ಸನತ್ ಕುಮಾರ್ ಗುಣಮುಖರಾಗಿದ್ದಾರೆ. ..ಮನಸ್ಸೀಗ ನಿರಾಳ

 

 

 

ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ
..ಮನಸ್ಸೀಗ ನಿರಾಳ

(ಆಗ 4 ತಿಂಗಳು, ಈಗ 12 ದಿನಗಳು)

-ಶಶಿಕಲಾ ಬೆಳಗಲಿ

 

 

ಬರೋಬ್ಬರಿ 10 ವರ್ಷಗಳ ಹಿಂದೆ ಕವಿದಿದ್ದ ಆತಂಕದ ಕಾರ್ಮೋಡ ಈಗಷ್ಟೇ ಮತ್ತೊಮ್ಮೆ ಸರಿದು ಹೋಯಿತು. ಕ್ಷಣಕ್ಷಣಕ್ಕೂ ಕಾಡುವ ದುಗುಡ, ಆವರಿಸಿಕೊಳ್ಳುವ ಭೀತಿ ಪುನಃ ಅನುಭವಕ್ಕೆ ಬಂತು.

ಏನಾಗುತ್ತೋ ಎಂಬ ಅಳುಕು ಮನದೊಳಗೆ ಗಾಢವಾಗಿ ಕಾಡಿದರೂ ಎಲ್ಲವೂ ಸರಿಹೋಗುವುದು ಎಂಬ ಪುಟ್ಟ ಧೈರ್ಯ ಕೈಹಿಡಿದು ಮುನ್ನಡೆಸಿತು. ಹಿರಿಯರಾದ ಕೆ.ಎಸ್.ಪಾರ್ಥಸಾರಥಿ ಅವರು ಧೈರ್ಯ ತುಂಬಿ ನಗುತ್ತ, “ಸತಿ ಸಾವಿತ್ರಿಯಾಗಿ ಹೋರಾಡಿ ಪುನಃ ಪತಿಯನ್ನು ಉಳಿಸಿಕೊಂಡೆ” ಎಂದು ಹೇಳಿದ ಮಾತು ಪದೇ ಪದೇ ನೆನಪಾಯಿತು. ಅನಾರೋಗ್ಯದಿಂದ ಬಳಲಿದ ಸನತ್ ಕುಮಾರ ಅವರು ಗುಣಮುಖರಾದರು.

ಅತಿಯಾದ ಮಧುಮೇಹ ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಯಿಂದ 12 ದಿನ ನರಳಿದ ಸನತ್ ಕುಮಾರ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಕರೆ ತಂದಾಗ, ಮನಸ್ಸು ನಿರಾಳವಾಯಿತು. 12 ದಿನಗಳಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸಹಜ ಶಕ್ತಿಯನ್ನು ಕಳೆದುಕೊಂಡ ಅವರ ಮೊಗದಲ್ಲಿ ಕಿರುನಗೆ ಕಂಡಾಗ, ಸಮಾಧಾನವಾಯಿತು. 12 ದಿನಗಳು ಹೇಗೆ ಕಳೆದವೋ ಗೊತ್ತಿಲ್ಲ, ಆದರೆ ಒಂದೊಂದು ದಿನವೂ ಒಂದೊಂದು ರೀತಿ ಸವಾಲಾಗಿ ಕಾಡದೇ ಇರಲಿಲ್ಲ. ಅವರನ್ನು ಮನೆಗೆ ಕರೆದೊಯ್ಯಬಹುದೆಂದು ವೈದ್ಯರು ಹೇಳುವವರೆಗೆ, ಜೀವದಲ್ಲಿ ಜೀವ ಇರಲಿಲ್ಲ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿರುವ ಶತಾಯುಷಿ ಅತ್ತೆಯವರನ್ನು ಕಾಣಲು ನಾನು, ಸನತ್ಕುಮಾರ ಮತ್ತು ರಾಹುಲ ಜುಲೈ 24ರಂದು ಕಲಬುರ್ಗಿಯಿಂದ ಬಿಜಾಪುರಕ್ಕೆ ಪ್ರಯಾಣ ಬೆಳೆಸಿದೆವು. ಸಾವಳಗಿಗೆ ಹೋಗುವ ಮುನ್ನ ಸಹಜ ಆರೋಗ್ಯ ಪರೀಕ್ಷೆಗೆಂದು ಬಿಜಾಪುರದ ಆಯುಷ್ ಆಸ್ಪತ್ರೆಗೆ ತೆರಳಿದಾಗ, ಅಲ್ಲಿನ ಮುಖ್ಯಸ್ಥರಾದ ಡಾ. ನಿತಿನ್ ಅಗರವಾಲ್ ಹೇಳಿದ್ದು ಒಂದು ಮಾತು: ಕಿಡ್ನಿ ಮತ್ತು ಅತಿ ಮಧುಮೇಹ ಸಂಬಂಧಿಸಿದ ಗಂಭೀರ ಸಮಸ್ಯೆಯಿದ್ದಂತೆ. ತಡ ಮಾಡದೇ ತಕ್ಷಣವೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವುದು ಒಳಿತು. ನಿಮ್ಮ ಆರೋಗ್ಯ ದೃಷ್ಟಿಯಿಂದ ಚಿಕಿತ್ಸೆ ಅಗತ್ಯ.

ಕೆಲ ಹೊತ್ತಿನಲ್ಲಿ ಬಂದ ರಕ್ತ ಮತ್ತು ಮೂತ್ರ ಸಂಬಂಧಿಸಿದ ವರದಿಯು ಮಧುಮೇಹದ ಪ್ರಮಾಣ 500 ಗಡಿ ಮೀರಿದೆ ಎಂಬ ಮಾಹಿತಿ ನೀಡಿ ಬೆಚ್ಚಿ ಬೀಳಿಸಿತು. ಮಧುಮೇಹ ಏರಿಕೆ ತಕ್ಷಣವೇ ನಿಯಂತ್ರಿಸದಿದ್ದರೆ, ಅಪಾಯ ಖಚಿತ ಎಂದು ವೈದ್ಯರು ತಿಳಿಸಿದರು. ನೋಡುನೋಡುತ್ತಿದ್ದಂತೆಯೇ ಅಡ್ಮಿಟ್ ಪ್ರಕ್ರಿಯೆ ನೆರವೇರಿತು. ಬಲಗೈಗೆ ಇಂಜೆಕ್ಷನ್ ಚುಚ್ಚಿ, ಕಿರಿದಾದ ಪೈಪ್ ಮೂಲಕ ದೇಹದಲ್ಲಿ ದ್ರವ (ಸಲೈನ್) ಹಾದು ಹೋಗುವಂತೆ ವ್ಯವಸ್ಥೆ ಮಾಡಲಾಯಿತು. ಗಂಟೆಗೊಮ್ಮೆ ವೈದ್ಯರು ಬಂದು ಆರೋಗ್ಯ ಪರೀಕ್ಷಿಸತೊಡಗಿದರು. ಒಂದೆರಡು ದಿನದಲ್ಲೇ ಚಿಕಿತ್ಸೆ ಪ್ರಕ್ರಿಯೆ ಮುಗಿಯಬಹುದು ಎಂಬ ನಿರೀಕ್ಷೆಯಿತ್ತು. ಮೂರನೇ ದಿನದ ಆರೋಗ್ಯ ಸ್ಥಿತಿ ಪರೀಕ್ಷಿಸಿ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯ ಮತ್ತು ಅನಿವಾರ್ಯ ಎಂದರು.

ಒಂದು ಕ್ಷಣಕ್ಕೆ ನಿಂತ ನೆಲ ಕುಸಿದಂತಾಯಿತು. ಆದರೂ ಧೈರ್ಯ ತಂದುಕೊಂಡೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸರಳವಾಗಿ ಶಸ್ತ್ರಚಿಕಿತ್ಸೆ ನಡೆಯುವುದೆಂದು ಹೇಳಿದರೂ ಯಾಕೋ ಮನಸ್ಸು ಚಡಪಡಿಸುತ್ತಲೇ ಇತ್ತು. ಸುಮಾರು ಅರ್ಧ ಗಂಟೆ ನಂತರ ಆಯಾಸಗೊಂಡ ಮುಖದಲ್ಲಿ ಕಣ್ಣರಳಿಸಿಕೊಂಡು ಸನತ್ಕುಮಾರ ಅವರು ಆಪರೇಷನ್ ಥಿಯೇಟ ರ್ ನಿಂದ ವೀಲ್ ಚೇರ್ ನಲ್ಲಿ ಹೊರಬಂದಾಗ, ಆತಂಕದಿಂದ ಭಾರವಾಗಿದ್ದ ಮನಸ್ಸು ಹಗುರವಾಯಿತು. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಡಾ. ವಿವೇಕಾನಂದ ಕಟ್ಟಿ ಅವರು ಸಮಸ್ಯೆ ವಿವರಿಸಿದರು. ಯೂರಿನ್ ಇನ್ಫೆಕ್ಷನ್ (ಮೂತ್ರ ಸಂಬಂಧಿ ಕಾಯಿಲೆ) ಆಗಿದೆ. ಇದರಿಂದ ಕಿಡ್ನಿಗಳ ಸಮರ್ಪಕ ನಿರ್ವಹಣೆಗೆ ಅಡ್ಡಿಯಾಗಿದೆ. ಅವುಗಳ ಸುತ್ತಮುತ್ತ ಆವರಿಸಿಕೊಂಡಿರುವ ಮೂತ್ರದ ಪ್ರಮಾಣವನ್ನು ಹೊರತೆಗೆಯಲು ಸಿಸ್ಟೊಸ್ಕೋಪಿ ಎಂಬ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡುವುದು ಅವಶ್ಯ. ಶಸ್ತ್ರಚಿಕಿತ್ಸೆಗೂ ಮುನ್ನ ಸಾಧ್ಯವಾದಷ್ಟು ಮೂತ್ರವನ್ನು ಕೆಥೆಡ್ರಲ್ ಮೂಲಕ ಹೊರತೆಗೆಯಲು ಪ್ರಯತ್ನಿಸುತ್ತೇವೆ ಎಂದರು.

ನಾಲ್ಕು ದಿನಗಳ ಬಳಿಕ ಸುಮಾರು ಒಂದು ಗಂಟೆ ಸಿಸ್ಟೊಸ್ಕೋಪಿ ಶಸ್ತ್ರಚಿಕಿತ್ಸೆ ನಡೆಯಿತು. ಈ ಸಲ ಸ್ಟ್ರೆಚರ್ನಲ್ಲಿ ಹೊರಬಂದ ಸನತ್ಕುಮಾರ ಅವರನ್ನು ನೇರವಾಗಿ ಐಸಿಯುಗೆ ಕರೆದೊಯ್ಯಲಾಯಿತು. ಅಲ್ಲಿ ಕೆಲ ಗಂಟೆಯವರೆಗೆ ಇರಿಸಿಕೊಂಡ ನಂತರ ಪುನಃ ವಾಡರ್್ಗೆ ಕರೆದೊಯ್ಯಲಾಯಿತು. ಡಾ. ವಿವೇಕಾನಂದ ಕಟ್ಟಿಯವರು ಸಮಾಧಾನದಿಂದ ಶಸ್ತ್ರಚಿಕಿತ್ಸೆಯ ವಿವರಣೆ ನೀಡಿದರು. ಇನ್ನೇನೂ ಆತಂಕಪಡಬೇಕಿಲ್ಲ. ಶಸ್ತಚಿಕಿತ್ಸೆ ಯಶಸ್ವಿಯಾಗಿದೆ. ಇನ್ನೂ ಮೂರು-ನಾಲ್ಕು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದು ಮನೆಗೆ ಕರೆದೊಯ್ಯಿರಿ ಎಂದು ವಿವರಿಸಿದರು. ಇಷ್ಟು ಆಲಿಸಿದ್ದೇ ತಡ, ಸವಾಲುವೊಂದನ್ನು ಗೆದ್ದಷ್ಟೇ ಖುಷಿಯಾಯಿತು. ಭಾರಿ ಅಪಾಯದಿಂದ ಪಾರಾದ ಬಗ್ಗೆ ಸಂತಸವಾಯಿತು.

 

ಆಗಸ್ಟ್ 3ರ ಮಧ್ಯಾಹ್ನ ಆರೋಗ್ಯ ಪರೀಕ್ಷಿಸಿದ ಡಾ. ನಿತಿನ್ ಅಗರವಾಲ್ ಅವರು ಇನ್ನನೂ ಆತಂಕಪಡಬೇಕಿಲ್ಲ. ಸನತ್ಕುಮಾರ ಅವರನ್ನು ಡಿಸಜಾಚರ್ು ಮಾಡುತ್ತೇನೆ. ಅವರು ಸಂಪೂರ್ಣ ವಿಶ್ರಾಂತಿ ಪಡೆಯಬೇಕು. 15 ದಿನಗಳ ಬಳಿಕ ಪುನಃ ಆಸ್ಪತ್ರೆಗೆ ಬಂದು ಆರೋಗ್ಯ ಪರೀಕ್ಷಿಸಿಕೊಳ್ಳಲು ತಿಳಿಸಿದರು. ಆಗಸ್ಟ್ 4ರ ಬೆಳಿಗ್ಗೆ ಆಸ್ಪತ್ರೆಯಿಂದ ಹೊರಟು ಮಧ್ಯಾಹ್ನ ಮನೆಗೆ ತಲುಪಿದೆವು. 12 ದಿನಗಳ ಅವಧಿಯಲ್ಲಿ ಪ್ರತಿ ದಿನ ವೈದ್ಯರು ಆರೋಗ್ಯ ಪರೀಕ್ಷಿಸಿದಾಗಲೆಲ್ಲ, ಏನು ಹೇಳುವರೋ ಮತ್ತು ಯಾವುದಾದರೂ ಸಮಸ್ಯೆ ಬಗ್ಗೆ ಮಾಹಿತಿ ನೀಡುವುರೋ ಎಂಬ ಆತಂಕ ಕಾಡುತಿತ್ತು. ಶಸ್ತ್ರಚಿಕಿತ್ಸೆಯಿಂದ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ ಎಂದು ವೈದ್ಯರು ಹೇಳಿದ ನಂತರವಷ್ಟೇ ಸಮಾಧಾನವಾಯಿತು.

ಆಸ್ಪತ್ರೆಯಲ್ಲಿದ್ದಷ್ಟು ದಿನವೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಒಮ್ಮೆಯೂ ಸಿಡುಕಲಿಲ್ಲ. ಬಯ್ಯಲಿಲ್ಲ. ಬೇಸರಪಡಲಿಲ್ಲ. ಕಾರ್ಯಒತ್ತಡದ ಮಧ್ಯೆಯೂ ಶುಶ್ರೂಷಕಿಯರು ಮತ್ತು ಶುಶ್ರೂಷಕರು ಕುಟುಂಬದ ಆಪ್ತ ಸದಸ್ಯರು ಎಂಬಂತೆ ಆರೈಕೆ ಮಾಡಿದರು. ಸ್ವಚ್ಛತಾ ಸಿಬ್ಬಂದಿ ಮತ್ತು ಕಾವಲುಗಾರರು ಹೆಚ್ಚಿನ ಕಾಳಜಿ ತೋರಿದರು. ಬೇರೆ ಬೇರೆ ರೀತಿ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದಾಖಲಾಗುತ್ತಿದ್ದವರ ಸ್ನೇಹವಾಯಿತು. ಅವರೂ ಸಹ ಪ್ರತಿ ಹಂತದಲ್ಲಿ ಧೈರ್ಯ ತುಂಬಿದರು. ಶೀಘ್ರ ಆರೋಗ್ಯ ಚೇತರಿಕೆಗೆ ಎಲ್ಲರೂ ಹಾರೈಸಿದರು.

ಚಿಂತಕ ಮತ್ತು ಹಿರಿಯರಾದ ಅನಿಲ್ ಹೊಸಮನಿ ಕುಟುಂಬ ಸದಸ್ಯರು, ಭಗವಾನರೆಡ್ಡಿ, ಪ್ರಕಾಶ ಹಿಟ್ನಳ್ಳಿ, ಮೋದಿ, ಸಂಘರ್ಷ ಹೊಸಮನಿ, ಭರತ್ಕುಮಾರ್, ಮಲ್ಲಿಕಾರ್ಜುನ, ಬಾಗೇವಾಡಿ, ಮುಷರಫ್, ಲಲಿತಾ ರೆಡ್ಡಿ, ಗೀತಾ ಮುಂತಾದವರು ಬೇರೆ ಬೇರೆ ಸ್ವರೂಪದಲ್ಲಿ ತುಂಬಾ ಸಹಾಯ ಮಾಡಿದರು. ಅವರ ನೆರವನ್ನೂ ಎಂದಿಗೂ ಮರೆಯಲಾಗದು.

2015ರಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಿಜಾಪುರಕ್ಕೆ ಬಂದಿದ್ದ ವೇಳೆ ಸನತ್ಕುಮಾರ ಅವರು ದಿಢೀರ್ ಅನಾರೋಗ್ಯಕ್ಕೀಡಾದರು. ಆಗ ಎಸ್ಯುಸಿಐ ಸಂಘಟನೆ ಪ್ರಮುಖರು ಮತ್ತು ಸದಸ್ಯರು ತಡ ಮಾಡದೇ ಆಯುಷ್ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಚಿಕಿತ್ಸೆ ನೆರವಿನಿಂದ ಶೀಘ್ರವೇ ಗುಣಮುಖರಾದರು. ಆಗಲೂ ಒಂದು ವಾರ ಮನದಲ್ಲಿ ಆವರಿಸಿಕೊಂಡಿದ್ದ ಆತಂಕ ಮತ್ತು ಭೀತಿ ನಿವಾರಣೆಯಾಯಿತು. ಆ ಕ್ಷಣಕ್ಕೆ ನೆರವಾದ ಎಲ್ಲರನ್ನೂ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

2007ರಲ್ಲೂ ಸನತ್ಕುಮಾರ ಅವರಿಗೆ ನಾಲ್ಕು ಶಸ್ತ್ರಚಿಕಿತ್ಸೆ ನೆರವೇರಿತು. ಎದೆಭಾಗದಲ್ಲಿ ತುಂಬಿಕೊಂಡಿದ್ದ ದ್ರವವನ್ನು ತೆಗೆಯಲು ವೈದ್ಯರು ಹರಸಾಹಸಪಟ್ಟಿದ್ದರು. ಬೆಂಗಳೂರಿನ ಬಿಟಿಎಂ ಲೇಔಟ್ನ ಜಯದೇವ ಹೃದ್ರೋಗ ಕೇಂದ್ರದಲ್ಲಿ ಅಲ್ಲದೇ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯಿತು. ಆಗಲೂ ಎದುರಾದ ಅಡ್ಡಿಆತಂಕಗಳು ಒಂದೆರಡಲ್ಲ. ಹೃದ್ರೋಗ ತಜ್ಞ ಡಾ. ಅರುಣಕುಮಾರ್ ಹರಿದಾಸ್ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿ, ಪ್ರಾಣಾಪಾಯದಿಂದ ಪಾರು ಮಾಡಿದರು. ಆಗಲೂ ಸಹ ಹಿರಿಯರಾದ ಕೆ.ಎಸ್.ಪಾರ್ಥಸಾರಥಿ ಮತ್ತು ಸ್ನೇಹಿತರು ನೆರವಾಗಿದ್ದರು. ಆಗ ನಾಲ್ಕು ತಿಂಗಳ ಅವಧಿಯಲ್ಲಿ ನಾಲ್ಕು ಹಂತದ ಶಸ್ತ್ರಚಿಕಿತ್ಸೆ ನೆರವೇರಿತ್ತು.

ಸನತ್ಕುಮಾರ ಅವರು ಗುಣಮುಖರಾಗಿದ್ದಾರೆ. ಅವರ ಆರೋಗ್ಯ ಪೂರ್ಣಪ್ರಮಾಣದಲ್ಲಿ ಸುಧಾರಿಸಲು ಕೆಲ ಸಮಯ ಬೇಕು. ಫೇಸ್ಬುಕ್ನಲ್ಲಿ ನಾನು ದೀರ್ಘವಾಗಿ ಬರೆದಿದ್ದು ತುಂಬಾನೇ ಅಪರೂಪ. ಆದರೂ ಈ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು.

3 Responses

  1. ಅಮರದೀಪ್ says:

    ಹಿರಿಯರು ಆರೋಗ್ಯ ದಿಂದ ಇರಲು ಹಾರೈಸುತ್ತೇನೆ…

  2. Bvkulkarni says:

    Happy to know that Mr Sanatkumar is back in good health.

  3. Gururaj jamkhandi says:

    Sanatkumar aarogyavantaragi deergha kaala nammondige irali. I worked at SK Hubli with him in 1980s and 90s.

Leave a Reply

%d bloggers like this: