ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು!

 

 

 

ಪಾತ್ರದ್ದೋ, ಪಾತ್ರಧಾರಿಯದ್ದೋ?? ಕನ್ನಡಿಯದ್ದು ಕುಹಕದ ನಗು..


ಲಹರಿ ತಂತ್ರಿ 

 

 

 

 

 

ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು! ‘ಪರದೆ ಎಳೆಯುವ ಮುನ್ನ ಮುಖ ತೋರಿಸಬೇಕಲ್ಲ’ ಹೊರಗಿನಿಂದ ಧ್ವನಿಯೊಂದು ಕೇಳಿಬರುತ್ತದೆ.. ಪಾತ್ರಧಾರಿಯಾಗಿಯೇ ಕಾಣಿಸಿಕೊಳ್ಳಬೇಕೇನು?? ಮರುಪ್ರಶ್ನೆಗೆ ಅಲ್ಲಿ ಉತ್ತರವಿಲ್ಲ..

ಬಣ್ಣ ಅಳಿಸದೆಯೇ, ವೇಷ ಕಳಚದೆಯೇ ಸಭೆಯ ಎದುರಿಗೆ ಬಂದು ನಿಲ್ಲುತ್ತೇನೆ..
ಪಾತ್ರದ ಪರಿಚಯಿಕೆ ಪ್ರಾರಂಭ!
ಅಲ್ಲಿಷ್ಟು ಇಲ್ಲಿಷ್ಟು ಗುಸುಗುಸು ಪಿಸುಪಿಸು..
ನಡು ನಡುವೆಯೊಮ್ಮೆ ಚಪ್ಪಾಳೆ. ಹೆಸರು ಕರೆದ ತಕ್ಷಣ ಒಂದಡಿ ಹೆಜ್ಜೆ ಮುಂದಿಟ್ಟು, ಕೈ ಜೋಡಿಸಿ ನಮಸ್ಕರಿಸಿ, ಮುಗುಳ್ನಕ್ಕು… ಹಃ!!
‘ಬೇಗ ಬೇಗ ಬಟ್ಟೆ ಬದಲಾಯಿಸಿ,, ಹೊತ್ತಾಯಿತು ‘ ಮತ್ತದೇ ಹೊರಧ್ವನಿ.
ಕೋಣೆಯೊಲಗಿನ ಕನ್ನಡಿ ಇಣುಕುತ್ತದೆ ಕಣ್ಮುಂದೆ.. ಸ್ತ್ರೀ ಸಹಜ ಗುಣವದು.. ಬಿಡಲಾದೀತೇ? ಕನ್ನಡಿಯಲ್ಲೊಮ್ಮೆ ಪ್ರತಿರೂಪಕ್ಕಾಗಿ ಹುಡುಕುತ್ತೇನೆ..
ಪಾತ್ರದ್ದೋ, ಪಾತ್ರಧಾರಿಯದ್ದೋ?? ಕನ್ನಡಿಯದ್ದು ಕುಹಕದ ನಗು..

ಚೂರು ಕೆದರಿದ ಮುಂಗುರುಳು, ಕಣ್ಣೀರಿಳಿದಿದ್ದರಿಂದಲೋ ಏನೋ ಆಚೀಚೆಯಾದ ಕಾಡಿಗೆ,ಮಾಸಿದ ತುಟಿಯ ರಂಗು,ಅಲ್ಲಲ್ಲಿ ಅಳಿಸಿ ಹೋದ ಮುಖದ ಮೇಕಪ್ಪು, ಬಾಡಿಹೋಗಿ ಭಾರವೆನಿಸುತ್ತಿರುವ ಮುಡಿದ ಹೂವು..
ಕನ್ನಡಿ ಪಾತ್ರವನ್ನಷ್ಟೇ ಪ್ರತಿಬಿಂಬಿಸುತ್ತದೆ,,, ಆದರೆ ಕಣ್ಣಿನದ್ದೋ.. ಅದು ಪಾತ್ರದಾಚೆಗಿನ ಹುಡುಕಾಟ!

ಪಾತ್ರದೊಂದಿಗಿನ ಬದುಕೇ ಚಂದವಿತ್ತಲ್ಲವಾ ಎನಿಸುವಷ್ಟರಲ್ಲಿ ವಾಸ್ತವ ಬಾಗಿಲು ದಾಟಿ ಒಳಬರುತ್ತದೆ..
ಇಷ್ಟವಿಲ್ಲದಿದ್ದರೂ ಇದ್ದಂತೆ ನಟಿಸಿ ಸುಮ್ಮನೇ ಹೆಜ್ಜೆ ಹಾಕುತ್ತೇನೆ.
ಮುಂದಿನದ್ದೆಲ್ಲವೂ ಬಣ್ಣ ಹಚ್ಚದೇ ನಟಿಸಬೇಕಾದ ಬದುಕ ಪಾತ್ರ!

ನನ್ನೊಳಗು ತೆರವುಗೊಳ್ಳುವುದು ರಂಗದ ಮೇಲೆಯೇ ಎಂಬುದು ಮತ್ತೆ ಮತ್ತೆ ಅರಿವಾಗುತ್ತದೆ.
ಕಾಯತೊಡಗುತ್ತೇನೆ ನಾನು!
ಬಣ್ಣ ಹಚ್ಚಲು, ವೇಷ ಧರಿಸಲು…

6 Responses

 1. C. N. Ramachandran says:

  ಪ್ರಿಯ ಮೋಹನ್, ಸಂದ್ಯಾ ಅವರಿಗೆ:
  ನಮಸ್ಕಾರ. ನಿಮ್ಮ ’ಅವಧಿ’ಯ ಹೊಸರೂಪವನ್ನು ನೋಡಿ, ಓದಿ, ತುಂಬಾ ಸಂತೋಷವಾಯಿತು; ಮೊದಲಿಗಿಂತ ಹೆಚ್ಚು ಸ್ಥಳ ಸಿಕ್ಕಿರುವುದರಿಂದ ಹೆಚ್ಚಿನ ಲೇಖನಗಳಿಗೆ ಅವಕಾಶವಿದೆ. ಇಡೀ ರೂಪ ಆಕರ್ಷಕವಾಗಿದೆ. ಹಾರ್ದಿಕ ಅಭಿನಂದನೆಗಳು.
  ಸಿ. ಎನ್. ರಾಮಚಂದ್ರನ್

 2. chandra aithal says:

  ಲಹರಿ ತಂತ್ರಿ ಅವರಿಗೆ,
  ನಿಮ್ಮ “ಪಾತ್ರದ್ದೋ, ಪಾತ್ರದಾರಿಯದ್ದೋ” ಲೇಖನ ತನ್ನ ಕಾವ್ಯಮಯತೆಯಿ೦ದಾಗಿ ಅಚ್ಚರಿ ಮೂಡಿಸುತ್ತದೆ. ವಾಸ್ತವ ಮತ್ತು ಬಣ್ಣದ ಲೋಕ ಇವೆರಡನ್ನೂ ಕೊಂಡಿ ಹಾಕಿಸುವ ಚಮತ್ಕಾರ! ಅದನ್ನು ಕಾಣಿಸಿದ್ದಕ್ಕೆ ಧನ್ಯವಾದಗಳು.
  ಚಂದ್ರ ಐತಾಳ
  ಲಾಸ್ ಎಂಜಲ್ಸ್

 3. Lahari Thanthri says:

  Dhanyavada ☺

 4. Sandhya says:

  ಬಣ್ಣದೊಳಗೆ ಪಾತ್ರ ಪಾತ್ರಧಾರಿ ಎರಡೂ ಒಂದೇ ಬಣ್ಣಕಳಚಿದ ನಂತರ ಪಾತ್ರ ಪಾತ್ರಧಾರಿ ಬೇರ್ಪಡುವ ಮನಸ್ಥಿತಿ ತುಂಬಾ ಚೆನ್ನಾಗಿ ಬಣ್ಣಿಸಿದ್ಧಿರ ಲಹರಿ ತಂತ್ರಿ. ಅಭಿನಂದನೆಗಳು!
  ಸಂಧ್ಯಾ

 5. Ranjana Bhat says:

  ಸೂಪರ್…ಭಾವಗಳೇ ಮಾತನಾಡಿದಂತಿದೆ…

Leave a Reply

%d bloggers like this: