೇಮ- ಇವೆಲ್ಲ  ವಂಶವಾಹಿನಿಗಳೇ ನಿರ್ಧರಿಸುವುದಾಗಿದ್ದರೆ ಈ ಜಗತ್ತು ಬೇರೇನೇ ಆಗಿರುತ್ತಿತ್ತು. ನಿಸರ್ಗದತ್ತವಾದ ವಂಶವಾಹಿನಿಗಳು ಪಾರಂಪರಿಕವಾಗಿ ಕೆಲವು ಗುಣಗಳನ್ನು ನಮ್ಮಲ್ಲಿ ಅಡಕಗೊಳಿಸುವುದು ಸತ್ಯವಾದರೂ, ನಾವು ಬೆಳೆಯುವ ಪರಿಸರ, ಎದುರಿಸುವ ಸನ್ನಿವೇಶಗಳು, ಅವನ್ನು ಗ್ರಹಿಸುವ ಸಾಮರ್ಥ್ಯ-ಇವೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಪರಿಶ್ರಮ ಮತ್ತು ಅರ್ಪಣಾಭಾವದಿಂದ ಮನುಷ್ಯಚೇತನದ ಅದಮ್ಯಶಕ್ತಿಯನ್ನು ಅನಾವರಣಗೊಳಿಸಿಕೊಳ್ಳುವುದೇ ಎಲ್ಲ ಜೀನಿಯಸ್ ಸಾಧಕರ, ಸಾಧನೆಗಳ ಮರ್ಮವಾಗಿದೆ.

ಈ ಮಾತಿಗೆ ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರರೇ ಸಾಕ್ಷಿ. ಅವರ ಪ್ರತಿಭೆ, ಅಹಂಕಾರವಿಲ್ಲದೇ ಕಲಿಯುವ ಗುಣ ಅವರನ್ನು ಕನ್ನಡ ಚಿತ್ರರಂಗದಲ್ಲಿ ಅಷ್ಟು ಎತ್ತರಕ್ಕೆ ತಲುಪುವಂತೆ ಮಾಡಿತು. ಆದರೆ ಡಾ. ರಾಜಕುಮಾರರ ದೈತ್ಯ ಪ್ರತಿಭೆಯಾಗಲಿ ಕಲಿಯುವ ಶಿಸ್ತಾಗಲಿ ಅವರ ಮಕ್ಕಳಲ್ಲಿ ಆ ಮಟ್ಟದಲ್ಲಿ ಕಾಣುವುದಿಲ್ಲ. ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟಾಗ ರಾಜಕುಮಾರ್ ‘ರಾಜ್ ನಂತರ ಯಾರು ಎಂಬ ಅಭಿಮಾನಿ ದೇವರುಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ’ ಎಂಬರ್ಥದ ಮಾತುಗಳನ್ನು ಆಡಿದ್ದನ್ನು ಅದು ಒಂದು ರೀತಿಯ ‘ನೆಪೊಟಿಸಮ್’ ಎನ್ನುವ ಕಾರಣಕ್ಕೆ ಲಂಕೇಶ್ ಪತ್ರಿಕೆ ಟೀಕಿಸಿತ್ತು.

ಆದರೆ ನಮ್ಮ ತಲೆಮಾರಿನವರ ಚಿಂತನೆಯನ್ನು ರೂಪಿಸಿದ ಲಂಕೇಶ್ ತೀರಿಕೊಂಡಾಗ ಅವರೇ ಶೋಧಿಸಿದ ಪ್ರತಿಭಾವಂತರು ಇರುವಾಗಲೂ ಅಷ್ಟೇನೂ ಅನುಭವವಿಲ್ಲದ ಅವರ ಮಕ್ಕಳು ಪತ್ರಿಕೆಯ ಸಂಪಾದಕರಾದರು! ಶಿವಣ್ಣನಾಗಲಿ ಲಂಕೇಶರ ಮಕ್ಕಳಾಗಲಿ ಮುಂದೆ ಪರಿಶ್ರಮದಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು ಎನ್ನುವ ಮಾತು ಬೇರೆ.

ಬಹುಷ: ನೆಪೊಟಿಸಮ್ ಎನ್ನುವುದು ನಿರ್ಮೂಲನ ಆಗಲಿಕ್ಕಿಲ್ಲ. ಸಿನಿಮಾದಂಥ ಕ್ಷೇತ್ರದಲ್ಲಿ ಅದು ಢಾಳಾಗಿ ಇರುವಾಗಲೂ ಸತತ ಪರಿಶ್ರಮ,ಶಿಸ್ತು,ಅನುಭವದಿಂದ ಕಲಿಯುವ ಮನೋಭಾವ ಇದ್ದರೆ ಅಲ್ಲೂ ಸಾಧನೆಗೈಯುವುದು ಅಸಾಧ್ಯವೇನಲ್ಲ ಎನ್ನುವುದನ್ನು ಕಂಗನಾಳನ್ನು ನೋಡಿಯೇ ಹೇಳಬಹುದು. ಕಂಗನಾಳಂತಹವರ ಸಂತತಿ ಹೆಚ್ಚಾಗಲಿ!

 

3 Responses

  1. ರಾಮಾ ನಾಯಕ says:

    ನೈಜ ಮತ್ತು ಚಿಂತನಾರ್ಹವಾದ ಲೇಖನ. ಸಂಗತಿಯನ್ನು ತೂಗಿ ನೋಡವ ಪರಿ ಮೆಚ್ಚುವಂತಹದ್ದು. ಇಲ್ಲಿಯ ಯಾವ ವಿಚಾರಗಳನ್ನೂ ತೆಗೆದುಹಾಕುವಂತಿಲ್ಲ.

  2. ಒಳ್ಳೆಯ ಲೇಖನ

  3. anupama prasad says:

    ವಂಶವಾಹಿಯಲ್ಲಿ ಬರುವಂತದ್ದು ಕಾಯಿಲೆ ಎಂದು ಶಿರಾಮ ಕಾರಂತರು ಹೇಳಿದ್ದರೆಂದು ಎಲ್ಲೋ ಓದಿದ ನೆನಪು.

Leave a Reply

%d bloggers like this: